ಭಾಗ – 384
ಭರತೇಶ ಶೆಟ್ಟಿ, ಎಕ್ಕಾರ್

ಹಸ್ತಿನಾವತಿಯಲ್ಲಿ ಧೃತರಾಷ್ಟ್ರ ಸಂಜಯನಲ್ಲಿ ಖಿನ್ನ ಮನಸ್ಕನಾಗಿ “ನಾನಿನ್ನು ಯುದ್ಧವಾರ್ತೆ ಕೇಳಲು ಉತ್ಸುಕನಾಗಿಲ್ಲ. ನನ್ನ ಮಕ್ಕಳನ್ನು ಕಾಪಾಡುವ ಶಕ್ತಿ ಹೊಂದಿದ್ದಾರೆಂದು ಯಾರ ಮೇಲೆ ಭರವಸೆ ಇಟ್ಟಿದ್ದೆನೋ ಆ ಆಚಾರ್ಯದ್ವಯರಿಬ್ಬರೂ ಕುತಂತ್ರಕ್ಕೆ ಬಲಿಯಾಗಿದ್ದಾರೆ. ನನಗೆ ರಣ ಕವಚ, ಶಿರಸ್ತ್ರಾಣಗಳನ್ನು ತೊಡಿಸು, ರಥ ಸಿದ್ಧವಾಗಲಿ. ನನ್ನ ಮಕ್ಕಳಾದ ದುರ್ಯೋಧನ ದುಶ್ಯಾಸನಾದಿಗಳ ರಕ್ಷಣೆ ಮಾಡಲು ನಾನು ಕುರುಕ್ಷೇತ್ರಕ್ಕೆ ತೆರಳಬೇಕು. ಬದುಕಿದ್ದು ಇನ್ನು ಮರಣವಾರ್ತೆಗಳನ್ನು ಕೇಳಿ ಅರಗಿಸಿಕೊಳ್ಳುವ ಶಕ್ತಿ ನನಗಿಲ್ಲ. ಒಂದೋ ನನ್ನ ಮಕ್ಕಳ ವಧೆಗೈಯುವ ಪ್ರತಿಜ್ಞಾಬದ್ಧ ಭೀಮನ ಸಂಹಾರ ಮಾಡುತ್ತೇನೆ. ಅಸಾಧ್ಯವಾದರೆ ಮಡಿದು ವೀರಸ್ವರ್ಗ ಪಡೆಯುತ್ತೇನೆ. ನನಗದು ಶ್ರೇಯಸ್ಕರ. ಬದುಕುಳಿದು ಪುತ್ರಶೋಕದ ದುಃಖ ಅನುಭವಿಸಬೇಕಾದ ಯಾತನೆಗಿಂತ ಮಿಗಿಲಾದ ನರಕ ಬೇರೆ ಇರಲಾರದು” ಎಂದನು.
ಆಗ ಸಂಜಯ “ಮಹಾರಾಜಾ! ಅವಕಾಶ ನಮ್ಮ ಕೈಯಲ್ಲಿ ಇತ್ತು. ಪಾಂಡವರು ಶಕ್ತರಾಗಿದ್ದರೂ, ಬೇಡುತ್ತಾ ನಮ್ಮ ಬಳಿ ಭಿಕ್ಷುಕರಂತೆ ಕನಿಷ್ಟ ಐದು ಗ್ರಾಮಗಳನ್ನು ಕೊಡಿ ನಮಗಷ್ಟು ಸಾಕೆಂದು ಕೇಳಿದ್ದರು. ಈಗ ಆ ಐದು ಗ್ರಾಮಗಳಿಗೆ ಪ್ರತಿಯಾಗಿ ನಾವು ಸಮಗ್ರ ಸಾಮ್ರಾಜ್ಯವನ್ನು ಕಳೆದುಕೊಳ್ಳುವಂತಾಗಿದೆ. ಯಾವ ಕಾರ್ಯವೂ ಕೆಟ್ಟದಲ್ಲ. ಆದರೆ ಹಾಗಾಗಲು ನಾವು ಕೈಗೊಳ್ಳುವ ನಿರ್ಧಾರ ಅಂತಹ ಕೆಟ್ಟ ಕಾರ್ಯವನ್ನು ಮಾಡಿಸುತ್ತದೆ. ಈಗ ನಾವು ಕೈಗೊಂಡಿರುವ ನಿರ್ಧಾರ ಬಲಿ ಪಡೆಯುತ್ತಾ ಸಾಗುತ್ತಿದೆ. ಅನುಭವಿಸುವುದಷ್ಟೆ ನಮಗುಳಿದಿರುವುದು. ಸಮರ್ಥನಾದ ಅರ್ಜುನನಿಗೆ ಗುರಿ ತೋರುವ ಗುರುವಾಗಿ ಕೃಷ್ಣನಿರುವಾಗ, ಉಭಯಪಕ್ಷ ಪ್ರಮುಖರಿಗೆ ವಿದ್ಯಾದಾನ ಮಾಡಿದ್ದ ಗುರು ದ್ರೋಣರು ಉಚಿತಾನುಚಿತ ಮರೆತು ಮರೆಯಾಗುವಂತಾಯಿತು. ಧರ್ಮ ತತ್ಪರನಾದ ಧರ್ಮರಾಯ ಇರುವಾಗ ಭೀಮನ ಬಲ ಧರ್ಮ ರಕ್ಷಣೆಗಾಗಿ ವಿನಿಯೋಗವಾಗುವುದು ನಿಸ್ಸಂಶಯ. ಹಾಗಾಗುವುದನ್ನು ತಡೆಯಲು ಅಧರ್ಮದ ಪಕ್ಷದಲ್ಲಿ ನಿಂತು ಯತ್ನಿಸಿದ ಭೀಷ್ಮಾಚಾರ್ಯರು ಇಚ್ಚಾಮರಣಿಯಾದರೂ ಅವರಿಗೆ ಮರಣದ ಇಚ್ಚೆ ಬರುವಂತೆ ಮಾಡಿತು. ಇದನ್ನು ಕುತಂತ್ರ ಎನ್ನುವುದು ಈಗ ಮೂರ್ಖತನವಾಗುತ್ತದೆ. ಇನ್ನು ನಮ್ಮವರಾದರೂ ಮಾಡಿರುವುದೆಲ್ಲ ಅಧರ್ಮ, ಅನ್ಯಾಯ, ಅಹಂಕಾರ ಆಗಿರುವಾಗ ಯಾರನ್ನೂ ದೂಷಿಸಲಾಗದು. ಉಪ್ಪು ತಿಂದವ ಸಹಜವಾಗಿ ನೀರು ಕುಡಿಯುವಂತೆ ಪಾಪಕಾರ್ಯಗಳ ಲೇಪ ಮೆತ್ತಿ ಕೊಳ್ಳುತ್ತಲೆ ಇದೆ. ಇವರ್ಯಾರೂ ಬದುಕಿ ಉಳಿಯುವುದು ಅಸಂಭವವಾಗಿದೆ. ಹೋರಾಡಿ ಸತ್ತರೂ ಆಗಲೂ ಪಾತಕದ ಫಲ ಬೆಂಬತ್ತಿ ಹೋಗದೆ ಬಿಡದು. ಪಾಂಡವರು ಗೆಲ್ಲುವುದು ನಿಶ್ಚಯ. ವಿಜಯದ ಜೊತೆ ಸಾಮ್ರಾಜ್ಯ ಆಳುತ್ತಾರೆ. ಹಾಗೂ ಅಸಂಭವನೀಯ ಸೋಲು ಅಥವಾ ಮರಣ ಪ್ರಾಪ್ತವಾದರೂ ಧರ್ಮಾತ್ಮರಾದ ಅವರಿಗೆ ಉನ್ನತ ಗತಿ ಪ್ರಾಪ್ತವಾಗಲಿದೆ. ಹಾಗಾಗಿ ಇಹ ಪರ ಎರಡರಲ್ಲೂ ಅಧಿಕಾರ ಹೊಂದಿದ ಅವರ ವಿರುದ್ಧ ಸಿಡಿದೇಳುವ ಕಾಲ ಮಿಂಚಿ ಹೋಗಿಯಾಗಿದೆ. ಈಗ ನೀನು ಚಿಂತಿಸಿ ಫಲವಿಲ್ಲ, ಯುದ್ದಕ್ಕೆ ಹೋಗುವುದು ಮೂರ್ಖತನ ಆಗುತ್ತದೆ. ಬದಲಾಗಿ ಈಗಲೂ ಶರಣಾದರೆ ಧರ್ಮಾತ್ಮ ಯುಧಿಷ್ಠಿರ ಯುದ್ಧ ನಿಲ್ಲಿಸಿ ನಿನ್ನಿಚ್ಚೆಯಂತೆ ಸಂಧಾನಕ್ಕೆ ಒಪ್ಪುತ್ತಾನೆ. ನೀನು ಬಯಸುವೆಯಾದರೆ ಉಚಿತವಾದುದು ಶರಣಾಗತಿ. ಅದಾಗದು ಎಂದಾದರೆ ಒದಗಬಹುದಾದ ಗತಿಯನ್ನು ಸ್ವೀಕರಿಸುತ್ತಾ ಅಪೇಕ್ಷೆ ಮರೆತು ಇರಬೇಕು” ಎಂದನು.
