ಭಾಗ – 387
ಭರತೇಶ್ ಶೆಟ್ಟಿ, ಎಕ್ಕಾರ್

ಸಹದೇವ ರಥದಿಂದಿಳಿದು ಬರುತ್ತಿದ್ದಂತೆಯೆ ಅತ್ತ ಕೃಷ್ಣ ಮತ್ತು ಧರ್ಮರಾಯನೂ ಇಳಿದು ದೃಷ್ಟದ್ಯುಮ್ನ ಮತ್ತು ಸಾತ್ಯಕಿಯ ನಡುವೆ ಉತ್ಪನ್ನವಾದ ವಾಗ್ಯುದ್ದ ಮತ್ತು ಪರಸ್ಪರ ಘರ್ಷಣೆಯ ಉಪಶಮನಕ್ಕಾಗಿ ಮುಂದೆ ಬಂದರು.
ಸಹದೇವ ಮಿತ್ರಧರ್ಮದ ಬಗ್ಗೆ ಪ್ರಸ್ತಾಪಿಸುತ್ತಾ “ಮಿತ್ರ ಸಾತ್ಯಕಿ ಮತ್ತು ದೃಷ್ಟದ್ಯುಮ್ನ ನೀವು ಮಿತ್ರರಾಗಿ, ಬಂಧುಗಳಾಗಿ ನಮ್ಮೆಡೆಗೆ ಬಂದವರು. ಮೈತ್ರಿಯ ಮೂಲ ತತ್ವವೇ ಸಹನೆ ಮತ್ತು ಕ್ಷಮೆ. ಯಾರು ತಮ್ಮ ಮಿತ್ರನನ್ನು ಸಹಿಸಿ ಕ್ಷಮಿಸಲಾರರೋ ಅಂತಹ ಜನರ ಮಧ್ಯೆ ಮಿತ್ರತ್ವ ಉಳಿಯಲಾರದು ಪರಸ್ಪರ ನಾವು ನಮ್ಮನ್ನು ಆತ್ಮೀಯರೆಂದು ಒಪ್ಪಿದ ಬಳಿಕ ಮೈತ್ರಿಯಾಗಿದೆ. ಇಂತಹ ಸಂಬಂಧದಲ್ಲಿ ಏನೇ ಅಭಿಪ್ರಾಯ ವ್ಯತ್ಯಾಸ ಬಂದರೂ ಅದನ್ನು ಭಿನ್ನಾಭಿಪ್ರಾಯವಾಗಿ ಬೆಳೆಯಗೊಡಬಾರದು. ಸಮಾಲೋಚನೆಯೆ ಅಂತಹ ಸಮಸ್ಯೆಗೆ ಪರಿಹಾರ. ಸೂಕ್ತ ಸಮಯ ಮತ್ತು ಸ್ಥಳವನ್ನು ಆಧರಿಸಿ ಚರ್ಚೆಯ ಮುಖೇನ ಪರಿಹರಿಸಿಕೊಳ್ಳೋಣ. ಅದಕ್ಕಾಗಿ ಶಿಬಿರದಲ್ಲಿ ಸ್ಥಿತರಾಗಿ ನಾವು ನಮ್ಮೊಳಗೆ ಈ ಸಮಸ್ಯೆಗೆ ಸಮಾಲೋಚನೆ ಮಾಡಿ ಸರಿಗೊಳಿಸಬಹುದು. ಈಗ ಶಾಂತ ಚಿತ್ತರಾಗಿ, ವೈರ ಮರೆತುಬಿಡಿ ಎಂಬುವುದೇ ನನ್ನ ಪ್ರಾರ್ಥನೆ” ಎಂದು ಇಬ್ಬರಲ್ಲೂ ಕೈಮುಗಿದು ಬೇಡಿಕೊಂಡನು.
