28.8 C
Udupi
Tuesday, December 16, 2025
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ – 378

ಭರತೇಶ ಶೆಟ್ಟಿ, ಎಕ್ಕಾರ್

ಸಂಚಿಕೆ ೩೭೮ ಮಹಾಭಾರತ

ಕೃಪಾಚಾರ್ಯರಿಂದ ಆಕ್ರೋಶದ ನುಡಿಗಳು ಟೀಕಾಸ್ತ್ರಗಳಾಗಿ ಬಂದಾಗ ಕರ್ಣ ಒಮ್ಮೆಗೆ ದಿಗ್ಭ್ರಾಂತನಾದರೂ “ವಿಪ್ರವರ! ನೀವೆಲ್ಲರೂ ಯುದ್ದದಲ್ಲಿ ಭಾಗಿಗಳು ಹೌದು. ಆದರೆ ನನಗೊಂದು ಸಂದೇಹವಿದೆ ಗುರು ದ್ರೋಣ, ಗುರು ಕೃಪಾಚಾರ್ಯರಾದ ನೀವೀರ್ವರು ಕೌರವ ಪಕ್ಷದಲ್ಲಿರುವುದು ಮಾತ್ರ. ಜಯ ಬಯಸಿರುವುದು ಪಾಂಡವರಿಗೋ ಇಲ್ಲಾ ಕೌರವರಿಗೋ? ನಾನೀಗ ತೋರಲಿರುವ ಸಾಹಸದ ಬಗ್ಗೆ ಪ್ರಸ್ತಾಪ ಮಾಡಿರುವುದು ಸುರಿಯಲಿರುವ ಮಹಾವರ್ಷಕ್ಕೆ ಮುಂಚಿತವಾಗಿ ಅಬ್ಬರಿಸಿದ ಮೇಘ ಸ್ಪೋಟದ ಗುಡುಗಿನಂತೆ. ಅನುಸರಿಸಿ ಕೋಲ್ಮಿಂಚುಗಳೂ, ಭೀಕರ ಮಳೆಯೂ ಸುರಿಯಲಿದೆ ಎಂಬ ಸೂಚನೆ. ನೀವು ಪ್ರೋತ್ಸಾಹಿಸಿ ಬೆಂಬಲಿಸುವ ಬದಲು ನನ್ನ ಮನಸ್ಥಿತಿಯನ್ನು ಕದಡಿ ದುರ್ಬಲಗೊಳಿಸಲು ಹೊರಟಿರುವುದನ್ನು ಕಂಡರೆ ನಿಮ್ಮ ಮನದಿಂಗಿತ ಪ್ರಶ್ನಾರ್ಹವಾಗುತ್ತದೆ. ಗುರು ದ್ರೋಣರು ಜಯದ್ರಥನಿಗೆ ಪ್ರಾಣ ರಕ್ಷಣೆಯ ಭರವಸೆ ಕೊಟ್ಟರು ವಿನಹ ಹಾಗೆ ಮಾಡಲಾಗದೆ ಹೋದರು. ಅವರ ವಚನ ಪಾಲನೆಯಲ್ಲಾದ ಲೋಪವೇಕೆ ನಿಮಗೆ ಕಾಣದಾಗಿದೆ? ಅವರು ಧರ್ಮರಾಯನನ್ನು ಬಂಧಿಸುವ ವಚನ ಇತ್ತವರಾದರೂ ಈ ತನಕ ಸಾಧಿಸಲಾಗದೆ ಉಳಿದಿದ್ದಾರೆ. ಅದು ಯಾಕೆ ಪ್ರಶ್ನಿಸಲ್ಪಟ್ಟಿಲ್ಲ? ನಾನೀಗ ನುಡಿದ ಮಾತು ಮಾತ್ರ ಅವಿವೇಕದ ನುಡಿಯಾಗಿ ನಿಮಗೆ ಕಂಡಿತು? ಅವರೆಲ್ಲಾ ಆ ರೀತಿ ಮಾತುಗಳನ್ನಾಡಿದಾಗ ಕೃಷ್ಣಾರ್ಜುನರು ನಿಮಗೆ ದುರ್ಬಲರಾಗಿ ದ್ರೋಣಾಚಾರ್ಯರು ಪ್ರಬಲರಾಗಿ ಕಂಡರೆ? ನೀವು ಆಂತರಂಗಿಕವಾಗಿ ಪಾಂಡವ ಪಕ್ಷೀಯರು ಆಗಿದ್ದೀರಿ. ಅದು ನಿಸ್ಸಂಶಯ. ವೃದ್ದರಾದ ನೀವು (ಕೃಪ ಮತ್ತು ದ್ರೋಣ) ಈರ್ವರು ಅಸಮರ್ಥರು ಎಂದು ಮೊದಲು ಒಪ್ಪಿಕೊಳ್ಳಿ” ಹೀಗೆ ಟೀಕೆ ಮಾಡುತ್ತಾ ಗುಡುಗಿದನು.

ಕರ್ಣನ ಈ ಮಾತುಗಳನ್ನು ಆಲಿಸಿ, ಅಶ್ವತ್ಥಾಮ ತನ್ನ ಮಾವ ಕೃಪಾಚಾರ್ಯ ಹಾಗು ಪಿತ ದ್ರೋಣಾಚಾರ್ಯರನ್ನು ನಿಂದಿಸಿದಾತನ ಮೇಲೆ ಕೆಂಡಾಮಂಡಲನಾದನು. ಒರೆಯಿಂದ ಖಡ್ಗವನ್ನು ಸೆಳೆದೆಳೆದು “ನೀಚನಾದ ಕರ್ಣ ಈ ಕ್ಷಣವೇ ನಿನ್ನ ವಧೆ ಮಾಡುವೆ” ಎಂದು ಮುನ್ನುಗ್ಗಿದನು. “ಅಲ್ಪ ವಿದ್ಯಾ ಮಹಾಗರ್ವಿ” ಎಂದು ಶಾಸ್ತ್ರವೇ ಹೇಳಿದೆ. ಹೇ ಕರ್ಣಾ! ನೀನು ಆ ಸಾಲಿಗೆ ಸೇರಿದವನು. ಶಾರದ್ವತ ಕೃಪಾಚಾರ್ಯ, ಮತ್ತು ಜಗದ ಶ್ರೇಷ್ಟ ಧನುಷ್ಮಂತರಲ್ಲಿ ಓರ್ವರಾದ ಗುರುವರ್ಯ ದ್ರೋಣಾಚಾರ್ಯರ ಯೋಗ್ಯತೆಯ ಬಗ್ಗೆ ನೀನು ತಿಳಿದದ್ದು ಬಹಳ ಕಡಿಮೆಯಾಗಿದೆ. ಅವರು ಎದುರಾಳಿಯ ಬಲಾಬಲ ವಿವೇಚಿಸಿ, ಯೋಜನೆ ರೂಪಿಸುವಲ್ಲಿ ತರ್ಕಿಸಿ ಸುಸ್ಪಷ್ಟವಾಗಿ ಪಾರ್ಥ ಅಜೇಯನು ಎಂದು ಯುದ್ದಕ್ಕೆ ಮೊದಲಾಗಿ ಹೇಳಿದ್ದಾರೆ. ನಿನಗದು ಮತ್ಸರ ಉಂಟು ಮಾಡಿದ್ದಕ್ಕೆ ಯಾರು ಹೊಣೆ? ಅರ್ಜುನ ಸಂಹಾರ ಮಾಡಲು ಸುಲಭ ಸಾಧ್ಯವಾಗಬಲ್ಲವನು ಹೌದಾಗಿದ್ದರೆ, ನೀನು ಸೂಚಿವ್ಯೂಹದಲ್ಲಿದ್ದು ಅರ್ಜುನ ಎದುರಾದಾಗ ಯಾಕೆ ನಿನ್ನ ಮಹಾಸ್ತ್ರ ಪ್ರಯೋಗಿಸಿ ಅರ್ಜುನನ ವಧೆ ಮಾಡದೆ ಬಿಟ್ಟು ಬಿಟ್ಟೆ? ಜಯದ್ರಥನ ಸಂಹಾರವಾಗಲು ಅವಕಾಶ ಒದಗುತ್ತಿರಲಿಲ್ಲ. ಈಗ ಯಾಕೆ ಡಂಗುರ ಸಾರುತ್ತಿರುವೆ? ನಿನ್ನಂತಹ ಸ್ವಾರ್ಥಿ, ನೀಚ ಮನಸ್ಥಿತಿಯವರಿಂದ ಈ ಸಂಗ್ರಾಮ ಸಾಧ್ಯವಾಗಿರುವುದು. ನಮ್ಮ ಮಿತ್ರ ರಾಜರು ಸೇನಾಸಹಿತವಾಗಿ ನಾಶಗೊಳ್ಳುತ್ತಿರುವುದು. ದುರ್ಬುದ್ಧಿಯ ಮೂಟೆ, ನೀನು ದುಷ್ಟ ಕರ್ಣಾ, ನಿನ್ನಂತಹವರು ಬದುಕಿರಬಾರದು” ಎಂದು ಅಬ್ಬರಿಸುತ್ತಾ ಖಡ್ಗವನ್ನೆತ್ತಿ ಕರ್ಣನನ್ನು ಕೊಲ್ಲಲು ಮುನ್ನಡೆದಾಗ ದುರ್ಯೋಧನ ತಡೆದನು.

