ಭಾಗ 38
ಭರತೇಶ್ ಶೆಟ್ಟಿ, ಎಕ್ಕಾರ್
ಚಿತ್ರಾಂಗದ ಹಸ್ತಿನಾಪುರದ ಪಟ್ಟಾಭಿಷಿಕ್ತ ಮಹಾರಾಜನಾದ. ಎಳೆಯ ಹರೆಯದವನು. ಹಾಗಾಗಿ ಆಡಳಿತದ ಅನುಭವವಿರದ ಮಹಾರಾಜನ ಪರವಾಗಿ ಭೀಷ್ಮನೇ ರಾಜಕೀಯದ ಸರ್ವ ವಿಚಾರಗಳನ್ನೂ ನೋಡಿಕೊಂಡು ಸಂಭಾಳಿಸುತ್ತಿರಬೇಕಾಯಿತು. ಹೀಗಿರಲು ಚಿತ್ರಾಂಗದನಿಗೊಂದು ವೇದನೆ ನಾನು ಹೆಸರಿಗೆ ಮಾತ್ರ ರಾಜ, ರಾಜ್ಯಭಾರವೆಲ್ಲ ಭೀಷ್ಮನದ್ದೆಂದು. ಈ ರೀತಿಯ ಸ್ಥಿತಿ ಇರುವಾಗ ಒಂದು ದಿನ ಮನದ ಬೇಗುದಿ ಕಳೆಯಲು ಬೇಟೆಗೆಂದು ಚಿತ್ರಾಂಗದ ಹೊರಟು ಹೋದ. ಕೆಲವು ದಿನಗಳಾದರೂ ಬೆಂಗಾವಲಿಗೆ ಹೋದ ಸೈನ್ಯ, ರಾಜ ಯಾರ ಸುಳಿವೂ ಇಲ್ಲ. ಏನಾಗಿದೆ ಎಂದು ತಿಳಿಯಲು ಕಳುಹಿದ ಗೂಢಾಚಾರರು ಹೇಳಿದ ವಿಚಾರವೇನೆಂದರೆ, ರಾಜಾ ಚಿತ್ರಾಂಗದ ಮತ್ತು ಅದೇ ಹೆಸರಿನ ಗಂಧರ್ವ ಚಿತ್ರಾಂಗದನಿಗೂ ಯಾವುದೋ ವಿಚಾರಕ್ಕೆ ಕಾಡಿನಲ್ಲಿ ವಿವಾದವಾಗಿ, ಯುದ್ದವಾಗಿ ಪರಿಣಾಮ ಸೈನ್ಯ ಸಮೇತ ಯಾರೊಬ್ಬರನ್ನೂ ಉಳಿಸದೆ ಗಂಧರ್ವ ಕೊಂದಿದ್ದಾನೆಂದು. ಸುದ್ದಿ ತಿಳಿದ ಭೀಷ್ಮರು ಸಶಕ್ತ ಸೈನ್ಯ ಒಗ್ಗೂಡಿಸಿ ಗಂಧರ್ವಲೋಕದ ಮೇಲೆ ದಂಡೆತ್ತಿ ಹೋದರು. ಭೀಷ್ಮ ಹೊರಟರೆ ಎದುರಿಸುವರ್ಯಾರು? ಯುದ್ದದಲ್ಲಿ ಮಂತ್ರಶರಗಳ ಮುಖೇನ ಗಂಧರ್ವರು ಸದೆ ಬಡಿಯಲ್ಪಟ್ಟರು. ಶರಣಾದ ಗಂಧರ್ವರನ್ನು ಕ್ಷಮಿಸಿ, ಅವರು ಸಲ್ಲಿಸಿದ ಅಮೂಲ್ಯ ಕಪ್ಪ ಕಾಣಿಕೆ ಸಮೇತ ಮರಳಿ ಹಸ್ತಿನೆಗೆ ಬಂದರು.