ಧರ್ಮರಾಯ ಮಧ್ಯೆ ಪ್ರವೇಶಿಸಿ “ಸಾವು ಪ್ರತಿಯೊಬ್ಬನಿಗೂ ಇದೆ. ರೋಗ ಮತ್ತು ಹತ್ಯೆ ಇಂತಹ ಸಾವು ಸಂಭವಿಸುವ ಕಾರಣಗಳಲ್ಲಿ ಸೇರಿದ ವಿಧಾನಗಳಾಗಿದೆ. ಆಂತರಿಕ ಕಲಹ ಎನ್ನುವುದು ರೋಗವಿದ್ದಂತೆ. ಪರಿಣಾಮ ಪಕ್ಷ ಎಂಬ ದೇಹ ಸಾವನ್ನು ಅಪ್ಪುವಂತಾಗುತ್ತದೆ. ನೀವು ನಮ್ಮ ಪಕ್ಷದ ಪ್ರಮುಖ ಅಂಗಗಳಾಗಿದ್ದೀರಿ. ನಿಮ್ಮಲ್ಲಿ ಯಾರೊಬ್ಬರಿಗೆ ಕೆಡುಕಾದರೂ ಪಾಂಡವ ಪಕ್ಷ ಎಂಬ ಶರೀರಕ್ಕೆ ಹಾನಿಯಾಗುತ್ತದೆ. ಹತ್ಯೆ ಆಗಬೇಕಾದರೆ ಬಾಹ್ಯ ಶತ್ರು ನಮ್ಮ ಮೇಲೆ ಆಕ್ರಮಣ ಮಾಡಬೇಕು. ಈಗ ಆಪತ್ತಿನ ಕಾಲ ನಮ್ಮ ಮುಂದಿದೆ. ಅಂತಹ ಆಪತ್ತನ್ನು ನಿವಾರಿಸಬೇಕಾದ ಮಹಾವೀರರಾದ ನೀವು ಸಂಕಟ ತಂದಿತ್ತರೆ ಪರಿಹಾರ ಹೇಗೆ ಸಾಧ್ಯವಾದೀತು? ಹಾಗಾಗಿ ನಮ್ಮೊಳಗಿನ ಕಲಹ ಮರೆತು ಒಗ್ಗಟ್ಟಾಗಿ ಹೋರಾಡಿ ಗೆಲ್ಲೋಣ. ನಿಮಗಿಬ್ಬರಿಗೂ ಪಾಂಡವರಾದ ನಮ್ಮ ಮೇಲೆ ಪ್ರೀತಿ ಅಭಿಮಾನಗಳಿದ್ದರೆ ಶಾಂತಚಿತ್ತರಾಗಿ ಕೌರವರ ವಿರುದ್ದ ಸಮರಕ್ಕೆ ಸಿದ್ಧರಾಗಿ” ಎಂದು ವಿನಂತಿ ಮಾಡಿದನು.
ಸಾತ್ಯಕಿ ಮತ್ತು ದೃಷ್ಟದ್ಯುಮ್ನನನ್ನು ಉದ್ದೇಶಿಸಿ ಶ್ರೀಕೃಷ್ಣ ಮಾತಿಗಾರಂಭಿಸಿದನು. ” ಯಾವುದೇ ಒಂದು ಸಂಘಟನೆ ಅಥವಾ ಪಕ್ಷಕ್ಕೆ ದೊಡ್ಡ ಸಮಸ್ಯೆಯೇ ಆಂತರಿಕ ಕಲಹ. ಯಾವಾಗ ಒಮ್ಮತ ಮುರಿದು ಭಿನ್ನಮತ ಸ್ಪೋಟವಾಗುತ್ತದೋ ಆಗ ವೈರಿ ಪರಿಶ್ರಮದಿಂದ ಗೆಲ್ಲಬೇಕಾದ ಅಗತ್ಯವಿಲ್ಲ, ಅಂತಹ ಪಕ್ಷ ತನ್ನ ಸೋಲನ್ನು ಅದ್ದೂರಿಯಿಂದ ಸ್ವಾಗತಿಸಲು ಸಿದ್ಧವಾಗಿರುತ್ತದೆ ಇನ್ನೂ ಒಂದು ವಿಚಾರ ತಿಳಿಸುತ್ತೇನೆ. ಮಾತು ಹಿತವಾಗಿದ್ದರೆ ಸಂಬಂಧವನ್ನು ಜೋಡಿಸುತ್ತದೆ. ಅದೇ ದುರ್ವಚನವಾಗಿ ಉದ್ವೇಗ, ದ್ವೇಷ, ಅಸೂಯೆ, ಕ್ರೋಧ, ಲೋಭಾದಿ ಭಾವಗಳ ಆಶ್ರಯ ಪಡೆದರೆ ಸಂಬಂಧದ ಕೊಂಡಿಯನ್ನು ಕತ್ತರಿಸುತ್ತದೆ. ನೀವೇ ಯೋಚಿಸಿ, ಸಾತ್ಯಕಿ – ದೃಷ್ಟದ್ಯುಮ್ನ, ನೀವಿಬ್ಬರೂ ಈ ತನಕ ಪರಸ್ಪರ ಗೌರವ, ಪ್ರೀತಿ, ಅನ್ಯೋನ್ಯತೆಯಿಂದ ಅದೆಷ್ಟೋ ಕಾಲ ಸೌಹಾರ್ದತೆಯಿಂದ ಬದುಕಿದ್ದೀರಿ. ಈಗ ಅಂತಹ ಯಾವುದೇ ಕಾರಣ ಇಲ್ಲದಿದ್ದರೂ ಕೇವಲ ನಿಮ್ಮಿಂದ ಉಚ್ಚರಿಸಲ್ಪಟ್ಟ ಮಾತಿನ ಕಾರಣದಿಂದ ಒಬ್ಬನ ಮೇಲೆ ಇನ್ನೊಬ್ಬ ವ್ಯಗ್ರನಾಗುವಂತಹ ಭಾವ ವ್ಯತ್ಯಾಸವಾಗಿ ವೈರ ಬೆಳೆಯಲ್ಪಟ್ಟಿತು. ಯಾವಾಗ ಕ್ರೋಧ ಆವರಿಸುತ್ತದೋ, ಆಗ ದ್ವೇಷದ ಉತ್ಪನ್ನವಾಗುತ್ತದೆ. ದ್ವೇಷ ಜನಿಸಿದ ಕೂಡಲೆ ಶೀಘ್ರವಾಗಿ ಬೆಳೆಯುತ್ತದೆ. ಪರಿಣಾಮ ಎದುರಾಳಿಯ ಉತ್ತಮ ಗುಣಗಳೂ ಗೌಣವಾಗಿ ಕೇವಲ ತಪ್ಪುಗಳಷ್ಟೇ ಎದ್ದು ಕಾಣುತ್ತದೆ. ಇಂತಹ ಸಮಯ ವಿವೇಕಿ ಆದವನು ಸನ್ನಿವೇಶವನ್ನು ಅರ್ಥ ಮಾಡಿಕೊಳ್ಳಬೇಕು ಹೊರತು ವ್ಯಕ್ತಿಯನ್ನು ಅಪಾರ್ಥ ಮಾಡಿಕೊಳ್ಳಬಾರದು. ಯಾಕೆಂದರೆ ಇದರ ಪರಿಣಾಮವಾಗಿ ಯಾರನ್ನಾದರು ಕಳೆದುಕೊಳ್ಳಬೇಕಾಗುತ್ತದೆ. ಆ ಬಳಿಕ ಅವರ ಮೌಲ್ಯ ಅರಿವಾಗುವುದು ಹಾಗಾಗಿ ಕೆಟ್ಟ ಗಳಿಗೆಯಾಗಿ ಕಾಡಿದ ಈ ಸಮಯವನ್ನು ಮಾತ್ರ ಪರಿಗಣಿಸಿ, ನೀವಿಬ್ಬರು ಪರಸ್ಪರ ಜೊತೆಯಾಗಿ ಈ ತನಕ ಕಳೆದಿರುವ ಹಿತವಾಗಿದ್ದ ಕಾಲವನ್ನೊಮ್ಮೆ ಸ್ಮರಿಸಿ ವಿವೇಚನೆ ಮಾಡಿಕೊಳ್ಳಿ. ಪರಿಸ್ಥಿತಿಯ ಕೈಗೊಂಬೆಯಾಗಿ ಅದರ ತಾಳಕ್ಕೆ ತಕ್ಕಂತೆ ಕುಣಿಯುವ ಮೊದಲು ವಾಸ್ತವ ಅರಿತುಕೊಳ್ಳಿ. ಮಹಾ ಆಪತ್ತು ಒದಗಿರುವ ಈ ಸಮಯ ನಮಗೆ ಅಶ್ವತ್ಥಾಮ ಸಮಸ್ಯೆಯಾಗಿದ್ದಾನೆ. ಆತನಿಂದ ಒದಗಬಹುದಾದ ಸಂಕಷ್ಟಕ್ಕೆ ಪರಿಹಾರ ಹೇಗೆಂದು ವಿವೇಚಿಸಬೇಕು. ಅದಕ್ಕಾಗಿ ನಿಮ್ಮೊಳಗೆ ಉತ್ಪನ್ನವಾದ ವಾದದ ಪರಿಹಾರವನ್ನು ಸೂಚ್ಯವಾಗಿ ವಿವರಿಸಿ ಹೇಳುತ್ತೇನೆ ಕೇಳಿ. ಆಚಾರ್ಯ ಭೀಷ್ಮಾಚಾರ್ಯರು ಯೋಗ್ಯತಾವಂತರೂ, ಸಜ್ಜನ, ಸುಗುಣ ಶೀಲರೂ, ಅಜೇಯ ವಿಕ್ರಮಿಯೂ ಆಗಿದ್ದರು. ಹಾಗೆಯೆ ಗುರು ದ್ರೋಣಾಚಾರ್ಯರೂ ಅತುಲ ವೀರಾಗ್ರಣಿಯೆ ಹೌದು. ಅಂತಹ ಪರಾಕ್ರಮಿಗಳಾದ ಇವರ ಬಳಿ ಸಾಗಿ ಧರ್ಮರಾಯ ಯುದ್ದಾರಂಭಕ್ಕೆ ಮೊದಲು ಆಶೀರ್ವಾದವನ್ನು ಬೇಡಿದ್ದು ನಿಮಗೆ ತಿಳಿದ ವಿಚಾರ. ಅವರಿಬ್ಬರೂ ವಿರೋಧಿಸಿ ನಿಂತರೆ ಧರ್ಮಕ್ಕೆ ಜಯ ಹೇಗೆ ಸಾಧ್ಯವಾದೀತು? ತಾನು ಈ ತನಕ ಧರ್ಮ ಪಥದಲ್ಲಿ ನಡೆದು ಆಚರಿಸಿ ಬದುಕಿದ್ದೇನೆ. ಈಗ ಮಹಾತ್ಮರಾದ ನೀವೀರ್ವರು ತಾನು ತೊಡಗಲಿರುವ ಧರ್ಮ ಸಂಸ್ಥಾಪನೆಗೆ ತಡೆಯಾಗಲಿದ್ದೀರಿ. ನಿಮ್ಮೀರ್ವರನ್ನು ಮೀರಿ ಜಯ ಸಾಧನೆ ಹೇಗೆ ಸಾಧ್ಯವಾದೀತು? ಎಂದು ಧರ್ಮರಾಯ ಕೇಳಿದ್ದನು. ಆಗ ಆಚಾರ್ಯ ಭೀಷ್ಮರು ಸೂಚ್ಯವಾಗಿ ತನ್ನನ್ನು ಗೆಲ್ಲಬಹುದಾದ ಧರ್ಮಪಥವನ್ನು ಸ್ವಯಂ ಅವರೇ ಸೂಚಿಸಿದ್ದರು. ಪುರುಷ ವೀರರೊಡನೆ ಮಾತ್ರ ನಾನು