ಧೃತರಾಷ್ಟ್ರನ ಬಳಿ ಹೇಳುವುದಕ್ಕಾಗಲಿ, ಕೇಳುವುದಕ್ಕಾಗಲಿ ಉತ್ತರ – ಪ್ರಶ್ನೆಗಳು ಇಲ್ಲವಾಯಿತು. ಕುರು ಕ್ಷೇತ್ರದಲ್ಲಿ ಧರ್ಮಯಜ್ಞದಂತೆ ಯುದ್ಧ ಸಾಗುತ್ತಿದೆ.
ಪಾಂಡವರ ಸೇನೆ ವೀರಾವೇಶದಿಂದ ಹೋರಾಡುತ್ತಾ ಕೌರವ ಸೇನೆಯನ್ನು ಒಂದು ದಿಕ್ಕಿನಿಂದ ನಾಶಗೈಯುತ್ತಾ ಸಾಗುತ್ತಿದೆ. ನಿಸ್ತೇಜರಾದ ಕುರು ವೀರರಾಗಿ ಬೆನ್ನು ಹಾಕಿ ಓಡಿ ಹೋಗಿ ಬದುಕುವುದನ್ನು ದಾರಿಯಾಗಿ ಕಾಣುವಂತಾಯಿತು. ದ್ರೋಣರಿಂದ ರಕ್ಷಿತವಾಗಿದ್ದ ಸೇನಾಭಾಗ ಆಧಾರ ಸ್ಥಂಭ ಕಳಚಿ ಬಿದ್ದ ಗೋಪುರದಂತಾಗಿದೆ. ಶಕುನಿ ಇನ್ನೊಂದು ಪಾರ್ಶ್ವದಲ್ಲಿ ಯುದ್ಧ ನಿರತನಾಗಿದ್ದು ಮತ್ತೊಂದೆಡೆಯಿಂದ ಎದ್ದ ಕೋಲಾಹಲದ ಕಾರಣ ತಿಳಿದು, ದ್ರೋಣರು ಹತರಾದರು ಎಂಬ ಸುದ್ದಿ ಕೇಳಿ ತನ್ನ ರಥದಿಂದ ಹಾರಿ ಓಡಿ ಪಲಾಯನ ನಿರತ ರಥಿಕರ ರಥವೇರಿ ಸುರಕ್ಷಾ ಸ್ಥಾನ ಸೇರಿದನು. ಶಲ್ಯ, ಕೃಪಾಚಾರ್ಯ, ಕೃತವರ್ಮ, ಉಲೂಕ, ದುಶ್ಯಾಸನ, ದುರ್ಯೋಧನನೂ ವಿಧಿಯಿಲ್ಲದೆ ಧುಮ್ಮಿಕ್ಕಿ ಹರಿಯುತ್ತಿರುವ ಪ್ರವಾಹಕ್ಕೆ ಕೊಚ್ಚಿ ಹೋಗುವಂತೆ ಓಡುತ್ತಿರುವ ಸೇನೆಯ ಜೊತೆ ಬದುಕುಳಿದರೆ ಮತ್ತೆ ನೋಡೋಣ ಎಂದು ಒಮ್ಮೆ ತಪ್ಪಿಸಿಕೊಳ್ಳುವ ಎಂದು ಕಂಡ ಕಡೆ ಚದುರಿ, ಒಬ್ಬರಿಗೊಬ್ಬರು ಢಿಕ್ಕಿ ಹೊಡೆಯುತ್ತಾ ಓಡುವಾಗ ಯಾರು, ಏನು, ಯಾಕೆ ಒಂದೂ ಗೊತ್ತಿಲ್ಲದೆ ಓಡಿ ತಪ್ಪಿಸುವುದು