ಭಾಗ – 379
ಭರತೇಶ್ ಶೆಟ್ಟಿ , ಎಕ್ಕಾರ್

ಪಾಂಡವ ಪಕ್ಷ ಪೂರ್ಣ ಪ್ರಮಾಣದಲ್ಲಿ ಘಟೋತ್ಕಚನ ಪ್ರತಾಪ, ಅದ್ಬುತ ಪರಾಕ್ರಮ ಮತ್ತು ಬಲಿದಾನಕ್ಕೆ ಮರುಗಿ ಕೊರಗುತ್ತಿದೆ. ಆದರೆ ಶ್ರೀ ಕೃಷ್ಣ ಪರಮಾತ್ಮ ಮಾತ್ರ ಕಿರುನಗೆ ಸೂಸುತ್ತಾ, ನೀರವ ಮೌನ ಧರಿಸಿ, ಪ್ರಶಾಂತ ಮುಖ ಕಮಲದಲ್ಲಿ ಸಂತಸದ ಛಾಯೆ ಬೀರುತ್ತಿದ್ದಾನೆ. ಸೂಕ್ಷ್ಮ ಗ್ರಾಹಿಯಾದ ಅರ್ಜುನ ಈ ಸ್ವರೂಪವನ್ನು ಗುರುತಿಸಿ ಆಶ್ಚರ್ಯಕ್ಕೊಳಗಾದ. “ಮಾಧವಾ! ನಾವೆಲ್ಲರೂ ಭೈಮಸೇನಿ ಘಟೋತ್ಕಚ ಗತಪ್ರಾಣನಾದ ದುಃಖತಪ್ತರಾಗಿದ್ದೇವೆ. ಆದರೆ ನಿನ್ನ ಪ್ರಸನ್ನತೆ ನನಗೆ ವಿಶೇಷವಾಗಿ ಕಾಣುತ್ತಿದೆ. ಸಮುದ್ರವೇ ಬತ್ತಿ ಹೋದರೆ, ಮೇರು ಪರ್ವತವೇ ಚಲಿಸಿದರೆ ಆಗಬಹುದಾದ ಸಮಾನ ಆಶ್ಚರ್ಯಕ್ಕೂ ಮಿಗಿಲಾದ ಅಚ್ಚರಿ ನಿನ್ನ ಈ ವರ್ತನೆಯಿಂದ ನನಗಾಗುತ್ತಿದೆ. ಹಾಗೆ ಸುಮ್ಮನೆ ಪ್ರಸನ್ನ ಚಿತ್ತನಾಗುವವ ನೀನಲ್ಲ. ಹಾಗಿದ್ದರೆ ಅಂತಹ ಮಹತ್ತರ ಕಾರಣ ಏನು? ಹೈಡಿಂಬಿಯ ಪ್ರಾಣ ಹರಣವಾದ ಕಾಲದಲ್ಲಿ, ಸಮಯೋಚಿತವಲ್ಲದ ಈ ಪ್ರಸನ್ನತೆ ಮೂಡಿದೆ ಎಂದರೆ ಅದು ಅಕಾರಣವಾಗಿರದು. ಏನದು ಎಂದು ತಿಳಿಯಲು ಬಯಸಿರುವ ನನ್ನ ಈ ಕುತೂಹಲ ಪರಿಹರಿಸಬೇಕು” ಎಂದು ಪ್ರಾರ್ಥಿಸಿದನು.
“ಅರ್ಜುನಾ! ಜನ್ಮತಃ ಕರ್ಣ ಕವಚ ಕುಂಡಲಧಾರಿಯಾಗಿ ಜನಿಸಿದ್ದವನು. ಅನ್ಯ ದೇವಾನುದೇವತೆಗಳು, ರಾಕ್ಷಸರು, ಮಾನುಷ ವೀರರಿಗೆ ಅಭೇದ್ಯವಾಗಿದ್ದರೂ, ಕರ್ಣನ ದಿವ್ಯ ರಕ್ಷಾಕವಚ ಕುಂಡಲಗಳು ಏಕರಥಿಯಾಗಿರುವ ಗಾಂಡೀವಧಾರಿ ನೀನು ಮತ್ತು ಸುದರ್ಶನಧಾರಿಯಾದ ನನಗೆ ಛೇದನೀಯವೆ ಆಗಿರುತ್ತಿತ್ತು. ಯಾಕೆಂದರೆ ಆತನ ಹಿಂದಿನ ಜನ್ಮದ ಕೋರಿಕೆ ಹಾಗಿದೆ. ಆದರೆ ಅಂತಹ ಕವಚ ಕುಂಡಲಗಳನ್ನು ಇಂದ್ರನಿಗೆ ದಾನವಾಗಿತ್ತ ಕರ್ಣ, ತನ್ನ ಶ್ರೇಷ್ಠ, ನಿಸ್ವಾರ್ಥ ದಾನ ಬುದ್ದಿಗೆ ಪ್ರತಿಯಾಗಿ ಸುಮನಸ ಇಂದ್ರನಿಂದ ಶಕ್ತ್ಯಾಯುಧವನ್ನು ಅನುಗ್ರಹ ರೂಪದಲ್ಲಿ ಪಡೆದಿದ್ದನು. ಆ ಶಕ್ತ್ಯಾಯುಧ ಧಾರಣೆ ಮಾಡಿ ಕರ್ಣನೇನಾದರು ನಿನ್ನ ಮುಂದೆ ಸಮರಕ್ಕೆ ನಿಂತರೆ ಜಯ ಆತನ ಪಾಲಿಗೆ ನಿಶ್ಚಯವಾಗುತ್ತಿತ್ತು. ಇಂದು ಅಂತಹ ಸಂಭವನೀಯ ದುರಂತ ಮುಕ್ತವಾಗಿದೆ. ಮತ್ತು ಮಹಾ ವಿಕ್ರಮಿಯಾಗಲಿದ್ದ ಕರ್ಣ, ಶಕ್ತ್ಯಾಯುಧ ನಷ್ಟವಾದ ಕ್ಷಣದಲ್ಲಿ ಸತ್ತು ಹೋದನೆಂದು ತಿಳಿಯಬಹುದು. ಈಗ ಬದುಕಿರುವ ಕರ್ಣ, ಸಾಂಪ್ರದಾಯಿಕವಾಗಿ ನಿನ್ನಿಂದ ಹತ ಪ್ರಾಣನಾಗುವ ಪ್ರಕ್ರಿಯೆ ಮಾತ್ರ ಉಳಿದಿದೆ. ಹಾಗಾಗಿ ಆಪತ್ತು ದೂರವಾದ ಕಾರಣ ಈ ಪ್ರಸನ್ನತೆ ಹೊರತು ಘಟೋತ್ಕಚನ ಮರಣದ ಕುರಿತಾದ ಸಂಭ್ರಮವಲ್ಲ” ಎಂದು ವಿವರಿಸಿದನು.
ಇತ್ತ ಹಸ್ತಿನಾವತಿಯಲ್ಲಿ ಧೃತರಾಷ್ಟ್ರ ಅತೀವವಾದ ವ್ಯಥೆಗೆ ಒಳಗಾಗಿ ತನ್ನ ಮನದ ದುಗುಡ ಮತ್ತು ಸಂದೇಹವನ್ನು ಪ್ರಶ್ನಿಸತೊಡಗಿದ್ದಾನೆ “ಹೇ ಸಂಜಯಾ! ನೀನು ದಿವ್ಯ ದೃಷ್ಟಿ ಮತ್ತು ಜ್ಞಾನ ಉಳ್ಳವನು. ಆ ಕಾರಣದಿಂದಾಗಿ ನಿನ್ನಲ್ಲಿ ನನ್ನದೊಂದು ಜಿಜ್ಞಾಸೆ. ಮಿಂಚಿ ಹೋದ ಕಾಲಕ್ಕೆ ಚಿಂತಿಸಿ ಫಲವಿಲ್ಲ, ಆದರೂ ನನ್ನ ಸಂದೇಹ ಪರಿಕಾರಕ್ಕಾಗಿ ಕೇಳುತ್ತಿದ್ದೇನೆ. ಕರ್ಣನ ಬಳಿ ಅತ್ಯಮೋಘವಾದ ಇಂದ್ರಾನುಗ್ರಹಿತ ಶಕ್ತಿಯಿತ್ತು. ಆ ಕರ್ಣನಿಗೆ ಅರ್ಜುನ ಪರಮ ಶತ್ರುವಾಗಿದ್ದ. ಅಂತಹ ಅರ್ಜುನನ ವಧೆ ಕರ್ಣನ ಕನಸೂ, ಜೀವನದ ಗುರಿಯೂ ಆಗಿತ್ತು. ಹಾಗಿದ್ದೂ ಈ ತನಕ ಅದೆಷ್ಟೋ ಬಾರಿ ಕರ್ಣಾರ್ಜುನರು ಪರಸ್ಪರ ಎದುರಾಗಿ ಯುದ್ದ ಮಾಡಿದ್ದಾರೆ. ಅತ್ಯದ್ಬುತವಾದ ಸಾಹಸ ಪ್ರದರ್ಶನಗೊಂಡು, ಕರ್ಣ ಪರಾಜಿತನಾಗಿದ್ದಾನೆ. ಎಷ್ಟು ಬಾರಿ ಪಾರ್ಥನಿಂದ ಸೋತು ಅಪಮಾನಿತನಾದರೂ, ತನ್ನ ಬಳಿ ಇದ್ದ ಶಕ್ತ್ಯಾಯುಧ ಪ್ರಯೋಗಿಸಿ ಅರ್ಜುನನ ವಧೆಯನ್ನೇಕೆ ಮಾಡಿರಲಿಲ್ಲ?” ಎಂದು ವಿಶ್ಲೇಷಿಸಿ ಪ್ರಶ್ನಿಸಿದನು.
ಆಗ ಸಂಜಯ “ಮಹಾರಾಜಾ, ಶ್ರೀ ಕೃಷ್ಣ ಪರಮಾತ್ಮ ಇರುವ ತನಕ ಪಾಂಡವರ ಸಂಹಾರ ಸಾಧ್ಯವಿಲ್ಲ. ಸಂರಕ್ಷಕನಾಗಿ ಆತನು ಸ್ವಯಂ ಇದ್ದು ಎಲ್ಲವನ್ನೂ ನಿಯಂತ್ರಿಸುತ್ತಾ, ನಿರ್ದೇಶಿಸುತ್ತಾ, ತನ್ನ ಸಂಕಲ್ಪ ಪೂರೈಸುತ್ತಾ ಇದ್ದಾನೆ. ಈ ಮೊದಲು ಭಗದತ್ತ ಪ್ರಳಯ ಸ್ವರೂಪದ “ವೈಷ್ಣವಾಸ್ತ್ರ” ವನ್ನು ಅರ್ಜುನನ ಮೇಲೆ ಪ್ರಯೋಗಿಸಿದಾಗ ಕೃಷ್ಣನೇ ಎದ್ದು ಎದೆಗೊಟ್ಟು ಲೀನವಾಗಿಸಿದ್ದು ನಮಗೆ ತಿಳಿದಿದೆ. ವರುಣ ಪುತ್ರ ಶ್ರುತಾಯುಧನ ದಿವ್ಯಗದೆಯನ್ನೂ ತನ್ನತ್ತ ಸೆಳೆದುಕೊಂಡ! ಅರ್ಜುನ ಅಲ್ಲೂ ಬದುಕುಳಿದ. ಶ್ರೀಕೃಷ್ಣ ಪಾಂಡವ ಪಕ್ಷ ಎಂಬ ಮಹಾವೃಕ್ಷಕ್ಕೆ ಬೇರು ಆಗಿದ್ದಾನೆ. ಅರ್ಜುನ ಕಾಂಡ ಸ್ವರೂಪನಾದರೆ, ಭೀಮ ಮತ್ತು ಧರ್ಮರಾಯ ಪ್ರಧಾನ ಗೆಲ್ಲುಗಳು. ನಕುಲ ಸಹದೇವರು