28.6 C
Udupi
Saturday, January 3, 2026
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ 396

ಭರತೇಶ್ ಶೆಟ್ಟಿ, ಎಕ್ಕಾರ್

ಸಂಚಿಕೆ ೩೯೬ ಮಹಾಭಾರತ

ಹೀಗೆ ನಿರರ್ಗಳವಾಗಿ ಮಹಾಕಾವ್ಯದ ಕಥೆಯನ್ನು ಯಾಗ ಮುಖೇನ ಕೃತ ಸರ್ಪಹತ್ಯಾ ದೋಷ ನಿವಾರಣಾರ್ಥವಾಗಿ ಜನಮೇಜಯನಿಗೆ ಹೇಳುತ್ತಿದ್ದಾರೆ ವೈಶಂಪಾಯನರು. ಹದಿನೈದು ದಿನಗಳ ಮಹಾಭಾರತ ಯುದ್ದದ ವರ್ಣನೆಯನ್ನು ಮಾಡಿ ಈಗ ಕರ್ಣ ಸೇನಾಧಿಪತ್ಯದ ಹದಿನಾರನೆ ದಿನದ ಯುದ್ದ ಕಥನ ಮುಂದುವರಿಸತೊಡಗಿದ್ದಾರೆ. ಜನಮೇಜಯ ಶೃದ್ಧಾ ಭಕ್ತಿಯಿಂದ ಯಿಂದ ಕಥಾಶ್ರವಣ ಮಾಡುತ್ತಿದ್ದಾನೆ.

ಇತ್ತ ಹಸ್ತಿನಾವತಿಯಲ್ಲಿ ಧೃತರಾಷ್ಟ್ರನ ಸ್ಥಿತಿ ಹೇಳ ತೀರದು. ಇನ್ನೇನಿದ್ದರೂ ಪಾಂಡವರ ಜಯದ ಕ್ಷಣಗಣನೆಯಷ್ಟು ಮಾತ್ರ ಉಳಿದಿದೆ. ಈವರೆಗೆ ಇದ್ದ ಸಂಪೂರ್ಣ ಬಲದ ಸೇನೆ ಮಾಡಲಾಗದ್ದನ್ನು ಅಳಿದುಳಿದ ನಮ್ಮ ಸೇನೆ ಸಾಧಿಸೀತು ಎಂಬ ಭರವಸೆಯನ್ನು ಕಳಕೊಂಡು, “ನಾನಿನ್ನು ಬದುಕುಳಿಯುವುದಾದರು ಯಾತಕ್ಕೆ? ನನ್ನ ಮಕ್ಕಳ ಮರಣವಾರ್ತೆಯನ್ನು ಕೇಳಿ ಕೊರಗಿ ಕೊರಗಿ ಸಾಯುವುದಕ್ಕೋ?” ಎಂದು ನಿರ್ವೀರ್ಯನಾಗಿ ಪ್ರಶ್ನಿಸ ತೊಡಗಿದನು.