ಆಯುಧಧಾರಿಯಾಗಿ ಹೋರಾಡುತ್ತೇನೆ. ಅಮಲಂಗಲಕರ ಲಾಂಛನ ಮತ್ತು ಪೂರ್ಣ ಪ್ರಮಾಣದಲ್ಲಿ ಪುರುಷನಲ್ಲದ, ಅಥವಾ ಸ್ತ್ರೀ ನನ್ನೆದುರು ರಥವೇರಿ ಯುದ್ಧಕ್ಕೆ ಬಂದರೆ ಶಸ್ತ್ರ ಎತ್ತಲಾರೆ ಎಂದು ಅವರಾಗಿ ತಮ್ಮ ಹರಣಕ್ಕೆ ದಾರಿ ದಾರಿ ತೋರಿಸಿದ್ದರು. ಇನ್ನು ಗುರು ದ್ರೋಣರು, ಧರ್ಮರಾಯನಲ್ಲಿ ‘ಶಿಷ್ಯೋತ್ತಮಾ! ಪ್ರಿಯ ವಚನ, ಮಧು ಭಾಷಿಯಾದ ನೀನು ಯಾವಾಗ ನನಗೆ ಅಪ್ರಿಯವಾದ ಮಾತು ಹೇಳುವೆಯೋ ಆಗ ನಾನು ಯುದ್ದ ನಿಲ್ಲಿಸುವೆ’ ಎಂದು ಪರಿಹಾರ ಮಾರ್ಗ ತೋರಿದ್ದರು. ಇನ್ನೂ ಮುಂದುವರಿದು ತರ್ಕಿಸಿದರೆ ಶಿಖಂಡಿ ಜನಿಸಿರುವುದು ಭೀಷ್ಮಾಚಾರ್ಯರ ವಧಾ ಕಾರಣಕ್ಕಾಗಿ. ಮತ್ತು ದೃಷ್ಟದ್ಯುಮ್ನ ಆವಿರ್ಭವಿಸಿದ್ದು ದ್ರುಪದನ ಸಂಕಲ್ಪದಂತೆ ದ್ರೋಣಾಚಾರ್ಯರ ವಧೆಗಾಗಿ. ಹಾಗಿರುವಾಗ ಅವರಿಬ್ಬರೂ ತಮ್ಮಿಂದ ಆಗಬೇಕಾಗಿದ್ದ ಕಾರ್ಯವೆಸಗಿದ್ದಾರೆ. ಅಲ್ಲಿ ಪ್ರಕ್ರಿಯೆಯ ವಿಮರ್ಷೆ ಬರುವುದಿಲ್ಲ. ಯಾಕೆಂದರೆ ಆ ರೀತಿಯ ಪರಿಕ್ರಮಕ್ಕೆ, ಆದಿಯಲ್ಲಿ ಹಾದಿ ತೋರಿ ಸಹಕರಿಸಿದವರು ಈ ಮಹಾತ್ಮ ದ್ವಯರು. ಇನ್ನು ಭೂರಿಶ್ರವಸ ಮುಕ್ತಿ ಬಯಸಿ ಪ್ರಾಯೋಪವೇಶದಿಂದ ಮರಣದ ಆಕಾಂಕ್ಷಿಯಾಗಿದ್ದನು. ಆಯುಧಧಾರಿ ಸಮರ್ಥ ಕ್ಷತ್ರಿಯನಿಂದ ರಣಕ್ಷೇತ್ರದಲ್ಲಿ ಮೃತ್ಯುವಶನಾದರೆ ವೀರಸ್ವರ್ಗ ಲಭಿಸುತ್ತದೆ. ಆತ ಏನು ಬಯಸಿದ್ದನೋ , ಸಾತ್ಯಕಿಯ ಮುಖೇನ ನಿಯತಿ ಮಾಡಿಸಿದ್ದೂ ಅದನ್ನಷ್ಟೆ! ಹೀಗಿರುತ್ತಾ ವ್ಯರ್ಥ ಸಂಶಯ, ಆರೋಪ, ಜಿಜ್ಞಾಸೆ ಮಾಡುವುದು ಅನಗತ್ಯ. ಯಾರೂ ಅಪರಾಧ ಎಸಗಿಲ್ಲ ಎಂದಾಗಿರುವಾಗ ಈಗ ಅಶಾಂತಿ ಅನಗತ್ಯ. ಎಲ್ಲರೂ ಆತಂಕ ಮರೆತು ಮಹೋತ್ಸಾಹದಿಂದ ಸಮರ ಸನ್ನದ್ಧರಾಗಿ. ಧರ್ಮಯಜ್ಞ ಸದೃಶವಾದ ಈ ಯುದ್ಧವನ್ನು ಪೂರ್ಣಾಹುತಿಯವರೆಗೆ ಮುಂದುವರಿಸಬೇಕಾದದ್ದು ನಮ್ಮೆಲ್ಲರ ಜವಾಬ್ದಾರಿ. ಆಂತರಿಕ ಮನಸ್ತಾಪ ಮರೆತು ಪೂರ್ಣಬಲರಾಗಿ ಯುದ್ಧದಲ್ಲಿ ತೊಡಗಿಕೊಳ್ಳಿ” ಎಂದು ವಿವರಿಸಿ ಹೇಳಿ ಎದುರಾಗಿದ್ದ ಉದ್ವಿಗ್ನತೆಯನ್ನು ಉಪಶಮನಗೊಳಿಸಿದನು.
ಪಾಂಡವ ಸೇನೆಯೂ ಯುದ್ದೋತ್ಸಾಹದಿಂದ ಘರ್ಜಿಸುತ್ತಾ ಸಿದ್ಧವಾಯಿತು. ಹೆದರಿ ಚದುರಿ ಬಹುದೂರ ಓಡಿ ಹೋಗಿದ್ದ ಕೌರವರ ಸೇನೆ ಒಗ್ಗಟ್ಟಾಗಿ ಪ್ರತಿದಾಳಿಗೆ ಸಿದ್ಧವಾಗಿ ಬಂದಿದೆ.
ಇತ್ತ ಅಶ್ವತ್ಥಾಮ ದುರ್ಯೋಧನನನ್ನು ಕರೆದು “ಹೇ ಕೌರವ ಇದೋ ಮಹಾಸ್ತ್ರವನ್ನು ಸಂಧಾನಗೊಳಿಸಿದ್ದೇನೆ. ಪಾರ್ಥನ ಪ್ರತಿಜ್ಞೆಯಂತೆ ಈಗ ಆತ ಯುದ್ಧಾಹ್ವಾನ ನೀಡಿದ ನನ್ನನ್ನು ಎದುರಿಸಲು ಶಸ್ತ್ರ ಎತ್ತಿದರೆ ಬದುಕುಳಿಯಲಾರ. ಆತನ ರಕ್ಷಣೆಗಾಗಿ ಮುಂದಾಗಿ ಪಾಂಡವರು ನನ್ನನ್ನು ಆಕ್ರಮಿಸಿದರೆ ದಿವ್ಯ ನಾರಾಯಣಾಸ್ತ್ರಕ್ಕೆ ಅವರೂ ಬಲಿಯಾಗಲಿದ್ದಾರೆ. ಅಗ್ನಿಜ್ವಾಲೆಯನ್ನು ಮುತ್ತಿಕ್ಕಿ ಸುಟ್ಟು ಕರಕಲಾಗುವ ಪತಂಗದಂತೆ ಪಾಂಡವರು ನಾಶ ಹೊಂದಲಿದ್ದಾರೆ. ನಮ್ಮ ಸೇನೆ ಪಾಂಡವ ಪಕ್ಷವನ್ನು ಸಮೀಪಿಸಿದೆ. ಆಕ್ರಮಣ ಮಾಡಲು ತಡಮಾಡದೆ ಆದೇಶ ನೀಡು” ಎಂದನು.
ಮುಂದುವರಿಯುವುದು…