ರೆಂಬೆಗಳು. ದ್ರುಪದಾದಿ ಮಿತ್ರರಾಜರು, ಸೇನೆಗಳು ಆ ವೃಕ್ಷದ ಎಲೆಗಳು. ಹೀಗೆಂದು ಕರ್ಣನ ಜೊತೆ ತಂತ್ರಾಲೋಚನೆ ಮಾಡುತ್ತಿದ್ದ ಶಕುನಿ, ದುಶ್ಯಾಸನ, ಜಯದ್ರಥ, ದುರ್ಯೋಧನಾದಿಗಳು ನಿತ್ಯವೂ ಕರ್ಣನಿಗೆ ಉಪದೇಶ ಮಾಡುತ್ತಿದ್ದರು. ಅರ್ಜುನನದ್ದೊಂದು ಶಪಥವಿದೆ, ಯಾರು ಯುದ್ದಾಹ್ವಾನ ನೀಡಿದರೂ ಅಂತಹವರನ್ನು ಯುದ್ದದಲ್ಲಿ ಸೋಲಿಸದೆ ಬಿಡಲಾರೆನೆಂದು. ವಿಚಾರ ಹೀಗಿರುವಾಗ, ಕರ್ಣಾ ನಾಳಿನ ದಿನ ಅರ್ಜುನನಿಗೆ ಯುದ್ದಾಹ್ವಾನ ನೀಡು. ಆತ ನಿನಗೆದುರಾಗುತ್ತಾನೆ. ಶಕ್ತಿ ಆಯುಧ ಪ್ರಯೋಗಿಸಿ ಅರ್ಜುನನ ವಧೆ ಮಾಡು. ಕಾಂಡವೇ ಕತ್ತರಿಸಲ್ಪಟ್ಟರೆ ಮತ್ತೆ ರೆಂಬೆ ಮತ್ತು ಬೇರು ಇದ್ದರೂ ನಿರರ್ಥಕ ಎಂದು ತರ್ಕಿಸಿದ್ದರು.
ಶಕುನಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ವಿವೇಚಿಸಿದ. ಪಾಂಡವ ಪಕ್ಷದ ನಿರ್ದೇಶಕ, ಪಾಂಡವ ವೃಕ್ಷದ ಬೇರು ಆಗಿರುವ ಕೃಷ್ಣನನ್ನು ಗುರಿಯಾಗಿಸಿ ಶಕ್ತಿ ಆಯುಧ ಪ್ರಯೋಗಿಸು. ‘ಮಮ ಪ್ರಾಣಾಹಿಃ ಪಾಂಡವಃ’ ಎಂದು ನುಡಿದಿರುವ ಕೃಷ್ಣ ಒಬ್ಬನು ಅಳಿದರೆ ಅರ್ಜುನನೂ ನಮಗೆ ಸುಲಭದ ತುತ್ತಾಗಬಲ್ಲ. ಬೇರು ಕತ್ತರಿಸಲ್ಪಟ್ಟ ಮರವೂ ನಾಶ ಹೊಂದುತ್ತದೆ. ಕೃಷ್ಣನ ಸಾರಥ್ಯ ಇಲ್ಲದ ಅರ್ಜುನನನ್ನು ತಂತ್ರ ಯೋಜಿಸಿ ಅನಾಯಾಸವಾಗಿ ವಧಿಸಬಹುದು. ಹೀಗೆ ಪೂರ್ಣ ಪ್ರಮಾಣದ ಸಲಹೆ – ಸೂಚನೆ ನೀಡಿ ಕಳುಹಿಸಿದರೂ ಕರ್ಣನಿಂದ ಹಾಗೆ ಮಾಡಲಾಗುತ್ತಿರಲಿಲ್ಲ. ನಾಳೆ ಖಂಡಿತಾ ಆ ಕೆಲಸ ಪೂರೈಸುವೆ, ಅರ್ಜುನನ ಸಂಹಾರ ನಿಶ್ಚಿತ ಎಂಬ ಪ್ರತಿಜ್ಞೆಯನ್ನಷ್ಟೇ ನಿತ್ಯವೂ ಮಾಡುತ್ತಿದ್ದ ಕರ್ಣ.
