25.3 C
Udupi
Thursday, December 12, 2024
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ 37

ಭರತೇಶ್ ಶೆಟ್ಟಿ, ಎಕ್ಕಾರ್

ಸಂಚಿಕೆ ೩೭ ಮಹಾಭಾರತ

ಹೀಗೆ ದೇವವೃತನಾಗಿದ್ದವ ದೇವವಾಣಿಯ ಘೋಷದೊಂದಿಗೆ ಲೋಕಮುಖದಲ್ಲಿ ಭೀಷ್ಮನಾಗಿ ಪ್ರಸಿದ್ಧನಾದ. ತಾಯಿ ಸತ್ಯವತಿ ದೇವಿಯನ್ನು ಕರೆತರಲು ಸಿದ್ಧತೆ ಮಾಡಿಕೊಂಡು ತನ್ನ ತಂದೆಯ ಮನದಾಸೆ ಪೂರೈಸಲು ಸನ್ನದ್ಧನಾದನು. ಹೊರಟು ನಿಂತು ದಾಶರಾಜನ ಅನುಮತಿ ಕೇಳಿ, ವಿವಾಹ ಮಹೋತ್ಸವಕ್ಕೆ ಅರಮನೆಗೆ ಬಂದು ಕಲ್ಯಾಣ ಕಾರ್ಯ ನಡೆಸಿಕೊಡಬೇಕೆಂದು ನಿಮಂತ್ರಿಸಿದ. ಭವಿಷ್ಯದ ಸಾಮ್ರಾಜ್ಞಿಯನ್ನು ರಥದಲ್ಲಿ ಕುಳ್ಳಿರಿಸಿ ತಾನೇ ರಥದ ಸಾರಥಿಯಾಗಿ ಹಸ್ತಿನೆ ಸೇರಿದರು.

ಶಂತನು ಚಕ್ರವರ್ತಿಗೆ ಭೀಷ್ಮ ಸತ್ಯವತಿಯನ್ನು ಕರೆದು ತಂದಿರುವುದು ಮಹದಾನಂದವಾದರೂ, ಆ ಸಾಧನೆಗಾಗಿ ಮಗ ಮಾಡಿದ ತ್ಯಾಗ ಸಹಿಸಲಸಾಧ್ಯ ನೋವನ್ನುಂಟು ಮಾಡಿತು. ಮಗನ ಧರ್ಮ ಬುದ್ಧಿ, ತ್ಯಾಗ, ಪಿತೃ ಭಕ್ತಿಗೆ ಮೆಚ್ಚಿದ ಶಂತನು ಚಕ್ರವರ್ತಿ ಅನುಗ್ರಹಿಸಲು ಮನ ಮಾಡಿದ. “ಮಗನೇ, ನನ್ನ ಜೀವನದಲ್ಲಿ ನಾನು ಮಾಡಿರುವ ಸತ್ಕರ್ಮಗಳನ್ನು ದೇವತೆಗಳೂ ಮೆಚ್ಚಿದ್ದಾರೆ. ಅಂತೆಯೇ ನನ್ನ ಕೈ ಸ್ಪರ್ಶದಿಂದ ರೋಗಿಯ ರೋಗ ಗುಣವಾಗುವ ಅನುಗ್ರಹವನ್ನೂ ಮಾಡಿದ್ದಾರೆ‌. ಇಂತಹ ಎಲ್ಲಾ ಸಂಚಿತ ಪುಣ್ಯಫಲಗಳನ್ನು ಕ್ರೋಢೀಕರಿಸಿ ಧಾರೆಯೆರೆದು ನಿನ್ನನ್ನು ಹರಸುತ್ತಿದ್ದೇನೆ ಮಗನೇ! ನೀನು ಸ್ವ ಇಚ್ಚಾ ಮರಣಿಯಾಗು. ನೀನಾಗಿ ಬಯಸದೆ ನಿನಗೆ ಮರಣ ಬಾರದಿರಲಿ” ಎಂದು ಮಗನ ತಲೆಯ ಮೇಲೆ ಕೈ ಇಟ್ಟು ಅನುಗ್ರಹಿಸಿದನು.

ಸುಮೂಹೂರ್ತದಲ್ಲಿ ಶಂತನು – ಸತ್ಯವತಿಯರ ಕಲ್ಯಾಣೋತ್ಸವ ಜರಗಿತು. ಅಂದಿನ ರಾತ್ರಿ ವಿಭಿನ್ನ ಭಾವನೆಗಳು ರಾಜಾ ಶಂತನು, ಸತ್ಯವತಿ ಹಾಗೂ ಭೀಷ್ಮರ ಮನದಲ್ಲಿ ತರ್ಕಿಸಲ್ಪಡುತ್ತಿತ್ತು.
ರಾಜಾ ಶಂತನು ತನ್ನ ಮೊದಲ ಮಗ ಭೀಷ್ಮ ನನಗಾಗಿ ಮಾಡಿದ ತ್ಯಾಗದಿಂದಾಗಿ ಜೀವನ ಪರ್ಯಂತ ಸುಖವಿಲ್ಲದ ಬದುಕು ಬಾಳಬೇಕಾಯಿತಲ್ಲಾ ಎಂದು ಕೊರಗಿದ. ಮತ್ತೊಂದೆಡೆ, ನನ್ನ ಕೈ ಹಿಡಿದಿರುವ ಈಕೆ ಮಗನ ಬದುಕು ಬಲಿಕೊಟ್ಟ ಅಪ್ಪ ಎಂದು ನನ್ನ ಬಗ್ಗೆ ಹೀನ ಭಾವ ತಳೆದಿರಬಹುದೇ ಎಂದು ಚಿಂತಿತನಾಗಿದ್ದ.

ನವ ವಧು ಸತ್ಯವತಿಯದು ಭಿನ್ನ ಸ್ಥಿತಿ. ವಿವಾಹಪೂರ್ವ ಹುಟ್ಟಿದ ತನ್ನ ಮಗ ತಪಸ್ವಿಯಾಗಿದ್ದಾನೆ. ಆ ವಿಷಯ ಇನ್ನೂ ನಿಗೂಢವಾಗಿದೆ. ಇತ್ತ ನನ್ನ ಕಾರಣದಿಂದ ಶಂತನು ಚಕ್ರವರ್ತಿ ಆಕರ್ಷಿತನಾಗಿ, ನಾನು ಆತನಿಗೆ ಸಿಗಲಾರೆನೆಂದು ದುಃಖಿತನಾಗಿದ್ದ. ಇದರ ಪರಿಣಾಮ ಸಮರ್ಥ ಭೀಷ್ಮನ ಬದುಕನ್ನೇ ನನ್ನ ಹಿತ ಸ್ವಾರ್ಥಕ್ಕಾಗಿ ಎರವಲು ಪಡೆದೆ. ಕಟು ಹೃದಯಿಯಾಗಿ ಹೋದೆನಲ್ಲ ಎಂದು ಸ್ವದೋಷಿಯಾಗಿ ತರ್ಕಿಸುತ್ತಿದ್ದಳು.

ಆದರೆ ಇತ್ತ ಭೀಷ್ಮ ಮಾತ್ರ ನೀರವ ರಾತ್ರಿಯಲ್ಲಿ ಮಹಾನ್ ಸಂತೃಪ್ತ ಸುಖಭಾವ ಅನುಭವಿಸುತ್ತಿದ್ದ. ತನ್ನ ಮಾತೆ ಗಂಗಾದೇವಿ ಏಳು ಮಕ್ಕಳನ್ನು ನದಿಗೆಸೆದು ನನ್ನನೋರ್ವನನ್ನು ಮಾತ್ರ ಪಿತನಿಗಿತ್ತು, ತಾನು ಹೊರಟು ಹೋಗಿದ್ದಳು. ತಂದೆಗೆ ಬಹುಕಾಲ ಪುತ್ರಶೋಕ, ಬಳಿಕ ವಿರಹಬಾಧೆ ಒದಗಿತ್ತು. ಈಗ ಪರಿಹಾರವಾಯಿತು ಎಂಬ ಸಮಾಧಾನ – ಧನ್ಯತಾ ಭಾವ ಮೂಡಿಸಿತ್ತು.

ಹೀಗೆ ಕಾಲ ಕಳೆಯುತ್ತಿರಲು ಶಂತನು -ಸತ್ಯವತಿಗಳಿಗೆ ದಾಂಪತ್ಯ ಫಲವಾಗಿ ಮಕ್ಕಳು ಹುಟ್ಟಿದರು. ಹಿರಿಯ ಮಗ ಚಿತ್ರಾಂಗದ, ಇದಾಗಿ ಕೆಲ ವರ್ಷದ ಬಳಿಕ ಹುಟ್ಟಿದವನೇ ವಿಚಿತ್ರವೀರ್ಯ. ಇಬ್ಬರು ಮಕ್ಕಳೊಂದಿಗೆ ಮಹಾರಾಜ -ರಾಣಿ ಸಂತೋಷವಾಗಿದ್ದರು.

