ಭಾಗ – 402
ಭರತೇಶ ಶೆಟ್ಟಿ,ಎಕ್ಕಾರ್

ಸಂಚಿಕೆ ೪೦೨ ಮಹಾಭಾರತ
ಇನ್ನೇನು ಯುದ್ಧಾರಂಭವಾಗಲಿದೆ ಎನ್ನುವಷ್ಟರಲ್ಲಿ ಕರ್ಣ “ಶಲ್ಯ ಭೂಪತಿಗಳೆ, ಇಂದಿನ ದಿನ ನಾನು ಧನಂಜಯ, ಭೀಮ, ನಕುಲ ಸಹದೇವ ಸಹಿತ ಯುಧಿಷ್ಟಿರನನ್ನೂ ಸಂಹಾರ ಮಾಡಲು ಸಾಧ್ಯವಾಗುವಂತೆ ಸಾರಥ್ಯ ನಿರ್ವಹಿಸಬೇಕು. ಆ ಅರ್ಜುನ ಆತನೊಬ್ಬನೆ ಶ್ರೇಷ್ಟ ಧನುರ್ಧರ ಎಂದು ತಿಳಿದಿದ್ದಾನೆ. ಇಂದು ಆತ ನನ್ನೆದುರು ತೃಣ ಸಮಾನನೆಂದು ಅರ್ಥೈಸಿಕೊಳ್ಳುವ ದಿನವಾಗಲಿದೆ. ಹದಿನೇಳನೆಯ ಈ ದಿನ ಕೌರವನ ವಿಜಯದ ಆಸೆ ಸಾಕ್ಷಾತ್ಕಾರಗೊಳ್ಳಲಿದೆ. ನಿಮ್ಮ ಸಾರಥ್ಯದ ಜೊತೆ ನನ್ನ ಧನುರ್ಬಲ ಪಾಂಡವರಿಗೆ ಕಗ್ಗಂಟಾಗಿ ಕರ್ಣನ ನಿಜ ಪೌರುಷವನ್ನು ಕಣ್ಣಾರೆ ಕಾಣುವಂತಾಗಲಿದೆ. ಈ ತನಕ ಮೆರೆದಾಡಿದ ಅವರ ಪರಾಕ್ರಮ ನನ್ನೆದುರು ನಿಷ್ಪ್ರಯೋಜಕವಾಗಿ ಸೋಲುಣಿಸಲಿದೆ” ಎಂದನು.
ಕರ್ಣನದ್ದು ವೀರಾವೇಶದ ನುಡಿ ಆಗಿದ್ದರೂ ತನ್ನನ್ನು ತಾನು ಹೊಗಳಿಕೊಂಡಾಗ ಶಲ್ಯನಿಗೆ ಅಸಹ್ಯವೆಣಿಸಿತು. “ಹೇ ಕರ್ಣಾ! ಎದುರಾಳಿಯನ್ನು ಅಲಕ್ಷಿಸುವುದು ಕ್ಷತ್ರಿಯನಿಗೆ ದೋಷ. ಅಂತಹದ್ದರಲ್ಲಿ ಅರ್ಜುನಂತಹ ಮಹಾನ್ ಧನುರ್ಧರ, ಸರ್ವ ಶಸ್ತ್ರಾಸ್ತ್ರ ಸಂಪನ್ನನನ್ನು ಗೆಲ್ಲುವುದೆಂದರೆ ಅಸಾಧ್ಯವಾದ ವಿಚಾರ. ಅರಿತೊ, ಅರಿಯದೆಯೋ ನೀನಾಡುತ್ತಿರುವ ಮಾತುಗಳು ಕೇವಲ ಭ್ರಮೆಯಾಗಿ ಹೋಗದಿರಲಿ. ಮೊದಲು ನಮ್ಮ ಗುರಿ ಅವರಿಂದ ನಮಗೆ ಸೋಲಾಗದಂತೆ, ಅವಕಾಶ ಬಳಸಿ ನಾವು ಗೆಲ್ಲುವುದನ್ನು ನೋಡಿಕೊಳ್ಳುವುದರಲ್ಲಿ ವ್ಯಸ್ಥವಾಗಿರಲಿ. ಕಿಂಚಿತ್ ಎಚ್ಚರ ತಪ್ಪಿದರೂ, ಅರೆಕ್ಷಣದ ಪ್ರಮಾದ ಆಗಿ ಹೋದರೂ, ಪರಿಣಾಮ ಭೀಕರವಾಗಿ ಹೋದೀತು. ಹಾಗಾಗಿ ಎಲ್ಲೂ ಎಡವದೆ, ವಿವೇಚನೆ ಕಳಕೊಳ್ಳದೆ, ಭ್ರಾಂತಿಗೊಳಗಾಗದೆ, ಏಕಾಗ್ರತೆಯ ಯುದ್ಧ ನಿನ್ನಿಂದಾಗಬೇಕು. ಯುದ್ಧನಿರತನಾಗಿರುವಾಗ ಅರೆಕ್ಷಣವೂ ನನ್ನ ಮಾತು ಮೀರದಂತೆ ಜಾಗೃತೆ ವಹಿಸಬೇಕು. ಯಾಕೆಂದರೆ ನಿನ್ನ ಎದುರಾಳಿಗಳಾದ ಕೃಷ್ಣಾರ್ಜುನರ ಯುದ್ದ ಪರಿಕ್ರಮದ ಆಳ ಅಂತರವನ್ನು ನಾನು ಚೆನ್ನಾಗಿ ಅರಿತವನಿದ್ದೇನೆ, ಆ ಆಧಾರದಲ್ಲಿ ನಿನ್ನನ್ನು ಜಾಗೃತಗೊಳಿಸುತ್ತಿದ್ದೇನೆ” ಎಂದು ನುಡಿದು ರಥವನ್ನು ಯೋಜಿತ ವ್ಯೂಹ ಸ್ಥಾನದಲ್ಲಿ ಸ್ಥಿತಗೊಳಿಸಿದನು.
ಶಲ್ಯನ ಮಾತುಗಳನ್ನು ಆಲಿಸಿದ ಕರ್ಣನಿಗೇಕೋ ಸರಿ ಕಾಣಲಿಲ್ಲ. “ಮಾದ್ರೇಶ! ನೀವು ಸಮರ ವಿಶಾರದರು ಹೌದು. ಮಹಾತ್ಮರೂ, ಅತಿ ಅನುಭವಿಯೂ ಹೌದು. ಆದರೆ ಈ ರೀತಿ ಎದುರಾಳಿಯನ್ನು ವೈಭವೀಕರಿಸುವುದು ಉಚಿತವಲ್ಲ. ನನ್ನ ಬಗ್ಗೆ ಸ್ಪಷ್ಟತೆಗಾಗಿ ಮತ್ತು ನಿಮ್ಮ ತಿಳುವಳಿಕೆಗಾಗಿ ಒಂದು ಸತ್ಯವನ್ನು ಹೇಳುತ್ತೇನೆ ಈಗಾಗಲೆ ವಿಷ್ಣು ಸದೃಶ ಆಚಾರ್ಯ ಭೀಷ್ಮ ಮತ್ತು ಮಹೇಂದ್ರ ಸಮಾನ ವೀರರಾದ ಗುರು ದ್ರೋಣರು ಕುರುಕ್ಷೇತ್ರದಲ್ಲಿ ಬಿದ್ದಾಗಿದೆ. ಆದರೆ ನಾನು ಈ ಘಟನೆಗಳಿಂದ ವಿಚಲಿತನಾಗಿಲ್ಲ. ಕಾರಣ ನನಗೆ ನಾನೇನೆಂದು ತಿಳಿದಿದೆ. ಕೃಷ್ಣ ಹೇಗೂ ಪಾರ್ಥನ ರಕ್ಷಣೆಗಿದ್ದಾನೆ. ಜೊತೆಗೆ ಆ ಇಂದ್ರ ಸಹಿತ ಅಷ್ಟ ದಿಕ್ಪಾಲಕರೂ ಸೇರಿ ಬಂದರೂ ಎಲ್ಲರನ್ನೂ ದೆಸೆಗೆಡಿಸದೆ ಬಿಡಲಾರೆ. ಉತ್ಕೃಷ್ಟವಾದ ಧನುರ್ವೇದ, ಗುರು ಭಾರ್ಗವರಿಂದ ಪಡೆದ ಸಮರ ಶಿಕ್ಷಣ, ಅಪ್ರಮತ್ತತೆ, ಧೈರ್ಯ, ಮಂತ್ರಾಸ್ತ್ರಗಳ ಜೊತೆಯಲ್ಲಿ ಜೀವನದಲ್ಲಿ ಗೈದಿರುವ ದಾನ ಧರ್ಮದ ಪುಣ್ಯಾನುಗ್ರಹ ಇವೆಲ್ಲವೂ ನನ್ನ ಪಾಲಿನ ಬಲಗಳಾಗಿವೆ. ಜೊತೆಗೆ ನಿಮ್ಮಂತಹ ಅದ್ವಿತೀಯ ಸಾರಥಿ ರಥ ನಡೆಸುತ್ತಿರಬೇಕಾದರೆ ನಿರಾಳನಾಗಿ ನಾನು ಯುದ್ಧ ಮಾಡಬಹುದು. ಆ ಅರ್ಜುನ ಇಂದು ನನ್ನಿಂದ ವಧಿಸಲ್ಪಡುತ್ತಾನೆ ಎಂಬುವುದು ನಿಸ್ಸಂದೇಹವಾಗಿ ಶತಸಿದ್ಧ ವಿಚಾರ. ಹಾಗೂ ಏನಾದರೂ ವೈಪರೀತ್ಯ ನಡೆದರೆ, ಆಗಲೂ ನನ್ನ ಮನಸ್ಥಿತಿ ಸ್ಥಿರವಾಗಿರಲಿದೆ. ಎಂತಹ ಮಹಾನ್ ವಿದ್ವಾಂಸ, ಅಥವಾ ಶತದಡ್ಡನೇ ಇರಲಿ, ಇಬ್ಬರಿಗೂ ಮರಣ ಎಂಬುವುದು ತಪ್ಪಿಸಿಕೊಳ್ಳಲಾಗದ ಸತ್ಯ. ಈ ಸಿದ್ಧಾಂತವನ್ನು ತಿಳಿದು ಸಿದ್ಧನಾಗಿಯೇ ಬಂದಿದ್ದೇನೆ” ಎಂದನು.