ಆಗ ಸಂಜಯ “ಮಹಾರಾಜಾ! ನಿನ್ನ ಈ ಪ್ರಶ್ನೆ ಬಹಳಷ್ಟು ವಿಮರ್ಷೆಗೆ ಮುಕ್ತವಾಗಿ ತೆರೆದುಕೊಂಡಿದೆ. ನೀನು ರಾಜನಾಗಿ ನಿನ್ನವರು ಯಾರಿದ್ದಾರೋ ಅವರಿಗೆಲ್ಲರಿಗೂ ಧಾತಾರನಾಗಿರುವೆ. ಈ ತನಕ ಸಾಗಿದ ರಣಭೀಕರತೆಯಲ್ಲಿ ಮೃತರಾದವರೆಲ್ಲರೂ ನಿನ್ನವರು. ಕೇವಲ ನಿನ್ನ ನೂರು ಮಂದಿ ಮಕ್ಕಳು ಮಾತ್ರ ನಿನ್ನ ಕಣ್ಣೀರಿಗೆ ಯೋಗ್ಯರಾದವರಲ್ಲ. ಈಗ ಕಣ್ಮುಂದೆ ಸ್ಪಷ್ಟವಾಗಿ ಗೋಚರಿಸುತ್ತಿರುವ ಸೋಲು ಭವಿಷ್ಯದಲ್ಲಿ ನಮ್ಮದಾಗಲಿದೆ ಎಂಬ ಕಲ್ಪನೆ, ಅಂದು ತಪ್ಪು ನಿರ್ಧಾರಗಳನ್ನು ಕೈಗೊಳ್ಳುವ ಸಮಯದಲ್ಲಿ ವಿಧವಿಧವಾಗಿ ಬಲ್ಲವರಿಂದ ಹೇಳಲ್ಪಟ್ಟಿತ್ತು. ಆ ಸಮಯ ಏನಾದರು ಈ ಬಗ್ಗೆ ವಿವೇಚಿಸಿ ಸೂಕ್ತ ನಿರ್ಣಯ ಕೈಗೊಂಡಿದ್ದರೆ ಇಂದಿನ ಸ್ಥಿತಿ ಒದಗುತ್ತಿರಲಿಲ್ಲ. ಈಗ ಆ ಬಗ್ಗೆ ಯೋಚಿಸುವ ಸಮಯವಲ್ಲ. ನಿನ್ನ ಪುತ್ರ ದುರ್ಯೋಧನನ ಸನ್ಮಿತ್ರ, ಬಹು ವಿಶ್ವಾಸ ಪಾತ್ರನಾದ ಕರ್ಣ ಸೇನಾಪತಿಯಾಗಿದ್ದಾನೆ. ಈ ಕ್ಷಣದ ತನಕ ಆಗಿ ಹೋದ ಆಚಾರ್ಯರಾದ ಭೀಷ್ಮ, ದ್ರೋಣರು ಪಾಂಡವರ ಬಗ್ಗೆ ಮೃದು ಧೋರಣೆ ಹೊಂದಿದ್ದರು ಎಂಬ ಆಕ್ಷೇಪವಿತ್ತು. ಆದರೆ ಕರ್ಣ ಪಾಂಡವರ ಬದ್ದ ವೈರಿಯಾಗಿ, ನಿರ್ದಾಕ್ಷಿಣ್ಯ ಸಮರ ಸಾರಬಲ್ಲ ಸಮರ್ಥನೆಂದು ತರ್ಕಿಸಲಾಗುತ್ತಿದೆ. ಹೆಚ್ಚೇಕೆ ಸ್ವಯಂ ಧರ್ಮರಾಯನೂ ವ್ಯಥೆಗೊಳಗಾಗಿರುವುದು ಈ ಕರ್ಣನ ಬಗೆಯಲ್ಲಿ ಮಾತ್ರ. ಯುದ್ದ ಗೆದ್ದು ಕೊಡಬಲ್ಲನೋ ಎಂಬುವುದು ಬೇರೆ ಮಾತು, ಆದರೆ ಈತನಿಂದ ಪಾಂಡವ ಪಕ್ಷಕ್ಕಿಂತಲೂ ಪಾಂಡವರಿಗೆ ಹಾನಿಗೊಳಿಸಬಲ್ಲ ಎಂಬ ಭಯ ಅವರೊಳಗಿದೆ. ಕುರುಕ್ಷೇತ್ರ ಅಂತಹ ಭಯಾಭಯಗಳ ಅನಾವರಣಕ್ಕೆ ಸಜ್ಜುಗೊಂಡು ನಿಂತಿದೆ. ಕಾಲಗರ್ಭ ರಹಸ್ಯವನ್ನು ಹೆಚ್ಚುಕಾಲ ತನ್ನೊಳಗೆ ಬಚ್ಚಿಡದು. ಇನ್ನೇನು ತುಸು ಸಮಯದಲ್ಲಿ ಎಲ್ಲವನ್ನೂ ಪ್ರಕಟಿಸಲಿದೆ” ಎಂದನು.

