ಭಾಗ – 381
ಭರತೇಶ ಶೆಟ್ಟಿ, ಎಕ್ಕಾರ್

ದ್ರೋಣಾಚಾರ್ಯರೂ ಅತ್ಯುಗ್ರರಾಗಿ ರುದ್ರನಂತಾಗಿದ್ದಾರೆ. ಈ ಹೊತ್ತು ದೃಷ್ಟದ್ಯುಮ್ನ ರಣತಂತ್ರವನ್ನು ಮರೆತು ಕೇವಲ ಕ್ರೋಧಾವೇಶಕ್ಕೊಳಗಾಗಿ ದ್ರೋಣಾಚಾರ್ಯರ ಮೇಲೆರಗಿದನು. ಪ್ರಳಯ ಸ್ವರೂಪಿಯಾಗಿದ್ದ ಗುರು ದ್ರೋಣರು ಹತ್ಯಾಕಾಂಡ ಮುಂದುವರಿಸುತ್ತಾ ವಿರಾಟ, ದ್ರುಪದರಂತಹ ಮಹಾನ್ ನಾಯಕರನ್ನು ಬಲಿ ಪಡೆದು ತನ್ನ ಸೇನಾಪಧಿಪತ್ಯವನ್ನು ಸಾರ್ಥಕ್ಯದೆಡೆ ಮುಂದುವರಿಸುತ್ತಿದ್ದಾರೆ. ಈ ಹೊತ್ತು ತನ್ನ ಶಿಷ್ಯನಾಗಿರುವ, ಪಾಂಡವ ಸೇನಾಪತಿಯೂ ಆದ ದೃಷ್ಟದ್ಯುಮ್ನ ಎದುರಾಗಿದ್ದಾನೆ. ಉತ್ಕೃಷ್ಟ ಯುದ್ದ ಕೌಶಲದಿಂದ ತಡೆದು ತನ್ನ ಕಬಂದ ಬಾಹುವಿನಿಂದ ಆವರಿಸುತ್ತಾ ದ್ರೋಣರು ಮತ್ತೊಂದು ಬಲಿ ಪಡೆಯಲು ಹವಣಿಸುತ್ತಿದ್ದಾರೆ ಎಂಬ ರಣ ಸೂಕ್ಷ್ಮವನ್ನು ಅರ್ಜುನ ಅರಿತನು. ಆ ಕೂಡಲೆ ದ್ರೋಣರತ್ತ ಸಾಗಿ ದೃಷ್ಟದ್ಯುಮ್ನನನ್ನು ಮುಕ್ತಗೊಳಿಸಿ ತಾನು ಗುರುಗಳಿಗೆ ಎದುರಾಗಿ ನಿಂತು ಹೋರಾಡತೊಡಗಿದನು. ಶರಾದಪಿ ದ್ರೋಣರೂ – ಏಕಮೇವ ಧನುರ್ಧರ ಎಂಬ ನೆಗಳ್ತೆಯ ಧನಂಜಯನೂ ಕಾದಾಡತೊಡಗಿದರೆ ಯುದ್ದದ ಭಯಂಕರತೆ ಯಾವ ತೆರನಾಗಿ ಇರಬಹುದು? ವರ್ಣಿಸಲು ಸಾಧ್ಯವೆ? ದ್ರೋಣಾಚಾರ್ಯರಂತೂ ಇದಿರಾದವ ಯಾರೆಂಬುವುದನ್ನು ನೋಡದೆ ಕೇವಲ ವಧಾಕಾರ್ಯವಷ್ಟೆ ನನ್ನ ಗುರಿ ಎಂಬಂತೆ ಮುನ್ನುಗ್ಗುತ್ತಿದ್ದಾರೆ. ಪಾರ್ಥನೂ ಸರ್ವತಂತ್ರ ವಿನಿಯೋಗಿಸಿ ಗುರುವರ್ಯನ ಆಟಾಟೋಪವನ್ನು ಅಡಗಿಸುವ ಯತ್ನ ನಿರತನಾಗಿದ್ದಾನೆ. ಈ ದಿನ ಪಾರ್ಥನೋರ್ವನನ್ನುಳಿದು ಯಾರು ಇದಿರಾಗಿದ್ದರೂ ಲಯಾಧೀಶನಂತೆ ಪ್ರಳಯ ತಾಂಡವ ನಿರತನಾಗಿರುವ ದ್ರೋಣರನ್ನು ಹಿಡಿದಿಡಲಾಗುತ್ತಿರಲಿಲ್ಲ. ಅಂತಹ ರೀತಿಯಲ್ಲಿ ಸೆಣಸಾಡುತ್ತಿದ್ದಾರೆ.
ಇತ್ತ ಸಹದೇವನಿಗೂ ದುಶ್ಯಾಸನನಿಗೂ ಮಹಾ ಸಮರ ಸಾಗುತ್ತಿದೆ. ಜ್ಞಾನಿಯೂ, ಸಮರ ಸಮರ್ಥನೂ ಆದ ಸಹದೇವ ಉತ್ತಮ ಸಾಹಸವನ್ನು ಮೆರೆಯುತ್ತಿದ್ದಾನೆ. ಯುದ್ದಗೈಯುತ್ತಾ ದುಶ್ಯಾಸನನ ಸಾರಥಿಯ ರುಂಡ ಛೇದನಗೈದು ಬಿಟ್ಟನು. ರಥ ನಿಯಂತ್ರಕನಿಲ್ಲದೆ ವರೂಥ ಓಲಾಡತೊಡಗಿತು. ತನಗೆ ಗೊತ್ತಿರುವ ಸೂತ ವಿದ್ಯೆಯನ್ನು ಉಪಯೋಗಿಸುತ್ತಾ ದುಶ್ಯಾಸನ ತನ್ನ ಬಲಗಾಲ ಬೆರಳುಗಳಿಂದ ಕುದುರೆಗಳ ವಾಘೆಯನ್ನು ಹಿಡಿದಿಟ್ಟು ಚಿತ್ರ – ವಿಚಿತ್ರವಾಗಿ, ಕಿಂಚಿತ್ತೂ ವಿಚಲಿತನಾಗದೆ ಧೈರ್ಯದಿಂದ ಹೋರಾಡತೊಡಗಿದನು. ಹೀಗಿರಲು ಸೂಕ್ಷ್ಮವರಿತ ಸಹದೇವ ದುಶ್ಯಾಸನನ ರಥದ ಕುದುರೆಗಳ ಚಲನವನ್ನು ಚಂಚಲಗೊಳಿಸಲು ಅವುಗಳು ಭಯಗೊಳ್ಳುವಂತೆ ಬಾಣ ಪ್ರಯೋಗಿಸಿ ಬೆದರಿಸಿದನು. ಮತ್ತೆ ಅನಿಯಂತ್ರಿತನಾದ ದುಶ್ಯಾಸನನನ್ನು ಹೀನಾಯವಾಗಿ ದಂಡಿಸಿ ಪರಾಜಿತಗೊಳಿಸುವ ಹೊತ್ತಿಗೆ ಕರ್ಣ ಆತನ ರಕ್ಷಣೆಗೆ ಧಾವಿಸಿದನು. ಸಹದೇವನೆದುರಾಗಿ ಕರ್ಣ ನಿಂತನು. ಇದನ್ನು ನೋಡಿದ ಭೀಮಸೇನ ಸಹದೇವನನ್ನು ಮುಕ್ತಗೊಳಿಸಿ ಕರ್ಣನನ್ನು ಎದುರಿಸಿದನು. ಇವರೀರ್ವರ ಯುದ್ದ ಒಮ್ಮೆ ಕರ್ಣನ ಮೇಲುಗೈ, ಮತ್ತೆ ಭೀಮನ ಹಿಡಿತ, ತುಸು ಸಮಯದಲ್ಲಿ ಕರ್ಣನ ಚೇತರಿಕೆ, ಭೀಮನ ಅಸಹಾಯಕತೆ ಹೀಗೆ ಸಾಗುತ್ತಿದೆ. ಕರ್ಣ ಅವಕಾಶ ಬಳಸಿಕೊಂಡು ಭೀಮನ ರಥವನ್ನೂ, ಕರಿಕುದುರೆಗಳನ್ನೂ ಧ್ವಂಸಗೊಳಿಸಿದನು. ಭೀಮ ಚಾಣಾಕ್ಷತೆ ಮೆರೆದು ಹಾರಿ ಸನಿಹವಿದ್ದ ನಕುಲನ ರಥದಲ್ಲಿ ಸ್ಥಿತನಾದನು. ಅಲ್ಲಿಂದ ಯುದ್ದ ಮುಂದುವರಿಸಿದಾಗ ಸಾತ್ಯಕಿ ಕರ್ಣನನ್ನು ಆಹ್ವಾನಿಸಿ ತನ್ನತ್ತ ತಿರುಗಿಸಿದನು. ಮತ್ತೊಂದೆಡೆ ಧರ್ಮರಾಯನಿಗೂ ಶಲ್ಯನಿಗೂ ಉಗ್ರ ಹೋರಾಟ ಸಾಗುತ್ತಿದೆ.
