ಭಾಗ 411
ಭರತೇಶ ಶೆಟ್ಟಿ ಎಕ್ಕಾರ್

ಕರ್ಣಾರ್ಜುನರು ಮುಖಾಮುಖಿಯಾಗಿದ್ದಾರೆ. ಇಂದಿನ ಈ ಯುದ್ದ ವಿಶೇಷವಾಗಲು ಕಾರಣ ಕರ್ಣನ ರಥದಲ್ಲಿ ಶಲ್ಯ ಸಾರಥಿಯಾಗಿ ಸ್ಥಿತನಾಗಿದ್ದಾನೆ. ಪಾಂಡವರ ಕುರಿತಾಗಿ ಪ್ರೇಮವಿದ್ದರೂ, ಶಲ್ಯನೀಗ ತಾನು ಸಮರ್ಥ ಸಾರಥಿ ಹೌದೆಂದು ತೋರಿಸುವ ಮನ ಮಾಡಿದಂತಿದೆ. ಕರ್ಣನ ಶೌರ್ಯವನ್ನು ಇಮ್ಮಡಿಗೊಳಿಸುವಂತೆ ಪೂರಕನಾಗಿ ಸಾರಥ್ಯ ಮಾಡುತ್ತಿದ್ದಾನೆ. ಪರಿಣಾಮವಾಗಿ ಕರ್ಣನೂ ಅನಾಯಾಸವಾಗಿ ಅರ್ಜುನನ ಪ್ರಹಾರಗಳಿಗೆ ಉತ್ತರ ನೀಡುತ್ತಾ, ನಿಜ ಮಹಾರಥಿಯಾಗಿ ವಿಕ್ರಮ ಮೆರೆಯುತ್ತಿದ್ದಾನೆ. ಇವರೀರ್ವರ ಸಮರ ಅದ್ಬುತವಾಗಿ ಸಾಗುತ್ತಿದೆ. ಶರಸಂಧಾನ ಮತ್ತು ಪ್ರಯೋಗದ ನವ ವಿಧಗತಿಗಳೂ ವಿನಿಯೋಗವಾಗುತ್ತಿವೆ. “ಉನ್ಮುಖೀ” – ಮೇಲ್ಮುಖವಾಗಿ ಪ್ರಯೋಗಿಸಲ್ಪಟ್ಟು ಶಿರಸ್ಸನ್ನು ಛೇದಿಸುವ ಅದ್ಬುತ ಗತಿಯಲ್ಲಿ ಸಾಗುವ ಬಾಣ, “ಅಭಿಮುಖೀ” – ತೀವ್ರ ಗತಿಯಲ್ಲಿ ಸಾಗಿ ವಕ್ಷಸ್ಥಳವನ್ನು ಘಾತಿಸುವ ಶರ; “ತಿರ್ಯಕ್” – ಕ್ಷಿಪ್ರ ಗತಿಯಲ್ಲಿ ಪಾರ್ಶ್ವಗಳನ್ನು ಗಾಯಗೊಳಿಸುವ ಅಂಬು, “ಮಂದಾ” – ನಿಧಾನವಾಗಿ ಸಾಗಿ ಚರ್ಮವನ್ನು ಗೀರಿ ಅಲ್ಪ ಸ್ವಲ್ಪ ಗಾಯಗೊಳಿಸಿ ಕೆರಳಿಸುವ ಬಾಣ; “ಗೋಮೂತ್ರಿಕಾಗತಿ” – ಎಡಕ್ಕೂ ಬಲಕ್ಕೂ ತಿರುಗುತ್ತಾ ಸಾಗುವ ಖಂಡಿಸಲು ಗೊಂದಲಗೊಳಿಸಿ ಕವಚವನ್ನು ಛೇದಿಸುವ ಬಾಣ; “ಧ್ರುವಾಗತಿ” – ಗುರಿ ತಪ್ಪದೆ ಲಕ್ಷ್ಯ ಭೇದಿಸಬಲ್ಲ ಅತಿ ವೇಗವುಳ್ಳ ಬಾಣ; “ಸ್ಖಲಿತಾಗತಿ” – ಲಕ್ಷ್ಯದ ಕಡೆ ಹೋಗುವಂತೆ ಕಂಡರೂ ಗುರಿಯತ್ತ ಹೋಗದೆ ಕಂಗೆಡಿಸುವ ಬಾಣ. ಈ ಶರ ಯಾರನ್ನೋ ಗುರಿಯಾಗಿರಿಸಿರುವಂತೆ ಕಂಡರೂ ಅದು ಇನ್ಯಾರನ್ನೋ ಪ್ರಹರಿಸಲು ಪ್ರಯೋಗಿಸುವುದು; “ಯಮಕಾಕ್ರಾಂತಾಗತಿ” – ಲಕ್ಷ್ಯವನ್ನು ಹಲವು ಬಾರಿ ಸರಣಿಯಲ್ಲಿ ಘಾತಿಸುತ್ತಾ, ಛೇದಿಸುತ್ತಾ ಸಾಗುವ ಶರ; “ಕುಷ್ಟಾಗತಿ” – ಈ ರೀತಿಯ ಪ್ರಯೋಗದಿಂದ ನಿಖರವಾದ ಸಾಧನೆ ಮಾಡುವುದು, ಅಂದರೆ ಶಿರಸ್ಸನ್ನು ಕತ್ತರಿಸಿ ಹಾರಿಸುವುದು- ಬಾಹುವನ್ನು ಶರೀರದಿಂದ ತುಂಡರಿಸಿ ಬೀಳಿಸುವುದು… ಇತ್ಯಾದಿ; ಹೀಗೆ ಬಾಣ ಪ್ರಯೋಗದ ಕೌಶಲ್ಯ ಯಥಾವತ್ತಾಗಿ ಅವುಗಳ ಗತಿಯಲ್ಲಿ ಪರಿಪೂರ್ಣ ವಿದ್ಯಾಬಲದಿಂದ ಪರಸ್ಪರ ಪ್ರಯೋಗಿಸಲ್ಪಟ್ಟು ಶೀಘ್ರವಾಗಿ ಫಲಿತಾಂಶ ಸಾಧನೆಗಾಗಿ ಪ್ರಯತ್ನಗಳಾಗತೊಡಗಿದೆ. ಈ ವಿಧಾನಗಳಲ್ಲಿ ಮಂತ್ರಾಸ್ತ್ರಗಳು – ಪ್ರತ್ಯಸ್ತ್ರಗಳು ಪ್ರಯೋಗಿಸಲ್ಪಟ್ಟು ಪರಸ್ಪರ ಖಂಡಿಸಲ್ಪಡುವಾಗ ನಭೋಮಂಡಲದಲ್ಲಿ ಭಯಾನಕ ಸ್ಪೋಟಗಳು ಆಗತೊಡಗಿವೆ. ಪರಿಣಾಮವಾಗಿ ವಾತಾವರಣದ ಉಷ್ಣತೆಯೂ ಅತೀವವಾಗಿ ಏರುತ್ತಿದೆ. ಭೂಕಂಪನ, ಸಮುದ್ರದಲ್ಲಿ ಅಲ್ಲೋಲ ಕಲ್ಲೋಲ – ಪ್ರಳಯಸದೃಶ ತೆರೆಗಳು, ಬಿರುಗಾಳಿಯಾದಿ ಪ್ರಾಕೃತಿಕ ಅಸಮತೋಲನಗಳು ಸೃಷ್ಟಿಯಾಗಿ ಎಲ್ಲೆಡೆ ಭಯದ ವಾತಾವರಣ ಉಂಟಾಗುತ್ತಿದೆ. ಹೀಗೆ ಅಸಾಧಾರಣವಾಗಿ ಸೂರ್ಯ ಪುತ್ರನೂ – ಇಂದ್ರಪುತ್ರನೂ ಕದನಕಲಿಗಳಾಗಿ ಕಾಳಗ ನಿರತರಾಗಿದ್ದಾರೆ.