ಕುರುಕ್ಷೇತ್ರದಲ್ಲಿ ಸೂರ್ಯನ ತೇಜಸ್ಸಿನಂತೆ ಶೋಭಿಸುತ್ತಿದ್ದ ಕರ್ಣ, ಸೂರ್ಯನಂತೆ ಈ ತನಕ ಅನುಸರಿಸಿ ಬಂದಿದ್ದ ಸೋಲೆಂಬ ಕತ್ತಲೆಯನ್ನು ಕರಗಿಸುವನೆಂಬ ವಿಶ್ವಾಸ ಕೌರವನ ಮನಮಾಡಿದೆ. ಭೀಷ್ಮ – ದ್ರೋಣರಂತಹ ಅಪ್ರತಿಮ ವೀರರ ನೆನಪೂ ಮರೆತು ಹೋಗಿಸುವಂತಹ ಓಜಸ್ಸು ಕರ್ಣನಲ್ಲಿ ಕಾಣಿಸುತ್ತಿದೆ. ಗೆದ್ದರೆ ಇನ್ನು ಕರ್ಣನ ಸೇನಾಧಿಪತ್ಯದಲ್ಲಿ ಎಂಬಂತೆ ಕೌರವ ಭಾವಿಸುತ್ತಿದ್ದಾನೆ. ಕಾರಣ ಭೀಷ್ಮರು ಹತ್ತು ಸಾವಿರ ಮಕುಟ ಮರ್ಧನರ ಶಿರಚ್ಛೇದನ ಮಾಡುವೆ ಎಂದಿದ್ದಾರೆ ಹೊರತು ಪಾಂಡವರನ್ನು ಕೊಲ್ಲುವೆ ಎಂದಿರಲಿಲ್ಲ. ದ್ರೋಣರ ಬಳಿ ಧರ್ಮರಾಯನ ಬಂಧನದ ವಾಗ್ದಾನ ಪಡೆದಿದ್ದರೂ ಆ ಸಮಯ ಪೂರ್ಣ ವಿಶ್ವಾಸ ದ್ರೋಣರಲ್ಲಿ ಕೌರವನಿಗೆ ಕಾಣಿಸಿರಲಿಲ್ಲ. ಆದರೆ ಕರ್ಣ ಮಾತ್ರ ಹಾಗಲ್ಲ, ಮೊದಲಿನಿಂದಲೂ ಅರ್ಜುನನಿಗೆ ನೇರ ವೈರಿಯಾಗಿ ಸ್ಥಾಪಿತನಾಗಿ ಅದರ ಸಾಧನೆಗಾಗಿ ಹೋರಾಡುತ್ತಾ ಬಂದಿದ್ದ. ಈಗಲೂ ಧನಂಜಯನ ವಧೆಗೈಯುವೆ ಎಂದಿರುವ ತನ್ನ ವಚನದ ಪೂರೈಕೆಗಾಗಿ ಪೂರ್ಣ ಬಲದ ಹೋರಾಟ ಮಾಡುವನೆಂಬ ವಿಶ್ವಾಸ ದುರ್ಯೋಧನನದ್ದು.

ಪಾಂಡವ ಸೇನೆ ಅರ್ಧ ಚಂದ್ರಾಕೃತಿಯ ವ್ಯೂಹವಾಗಿ ಸ್ಥಿತವಾಗಿದ್ದರೆ, ಕರ್ಣನ ಸೇನಾನಾಯಕತ್ವದ ಮಕರ ವ್ಯೂಹವೂ ಸಮರಾರಂಭಕ್ಕೆ ಕಾತರಿಸುತ್ತಿದೆ. ಈ ಸಮಯ ಧರ್ಮರಾಯ ಪಾರ್ಥನಲ್ಲಿ “ಪಾರ್ಥಾ! ಈ ತನಕ ಸರಿ ಸುಮಾರು ಹದಿನೈದು ಸುದೀರ್ಘ ಕಾಲದಿಂದ ಕರ್ಣನ ಮನದಲ್ಲಿ ಯಾವ ಪ್ರತೀಕ್ಷೆ ಇತ್ತೋ ಆ ಕ್ಷಣ ಈಗ ಪಕ್ವವಾಗಿದೆ. ಹಾಗಾಗಿ ನಿರ್ಣಾಯಕ ಯುದ್ದ ಈಗ ಸಾಗಲಿದೆ. ನಿನ್ನ ಮತ್ತು ಕರ್ಣ ನಿಮ್ಮೀರ್ವರ ಪರಸ್ಪರರ ಪ್ರತಿಜ್ಞೆಗಳೂ ಇಂದು ಒರೆಗೆ ಹಚ್ಚಿ ಸಾಮರ್ಥ್ಯದ ಅಂತಿಮ ತೀರ್ಪು ನಿರ್ಣಯವಾಗುವ ಕಾಲ ಕೂಡಿಬಂದಿದೆ. ನನ್ನ ಮನದಲ್ಲಿ ನಿನ್ನ ಬಗ್ಗೆ ಪೂರ್ಣ ವಿಶ್ವಾಸವಿದೆ. ಅರ್ಜುನಾ ಪ್ರತಿಜ್ಞೆಗೈದಿರುವ ನೀನು ಪೂರೈಸಿಕೊಳ್ಳುವೆ ಎಂಬುವುದು ನಿಸ್ಸಂಶಯ. ಸಾಂಗವಾಗಿ ಅದು ಕೈಗೂಡಲಿ ಎಂದು ಹರಸುತ್ತೇನೆ” ಎಂದು ಅನುಗ್ರಹಿಸಿದನು.

