ಭಾಗ – 390
ಭರತೇಶ್ ಶೆಟ್ಟಿ, ಎಕ್ಕಾರ್

ಅರ್ಜುನನ ವಾಯುವೇಗದ ಶರ ತನ್ನ ಗುರಿಯಾಗಿದ್ದ ದೃಷ್ಟದ್ಯುಮ್ನನನ್ನು ರಥಸಹಿತವಾಗಿ ರಕ್ಷಿಸಿದೆ. ನೋಡುತ್ತಿದ್ದಂತೆಯೆ ಕೃಷ್ಣ ಸಾರಥ್ಯದ ಅರ್ಜುನ, ಭೀಮ, ಪುರುವಂಶೀಯ ವೃದ್ಧಕ್ಷತ್ರ, ಚೇದಿಯ ಯುವರಾಜ ಮತ್ತು ಮಾಲವ ದೇಶದ ರಾಜ ಸುದರ್ಶನ ವೃತ್ತಾಕಾರದಲ್ಲಿ ವ್ಯೂಹದಂತೆ ಅಶ್ವತ್ಥಾಮನನ್ನು ಆಕ್ರಮಿಸಿದರು. ಏಕಕಾಲದಲ್ಲಿ ಐವರ ಮೇಲೂ ಪ್ರಹಾರಗೈಯುತ್ತಾ ಯುದ್ಧ ಮುಂದುವರಿಸಿದ ದ್ರೌಣಿ ಕಿಂಚಿತ್ತೂ ಹಿಂಜರಿಯದೆ ಯುದ್ಧ ಮಾಡುತ್ತಿದ್ದಾನೆ. ಅಶ್ವತ್ಥಾಮನ ಯುದ್ಧದ ವೇಗ ಹೇಗಿತ್ತೆಂದರೆ ಆತನ ಬತ್ತಳಿಕೆಯಿಂದ ಬಾಣ ಸೆಳೆಯುವುದಾಗಲಿ, ಧನುಸ್ಸಿಗೆ ಬಾಣ ಹೂಡಿ, ಶಿಂಜಿನಿಗೆ ಜೋಡಿಸಿ ಆಕರ್ಣಾಂತವಾಗಿ ಎಳೆದು ಬಿಡುವುದಾಗಲಿ ಒಂದೂ ಯಾರಿಗೂ ಕಾಣದಷ್ಟು ಶೀಘ್ರ ಚಲನೆ ಹೊಂದಿತ್ತು. ಧನುಸ್ಸು ಕೊಳ್ಳಿಯ ಚಕ್ರದಂತೆ ಮಂಡಲಾಕಾರವಾಗಿ ತಿರುಗುವಂತೆ ಭ್ರಮೆ ಹುಟ್ಟಿಸುತ್ತಿತ್ತು. ಹೀಗೆ ಸ್ವಯಂ ಪಾರ್ಥನು ಎದುರಾಗಿ ಹೋರಾಡುತ್ತಿದ್ದರೂ ವೀರಾವೇಶದಿಂದ ಕಾದಾಡುತ್ತಿದ್ದಾನೆ.
ಆಗ ಅರ್ಜುನನನ್ನು ಯುದ್ಧಕ್ಕೆ ಆಹ್ವಾನಿಸಿ ವ್ಯಸ್ಥಗೊಳಿಸಲು ದುರ್ಯೋಧನ ಕರ್ಣಾದಿಗಳು ಆಕ್ರಮಿಸಿ ಗುರುಪುತ್ರನಿಂದ ವಿಮುಖಗೊಳಿಸಿದರು.