ಆಗ ಮತ್ತಷ್ಟು ಕೆರಳಿದ ಶಲ್ಯ “ಕರ್ಣಾ! ನೀನು ಅನಗತ್ಯ ವಿಲಾಪದಲ್ಲಿ ನಿರತನಾಗಿರುವೆ. ಏನು ಮಾಡ ಬಯಸಿರುವೆಯೋ ಅದನ್ನು ಮಾಡಿ ತೋರಿಸು. ಅನಗತ್ಯ ಹರಟೆಯಿಂದ ವಿರಕ್ತನಾಗು. ನಿನ್ನ ಪರಾಕ್ರಮದ ಬಗ್ಗೆ ಭ್ರಮೆಗೊಳಗಾಗಿರುವೆ. ನೀನು ಅತಿರಭಸದ ವಿಕ್ರಮಿಯೆಂಬುವುದು ನಿಜ. ಉತ್ತಮ ಪರಾಕ್ರಮಿಯೂ ಹೌದು. ಆದರೆ ಅರ್ಜುನನನ್ನು ಮೀರಿಸುವಷ್ಟಲ್ಲ. ವ್ಯರ್ಥ ಪ್ರಲಾಪ ಇಲ್ಲಿಗೆ ನಿಲ್ಲಿಸು, ಯುದ್ಧಾರಂಭಕ್ಕೆ ಮೊದಲು ನಿನ್ನ ಮರಣದ ವಿಚಾರವಾಗಿ ಪ್ರಸ್ತಾಪಿಸುವುದು ಅಶುಭ ಸೂಚಕ. ಮನಸ್ಸನ್ನು ಮೊದಲು ನಿಯಂತ್ರಿಸು. ನಿನ್ನ ಬಗ್ಗೆ ನೀನು ಅತಿಯಾದ ಭರವಸೆಗಳನ್ನು ಇಟ್ಟುಕೊಂಡರೆ ಅದು ಕೇವಲ ಭ್ರಮೆಯಾಗುತ್ತದೆ. ವಾಸ್ತವ ಏನಿದೆಯೊ ಅದನ್ನು ಸುಸ್ಪಷ್ಟವಾಗಿ ತಿಳಿದು, ನಿನ್ನದ್ದಾದ ಸಾಹಸವನ್ನು ಪ್ರದರ್ಶಿಸು” ಎಂದನು.
ಕೌರವ ಪಾಂಡವ ಸೇನೆಗಳು ಪರಸ್ಪರ ಎದುರಾದೊಡನೆ ರಣೋತ್ಸಾಹ ಉತ್ತೇಜಿಸುವ ಜಯಘೋಷ, ರಣಭೇರಿ, ವಾದ್ಯ ನಿನಾದಗಳು, ಶಂಖ ಧ್ವನಿಗಳು ಮೊಳಗಿದವು. ಅಷ್ಟಾಗುತ್ತಲೆ ಒಮ್ಮೆಲೆ ಪ್ರಕೃತಿ ವಿಕೋಪಗೊಂಡಿತು, ಕಾರ್ಮೋಡ ಕವಿದು, ಸುಂಟರಗಾಳಿಯೆದ್ದಿತು, ಎಲ್ಲೆಡೆ ಸಿಡಿಲು ಮಿಂಚುಗಳ ಆರ್ಭಟ. ವಿಶೇಷ ಎಂಬಂತೆ ಎಂದೆಂದೂ ಕಂಡಿರದ ವಿಚಿತ್ರವೊಂದು ನಡೆಯಿತು. ಸುರಿಯುತ್ತಿರುವ ಮಳೆಯ ಜೊತೆ ಮೂಳೆ ಬುರುಡೆಗಳೂ ಧರೆಗುರುಳಿದವು. ಪ್ರಾಜ್ಞರು ಇದು ವಿನಾಶದ ಸೂಚನೆ ಎಂದು ಪರಿಭಾಷಿಗಳಾಗಿ ಅರ್ಥೈಸಿ ಹೇಳತೊಡಗಿದರು.
ಪಾಂಡವ ಪಕ್ಷದಲ್ಲಿದ್ದವರು ಇದು ಕೌರವರ ಸರ್ವನಾಶ ಸೂಚಕ ಎಂದು ಭಾವಿಸಿದರೆ, ಕೌರವ ಪಕ್ಷ ತದ್ವಿರುದ್ದವಾಗಿ ಇಂದು ಪಾಂಡವ ಪಕ್ಷದ ಮಹೋನ್ನತರು ಕರ್ಣ ಸೇನಾಧಿಪತ್ಯದಲ್ಲಿ ಉದುರುತ್ತಿರುವ ಉಲ್ಕೆಗಳಂತೆ ಪತನಗೊಳ್ಳಲಿದ್ದಾರೆ ಎಂದು ಯೋಚಿಸಿ ಮತ್ತಷ್ಟು ಉಲ್ಲಸಿತರಾದರು.