ಎರಡು ಪಕ್ಷಗಳೂ ಯುದ್ದಾರಂಭಕ್ಕೆ ಮೊದಲು ಸಮರೋತ್ಸಾಹ ಹೆಚ್ಚಿಸುವ ರಣವಾದ್ಯಗಳನ್ನು ಮೊಳಗಿಸಿ, ಶಂಖನಾದಗೈದು ಯುದ್ದಾರಂಭದ ಸೂಚನೆಯಿತ್ತರು. ಎರಡೂ ಪಕ್ಷದ ಸೇನೆಗಳು ವೇಗವಾಗಿ ಮುನ್ನುಗ್ಗಿ ಆಕ್ರಮಿಸಿಕೊಂಡವು. ಪದಾತಿ, ಅಶ್ವ, ಗಜ, ರಥಾಶ್ವರೂಢ ವೀರಾದಿ ವೀರರು ಕಾಳಗ ನಿರತರಾದರು. ಕುರುಕ್ಷೇತ್ರಾದ್ಯಂತ ಆಯುಧಗಳು ಸರಸರನೆ ತಿರುಗುತ್ತಾ, ಸವರುತ್ತಾ ಎರಡೂ ಪಕ್ಷದ ಸೇನಾನಾಶ ಕಾರ್ಯ ಆರಂಭಗೊಂಡಿದೆ. ಹದಿನಾರನೆ ದಿನವೂ ರಕ್ತದ ಹೊಳೆ ಹರಿಯತೊಡಗಿದೆ. ಕೃಷ್ಣ ಸಾರಥ್ಯದಲ್ಲಿ ಅರ್ಜುನ, ಭೀಮ, ಧರ್ಮರಾಯ, ನಕುಲ ಸಹದೇವರು, ಸಾತ್ಯಕಿ, ಚೇಕಿತಾನ, ದ್ರಾವಿಡರು, ಪಾಂಡ್ಯರು, ಚೋಳರು, ದೃಷ್ಟದ್ಯುಮ್ನ, ಶಿಖಂಡಿ ಹೀಗೆ ಎಲ್ಲರೂ ಸೇರಿ ಕುರುಪಾಳಯದ ಕೌರವ, ಕರ್ಣ, ಅಶ್ವತ್ಥಾಮ, ಕೃಪ, ಶಲ್ಯ, ಕೃತವರ್ಮ, ಬೃಹತ್ಕರ್ಷ, ಶಕುನಿ, ಕ್ಷೇಮಧೂರ್ತಿ, ದುಶ್ಯಾಸನ, ಹೀಗೆ ಇಕ್ಕೆಲಗಳ ಪ್ರತಾಪಿಗಳು ಮಹೋಗ್ರರಾಗಿ ಸಾಹಸ ವಿಕ್ರಮ ಮೆರೆಯತೊಡಗಿದ್ದಾರೆ. ಕರ್ಣನಂತೂ ತನಗೆ ಗುರು ಭಾರ್ಗವರಿಂದ ದತ್ತವಾದ ‘ಕಾಲಪೃಷ್ಟ’ ನಾಮಕ ಧನುಸ್ಸನ್ನು ಹೂಡಿ ಪಾಂಡವ ಪಕ್ಷದ ಸೇನೆ, ರಥಿಕರನ್ನು ಅಗಣಿತ ಸಂಖ್ಯೆಯಲ್ಲಿ ಸಂಹರಿಸುತ್ತಾ ಮುಂದೊತ್ತಿ ಬರುತ್ತಿದ್ದಾನೆ. ಕರ್ಣನ ವೇಗ ರೋಷವನ್ನು ಕಂಡು ನಕುಲ ಮೊದಲು ಆತನಿಗೆದುರಾಗಿ ಹೋರಾಡತೊಡಗಿದನು. ಸಾತ್ಯಕಿಗೂ ಕೇಕಯ ರಾಜರಿಗೂ, ಭೀಮನಿಗೂ ಕ್ಷೇಮಧೂರ್ತಿಗೂ ಯುದ್ಧ ಹತ್ತಿಕೊಂಡಿತು. ದುರ್ಯೋಧನನಿಗೆ ಧರ್ಮರಾಯ ದ್ರೌಪದಿಯ ಕುಮಾರನೊಡನೆ, ದೃಷ್ಟದ್ಯುಮ್ನನಿಗೂ ಕೃಪಾಚಾರ್ಯರಿಗೂ, ಶೃತಕೀರ್ತಿಗೂ ಶಲ್ಯನಿಗೂ, ಸಹದೇವ ದುಶ್ಯಾಸನನಿಗೂ ಸಮರ ಸಾಗುತ್ತಿದೆ. ಅರ್ಜುನನಿಗೂ ಅಶ್ವತ್ಥಾಮನಿಗೂ ದ್ವಂದ್ವ ಆರಂಭಗೊಂಡಿದೆ. ಉಪಪಾಂಡವರಲ್ಲಿ ಶ್ರುತಕರ್ಮ ಮತ್ತು ಪ್ರತಿವಿಂದ್ಯ – ಚಿತ್ರಕರ ಜೊತೆ ಮಹಾಸಂಗ್ರಾಮ ನಿರತರಾಗಿದ್ದಾರೆ. ಹೀಗೆ ಎಲ್ಲೆಡೆ ತ್ವರಿತ ವೇಗದಲ್ಲಿ ಯುದ್ದ ಸಾಗತೊಡಗಿದೆ.