ಉಗ್ರನಾದ ಅಶ್ವತ್ಥಾಮ ವೇಗದ ಯುದ್ಧ ವೈಖರಿಯಿಂದ ಮಾಲವರಾಜ ಸುದರ್ಶನನ ಭುಜಗಳನ್ನೂ – ಶಿರವನ್ನೂ ಕತ್ತರಿಸಿ ಕೊಂದು ಬಿಟ್ಟನು. ಆ ಕೂಡಲೆ ತೀಕ್ಷ್ಣ ಶರದಿಂದ ಪುರುವಂಶಜ ವೃದ್ಧ ಕ್ಷತ್ರ ಪ್ರಯೋಗಿಸಿದ ಬಾಣವನ್ನು ತನ್ನ ಉತ್ತಮಾಸ್ತ್ರದಿಂದ ಸೀಳಿ, ಅದೇ ಶರ ಆತನ ಜತ್ರು ಪ್ರದೇಶವನ್ನು (ಕೊರಳು ಶರೀರಕ್ಕೆ ಜೋಡಣೆಯಾಗುವ ಪ್ರದೇಶ) ಸರಕ್ಕನೆ ಹೊಕ್ಕು ಕತ್ತರಿಸಿ ಬಿಟ್ಟಿತು. ನೀಲಕಮಲ ಮಾಲೆ ಭೂಷಿತ ಕಾಂತಿಯುಕ್ತನಾದ ಉತ್ತಮ ಅಸ್ತ್ರ ಸಂಪನ್ನನೂ, ವೀರನೂ ಆಗಿರುವ ಚೇದಿಯ ಯುವರಾಜನನ್ನು ಆತನ ರಥ, ಸಾರಥಿ, ಕುದುರೆಗಳ ಸಹಿತ ನಾಶಗೊಳಿಸಿದನು. ಹೀಗೆ ವೃದ್ಧಕ್ಷತ್ರ, ಸುದರ್ಶನ, ಚೇದಿಯ ಯುವರಾಜ ಗುರುಪುತ್ರನಿಂದ ಹತರಾದರು.
ಹೀಗಾಗುತ್ತಿರಲು ಭೀಮನಿಗೆ ಇನ್ನಿಲ್ಲದ ಕೋಪ ನೆತ್ತಿಗೇರಿ ರುದ್ರಭಯಂಕರ ಹೋರಾಟ ನೀಡಿದನು. ಭೀಮ ಅಶ್ವತ್ಥಾಮರ ಮಧ್ಯೆ ಬಿರುಸಿನ ಸಮರ ಸಾಗುತ್ತಿದೆ. ಭೀಮಸೇನ ಅತ್ಯುಗ್ರನಾಗಿ ಅಶ್ವತ್ಥಾಮನನ್ನು ಮೂರ್ಛಿತನನ್ನಾಗಿಸಿದ. ಆದರೆ ಆ ಕೂಡಲೆ ಸಾವರಿಸಿಕೊಂಡು ಎಚ್ಚೆತ್ತು ಕಾದಾಡಿದ ಗುರುಪುತ್ರ, ಭೀಮನ ಸಾರಥಿಯ ಶಿರಚ್ಛೇದನಗೈದು ರಥನಿಯಂತ್ರಣವಿಲ್ಲದ ಭೀಮನನ್ನು ಬಹುವಾಗಿ ಘಾತಿಸಿದನು. ಅನಿಯಂತ್ರಿತವಾಗಿದ್ದ ಕುದುರೆಗಳು ಗಾಯಗೊಂಡು ಹೆದರಿ ಎಲ್ಲೆಲ್ಲೋ ರಥ ಎಳೆದುಕೊಂಡು ಓಡಿದವು. ಭೀಮನು ಅಶ್ವತ್ಥಾಮನಿಂದ ಮುಕ್ತನಾಗಿ ಬದಿಗೆ ಸರಿದನು.
