20.4 C
Udupi
Monday, February 2, 2026
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ 397

ಭರತೇಶ್ ಶೆಟ್ಟಿ , ಎಕ್ಕಾರ್

ಸಂಚಿಕೆ ೩೯೭ ಮಹಾಭಾರತ

ಒಂದೆಡೆ ಕರ್ಣ ಕಳಾಹೀನನಾಗಿ ನಕುಲನ ಎದುರು ಹೆಣಗಾಡುತ್ತಾ ಕೈ ಸೋಲುತ್ತಿದ್ದಾನೆ. ಆದರೆ ರಂಗೇರಿರುವುದು ಭೀಮ ಅಶ್ವತ್ಥಾಮರ ಯುದ್ದ. ಪರಸ್ಪರ ತೂಗುಯ್ಯಾಲೆಯಂತೆ ಒಮ್ಮೆ ಅಶ್ವತ್ಥಾಮ ಬಿದ್ದು ಮತ್ತೆ ಚೇತರಿಸಿಕೊಂಡರೆ, ಭೀಮಸೇನನ ರುದ್ರ ಭಯಂಕರ ಸಮರ. ಹೀಗೆ ಬಲೋನ್ಮತ್ತರಾಗಿ ವೀರಶ್ರೇಷ್ಟರು, ಮಹಾರಥರೂ ಆದ ಭೀಮಾಶ್ವತ್ಥಾಮರು ಉತ್ತಮ ರಥಾರೂಢರಾಗಿ ಒಬ್ಬರನ್ನೊಬ್ಬರು ಆಕ್ರಮಿಸಿಕೊಳ್ಳುತ್ತಿದ್ದಾರೆ. ಭಯಂಕರ ರೂಪಿಗಳಾಗಿರುವ ಇವರು ರಣಾಂಗಣದಲ್ಲಿ ಪರಮೇಶ್ವರನೇ ಇಬ್ಭಾಗವಾಗಿ ಎರಡು ರುದ್ರರು ಸಮರ ನಿರತರಾದಂತೆ ಕಾಣಿಸುತ್ತಿದ್ದಾರೆ. ಇದಕ್ಕೆ ಪೂರಕವೋ ಎಂಬಂತೆ ಇಬ್ಬರೂ ರುದ್ರಾಂಶ ಸಂಭೂತರೂ ಹೌದು. ಯುದ್ದ ಪ್ರೇಕ್ಷಕರಾಗಿದ್ದ ದೇವತೆಗಳು, ಸಿದ್ದ- ಚಾರಣರು, ಸಾಧ್ಯರು, ಗಂಧರ್ವರು, ಮಹರ್ಷಿಗಳು ಸೇರಿ ಶ್ಲಾಘಿಸುತ್ತಿದ್ದಾರೆ “ಇಂದಿನ ಮಾರುತೇಯ ಮತ್ತು ದ್ರೌಣಿಯ ಯುದ್ದ ಭಾರತ ಯುದ್ದ ಸರಣಿಯ ಉತ್ಕೃಷ್ಟ ಯುದ್ದಗಳಲ್ಲೊಂದು ಎನ್ನಬಹುದು. ಅಶ್ವತ್ಥಾಮನು ಗುರುದ್ರೋಣರಿಂದ ಸಕಲ ಸಮರ ಕಲೆಗಳನ್ನೂ, ಶಸ್ತ್ರ ಶಾಸ್ತ್ರಗಳನ್ನೂ ಬಲ್ಲವನು. ಅಂತಹ ಸತ್ಸಮರ್ಥನೆದುರು ಭೀಮ ತೋರುತ್ತಿರುವ ಸಾಹಸ ಅತಿಶಯವಾದದ್ದು”. ಭೀಮನ ಔನ್ನತ್ಯ ಗದಾಯುದ್ದದಲ್ಲಾದರೂ, ತಾನು ಗುರು ಮುಖೇನ ಕಲಿತಿರುವ ಧನುರ್ವೇದ ವಿದ್ಯೆ ಇಂದು ಸರ್ವ ರೀತಿಯಲ್ಲೂ ಅನಾವರಣಗೊಂಡಿದೆ. ಮೇಘರೂಪರಾಗಿರುವ ಇವರಿಬ್ಬರಿಂದ ಪ್ರಯೋಕ್ತ ಶಸ್ತ್ರಗಳ ಸಂಘರ್ಷಣೆಯಿಂದ ಮಿಂಚುಗಳು ಉತ್ಪನ್ನವಾಗಿ ಕಣ್ಣು ಕೋರೈಸುತ್ತಿದೆ. ಹೊತ್ತು ಮೀರುತ್ತಿರುವಂತೆ ಸೂರ್ಯ ತನ್ನ ಪ್ರಖರತೆಯಲ್ಲಿ ಶಾಂತನಾಗುತ್ತಿದ್ದಾನೆ ಆದರೆ ಇವರೀರ್ವರು ತಾಪ ಕೋಪಗಳಲ್ಲಿ ಉಗ್ರರೂ ವ್ಯಗ್ರರೂ ಆಗುತ್ತಾ ಪರಸ್ಪರರ ಮೇಲೆ ಎರಗುತ್ತಿದ್ದಾರೆ. ನೋಡುತ್ತಿದ್ದಂತೆ ಅಶ್ವತ್ಥಾಮ ಭೀಮನ ಸಾರಥಿಯನ್ನು ಗಾಯಗೊಳಿಸಿದನು. ಪ್ರತಿಯಾಗಿ ಭೀಮನೂ ಅರೆಕ್ಷಣದಲ್ಲಿ ಅಶ್ವತ್ಥಾಮನ ಸಾರಥಿಯ ಎದೆಗೆ ಗುರಿಯಾಗಿ ಬಾಣ ಪ್ರಯೋಗಿಸಿದನು. ಸಾರಥಿ ಬಾಣದ ಗುರಿಯರಿತು ಬಗ್ಗಿ ತನ್ನ ಎದೆಗೆ ನಾಟಬೇಕಿದ್ದ ನಾರಾಚವನ್ನು ಭುಜಕ್ಕೆ ಚುಚ್ಚುವಂತೆ ಬದಲಿಸಿ ಬದುಕಿದನು. ಇಬ್ಬರೂ ದಿವ್ಯಾಸ್ತ್ರಗಳನ್ನು ಆವಾಹಿಸಿ ಪ್ರಯೋಗಿಸಿದ್ದಾರೆ. ಎದುರು ಬದುರಾಗಿ ಬಂದ ಶರಗಳು ಮಧ್ಯದಲ್ಲಿ ಕತ್ತರಿಸಲ್ಪಡದೆ ಅಶ್ವತ್ಥಾಮ ಹಾಗು ಭೀಮನ ಶರೀರ ಹೊಕ್ಕು ಇಬ್ಬರಿಗೂ ಭೀಕರವಾಗಿ ಪ್ರಹರಿಸಲ್ಪಟ್ಟವು. ಆ ಕ್ಷಣದಲ್ಲಿ ಚಾತುರ್ಯ ಮೆರೆದ ಅಶ್ವತ್ಥಾಮನ ಸಾರಥಿ ರಥವನ್ನು ತಿರುಗಿಸಿ ಭೀಮನಿಂದ ತಪ್ಪಿಸಿ ಬೇರೆಡೆಗೊಯ್ದನು.

