30 C
Udupi
Tuesday, March 17, 2026
spot_img
spot_img
HomeBlogಮಹಾಭಾರತ

ಮಹಾಭಾರತ

spot_imgspot_img

ಭಾಗ – 451

ಭರತೇಶ ಶೆಟ್ಟಿ, ಎಕ್ಕಾರ್

ಸಂಚಿಕೆ ೪೫೧ ಮಹಾಭಾರತ

ಬಲರಾಮದೇವ ಔಶನಸ ತೀರ್ಥಕ್ಕೆ ಪ್ರವಾಸಿಯಾಗಿ ಬಂದನು. ಈ ತೀರ್ಥ ಕ್ಷೇತ್ರಕ್ಕೆ ಕಪಾಲಮೋಚನ ತೀರ್ಥ ಎಂಬ ಪ್ರಸಿದ್ಧ ನಾಮವೂ ಇದೆ. ಆ ಹೆಸರು ಬರುವಲ್ಲಿ ಹಿನ್ನೆಲೆ ಕಥೆಯೂ ಇದೆ.

ಮಹಾತ್ಮನಾದ ಶುಕ್ರಾಚಾರ್ಯನು ಹಿಂದೆ ಇಲ್ಲಿಯೇ ಕುಳಿತು ಸುದೀರ್ಘ ತಪಸ್ಸನ್ನಾಚರಿಸಿದ್ದನು. ತಪಸ್ಸಿನ ಫಲವಾಗಿ ಸಂಪೂರ್ಣ ನೀತಿ ಶಾಸ್ತ್ರವು ಶುಕ್ರನ ಮನಸ್ಸಿನಲ್ಲಿ ಸ್ಫುರಿಸಿತು. ಆ ಬಳಿಕವೂ ಅಲ್ಲಿಯೆ ಇದ್ದು ದೈತ್ಯ ಮತ್ತು ದಾನವರ ಕುರಿತಾಗಿ, ಅವರ ಯುದ್ಧದ ಬಗೆಯಲ್ಲಿ ಚಿಂತಿಸುತ್ತಿದ್ದನು. ಆದ ಕಾರಣದಿಂದ ಈ ತೀರ್ಥ ಕ್ಷೇತ್ರಕ್ಕೆ ಔಶನಸ ತೀರ್ಥ ಎಂಬ ಹೆಸರು ಬಂದಿತ್ತು.