ಇಂದಿನ ಯುದ್ಧದ ಪ್ರಧಾನ ಕೇಂದ್ರಬಿಂದು ದ್ರೋಣಾಚಾರ್ಯರು ಅರ್ಜುನನನ್ನು ಮಣಿಸಲು ವಿಫಲರಾಗಿ ದಣಿದು ಮಂತ್ರಾಸ್ತ್ರ ಪ್ರಯೋಗಕ್ಕೆ ತೊಡಗಿದರು. ಪ್ರತಿಯೊಂದಕ್ಕೂ ಪ್ರತ್ಯಸ್ತ್ರದಿಂದ ಪ್ರತ್ಯುತ್ತರ ನೀಡುತ್ತಾ ಪಾರ್ಥ ಸ್ಥಿತಪ್ರಜ್ಞನಾಗಿ ನಿಂತಿದ್ದಾನೆ. ದ್ರೋಣಾಚಾರ್ಯರ ವಿವೇಕವೂ ನಿಯಂತ್ರಣ ತಪ್ಪಿತು. ಧರ್ಮಯುದ್ಧದ ಶಾಸ್ತ್ರ ಶಿಕ್ಷಕನ ಶಿಕ್ಷಣ ನೀತಿಯ ರೀತಿಯೂ ಮರೆತಂತಾಗಿ ಹೋಗಿದೆ. ಏನಾದರು ಸರಿಯೇ ಧರ್ಮವೋ ಅಧರ್ಮವೋ ಗೆಲುವಷ್ಟೇ ಗುರಿ ಎಂಬಷ್ಟರ ಮಟ್ಟಿಗೆ ಇಳಿದು ಹೋಯಿತು ಬುದ್ಧಿ. ಐಂದ್ರ, ಪಾಶುಪತ, ತ್ವಾಷ್ಟ್ರ, ವಾಯವ್ಯ, ವಾರುಣ ಹೀಗೆ ಎಡೆಬಿಡದೆ ಬಾಣಗಳ ಸರಮಾಲೆ ಹಾರಿದರೂ ಎಲ್ಲವೂ ಉಪಶಮನವಾಗುತ್ತಿದೆ. ಪರಮಕ್ರುದ್ಧರಾದ ಶರಾದಪಿ ಕುಂಭೋದ್ಭವ ದ್ರೋಣರ ಮನದಲ್ಲಿ ಆವೇಶ ಉದ್ಭವಿಸಿತು. ಭೀಕರ ಸಮರದ ಈ ಸಮಯ ಮಂತ್ರಾಸ್ತ್ರಗಳ ಅತಿಬಲಯುತ ಘಾತಗಳಿಂದ ನಭೋಮಂಡಲದಲ್ಲಿ ವಿಸ್ಫೋಟಗಳಾಗ ತೊಡಗಿತು. ದೇವಾನು ದೇವತೆಗಳು, ಸಿದ್ಧರು, ಸಾಧ್ಯರು, ಗಂಧರ್ವರು, ಋಷಿಗಳು ಸಿದ್ಧ ಸಂಘರೂ, ಪುಣ್ಯ ಶರೀರಿ ಪಿತೃಗಣಗಳೂ ಈ ಭೀಕರ ಸಂಗ್ರಾಮವನ್ನು ನೋಡಿ ಭಯಗೊಳ್ಳುವಷ್ಟು ಭೀಕರ ಸ್ವರೂಪ ತಳೆಯತೊಡಗಿತು. ದಿವ್ಯ ಚೇತನರಿರಿಂದ ಸಮಾಕುಲವಾಗಿದ್ದ ಆಕಾಶದಲ್ಲಿ ಚರ್ಚೆಗಳಾಗತೊಡಗಿದವು ಈ ಯುದ್ಧ ಮಾನುಷ ವ್ಯಾಪ್ತಿಯನ್ನು ಮೀರಿ ದೇವ ದಾನವ, ದೈವ ಗಾಂಧರ್ವ ಯುದ್ದಗಳಿಂತಲೂ ಮಿಗಿಲಾಗಿ ಸಾಗುತ್ತಿದೆ. ಮಂತ್ರಾಸ್ತ್ರ – ಪ್ರತ್ಯಸ್ತ್ರಗಳ ಘಾತ ವಿಘಾತಗಳಿಂದ ಲೋಕ ಲೋಕಗಳು ಕಂಪಿಸುತ್ತಿದೆ. ಜಗದ ಪ್ರಳಯಕ್ಕೆ ಇವರೀರ್ವರು ಕಾರಣರಾಗುವರೊ ಎಂಬಂತೆ ಭಯಗೊಂಡು ಹರಿಹರರ ಸ್ತುತಿಗೈಯತೊಡಗಿದರು. ಹೀಗಿರಲು ಕೆಲವರು ಹೇಳತೊಡಗಿದರು ರುದ್ರನು ತನ್ನ ಕಾಯವನ್ನು ಇಬ್ಭಾಗವಾಗಿಸಿ ಪರಸ್ಪರ ಕಾದಾಟಕ್ಕೊಡ್ಡಿದರೆ ಹೇಗಾಗಬಹುದೊ ಹಾಗಿದೆ ಈ ಯುದ್ದ.