ಮಧ್ಯಾಹ್ನದ ಸಮಯ ಮೀರಿ ಕಳೆಯುವ ಹೊತ್ತಾಗುವಾಗ ಕುರುಕ್ಷೇತ್ರದಲ್ಲಿ ಹೆಣಗಳ ಪರ್ವತ ಆದಂತಾಗಿದೆ. ಕೇಕಯರಾಜರು ಸಾತ್ಯಕಿಯೊಡನೆ ಬಹಳ ಅನ್ನುಬಹುದಾದಷ್ಟು ಉಗ್ರವಾಗಿ ಹೋರಾಡಿ, ಸಾತ್ಯಕಿಯನ್ನು ಅತಿಯಾಗಿ ಪೀಡಿಸಿ ಕೊನೆಗೆ ಹತರಾಗಿದ್ದಾರೆ. ದ್ರೌಪದಿಯ ಪುತ್ರ ಶ್ರುತಕರ್ಮನಿಗೂ ಮಹೀಪತಿ ಚಿತ್ರಸೇನನಿಗೂ ಅತ್ಯುಗ್ರ ಕಾಳಗ ಸಾಗಿ ಪರಸ್ಪರರು ಬಾಣಗಳನ್ನು ಚುಚ್ಚಿಸಿಕೊಂಡು ಯುದ್ಧ ಮಧ್ಯೆ ಮುಳ್ಳು ಹಂದಿಯಂತೆ ಕಾಣಿಸುತ್ತಿದ್ದಾರೆ. ಅತಿಯಾದ ರೋಷಕ್ಕೊಳಗಾದ ಶ್ರುತಕರ್ಮ ಶರಪ್ರಯೋಗದ ವೇಗ ವೃದ್ಧಿಸುತ್ತಾ ಕೊನೆಗೆ ಚಿತ್ರಸೇನನನ್ನು ಸಂಹರಿಸಿದನು. ಕ್ರುದ್ಧರಾಗಿ ಎರಗಿದ ಚಿತ್ರಸೇನನ ಸೇನೆಯನ್ನೂ ಸಂಪೂರ್ಣ ಸವರಿ ಮೆರೆದಾಡಿದನು. ಇತ್ತ ಉಪಪಾಂಡವ ಪ್ರತಿವಿಂಧ್ಯನೂ ಅಷ್ಟೇ ಪರಾಕ್ರಮ ಮೆರೆದು ಚಿತ್ರಕನನ್ನು ಸಂಹರಿಸಿ ಬಿಟ್ಟನು.