ಭೀಮನು ಒಮ್ಮೆಗೆ ಕುಸಿದು ರಥ ಪೀಠಕ್ಕೆ ಬಿದ್ದವನು ಚೇತರಿಸಲು ತುಸು ಸಮಯ ಬೇಕಾಯಿತು. ಆಗ ಅಶ್ವತ್ಥಾಮನ ರಥ ಬೇರೆಡೆ ಸಾಗಿಯಾಗಿದೆ. ಅತ್ತ ಅರ್ಜುನ ಅಳಿದುಳಿದ ಸಂಶಪ್ತಕ ವೀರರ ಜೊತೆ ಘನ ಘೋರ ಸಂಗ್ರಾಮ ನಿರತನಾಗಿದ್ದು, ಕೈಸಾಗದೆ ಹಿಮ್ಮೆಟ್ಟಿಸಲ್ಪಟ್ಟು ಹಿಂಜರಿದ ಸಂಶಪ್ತಕರನ್ನು ಬಿಟ್ಟು ಹಿಂದಿರುಗಿ ಬರುತ್ತಿದ್ದಾನೆ. ಸಂಶಪ್ತಕರು ಈಗಲೂ ಕ್ಷಯಗೊಂಡಿದ್ದರೂ ಪೂರ್ಣ ನಾಶವಾಗದೆ, ಹೇಗೋ ಬದುಕುಳಿದರು. ಹೀಗೆ ಅರ್ಜುನ ತಿರುಗಿ ಮತ್ತೆ ಬರುತ್ತಿರುವಾಗ ಭೀಮನಿಂದ ವಿಮುಕ್ತನಾಗಿ ಹೊರಬಂದಿದ್ದ ಅಶ್ವತ್ಥಾಮ ಎದುರಾದನು. ಬಾಣಲೆಯಿಂದ ಬೆಂಕಿಗೆ ಬಿದ್ದಂತಾಗಿದೆ ಗುರುಪುತ್ರನ ಸ್ಥಿತಿ. ಆತ ಚೇತರಿಸಿಕೊಳ್ಳುತ್ತಿರುವ ಈ ಹೊತ್ತು, ಗಾಯಗೊಂಡಿರುವ ಕೇಸರಿಯಂತೆ ಕೆರಳಿ ಕೆಂಡಾಮಂಡಲವಾಗಿದ್ದಾನೆ. ಅರ್ಜುನನೆದುರು ಕಾದಾಡ ತೊಡಗಿ ಪರಾಕ್ರಮ ತೋರುತ್ತಿರಬೇಕಾದರೆ, ಧನುರ್ಭಂಗವಾಯಿತು. ಕ್ರೋಧಾವೇಶಕ್ಕೊಳಗಾದ ಅಶ್ವತ್ಥಾಮ ಘೋರತರವಾದ ಹೊಸ ಧನುಸ್ಸನ್ನೆತ್ತಿ ಕಣ್ಣ ರೆಪ್ಪೆ ಮಿಟುಕಿಸುವುದರೊಳಗಾಗಿ ಲಕ್ಷೋಪಲಕ್ಷ ಬಾಣಗಳಿಂದ ಪಾರ್ಥನನ್ನು ಮುತ್ತಿದನು. ಪರಿಣಾಮ ಒಂದೊಮ್ಮೆಗೆ ಕೃಷ್ಣಾರ್ಜುನರು ಗಾಯಗೊಂಡು ಶರ ಪಂಜರದಲ್ಲಿ ಬಂಧಿಗಳಾದರು. ಕೌರವ ಪಕ್ಷದ ಸೇನೆ ಮಾಧವಾರ್ಜುನರು ಸತ್ತರೆಂದು ಭಾವಿಸಿದರು. ಹೀಗಾಗಲು ಬೆನ್ನು ಹಾಕಿ ಓಡುತ್ತಿದ್ದ ತ್ರಿಗರ್ತದ ಸಂಶಪ್ತಕ ವೀರರು ತಿರುಗಿ ಅರ್ಜುನನ್ನು ಆಕ್ರಮಿಸಲು ಮುಂದಾಗಿ ಬಂದರು. ದಿವ್ಯಾಸ್ತ್ರ ಹೂಡಿದ ಧನಂಜಯ ಜ್ವಾಲಾಮುಖಿ ಸ್ಪೋಟಿಸುವಂತೆ ಅಶ್ವತ್ಥಾಮನ ಅಂಬುಗಳ ಆವರಣವನ್ನು ಸಿಡಿಸಿ ಹಾರಿಸಿದನು. ಕ್ಷಣ ಮಾತ್ರದಲ್ಲಿ ದ್ರೌಣಿಯ ಶರಕೋಟೆ ಸೂರ್ಯನ ಬಿಸಿಲ ಜಳಕ್ಕೆ ಕರಗಿ ಜಲವಾಗಿ ಹರಿಯುವಂತೆ ತುಂಡು ತುಂಡಾಗಿ ಹಾರಿಹೋದವು. ಅಶ್ವ, ಸೂತ, ಗಜ, ರಥ ಪದಾತಿಯುಕ್ತರಾಗಿದ್ದ ಸಂಶಪ್ತಕ್ತರನ್ನು ಉಗ್ರವಾದ ಶರಗಳಿಂದ ಪ್ರಹರಿಸಿ ಗಾಯಗೊಳಿಸಿದನು. ತ್ರಿಗರ್ತರ ಮೇಲೆ ಮಂತ್ರಾಸ್ತ್ರ ಪ್ರಯೋಗಿಸಿ ಮೋಡಿ ಗೊಳಿಸಿದ ಪಾರ್ಥ, ಅವರೆಲ್ಲರಿಗೂ ತಮ್ಮೆಡೆ ಬಾಣಗಳು ಹಾರಿ ಬರುವಂತೆ ಭ್ರಮೆಯಾಗತೊಡಗಿತು. ತಮ್ಮೆಡೆ ಬರುತ್ತಿರುವ ನಿಜ ಬಾಣಗಳ್ಯಾವುದು ಎಂದು ಅರಿವಾಗದ ಸ್ಥಿತಿಯಲ್ಲಿ ಅವರಿದ್ದಾರೆ. ಅತಿ ವೇಗದಿಂದ ಬರುತ್ತಿರುವಂತೆ ಭಾಸವಾಗುವ ಶರಗಳ ಖಂಡನೆಯಲ್ಲಿ ನಿರತರಾಗಿ ಬಸವಳಿದು ಹೋಗುತ್ತಿದ್ದಾರೆ ತ್ರಿಗರ್ತರು.

ಶ್ರೀಕೃಷ್ಣ ಪರಮಾತ್ಮನ ಸಾರಥ್ಯದ ರಥ ಗಂಧರ್ವ ನಗರಿಯಂತೆ ವಿಶಾಲವೂ, ಸಕಲವಿಧವಾದ ಯುದ್ಧ ಸಾಮಾಗ್ರಿ ಭರಿತವಾಗಿಯೂ ಇದೆ. ಅಶ್ವತ್ಥಾಮನ ಮೇಲೆ ನಾನಾ ವಿಧ ಶಸ್ತ್ರಾಸ್ತ್ರ ಪ್ರಯೋಗಗಳಿಂದ ಕಂಗೆಡಿಸತೊಡಗಿದ್ದಾನೆ ಪಾರ್ಥ. ಅಶ್ವತ್ಥಾಮನೂ ಹಿಂಜರಿಯದೆ ತನ್ನ ಮನೆಗೆ ಬಹು ಪ್ರೀತ ಅತಿಥಿ ಬಂದಾಗ ತನ್ನಲ್ಲಿರುವ ಸುವಸ್ತುಗಳನ್ನೆಲ್ಲಾ ಆಯ್ದು ಸುರಿಸಿ ಸತ್ಕರಿಸುವಂತೆ ತನ್ನ ಸರ್ವ ಸಂಗ್ರಹಗಳನ್ನೂ ಪಾರ್ಥನೆದುರು ಪ್ರಯೋಗಿಸತೊಡಗಿದ್ದಾನೆ. ಶುಕ್ರ ಮತ್ತು ಬ್ರಹಸ್ಪತಿಗೆ ಸಮಾನರೆಂಬಂತೆ ಗೋಚರಿಸುತ್ತಿರುವ ಅಶ್ವತ್ಥಾಮಾರ್ಜುನರು ಪ್ರಯೋಗಿಸುತ್ತಿರುವ ದಿವ್ಯಾಸ್ತ್ರಗಳು ಆಕಾಶ ಮಂಡಲದಲ್ಲಿ ನಕ್ಷತ್ರಗಳಂತೆ ಪ್ರಜ್ವಲಿಸುತ್ತಾ, ವ್ಯೋಮದಲ್ಲಿ ಶುಕ್ರ – ಬ್ರಹಸ್ಪತಿಗಳಿಗೆ ಅಭಿಯೋಗ ಸಾಗುತ್ತಿದೆಯೊ ಎಂಬ ಭ್ರಮೆ ಸೃಷ್ಟಿಸಿತು.

