27.3 C
Udupi
Thursday, January 1, 2026
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ 394

ಭರತೇಶ್ ಶೆಟ್ಟಿ, ಎಕ್ಕಾರ್

ಸಂಚಿಕೆ ೩೯೪ ಮಹಾಭಾರತ

ದೇವತೆಗಳೆಲ್ಲರೂ ಸೇರಿ ತ್ರಿಪುರಗಳ ಅಧಿಪತಿಗಳಾಗಿ ಬಾಧೆ ನೀಡುತ್ತಿದ್ದ ದಾನವರಾದ ತಾರಾಕ್ಷ, ಕಮಲಾಕ್ಷ ಮತ್ತು ವಿದ್ಯುನ್ಮಾಲಿ ಎಂಬ ಮೂವರು ರಾಕ್ಷಸರಿಂದ ಕಾಲ ಕ್ರಮದಲ್ಲಿ ನಿರ್ವಹಿಸಬೇಕಾದ ಜಗದ ಪಾಲನಾ ಕಾರ್ಯಕ್ಕೂ, ದೇವತೆಗಳ ಸುರಕ್ಷತೆಗೂ, ದೇವಲೋಕದ ಅಧಿಕಾರಕ್ಕೂ ತೊಂದರೆ ಒದಗಿದೆ ಎಂದು ಮಹಾದೇವ ಪರಮೇಶ್ವರನಲ್ಲಿ ದೂರಿ ಕೊಂಡರು.

ಆಗ ಪರಶಿವ ಮಹೇಶ್ವರನು ಭಕ್ತರಾಗಿ ಬಂದು ಮೊರೆಯಿತ್ತ ದೇವಾನು ದೇವತೆಗಳ ಅಳಲನ್ನು ಆಲಿಸಿ ಅಭಯಪ್ರದನಾದನು. ಪರಮಾದ್ಬುತವಾದ ಸಿದ್ಧತೆಯೊಂದಿಗೆ ದುರುಳರ ನಿಗ್ರಹಕ್ಕೆ ಸಜ್ಜುಗೊಳ್ಳತೊಡಗಿದನು. ಆಚಾರಹೀನರಾಗಿ, ದೇವವಿರೋಧಿಗಳೂ ಆಗಿ ಲೋಕಕಂಟಕರಾದ ದುರುಳರ ವಧೆಗೈದು ಲೋಕದ ನೈಮಿತ್ತಿಕ ನಿರ್ವಹಣೆಯನ್ನು ಸಾಂಗಗೊಳಿಸಲು ಹೊರಟು ಸನ್ನದ್ಧನಾದನು. ಶಿವ ಪರಮಾತ್ಮ ಈ ಮಹತ್ತರವಾದ ಕಾರ್ಯಕ್ಕೆ ಹೊರಟ ಸಿದ್ಧತೆಯೂ ಅದ್ವಿತೀಯವಾಗಿತ್ತು. ಮಹಾದೇವ ಭೂಮಿಯನ್ನು ರಥವನ್ನಾಗಿಸಿ, ನಾಲ್ಕು ವೇದಗಳನ್ನು ರಥದ ಕುದುರೆಗಳಾಗಿಸಿ, ಸೂರ್ಯ ಚಂದ್ರರನ್ನು ರಥಚಕ್ರವಾಗಿಸಿ, ಪರಬ್ರಹ್ಮನನ್ನು ಸಾರಥಿಯಾಗಿಸಿ, ಮಂದರ ಪರ್ವತವನ್ನು