ಭಾಗ – 389
ಭರತೇಶ ಶೆಟ್ಟಿ, ಎಕ್ಕರ್

ಸಂಚಿಕೆ ೩೮೯ ಮಹಾಭಾರತ
ಇತ್ತ ಹಸ್ತಿನಾವತಿಯಲ್ಲಿ ಧೃತರಾಷ್ಟ್ರನಿಗೆ ಅಶ್ವತ್ಥಾಮ ರುದ್ರಾವತಾರಿಯಾಗಿ ನಾರಾಯಣಾಸ್ತ್ರ ಪ್ರಯೋಗಿಸುವ ಹೊತ್ತು ನಾವು ಗೆದ್ದು ಬಿಟ್ಟೆವು ಎಂಬಂತೆ ಗರಿಗೆದರಿದ್ದ ಸಂತೋಷ ನಷ್ಟವಾಗಿ ಹೋಗಿದೆ. “ಸಂಜಯಾ! ಇನ್ನು ಮುಂದೇನಾಗಬಹುದು? ಆಸೆ ಹುಟ್ಟಿಸಿದ ಗುರುಪುತ್ರನ ಉನ್ನತ ಸಾಹಸವೂ ನಿಷ್ಕ್ರಿಯಗೊಂಡಿದೆಯಲ್ಲ?” ಎಂದು ಪ್ರಶ್ನಿಸಿದನು. ಆಗ ಸಂಜಯನು “ಮಹಾರಾಜಾ! ಅಶ್ವತ್ಥಾಮ ಸಾಮಾನ್ಯನಲ್ಲ. ವಿಶ್ವದ ಕ್ಷಾತ್ರ ಕುಲವೆಲ್ಲಾ ಒಂದೆಡೆ ಒಗ್ಗಟ್ಟಾಗಿ ನಿಂತರೂ ಪರಶುರಾಮರು ಈ ಹಿಂದೆ ನಡೆಸಿದ ಕ್ಷಾತ್ರ ಯಜ್ಞದಂತೆ ಸವರಿ ಬಿಡಬಲ್ಲ ಸಾಹಸವಂತ” ಎಂದನು. ಆಗ ಮತ್ತೆ ಧೃತರಾಷ್ಟ್ರನ ಕುರುಡು ಕಣ್ಣುಗಳಲ್ಲಿ ಜಯದ ಆಸೆ ಚಿಗುರಿತು. ಸಂಜಯ ಮುಂದುವರಿಸುತ್ತಾ “ಆದರೆ….” ಎಂದಾಗ, “ಏನು ಆದರೆ?” ಎಂದು ಆತಂಕಕ್ಕೊಳಗಾದನು. “ಆದರೆ, ಇಲ್ಲಿ ಎದುರಾಳಿಗಳಾಗಿ ಸ್ಥಿತರಾಗಿರುವವರು ಕೃಷ್ಣಾರ್ಜುನರು. ಇವರಿಬ್ಬರು ಯಾವ ರೀತಿಯ ಸಾಹಸ, ರಣತಂತ್ರ ಪ್ರಯೋಗಿಸಿದರೂ ಭೇದಿಸಿ ಛೇದಿಸಬಲ್ಲ ಸಮರ್ಥರಾಗಿದ್ದಾರೆ. ಈಗಾಗಲೆ ಸೇನಾಪತಿಗಳಾದ ಆಚಾರ್ಯ ಭೀಷ್ಮ – ದ್ರೋಣರೂ ಸಾಮಾನ್ಯರಾಗಿರಲಿಲ್ಲ ಎಂಬುವುದು ನಮಗೆ ತಿಳಿದ ವಿಚಾರವಲ್ಲವೆ” ಎಂದಾಗ ಧೃತರಾಷ್ಟ್ರ ಕುಸಿದು ಕುಳಿತನು.
