29.9 C
Udupi
Tuesday, January 27, 2026
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ 408

ಭರತೇಶ ಶೆಟ್ಟಿ, ಎಕ್ಕಾರ್

ಸಂಚಿಕೆ ೪೦೮ ಮಹಾಭಾರತ

“ಮಾದ್ರಾಧೀಶ! ಒಂದು ದಿನ ನಾನು ಕಲಿತಿದ್ದ ಅಸ್ತ್ರಗಳ ಅಭ್ಯಾಸ ನಿರತನಾಗಿದ್ದೆ. ಕತ್ತಿವರಸೆ, ಲಕ್ಷ್ಯ ಭೇದನ ಇತ್ಯಾದಿಗಳನ್ನು ಮತ್ತಷ್ಟು ನಿಖರಗೊಳಿಸುವ ಪ್ರಯತ್ನ ಮಾಡುತ್ತಿದ್ದೆ. ಹೀಗಿರಲು ನಾನು ಕತ್ತಿ ತಿರುವುತ್ತಾ ಲಾಘವಗಳ ಅಭ್ಯಾಸ ಮಾಡುವಾಗ ಅದು ಹೇಗೆ ನನ್ನ ಕೈಯಿಂದ ಜಾರಿ ಬೀಸಿ ಎಸೆಯಲ್ಪಟ್ಟಿತೋ ನಾನರಿಯೆ. ಕಾಕತಾಳೀಯವೊ ಎಂಬಂತೆ ಆ ಕಡೆಯಿಂದ ಕರುವೊಂದು ಓಡಿ ತನ್ನ ತಾಯಿಯ ಬಳಿ ಬರುತ್ತಿತ್ತು. ನಾನು ನೋಡುತ್ತಿದ್ದಂತೆಯೆ ಆ ಎಳೆಗರು ನನ್ನ ಕೈಯಿಂದ ಜಾರಿ ಹಾರಿದ್ದ ಕತ್ತಿಯ ಹರಿತವಾದ ಅಲಗಿನಿಂದ ಕತ್ತರಿಸಲ್ಪಟ್ಟಿತು. ಅದರ ಬಳಿಗೆ ತಕ್ಷಣ ಓಡಿದೆ… ರಕ್ತದೋಕುಳಿಯನ್ನು ಹರಿಸಿ ಆ ಎಳೆಗರು ಪ್ರಾಣ ಬಿಟ್ಟಿತು. ಅಯ್ಯೋ ನನ್ನ ದುರ್ಗತಿಯೆ! ಅನಾವಶ್ಯಕವಾಗಿ ಗೋ ಹತ್ಯೆ ನಡೆದು ಹೋಯಿತಲ್ಲಾ ಎಂದು ಪರಿತಪಿಸುತ್ತಿದ್ದೆ. ಆಗ ಅಲ್ಲಿಗೆ ಬಂದ ಆ ಆಶ್ರಮದ ವಿಜಯ ಎಂಬ ಹೆಸರಿನ ಬ್ರಾಹ್ಮಣ “ಏನಿದು ಅಕ್ಷಮ್ಯ ಅಪರಾಧ! ಪೂಜ್ಯ ಯಾಗಧೇನುವಿನ ಹತ್ಯೆಯಾಗಿದೆ? ಯಾರು ಈ ಕ್ರೂರ ಕೃತ್ಯ ಎಸಗಿದವರು?” ಎಂದು ಪ್ರಶ್ನಿಸಿದನು.

