23.9 C
Udupi
Sunday, February 1, 2026
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ 406

ಭರತೇಶ್ ಶೆಟ್ಟಿ, ಎಕ್ಕಾರ್

“ಸಮುದ್ರ ತೀರದಲ್ಲಿ ಧರ್ಮಾತ್ಮನಾದ ರಾಜನೊಬ್ಬನಿದ್ದ. ಆತನ ರಾಜ್ಯದಲ್ಲಿ ಶ್ರೀಮಂತ ವೈಶ್ಯನೊಬ್ಬನಿದ್ದ. ಆತನಿಗೆ ಬಹು ಮಂದಿ ಮಕ್ಕಳಿದ್ದರು. ಪಾನ, ಭೋಜನಗಳಿಗೆ ಯಾವ ಕೊರತೆಯು ಇರಲಿಲ್ಲ. ಆತನ ಮಕ್ಕಳು ಉಂಡು ಮಿಕ್ಕ ಉಚ್ಚಿಷ್ಟಾನ್ನ ( ಎಂಜಲು : – ಇಲ್ಲಿ ಮಿಕ್ಕಿದ ಅನ್ನ, ಮಾಂಸ, ಹಾಲು, ಎಲ್ಲಾ ತರಹದ ಊಟದ ಹೆಚ್ಚಾದ ಭಾಗ ) ವನ್ನು ತಮ್ಮ ಮನೆಯ ಹೊರಗಿದ್ದ ಕಾಗೆಗೆ ನೀಡುತ್ತಿದ್ದರು. ಹೀಗೆ ತಿಂದು ತಿಂದು ಕಾಗೆ ಕೊಬ್ಬಿ ಹೋಗಿತ್ತು. ಹೀಗಿರಲು ಒಂದು ದಿನ ಆ ಸಮುದ್ರ ತೀರಕ್ಕೆ ರಾಜಹಂಸಗಳ ಗುಂಪೊಂದು ಹಾರಿ ಬಂದು ವಿಶ್ರಾಂತವಾದವು.”

ಶಲ್ಯನು ಕಥೆಯನ್ನು ಮುಂದುವರಿಸುತ್ತಾ ಹೇಳತೊಡಗಿದ “ಕಾಗೆ ಶ್ರಮವಿಲ್ಲದೆ ತಿಂದು ಕೊಬ್ಬಿ ಹೋಗಿತ್ತು. ತನ್ನ ಬಳಗದ ಇತರ ಕಾಗೆಗಳಿಗೆ ಹೋಲಿಸಿದರೆ ಶಾರೀರಿಕವಾಗಿ ದಷ್ಟ ಪುಷ್ಟವೂ ಬಲಯುತವೂ ಆಗಿದ್ದು, ತಾನು ಗರುಡನಿಗಿಂತಲೂ ಬಲಾಢ್ಯ ಎಂಬ ಭ್ರಮೆ ಹೊಂದಿತ್ತು. ವೈಶ್ಯನ ಮಕ್ಕಳು ರಾಜಹಂಸಗಳ ಸೌಂದರ್ಯವನ್ನು ನೋಡಿ ಸವಿಯುತ್ತಿರಬೇಕಾದರೆ ಅಲ್ಲಿಗೆ ಈ ಕಾಗೆಯೂ ಹಾರಿ ಬಂತು. ಅವರು ವಿನೋದಕ್ಕಾಗಿಯೋ ಇಲ್ಲ ನಮ್ಮ ಜೊತೆಯಿರುವ ಕಾಗೆಗೆ ಬೇಸರವಾಗಬಾರದೆಂದೋ ” ಹೇ ವಾಯಸವೇ, ನೀನು ಆ ಹಂಸಗಳಿಗಿಂತ ಶ್ರೇಷ್ಟನೂ ಸುಂದರನೂ ಆಗಿರುವೆ” ಎಂದು ನುಡಿದು ತಮ್ಮ ಮನೆಗೆ ಹೊರಟು ಹೋದರು. ಕಾಗೆ ಒಳಗೊಳಗೆ ತನ್ನ ಶ್ರೇಷ್ಟತೆಗಾಗಿ ಉಬ್ಬಿಕೊಂಡಿತು. ಅಷ್ಟಕ್ಕೆ ಸುಮ್ಮನಾಗದೆ ರಾಜಹಂಸಗಳು ಕುಳಿತಲ್ಲಿಗೆ ಹಾರಿ ಹೋಯಿತು. “ನಿಮ್ಮಲ್ಲಿ ಅತಿ ಬಲಾಢ್ಯ, ಶ್ರೇಷ್ಟ ಹಂಸ ಯಾರು?” ಎಂದು ಪ್ರಶ್ನೆ ಮಾಡಿತು. ಅವುಗಳು “ನಮ್ಮೊಳಗೆ ಭೇದವಿಲ್ಲ. ನಾವು ಎಲ್ಲರೂ ಸಮಾನರು” ಎಂದವು. ಅಷ್ಟಕ್ಕೆ ಬಿಡದ ಕಾಗೆ “ನಾನು ಹಾಗಲ್ಲ ಶ್ರೇಷ್ಟನಾಗಿರುವೆ. ನಿಮ್ಮಲ್ಲಿ ಯಾರಾದರು ನನ್ನೊಡನೆ ಸ್ಪರ್ಧೆಗೆ ಬರುವವರಿದ್ದರೆ ನಾನು ಸಿದ್ಧನಿರುವೆ” ಎಂದಿತು. ಹಂಸಗಳು ನಮ್ಮ ಪಂಗಡವೆ ಬೇರೆ. ನಿನ್ನ ವಿಭಾಗವೆ ಬೇರೆ. ಹಾಗಿರುತ್ತಾ ಏನೆಂದು ಸ್ಪರ್ಧೆ ಮಾಡುವುದು? ಸುಖಾ ಸುಮ್ಮನೆ ಸ್ಪರ್ಧೆಯಾದರೂ ಯಾಕೆ?” ಎಂದು ಕೇಳಿದವು. ಆಗ ಕಾಗೆ ಬಿಡದೆ “ಸ್ಪರ್ಧೆ ನಿಮ್ಮ ಆಯ್ಕೆಯ ವಿಚಾರದಲ್ಲಿ ಇರಲಿ. ನಾನು ಬಲಿಷ್ಟನಾಗಿದ್ದು ಯಾವ ವಿಧದ ಸ್ಪರ್ಧೆಗೂ ಸಿದ್ಧನಾಗಿರುವೆ” ಎಂದಿತು. ಆಗ ಒಂದು ಹಂಸ “ನೋಡು ನೀನು ನಾಡ ಪಕ್ಷಿ. ಒಂದೆಡೆ ಇರುವವನು. ನಾವು ಹಾಗಲ್ಲ ಮಾನಸ ಸರೋವರದಲ್ಲಿ ವಾಸಿಸುವವರು. ಒಂದು ಪ್ರದೇಶದಿಂದ ಇನ್ನೊಂದೆಡೆ ಹಾರಿ ಆಹಾರ, ವಿಹಾರಕ್ಕೆ ಸಂಚರಿಸುವವರು. ನಮ್ಮೊಳಗೆ ಸ್ಪರ್ಧೆ ನಡೆಸುವ ಸಾಮ್ಯತೆ ಇಲ್ಲ” ಎಂದಿತು. ಆಗ ಕಾಗೆ “ಸರಿ ಹಾಗಾದರೆ, ನನ್ನನ್ನು ನೋಡಿಯೆ ನೀವು ಸೋಲೊಪ್ಪಿದಂತಿದೆ. ಹಾರುವ ವಿಚಾರ ಹೇಳಿರುವಿರಿ. ನಾನು