ವಕ್ರಗತಿ – ಅತಿಚಾರಗತಿಯಿಂದ ಸಂಚರಿಸುವ ಎರಡು ಗ್ರಹಗಳಂತೆ ಅರ್ಜುನಾಶ್ವತ್ಥಾಮರು ಒಬ್ಬರನ್ನೊಬ್ಬರು ಪರಸ್ಪರ ಸಂತಾಪಗೊಳಿಸುತ್ತಿದ್ದಾರೆ. ಹೀಗೆ ಇವರೀರ್ವರು ಸಂಘರ್ಷಿಸುತ್ತಿರುವಾಗ ಬತ್ತಿಸಲು ಅಸಾಧ್ಯವಾದ ಸಂಶಪ್ತಕರ ಮಹಾಸಮುದ್ರದೋಪಾದಿಯ ಸೇನೆ ಮತ್ತೊಂದೆಡೆಯಿಂದ ಕೃಷ್ಣಾರ್ಜುನರನ್ನು ಆಕ್ರಮಿಸಿತು. ಪ್ರಳಯಕಾಲದ ಸೂರ್ಯನಂತೆ ಜ್ವಾಜಾಲ್ಯಮಾನನಾದ ಕಿರೀಟಿ ಅವರತ್ತ ಕ್ಷಣಾರ್ಧದೊಳಗೆ ಧನುವನ್ನು ತಿರುಗಿಸಿ ಅಕ್ಷಯಾಸ್ತ್ರ ಪ್ರಯೋಗಿಸಿ ಶರವರ್ಷಗೈದನು. ಸಂಶಪ್ತಕ ಸೇನೆಯ ರಥಿಗಳು, ಆನೆ, ಕುದುರೆಗಳು, ಕಾಳಾಲುಗಳು ಬಾಣಗಳ ಮಳೆಯಿಂದ ಪ್ರಹರಿಸಲ್ಪಟ್ಟು, ಕೆನ್ನೀರ ಸುರಿಮಳೆಗೆ ತೋಯ್ದವರಂತೆ ರಕ್ತಾಭಿಷಿಕ್ತರಾಗಿ ಎಲ್ಲರೂ ಕೆಂಪು ವಸನಧಾರಿಗಳಂತೆ ಕಾಣತೊಡಗಿದ್ದಾರೆ. ಈ ಮಧ್ಯೆ ಚುರುಕಾದ ಗುರುಪುತ್ರ ಅಶ್ವತ್ಥಾಮ ಹತ್ತು ಬಾಣಗಳನ್ನು ಏಕಕಾಲದಲ್ಲಿ ಒಂದೇ ಬಾಣದಂತೆ ಧನುಸ್ಸಿಗೆ ಹೂಡಿ ಐದು ಬಾಣಗಳು ವಾಸುದೇವನಿಗೂ, ಮತ್ತೈದು ಬಾಣಗಳು ಕೌಂತೇಯನಿಗೂ ನಾಟುವಂತೆ ಪ್ರಯೋಗಿಸಿದನು. ದ್ರೌಣಿಯ ಸಂಕಲ್ಪದಂತೆ ಮನೋವೇಗದಲ್ಲಿ ಸಾಗಿದ ದಶ ಶರಗಳಲ್ಲಿ ಐದು ಸಾರಥಿ ಕೃಷ್ಣನಿಗೂ, ಐದು ರಥಿಕ ಅರ್ಜುನನಿಗೂ ನಾಟಿ ತೀವ್ರವಾಗಿ ಗಾಯಗೊಳಿಸಿದವು.