ಧನುಸ್ಸನ್ನಾಗಿಸಿ, ಆದಿಶೇಷನನ್ನು ಶಿಂಜಿನಿಯಾಗಿ ಬಿಗಿದು, ಅಮಿತ ಆಗರವಾದ ಸಾಗರವನ್ನು ಬತ್ತಳಿಕೆಯನ್ನಾಗಿಸಿ, ಲೋಕಪಾಲಕ ವಿಷ್ಣುವನ್ನು ದಿವ್ಯ ಬಾಣವನ್ನಾಗಿಸಿದನು. ಲೋಕೇಶ್ವರನು ಸಮರಕ್ಕೆ ತ್ರಿಮೂರ್ತಿಗಳ ಏಕೀಕರಣ ಸಹಿತವಾಗಿ ಧರ್ಮ ಮತ್ತು ಧಾರಣಾಬಲಗಳನ್ನೂ ಹೊಂದಿ ಪರಿಪೂರ್ಣ ವ್ಯವಸ್ಥೆ ಮಾಡಿಕೊಂಡನು. ಲೋಕಕಲ್ಯಾಣದ ಈ ಕಾರ್ಯದಲ್ಲಿ ಎಲ್ಲ ದೇವತೆಗಳೂ ಭಾಗಿಗಳಾಗಿ ಸಹಕಾರಿಗಳಾದರು. ಇಷ್ಟಾದರೂ ವಿಧಾತನು ಇತ್ತ ವರಬಲವನ್ನು ಹುಸಿಯಾಗಗೊಡದೆ ಮನ್ನಿಸಿದ ಕಾರಣ, ವರಬಲದಂತೆ ಈ ಮೂವರು ರಾಕ್ಷಸ ಸೋದರರು ಒಂದೇ ಕಡೆ ಒಟ್ಟಾಗದ ಹೊರತು ಅವರ ವಧೆ ಮಾಡಲಿಲ್ಲ. ಒಂದು ಸಹಸ್ರ ಸಂವತ್ಸರ ಪರ್ಯಂತರ ಆ ಮಹತ್ವಪೂರ್ಣ ಕಾಲ ಕೂಡಿಬರಲು ಪರಮೇಶ್ವರನೂ ತಾಳ್ಮೆಯಿಂದ ಕಾಯಬೇಕಾಯಿತು. ಈ ಮೂರು ಪುರಗಳು ಸೃಷ್ಟಿಯಾಗಿದ್ದ ಪುಷ್ಯಾ ನಕ್ಷತ್ರ ಸಂಯೋಗದಲ್ಲಿ ಮತ್ತೊಮ್ಮೆ ಅಸುರರ ನಗರಗಳು ಸಮಾನಾಂತರ ಸರಳರೇಖೆಯಲ್ಲಿ ಸ್ಥಿತವಾಗಿ ತಾರಾಕ್ಷ, ಕಮಲಾಕ್ಷ ಮತ್ತು ವಿದ್ಯುನ್ಮಾಲಿ ಒಟ್ಟಾದಾಗ ಸಮರ ಸಾರಿದನು ಲೋಕ ನಿಯಂತ್ರಕ ಮಹಾದೇವ. ವಿಷ್ಣು, ವಾಯು ವೈವಸ್ವತರು ಅಡಕವಾಗಿದ್ದ ದಿವ್ಯಬಾಣವನ್ನು ಸೆಳೆದು ಪ್ರಯೋಗಿಸಿ ಸುವರ್ಣ, ರಜತ ಮತ್ತು ಆಯಸ ಲೋಹಗಳಿಂದ ನಿರ್ಮಿತವಾಗಿದ್ದ ತ್ರಿಪುರಗಳನ್ನು ಸುಟ್ಟು ಹಾಕಿ, ಅವರ ಪುರ ಸಹಿತ ಮೂವರೂ ದಾನವರ ಸಂಹಾರವನ್ನು ಮಾಡಿ ಪೂರೈಸಿದನು.