ಈಗ ಅಶ್ವತ್ಥಾಮನನ್ನು ತಡೆಯುವವರು ಯಾರೂ ಇಲ್ಲ. ಮತ್ತೆ ನೆನಪಾದುದು ತನ್ನ ಪ್ರೀತಿಯ ಪಿತನ ಮರಣಕ್ಕೆ ಕಾರಣರಾದ ಧರ್ಮಜ – ದೃಷ್ಟದ್ಯುಮ್ನರು. ಅವರನ್ನು ಹುಡುಕುತ್ತಾ ಸಾಗುವಾಗ ಎದುರಾದ ಪಾಂಚಾಲದ ಸೇನೆಯನ್ನು ಕಂಡು ಕ್ರುದ್ಧನಾಗಿ ಆ ಸೇನೆಯ ಮೇಲೆ ಪ್ರಳಯಾಂತಕನಾಗಿ ಎರಗಿದನು. ಶರವರ್ಷಗೈಯುತ್ತಾ ಪಾಂಚಾಲದ ಧ್ವಜ ಕಂಡ ರಥ, ಸೈನಿಕರೊಬ್ಬರನ್ನೂ ಬಿಡದೆ ಸಂಹರಿಸತೊಡಗಿದನು. ಹೆದರಿ ಓಡಿ ಬದುಕುವ ಯತ್ನದಲ್ಲಿದ್ದ ಸೈನಿಕರನ್ನೂ ಬಿಡದೆ ಬೆಂಬತ್ತಿ ಕೊಲೆ ಮಾಡಿದನು. ಈ ರುದ್ರನರ್ತನ ನಿರತ ಗುರುಪುತ್ರನಿಂದ ಪಾಂಚಾಲದ ಸಮಸ್ತ ಸೇನೆ ಹತವಾಗಿ ಪಾಂಡವರಿಗೆ ಅಪಾರ ನಷ್ಟ ಆಯಿತು.
ಇತ್ತ ಅರ್ಜುನ ತನಗೆದುರಾಗಿದ್ದ ಕರ್ಣ, ದುರ್ಯೋಧನರನ್ನು ಪರಾಜಯಗೊಳಿಸಿದನು. ಧನಂಜಯನೆದುರು ನಿಲ್ಲಲಾಗದೆ ಅವರಿಬ್ಬರೂ ಪಲಾಯನಗೈದು ಬದುಕಿಕೊಂಡರು.
ತಕ್ಷಣ ಅರ್ಜುನ ಮಾರಣ ಹೋಮ ನಿರತನಂತಾಗಿದ್ದ ಅಶ್ವತ್ಥಾಮನಿಗೆ ಎದುರಾಗಿ ಬಂದು “ಆಚಾರ್ಯ ಪುತ್ರನೇ! ನಿನ್ನ ಬಗ್ಗೆ ಗುರುಪುತ್ರನೆಂಬ ಗೌರವವಿತ್ತು. ಆದರೆ ಇಂದು ನಮ್ಮ ಸೇನೆಯ ಸರ್ವನಾಶಗೈಯುತ್ತಿರುವುದನ್ನು ಹೀಗೆ ಮುಂದುವರಿಸಲು ಬಿಡಲಾಗದು. ನಿನ್ನ ಬಳಿ ಯಾವ ಶಕ್ತಿ, ವಿಶೇಷ ಜ್ಞಾನ, ವೀರ್ಯ, ಪೌರುಷಗಳಿವೆಯೊ ಅದೆಲ್ಲವನ್ನೂ ನನ್ನ ಮುಂದೆ ಪ್ರಕಟಿಸು. ನಿನ್ನನ್ನೆದುರಿಸಲು ಅಸಮರ್ಥರಾಗಿರುವ ಪದಾತಿ ಸೈನಿಕರನ್ನು ಈ ರೀತಿ ಹಿಂಸಿಸಿ ಕೊಂದು ಪಾತಕಿಯಾಗುತ್ತಿರುವುದು ನಿನಗೂ ಶೋಭೆಯಲ್ಲ. ನನ್ನ ಬಂಧುವಾದ ದೃಷ್ಟದ್ಯುಮ್ನ ಮತ್ತು ಭ್ರಾತ ಯುಧಿಷ್ಠಿರ ನಿನ್ನ ಗುರಿಯಾಗಿದ್ದರೆ ಅವರನ್ನು ಎದುರಿಸಲು ನಾನು ಬಿಡಲಾರೆ. ವೈಯಕ್ತಿಕ ದ್ವೇಷಸಾಧನೆ ಮಾಡಲು ಹೊರಟಿರುವ ನಿನ್ನನ್ನು ನಾನೇ ದಂಡಿಸಿ ಪರಾಜಿತನನ್ನಾಗಿಸುವೆ” ಎಂದನು.
ನರ ನಾರಾಯಣರಂತೆ ಶೋಭಿಸುತ್ತಾ ಎದುರಾಗಿ ನಿಂತ ಕೃಷ್ಣಾರ್ಜುನರನ್ನು ಕಂಡು ಕಾಲಾಗ್ನಿಗೆ ಸಮಾನ ತೇಜಸ್ಸಿನಿಂದ ಪ್ರಜ್ವಲಿಸುತ್ತಿದ್ದ ಅಶ್ವತ್ಥಾಮನೂ ಎದುರಿಸಲು ಸಿದ್ಧನಾದ. ಅಶ್ವತ್ಥಾಮನೇನು ಸಾಮಾನ್ಯನೆ? ದ್ರೋಣಾಚಾರ್ಯರು ಸಾಕ್ಷಾತ್ ಪರಮೇಶ್ವರನನ್ನು ತಪಸ್ಸಿನ ಮೂಲಕ ಒಲಿಸಿ ವರಬಲದಿಂದ ಪುತ್ರನಾಗಿ ಪಡೆದ ವೀರಕುವರ. ಮುಕ್ಕಣ್ಣನಂತೆ ಹಣೆಯಲ್ಲಿ ತ್ರಿನೇತ್ರದ ಬದಲಾಗಿ ದಿವ್ಯಮಣಿ ಧಾರಣೆ ಮಾಡಿರುವ ಅತುಲ ವೀರಾಗ್ರಣಿ.
ಧನುರ್ವೇದದ ಉತ್ಕೃಷ್ಟ ಯುದ್ಧ ಪರಿಕ್ರಮಗಳಿಂದ ಅರ್ಜುನೊಡನೆ ಸಮರ ಸಾರಿದರೂ ಏನೂ ಮಾಡಲಾಗದೆ ಹೋದಾಗ, ದಿವ್ಯಾಸ್ತ್ರ ಪ್ರಯೋಗಗಳೂ ಆದವು. ಅವುಗಳೆಲ್ಲವೂ ಉಪಶಮನಗೊಂಡಾಗ ಕ್ರೋಧಿತನಾದ ಗುರುಪುತ್ರ ಸಾವಧಾನದಿಂದ ರಥದಲ್ಲಿ ಕುಳಿತು ಆಚಮನ ಮಾಡಿ, ದೇವತೆಗಳಿಗೂ ಖಂಡಿಸಲು ಅಸಾಧ್ಯವಾದ ದಿವ್ಯ ಆಗ್ನೇಯಾಸ್ತ್ರವನ್ನು ಆಹ್ವಾನಿಸಿದನು. ಶತ್ರುವೀರ ಹಂತಕನಾದ ದ್ರೌಣಿ ಧೂಮರಹಿತವಾಗಿ ಪ್ರಜ್ವಲಿಸುವ ಅಗ್ನಿಶಿರ ಅಸ್ತ್ರವನ್ನು ವ್ಯೋಮಕ್ಕೆ ಪ್ರಯೋಗಿಸಿದನು. ಪರಿಣಾಮ ಅರ್ಜುನನ ರಥದ ಮೇಲೆ ಬೆಂಕಿಯ ಮಳೆ ಆಗತೊಡಗಿತು. ಅರ್ಜುನನ ರಥದ ಮೇಲೆ ಮಾತ್ರವಲ್ಲದೆ ಸುತ್ತಲೂ ಹೋರಾಡುತ್ತಿದ್ದ ಸೈನಿಕರ ಮೇಲೂ ಅಗ್ನಿಯ ಮಳೆ ಧಾರಾಕಾರವಾಗಿ ಸುರಿಯತೊಡಗಿತು. ಪರಿಣಾಮ ಪಾಂಡವ ಸೇನೆಯ ಒಂದಕ್ಷೋಹಿಣಿ ಸೇನೆ ಸುಟ್ಟು ಭಸ್ಮವಾಗಿ ಹೋಯಿತು. ಎಲ್ಲೆಡೆ ತಾಳಲಾರದ ಉರಿ, ಅಗ್ನಿ ಜ್ವಾಲೆ. ಈ ವರ್ತುಲದ ಹೊರಗಿದ್ದ ಸೈನ್ಯ ನಿಲ್ಲಲಾಗದೆ ದೂರ ಓಡಿತು.
