32.5 C
Udupi
Monday, March 23, 2026
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ – 446

ಭರತೇಶ ಶೆಟ್ಟಿ,ಎಕ್ಕಾರ್

ಸಂಚಿಕೆ ೪೪೯ ಮಹಾಭಾರತ

ಸರಸ್ವತಿ ಮಹಾ ಮಹಿಮಾನ್ವಿತೆ. ಸರಸ್ವತೀ ಎಂಬ ಹೆಸರಿನ ಏಳು ನದಿಗಳಿಂದ ಪೂರ್ಣ ಜಗತ್ತೇ ವ್ಯಾಪ್ತವಾಗಿದೆ. ತಪೋಬಲಾನ್ವಿತರಾದ ಮಹರ್ಷಿಗಳು ಭಕ್ತಿ ಪುರಸ್ಸರವಾಗಿ ಎಲ್ಲೆಲ್ಲಿಗೆ ಆಹ್ವಾನಿಸಿದ್ದಾರೋ ಅಲ್ಲಲ್ಲಿಗೆ ಪ್ರವಹಿಸಿದವಳು ಸರಸ್ವತಿ.
ಹೀಗೆ ಗಾಮಿನಿಯಾಗಿ ಸಾಗಿದಾಗ ಏಳು ನಾಮಧೇಯಗಳನ್ನು ಸಂಪಾದಿಸಿದ್ದಾಳೆ. ಸುಪ್ರಭಾ, ಕಾಂಚನಾಕ್ಷಿ, ವಿಶಾಲಾ, ಮನೋರಮಾ, ಓಘವತೀ, ಸುರೇಣು ಮತ್ತು ವಿಮಲೋದಕಾ ಎಂಬ ಹೆಸರುಗಳಿಂದ ಪಾವನಳಾಗಿದ್ದಾಳೆ.

ಹಿಂದೆ ಪುಷ್ಕರ ತೀರ್ಥದಲ್ಲಿ ಬ್ರಹ್ಮದೇವನು ಮಹಾಯಜ್ಞವೊಂದನ್ನು ಕೈಗೊಂಡು ವಿಶಾಲವಾದ ಯಜ್ಞಕ್ಷೇತ್ರದಲ್ಲಿ ದೇವತೆಗಳ ಸಹಿತ ಯಾಗ ದೀಕ್ಷಿತನಾಗಿ ಸರ್ವಸಂಭಾರ ಸಮೃದ್ಧವಾದ ಸತ್ರಯಾಗ ಮಾಡಿ ಪೂರೈಸುವ ಸಮಯ, ಅಲ್ಲಿದ್ದ ಮಹರ್ಷಿಗಳು “ಭಗವಾನ್ ಬ್ರಹ್ಮದೇವಾ! ಇಲ್ಲಿ ಏನೇನು ಸರಿತ್ತುಗಳಿವೆಯೋ ಅವೆಲ್ಲಕ್ಕಿಂತ ಶ್ರೇಷ್ಟವಾದುದು ಸರಸ್ವತಿಯ ತೀರ್ಥ. ಹಾಗಾಗಿ ಈ ಯಾಗ ಮಹಾಗುಣ ಯುಕ್ತವಾಗಿಲ್ಲ” ಎಂದು ಅಭಿಪ್ರಾಯ ವ್ಯಕ್ತ ಪಡಿಸಿದರು. ಹೌದೆಂಬಂತೆ ಮನಗಂಡ ಬ್ರಹ್ಮದೇವ ಸರಸ್ವತೀದೇವಿಯನ್ನು ಮಂತ್ರಪೂರ್ವಕವಾಗಿ ಆಹ್ವಾನಿಸಿದಾಗ ಸುಪ್ರಭಾ ಎಂಬ ಹೆಸರಿನಿಂದ ಪ್ರತ್ಯಕ್ಷಳಾದಳು. ಮಹರ್ಷಿಗಳು, ದೇವತೆಗಳು, ಬ್ರಹ್ಮದೇವ ಹೀಗೆ ಎಲ್ಲರೂ ಸಂತುಷ್ಟರಾದರು. ಯಾಗವು ಸಕಲ ಗುಣ ಪರಿಪೂರ್ಣವಾಗಿ ಸಂಪನ್ನಗೊಂಡಿತು. ಪಿತಾಮಹ ಬ್ರಹ್ಮ, ಮತ್ತು ಮುನಿ ಮನೀಷಿಗಳ ತುಷ್ಟ್ಯರ್ಥವಾಗಿ ಪುಷ್ಕರತೀರ್ಥದಲ್ಲಿ ಸುಪ್ರಭಾ ಹೆಸರಿನಿಂದ ಆವಿರ್ಭೂತಳಾದಳು.