ಈ ಘಟನೆ ನಡೆದಾಗ ಅಂಬರಪಥದಲ್ಲಿದ್ದು ಯುದ್ಧ ವೀಕ್ಷಣೆ ನಿರತರಾಗಿದ್ದ ಮಹಾತ್ಮರಾದ ದಿವ್ಯದೇಹಿಗಳು “ಹೋ! ಅಶ್ವತ್ಥಾಮನ ಅದ್ಬುತ ಸಾಹಸವೇ! ಕೃಷ್ಣಾರ್ಜುನರಿಬ್ಬರ ಶರೀರದಲ್ಲೆಲ್ಲಾ ಬಾಣಗಳನ್ನು ನೆಡುತೋಪಿನಲ್ಲಿ ಗಿಡ ನೆಟ್ಟಂತೆ ನೆಟ್ಟಿದ್ದಾನೆ. ಚಿಗುರಿದ ಸಸಿಗಳಂತೆ ಶರಗಳು ಅವರಿಬ್ಬರ ಶರೀರದಲ್ಲಿ ನಾಟಿ ನಿಂತಿವೆ.” ಎಂದು ಉದ್ಘಾರ ತೆಗೆದರು.

ಹೀಗಾಗಲು ಕೃಷ್ಣ “ಅರ್ಜುನಾ! ನೀನೇಕೆ ಇಂದು ಪ್ರಮಾದಗಳನ್ನೆಸಗುತ್ತಿರುವೆ? ಈ ಅಶ್ವತ್ಥಾಮ ವೀರ ಯೋಧನು ಹೌದು. ನೀನು ಈ ರೀತಿ ಅವಕಾಶ ನೀಡುತ್ತಾ ಹೋದರೆ, ಆತನಿಗೆ ಲಾಭವಾಗಿ ಮತ್ತಷ್ಟು ನಮ್ಮನ್ನು ಘಾಸಿಗೊಳಿಸುತ್ತಾನೆ. ಆತನ ಬಲವನ್ನು ಉಪೇಕ್ಷಿಸಿದರೆ ಆತ ಇನ್ನೂ ನಿಯಮ ಮೀರಿ ಅನೇಕ ಅಪರಾಧಗಳನ್ನು ಮಾಡಿ ಬಿಡುವನು. ಯಾವ ರೋಗವೂ ಅಪಾಯಕಾರಿಯಾಗಿರದು. ಆದರೆ ವ್ಯಾಧಿಯನ್ನು ಸೂಕ್ತ ಸಮಯದಲ್ಲಿ ಗುರುತಿಸಿ ಸೂಕ್ತ ಚಿಕಿತ್ಸೆ ನೀಡದಿದ್ದರೆ ಅದು ಉಲ್ಬಣಗೊಂಡು ಮಾರಣಾಂತಿಕವಾಗಿ ಬೆಳೆಯಬಲ್ಲುದು. ನಿನ್ನ ಉಪೇಕ್ಷೆ ಸಾಕು, ನನ್ನ ಅಪೇಕ್ಷೆಯಂತೆ ತ್ವರಿತ ಯುದ್ದಕ್ಕೆ ಕೈಹಾಕು” ಎಂದು ನಿರ್ದೇಶನ ನೀಡಿದನು.

ಮುಂದುವರಿಯುವುದು…

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page