ಕುರುಜಾಂಗಣದಲ್ಲಿ ದ್ರೋಣ ಪುತ್ರ ಅಶ್ವತ್ಥಾಮ ಕ್ರುದ್ಧನಾಗಿ “ದುರ್ಯೋಧನಾ! ವೀರರಾದವರಿಗೆ ಮರಣ ಮತ್ತು ಪರಾಜಯ ಎರಡೂ ಅಪಶ್ರೇಯಸ್ಕರ. ಇವೆರಡರಲ್ಲಿ ಸಾವು ಉತ್ತಮ. ಪರಾಜಯ ಅತಿ ನಿಕೃಷ್ಟವಾದುದು. ಇಂತಹ ಪರಾಜಯಕ್ಕೊಳಗಾಗಿ ಶರಣಾದ ಪಾಂಡವರು ನೀಚಾತಿ ನೀಚ ಸ್ಥಾನದಲ್ಲಿ ಸ್ಥಿತರಾಗಿದ್ದಾರೆ. ಮರ್ಯಾದೆ ಬಿಟ್ಟವರಾಗಿ ಈಗ ಮತ್ತೆ ಸೆಟೆದು ನಿಂತಿದ್ದಾರೆ. ಇನ್ನೂ ನನ್ನ ಬಳಿ ಮಂತ್ರಾಸ್ತ್ರಗಳಿವೆ. ಸಮಗ್ರವಾಗಿ ಸವರುವ ಯತ್ನ ವಿಫಲವಾಯಿತೆಂದು ವ್ಯಥೆಗೊಳಗಾಗಬೇಡ. ಒಬ್ಬೊಬ್ಬರಲ್ಲಿ ಹೋರಾಡಿ ಸಾವಿನ ಹಾದಿ ತೋರಿಸುವೆ, ನೋಡುತ್ತಿರು” ಎಂದನು.
ಇಷ್ಟಾಗುತ್ತಲೆ ಅಶ್ವತ್ಥಾಮ ದೃಷ್ಟದ್ಯುಮ್ನನನ್ನು ಹುಡುಕಿ ತುಡುಕಿದನು. ಮಹೋಗ್ರನಾಗಿ ಶರವರ್ಷಗೈದು ಆಕ್ರಮಿಸಿದನು. ಆಗ ದೃಷ್ಟದ್ಯುಮ್ನನೂ ಪ್ರತಿದಾಳಿ ಸಂಘಟಿಸಿ ಸಮರ್ಥವಾಗಿ ಹೋರಾಡತೊಡಗಿದನು. ಎಲ್ಲೆಡೆ ಬಿರುಸಿನ ಸಂಗ್ರಾಮ ಸಾಗುತ್ತಿದೆ. ಪ್ರಮುಖರಾದ ಕರ್ಣಾರ್ಜುನ, ಕೃತವರ್ಮ – ನಕುಲ, ಯುಧಿಷ್ಟಿರ – ಶಲ್ಯ, ಸಹದೇವ – ಶಕುನಿ, ದುರ್ಯೋಧನ – ಭೀಮ ಹೀಗೆ ಎಲ್ಲೆಡೆ ಪರಸ್ಪರ ಭೀಕರ ಹೋರಾಟ ಸಾಗುತ್ತಿದೆ.
ದೃಷ್ಟದ್ಯುಮ್ನ ಅಶ್ವತ್ಥಾಮರ ಮಧ್ಯೆ ಅತ್ಯುಗ್ರ ಸಮರ ಸಾಗುತ್ತಿದೆ. ಒಬ್ಬನು ಇನ್ನೊಬ್ಬನಿಗೆ ತಾನೇನು ಕಡಿಮೆ ಎಂಬಂತೆ ಸಮಬಲದ ಕದನ ಸಾಗುತ್ತಿರುವಾಗ ದೃಷ್ಟದ್ಯುಮ್ನನ ಸಾರಥಿಯನ್ನು ಕೊಂದು, ರಥವನ್ನು ಧ್ವಂಸಗೊಳಿಸಿ ಬಿಟ್ಟನು ಅಶ್ವತ್ಥಾಮ. ಪದಾತಿಯಾಗಿ ನೆಲದ ಮೇಲೆ ನಿಂತು ಸ್ವರಕ್ಷಣೆ ನಿರತನಾದ ದ್ರುಪದ ಪುತ್ರ ಹೀನಾಯ ಸ್ಥಿತಿಯಲ್ಲಿ ಗಾಯಗೊಂಡಿರುವ ಹೊತ್ತು