19.5 C
Udupi
Monday, December 29, 2025
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ 392

ಭರತೇಶ್ ಶೆಟ್ಟಿ , ಎಕ್ಕಾರ್

ಸಂಚಿಕೆ ೩೯೨ ಮಹಾಭಾರತ

“ಭಗವಾನರೇ! ಮಹಾ ಮಹಿಮಾನ್ವಿತರಾದ ಆಚಾರ್ಯ ಗುರುದ್ರೋಣರು ದೃಷ್ಟದ್ಯುಮ್ನನ ಮುಖೇನ ಹತರಾದದ್ದು ಈಗ ಗತ ಸಂಗತಿ. ಆದರೆ ಆ ಬಳಿಕ ನಾವು ಶತ್ರು ಸೈನ್ಯವಾದ ಕುರು ಸೇನೆಯ ಮೇಲೆ ಅಸಹಜ ರೀತಿಯ ಗೆಲುವನ್ನು ಸಾಧಿಸಿದೆವು‌. ಪರಿಣಾಮವಾಗಿ ಕುರು ಸೇನೆ ಇನ್ನಿಲ್ಲದಂತೆ, ಕ್ಷಾತ್ರ ಕುಲಕ್ಕೆ ಮಹಾ ಅಪಮಾನ ಸದೃಶವಾದ ರೀತಿಯಲ್ಲಿ ರಣರಂಗ ತೊರೆದು ಓಡಿ ಬದುಕಿಕೊಳ್ಳುವ ಯತ್ನ ನಿರತರಾದರು‌‌. ಅಂತಹ ಸಮಯದಲ್ಲಿ ನನಗೆ ಕೌತುಕಪ್ರದವಾಗುವ ರೀತಿಯ ಒಂದು ಘಟನೆ ನನ್ನ ಕಣ್ಮುಂದೆ ನಡೆಯತೊಡಗಿತು. ನಾನು ನನ್ನ ಕಣ್ಣುಗಳನ್ನು ಆ ಸಮಯ ನಂಬಲಾಗದೆ ಹೋದೆನು. ನಾನು ಯುದ್ದ ನಿರತನಾಗಿ ಸಾಗುತ್ತಿದ್ದ ಮಾರ್ಗದಲ್ಲಿ ಅಗ್ನಿಯ ಪ್ರದೀಪ್ತಿಗಿಂತಲೂ ಉತ್ಕೃಷ್ಟವಾದ ಪ್ರಭೆಯೊಂದು ನನ್ನ ಮುಂದೆ ಸಾಗುವುದನ್ನು ನೋಡಿದೆ. ಅಸಾಧಾರಣವಾದ ಮಹಾಪುರುಷನೊಬ್ಬ ಶೂಲವನ್ನೆತ್ತಿಕೊಂಡು ಯಾವ ದಿಕ್ಕಿಗೆಲ್ಲಾ ಆಕ್ರಮಿಸುತ್ತಿದ್ದನೋ ಅಲ್ಲೆಲ್ಲಾ ಪ್ರಳಯ ಸದೃಶ ವಿನಾಶ ಆಗುತ್ತಿತ್ತು. ರಣಾಂಗಣದಲ್ಲಿ ಇದ್ದವರೆಲ್ಲಾ ಅರ್ಜುನನಾದ ನಾನೇ ಸರ್ವನಾಶಗೈಯುತ್ತಿದ್ದೇನೆ ಎಂದು ಭ್ರಮೆಗೊಳಗಾಗುತ್ತಿದ್ದರು. ಆದರೆ ವಸ್ತು ಸ್ಥಿತಿ ಭಿನ್ನವಾಗಿತ್ತು. ಆ ಮಹಾಪುರುಷ ರುದ್ರನಂತೆ ವೈರಿಗಳ ನಾಶಗೈಯುತ್ತಾ ಸಾಗುತ್ತಿದ್ದ. ನಾನು ಅವನನ್ನು ಅನುಸರಿಸಿ ಅಂಗರಕ್ಷಕನಂತೆ ಹೋಗುತ್ತಿದ್ದೆ. ಯಥಾರ್ಥದಲ್ಲಿ ನನ್ನ ರಕ್ಷಣೆ ಆತನಿಗೆ ಅನಗತ್ಯವಾಗಿತ್ತು. ಭಗವಾನ್ ವ್ಯಾಸ ಮಹರ್ಷಿಗಳೇ, ನಾನು ನೋಡಿದ ಸೂರ್ಯನಿಗೆ ಸಮಾನವಾದ ಆ ತೇಜಸ್ವಿ ಸೇನೆಯಲ್ಲಿದ್ದವರ ಕಂಗಳಿಗೆ ಕಾಣದಷ್ಟು ಪ್ರಭಾಕರನಾಗಿದ್ದನು. ಅದ್ವಿತೀಯನೂ, ಅಪ್ರಮೇಯನೂ ಆಗಿದ್ದ ಶೂಲಪಾಣಿ ಯಾರು? ನಾನು ನೋಡಿ ಖಚಿತಪಡಿಸಿಕೊಂಡಂತೆ ಆತನ ಕಾಲುಗಳು ಭೂಮಿಯನ್ನು ಸ್ಪರ್ಶಿಸುತ್ತಿರಲಿಲ್ಲ. ಆಕಾಶದಲ್ಲಿ ನಡೆಯುತ್ತಾ ಸಂಹಾರಕ್ರಿಯೆ ನಿರತನಾಗಿದ್ದನು. ಆತನ ಕೈಯ ಒಂದು ಶೂಲ ಬೀಸಿದೊಡನೆ ಬೆಳೆದು ಸಾವಿರ ಶೂಲಗಳಾಗಿ ಚಿಗುರಿಕೊಂಡು ವ್ಯಾಪಿಸಿದಷ್ಟು ವಿಶಾಲ ಪ್ರದೇಶವನ್ನು ನಾಶಗೊಳಿಸುತ್ತಿದ್ದುದನ್ನು ಮೂಕವಿಸ್ಮಿತನಾಗಿ ಕಂಡಿದ್ದೇನೆ. ಈ ತೆರನಾದ ವಿಚಿತ್ರ ಯುದ್ದ ಸಾಗಿದಾಗ ನಿಂತು ಹೋರಾಡಿದ್ದರೆ ಕುರು ಪಾಳಯದ ಯಾರೇ ಆಗಿದ್ದರೂ ಸಾಯಲೇ ಬೇಕಾಗಿತ್ತು. ಆ ಕಾರಣದಿಂದ ಹೆದರಿ ಚದುರಿ ಕಂಡ ಕಡೆ ಪಲಾಯನಗೈಯದೆ ವಿಧಿಯಿಲ್ಲದಂತಾದ ಹೊತ್ತು ದುರ್ಯೋಧನ, ಕರ್ಣ, ಅಶ್ವತ್ಥಾಮ, ಕೃಪಾದಿಗಳು ಎತ್ತೆತ್ತಲೋ ಓಡಿ ಜೀವ ಉಳಿಸಿಕೊಂಡರು. ಮಹಾ ವಿಧ್ವಂಸ ಪ್ರಕಟಿಸಿದ ಆ ಮಹಾವೀರ ಯಾರಾಗಿರಬಹುದು? ತಿಳಿಯಲಾಗದ ನನ್ನ ಮನಸ್ಸು ಗೊಂದಲದ ಗೂಡಾಗಿದೆ. ಈ ನಿಗೂಢ ರಹಸ್ಯವನ್ನು ನಿಮ್ಮಿಂದ ತಿಳಿದು ಸಂದೇಹ ಪರಿಹರಿಸಿಕೊಳ್ಳುವ ಮನಸ್ಸು ನನ್ನದಾಗಿದೆ. ದಯವಿಟ್ಟು ಕೃಪೆದೋರಿ ಉದ್ದರಿಸಬೇಕು” ಎಂದು ಅರ್ಜುನ ಭಗವಾನ್ ವೇದವ್ಯಾಸರಲ್ಲಿ ಬೇಡಿಕೊಂಡನು.