ಭೀಮಸೇನನಿಗೂ ಕುಲೂತ ದೇಶಾಧಿಪ ಕ್ಷೇಮಧೂರ್ತಿಗೂ ಸಮರ ಸಾಗುತ್ತಿದೆ. ಗಜಾರೋಹಿಯಾಗಿದ್ದ ಕ್ಷೇಮಧೂರ್ತಿಯೂ ಅಸಾಮಾನ್ಯ ವೀರನಾಗಿದ್ದ. ಭೀಮಸೇನನ ಸರ್ವ ವಿಧ ಪ್ರಹಾರಗಳನ್ನು ತಡೆದು ಮರು ಪ್ರಹಾರಗೈಯುತ್ತಾ ಸಮಬಲದ ಹೋರಾಟ ಮುಂದುವರಿಸುತ್ತಿದ್ದಾನೆ. ಭೀಮನೂ ಅಶ್ವರಥವನ್ನು ತೊರೆದು ಮಹಾಗಜವನ್ನಡರಿ ಯುದ್ದ ಸಾರತೊಡಗಿದ. ಆದರೆ ಕ್ಷೇಮಧೂರ್ತಿ ಭೀಮನ ಗಜದ ಮರ್ಮಸ್ಥಳವನ್ನು ಭೇದಿಸುವಂತೆ ಹೊಡೆದು ಬೀಳಿಸುವಲ್ಲಿ ಸಫಲನಾದನು. ಪದಾತಿಯಾಗಿ ಭೀಮ ಗದೆಯನ್ನು ಧರಿಸಿ ನೆಲದ ಮೇಲೆ ನಿಂತಾಗ ಕ್ಷೇಮಧೂರ್ತಿಯೂ ಕೆಳಗಿಳಿದು ಗದಾಧರನಾಗಿ ಹೋರಾಡತೊಡಗಿದನು. ಅತ್ಯುಗ್ರನಾಗಿ ಕಾದಾಡಿದರೂ ಕೊನೆಗೆ ಭೀಮಸೇನನಿಂದ ಹತನಾದನು. ಇತ್ತ ಅಶ್ವತ್ಥಾಮ ಅರ್ಜುನನ ಎದುರು ಕಾದಾಡುತ್ತಾ ವ್ಯಸ್ಥಗೊಳಿಸಿ ತಡೆ ಹಿಡಿದಿದ್ದಾಗ, ಪಾರ್ಥ ತನ್ನ ಆಕ್ರಮಣವನ್ನು ತೀಕ್ಷ್ಣಗೊಳಿಸಿ ಗುರುಪುತ್ರನನ್ನು ದಂಡಿಸತೊಡಗಿದನು. ಆ ಸಮಯ ಗುರುಪುತ್ರನ ರಕ್ಷಣೆಗೆ ಒದಗಿದವರು ಅಳಿದುಳಿದ ಸಂಶಪ್ತಕ ವೀರರು. ಅರ್ಜುನನ ಯುದ್ಧ ವೈಖರಿಗೆ ಪ್ರತ್ಯಕ್ಷ ಸಾಕ್ಷಿಗಳಾಗಿ ತಮ್ಮದ್ದಾದ ತ್ರಿಗರ್ತದ ಸೇನೆ ಸರ್ವನಾಶವಾಗುವದನ್ನು ಕಂಡು ಹಿಂಜರಿದು ಓಡಿದ್ದವರು ಇಂದು ಮತ್ತೆ ಪಾರ್ಥನಿಗೆ ಸವಾಲಾಗಿ ನಿಂತಿದ್ದಾರೆ. ಅರ್ಜುನನಿಗೆ ಹೆಚ್ಚು ಸಮಯ ಹಿಡಿಯಲಿಲ್ಲ, ಅವರೆಲ್ಲರನ್ನೂ ಸರ್ವಪತನಗೊಳಿಸಲು ಆರಂಭಿಸಿದನು. ಮುಕ್ತನಾದ ಅಶ್ವತ್ಥಾಮ ಮತ್ತೆ ಎದುರಾದದ್ದು ಭೀಮಸೇನನಿಗೆ.

ಅಶ್ವತ್ಥಾಮ – ಭೀಮರ ಮಧ್ಯೆ ಮಹಾಭಾರತ ಯುದ್ಧದಲ್ಲಿ ಉಗ್ರ ಸಮರಗಳಲ್ಲಿ ಒಂದು ಎಂದು ಪರಿಗಣಿಸಬಲ್ಲ ರೀತಿಯ ಅದ್ಬುತ ಯುದ್ಧ ಸಾಗತೊಡಗಿದೆ. ಸರಳವಾಗಿ ತೀವ್ರತೆ ಹೇಗಿತ್ತೆಂದು ಹೇಳುವುದಾದರೆ ಒಂದೊಮ್ಮೆಗೆ ಭೀಮನೂ ಅಶ್ವತ್ಥಾಮನ ಎದುರು ಮೂರ್ಛಿತನಾಗಿ ಬಿದ್ದನು. ಆ ಕೂಡಲೆ ಸಾವರಿಸಿಕೊಂಡು ಚೇತರಿಸಿದ ಭೀಮ ರುದ್ರಾವತಾರಿಯಂತೆ ಕಂಗೊಳಿಸುತ್ತಾ ಸೆಣಸಾಡಿ ಗುರುಪುತ್ರನನ್ನು ಧೃತಿಗೆಡಿಸಿ ಮೂರ್ಚಿತನನ್ನಾಗಿಸಿದನು. ಈಶ್ವರನು ತಾನು ಎರಡಾಗಿ ತನ್ನಲ್ಲಿ ತಾನು ಸೆಣಸುವಂತೆ ರುದ್ರಾಂಶ ಸಂಭೂತರು ಸಮರ ನಿರತರಾಗಿದ್ದಾರೆ.

ಹದಿನಾರನೆ ದಿನದ ಪ್ರಮುಖ ಆಕರ್ಷಣೆ ಆದದ್ದು ನಕುಲ. ಕರ್ಣನಿಗೆ ಎದುರಾಳಿಯಾಗಿ ನಿಂತು ಮಹಾರಥಿಯನ್ನು ಕಂಗೆಡಿಸುವ ತೆರದಲ್ಲಿ ಹೋರಾಡುತ್ತಿದ್ದಾನೆ. ಕರ್ಣ ಕ್ರೋಧಾವೇಶಕ್ಕೊಳಗಾಗಿ ಅತ್ಯುಗ್ರ ಯುದ್ಧ ಮಾಡಿದರೂ ನಕುಲ ಕದಲದೆ ನಿಂತಿದ್ದಾನೆ. ಸಿಕ್ಕ ಅವಕಾಶಗಳನ್ನು ಬಳಸಿಕೊಳ್ಳುತ್ತಿರುವ ಕರ್ಣ ಪಾಂಡವ ಸೇನಾನಾಶಕ್ಕೆ ತೊಡಗುತ್ತಿದ್ದನು. ಮತ್ತೆ ಮತ್ತೆ ನಕುಲ ಆತನಿಗೆದುರಾಗಿ ಬೆಂಬತ್ತಿ ಬಂದು ದಿನವಿಡಿ ವ್ಯಸ್ಥಗೊಳಿಸಿ ಹೋರಾಡುತ್ತಿದ್ದಾನೆ. ಕರ್ಣ ಹರಸಾಹಸ ಪಟ್ಟರೂ ಇಂದು ನಕುಲನನ್ನು ಸೋಲಿಸಲಾಗುತ್ತಿಲ್ಲ. ಸಂಜೆಯಾಗುತ್ತಿದೆ, ಯುದ್ಧ ಗೆದ್ದುಕೊಡಬಲ್ಲ ಎಂಬ ವಿಶ್ವಾಸ ಮೂಡಿಸಿದ್ದ ಕರ್ಣ ನಕುಲನನ್ನು ಗೆಲ್ಲಲಾಗದೆ, ಪರಿ ಪರಿಯ ಕ್ರಮಗಳಿಂದ ಭಿನ್ನ ಭಿನ್ನ ವಿಧಾನಗಳಿಂದ ವ್ಯಗ್ರನಾಗಿ ಕಾದಾಡಿದರೂ, ಕೊನೆಗೆ ಅಜೇಯನಾಗಿರುವ ನಕುಲನ ಎದುರು ಕೈಸೋತನು. ನಕುಲ ಗೆದ್ದೇ ಬಿಟ್ಟನು‌.

ಮುಂದುವರಿಯುವುದು…

spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page