ಮತ್ತೊಂದೆಡೆ ಕರ್ಣನ ಪುತ್ರರಾದ ಸುಷೇನ, ಸತ್ಯಸೇನ ಮತ್ತು ವೃಷಸೇನರು ತಮ್ಮ ತಂದೆಯ ಸೇನಾಪತ್ಯದಲ್ಲಿ ಕುರುಸೇನೆ ಜಯಗಳಿಸ ಬೇಕೆಂದು ಸಂಕಲ್ಪಬದ್ದರಾದವರಂತೆ ಅಸಾಮಾನ್ಯವಾದ ರೀತಿಯಲ್ಲಿ ಹೋರಾಡುತ್ತಿದ್ದಾರೆ. ಈ ಮೂವರು ಸೇರಿ ಪ್ರಭದ್ರಕ ಪ್ರವೀರರು, ಚೇದಿ, ಕೇಕಯ, ಮತ್ಸ್ಯ ಯೋಧರನ್ನು ಎದುರಿಸಿ ವರ್ಷ ಋತುವಿನಲ್ಲಾಗುವ ಮಹಾಮಳೆಯಂತೆ ಶರವೃಷ್ಟಿಗೈಯುತ್ತಾ ಧೂಳೀಪಟಗೊಳಿಸಿ ಪಾಂಡವ ಸೇನೆಯ ಒಂದು ಪಾರ್ಶ್ವದ ಸೇನೆಯನ್ನು ನಾಶಗೊಳಿಸುತ್ತಾ ಮುಂದೊತ್ತಿ ಸಾಗುತ್ತಿದ್ದಾರೆ. ಹೀಗೆ ಅಬ್ಬರದಿಂದ ಸಾಗುವ ಕರ್ಣನ ಪುತ್ರತ್ರಯರನ್ನು ಎದುರಿಸಿ ಸೇನಾನಾಶ ತಡೆಯಲು ಭೀಮಸೇನ, ಸಾತ್ಯಕಿ ಮತ್ತು ಸಹದೇವ ಇವರತ್ತ ರಥ ತಿರುಗಿಸಿದರು.
ಭೀಮಸೇನ ಸುಷೇಣನನ್ನು ತಡೆದು ಕಾದಾಡತೊಡಗಿದನು. ಭಯವಿಲ್ಲದೆ ರಣಭಯಂಕರನಾಗಿ ಸೆಟೆದು ನಿಂತ ಸುಷೇಣ ಅಧಮ್ಯವಾದ ಸಾಹಸ ಮೆರೆದು ತನಗೆದುರಾದ ಭೀಮಸೇನನ ಧನುಸ್ಸನ್ನು ಕತ್ತರಿಸಿ, ಅರೆಕ್ಷಣದಲ್ಲಿ ತೀಕ್ಷ್ಣ ಶರಗಳಿಂದ ಭೀಮಸೇನನ ವಿಶಾಲ ಎದೆಯನ್ನೇ ಗುರಿಯಾಗಿಸಿ ಕವಚ ಸೇಳಿ ಹೊಕ್ಕುವಂತೆ ನಿಶಿತವಾದ ಶರಗಳನ್ನು ಗಾಯಗೊಳಿಸಿದನು. ಅಂಕುಶದಿಂದ ತಿವಿಯಲ್ಪಟ್ಟ ಮದಗಜ ಘೀಳಿಡುವಂತೆ ಉರಿ ತಾಳಲಾರದೆ ಆರ್ಭಟಿಸುತ್ತಾ ಭೀಮಸೇನನೂ ಕ್ರುದ್ಧನಾದನು. ಬಾಗಿ ಹೊಸ ಧನುಸ್ಸನ್ನೆತ್ತಿ ಉಗ್ರನಾಗಿ ಕಾದಾಡತೊಡಗಿದ ವೃಕೋದರ ಅದ್ಬುತವಾದ ಯುದ್ದ ಮಾಡಿ ಕರ್ಣಪುತ್ರ ಸುಷೇಣನ ವಧೆಗೈದನು.