ಸುಟ್ಟು ಭಸ್ಮವಾಗಿದ್ದಾರೆ ಕೃಷ್ಣಾರ್ಜುನರು, ತನ್ನ ಕಾರ್ಯಸಾಧನೆಯಾಗಿದೆ ಎಂದು ಸಂತಸಗೊಂಡ ಅಶ್ವತ್ಥಾಮ, ಅಸ್ತ್ರ ಉಪಶಮನಗೊಂಡಾಗ ನೋಡಿದರೆ… ಕೃಷ್ಣಾರ್ಜುನರು ಇದ್ದ ಹಾಗೆಯೆ ತನ್ನ ಎದುರು ನಿಂತಿದ್ದಾರೆ. ಅವರಿಗೇನೂ ಆಗಿಲ್ಲ. ಅತೀವ ವ್ಯಥೆಗೊಳಗಾಗಿ ಯಾಕೆ ಹೀಗಾಯಿತೆಂದು ಯೋಚಿಸಲು ತೊಡಗಿದ್ದಾನೆ.
ಪೂರ್ಣ ಅರಣ್ಯ ಸುಟ್ಟು ಕರಕಲಾಗಿ ಹೋದರೂ, ಕೇವಲ ಒಂದು ವೃಕ್ಷ ಮಾತ್ರ ಒಂದೆಲೆಯೂ ಬಾಡದೆ ಉಳಿದಂತೆ ಕೃಷ್ಣಾರ್ಜುನರು ರಥ ಸಹಿತ ಸನ್ನದ್ಧರಾಗಿ ಯಥಾವತ್ತಾಗಿ ನಿಂತಿದ್ದಾರೆ.
ಹೀಗಿರಲು ಅಶ್ವತ್ಥಾಮನ ಮುಂದೆ ಅನಿರೀಕ್ಷಿತವಾಗಿ ಭಗವಾನ್ ವ್ಯಾಸರು ಪ್ರಕಟರಾದರು. ಅಶ್ವತ್ಥಾಮ ವ್ಯಾಸರನ್ನು ಕಂಡ ಕೂಡಲೆ ಧನುರ್ಬಾಣಗಳನ್ನು ಕೆಳಗಿರಿಸಿ ನಮಿಸಿ ಗೌರವ ಸಲ್ಲಿಸಿದನು. “ವತ್ಸಾ! ನಿನ್ನ ಮಹತ್ತರವಾದ ಸಾಧನೆಯಿಂದ ಕೃಷ್ಣಾರ್ಜುನರು ಯಾಕೆ ಮತ್ತು ಹೇಗೆ ಬದುಕುಳಿದಿದ್ದಾರೆ ಎಂದು ಅರಿಯಲಾಗದೆ ವ್ಯಥೆಗೊಳಗಾಗಿರುವೆಯಾ?” ಎಂದು ಪ್ರಶ್ನಿಸಿದರು.
ಮುಂದುವರಿಯುವುದು…