ಹೀಗಿರಲು ಸಾತ್ಯಕಿಗೂ ಕುತೂಹಲ ಹೆಚ್ಚಾಗಿ ಶ್ರೀಕೃಷ್ಣನಲ್ಲಿ ಕರ್ಣನ ಕುರಿತಾಗಿ, ನೀನೀಗ ನನ್ನಲ್ಲಿ ಕೇಳುತ್ತಿರುವ ಪ್ರಶ್ನೆಯನ್ನು ಕುರುಕ್ಷೇತ್ರದಲ್ಲಿ ಕೇಳುತ್ತಿದ್ದಾನೆ. ಅರ್ಜುನ ಇಷ್ಟು ಸಲ ಕರ್ಣನನ್ನು ಕೆಣಕಿ, ನೋಯಿಸಿ, ಸೋಲಿಸಿದರೂ ಯಾಕೆ ದಿವ್ಯ ಶಕ್ತ್ಯಾಯುಧ ಪ್ರಯೋಗಿಸಿರಲಿಲ್ಲ? ಅದು ಒಂದೇ ಬಾರಿ ಪ್ರಯೋಗಿಸಬಹುದಾಗಿದ್ದು, ಓರ್ವ ಶತ್ರುವಿನ ಮರಣಕ್ಕಷ್ಟೇ ಪೂರಕವಾಗಿ ನಂತರ ಇಂದ್ರನಲ್ಲಿ ಐಕ್ಯವಾಗುತ್ತದೆ ಎಂದು ತಿಳಿದಿದ್ದರೂ, ಯಾಕೆ ಈ ಮೊದಲು ಪಾರ್ಥನ ವಧೆಗೈಯದೆ ಬಿಟ್ಟಿದ್ದ?
ಆಗ ಶ್ರೀ ಕೃಷ್ಣ ಸಾತ್ಯಕಿಯ ಮನದ ಗೊಂದಲ ಪರಿಹರಿಸುತ್ತಾ “ಸಾತ್ವತನೇ, ನಾನು ಭಕ್ತವತ್ಸಲನಾಗಿ ವ್ಯವಹರಿಸಬೇಕಾದ ಬಾಧ್ಯತೆಯಿಂದ ಬಂಧಿಸಲ್ಪಟ್ಟಿದ್ದೇನೆ. ನಾನು ಸೋಲುವುದು ನನ್ನ ಪರಮ ಭಕ್ತರಿಗೆ ಮಾತ್ರ. ಯಾರು ನನ್ನನ್ನು ಪೂರ್ಣ ಪ್ರಮಾಣದಲ್ಲಿ ನಂಬಿ ನೆಚ್ಚಿಕೊಳ್ಳುತ್ತಾರೋ ಅಂತಹ ಸದ್ಭಕ್ತರ ರಕ್ಷಣೆ ಮಾಡಿ ಪಾಲಿಸುವುದು ನನ್ನ ಆದ್ಯ ಕರ್ತವ್ಯ. ಹೀಗಿರಲು ಪಾಂಡವರು, ಅದರಲ್ಲೂ ಅರ್ಜುನ ವೀರಾಗ್ರಣಿಯೂ ನನ್ನ ಭಕ್ತಾಗ್ರಣಿಯೂ ಹೌದು. ಅಂತಹ ಪರಮ ಭಕ್ತನ ರಕ್ಷಕನಾಗಿ ನನ್ನ ಕರ್ತವ್ಯ ಮಾಡುತ್ತಿದ್ದೇನೆ. ಲೋಕದ ರಕ್ಷಕನಾದ ನನ್ನನ್ನು ಗುರಿಯಾಗಿಸುವ ದುಷ್ಪ್ರೇರಣೆ ಪಡೆದು ಕರ್ಣ ಇಂದಿನ ಸಮರಕ್ಕೆ ಬಂದಿದ್ದ. ಅರ್ಜುನನನ್ನೂ ವಧಿಸುತ್ತೇನೆ ಎಂದು ಕಟಿ ಬದ್ಧನಾಗಿದ್ದ. ಆದರೆ ನನ್ನ ಮಾಯಾ ಮೋಹ ಪಾಶಕ್ಕೆ ಸಿಲುಕುತ್ತಿದ್ದ ಕರ್ಣ ಹಾಗೆ ಮಾಡಲಾಗದೆ ವಿಚಲಿತನಾಗುತ್ತಿದ್ದ. ಅರ್ಜುನ ನನ್ನ ರಕ್ಷೆಯ ಕಕ್ಷೆಯೊಳಗೆ ಸುರಕ್ಷಿತನಾಗುಳಿಯುತ್ತಿದ್ದ” ಎಂದನು.
ಹೀಗೆ ವಿಸ್ತೃತವಾಗಿ ಸಂಜಯ ಧೃತರಾಷ್ಟ್ರನಿಗೆ ವಿವರಿಸಿ ಹೇಳಿದನು.