ತುಲನಾತ್ಮಕವಾಗಿ ಇವರೀರ್ವರನ್ನು ಗಮನಿಸುತ್ತಿದ್ದ ಗಗನ ಪ್ರೇಕ್ಷಕ ದಿವ್ಯಾತ್ಮರ ಅಭಿಪ್ರಾಯ “ಶಸ್ತ್ರಾಸ್ತ್ರಗಳ ಪರಿಪೂರ್ಣ ಜ್ಞಾನ ದ್ರೋಣರಿಗಿದೆ. ಆದರೆ ಅರ್ಜುನನಲ್ಲಿ ಅಂತಹ ಜ್ಞಾನದ ಜೊತೆ ಉಪಾಯವೂ ಇದೆ. ಆಚಾರ್ಯರು ಶೌರ್ಯ ರತ್ನರು. ಆದರೆ ಅರ್ಜುನನು ಸಮಾನ ಶೌರ್ಯವಂತನೂ ಅದ್ಬುತ ಬಲ ಸಂಪನ್ನನೂ ಆಗಿರುವ ಕಾರಣ ಬಾಹುಬಲ, ಮನೋಬಲ, ಅಸ್ತ್ರಬಲಗಳಲ್ಲಿ ವ್ಯತ್ಯಯವಾಗದಂತೆ ಸ್ಥಿರವಾದ ಯುದ್ದ ಮಾಡುತ್ತಿದ್ದಾನೆ.
ಯಾವಾಗ ತನ್ನ ಯಾವ ಯುದ್ಧ ಪರಿಕ್ರಮಗಳೂ ಸಾಧನೆ ಮಾಡಲಾಗದೆ ಹೋಯಿತೊ ಆಗ ದ್ರೋಣರು ಇನ್ನಷ್ಟು ಕೆರಳಿ ಹೋದರು. ಅತೀ ಭೀಬತ್ಸಕರ ಯುದ್ಧಕ್ಕೆ ತೊಡಗಿದ ದ್ರೋಣರು ವರ್ತುಲಾಕೃತಿಯಲ್ಲಿ ತಿರುಗುತ್ತಾ ಹೋರಾಡುತ್ತಿದ್ದಾರೆ. ದೃಷ್ಟದ್ಯುಮ್ನ ತನ್ನ ವಧೆಗೈಯುವ ಶಪಥಗೈದುದನ್ನರಿತೊ ಏನೋ ಪಾಂಚಾಲದ ಸೇನೆಯ ಮಾರಣ ಹೋಮವನ್ನು ಮಾಡತೊಡಗಿದರು. ಕಂಡ ಕಂಡ ಕಡೆ, ಸಿಕ್ಕ ಸಿಕ್ಕ ಎಡೆಗಳತ್ತ ದಿವ್ಯಾಸ್ತ್ರ ಪ್ರಯೋಗಿಸುತ್ತಾ ಯುದ್ಧ ಧರ್ಮ ಮರೆತು ಪಾಂಡವ ಸೇನೆಯ ಪದಾತಿ, ಸೇನೆ, ರಥಿಕರನ್ನು ಸರ್ವನಾಶಗೊಳಿಸತೊಡಗಿದರು. ಸೂರ್ಯನ ಬಿಸಿಲ ಜಳಕ್ಕೆ ಹಿಮ ಕರಗಿ ನೀರಾಗುವಂತೆ ಸೇನೆ ಹೆಣವಾಗಿ ಬೀಳುತ್ತಿದೆ. ಒಂದೊಮ್ಮೆಗೆ ಅರ್ಜುನನೂ ಕಂಗೆಟ್ಟನು.
ಆಗ ಶ್ರೀ ಕೃಷ್ಣ ” ಎಲೈ ಪಾರ್ಥ ಎಲ್ಲಿಯವರೆಗೆ ದ್ರೋಣರು ಧನುರ್ಧಾರಿಯಾಗಿರುವರೋ ಆ ತನಕ ಅವರ ಸಂಹಾರ ಅಸಾಧ್ಯ. ಆಚಾರ್ಯ ಭೀಷ್ಮರಂತೆಯೆ ಇವರನ್ನೂ ರಣತಂತ್ರದಿಂದ ವಿಚಲಿತಗೊಳಿಸಿ ವಧೆಗೈಯಬೇಕು. ಅನ್ಯಥಾ ಜಯ ಅಸಾಧ್ಯ ಎಂದನು. “ಮಾಧವಾ ನೀನು ಏನು ಹೇಳುತ್ತಿರುವೆ? ಮತ್ತೆ ಗುರುವರ್ಯರನ್ನು ಶಸ್ತ್ರ ಸಂನ್ಯಾಸ ಮುಖೇನ ಸೋಲಿಸಲ್ಪಡಬೇಕೆ? ಬೇಡ ಕೃಷ್ಣಾ! ನಾನು ಅವರನ್ನು ಸೋಲಿಸಿ ನಮ್ಮ ವಿಜಯ ಸಾಧಿಸಿಕೊಳ್ಳುವೆ” ಎಂದನು ಅರ್ಜುನ. ಆಗ ಕೃಷ್ಣ” ಎಲೈ ಪಾರ್ಥ ಶಕ್ತಿ ಮತ್ತು ಯುಕ್ತಿ ಎರಡೂ ಜಯಕ್ಕಾಗಿ ಸಮಾನ ಧರ್ಮಗಳು. ಯಾವಾಗ ಶಕ್ತಿಯಿಂದ ಸಾಧನೆ ಕೈಗೂಡದೋ ಆಗ ಯುಕ್ತಿ ಮಾರ್ಗವೇ ಆಯ್ಕೆ. ದ್ರೋಣಾಚಾರ್ಯರ ಕ್ಷಾತ್ರ ವಿದ್ಯೆಯಲ್ಲಿ ಲೋಪದೋಷಗಳಿಲ್ಲ ಹಾಗಿದ್ದರೂ ಅವರ ಬಳಿ ನ್ಯೂನತೆಯೊಂದು ಇದ್ದರೆ ಅದು ಪುತ್ರಪ್ರೇಮ. ಅವರ ಮಗ ಅಶ್ವತ್ಥಾಮ ನಮ್ಮ ತಂತ್ರದ ದಾಳವಾಗಲಿ. ಕುರುಸೇನೆಯಲ್ಲಿ ಅಶ್ವತ್ಥಾಮ ನಾಮಕ ಆನೆಯೊಂದಿದೆ. ಭೀಮನಿಂದ ಆ ಮಹಾಗಜ ಸಂಹರಿಸಲ್ಪಡಲಿ. ಅಶ್ವತ್ಥಾಮ ಹತನಾದ ಸುದ್ಧಿ ಹಬ್ಬಿಸಲ್ಪಡಲಿ. ಧರ್ಮರಾಯನು ಸತ್ಯವಂತ ಆತನು ಸತ್ಯವನ್ನು ನುಡಿಯಲಿ. “ಅಶ್ವತ್ಥಾಮ ಭೀಮನ ಹೊಡೆತಕ್ಕೆ ಜರ್ಜರಿತನಾಗಿ ಸತ್ತು ಬಿದ್ದಿದ್ದಾನೆ, ಸತ್ತಿರುವುದು ಆನೆಯೋ ಮನುಷ್ಯನೋ ಎಂದು ಗೊತ್ತಿಲ್ಲ” ಹೀಗೆ ಧರ್ಮಜ ಸತ್ಯವಾಕ್ಯವನ್ನು ನುಡಿಯಲಿ. ಆಗ ದ್ರೋಣರು…
ಮುಂದುವರಿಯುವುದು…