ಈ ಕ್ಷೇತ್ರದ ಮತ್ತೊಂದು ಹೆಸರು ಕಪಾಲ ಮೋಚನ ತೀರ್ಥ ಎಂಬ ಹೆಸರು ಬರುವಲ್ಲಿ ಕೌತುಕಪ್ರದ ಕಥೆಯಿದೆ. ಹಿಂದೆ ಭಗವಾನ್ ಶ್ರೀರಾಮಚಂದ್ರನು ದಂಡಕಾರಣ್ಯದಲ್ಲಿ ವಾಸವಾಗಿದ್ದ ಸಮಯ ಬಹಳಷ್ಟು ರಾಕ್ಷಸರನ್ನು ವಧಿಸಿದ್ದನು. ಆ ಸಂದರ್ಭ ಒಬ್ಬ ದುರುಳ ರಾಕ್ಷಸನನ್ನು ಸಂಹರಿಸಿ, ವಿಶೇಷವಾದ ಕ್ಷುರ ಎಂಬ ಶರದಿಂದ ಆತನ ಶಿರವನ್ನು ಬಹುದೂರ ಹಾರಿಬಿಟ್ಟನು. ಕತ್ತರಿಸಲ್ಪಟ್ಟು ಹಾರಿ ಬಂದ ರಾಕ್ಷಸನ ಶಿರಸ್ಸು ಅಲ್ಲಿಯೆ ಅನತಿ ದೂರದ ಮಹಾವನದಲ್ಲಿ ಸಂಚರಿಸುತ್ತಿದ್ದ ಮಹೋದರ ಎಂಬ ಮಹಾಮುನಿಯ ತೊಡೆಯ ಮೇಲೆ ಬಿದ್ದಿತು. ದೈವಯೋಗದಿಂದ ಹಾಗೆ ಬಿದ್ದ ಶಿರಸ್ಸು ತೊಡೆಯನ್ನು ಕಚ್ಚಿ ಹಿಡಿದುಬಿಟ್ಟಿತು. ಕಚ್ಚಿದ ತೀವ್ರತೆ ಎಷ್ಟಿತ್ತೆಂದರೆ ಅಭೇದ್ಯವಾಗಿ ಅಂಟಿಕೊಂಡಿತು. ಮಹಾಪ್ರಾಜ್ಞನಾಗಿದ್ದರೂ ಮಹೋದರ ಮುನಿ ಈ ಕಪಾಲದಿಂದ ವಿಮೋಚನೆ ಹೊಂದಲು ಅಸಮರ್ಥನಾಗಿ ಹೋದನು. ತುಸು ಸಮಯದಲ್ಲಿ ಆ ರುಂಡ ಅಮುಕಿ ಹಿಡಿದ ಜಾಗ ಕೊಳೆತು ಕೀವು ತುಂಬಿ ದುರ್ವಾಸನೆ ಬರತೊಡಗಿತು. ಅಸದಳ ನೋವು ತಾಳಲಾಗದಷ್ಟು ಸಂಕಟ ನೀಡುತ್ತಿತ್ತು. ಈ ಸ್ಥಿತಿಯಲ್ಲೂ ಧೃತಿಗೆಡದ ಮಹಾಮುನಿ ವಿಮೋಚನೆಗಾಗಿ ಹರಸಾಹಸ ಪಡುತ್ತಾ ತೀರ್ಥಾಟನೆ ಮಾಡತೊಡಗಿದನು. ಮಹೋದರನು ಎಲ್ಲ ಪುಣ್ಯನದಿ, ಸರೋವರ, ಕಲ್ಯಾಣಿ, ಪುಣ್ಯತೀರ್ಥ, ಸಮುದ್ರ ಹೀಗೆ ಯಾವುದೊಂದನ್ನೂ ಬಿಡದೆ ಸ್ನಾನ ಮಾಡತೊಡಗಿದನು. ಶುದ್ಧಾಂತಕರಣಿಯಾಗಿ ಸಿಕ್ಕ ಸಿಕ್ಕ ಮಹಾತ್ಮರಾದ ಋಷಿಗಳಲ್ಲಿ ತನ್ನ ಅಳಲನ್ನು ಹೇಳಿಕೊಂಡರೂ ಪ್ರಯೋಜನವಾಗಲಿಲ್ಲ. ಮತ್ತೂ ತೀರ್ಥಯಾತ್ರೆ ಮುಂದುವರಿಸಿ ಒಂದೋ ನನ್ನ ಆಯಸ್ಸು ಈ ಯಾತನೆ ಅನುಭವಿಸಿ ಪೂರ್ಣಗೊಳ್ಳಲಿ, ಆಗ ತೀರ್ಥಕ್ಷೇತ್ರ ಸಂದರ್ಶನದ ಪುಣ್ಯವಾದರೂ ನನ್ನ ಸದ್ಗತಿಗೆ ಹೇತುವಾದೀತು. ಇಲ್ಲ ಎಲ್ಲಾದರೂ ಮಹಿಮಾನ್ವಿತ ಕ್ಷೇತ್ರದ ಪಾವಿತ್ರ್ಯತೆಯ ಬಲದಿಂದ ವಿಮೋಚನೆಯಾದರು ಆದೀತು ಎಂದು ತಿಳಿದು, ಅಹರ್ನಿಶಿಯಾಗಿ ಸಂಚಾರ ಮುಂದುವರಿಸಿದನು. ಪ್ರಥ್ವಿಯಲ್ಲಿ ಎಲ್ಲೆಲ್ಲಾ ತೀರ್ಥಕ್ಷೇತ್ರಗಳಿವೆಯೋ ಅಲ್ಲೆಲ್ಲಾ ಮುಳುಗೆದ್ದು ಸ್ನಾನಗೈದನು. ಆದರೂ ರಾಕ್ಷಸನ ಕಪಾಲ ಕಳಚಲಿಲ್ಲ. ಕಾಲು ಕೊಳೆಯತೊಡಗಿದೆ. ಚಿತ್ರಹಿಂಸೆ ಅನುಭವಿಸುತ್ತಿದ್ದರೂ ಹಠ ಬಿಡದೆ ಮತ್ತೂ ಕ್ಷೇತ್ರ ಸಂದರ್ಶನ ಮಾಡತೊಡಗಿದನು.