ಅರ್ಜುನನಲ್ಲಿ ಅಂಕುರಿಸಿದ್ದ ಅಸಹಜವಾದ ಅನುಮಾನವನ್ನು ಅರ್ಥವತ್ತಾಗಿ ಅವಲೋಕಿಸಿ ವಿವರಿಸತೊಡಗಿದರು ” ಪಾರ್ಥಾ ಪ್ರಜಾಪತಿಗಳೆಲ್ಲರಿಗೂ ಮೊದಲಿಗನಾದ, ಭೂಲೋಕ ಭುವರ್ಲೋಕ ವ್ಯಾಪ್ ಸ್ವರೂಪನಾದ, ವರದನಾದ ಈಶಾನ, ಜಟಾಧರ, ತ್ರ್ಯಂಬಕ, ಮಹಾಭುಜ, ರೋದನ ಮೂಡಿಸುವ/ ಮುಕ್ತಗೊಳಿಸುವ ರುದ್ರ, ಶಿಖಾಯುಕ್ತ ಶಿಖಿ, ವಲ್ಕಲಧಾರ, ಚೀರವಾಸನಾದ, ಸ್ಥಾನುವಾದ, ಜಯಿಸಲು ಅಸಾಧ್ಯನಾದ, ಜಗದ ಉತ್ಪತ್ತಿಗೆ ಬೀಜ ಸ್ವರೂಪನಾದ, ವಿಶ್ವಮೂರ್ತಿಯಾದ, ವಿಶ್ವ ನಿಯಂತೃವಾದ, ಕರ್ಮಾಧ್ಯಕ್ಷನಾದ, ಪ್ರಭುವಾದ, ಮಂಗಳಕರನಾದ, ಸ್ವಯಂಭು ಶಂಭುವಾದ, ಭೂತೇಶನಾದ, ಯೋಗವೂ ಯೋಗೇಶ್ವರನೂ ಆದ, ಚಂದ್ರಶೇಖರನಾದ, ಭವನಾದ, ಭಯಂಕರನಾದ, ಭಕ್ತವತ್ಸಲನಾದ, ಕೃಪಾನಿಧಿಯಾದ ಮಹಾದೇವ ಪರಮೇಶ್ವರ, ಪಶುಪತಿ, ಮೃತ್ಯುಂಜಯ ಪಾರ್ವತೀಶ, ಪ್ರಮಥಗಣ ಸೇವಿತ, ಜಗದೀಶ್ವರನಾದ ಪರಶಿವನೇ ನೀನು ಕಂಡಿರುವ ಆ ಶೂಲ ಪಾಣಿ ಮಹಾಪುರುಷ.