ಹಾರುವುದನ್ನು ಸ್ಪರ್ಧೆಯಾಗಿ ಸ್ವೀಕರಿಸುವೆ. ಯಾವ ವಿಧದ ಹಾರಾಟದ ಸ್ಪರ್ಧೆಗೆ ನೀವು ಸಿದ್ಧರಿದ್ದೀರಿ ಹೇಳಿ. ನಾನಾದರೆ ಹಲವು ಗತಿ ವಿಧಾನಗಳಲ್ಲಿ ಹಾರುವುದನ್ನು ಅರಿತಿದ್ದೇನೆ. ಉಡ್ಡೀನ (ಮೇಲಕ್ಕೆ ಹಾರುವುದು), ಅವಡೀನ (ಕೆಳಮುಖವಾಗಿ ಹಾರುವುದು), ಪ್ರಡೀನ (ನಾಲ್ಕು ದಿಕ್ಕುಗಳಿಗೆ ಹಾರುವುದು) ಡೀನ (ಸಾವಧಾನವಾಗಿ ಹಾರುವುದು) ನಿಡೀನ (ನಿಧಾನವಾಗಿ) ಸಂಡೀನ ( ಲಲಿತ ಗತಿಯಲ್ಲಿ) ತಿರ್ಯಗ್ಡೀನ (ಅಡ್ಡವಾಗಿ) ವಿಡೀನ (ಮತ್ತೊಂದು ಪಕ್ಷಿಯಂತೆ ಅನುಸರಿಸಿ) ಪರಿಡೀನ, ಪರಾಡೀನ, ಸುಡೀನ, ಅಭಿಡೀನ, ಮಹಾಡೀನ, ಅತಿಡೀನ ಇಂತಹ ಇಪ್ಪತ್ತಾರು ವಿಧಾನಗಳಲ್ಲೂ ಹಾರಬಲ್ಲೆ. ಇದಲ್ಲದೆ ಪಾತಕ್ರಮದ ನೂರೊಂದು ಕ್ರಮಗತಿಗಳಲ್ಲಿ ಹಾರುವುದನ್ನು ಅರಿತಿದ್ದೇನೆ. ಒಂದೇ ನೆಗೆತಕ್ಕೆ ನೂರು ಯೋಜನ ದೂರ ಕ್ರಮಿಸಬಲ್ಲೆ.” ಎಂದಿತು. ಆಗ ಹಂಸಗಳಲ್ಲಿ ಒಂದು “ಕಾಕನೇ, ನೀನು ನೂರೊಂದು ಪಾತ, ಇಪ್ಪತ್ತಾರು ಗತಿಗಳನ್ನು ಬಲ್ಲವನಾಗಿರಬಹುದು ಆದರೆ ನಾವು ಸಾಮಾನ್ಯ ಪಕ್ಷಿಗಳಂತೆ ನಮ್ಮ ಉಪಯೋಗಕ್ಕನುಸಾರ ಹಾರುವವರು. ಬೇರೆ ಬೇರೆ ಕ್ರಮಗಳನ್ನು ಅನುಸರಿಸಿ ಹಾರಿದರೆ ನಮ್ಮ ಗುರಿ ಸಾಧಿಸಲಾಗದು.” ಎಂದಿತು. ಆಗ ಕಾಗೆ “ಸರಿ ನಿಮಗೆ ಹೇಗೆ ಬೇಕು ಹಾಗೆ ಹಾರಬಹುದು. ನಾನು ನಿಮ್ಮೆದುರು ವೈವಿಧ್ಯ ಗತಿಗಳಲ್ಲಿ ಹಾರಿ ತೋರುವೆ. ಸ್ಪರ್ಧೆಗೆ ಸಿದ್ಧರಾ ನೀವು?” ಎಂದು ಕೇಳಿತು. ಹೀಗೆ ಚರ್ಚೆ ಸಾಗಿ ಕೊನೆಗೆ ಸ್ಪರ್ಧೆ ನಿರ್ಣಯಿಸಲ್ಪಟ್ಟು ಆರಂಭವಾಗಿ ಬಿಟ್ಟಿತು. ಕಾಗೆ ಬಗೆ ಬಗೆಯಲ್ಲಿ ಹಾರುತ್ತಾ, ಮೇಲೆ ಎತ್ತರಕ್ಕೆ ಏರಿ, ಅಲ್ಲಿಂದ ಕೆಳಕ್ಕೆ ಇಳಿದು, ವೃತ್ತಾಕಾರದಲ್ಲಿ, ರೆಕ್ಕೆ ವೇಗವಾಗಿ ಬಡಿಯುತ್ತಾ, ಮತ್ತೆ ಕೆಲಹೊತ್ತು ರೆಕ್ಕೆ ಬಡಿಯದೆ ಹಾರಿ ತೋರಿಸುತ್ತಾ ಹಾರುತ್ತಿತ್ತು. ಆದರೆ ರಾಜಹಂಸ ಮಾತ್ರ ಸಮಾನಾಂತರವಾಗಿ ಒಂದೇ ಗತಿಯಲ್ಲಿ ಸಾಗುತ್ತಿತ್ತು. ಕಾಗೆ ಬಹಳಷ್ಟು ಮುಂದೆ ಇದ್ದು ಚಕ್ರವಾಕ ಹಿಂದೆಯೆ ಉಳಿದಿತ್ತು. ರಾಜಹಂಸ ಹದವಾಗಿ ಗಾಳಿಯ ಚಲನೆಗೆ ಪೂರಕವಾಗಿ ವೇಗ ಏರಿಸುತ್ತಾ ಹಾರುತ್ತಿತ್ತು. ಬಹಳ ಹೊತ್ತಾದರೂ ಕಾಗೆಯೆ ಮುಂದಿತ್ತು. ನೋಡ ನೋಡುತ್ತಿದ್ದಂತೆ ಹಂಸ ಸನಿಹಕ್ಕೆ ಬಂದಿತು. ಮೊದಲಿನ ಗತಿಯಲ್ಲಿಯೆ ಹಾರುತ್ತಾ ಕಾಗೆಯನ್ನು ಹಿಂದಿಕ್ಕಿ ಸಾಗಿತು. ಈಗ ಕಾಗೆಗೆ ದಣಿದು ಸುಸ್ತಾಗಿದೆ. ಎಲ್ಲಾದರು ವಿರಮಿಸೋಣವೇ! ಸಮುದ್ರದ ಮಧ್ಯದಲ್ಲಿ ಹಾರುತ್ತಿದೆ. ಮರವಿಲ್ಲ, ತೀರ ದೂರವಿದೆ, ರೆಕ್ಕೆಗಳು ಬಸವಳಿದಿವೆ. ಎತ್ತರದಿಂದ ಕೆಳಕೆಳಗೆ ಬರುತ್ತಾ ಸಾಗರದ ನೀರಿನ ಸಾಮಿಪ್ಯದಲ್ಲಿ ಭಯದಿಂದ ಹಾರುತ್ತಿದೆ. ಈ ಸ್ಥಿತಿಯಲ್ಲಿರುವ ಕಾಗೆಯನ್ನು ತಿರುಗಿ ನೋಡಿದ ಚಕ್ರಾಂಕ ತನ್ನ ಚಲನೆಯ ವೇಗವನ್ನು ಬಹಳ ನಿಧಾನಗೊಳಿಸಿ ಕಾಗೆ ಸಮೀಪಿಸಲು ಕಾಯುತ್ತಾ, ಅದೂ ಕೆಳಮುಖವಾಗಿ ಇಳಿಯುತ್ತಾ ಹಾರತೊಡಗಿತು. ಹೇಗೊ ಕಾಗೆ ನಿಸ್ತೇಜಗೊಂಡು ರಾಜಹಂಸದ ಸನಿಹ ತಲುಪಿತು. ಆಗ ಕಾಗೆ ನೀರಿಗೆ ತಾಗುತ್ತಾ, ಕೊಕ್ಕು, ಕಾಲು, ರೆಕ್ಕೆಗಳನ್ನು ತೋಯಿಸಿಕೊಳ್ಳುತ್ತಾ ಹಾರುತ್ತಿದೆ. ಇದನ್ನು ನೋಡಿ ಚಕ್ರಾಂಕ ಕೇಳಿತು “ಅಯ್ಯಾ ಕಾಕರಾಯ ಇದು ಯಾವ ಹೊಸ ಗತಿ ಅಥವಾ ಪಾತಕ್ರಮದಲ್ಲಿ ಹಾರುತ್ತಿರುವೆ ನೀನು?”