ಘಟಿತ ಸಂಗತಿಯನ್ನು ಯಥಾವತ್ತಾಗಿ ವಿವರಿಸಿ ಹೇಳಿದೆ. ಕ್ರುದ್ಧನಾದ ವಿಜಯ “ನೋಡಲು ನೀನು ಆಯುಧಧಾರಿ ಕ್ಷಾತ್ರ ರಾಜಕುಮಾರನಂತೆ ಕಾಣುತ್ತಿರುವೆ. ಗೋ ಬ್ರಾಹ್ಮಣರ ರಕ್ಷಣೆ ಮಾಡಬೇಕಾದ ನಿನ್ನಿಂದ ಈ ರೀತಿಯ ಕುಕೃತ್ಯವಾಗಿದೆ. ಆ ಕರುವಿನ ದೇಹದಿಂದ ಬಸಿದಿಳಿದ ರಕ್ತದಿಂದ ನೆಲ ಕೆಸರಾಗಿದೆ. ಈ ರೀತಿ ಧೇನುವಿಗೆ ದಾರುಣ ಸಾವನ್ನಿತ್ತ ನಿನ್ನ ಜೀವನದ ಅಗತ್ಯಕಾಲದಲ್ಲಿ ನಿನ್ನ ರಥದ ಚಕ್ರವು ರಕ್ತದಿಂದ ಕೆಸರಾದ ಭೂಮಿಯಲ್ಲಿ ಹೂತು ಹೋಗಲಿ. ಅದೇ ನಿನ್ನ ಮರಣಕ್ಕೂ ಮುಹೂರ್ತವಾಗಲಿ” ಎಂದು ಶಪಿಸಿದನು.

ಬ್ರಾಹ್ಮಣೋತ್ತಮ ವಿಜಯನ ಬಳಿ ಆರ್ತನಾಗಿ “ಸ್ವಾಮೀ, ಗೋವಿಗೆ ಈ ಸ್ಥಿತಿ ಬರಲು ನನ್ನ ಕೈಜಾರಿದ ಕತ್ತಿ ಕಾರಣವಾಯಿತು. ಹಾಗೆಂದು ಈ ಗೋವಿನ ಹತ್ಯೆ ನನ್ನ ಉದ್ದೇಶವಾಗಿರಲಿಲ್ಲ. ಅನಿಯಂತ್ರಿತವಾಗಿ ಆಗಿ ಹೋದ ಈ ಘಟನೆಯಲ್ಲಿ ನಾನು ನಿರಪರಾಧಿ. ನನ್ನನ್ನು ಕ್ಷಮಿಸಿ ತಾವಿತ್ತ ಶಾಪವಾಕ್ಯದಿಂದ ಮುಕ್ತಗೊಳಿಸಬೇಕು” ಎಂದು ಬೇಡಿದೆ. ಮತ್ತೆ ಮತ್ತೆ ಅವರ ಆಶ್ರಮಕ್ಕೆ ಹೋಗುತ್ತಾ ಸಾವಿರದಷ್ಟು ಹಾಲೂಡುವ ದನಗಳನ್ನೂ, ಬಿಳಿಯ ಕರುಗಳನ್ನೂ ಪ್ರಾಯಶ್ಚಿತ್ತಕ್ಕಾಗಿ ದಾನ ಮಾಡಿದೆ. ಪರಿಚಾರಕರಾಗಿ ನೂರಾರು ದಾಸದಾಸಿಯರನ್ನೂ ಬ್ರಾಹ್ಮಣನಿಗೆ ಸೇವೆಗಾಗಿ ಒದಗಿಸಿ ಕ್ಷಮಿಸಬೇಕೆಂದು ಕೇಳಿದಾಗಲು ಬ್ರಾಹ್ಮಣ ಮನ್ನಿಸಲಿಲ್ಲ. ನಂತರ ಸುವರ್ಣ ನಾಣ್ಯಗಳನ್ನಿತ್ತು ಕ್ಷಮೆ ಕೇಳಿದಾಗ ಸ್ವೀಕರಿಸದೆ ಹಿಂದಿರುಗಿಸಿದರು. ಕೋಪಗೊಂಡು “ಏನು ನಿನ್ನ ಹುನ್ನಾರವಿದು? ಪ್ರಲೋಭನೆಗೆ ಒಳಪಡಿಸಿ ನಿನ್ನ ಪಾಪ ಕೃತ್ಯಕ್ಕೆ ವ್ಯವಹಾರ ರೂಪದ ಕ್ಷಮೆ ಬಯಸುತ್ತಿರುವೆಯಾ? ನಾನು ಸತ್ಯ ಪಾಲಕ, ನಾನಾಡಿದ ವಚನ ಸುಳ್ಳಾಗದು. ಇನ್ನೂ ಸ್ಪಷ್ಟವಾಗಿ ಹೇಳುತ್ತೇನೆ ಕೇಳು ನೀನಿತ್ತ ಸುವಸ್ತುಗಳಾಗಲಿ, ಧನ ಧಾನ್ಯಗಳಾಗಲಿ ನನಗೆ ಬೇಕಾಗಿಲ್ಲ. ನನ್ನ ಕಾಮನೆ ಏನಿದ್ದರು ಉತ್ತಮ ಗತಿ. ಅದರ ಸಂಪ್ರಾಪ್ತಿಗಾಗಿ ನಿಸ್ವಾರ್ಥ, ಲೋಕ ಕಲ್ಯಾಣ, ಭಗವದ್ಪ್ರೀತಿಯ ಕಾರ್ಯನಿರತನಾಗಿದ್ದೇನೆ. ಅಮೂಲ್ಯ ವಸ್ತು, ಧನಕನಕ ನನಗೆ ನಿರುಪಯುಕ್ತ” ಎಂದು ನಾನಿತ್ತ ಕೊಡುಗೆಗಳನ್ನು ತಿರಸ್ಕರಿಸಿ, ಕ್ಷಮೆಯನ್ನು ನೀಡಲಿಲ್ಲ.

ಪ್ರಕರಣ ಹೀಗಾಗಲು, ಅಂತಹ ಉದ್ದೇಶವಿಲ್ಲದ, ಅರಿತು ಮಾಡದ ತಪ್ಪಿಗೆ ಕ್ಷಮೆ ಸಿಗದೆ ಶಾಪಗ್ರಸ್ಥನಾಗಿದ್ದೇನೆ. ಶಲ್ಯಭೂಪತಿ! ನೀವು ನನ್ನ ಸಾರಥಿಯಾಗಿರುವಾಗ ನನ್ನ ರಥ ಕೆಸರಲ್ಲಿ ಹೂತು ನಾನು ಕೆಡಗುವ ಭಯವಿಲ್ಲ. ನಮ್ಮೊಳಗೆ ಏನು ಅಭಿಪ್ರಾಯ ವ್ಯತ್ಯಾಸಗಳಿದ್ದರೂ ಅದು ಭಿನ್ನಾಭಿಪ್ರಾಯವಲ್ಲ ಎಂದು ತೀರ್ಮಾನಿಸಿ ನನ್ನ ಪಾಲಿನ ಕೊರತೆ ಮತ್ತು ಸರಿದೂಗಿಸಬಲ್ಲ ನಿಮ್ಮ ಉಪಸ್ಥಿತಿಯ ಅಪೇಕ್ಷೆ ವ್ಯಕ್ತಪಡಿಸುತ್ತಿದ್ದೇನೆ. ನೀವು ಬೆಂಬಲವಿತ್ತು ನನ್ನೊಡನೆ ಇದ್ದರೆ ಆ ಅರ್ಜುನನನ್ನು ಇಂದಿನ ದಿನ ವಧಿಸಿ ನನ್ನ ಪ್ರತಿಜ್ಞೆ ಪೂರೈಸುವೆ. ಅರ್ಜುನ ಒಬ್ಬನಳಿದರೆ ಮಿಕ್ಕ ಪಾಂಡವರು ನಮಗೆ ಸುಲಭದ ತುತ್ತಾಗುತ್ತಾರೆ. ಕೌರವನ ಅನ್ನದ ಋಣ ತೀರಿಸುವ ಭಾಗ್ಯ ನನ್ನದಾಗುತ್ತದೆ. ಈ ಮಹತ್ಕಾರ್ಯ ಸಾಧನೆಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇನೆ” ಎಂದನು ಕರ್ಣ.

ಆಗ ಶಲ್ಯ ಭೂಪತಿ “ಅಯ್ಯಾ ರಾಧೇಯಾ! ನೀನು ಉಂಡ ಅನ್ನದ ಋಣ ತೀರಿಸುವ ಮಾತನ್ನಾಡಿರುವೆ. ಆದರೆ ನಾನು ನನ್ನ ವಚನ ಪಾಲನೆಯ ಸಂಕೋಲೆಯಲ್ಲಿ ಬಂಧಿಸಲ್ಪಟ್ಟು ಈ ಪಕ್ಷದಲ್ಲಿದ್ದೇನೆ. ಯಥಾರ್ಥವಾಗಿ ಯುದ್ದಕ್ಕೆ ನನ್ನ ಸಹಾಯ ಬಯಸಿ ಕರೆದಿರುವುದೂ ಪಾಂಡವರು, ನಾನು ಬಂದಿರುವುದೂ ಅದೇ ಪಕ್ಷವನ್ನು ಬೆಂಬಲಿಸಲು. ಹಾಗೆಂದು ನನ್ನ ತಂಗಿ ಮಾದ್ರಿಯನ್ನಿತ್ತು ಸಂಬಂಧವಿರುವುದು ಪಾಂಡು ಚಕ್ರವರ್ತಿಯೊಡನೆ. ಆದರೆ ಕಪಟಿಯಾದ ಕೌರವ ಮತ್ತು ಶಕುನಿ ಹೆಣೆದ ವಂಚನೆಯ ಬಲೆಗೆ ಸಿಲುಕಿ ಈ ದುರ್ದೆಸೆ ನನ್ನದಾಯಿತು. ಮಹಾನ್ ಧನುರ್ಧರ ಪಾರ್ಥನ ರಥದ ಸಾರಥಿಯಾಗಲು ಬಯಸಿದ್ದ ನನಗೆ ದಕ್ಕಿದ್ದು ಸೂತನಾದ ನಿನ್ನ ರಥ ಸಾರಥ್ಯ. ಇದಕ್ಕಿಂತ ನೀಚ ಸ್ಥಿತಿ ನನ್ನ ಬದುಕಿನಲ್ಲಿ ಇನ್ನು ಬರುವುದಕ್ಕೆ ಸಾಧ್ಯವಿಲ್ಲ. ಕೌರವನ ಪಕ್ಷದಲ್ಲಿದ್ದರೂ ಒಂದು ಅಪ್ರಿಯವಾದ ಸತ್ಯ ಹೇಳುತ್ತೇನೆ ಕೇಳು. ಅರ್ಜುನನನ್ನು ಗೆಲ್ಲಬಲ್ಲ ಯಾವ ಯೋಧನೂ ಕೌರವ ಪಕ್ಷದಲ್ಲಿ ಉಳಿದಿಲ್ಲ. ನೀನು ಆತನ ವಧೆಯ ಬಗ್ಗೆ ಮಾತನಾಡುತ್ತಿರುವೆ. ಯಾವ ಕಾಲಕ್ಕೂ ನಿನ್ನಿಂದ ಮಾಡಲು ಅಸಾಧ್ಯ ಆಗಿರುವುದರ ಬಗ್ಗೆ ವ್ಯರ್ಥ ಕನಸು ಕಾಣುವುದನ್ನು ಬಿಟ್ಟು, ವಾಸ್ತವ ಅರಿತು ಆ ಅರ್ಜುನನಿಂದ ಮರಣ ನಿನಗೊದಗುವ ಮೊದಲು ವ್ಯಾಪಕವಾಗಿ ಪಾಂಡವ ಸೇನಾ ನಾಶದಲ್ಲಿ ತೊಡಗಿಕೋ. ಮುಂದೆ ಯುದ್ದ ಸಾಗುವಾಗ ಪಾಂಡವ ಪಕ್ಷ ಸೈನ್ಯದ ವಿಚಾರದಲ್ಲಾದರೂ ದುರ್ಬಲವಾಗಲಿ. ಅದನ್ನು ಬಿಟ್ಟು ಅರ್ಜುನನನ್ನು ಎದುರಿಸಿ ಕೊಲ್ಲುತ್ತೇನೆ ಎಂಬ ನಿನ್ನ ಹಂಬಲ ಕೇವಲ ಹಗಲುಗನಸು. ಆಗದ ಕೆಲಸಕ್ಕೆ ಮನ ಮಾಡಿ ಹತನಾಗುವೆ. ಪರಿಣಾಮ ನಿನ್ನಿಂದ ಸಾಧ್ಯವಾಗಬಹುದಾದ ಪಾಂಡವ ಸೇನೆಯೂ ಹಾಗೆ ಉಳಿದು ಮುಂದಿನ ಯುದ್ದಕ್ಕೆ ಅವರಿಗೆ ಲಾಭವಾಗುತ್ತದೆ. ವಿವೇಚನೆ ಇಲ್ಲದ ಅವಿವೇಕಿಯಾಗಿ ವರ್ತಿಸಬೇಡ. ನೀನು ಪಾರ್ಥನೆದುರು ಹೋಲಿಸಿದರೆ ನಗಣ್ಯ. ನಿನ್ನಂತಹ ಅದೆಷ್ಟೋ ಭ್ರಮೆಗೊಳಗಾದ ವೀರಾಧಿವೀರರ ಶಿರಚ್ಛೇದನಗೈದು ಮುಂದೊತ್ತಿ ಬರುತ್ತಿರುವ ಕೃಷ್ಣಾರ್ಜುನರಿಗೆ ನೀನೊಬ್ಬನಾಗಿ ಸೇರಿಕೊಳ್ಳುವೆ ಹೊರತು, ಮತ್ಯಾವ ಸಾಧಕವೂ ನಿನ್ನಿಂದಾಗದು. ನನ್ನ ಈ ಅಭಿಪ್ರಾಯ ನಿನಗೆ ಅಹಿತವೆನಿಸಿದರೂ ಅಕ್ಷರಃ ಸತ್ಯವೂ, ನಿಜ ಭವಿಷ್ಯವೂ ಆಗಿದೆ. ಅರ್ಜುನನೆದುರು ಗೆಲುವು ನಿನ್ನ ಪಾಲಿಗೆ ಕೇವಲ ಭ್ರಮೆ ಮತ್ತು ಕೇವಲ ಮರೀಚಿಕೆ.” ಎಂದು ಶಲ್ಯ ಮತ್ತೆ ಮತ್ತೆ ಒತ್ತಿ ವಿವರಿಸಿ ಹೇಳಿದ.