ಸಾತ್ಯಕಿ ಬಂದು ಅಶ್ವತ್ಥಾಮನಿಗೆ ಯುದ್ಧಾಹ್ವಾನವಿತ್ತು ಪಾಂಡವ ಸೇನಾಪತಿಯನ್ನು ರಕ್ಷಿಸಿದನು. ಸಾತ್ಯಕಿ – ಅಶ್ವತ್ಥಾಮರ ಮಧ್ಯೆ ಬಿರುಸಿನ ಹೊಯ್ದಾಟ ಶುರುವಾಗಿ ಪ್ರಳಯಾಂತಕರಂತೆ ಕಾದಾಡತೊಡಗಿದರು. ಭೀಕರ ರಣವಿದ್ಯಾ ಕೌಶಲ್ಯದಿಂದ ಸಾಗಿದ ಸಮರದಲ್ಲಿ, ಸಾತ್ಯಕಿ ಮೇಲುಗೈ ಸಾಧಿಸಿದ. ಅಶ್ವತ್ಥಾಮನ ಧನುಸ್ಸನ್ನು ಕತ್ತರಿಸಿ ಆತನ ವಕ್ಷಸ್ಥಳವನ್ನು ಗುರಿಯಾಗಿ ತೀಕ್ಷ್ಣ ಶರ ಪ್ರಯೋಗಿಸಿದನು. ಎದೆ ಕವಚ ಸೀಳಿ ನಾಟಿದ ಶರ ಆಳಕ್ಕೆ ಹೊಕ್ಕಿತು. ಆ ಕೂಡಲೆ ಸಾರಥಿಯನ್ನು ಕೊಂದು, ರಥವನ್ನೂ ಛಿದ್ರಗೊಳಿಸಿ ಅಶ್ವತ್ಥಾಮನ ಮೇಲೆ ಉಗ್ರವಾಗಿ ಪ್ರಹರಿಸಿದನು. ಗುರುಪುತ್ರನ ಸ್ಥಿತಿಯನ್ನು ನೋಡಿದ ಕೃಪಾಚಾರ್ಯ, ಕೃತವರ್ಮ, ವೃಷಸೇನ, ದುಶ್ಯಾಸನಾದಿಗಳು ಸಾತ್ಯಕಿಯ ಮುಂದೆ ಅಶ್ವತ್ಥಾಮನಿಗೆ ಆವರಣದಂತೆ ಸುತ್ತುವರಿದು ಯುದ್ದಾಹ್ವಾನ ನೀಡಿದರು. ಒಬ್ಬರಾದ ನಂತರ ಒಬ್ಬರು ಸಾತ್ಯಕಿಯ ಮೇಲೆ ವಿರಾಮ ನೀಡದೆ ಆಕ್ರಮಣ ಮಾಡತೊಡಗಿದರು. ಎಳ್ಳಿನಿತೂ ಅಳುಕದ ಸಾತ್ವತ ಶೈನೇಯ ಸಾತ್ಯಕಿ ಪ್ರತಿಯೊಬ್ಬರಿಗೂ ಪ್ರಬಲ ಉತ್ತರ ನೀಡಿ ಹೋರಾಡುತ್ತಾ ಅವಕಾಶ ಸಾಧಿಸಿ ಕೃಪ, ಕೃತವರ್ಮ, ವೃಷಸೇನ, ದುಶ್ಯಾಸನ ಈ ನಾಲ್ಕು ಮಹಾರಥಿಗಳನ್ನೂ ಘಾತಿಸಿದನು. ದಿವ್ಯಾಸ್ತ್ರ ಪ್ರಯೋಗಿಸಿ ರಥರಹಿತರನ್ನಾಗಿ ಮಾಡಿದನು. ಪರಾಜಿತರಾದ ನಾಲ್ವರೂ ಪ್ರಾಣರಕ್ಷಣೆಗಾಗಿ ಹರಸಾಹಸ ಪಡುತ್ತಿರುವಾಗ, ಚೇತರಿಸಿಕೊಂಡನು ದ್ರೋಣ ಪುತ್ರ ಅಶ್ವತ್ಥಾಮ. ಪಿತನ ಮರಣ ದುಃಖದಿಂದ ಪೀಡಿತನಾಗಿ ಅತಿ ಎಂಬಷ್ಟು ಕ್ರೋಧಾವೇಶ ಪೂರಿತನಾಗಿ ಎದುರಾದನು. ಸಾತ್ಯಕಿಯ ಸತ್ವ ಪರೀಕ್ಷೆಯೊ ಎಂಬಂತೆ ಉತ್ಕೃಷ್ಟ ಕದನ ಸಾಗತೊಡಗಿತು. ಸಾತ್ವತನೂ ಮಹೋಗ್ರನಾಗಿ ಅಶ್ವತ್ಥಾಮನಿಂದ ಪುಂಖಾನುಪುಂಖವಾಗಿ ಪ್ರಯೋಗಿತವಾಗ ಶರವರ್ಷವನ್ನು ಖಂಡಿಸುತ್ತಾ ಹೋರಾಡಿ ಮತ್ತೆ ದ್ರೌಣಿಯನ್ನು ಪರಾಜಿತನನ್ನಾಗಿಸಿದನು. ರಥ ಹೀನನಾಗಿ, ಸಾತ್ಯಕಿಯ ಎದುರು ನಿಲ್ಲಲಾಗದೆ ಹಿಂಜರಿಯ ಬೇಕಾಯಿತು. ಮತ್ತಷ್ಟು ಉಗ್ರನಾದ ಸಾತ್ಯಕಿ ಕುರುಸೇನೆಯ ಮೇಲೆ ವಿಜ್ರಂಭಿಸುತ್ತಾ ದಾಳಿಗೈದು ಶಕುನಿಯನ್ನು ಪರಾಜಯಗೊಳಿಸಿ ಆತನ ರಕ್ಷಣೆಗಿದ್ದ ಐವತ್ತು ಸಹಸ್ರ ಅಶ್ವಾರೂಢ ಸೈನಿಕರನ್ನು ನಿರ್ನಾಮಗೊಳಿಸಿದನು. ಕೃಪಾಚಾರ್ಯನನ್ನೂ ಸೋಲಿಸಿ ಅವರ ಬೆಂಗಾವಲಿಗಿದ್ದ ಹದಿನೈದು ಸಹಸ್ರ ಗಜಸೇನೆಯನ್ನೂ ಸವರಿದನು. ವೃಷಸೇನನನ್ನು ಮಣಿಸಿ ಆತನ ಜೊತೆಗಿದ್ದ ಬಹಳಷ್ಟು ಸೇನೆಯನ್ನು ನಾಶಗೈದನು. ಸಾತ್ಯಕಿಯ ಅತ್ಯುನ್ನತ ರೀತಿಯ ಪರಾಕ್ರಮ ಕಂಡು ಹರ್ಷಗೊಂಡ ಪಾಂಡವ ಸೇನೆ ಶಂಖನಾದಗೈದು ಸಾತ್ಯಕಿಯ ವಿಕ್ರಮವನ್ನು ಸಂಭ್ರಮಿಸತೊಡಗಿತು.
ಆಗ ಮತ್ತೆ ಚೇತರಿಸಿಕೊಂಡು ಬಹಳಷ್ಟು ಶಸ್ತ್ರ ಜಮಾವಣೆಯೊಂದಿಗೆ ಹೊಸದಾದ ಮತ್ತೊಂದು ರಥವೇರಿ ಬಂದ ಅಶ್ವತ್ಥಾಮ ದೃಷ್ಟದ್ಯುಮ್ನನನ್ನು ಹುಡುಕುತ್ತಾ ಮುಂದುವರಿದಾಗ ಮತ್ತೆ ಸಾತ್ಯಕಿ ಅಶ್ವತ್ಥಾಮನಿಗೆ ಎದುರಾದನು. ಆಗ ಅಶ್ವತ್ಥಾಮ ಮಹಾ ಪ್ರತಿಜ್ಞೆ ಮಾಡಿದನು “ಶೈನೇಯಾ! ನೀನು ಪಾಂಚಾಲದ ಸೇನೆ ಮತ್ತು ಪಾರ್ಷತ ದೃಷ್ಟದ್ಯುಮ್ನನಿಗೆ ರಕ್ಷಕನಾಗಿ ನಿಂತು ಸಿಂಹಸ್ವಪ್ನನಾಗಿ ಹೋರಾಡುತ್ತಿರುವೆ. ಇದೊ ನಾನಾಡುತ್ತಿರುವ ಪ್ರತಿಜ್ಞೆಯನ್ನು ಕೇಳಿಕೋ! ಗುರುಹಂತಕನಾದ ದೃಷ್ಟದ್ಯುಮ್ನನನ್ನೂ ಸಮಸ್ತ ಪಾಂಚಾಲ ಸೇನೆಯನ್ನೂ ಇಂದಿನ ದಿನಾಂತ್ಯದೊಳಗೆ ಸರ್ವನಾಶಗೊಳಿಸದೆ ಬಿಡಲಾರೆ. ಈ ಮಾತನ್ನು ನಾನು ಮಾಡಿರುವ ತಪಸ್ಸು ಮತ್ತು ಸತ್ಯದ ಮೇಲೆ ಆಣೆಯಿಟ್ಟು ಹೇಳುತ್ತಿದ್ದೇನೆ. ಸಮಸ್ತ ಪಾಂಚಾಲರು ನಾಶವಾಗದೆ ನನಗೆ ಸಮಾಧಾನವಾಗದು. ಮಹಾ ಪರಾಕ್ರಮಿಗಳಾದ ಪಾಂಡವ, ಯಾದವ – ವೃಷ್ಣಿ ಮತ್ತು ಸೋಮಕರೆಲ್ಲ ಸೇರಿ ಒಮ್ಮೆಲೆ ನನಗೆದುರಾದರೂ ಈಗ ನನ್ನ ಇಚ್ಚೆ ಪೂರೈಸದೆ ಮರಳಲಾರೆ. ಇದು ನನ್ನ ಸಮಸ್ತ ಅಸ್ತ್ರಗಳನ್ನು ಮುಟ್ಟಿ ಮಾಡುತ್ತಿರುವ ಶಪಥ. ಸಾಧ್ಯವಾದರೆ ತಡೆಯಿರಿ” ಎಂದನು.
“ಮಾತಿಗಿಂತ ಕೃತಿ ಮೇಲು. ಪಾಂಡವ,ಸೋಮಕರ ( ಸೋಮಕ -ದ್ರುಪದನ ವಂಶ) ವಿಚಾರ ಮತ್ತೆ ನೋಡಿಕೋ. ಮೊದಲು ಸಾಹಸವಿದ್ದರೆ ನನ್ನನ್ನು ಎದುರಿಸು.” ಎಂದನು ಸಾತ್ಯಕಿ. ಇವರಿಬ್ಬರ ಮಧ್ಯೆ ಮಹೋನ್ನತ ಎನ್ನಬಹುದಾದ ರೀತಿಯಲ್ಲಿ ವೇಗವೂ, ರೋಷವೂ ಮಿಳಿತವಾದ ರೌದ್ರಪರಾಕ್ರಮದ ಹೋರಾಟ ಸಾಗತೊಡಗಿತು. ಅಶ್ವತ್ಥಾಮ ತೋರಿದ ಅತುಲ ವಿಕ್ರಮಗಳೆಲ್ಲವೂ ಸಮರ್ಥವಾಗಿ ಸಾತ್ಯಕಿಯ ಸಾಮರ್ಥ್ಯದೆದುರು ಸಾಧನೆ ಮಾಡದೆಬಉಳಿದಾಗ ದಿವ್ಯ ಶರವೊಂದನ್ನು ಸೆಳೆದು ಮಂತ್ರಪೂರಿತವಾಗಿ ಸೂರ್ಯನ ತೀಕ್ಷ್ಣ ಕಿರಣದಂತೆ ಪ್ರಜ್ವಲಿಸುವ ಬಾಣವನ್ನು ಪ್ರಯೋಗಿಸಿದನು. ಆ ಮಂತ್ರಾಸ್ತ್ರ ಗುರಿ ಸಾಧಿಸಿ, ಅಭೇದ್ಯವಾಗಿ ಉಳಿದಿದ್ದ ಸಾತ್ಯಕಿಯ ಲೋಹ ಕವಚವನ್ನು ಸೀಳಿ ಇಬ್ಭಾಗವಾಗಿ ಹಾರಿಸಿತು. ಶರೀರವನ್ನು ಹೊಕ್ಕು ಬೆಂಗಡೆಯಿಂದ ಹೊರ ನುಸುಳುತ್ತಾ ರಥದಿಂದ ಬೀಳಿಸಿತು. ಸ್ಮೃತಿ, ಮತಿಹೀನನಾಗಿ ಬಿದ್ದನು. ಸಾತ್ಯಕಿಯ ಎದೆಯಿಂದ ರಕ್ತ ಕಾರಂಜಿಯಂತೆ ಚಿಮ್ಮುತ್ತಾ ಬಸಿದು ಹರಿದು ಹೋಗುತ್ತಿದೆ. ಸಾತ್ಯಕಿಯನ್ನು ಆ ಸ್ಥಿತಿಯಲ್ಲಿ ಬಿಟ್ಟು ತನ್ನ ಗುರಿಯಾದ ದೃಷ್ಟದ್ಯುಮ್ನನತ್ತ ರಥ ಹಾರಿಸಿದನು. ಗುರುಪುತ್ರ ದ್ರೌಣಿ ಮೊದಲೆ ಕ್ರುದ್ಧನಾಗಿದ್ದು, ಎದುರಾದ ದೃಷ್ಟದ್ಯುಮ್ನನನ್ನು ಕಂಡಕೂಡಲೆ ಮುಕ್ಕಣ್ಣ ರುದ್ರನಂತೆ ಭಯಂಕರನಾದನು. ನಿಮೇಷ ಮಾತ್ರದಲ್ಲಿ ಹಗ್ಗದಂತೆ ಒಂದಕ್ಕೊಂದು ತಾಕಿಕೊಂಡು ಹೋಗುವ ರೀತಿ ಬಾಣ ಪ್ರಯೋಗಿಸಿದನು. ಶೀಘ್ರಾತಿಶೀಘ್ರವಾಗಿ ಬರುತ್ತಿರುವ ಶರಗಳನ್ನು ಸಾವರಿಸಿಕೊಂಡು ಎದುರಿಸಲಾಗದೆ ದೃಷ್ಟದ್ಯುಮ್ನ ಬಹುವಾಗಿ ಗಾಯಗೊಂಡನು. ದೃಷ್ಟದ್ಯುಮ್ನನ ಅಂಗಾಗಗಳು ಗಾಯಗೊಂಡು ಕಳಾಹೀನನಾದನು. ಆ ಕೂಡಲೆ ಕ್ಷಣಾರ್ಧವೂ ವಿರಮಿಸದ ಅಶ್ವತ್ಥಾಮ ದೃಷ್ಟದ್ಯುಮ್ನನ ಹಣೆಗೆ ಗುರಿಯಾಗಿ ತೀಕ್ಷ್ಣ ಶರವೊಂದನ್ನು ಸೆಳೆದು ಪ್ರಯೋಗಿಸಿದನು. ಖಂಡಿಸುವುದರೊಳಗಾಗಿ ಅತಿವೇಗದಿಂದ ನುಗ್ಗಿದ ಹರಿತ ಶರ ದೃಷ್ಟದ್ಯುಮ್ನನ ಹಣೆಗೆ ಚುಚ್ಚಿ ನುಗ್ಗಿತ್ತು. ಕಣ್ಣುಗಳ ಮೇಲೆ ಧಾರಾಕಾರವಾಗಿ ಹರಿದಿಳಿದ ರಕ್ತ ಸುತ್ತ ಕೆಂಪುವರ್ಣ ಬಿಟ್ಟು ಬೇರೇನೂ ಕಾಣಿಸದಂತೆ ಮಾಡಿತು. ಕುಸಿಯತೊಡಗಿದ ದ್ರುಪದ ಪುತ್ರನ ತೋಳುಗಳ ಬಲ ಸಾಲದೆ ಧನುರ್ಬಾಣಗಳೂ ಕೆಳಗೆ ಜಾರಿ ಬಿದ್ದವು. ಧ್ವಜಕಂಬವನ್ನು ಆಧರಿಸುವ ಯತ್ನದಲ್ಲಿ, ರಥಪೀಠವನ್ನು ಆಸನವನ್ನಾಗಿಸಲಾರದೆ ಬಿದ್ದು ಮಲಗಿಕೊಂಡನು. ಇಷ್ಟಾಗುತ್ತಲೆ ರಥ ಸಹಿತನಾಗಿ ತನ್ನ ಪಿತನ ಹಂತಕನನ್ನು ಸುಟ್ಟು ಬಿಡುವೆನೆಂದು ಅಶ್ವತ್ಥಾಮ ರಥವನ್ನು ಗುರಿಯಾಗಿಸಿ ಶರ ಪ್ರಯೋಗಿಸಿದಾಗ ಆ ಬಾಣ ರಥವನ್ನು ಸಂಘರ್ಷಿಸುವ ಮೊದಲು ಕತ್ತರಿಸಲ್ಪಟ್ಟಿತು. ಯಾರೆಂದು ಅಶ್ವತ್ಥಾಮ ತಿರುಗಿ ನೋಡಿದರೆ…
ಮುಂದುವರಿಯುವುದು…