ಮುಂದೊಂದು ಸಮಯ ನೈಮಿಷಾರಣ್ಯದಲ್ಲಿ ಮಹರ್ಷಿಗಳೆಲ್ಲರು ಸಮಾಹಿತರಾಗಿ ವೇದಗಳ ವಿಷಯದಲ್ಲಿ ಸಂವಾದ ನಡೆದು ವಿಚಿತ್ರವೂ, ಕೌತುಕಪ್ರದವೂ ಆದ ಸಹಸ್ರಾರು ಕಥೆಗಳಿಂದಲೂ, ಶಾಸ್ತ್ರ ಉಕ್ತಿ, ಸ್ವಾಧ್ಯಾಯ ವಿಮರ್ಷೆಗಳಿಂದಲೂ, ಪ್ರಶ್ನೋತ್ತರ ಉಪನಿಷತ್ ಸ್ವರೂಪದ ಜ್ಞಾನಯಜ್ಞವೂ ಸತ್ರವೂ ಸಾಗುತ್ತಿತ್ತು. ಸಕಲ ವೇದ, ಶಾಸ್ತ್ರ ಪುರಾಣಗಳನ್ನು ತಿಳಿದ ಮುನಿ ಪುಂಗವರು ಅಲ್ಲಿ ನೆರೆದಿದ್ದರೂ ಅನಿವಾರ್ಯವಾಗಿ ಚಿಂತನೆಗೆ ಶಕ್ತಿ ತುಂಬಲು ಮಹಾಭಾಗ್ಯಶಾಲಿನಿಯಾದ, ಪುಣ್ಯೋಪೇತಳಾದ ಸರಸ್ವತಿಯನ್ನು ಸಹಾಯಾರ್ಥವಾಗಿ ಸ್ಮರಿಸಿ ಬೇಡಿಕೊಂಡರು. ಆ ಕೂಡಲೆ ಸತ್ರಯಾಜಿಗಳ ಸಮಕ್ಷದಲ್ಲಿ, ಎಲ್ಲಾ ಸರಿತ್ತುಗಳಿಗಿಂತಲೂ ಶ್ರೇಷ್ಠವೂ, ಪರಿಶುದ್ಧಳೂ ಆದ ಸರಸ್ವತಿಯು ಕಾಂಚನಾಕ್ಷಿ ಎಂಬ ನಾಮದಿಂದ ಪ್ರಕಟಳಾಗಿ ಅವರ ಮನೋವಾಂಛಿತಗಳನ್ನು ಪೂರೈಸಿ ಅನುಗ್ರಹಿಸಿದಳು. ಪ್ರತಿಯಾಗಿ ಅಲ್ಲಿ ನೆರೆದಿದ್ದ ಜ್ಞಾನ ಋಷಿಗಳಿಂದ ಪೂಜಿಸಲ್ಪಟ್ಟು ಸನ್ಮಾನಿತಳಾದಳು.

ಗಯರಾಜನು ಪುರಾಣದ ಅತ್ಯುನ್ನತ ಧರ್ಮಿಷ್ಟ ರಾಜರಲ್ಲಿ ಓರ್ವ ಗಯದೇಶದಲ್ಲಿ ಒಂದು ಯಜ್ಞವನ್ನು ಕಠೋರ ವ್ರತ ನಿಷ್ಠನಾಗಿ, ಮಹರ್ಷಿಗಳ ಮಹಾಮಂತ್ರಗಳಿಂದ ಮಾಡಿಸುತ್ತಿದ್ದನು. ಅಲ್ಲೂ ಸರಸ್ವತಿಯನ್ನು ಭಕ್ತಿಪೂರ್ವಕ ಮಂತ್ರಗಳಿಂದ ಆಹ್ವಾನಿಸಿದಾಗ ಯಜ್ಞದ ಪೂರ್ಣಾಹುತಿ ಸಮಯದಲ್ಲಿ ಆಹೂತೆಯಾಗಿ ಬಂದ ಸರಸ್ವತಿ ವಿಶಾಲ ಎಂದು ಪ್ರಸಿದ್ಧಳಾದಳು.

ಒಮ್ಮೆ ಉದ್ದಾಲಕ ಎಂಬ ಮಹರ್ಷಿ ತಾನು ಮಾಡುತ್ತಿದ್ದ ದಿವ್ಯ ಯಜ್ಞಕಾಲದಲ್ಲಿ ಪರಮ ಪವಿತ್ರೆಯಾದ ಸರಸ್ವತಿಯನ್ನು ಉಚಿತ ಕ್ರಮಗಳಿಂದ ಆಹ್ವಾನಿಸಿದಾಗ ಶೀಘ್ರಗಾಮಿನಿಯಾದ ಸರಸ್ವತಿ ಹಿಮಾಲಯದ ಪಾರ್ಶ್ವ ಭಾಗದಿಂದ ಹರಿದು ಉದ್ದಾಲಕ ಮುನಿಯ ಯಜ್ಞವಾಟಕ್ಕೆ ಬಂದಳು. ಸಂಪತ್ಸಮೃದ್ಧವಾದ ಉತ್ತರಕೋಸಲದಲ್ಲಿ ಎಲ್ಲ ಪ್ರದೇಶಗಳಿಂದ ಬಂದು ಸೇರಿದ್ದ ಮುನಿ ಮಹರ್ಷಿಗಳು ಧನ್ಯರಾಗಿ ಸ್ತುತಿಸಿ ವಂದಿಸಿದರು. ಮುನಿಗಳೆಲ್ಲರ ಮನದಿಷ್ಟದಂತೆ ಇಳಿದು ಹರಿದು ಬಂದ ಸರಸ್ವತಿ ಮನೋರಮಾ ಎಂದು ಪ್ರಖ್ಯಾತಳಾದಳು.