ಇತ್ತ ವೃಷಸೇನ ಮತ್ತು ಸಾತ್ಯಕಿ ಅತ್ಯದ್ಬುತ ರೀತಿಯಲ್ಲಿ ಹೋರಾಡುತ್ತಿದ್ದಾರೆ. ಸಾತ್ಯಕಿ ಸಮರ್ಥ ಮಹಾರಥಿಯಾಗಿದ್ದರೂ ಕರ್ಣಪುತ್ರ ವೃಷಸೇನ ಕಿಂಚಿತ್ ಅಳುಕು ಅಂಜಿಕೆಯಿಲ್ಲದೆ ಸಮದಂಡಿಯಾಗಿ ಸಮರ ಸಾರುತ್ತಿದ್ದಾನೆ. ಸಾತ್ಯಕಿ ಕ್ಷಣ ಕ್ಷಣಕ್ಕೂ ಉಗ್ರನಾಗುತ್ತಾ ಈಗ ವಧಿಸುತ್ತೇನೆ ಎಂಬಂತೆ ವಿಕ್ರಮ ಮೆರೆದರೂ, ಸಮಾನ ಸಾಹಸ ತೋರುತ್ತಾ ವೃಷಸೇನ ಸಾತ್ಯಕಿಯ ಬೆವರಿಳಿಸತೊಡಗಿದ್ದಾನೆ. ಯಾವ ರೀತಿಯ ಪರಿಕ್ರಮದಿಂದ ಪರಾಕ್ರಮ ಮೆರೆದರೂ ವೃಸಸೇನನನ್ನು ಸೋಲಿಸಲಾಗದೆ ಬಹುಹೊತ್ತು ಕದನ ಸಾಗಿದಾಗ ಸಾತ್ಯಕಿ ಮಹೋಗ್ರನಾಗಿ ಕರ್ಣಪುತ್ರನ ವಿರುದ್ದ ಅತಿವೇಗದ ಯುದ್ದ ಸಾರತೊಡಗಿದನು. ವೃಷಸೇನನ ಪರಾಕ್ರಮ ಕಂಡು ಬೆರಗಾದ ದುಶ್ಯಾಸನ ರಕ್ಷಕನಾಗಿ ಸಹಾಯ ಮಾಡತೊಡಗಿದನು. ಸಾತ್ಯಕಿ ಅದ್ವಿತೀಯ ಸಾಹಸಿಯಲ್ಲವೇ! ವೃಷಸೇನನ ಸಾರಥಿಯ ಶಿರಚ್ಛೇದನ ಗೈದು, ರಥಕ್ಕೆ ಬಂಧಿಯಾಗಿದ್ದ ಕುದುರೆಗಳನ್ನು ಮುಕ್ತಗೊಳಿಸಿ ವೃಷಸೇನನ ರಥನಾಶಗೊಳಿಸಿದನು. ರಥದಿಂದ ಬೀಳುತ್ತಿದ್ದ ಕರ್ಣಪುತ್ರನ ಬಾಹುಗಳನ್ನು ತೀವ್ರವಾಗಿ ಗಾಯಗೊಳಿಸಿದ. ಸನಿಹವಿದ್ದು ರಕ್ಷಣೆಮಾಡುತ್ತಿದ್ದ ದುಶ್ಯಾಸನ ವೃಷಸೇನನನ್ನು ಸೆಳೆದು ತನ್ನ ರಥಕ್ಕೇರಿಸಿ ಸಾತ್ಯಕಿಯಿಂದ ತಪ್ಪಿಸಿ ರಥ ಹಾರಿಸುತ್ತಾ ಬೇರೆಡೆ ಸಾಗಿದನು.
ಕರ್ಣಾರ್ಜುನರ ಕಾಳಗ ಬಿರುಸಿನಿಂದ ಸಾಗುತ್ತಿದೆ. ಮಂತ್ರಾಸ್ತ್ರ – ದಿವ್ಯಾಸ್ತ್ರಗಳು ಪ್ರಯೋಗವಾಗತೊಡಗಿವೆ.
ಮುಂದುವರಿಯುವುದು…



