ಹೀಗೆ ಪರ್ಯಟನೆ ಮಾಡುತ್ತಿರುವಾಗ ಸರಸ್ವತಿ ನದಿ ತೀರಕ್ಕೂ ಬಂದ ಮಹಾಮುನಿ ಯಥಾವಿಧಿಯಾಗಿ ಸ್ನಾನಾಚಮನಗಳನ್ನು ಔಷನಸ ತೀರ್ಥದಲ್ಲಿ ಮಾಡುತ್ತಿರುವಾಗ ರಾಕ್ಷಸನ ಕಪಾಲ ಕಳಚಿ ಬಿದ್ದು ಬಿಟ್ಟಿತು. ಕೀವು ನೋವು ತುಂಬಿದ್ದ ಕಾಲು ಎಲ್ಲ ವೇದನೆಗಳಿಂದಲೂ ಮುಕ್ತವಾಯಿತು. ರಾಕ್ಷಸನ ಕಪಾಲದಿಂದ ಮುಕ್ತನಾದ ಪೂತಾತ್ಮನೂ, ನಿಷ್ಕಲ್ಮಷನೂ ಆಗಿರುವ ಮಹಾಮುನಿ ಕೃತಕೃತ್ಯನಾಗಿ, ಪರಮಪ್ರೀತನೂ ಸಂತುಷ್ಟನೂ ಆಗಿ ಕ್ಷೇತ್ರದಲ್ಲಿದ್ದ ಎಲ್ಲಾ ಮಹರ್ಷಿಗಳ ಆಶ್ರಮಗಳನ್ನು ಸಂದರ್ಶಿಸಿ ವಿಶೇಷ ವೃತ್ತಾಂತವನ್ನು ವಿವರಿಸಿ ಹೇಳತೊಡಗಿದನು. ಸಕಲ ಪಾಪ ವಿಮೋಚನೆ ಮಾಡಬಲ್ಲ ಪವಿತ್ರ ತೀರ್ಥ ಕ್ಷೇತ್ರವಿದು. ಉತ್ತಮೋತ್ತಮವಾದ ಸಿದ್ಧ ಕ್ಷೇತ್ರವಿದು ಎಂದು ಹಾಡಿ ಹೊಗಳಿದನು.

ಮಹೋದರ ಮುನಿಯ ಹರ್ಷೋತ್ಕರ್ಷವನ್ನು ಕಂಡು, ಘಟಿತ ಘಟನೆಯನ್ನೂ ಅವಲೋಕಿಸಿ ಔಶನಸ ತೀರ್ಥಕ್ಕೆ ಕಪಾಲ ಮೋಚನ ತೀರ್ಥ ಕ್ಷೇತ್ರ ಎಂದು ಹೆಸರಿಟ್ಟು ಕರೆದರು. ಮಹೋದರ ಮುನಿ ಬಹುದಿನ ಈ ಪುಣ್ಯ ತೀರ್ಥ ಸ್ನಾನ ಗೈಯುತ್ತಾ ನಿರಂತರ ಧ್ಯಾನ ನಿರತನಾಗಿರುತ್ತಾ, ಬಹಿರ್ಮುಖನಾದಾಗ ಯಥೇಚ್ಚವಾಗಿ ತೀರ್ಥ ಪಾನ ಮಾಡುತ್ತಾ ಕಾಲಕಳೆದನು‌. ಮುಂದೆ ಅತ್ಯುತ್ತಮವಾದ ಸಿದ್ಧಿಯನ್ನೂ ಹೊಂದಿದನು ಎಂಬುವುದು ಕ್ಷೇತ್ರದ ಐತಿಹ್ಯ.

ಬಲರಾಮನು ಈ ತೀರ್ಥಕ್ಷೇತ್ರದಲ್ಲಿ ವಿಧಿವತ್ತಾಗಿ ಆಚಾರಗಳನ್ನು ಪಾಲಿಸುತ್ತಾ ತೀರ್ಥಸ್ನಾನಗೈದು, ಋಷಿಸೇವೆಗೈದು ಮುನ್ನಡೆದನು. ಮುಂದೆ ಸರಸ್ವತಿ ನದಿಯ ಪವಿತ್ರ ಕ್ಷೇತ್ರ ಪ್ರಥೂದಕ ತೀರ್ಥ ದತ್ತ ಸಾಗಿದನು.

ಪ್ರಥೂದಕ ತೀರ್ಥ ಕ್ಷೇತ್ರಕ್ಕೂ ಬಲವಾದ ಹಿನ್ನೆಲೆ ಕಥೆಯಿದೆ. ಈ ತೀರ್ಥಕ್ಷೇತ್ರದಿಂದ ಸ್ವಲ್ಪ ದೂರದಲ್ಲಿ ರುಷಂಗು ಮುನಿಯ ಆಶ್ರಮವಿತ್ತು. ಹಿಂದೆ ಆರ್ಷ್ಟೀಷೇಣ ಮುನಿಯೂ ಈ ಕ್ಷೇತ್ರದಲ್ಲಿ ಘೋರ ತಪಸ್ಸನ್ನಾಚರಿಸಿದ್ದರು. ಇದೇ ಆಶ್ರಮದಲ್ಲಿ ವಿಶ್ವಾಮಿತ್ರ ಮಹರ್ಷಿಯೂ ಘೋರವಾದ ತಪಸ್ಸನ್ನಾಚರಿಸಿ ದಿವ್ಯಜ್ಞಾನ ಸಂಪಾದಿಸಿದ್ದರು. ಅಂತಹ ಮಹಿಮಾನ್ವಿತ ತಪೋ ಭೂಮಿಯೂ, ಪಾವನ ಕ್ಷೇತ್ರ ಇದಾಗಿದೆ.