ಇಲ್ಲೊಂದು ಸೂಕ್ಷ್ಮವಾದ ಸಂದೇಶ ಲೋಕಕ್ಕೆ ರವಾನೆಯಾಗುತ್ತದೆ. ಏನೆಂದರೆ ಮೊದಲಾಗಿ ದಕ್ಷಾಧ್ವರ ಭಾಗದಲ್ಲಿ ದೇವರನ್ನು ಉತ್ಪ್ರೇಕ್ಷೆ ಮಾಡಿ ಯಾವುದೇ ಕಾರ್ಯ ಮಾಡಿದರೂ ಅದು ದೋಷಕ್ಕೊಳಗಾಗಿ ಅನಾಹುತಕ್ಕೆ ಕಾರಣವಾಗುತ್ತದೆ. ಇನ್ನು ತ್ರಿಪುರ ಮಥನದ ಕಥಾಭಾಗವೂ ಸ್ಪಷ್ಟ ಸಂದೇಶ ನೀಡುತ್ತದೆ. ಈ ರಾಕ್ಷಸರ ತ್ರಿಪುರ ಗಳಂತೆ ಮನುಷ್ಯನ ಶರೀರದಲ್ಲೂ ಸ್ಥೂಲ, ಸೂಕ್ಷ್ಮ ಮತ್ತು ಕಾರಣ ಎಂಬ ಮೂರು ರೀತಿಯ ಶರೀರಗಳಿರುತ್ತವೆ. ಅವುಗಳ ಪ್ರೇರಣೆಯಿಂದ ಬಹುಪ್ರೀತಿ, ಕ್ಷಣಿಕ ಸುಖ ಮತ್ತು ಮೋಹ ಎಂಬ ಮೂರು ರೀತಿಯ ಕಾಮನೆಗಳು ಉತ್ಪತ್ತಿಯಾಗುತ್ತವೆ. ಈ ಕಾಮ ಭಾವಗಳ ಸೂಚಕವೇ ಪುರಗಳ ನಿರ್ಮಾಣ ಧಾತು ಲೋಹಗಳಾದ ಬಂಗಾರ, ಬೆಳ್ಳಿ ಮತ್ತು ಕಬ್ಬಿಣ. ಸ್ಥೂಲ ಶರೀರವು ಸುವರ್ಣಮಯವಾದುದು. ಸೂಕ್ಷ್ಮ ಶರೀರ ರಜತಮಯವಾದುದು. ಕಾರಣ ಶರೀರವು ಆಯಸ(ಕಬ್ಬಿಣ) ಮಯವಾಗಿ ಇರುತ್ತದೆ. ಈ ಶರೀರಗಳಿಂದ ಸೃಜಿಸಲ್ಪಡುವ ತ್ರಿಗುಣ ವಿಕಾರಗಳು ಮನುಷ್ಯನನ್ನು ನಿಯಂತ್ರಿಸುತ್ತವೆ. ಅಂದರೆ ಕಾಮ ಉತ್ಪತ್ತಿಯಾಗಿ ಪಡೆದುಕೊಳ್ಳಬೇಕೆಂಬ ಛಲ ಕ್ರೋಧ ರೂಪವಾಗಿ, ಸಾಧಿಸುವ ಪ್ರಕ್ರಿಯೆಯಲ್ಲಿ ಅಧರ್ಮಪಥವೆಂದು ಅರಿತಿದ್ದರೂ ಅದನ್ನೇ ಪ್ರೀತಿಸಿ ಅನುಸರಿಸುವಂತೆ ಪ್ರಚೋದಿಸುತ್ತದೆ. ಹೀಗಾದಾಗ ಕಾಲಚಕ್ರ ನಿಯಂತ್ರಿಸುವ ದೇವಾನುದೇವತೆಗಳು ಎಲ್ಲರೂ ಏಕೀಕರಣಗೊಂಡು ಅಂತಹ ಶರೀರ ಭಾವಗಳನ್ನು ಕ್ರೋಢಿಕರಿಸಿ ಆ ಶರೀರಿಯ ಸರ್ವನಾಶ ಮಾಡಿಸುತ್ತಾರೆ. ಇಂತಹ ಭಾವ ವ್ಯತ್ಯಯಗಳಿಗೆ ಬಲಿಯಾಗದೆ ಸತ್ಕರ್ಮ, ಧರ್ಮಪಾಲನೆ, ತ್ಯಾಗ ಮನೋಭಾವ ಹೊಂದಿದರೆ ಮಹಾದೇವನು ಒಲಿದು ರಾಕ್ಷಸರಿಂದ ದೇವತೆಗಳನ್ನು ಸಂರಕ್ಷಿಸಿದಂತೆ ಸುರಕ್ಷೆ, ಸುಭಿಕ್ಷೆ, ಉತ್ತಮ ಗತಿ ಯನ್ನು ದಯಪಾಲಿಸುತ್ತಾನೆ ಎಂಬ ತತ್ವ ಅಂತರ್ಗತವಾಗಿದೆ. ಈ ರಹಸ್ಯ ತತ್ವವನ್ನು ಭಗವಾನ್ ವ್ಯಾಸರು ಶಿವನ ಲೀಲೆಯ ವರ್ಣನೆಯ ಜೊತೆ ವಿವರಿಸಿ ಅರ್ಜುನನಿಗೆ ಆಶೀರ್ವದಿಸಿದರು.