ಸದ್ಯಕ್ಕೆ ಉಳಿದಿರುವ ಕಾಯಕ ಎಂಬಂತಾಗಿದ್ದಾರೆ. ಮತ್ತೊಂದು ಪಾರ್ಶ್ವದಲ್ಲಿ ಯುದ್ಧ ನಿರತರಾಗಿದ್ದ ರಥಿಕರು, ಅಶ್ವತ್ಥಾಮಾದಿಗಳು ಆಶ್ಚರ್ಯಕ್ಕೊಳಗಾಗಿ ಏನಾಗುತ್ತಿದೆ? ಯಾಕೆ ಒಮ್ಮೆಲೆ ಈ ಹಾಹಾಕಾರ ಎಂದು ದಿಗ್ಭ್ರಾಂತರಾಗಿ ನೋಡುತ್ತಾ ನಿಂತಿದ್ದಾರೆ. ಅತ್ತ ದುರ್ಯೋಧನನೂ ರಥವೇರಿ ಧಾವಿಸಿ ಬರುತ್ತಿದ್ದಾನೆ. ಗುರುಪುತ್ರ ಅಶ್ವತ್ಥಾಮ ತಡೆದು ನಿಲ್ಲಿಸಿ “ಏನಾಗಿದೆ? ಯಾಕೆ ಪಲಾಯನ? ನಿಲ್ಲಿ ನಿಲ್ಲಿ…” ಎಂದು ದುರ್ಯೋಧನನನ್ನು ತಡೆದಾಗ “ಅಶ್ವತ್ಥಾಮ ಮೊದಲು ಇಲ್ಲಿ ನಿಲ್ಲದೆ ಓಡು ಮತ್ತೆ ಹೇಳುವೆ” ಎನ್ನುತ್ತಾ ದುರ್ಯೋಧನ ಸೂಚನೆಯಿತ್ತನು. ಅಶ್ವತ್ಥಾಮ ತಿರುಗಿ ಕತ್ತೆತ್ತಿ ನೋಡಿದರೆ… ಕೃಪ, ಕರ್ಣಾದಿಗಳೂ ರಣಹೇಡಿಗಳಂತೆ ಓಟಕ್ಕೆ ಮನ ಮಾಡಿ ಓಡಿ ಬರುತ್ತಿದ್ದಾರೆ. ಅಡ್ಡಗಟ್ಟಿ ನಿಂತ ಅಶ್ವತ್ಥಾಮ “ನಿಲ್ಲಿ.. ನಿಲ್ಲಿ.. ಎಲ್ಲರೂ ನಿಲ್ಲಿ… ಮೊದಲು ಯಾಕೆ ಈ ಭಯ? ಯಾರಿಂದಾಗಿ ಈ ರೀತಿಯ ಸಾಮೂಹಿಕ ಪಲಾಯನ?” ಎಂದು ಪ್ರಶ್ನಿಸಿ ತಡೆದನು.
ದುರ್ಯೋಧನನಿಗೆ ಗುರುಪುತ್ರ ದ್ರೌಣಿಯ ಮುಖ ನೋಡಲೂ ಆಗಲಿಲ್ಲ. ಭಯ, ದುಃಖ ಒತ್ತರಿಸಿ ಬಂದು, ನಾಚಿಕೆ ಮತ್ತು ದುಃಖ ಒಟ್ಟಾಗಿ, ಗಂಟಲು ಒಣಗಿದಂತಾಯಿತು. ಕೃಪಾಚಾರ್ಯರತ್ತ ತಿರುಗಿ “ನೀವು ದ್ರೋಣರ ಮರಣವಾರ್ತೆ ತಿಳಿಸಿ” ಎಂಬಂತೆ ಸಂಜ್ಞೆ ಮಾಡಿದನು.