ರುಷಂಗು ಮುನಿಯ ದಿವ್ಯಾಶ್ರಮ ಸಮೃದ್ಧವಾಗಿತ್ತು. ಆ ಆಶ್ರಮವನ್ನು ಭಕ್ತಿಯಿಂದ ಸಂದರ್ಶಿಸಿದ ಬಲರಾಮ, ರುಷಂಗು ಮುನಿ ಪ್ರಾಣತ್ಯಾಗ ಮಾಡಿದ್ದ ಸ್ಥಳಕ್ಕೆ ವಂದಿಸಿದನು. ವಯೋವೃದ್ಧನೂ ಜ್ಞಾನವೃದ್ಧನೂ ಆಗಿದ್ದ ರುಷಂಗು ಮಹರ್ಷಿ ಸದಾ ತಪಸ್ಸಿನಲ್ಲಿ ನಿರತರಾಗಿರುತ್ತಿದ್ದರು. ಒಮ್ಮೆ ಶಿಷ್ಯರನ್ನೂ, ಮಕ್ಕಳನ್ನೂ ಕರೆದು ಮನದಾಸೆಯಾಗಿ ಪ್ರಥೂದಕ ತೀರ್ಥಕ್ಷೇತ್ರಕ್ಕೆ ಹೋಗಬೇಕೆಂಬ ಆಸೆ ವ್ಯಕ್ತ ಪಡಿಸಿದ್ದರು. ಅತ್ಯಂತ ವೃದ್ಧನಾಗಿರುವ ತಪಸ್ವಿಯ ಮನೋವಾಂಛೆಯನ್ನು ಶಿರಸಾವಹಿಸಿ ಮಕ್ಕಳೂ, ಶಿಷ್ಯರೂ ಸೇರಿ ಸರಸ್ವತೀ ನದಿಯ ತೀರ್ಥಕ್ಷೇತ್ರವಾದ ಪ್ರಥೂದಕಕ್ಕೆ ಕರೆತಂದರು. ರುಷಂಗ ಮುನಿ ಪ್ರಥೂದಕ ತೀರ್ಥ ಕ್ಷೇತ್ರಕ್ಕೆ ಬಂದು ಉಲ್ಲಸಿತನಾಗಿ ತೀರ್ಥಸ್ನಾನಗೈಯಲು ಮುಂದಾದನು. ಪ್ರಥೂದಕ ತೀರ್ಥದಲ್ಲಿ ಮುಳುಗಿ ಆ ತೀರ್ಥದಲ್ಲಿರುವ ಅಪಾರವಾದ ಗುಣಗಳನ್ನು ಗ್ರಹಿಸಿಕೊಂಡನು. ಸತ್ಯವನ್ನು ಅರಿತು ಮೇಲೆದ್ದ ಮಹಾಮುನಿ ತನ್ನ ಪುತ್ರರನ್ನೂ, ಶಿಷ್ಯರನ್ನೂ ಕರೆದು “ಯಾರು ಸರಸ್ವತೀ ನದಿಯ ಉತ್ತರ ಭಾಗದಲ್ಲಿರುವ ಈ ತೀರ್ಥಕ್ಷೇತ್ರದಲ್ಲಿ ಸ್ನಾನಾಚಮನಗೈದು ಧ್ಯಾನ ನಿರತರಾಗುತ್ತಾರೋ ಅಂತಹವರಿಗೆ ಮುಂದೆ ಮೃತ್ಯು ಭಯವಿರುವಿರುವುದಿಲ್ಲ. ಅಂದರೆ ಪುನರ್ಜನ್ಮ ಇರದು – ಜನಿಸದಿದ್ದರೆ ಮರಣ ಬಾರದು ಎಂಬ ಅರ್ಥ. ಸೂಚ್ಯವಾಗಿ ಹೇಳುವುದಾದರೆ ಮೋಕ್ಷವನ್ನು ಕರುಣಿಸುವ ಅಧಮ್ಯ ಶಕ್ತಿ ಈ ತೀರ್ಥಕ್ಷೇತ್ರಕ್ಕಿದೆ ಎಂಬ ಸತ್ಯವನ್ನು ಮಹಾಮುನಿ ಕಂಡು ಕೊಂಡಿದ್ದರು. ಬಲರಾಮನು ಇಲ್ಲೂ ತೀರ್ಥಸ್ನಾನಾದಿಗಳನ್ನು ಪೂರೈಸಿ ಋಷಿ ಮುನಿಗಳ ಸೇವೆಗೈದು ಮುನ್ನಡೆದನು.

ಮುಂದೆ ಬ್ರಹ್ಮಯೋನಿ ತೀರ್ಥ ಎಂಬ ಪುಣ್ಯ ಕ್ಷೇತ್ರದತ್ತ ಸಾಗಿದನು.

ಮುಂದುವರಿಯುವುದು…

spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page