ಇತ್ತ ಕುರು ಸೇನಾಪತಿ ದ್ರೋಣಾಚಾರ್ಯರು ಅತಿ ಕ್ರುದ್ಧರಾಗಿದ್ದಾರೆ. ತಾನಂದುಕೊಂಡ ಯಾವ ಕಾರ್ಯಸಾಧನೆಯೂ ಆಗುತ್ತಿಲ್ಲ. ಯೋಚನೆಯ ಯೋಜನೆಗಳ ಸಂಯೋಜನೆ ವಿಫಲಗೊಳ್ಳುತ್ತಿದೆ. ಮನಸ್ಸು ಕದಡಿತ್ತು, ಕೋಪದ ರೂಪ ತಳೆದು ಕ್ರೋಧಾಗ್ನಿಯಾಗಿ ಪ್ರಜ್ವಲಿಸತೊಡಗಿದರು. ದಿವ್ಯಶರಗಳಿಂದ ಪಾಂಡವ ಸೇನಾನಾಶಗೈಯುತ್ತಾ ಮುಂದುವರಿದಾಗ ಪಾಂಚಾಲಾಧಿಪ ದ್ರುಪದ ಮತ್ತು ಮತ್ಸ್ಯ ದೇಶಾಧಿಪ ವಿರಾಟ ದ್ರೋಣರ ಆವೇಗದ ವೇಗಕ್ಕೆ ತಡೆಯಾಗಲು ಮುಂದೊತ್ತಿ ಬಂದರು. ಧುಮ್ಮಿಕ್ಕಿ ಭೋರ್ಗರೆದು ಹರಿಯುವ ಮಹಾನದಿಯಂತಾಗಿದ್ದ ದ್ರೋಣರನ್ನು ಈ ಕ್ಷಣ ವಿರಾಟ ರಾಯನಿಗೆ ಎದುರಿಸಿ ತಡೆಯಲು ಕಷ್ಟವಾಗ ತೊಡಗಿತು. ವೃದ್ಧನೂ ಆಗಿದ್ದ ವಿರಾಟನಿಗೆ ತಡರಾತ್ರಿಯ ಬಳಲಿಕೆ, ಆಯಾಸ, ನಿದ್ದೆಯ ಕಾರಣದಿಂದ ಪೂರ್ಣ ಪ್ರಮಾಣದ ಸಕ್ಷಮ ಹೋರಾಟ ಸಾಧ್ಯವಾಗಲಿಲ್ಲ. ದ್ರೋಣಾಚಾರ್ಯರ ಎದುರು ತನ್ನ ಶಕ್ತಿ ಸಾಮರ್ಥ್ಯ ಒಗ್ಗೂಡಿಸುತ್ತಾ ಹೋರಾಡಿದರೂ ಉಗ್ರ ಪ್ರತಾಪದಿಂದ ಎರಗುತ್ತಿದ್ದ ದ್ರೋಣರ ತೀಕ್ಷ್ಣ ಶರಗಳಿಗೆ ಆಹುತಿಯಾಗಿ ಹತನಾಗಬೇಕಾಯಿತು. ಅಜ್ಞಾತವಾಸ ಕಾಲದಲ್ಲಿ ಪಾಂಡವರಿಗೆ ಆಶ್ರಯದಾತನೂ, ಅನ್ನದಾತನೂ ಆಗಿದ್ದ ಮಹಾತ್ಮ ವೀರ ಮರಣವನ್ನಪ್ಪಿಯಾಯಿತು.
ಆ ಕೂಡಲೆ ಮಹಾರಾಜ ದ್ರುಪದ ದ್ರೋಣರನ್ನು ಆಕ್ರಮಿಸಿದನು. ಗುರುಕುಲದಲ್ಲಿ ಮಿತ್ರರಾಗಿ ಕಲಿಯುತ್ತಾ ಬೆಳೆದಿದ್ದ ಕಲಿಗಳು, ಆಪತ್ಕಾಲದಲ್ಲಿ ಆಪ್ತರಾಗಿರದೆ ಮಹಾಸಂಗ್ರಾಮ ನಿರತರಾಗಿದ್ದಾರೆ…
ಮುಂದುವರಿಯುವುದು…