ಭೂತೇಶನಾದ, ವಿಭುವಾದ ಶ್ರೀ ಶಂಕರನ ಪರಿಷದ್ಗಣಗಳು ನಾನಾವಿಧವಾದ ರೂಪಗಳಿಂದ ಪರಿಶೋಭಿಸುತ್ತಾರೆ. ಕುಳ್ಳರು, ಜಟಾಧಾರಿಗಳು, ಲಂಬೋದರರು, ಮುಂಡಿತ ಶಿರದವರು, ಮೋಟಾದ ಕುತ್ತಿಗೆಯುಳ್ಳವರು, ಬಹು ಶಿರವುಳ್ಳವರು, ವಿಕಾರ ಸ್ವರೂಪಿಗಳು, ದೀರ್ಘ ಕರ್ಣರು, ವಿರೂಪದ ಅಂಗಾಂಗವುಳ್ಳವರು, ದೀರ್ಘ ದಂತಿಗಳು ಹೀಗೆ ಭಯ ಸೃಷ್ಟಿಸಬಲ್ಲ ಕಾಯ – ಸ್ವರೂಪದ ಭೂತಗಣಗಳನ್ನು ತನ್ನ ಸುತ್ತ ಆಸ್ಥಾನದಲ್ಲಿ ಹೊಂದಿರುವ ಮಹಾರುದ್ರನನ್ನು ನೀನು ಕಂಡು ಪಾವನನಾಗಿರುವೆ.

ಮಹೇಶ್ವರನು ತೇಜಸ್ವಿಯಾದ ಪ್ರದೀಪ್ತಿಯಿಂದ ಕೋರೈಸುವ ಪ್ರಭೆಯುಳ್ಳ ಮಹಾಪುರುಷನಾಗಿ, ಶೂಲಪಾಣಿಯಾಗಿ, ಆತನ ಪರಮ ಭಕ್ತನಾದ ನಿನಗೆ ಸಹಾಯಿಯಾಗಿ ನಿನ್ನೆದುರು ಕೃಪಾಕರನಾಗಿ ಕಾಣಿಸಿಕೊಂಡಿದ್ದನು. ಆತನೇ ಇಳಿದು ಬಂದಾಗ ರುದ್ರಾಂಶ ಸಂಭೂತನಾದ ಅಶ್ವತ್ಥಾಮನಾಗಲಿ, ಮಹಾ ಧನುರ್ಧಾರಿ ಕರ್ಣನಾಗಲಿ, ಶಾರದ್ವತ ಕೃಪರಾಗಲೀ, ಮಹಾಮಲ್ಲ ಶಲ್ಯನಾಗಲಿ, ಛಲದಂಕಮಲ್ಲ ಕೌರವನಾಗಲಿ, ಕುಟೀಲ ನೀತಿ ಚತುರ ಶಕುನಿಯಾಗಲಿ ಇಲ್ಲಿ ನಿಲ್ಲಲಾಗದೆ, ಪ್ರಾಣಭಯದಿಂದ ಓಡಿದ ಕಾರಣ ಈಗ ಉಸಿರಾಡುತ್ತಿದ್ದಾರೆ.

ಪರಶಿವನನ್ನು ಸದಾ ಪೂಜಿಸುವ ಭಕ್ತರ ಬಳಿ ಬಂದು ಅವರ ಕಾರ್ಯವನ್ನು ತಾನೇ ಮಾಡಿ ಕೃಪೆತೋರುವ ಭಕ್ತರ ದಾಸನಾತ. ಯಾರು ಪರಮೇಷ್ಠಿ ಕೈಲಾಸಪತಿಯನ್ನು ಅನನ್ಯ ಭಕ್ತಿಯಿಂದ ನಿರಂತರ ಉಪಾಸನೆ ಮಾಡುತ್ತಾರೋ ಅಂತಹ ಭಕ್ತರಿಗೆ ತಾನು ಅಭೇದ್ಯ ಕವಚವಾಗುತ್ತಾನೆ. ಇಹ ಪರ ಎರಡರಲ್ಲೂ ಶ್ರೇಯಸ್ಸನ್ನು ಕರುಣಿಸುತ್ತಾನೆ. ಮರ್ತ್ಯಲೋಕದ ಯಾತ್ರೆ ಪೂರೈಸಿದ ಬಳಿಕವೂ ಉತ್ತಮಗತಿಯನ್ನು ಅನುಗ್ರಹಿಸುತ್ತಾನೆ. ಕೌಂತೇಯಾ! ನೀನು ಶಾಂತ ಸ್ವರೂಪನೂ, ಶಿತಿಕಂಠನೂ, ಪಿಂಗಲನೇತ್ರನೂ, ಕುಬೇರವರದನೂ, ಶೀಘ್ರ ಪ್ರಸಾದಿಯೂ, ಆಕಾಶವನ್ನು ಕೂದಲಿನಿಂದ ಆವರಿಸಿರುವ ವ್ಯೋಮಕೇಶನೂ, ಕಮನೀಯ ವಿಗ್ರಹನೂ, ಅನಂತಕೋಟಿ ಬ್ರಹ್ಮಾಂಡದ ಯಾಜಮಾನ್ಯ ಹೊಂದಿರುವವನೂ ಆದ ಹರ ಮಹಾದೇವನ ಭಕ್ತನಾಗಿರುವೆ. ನೀನೀಗ ಕೃತಜ್ಞತೆ, ಕೃತಾರ್ಥತೆಯಿಂದ ಆ ಯಜ್ಞಪತಿ ಈಶ್ವರನನ್ನು ಆರಾಧಿಸಿ ಧನ್ಯನಾಗು.” ಎಂದು ವಿಸ್ತೃತವಾಗಿ ಮಹಾದೇವ ಪರಮೇಶ್ವರನ ಲೀಲಾ ಮಹಿಮೆಯನ್ನು ಬಣ್ಣಿಸಿ ಮಾರ್ಗದರ್ಶನ ಮಾಡಿದರು.

ಅರ್ಜುನನು ಗುರುವಾಗಿ ಉಪದೇಶ, ಸದ್ಬೋಧನೆಯಿತ್ತು, ಮನದ ಭ್ರಾಂತಿ ನಿವಾರಿಸಿ, ದಿವ್ಯ ಜ್ಞಾನ ಜ್ಯೋತಿ ಬೆಳಗಿದ ಭಗವಾನ್ ವ್ಯಾಸರಿಗೆ ಭಕ್ತಿಯ ಪ್ರಣಾಮಗಳನ್ನು ಸಲ್ಲಿಸಿದನು. ನಂತರ ಬಹುವಾಗಿ ಶಿವಸ್ತೋತ್ರ ಮಾಡುತ್ತಾ, ಮಹಾದೇವನ ಸಾಧನೆಗಳನ್ನು ಸ್ತುತಿಸಿ ಕೊಂಡಾಡುತ್ತಾ, ಆತನ ಕಾರುಣ್ಯ ಕೃಪೆಯ ವಿಭೂತಿಗಳನ್ನು ಹೊಗಳುತ್ತಾ ಅನಂತವಾದ ಶಿವ ಮಹಾತ್ಮ್ಯೆಯನ್ನು ಪಠಿಸುತ್ತಾ ಸುದೀರ್ಘವಾಗಿ ಧ್ಯಾನಸ್ಥನಾಗಿ ನಮಿಸಿದನು.

ಆ ಬಳಿಕ ಭಗವಾನ್ ವ್ಯಾಸರ ಬಳಿ ಬಂದು “ಮಹರ್ಷಿಗಳೇ, ಧರ್ಮಯುದ್ಧಾರಂಭವಾಗಿ ಹದಿನೈದನೆಯದು ಇಂದಿನ ರಾತ್ರಿ. ನನಗಿದು ಪುಣ್ಯಪ್ರದವಾಗಲಿ. ಈ ತನಕ ನಾನು ತಿಳಿದಿರದ ದೇವೇಶ್ವರನ ಯಶೋಗಾಥೆಗಳನ್ನು ಕೃಪೆದೋರಿ ತಿಳಿಸಬೇಕು” ಎಂದು ಬೇಡಿಕೊಂಡನು.

ಮುಂದುವರಿಯುವುದು…

spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page