ಕೃಪಾಚಾರ್ಯರು ಬಹಳ ಸಂಕಟ ಪಡುತ್ತಾ, ಅಶ್ವತ್ಥಾಮನ ಪ್ರತಿಕ್ರಿಯೆಯನ್ನು ಊಹಿಸಲೂ ಸಾಧ್ಯವಿಲ್ಲದ ಸ್ಥಿತಿಯಲ್ಲಿ ಭಯದಿಂದಲೆ ಯುದ್ದದಲ್ಲಿ ದ್ರೋಣರಿಗೆ ಒದಗಿದ ಸ್ಥಿತಿ – ಗತಿಯನ್ನು ತಾನು ಕಂಡಂತೆ ವಿವರಿಸಿ ಹೇಳತೊಡಗಿದರು. ‘ದ್ರೋಣರ ವಿಧ್ವಂಸಕ ಉಗ್ರ ಹೋರಾಟ, ಕೃಷ್ಣನಿಂದ ರಣತಂತ್ರ ನಿರ್ದೇಶನ, ಧರ್ಮರಾಯ, ಅರ್ಜುನರಿಂದ ವಾಮಮಾರ್ಗ ಅವಲಂಬನೆಗೆ ನಿರಾಕಾರ. ಕೃಷ್ಣನಿಂದ ಸಮರ್ಥನೆ ಮತ್ತು ಒತ್ತಾಯ. ಒಪ್ಪಿದ ಪಾಂಡವರು ಅಶ್ವತ್ಥಾಮನ ಮರಣವಾರ್ತೆಯನ್ನು ಕೂಗಿ ಹೇಳಿದ್ದು, ನಂಬದೆ ಉಳಿದ ದ್ರೋಣರಿಗೆ ವಿಶ್ವಾಸ ಮೂಡುವಂತೆ ಸತ್ಯಾತ್ಮ ಧರ್ಮರಾಯನು ಘೋಷಣೆ ಕೂಗಿ ಹೇಳಿದ್ದು, ಮಗ ಸತ್ತನೆಂಬ ದುಃಖ, ವಿರಕ್ತಿ ಮತ್ತೆ ಇನ್ನೇನೇನೊ ಕಾರಣಗಳ ಪಶ್ಚಾತ್ತಾಪದಿಂದ ಮನ ಪರಿವರ್ತನೆಯಾಗಿ, ಜಿಗುಪ್ಸೆಗೊಳಗಾದ ದ್ರೋಣರು ಶಸ್ತ್ರ ಸಂನ್ಯಾಸಗೈದು ತಪೋನಿರತರಾಗಿ ರಥದ ಹಿಂಭಾಗದಲ್ಲಿ ಕುಳಿತದ್ದು, ದೃಷ್ಟದ್ಯುಮ್ನ ತಪಸ್ಸಿಗೆ ಕುಳಿತ ಗುರು ದ್ರೋಣರ ಶಿಖೆಯನ್ನು ಎಡಗೈಯಲ್ಲಿ ಹಿಡಿದು ಜಗ್ಗಿ, ಬಲಗೈಯಲ್ಲಿ ಧರಿಸಿದ್ದ ಖಡ್ಗವನ್ನು ಬೀಸಿ ಕಗ್ಗೊಲೆ ಮಾಡಿದ್ದು, ದ್ರೋಣರಿಗೆ ದಿವ್ಯಲೋಕ ಪ್ರಾಪ್ತಿ… ಹೀಗೆ ಎಲ್ಲಾ ಘಟಿತ ಘಟನೆಗಳನ್ನು ಯಥಾವತ್ತಾಗಿ ವಿಸ್ತಾರವಾಗಿ ವಿವರಿಸಿದರು.
ತನ್ನ ಪಿತನ ಮರಣದ ದಾರುಣವಾರ್ತೆ ಕೇಳಿದೊಡನೆ ಕಾಲಿನಿಂದ ತುಳಿಯಲ್ಪಟ್ಟ ಮಹಾಸರ್ಪದಂತೆ ಅಶ್ವತ್ಥಾಮ ಕೆರಳಿದನು. ಕಟ್ಟಿಗೆಯ ರಾಶಿಯನ್ನು ಆಕ್ರಮಿಸಿದ ಅಗ್ನಿಯ ಜ್ವಾಲೆಯಂತೆ ಪ್ರಜ್ವಲಿಸುತ್ತಾ ಯಜ್ಞೇಶ್ವರನಂತಾದನು. ಕೈಗಳನ್ನು ಒಂದಕ್ಕೊಂದು ಉಜ್ಜುತ್ತಾ, ಹಲ್ಲುಗಳನ್ನು