ಇಷ್ಟೆಲ್ಲಾ ಭೀಷ್ಮರಿಂದ ಪ್ರತಿಕಾರವಾಗಿ ಮಾಡಲ್ಪಟ್ಟರೂ ಸತ್ಯವತಿದೇವಿ ಪುತ್ರವಿಯೋಗದ ದುಃಖದಿಂದ ಹೊರ ಬರಲಿಲ್ಲ. ರಾಜಮಾತೆಯನ್ನು ಸಂತೈಸಿ ಸಮಾಧಾನಿಸಿದ ಭೀಷ್ಮ, ಹಸ್ತಿನೆಯ ರಾಜ ಸಿಂಹಾಸನ ಬರಿದಾಗಿರಬಾರದು ಎಂದು ಕಿರಿಯವ ವಿಚಿತ್ರವೀರ್ಯನಿಗೆ ರಾಜ್ಯಾಭಿಷೇಕ ಮುಖೇನ ಪಟ್ಟ ಕಟ್ಟಿಸಿದನು. ಸತ್ಯವತಿ ರಾಜ ಮಾತೆಯಾಗಿಯೂ, ಭೀಷ್ಮರು ವಿಚಿತ್ರ ವೀರ್ಯನ ಪರವಾಗಿ ರಾಜ್ಯ ರಾಜಕಾರಣವನ್ನೂ ನೋಡಿಕೊಳ್ಳುತ್ತಿದ್ದರು.
ಹೀಗೆ ಸ್ವಯಂ ರಾಜನಾಗದಿದ್ದರೂ ರಾಜ ಮಾಡಬೇಕಾದ ಕರ್ತವ್ಯ ನಿಭಾಯಿಸುತ್ತಿದ್ದುದು ಭೀಷ್ಮ. ರಾಜಾ ವಿಚಿತ್ರವೀರ್ಯನಿಗೆ ಸಕಲ ಶಿಕ್ಷಣ, ಜ್ಞಾನ, ತಂತ್ರ, ದಂಡ ನೀತಿ, ಶಸ್ತ್ರ ಶಾಸ್ತ್ರ, ಆಡಳಿತ ಸೂಕ್ಷ್ಮಗಳನ್ನು ಬೋಧಿಸಿ ಆತನನ್ನು ಸಾಮ್ರಾಜ್ಯದ ದಕ್ಷ ಚಕ್ರವರ್ತಿಯಾಗಿ ರೂಪಿಸುವ ಪ್ರಯತ್ನಶೀಲನಾಗಿ ಭೀಷ್ಮ ಪ್ರಾಮಾಣಿಕ ಕರ್ತವ್ಯ ಪೂರೈಸುತ್ತಿದ್ದನು. ಹೀಗೆ ಸಂಬಂಧದಲ್ಲಿ ಅಣ್ಣನಾಗಿ ಹಿರಿಯವನಾದರೂ, ತ್ಯಾಗ ಕಾರಣದಿಂದ ಅಧಿಕೃತ ರಾಜನಲ್ಲದಿದ್ದರೂ ಪ್ರಜಾಪಾಲನೆ ಮಾಡುತ್ತಾ, ಹಸ್ತಿನೆಯ ಸಿಂಹಾಸನದ ರಕ್ಷಣೆಯ ನಿಯತ್ತಿನ ಆಳಾಗಿ ದುಡಿಯುತ್ತಿದ್ದುದು ಸತ್ಯ. ಅಭಿಷಿಕ್ತ ಮಹಾರಾಜ ವಿಚಿತ್ರವೀರ್ಯನಿಗೆ ರಕ್ಷಕನೂ ಗುರುವೂ ಆಗಿ ಭೀಷ್ಮಾಚಾರ್ಯರೆಂದೇ ಕರೆಯಲ್ಪಡುತ್ತಿದ್ದರು
ಮುಂದುವರಿಯುವುದು….
✍🏻ಭರತೇಶ್ ಶೆಟ್ಟಿ ಎಕ್ಕಾರ್