ಇತ್ತ ಭೀಷ್ಮ ಪರತತ್ವದ ಬಗ್ಗೆ ಆಕರ್ಷಿತನಾಗಿ, ಸಮರ್ಥ ಋಷಿಯ ಆಶ್ರಮ ಸೇರಿ ಜ್ಞಾನಾರ್ಜನೆಗೆ ಮನಮಾಡಿ ಶಂತನು ಚಕ್ರವರ್ತಿಯಲ್ಲಿ ಹೊರಡಲು ಅನುಮತಿ ಕೇಳಿದ. ಆಗ ತಾಯಿ ಸತ್ಯವತಿ ತಡೆದು, ಮಗನೇ ನಿನ್ನ ತಮ್ಮಂದಿರ ರಕ್ಷಣೆ ನಿನ್ನ ಹೊಣೆಯಲ್ಲವೇ? ಅವರು ಸಮರ್ಥರಾಗುವಂತೆ ನೀನೇ ಅವರನ್ನು ರೂಪಿಸಬೇಕು ಎಂದು ವಿನಂತಿಸಿದಳು. ಶಂತನು ಚಕ್ರವರ್ತಿಯೂ ತರ್ಕಿಸಿ, ಭೀಷ್ಮನನ್ನುದ್ದೇಶಿಸಿ, “ಮಗನೇ ನನ್ನನ್ನು ವೃದ್ಧಾಪ್ಯ ಆವರಿಸಿದೆ. ಇನ್ನು ಬಹುಕಾಲದ ನಿರೀಕ್ಷೆ ನನಗಿಲ್ಲ. ಹಾಗಾಗಿ ಸಮರ್ಥರು ಹಸ್ತಿನೆಯ ಸಿಂಹಾಸನ ಏರುವವರೆಗೆ ಇಚ್ಚಾಮರಣಿಯಾದ ನೀನೇ ಈ ಸಾಮ್ರಾಜ್ಯವನ್ನು ರಕ್ಷಿಸಬೇಕು” ಎಂದು ಬೇಡಿಕೊಂಡ. ಭೀಷ್ಮನೂ ಒಪ್ಪಿ ಮಹಾ ನಿರ್ಧಾರವನ್ನೇ ಪ್ರಕಟಿಸಿದ “ಸಮರ್ಥನಾದವನು ಪೂರ್ಣಾಧಿಕಾರದಿಂದ ಈ ಧರ್ಮ ಸಿಂಹಾಸನ ಏರುವವರೆಗೆ – ಸೇನಾಧಿಪತಿಯಂತೆ ಸಾಮ್ರಾಜ್ಯದ ರಕ್ಷಣೆ ಮಾಡುತ್ತೇನೆ. ಆಮೇಲೆ ನನಗೆ ಬಿಡುಗಡೆಯಾಗಲಿ” ಎಂತಹ ತ್ಯಾಗಮಯೀ ವ್ಯಕ್ತಿತ್ವ. ಯುವರಾಜನಿಂದ ಮಹಾರಾಜನಾಗುವ ಸರ್ವ ಸಮರ್ಥನೇ ಸ್ವಯಂ ನಿರ್ಧಾರದಿಂದ ರಾಜಸೇನಾಪತಿಯಾದ. ಅದೂ – ಸರ್ವ ಸಮರ್ಥ ಈ ಸಿಂಹಾಸನವೇರಿದ ಮೇಲೆ ಬಿಡುಗಡೆಯ ಯೋಚನೆ. ತರ್ಕಿಸಲಸಾಧ್ಯವಾದ ಹೊಣೆಗಾರಿಕೆ. ಶಂತನುವಿಗೂ ಸಮಾಧಾನ ನೆಮ್ಮದಿಯಾಯಿತು.

ಹೀಗೆ ಕಾಲ ಕಳೆಯುತ್ತಿರಲು ಶಂತನು ಚಕ್ರವರ್ತಿ ಒಂದು ದಿನ ಮರಣ ಹೊಂದಿದನು. ಭೀಷ್ಮನಿಗೆ ಬದುಕೇ ಶೂನ್ಯವಾಯಿತು ಎಂಬಷ್ಟು ದುಃಖ, ವಿರಕ್ತಿ ಮೂಡಿತು. ಸತ್ಯವತಿಗೆ ಪತಿ, ಮಕ್ಕಳಿಗೆ ಪಿತೃ ವಿಯೋಗ. ಪ್ರಜೆಗಳಿಗೆ ತಮ್ಮ ಧರ್ಮಿಷ್ಟ ದೊರೆಯ ಅಂತ್ಯದಿಂದ ಆದ ದುಃಖ. ಒಟ್ಟು ಹಸ್ತಿನೆಯನ್ನೇ ಅನಾಥವಾಗಿಸಿದಂತೆ ಗೋಚರಿಸಿತು. ಭೀಷ್ಮ ಧೈರ್ಯ ತಳೆದು ತಂದೆಯ ಅಪರ ಕ್ರಿಯೆಗಳನ್ನು ವಿಧಿವತ್ತಾಗಿ ಮುಗಿಸಿದ. ಕೆಲ ಕಾಲ ಕಳೆದಾಗ ತಮ್ಮ ಚಿತ್ರಾಂಗದನಿಗೆ ಪಟ್ಟಾಭಿಷೇಕ ಮಾಡಿಸಿದ. ರಾಜ್ಯದ ರಕ್ಷಣೆ, ರಾಜತಾಂತ್ರಿಕ, ಪ್ರಜಾ ಪರಿಪಾಲನಾ ವಿಚಾರದಲ್ಲಿ ನಿರತನಾದ.

ಮುಂದುವರಿಯುವುದು….

✍🏻ಭರತೇಶ್ ಶೆಟ್ಟಿ ಎಕ್ಕಾರ್

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page