“ಹೇ ಧನಂಜಯಾ! ನೀನೂ ಧರ್ಮಯಜ್ಞ ಸ್ವರೂಪವಾದ ಈ ಧರ್ಮಸಂಗ್ರಾಮದ ದೀಕ್ಷಿತನಾಗಿ ತೊಡಗಿಕೊಂಡಿರುವೆ. ಈ ಸುಕೃತಿಯೇ ಸತ್ಕರ್ಮ. ಇದನ್ನು ಪಾಲಿಸಿಕೊಂಡು ಮುಂದುವರಿದು ಸಮರ್ಪಣಾ ಭಾವದಿಂದ ದೇವತಾ ಪ್ರೀತ್ಯರ್ಥವಾಗಿ ಕರ್ಮ ಮಾಡುತ್ತಾ ಸಾಗಿದರೆ ಅದೇ ಧರ್ಮ ಪಾಲನೆ. ಇಲ್ಲಿ ತೊಡಕಾಗಿ ಬರುವ ಮಮಕಾರ, ಬಾಂಧವರ ಕುರಿತಾದ ಮೋಹ ಇತ್ಯಾದಿ ಭಾವಗಳನ್ನು ತ್ಯಜಿಸುತ್ತಾ ಪರಮಧ್ಯೇಯವಾದ ಗುರಿಯನ್ನಷ್ಟೆ ಗಮ್ಯವಾಗಿಸಿ ಕೃತಕತ್ಯನಾಗುವ ಮನೋಧರ್ಮವೆ ತ್ಯಾಗ ಮನೋಭಾವ. ಇದು ನಿನ್ನ ಈ ಯುದ್ಧಕ್ಕೆ ಮಾತ್ರವಲ್ಲ ಜನ ಸಾಮಾನ್ಯರ ಜೀವನ ಎಂಬ ಯುದ್ದಕ್ಕೂ ಸಮಾನ ರೂಪದಲ್ಲಿ ಪರಿಭಾಷೆಯಾಗಿ ಅನುಸರಣೀಯವಾಗುತ್ತದೆ. ಪರಿಣಾಮವಾಗಿ ದೇವರ ಸುರಕ್ಷೆ, ಮನಸ್ಸು ಹಾಗು ಜ್ಞಾನದ ಶ್ರೀಮಂತಿಕೆಯ ಸುಭಿಕ್ಷೆ ಮತ್ತು ಅಂತ್ಯಕ್ಕೆ ಉತ್ತಮ ಗತಿ ಪ್ರಾಪ್ತವಾಗಿಸುವ ರಾಜಮಾರ್ಗವಾಗಿದೆ. ದೇವರಿಗೆ ಎರಡು ರೀತಿಯ ಗುಣ ಶರೀರಗಳಿವೆ – ಘೋರ ಶರೀರ ಮತ್ತು ಮಂಗಳ ಶರೀರ. ನೀನೀಗಾಗಲೆ ಮಹಾದೇವನ ಘೋರ ಶರೀರವನ್ನು ಕಂಡಿರುವೆ. ಲೋಕರಕ್ಷಾರ್ಥವಾಗಿ ಸತ್ಕರ್ಮ ನಿರತನಾದ ನಿನಗೆ ರಕ್ಷಕನೂ ಸಹಾಯಿಯೂ ಆಗಿ ಒದಗಿದ ಕ್ಷಣವನ್ನು ನೋಡಿದವನಾಗಿರುವೆ. ಆ ರೂಪದ ಶರೀರದಿಂದ ಅವ್ಯಕ್ತನಾಗಿ ಅಧರ್ಮ ಪಥದಲ್ಲಿ ಸಾಗುವವರ ವಿನಾಶಕಾರ್ಯವನ್ನು ದೇವ ಸ್ವಯಂ ತಾನೇ ಪೂರೈಸಿಕೊಳ್ಳುತ್ತಾ, ಧರ್ಮಾತ್ಮರ ಜೀವನ ಮಾರ್ಗದಲ್ಲಿ ಒದಗಿ ಬಂದು ಸಹಕರಿಸುತ್ತಾನೆ. ನೀನೀಗ ಮಂಗಳಕರ ಶರೀರ ಸ್ವರೂಪನಾದ ದೇವನನ್ನು ಆರಾಧಿಸಿ ಏಕಾಗ್ರ ಮನಸ್ಥಿತಿಯಿಂದ ಧ್ಯಾನಿಸಿ ನಿರತನಾಗಿರುವ ನಿನ್ನ ಸತ್ಕಾರ್ಯಕ್ಕೆ ಶ್ರೇಯಸ್ಸನ್ನು ಪ್ರಾರ್ಥಿಸಿಕೋ. ಶರಣ್ಯನಾದ ದೇವ ಶರಣಾಗತ ರಕ್ಷಕನಾಗಿ ಒಲಿದು ಸದಾವಿಜಯವನ್ನು ಕರುಣಿಸುತ್ತಾನೆ. ಧರ್ಮ ರಕ್ಷಣೆ ಮತ್ತು ಸಂಸ್ಥಾಪನಾ ಕಾರ್ಯದಲ್ಲಿ ಸೃಷ್ಟಿ, ಸ್ಥಿತಿ, ಲಯ ಅಧಿಪತಿಗಳಾದ ತ್ರಿಮೂರ್ತಿಗಳು ಏಕಿಕೃತರಾಗಿ ಇದ್ದು ಕಾಲಚಕ್ರದ ಚಲನೆಯನ್ನು ನಿಯತಿಯ ನಿಯಮದಂತೆ ಅಗೋಚರ, ಅವ್ಯಕ್ತರಾಗಿದ್ದು ನಿಯಂತ್ರಿಸಿಕೊಳ್ಳುತ್ತಾರೆ. ನೀನೀಗಾಗಲೆ ತ್ರೈಮೂರ್ತಿಗಳಲ್ಲಿ ನಾರಾಯಣನ ವಿಶ್ವರೂಪ ಮತ್ತು ರಹಸ್ಯಾತಿ ರಹಸ್ಯತಮವಾದ ಗೀತೋಪದೇಶದ ಅಮೃತವನ್ನು ಸವಿದಿರುವೆ. ಈಗ ಶಿವನ ಮಹಾತ್ಮೆಯನ್ನೂ, ಆತನ ಸ್ವರೂಪವನ್ನೂ ಕಂಡಿರುವೆ. ಸ್ವಪ್ನ ಮಾರ್ಗದಲ್ಲಿ ಪಾಶುಪತಾಸ್ತ್ರದ ಪುನರ್ಸ್ಮರಣೆ ಮತ್ತು ಅನುಗ್ರಹ ಪಡೆಯುವಲ್ಲಿ ಹರಿಯ ನಿರ್ದೇಶನದಲ್ಲಿ ಹರನ ಮಂಗಳ ರೂಪ ನೋಡಿರುವೆ. ಕುರುಕ್ಷೇತ್ರದ ಪುಣ್ಯ ಧಾರುಣಿಯಲ್ಲಿ ಮಹಾದೇವನ ರುದ್ರ ಭಯಂಕರ ಘೋರ ರೂಪವನ್ನೂ ಕಂಡಿರುವೆ. ಈಶ್ವರೀಯ ತತ್ವವನ್ನೂ ಆರ್ಜಿಸಿಕೊಂಡು ನಿಜಾರ್ಥದಲ್ಲೂ ಆರ್ಜನೆ ಮಾಡಿದ ಅರ್ಜುನ ನೀನಾಗಿರುವೆ. ಹರಿಹರರ ತತ್ವ ಆದರ್ಶಗಳನ್ನು ಅರಿತಿರುವ ನಿನಗಿನ್ನು ಯಾವ ಭಯವೂ ಇಲ್ಲ. ಧರ್ಮರಕ್ಷಕನಾಗಿ ಈ ಧರ್ಮಯುದ್ಧವನ್ನು ಪೂರೈಸಿ ಧರ್ಮ ಸಂಸ್ಥಾಪನೆ ಮತ್ತು ಯುಗಧರ್ಮ ಪಾಲನೆ, ಚಲನೆ ಎಂಬ ಪೂರ್ಣಾಹುತಿಯನ್ನು ದೇವತಾ ಪ್ರೀತ್ಯರ್ಥವಾಗಿ ಸಾಧಿಸಿ ಸಮರ್ಪಿಸು. ಸದಾ ನಿನಗೆ ವಿಜಯವಾಗಲಿದೆ. ಶೀಘ್ರವಾಗಿ ಉಳಿದಿರುವ ಯುದ್ದವನ್ನು ಸಮಾಪ್ತಿಗೊಳಿಸು. ನಿನಗೆ ಶ್ರೇಯಸ್ಸಾಗಲಿ ಎಂದು ಹರಸಿದರು.