ನೋಡ ನೋಡುತ್ತಿದ್ದಂತೆಯೆ ಯುದ್ದಾರಂಭವಾಯಿತು. ಕರ್ಣನೊ ತಾನಂದುಕೊಂಡಂತೆ ಪ್ರಳಯಕಾಲದ ರುದ್ರನಂತೆ ಪ್ರಜ್ವಲಿಸುತ್ತಿದ್ದಾನೆ. ಅವ್ಯಾಹತವಾಗಿ ಪಾಂಡವ ಸೇನೆಯ ನಾಶಗೈಯುತ್ತಿದ್ದಾನೆ. ಪಾಂಡವರಿಗಾಗಲಿ, ದೃಷ್ಟದ್ಯುಮ್ನ ಸಾತ್ಯಕಿಗಳಿಗಾಗಲಿ ಕರ್ಣನನ್ನು ತಡೆಯಲು ಸಾಧ್ಯವಾಗುತ್ತಿಲ್ಲ. ಎಲ್ಲೆಡೆ ಸಾರ್ವತ್ರಿಕವಾಗಿ ಸವರುತ್ತಾ, ಮಹಾರುದ್ರ ಲಯಕಾರ್ಯ ನಿರತನಾಗಿರುವಂತೆ ಮುಂದೊತ್ತಿ ಸಾಗತೊಡಗಿದ್ದಾನೆ ಕರ್ಣ. ಇಂದಿನ ಕರ್ಣನ ಯುದ್ದದ ಓಗ ವೇಗಗಳು ವಿಭಿನ್ನ. ಅತಿ ಶೀಘ್ರಾತಿ ಶೀಘ್ರವಾಗಿ ಶರ ಪ್ರಯೋಗಿಸುತ್ತಾ ಬಾಣಗಳ ಮಳೆಯಾಗುತ್ತಿದೆ. ಹೀಗೆ ಪಾಂಡವ ವ್ಯೂಹವನ್ನು ಭೇದಿಸಿ ಒಂದಾವರ್ತಿ ಪ್ರದಕ್ಷಿಣೆಗೈದರೂ ಕರ್ಣನಿಗೆ ಕೃಷ್ಣಾರ್ಜುನರು ಸಿಗಲಿಲ್ಲ.
ಹೀಗಾಗಲು ಮದವೇರಿದ ಸಲಗದಂತಾಗಿದ್ದ ಕರ್ಣ “ಹೇ ಸೈನಿಕರೆ, ರಥಿಕರೆ! ನೀವ್ಯಾರಾದರೂ ಆ ಕೃಷ್ಣಾರ್ಜುನರನ್ನು ಕಂಡಿರಾ? ಈಗ ನನಗೆ ಆ ಪಾರ್ಥನ ರಥವಿರುವ ಸ್ಥಳ ತೋರಿದರೆ ಅಂತಹವರಿಗೆ ಕೇಳಿದಷ್ಟು ಧನವನ್ನು ನೀಡುತ್ತೇನೆ. ಮಾತ್ರವಲ್ಲ ನನ್ನ ತೃಪ್ತಿಗಾಗಿ ಹೆಚ್ಚುವರಿ ಪಾರಿತೋಷಕ ರೂಪದಲ್ಲಿ ರತ್ನ ವೈಢೂರ್ಯಗಳು ತುಂಬಿದ ಬಂಡಿಯನ್ನಿತ್ತು ಸತ್ಕರಿಸುತ್ತೇನೆ. ಎಲ್ಲಿ ಆ ಕೃಷ್ಣಾರ್ಜುನರು? ಬೇಗ ತಿಳಿದು ನನಗೆ ಸುದ್ದಿ ರವಾನಿಸಿ” ಎಂದು ಬಹುಮಾನ ಘೋಷಿಸುತ್ತಾ ಕೇಳತೊಡಗಿದನು.
ಮುಂದುವರಿಯುವುದು…



