“ಮಾದ್ರೇಶಾ! ನಿನಗೆ ಸಾಕಷ್ಟು ಗೌರವ ನೀಡಿ ನನ್ನ ಮನದಾಸೆ ಮತ್ತು ಗುರಿಯನ್ನು ವಿವರಿಸಿದರೂ ನಿನ್ನ ದೃಷ್ಟಿಯಲ್ಲಿ ನಾನು ಕ್ಷುಲ್ಲಕನಾಗಿ ಕಾಣಿಸುತ್ತಿದ್ದೇನೆ. ನಿನ್ನ ಈ ತೆರನಾದ ಸರ್ವ ಅಪರಾಧಗಳನ್ನು ಮೂರು ಕಾರಣಗಳಿಂದ ಮನ್ನಿಸಿ ಕ್ಷಮಿಸುತ್ತಿದ್ದೇನೆ. ಅದನ್ನೇ ನನ್ನ ದೌರ್ಬಲ್ಯ ಎಂದು ತಿಳಿಯಬೇಡ. ಮೊದಲನೆಯದಾಗಿ ನನ್ನ ಮೇಲೆ ಅಪಾರ ವಿಶ್ವಾಸ ಹೊಂದಿರುವ ಮಿತ್ರ ದುರ್ಯೋಧನನ ಜಯಕ್ಕಾಗಿ ಹೋರಾಟ, ಸರ್ವ ಪ್ರಯತ್ನ ಜಾರಿಯಲ್ಲಿದೆ. ಎರಡನೆಯದಾಗಿ ಅಂತಹ ಕಾರ್ಯ ಸಾಧನೆ ಮಾಡಬಲ್ಲ ಶಕ್ತರೆಂದು ಭಾವಿಸಿದ್ದ ಭೀಷ್ಮ ದ್ರೋಣರು ಧರೆಗುರುಳಿದ್ದಾರೆ. ಹಾಗಾಗಿ ಜಯ ಸಂಪಾದಿಸುವ ಜವಾಬ್ದಾರಿ ನನ್ನದಾಗಿದೆ. ಮೂರನೆಯದಾಗಿ ನೀನೇನು ದೂಷಣೆ ಮಾಡಿದರೂ ಸಹಿಸಿ ಯುದ್ದ ಮಾಡುವ ವಚನ ದುರ್ಯೋಧನನಿಗಿತ್ತು ಬಂದಿದ್ದೇನೆ. ಸಮಗ್ರವಾಗಿ ಗೆಲುವು ನಮ್ಮದಾಗುವವರೆಗೆ ನಾವು ಒಗ್ಗಟ್ಟಾಗಿ ಇದ್ದರೆ ಮಾತ್ರ ನಮ್ಮ ಕಾರ್ಯ ಸಾಧನೆ ಸರಳವೂ ಸುಸೂತ್ರವೂ ಆಗಬಹುದು. ಹಾಗಾಗಿ ನಿನಗೆ ಏನು ಮಾತನಾಡಿದರೂ ಕ್ಷಮೆ ನೀಡುತ್ತಿದ್ದೇನೆ.