ಒಂದೆಡೆ ಪಾಂಡವರ ಶಿಬಿರದಲ್ಲಿ ಪಾರ್ಥ ಮತ್ತು ವ್ಯಾಸರು ಚರ್ಚಾ ನಿರತರಾಗಿದ್ದರೆ, ಇತ್ತ ಕೌರವರ ಶಿಬಿರದಲ್ಲಿ ನಾಳಿನ ದಿನದ ಸೂರ್ಯೋದಯದಿಂದ ಆರಂಭವಾಗಬೇಕಾಗಿರುವ ಹದಿನಾರನೇ ದಿನದ ಯುದ್ಧವನ್ನು ಮುನ್ನಡೆಸುವ ಸಮರ್ಥ ನಾಯಕನ ಆಯ್ಕೆ ಮತ್ತು ಸೇನಾಧಿಪತ್ಯದ ಕುರಿತಾಗಿ ಸಮಾಲೋಚನೆ ನಡೆಯುತ್ತಿದೆ. ಅಜೇಯರಾಗಿದ್ದ ಆಚಾರ್ಯ ಭೀಷ್ಮ ಮತ್ತು ಗುರು ದ್ರೋಣರು ಈಗ ಕುರು ಪಾಳಯದ ಸೇನಾಭಾಗವಾಗಿ ಉಳಿದಿಲ್ಲ. ಹೀಗಿರಲು ದುರ್ಯೋಧನನ ಜೊತೆ ಶಕುನಿ, ಕರ್ಣ, ಅಶ್ವತ್ಥಾಮ, ಶಲ್ಯ, ಕೃಪ, ಕೃತವರ್ಮಾದಿಗಳು, ಕುರು ಸೋದರರು ಮತ್ತು ಮೈತ್ರಿಯಾಗಿ ಜೊತೆಯಾಗಿ ಉಳಿದಿರುವ ಮಿತ್ರ ರಾಜ ಪ್ರಮುಖರು ಸಮಾಲೋಚನೆಯ ಭಾಗವಾಗಿದ್ದಾರೆ‌. ಈ ರಾತ್ರಿ ಮಹತ್ವದ ನಿರ್ಣಯಕ್ಕೆ, ಸೂಕ್ತ ನಾಯಕನ ಆಯ್ಕೆಗಾಗಿ ಚರ್ಚಾ ನಿರತವಾಗಿ ಕೌರವ ಪಕ್ಷವನ್ನು ವ್ಯಸ್ಥಗೊಳಿಸಿಟ್ಟಿದೆ. ಎಲ್ಲರ ಮನದಲ್ಲೂ ಮುಂದಿನ ಕುರು ಸೇನಾ ನಾಯಕ ಯಾರಾಗಬಹುದು ಎಂಬ ಕೌತುಕ ಕಾತರವಾಗಿದೆ.

ಮುಂದುವರಿಯುವುದು…

spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page