ದಕ್ಷ ಪ್ರಜಾಪತಿ ಗಂಗಾದ್ವಾರದಲ್ಲಿ ಯಾಗ ಮಾಡುತ್ತಿದ್ದಾಗ ಆತನ ಆಹ್ವಾನದಂತೆ ಹರಿದು ಬಂದ ಸರಸ್ವತಿಯು ಸುರೇಣು ಎಂಬ ನಾಮಧೇಯದಿಂದ ವಂದಿಸಲ್ಪಟ್ಟಳು. ಮಹಾತ್ಮರೂ ಬ್ರಹ್ಮರ್ಷಿಗಳೂ ಆದ ವಸಿಷ್ಠರು ಕುರುಕ್ಷೇತ್ರದಲ್ಲಿ ಯಜ್ಞ ಮಾಡುತ್ತಿದ್ದಾಗ ದಿವ್ಯಜಲಳಾದ ಸರಸ್ವತಿಯನ್ನು ಸ್ಮರಿಸಿ ಪೂಜಿಸಿ ಆಹ್ವಾನಿಸಿದಾಗ ಅಲ್ಲಿಗೂ ಆಗಮಿಸಿದ ಭಕ್ತವತ್ಸಲೆ ಸರಸ್ವತಿ ಓಘವತಿ ಎಂದು ಪ್ರಸಿದ್ಧಳಾದಳು. ಪಿತಾಮಹ ಬ್ರಹ್ಮದೇವ ಪುನಃ ಹಿಮವತ್ಪರ್ವತದಲ್ಲಿ ಯಜ್ಞನಿರತನಾಗಿ ಸರಸ್ವತಿಯನ್ನು ಮಂತ್ರಪೂರಿತವಾಗಿ ಪ್ರಾರ್ಥಿಸಿದಾಗ ಅಲ್ಲಿಗೆ ವಿಮಲೋದಾ ಎಂಬ ಹೆಸರಿನಿಂದ ಬಂದು ಅವರನ್ನು ಕೃತಕೃತ್ಯರನ್ನಾಗಿಸಿದಳು.

ಹೀಗೆ ಏಳು ಕಡೆ ಧರ್ಮಕಾರ್ಯಕ್ಕೆ ಸಹಾಯಕಳಾಗಿ ಬಂದು ಸಂಪನ್ನತೆಗೆ ಪೂರಕಳಾದ ಸಪ್ತ ಸರಸ್ವತಿಯರು ಹರಿಯುತ್ತಾ ಏಕೀಭೂತರಾಗಿ ಒಂದು ಕಡೆ ಸೇರಿಕೊಂಡರು. ಆ ಪುಣ್ಯ ತೀರ್ಥ ಕ್ಷೇತ್ರವೇ ಸಪ್ತ ಸಾರಸ್ವತ ತೀರ್ಥ ಕ್ಷೇತ್ರ. ಸರ್ವ ಪಾಪ ನಾಶಕವೂ, ಮನುಷ್ಯರಿಗೆ ಮಹಾಯೋಗಪ್ರದ ಕ್ಷೇತ್ರವೂ ಆಗಿರುವ ಈ ತೀರ್ಥ ಪುಣ್ಯ ವಿಶೇಷ ಸಂಪನ್ನರಿಗೆ ಮಾತ್ರ ಪ್ರಾಪ್ತವಾಗುತ್ತದೆ ಎಂಬುವುದು ಐತಿಹ್ಯ. ಬಲರಾಮನು ಈ ಎಲ್ಲಾ ತೀರ್ಥ ಕ್ಷೇತ್ರ ಸಂದರ್ಶನಗೈದು ಯಥಾ ಕ್ರಮಗಳನ್ನು ಅನುಸರಿಸಿ ಆರಾಧನೆಗಳನ್ನು ಗೈದು ಯಾತ್ರೆ ಮುಂದುವರಿಸಿದನು.

ಈ ಸಪ್ತ ಸಾರಸ್ವತ ತೀರ್ಥ ಕ್ಷೇತ್ರದಲ್ಲಿ ಅನುದಿನ ಸ್ನಾನ ಮಾಡುತ್ತಾ, ಕೌಮಾರಾವಸ್ಥೆಯಿಂದಲೆ ಬ್ರಹ್ಮಚರ್ಯ ವ್ರತ ಪಾಲಿಸುತ್ತಿದ್ದ ಮಂಕಣಕ ಎಂಬ ಮುನಿಯೊಬ್ಬರಿದ್ದರು. ಅವರ ಜೀವನದಲ್ಲೊಂದು ಮಹಾಲೀಲಾ ಪ್ರಸಂಗ ನಡೆದಿತ್ತು.

ಮುಂದುವರಿಯುವುದು…

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page