. ಕಾಗೆ ನೀರೊಳಗೆ ತನ್ನನ್ನು ನುಂಗಲು ಅನುಸರಿಸಿ ಬರುವ ದೈತ್ಯ ಜಲಚರಗಳನ್ನು ನೋಡಿ ಭಯದಿಂದ ನಡುಗುತ್ತಾ ಪ್ರಾಣ ಭಯದಿಂದ ” ಅಯ್ಯಾ ! ರಾಜಹಂಸವೇ, ನಾನು ಸೋತಿರುವೆ. ಇನ್ನು ನನ್ನಿಂದ ಈ ಭಾರವಾದ ದೇಹವನ್ನು ಹೊತ್ತು ಹಾರಲಾಗದು. ಕೂರಲು ಮರ, ತೀರ ಯಾವುದೂ ಇಲ್ಲ. ನಿನ್ನೊಡನೆ ಕೆಣಕಿ ಸ್ಪರ್ಧಿಸಿದ ತಪ್ಪಿಗೆ ಈ ಸಮುದ್ರದ ಜಲಚರಗಳಿಗೆ ಆಹಾರವಾಗಿ ಸಾಯದೆ ವಿಧಿಯಿಲ್ಲ. ನನ್ನನ್ನು ಕ್ಷಮಿಸಿ ಬಿಡು. ಸಾಧ್ಯವಿದ್ದರೆ ನನ್ನನ್ನು ರಕ್ಷಿಸುವ ಉಪಾಯ ಹೇಳು. ಇನ್ನು ನನಗೆ ಹಾರಲಾಗದು” ಎಂದು ಏದುಸಿರು ಬಿಡುತ್ತಾ ಹೇಳುವಷ್ಟರಲ್ಲಿ ಹಾರಲಾಗದೆ ನೀರಿಗೆ ಬಿದ್ದು ಈಜುತ್ತಾ ಒದ್ದಾಡುತ್ತಿತ್ತು. ಮನಕರಗಿದ ರಾಜಹಂಸ ಸಹಾಯಕ್ಕೆ ಯತ್ನಿಸಿ ಕಾಲ ಬೆರಳಿನಿಂದ ಅಮುಕಿ ಹಿಡಿದು ಮೇಲೆತ್ತಿ, ರೆಕ್ಕೆ, ಕೊಕ್ಕಿನ ಸಹಾಯದಿಂದ ಕಾಗೆಯನ್ನು ತನ್ನ ಬೆನ್ನ ಮೇಲೇರಿಸಿತು. ಬೆನ್ನ ಮೇಲೆ ಮಲಗಿಸಿ ಹಿಂದಿರುಗಿದ ಹಂಸ ಮೊದಲಿದ್ದ ಸಮುದ್ರ ತೀರದತ್ತ ಹಾರಿಬರತೊಡಗಿತು. ವೇಗವಾಗಿ ಹಾರುತ್ತ ಬಂದು ಕಾಗೆಯನ್ನು ದಡ ಸೇರಿಸಿತು. ಬದುಕಿ ಉಳಿದು ತನ್ನ ಸ್ಥಾನ ಸೇರಿದ ಕಾಗೆ “ಅಯ್ಯಾ ಹಂಸವೇ, ನನ್ನ ಅಹಂಕಾರ ಅಳಿದು ಹೋಗಿದೆ. ನೀವೆಷ್ಟು ತಿಳಿ ಹೇಳಿದರೂ ಉಚ್ಚಿಷ್ಟಾನ್ನ ತಿಂದು ಕೊಬ್ಬಿದ್ದ ನನಗೆ ಅರ್ಥವಾಗದೆ ಮದವೇರಿತ್ತು. ನಿಮ್ಮ ಜೊತೆ ಸ್ಪರ್ಧೆಗೆ ಮನಮಾಡಿ ದಣಿದು ಸಾವನ್ನು ಕಂಡು ಬದುಕಿ ಬಂದಿದ್ದೇನೆ. ಇನ್ನೆಂದೂ, ಯಾರಲ್ಲೂ ಅಹಂ ಪ್ರದರ್ಶಿಸಲಾರೆ” ಎಂದು ಶಿರಬಾಗಿ ವಂದಿಸಿ ಹೇಳುತ್ತಾ, ಕೃತಜ್ಞತೆ ಸಲ್ಲಿಸಿತು. ರಾಜಹಂಸಗಳು ತಮ್ಮ ಪಾಡಿಗೆ ಎತ್ತಲೋ ಹಾರಿ ಹೋದವು.”

ಕರ್ಣನಿಗೆ ಈ ಕಥೆ ಹೇಳಿದ ಶಲ್ಯ “ಹೇ ಸೂತಪುತ್ರಾ! ಕುಲಾಧಮನಾದ ನೀನು ಕುರುಕುವರರ ಎಂಜಲು ತಿಂದು ಕೊಬ್ಬಿರುವೆ. ನಾನು ನಿನ್ನ ಶ್ರೇಯಸ್ಸಿಗಾಗಿ ಹೇಳುವ ಹಿತನುಡಿಗಳು ಅಹಿತವೆನಿಸುತ್ತಿವೆ. ಅದರ ಪರಿಣಾಮ ಅನುಭವಿಸಿದ ನಂತರವೆ ಅರಿವಾಗಲಿದೆ. ಅಜೇಯರೂ, ಅಭೇದ್ಯರೂ ಆದ ಕೃಷ್ಣಾರ್ಜುನರನ್ನು, ಅವರ ಸಾಮರ್ಥ್ಯವನ್ನು ಅರಿಯದೆ ಉಚ್ಚಿಷ್ಟ ಉಂಡು ಕೊಬ್ಬಿದ ಕಾಗೆಯಂತೆ ಸ್ಪರ್ಧೆಗೆ ಮನ ಮಾಡುತ್ತಿರುವೆ. ಹೇ ಸೂತಪುತ್ರ! ಆ ಅರ್ಜುನ ಸೂರ್ಯ ಸದೃಶ. ನೀನು ಆತನೆದುರು ಒಂದು ಮಿಣುಕು ಹುಳ. ಇನ್ನಾದರು ನೀನು ಏನು, ಎಷ್ಟು ಎಂದು ಅರಿತು ಜಾಣ್ಮೆಯಿಂದ ಯೋಜನಾಬದ್ಧನಾಗಿ ಹೋರಾಡು. ಶಕ್ತಿಯಿಂದ ಆಗದ ಕೆಲಸವನ್ನು ಯುಕ್ತಿಯಿಂದ ಸಾಧಿಸುತ್ತಾ ಗೆಲುವಿಗಾಗಿ ಶ್ರಮಿಸು. ಇಲ್ಲವಾದರೆ ನಿನ್ನ ಗತಿಯೂ ಕಾಗೆಯಂತೆ ಅಸಾಧ್ಯವಾದುದಕ್ಕೆ ಮನಮಾಡಿ ದಯನೀಯವಾಗಿ ಸೋಲಬೇಕಾದೀತು” ಎಂದನು.

ಮುಂದುವರಿಯುವುದು…

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page