ಇಲ್ಲದೇ ಹೋಗಿದ್ದರೆ ನಿನ್ನಂತಹ ಸಾವಿರ ಶಲ್ಯರು ನನಗೆದುರಾಗಿ ಬಂದಿದ್ದರೂ ಈ ಅಪಮಾನ ರೂಪದ ಅಪರಾಧಗಳಿಗೆ ಮೃತ್ಯುದಂಡವನ್ನು ಒದಗಿಸುತ್ತಿದ್ದೆ. ನಿನ್ನಂತಹ ವಾಹಿಕ ದೇಶದವನ ಬಾಯಿಂದ ಮತ್ಯಾವ ಮಾತುಗಳು ಬಂದೀತು ಎಂಬ ಪೂರ್ಣ ಕಲ್ಪನೆ ಮತ್ತು ಅನುಭವ ನನಗಿದೆ. ನಿನ್ನದ್ದಾದ ದೇಶದಲ್ಲಿ ನನಗೂ ಕೆಲ ಸಮಯ ಕಳೆಯುವ ಸಂದರ್ಭ ಒದಗಿತ್ತು. ಆ ಕಾಲದಲ್ಲಿ ನೀಚರಾದ ನಿಮ್ಮ ಗುಣಗಳೇನು? ಸಂಸ್ಕಾರವೇನು ? ಎಂಬುವುದನ್ನು ಪ್ರತ್ಯಕ್ಷ ಅನುಭವಿಸಿ ಬಂದಿದ್ದೇನೆ. ನಿನ್ನ ದೇಶದ ವಿಪಾಶಾ ನದಿಯಲ್ಲಿ ಎರಡು ಕ್ಷುದ್ರ ಪಿಶಾಚಿಗಳಿದ್ದವಂತೆ. “ವಹಿ” ಮತ್ತು “ಹೀಕ” ಎಂಬಂತೆ ಅವುಗಳ ನಾಮಧೇಯವಾಗಿತ್ತು ಎಂದು ಕೇಳಿ ತಿಳಿದಿದ್ದೇನೆ. ಕಾಲಕ್ರಮೇಣ ಆ ಪಿಶಾಚಿಗಳ ಸಂತಾನ ಬೆಳೆದು “ವಾಹಿಕ” ವಂಶವಾಗಿದೆ ಎಂಬ ವಿಚಾರವೂ ನನ್ನ ಅರಿವಿಗೆ ತಿಳಿದ ಸಂಗತಿ. ಅಂತಹ ನೀಚ, ಪೈಶಾಚಿಕ ವಂಶಸ್ಥ ಮಹಿಳೆಯರು, ಪುರುಷರು, ಮಕ್ಕಳು ಯಾರಿಂದಲೂ ಸಂಸ್ಕಾರವನ್ನು ಅಪೇಕ್ಷಿಸದರೆ ಅದಕ್ಕಿಂತ ಮಿಗಿಲಾದ ಮೂರ್ಖತನ ಇರಲಾರದು. ಛೀ, ವಾಹಿಕ ಮಹಿಳೆಯರ ಸ್ಥಿತಿಯನ್ನು ಕಣ್ಣಾರೆ ಕಂಡಿದ್ದೇನೆ, ಮದ್ಯಪಾನ ವ್ಯಸನಿಗಳಾಗಿ, ನಶೆಯೇರಿಸಿಕೊಂಡು, ಅಸಭ್ಯವಾಗಿ ವರ್ತಿಸುತ್ತಾ, ಮೈಮೇಲೆ ಬಟ್ಟೆ ಧರಿಸದೆ ನಗ್ನವಾಗಿ ಕುಣಿಯುತ್ತಾ, ಮೃಗಗಳಿಗಿಂತ ಹೇಯವಾಗಿ ಕಂಡ ಕಂಡ ಪರ ಪುರುಷರ ಜೊತೆ ಮೈಥುನ ನಿರತರಾಗಿ ಇರುತ್ತಾ, ಶೌಚ ಎಂದರೆ ಏನೆಂದು ಅರಿಯದ, ಕಾಮಕೇಳಿಯ ಚೀರಾಟದ ಸ್ವರಗಳನ್ನು ಸಂಗೀತದಂತೆ ಹಾಡಿ ಕುಣಿಯುವ, ಅವಾಚ್ಯ ವಾಕ್ಯಗಳನ್ನು ಆಡುವ ವಂಶದ ಜನರ ಮಧ್ಯದಿಂದ ಬಂದಿರುವ ನೀನು ನನ್ನನ್ನು ನಿಂದಿಸಿದ ಮಾತ್ರಕ್ಕೆ ನನಗೆ ಬೇಸರವಾಗದು. ಮದ್ಯಪಾನ, ಅನೈತಿಕ, ಅಶೌಚ, ದುರ್ವಚನಿ, ಚೋರ, ಜಾರ, ಪರವಿತ್ತಾಪಹಾರ, ಇತ್ಯಾದಿ ಅಧರ್ಮಗಳು ನಿಮಗೆ ನೈಮಿತ್ತಿಕ ಕರ್ಮಗಳು. ಅಷ್ಟು ನೀಚ ಕುಲದವನಾದರೂ ಹೇಗೋ ಉತ್ಕೃಷ್ಟವಾದ ಜ್ಞಾನ ನಿನ್ನಲ್ಲಿದೆ. ಕೆಸರಿನಲ್ಲಿ ತಾವರೆ ಅರಳಿದಂತೆ ನೀನು ಮಹಾ ಸಾರಥಿಯಾಗಿ ಲೋಕ ಖ್ಯಾತನಾಗಿರುವೆ. ಆ ನಿನ್ನ ಉತ್ತಮ ಗುಣದ ಅಗತ್ಯ ನಮಗೀಗ ಇರುವ ಕಾರಣ ನೀನೇನು ಅಪಚಾರ ಎಸಗಿದರೂ ಸಹಿಸಲೇ ಬೇಕಾದ ಅನಿವಾರ್ಯತೆ ಇದೆ.” ಎಂದನು ಕರ್ಣನು.

ಅತಿ ನೀಚ ಸ್ತರದಲ್ಲಿ ತನ್ನ ದೇಶ ಮತ್ತು ಸಂಸ್ಕಾರವನ್ನು ನಿಂದಿಸುತ್ತಿರುವ ಕರ್ಣನ ಬಗ್ಗೆ ಶಲ್ಯನೂ ಅಸದಳ ಕ್ರೋಧ ತಳೆದನು.

ಕರ್ಣ ಶಲ್ಯರು ಏಕರಥದಲ್ಲಿ ಇದ್ದರೂ ಪರಸ್ಪರ ಕಚ್ಚಾಟ, ವಾಗ್ಯುದ್ದ ನಿರತರಾಗಿರುವ ವಿಚಾರ ದುರ್ಯೋಧನನಿಗೆ ರಣರಂಗದಲ್ಲಿರುವ ಗುಪ್ತಚರರಿಂದ ತಿಳಿಯಿತು. ಆ ಕೂಡಲೆ ಆತ ಕರ್ಣನ ರಥದ ಬಳಿ ಧಾವಿಸಿ ಬರತೊಡಗಿದನು.

ಮುಂದುವರಿಯುವುದು…

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page