ಕಟಕಟನೆ ಕಡಿಯುತ್ತಾ, ಏದುಸಿರು ಬಿಡುತ್ತಾ, ಕಣ್ಣುಗಳನ್ನು ಕೆಂಪಗಾಗಿಸಿ ಉಮ್ಮಳಿಸಿ ಬರುತ್ತಿದ್ದ ದುಃಖವನ್ನು ಗಂಟಲಲ್ಲಿ ಅದುಮಿಟ್ಟು, ನರನಾಡಿಗಳಲ್ಲಿ ವೇಗವಾಗಿ ಹರಿಯುತ್ತಿದ್ದ ರಕ್ತದಲ್ಲಿ ತುಂಬಿದ್ದ ಕ್ರೋಧದಿಂದ ಭಾವೋದ್ವೇಗವನ್ನು ಮುಚ್ಚಿ, ಜೋರಾಗಿ ಬೊಬ್ಬಿರಿದು ಘರ್ಜಿಸಿದನು. ಆರ್ಭಟಿಸಿ ಅಬ್ಬರಿಸಿದನು. ಕಣ್ಣುಗಳು ಪಿತನು ಹತನಾದ ದೃಶ್ಯವನ್ನು ಕಾಣಲಾರೆನೆಂದೋ, ಪುತ್ರನಾದ ನಾನಿದ್ದೂ ರಕ್ಷಿಸಲಾರದೆ ಹೋದೆನೆಂದೋ, ಪರಿತಾಪದ ಕಣ್ಣೀರು ತುಂಬಿ ಮಂಜಾಗಿ ಏನೂ ಕಾಣದಾಯಿತು. ಕಣ್ಣ ರೆಪ್ಪೆಗಳನ್ನು ಮತ್ತೆ ಮತ್ತೆ ತೆರೆದು ಮುಚ್ಚಿ ಅಶ್ರುಧಾರೆಯನ್ನು ಇಳಿಸಿದನು. ಶಿರದಿಂದ ಹಣೆಗಿಳಿದು ಒಸರುತ್ತಾ ಇಳಿಯುತ್ತಿದ್ದ ಬೆವರಿನ ಜೊತೆ ಬೆರೆತು ಕಣ್ಣೀರಧಾರೆ ಭುವಿಗಿಳಿಯತೊಡಗಿತು. ಘೋರ ತಾಪ ಸುಡುತ್ತಾ ತಡೆದುಕೊಳ್ಳಲಾಗದೆ ಉಗ್ರ ಪ್ರತಿಜ್ಞೆಯನ್ನು ಮಾಡತೊಡಗಿದನು. ಯುದ್ಧ ಎಂದ ಮೇಲೆ ಸೋಲು ಗೆಲುವು ಎಂತಹ ವೀರನಿಗೂ ಇದೆ. ಮರಣವೂ ಖಂಡಿತಾ ಇದರ ಭಾಗವೇ ಹೌದು. ನನ್ನ ತಂದೆ ಧರ್ಮಯುದ್ಧಗೈಯುತ್ತಾ ವಧಿಸಲ್ಪಟ್ಟಿದ್ದರೆ ನನಗೆ ಹಿಂಸೆಯಾಗುತ್ತಿರಲಿಲ್ಲ. ಹೇಗೆ ಅವರು ವಧ್ಯರಾದರೂ ದಿವ್ಯ ಲೋಕ ಸೇರಿದ್ದು ನನಗೆ ಸದ್ಯ ತೃಪ್ತಿಯನ್ನಿತ್ತಿದೆ. ಆದರೆ ಮಗನಾಗಿ ನಾನಿದ್ದೂ ನನ್ನ ತಂದೆಯ ಜುಟ್ಟು ಹಿಡಿದೆಳೆದು ತಲೆ ಕತ್ತರಿಸಿದಾತನನ್ನು ತಡೆಯಲಾಗದೆ ಹೀನಾಯ ಅಂತ್ಯ ಒದಗುವಂತೆ ಆಗಿ ಹೋದದ್ದಕ್ಕಾಗಿ ನನ್ನ ಮೇಲೆ ತಾತ್ಸಾರ ಭಾವ ವ್ಯಕ್ತವಾಗುತ್ತಿದೆ. ಪೂಜನೀಯ ಗುರುವರ್ಯನನ್ನು ನಿಷ್ಕರುಣೆಯಿಂದ ಹೀನಾಯವಾಗಿ ವಧಿಸಿದ ಆ ದೃಷ್ಟದ್ಯುಮ್ನ ಸಹಿತ ಪಾಂಚಾಲದ ಒಬ್ಬೊಬ್ಬ ಸೈನಿಕನನ್ನೂ ಬಿಡದೆ ಘೋರವಾಗಿ ಸಂಹರಿಸುವೆ. ಪಾಂಚಾಲದ ಒಂದು ನರಪಿಳ್ಳೆ ಬಿಡಿ, ಹುಳವೂ ಇನ್ನು ಬದುಕುಳಿಯದು. ಮಾತ್ರವಲ್ಲ ಆ ಧರ್ಮರಾಯ ಕೇವಲ ತೋರಿಕೆಗೆ ಧರ್ಮಧ್ವಜಿ ( ಪ್ರದರ್ಶನಕ್ಕೆ ಮಾತ್ರ ಧರ್ಮಾತ್ಮ – ನಿಜವಾಗಿ ಅಧರ್ಮಿ, ಅಸತ್ಯವಂತ) ಆಗಿರುವಾತ ಎಂದು ಸಾಬೀತಾಗಿದೆ. ಅಂತಹ ಅವನ ರಕ್ತದೋಕುಳಿಯಿಂದ ಈ ಕುರುಧಾರುಣಿ ಕೆಸರಾಗಲಿದೆ. ಹೇ ದುರ್ಯೋಧನಾ! ಯಾರೂ ಅವರನ್ನವರು ಹೊಗಳಬಾರದು. ಆತ್ಮಸ್ತುತಿ ಯೋಗ್ಯವಲ್ಲ. ಇದನ್ನು ತಿಳಿದಿದ್ದೂ ನಿನ್ನ ಮುಂದೆ ಈಗ ನನ್ನ ಸಾಮರ್ಥ್ಯ ಎಷ್ಟಿದೆಯೆಂದು ಹೇಳಿಕೊಳ್ಳುತ್ತೇನೆ. ಹಾಗೆ ನಾನು ತೊಡಗಿ ನುಡಿಯಲು ಕಾರಣ ನನ್ನ ಪ್ರಿಯ ಪಿತನ ಘೋರ ಸಂಹಾರಕ್ರಿಯೆ. ನನ್ನ ಶಕ್ತಿ ಎಷ್ಟಿದೆ ತಿಳಿಯಬೇಕೋ? ಅಖಂಡ ಆರ್ಯಾವರ್ತದಲ್ಲಿ ನಾನು ಕ್ರುದ್ಧನಾಗಿ ನಿಂತರೆ ಸಮಸ್ತ ಸೇನೆಯನ್ನೂ ಅರೆದು ಸರ್ವನಾಶಗೈಯ್ಯಬಲ್ಲೆ. ಇಂದು ಕೃಷ್ಣ ಸಹಿತ ರಥಿಕರಾದ ಪಾಂಡವರೈವರೂ ನನ್ನ ಉಗ್ರರೂಪ ಕಂಡು ಭಯಭೀತರಾಗಲಿ. ರಥಸ್ಥನಾಗುವ ನನ್ನನ್ನಿಂದು ದೇವ ದಾನವ, ಗಂಧರ್ವರು ಏನೂ ಮಾಡಲಾರರು. ಪ್ರಪಂಚದಲ್ಲಿ ನಾನು ಮತ್ತು ಅರ್ಜುನನಿಗೆ ಸರಿಮಿಗಿಲಾದ ವೀರರ್ಯಾರೂ ಈಗ ಇಲ್ಲ. ಆ ಅರ್ಜುನ ಸರ್ವ ಅಸ್ತ್ರ ಸಂಪಾದಿಸಿದ್ದರೆ, ನನಗೆ ನನ್ನ ಪಿತಾಶ್ರೀ ಅವೆಲ್ಲವನ್ನೂ ಧಾರೆ ಎರೆದಿದ್ದಾರೆ. ಅಂತ್ಯಕಾಲದಲ್ಲಿ ಅವರ ಬಳಿ ಇದ್ದೂ ನಿಷ್ಪ್ರಯೋಜಕವಾದ ಶಸ್ತ್ರಗಳಿಗೆ ಧಿಕ್ಕಾರವಿರಲಿ. ಇಂದು ನನ್ನ ಬಳಿ ಇರುವ ಸರ್ವ ದಿವ್ಯಾಸ್ತ್ರಗಳಿಂದ – ಸೂರ್ಯ ರಶ್ಮಿ ಭೂಮಿಯೆಲ್ಲೆಡೆ ವ್ಯಾಪಿಸುವಂತೆ ಆವರಿಸಿ ಬಿಡುತ್ತೇನೆ. ಯಾರೊಬ್ಬರೂ ನನ್ನ ಕ್ರೋಧಾಗ್ನಿಯನ್ನು ಮೀರಿ ಉಳಿಯಲಾರರು. ನನ್ನ ಬಳಿ ಅಸ್ತ್ರಗಳಿಗೆ ಅಗ್ರಮಾನ್ಯ ನಾರಾಯಣಾಸ್ತ್ರವೂ ಇದೆ. ಮಾತ್ರವಲ್ಲ ಧನುರ್ವೇದದಲ್ಲಿ ಏನೇನು ದಿವ್ಯ – ಮಂತ್ರಾಸ್ತ್ರಗಳಿವೆಯೋ ಅವೆಲ್ಲಾ ನನಗೆ ಉಪದೇಶಿತ ಆಗಿರುವಂತಹುದು. ಹಾಗಾಗಿ ನನ್ನ ಪೂರ್ಣ ಶಕ್ತಿ ವಿನಿಯೋಗಿಸಿ, ಧರ್ಮಾಧರ್ಮಗಳನ್ನೂ ಮೀರಿ ಅಧರ್ಮ ಪಥದಲ್ಲಿ ಮುಂಬರಿದು, ನನ್ನ ತಂದೆಯ ಕಗ್ಗೊಲೆಗೈದ, ಕುಕೃತ್ಯಕ್ಕೆ ಕಾರಣರಾದ ಎಲ್ಲರನ್ನೂ ವಧಿಸದೆ ಬಿಡಲಾರೆ. ಕೃಷ್ಣಾರ್ಜುನರಿಗೆ ಸಾಮರ್ಥ್ಯವಿದ್ದರೆ ನನ್ನನ್ನು ತಡೆದು ನನ್ನನ್ನು ವಧಿಸಿ ತೋರಿಸಲಿ. ಅದೊಂದು ಮಾತ್ರ ಅವರಿಗೆ ಉಳಿದ ದಾರಿ ಎಂದು ಅತ್ಯುಗ್ರ ಶಪಥಗೈದನು.
ಹೀಗೆ ಅಶ್ವತ್ಥಾಮ ಅಬ್ಬರಿಸಿ ಪ್ರತಿಜ್ಞಾ ವಾಕ್ಯ ಉಚ್ಚರಿಸಿದಾಗ ದಶದಿಕ್ಕುಗಳಲ್ಲೂ ಪ್ರತಿಧ್ವನಿಸಿ ಮಾರ್ದನಿಸತೊಡಗಿತು. ನಿಸ್ತೇಜರಾಗಿ ಓಡುತ್ತಿದ್ದ ಭಯಗ್ರಸ್ಥ ಕೌರವ ಸೈನಿಕರು ತಿರುಗಿ ಮಹಾ ಧೈರ್ಯಶಾಲಿಗಳಾಗಿ ಪ್ರೇರಿತರಾದರು. ವೀರಾವೇಶದ ಉದ್ಘೋಷ – ಘೋಷಣೆ ಕೂಗುತ್ತಾ ಗುರುಪುತ್ರ ದ್ರೌಣಿಗೆ ಜಯಕಾರ ಹಾಕುತ್ತಾ ಮರಳಿ ಪಾಂಡವ ಸೇನೆಯ ಮೇಲೆರಗಿದರು. ಕುರುಸೇನೆಯಲ್ಲಿ ಈಗ ನವ ಸಂಚಲನ ಮೂಡಿದೆ. ಯಾರೂ ಈಗ ಭಯಗೊಂಡವರಿಲ್ಲ. ಪಾಂಡವರಿಗೆ ಒಮ್ಮೆಲೆ ಮಹದಾಶ್ಚರ್ಯ! ಹೆದರಿ ಬೆನ್ನು ಹಾಕಿ ಓಡಿದವರೆಲ್ಲರೂ ತಿರುಗಿ ಎದೆಗೊಟ್ಟು ಹೋರಾಡಲು ಸ್ಥೈರ್ಯವಂತರಾಗಿ ತಿರುಗಿದ್ದಾರೆ… ಅಶ್ವತ್ಥಾಮ ಕೆಂಡಾಮಂಡಲನಾಗಿ ಪ್ರಜ್ವಲಿಸುವ ಹವ್ಯವಾಹನನಂತೆ ಭುಗಿದೇಳುತ್ತಿದ್ದಾನೆ.
ಮುಂದುವರಿಯುವುದು…