“ಗುರುಪುತ್ರ ಅಶ್ವತ್ಥಾಮಾ! ಮೊದಲಾಗಿ ನೀನು ಶಾಂತನಾಗು. ನಮ್ಮವರಿಂದ ಏನಾದರೂ ಅಪರಾಧ ಆಗಿದ್ದರೆ ನಾನು ಅವರ ಪರವಾಗಿ ಕ್ಷಮೆ ಕೇಳುತ್ತೇನೆ, ಮನ್ನಿಸಿಬಿಡು. ಈಗ ಪರಮ ಪರಾಕ್ರಮಿಗಳು, ವೀರರಾದ ಹಿರಿಯರು ದ್ರೋಣ, ಕೃಪ, ಶಲ್ಯಾದಿಗಳ ಜೊತೆ ಕರ್ಣ ಅಶ್ವತ್ಥಾಮಾದಿಗಳು ಒಗ್ಗಟ್ಟಾದರೆ ಮಾತ್ರ ನಮ್ಮ ಜಯ ಸಾಧ್ಯವಾದೀತು. ಆಪತ್ಕಾಲದಲ್ಲಿ ನಾವೇ ಒಳ ಜಗಳ ನಿರತರಾದರೆ ನಮ್ಮನ್ನು ಸೋಲಿಸಲು ಕೃಷ್ಣಾರ್ಜುನರು ಅನಗತ್ಯ. ರಣಾಂಗಣದಲ್ಲಿ ನಮಗೆ ಯುದ್ದಾಹ್ವಾನ ಬರುತ್ತಿದೆ. ನಮ್ಮ ಸೇನಾಪತಿ, ವೃದ್ದರಾದ ಗುರು ದ್ರೋಣರು ಸಕಲ ಶ್ರಮ ವಿನಿಯೋಗಿಸಿ, ನಮ್ಮ ಪಕ್ಷದ ವೀರರನ್ನು ಒಗ್ಗೂಡಿಸಿ ಪಾಂಡವರ ಆಕ್ರಮಣವನ್ನು ತಡೆದು ಕಾದಾಡುತ್ತಿದ್ದಾರೆ. ಹೀಗಿರಲು ನಾವು ಪರಸ್ಪರ ಪ್ರೋತ್ಸಾಹ ನೀಡಿ, ಉತ್ತೇಜನದ ಮುಖೇನ ನಮ್ಮ ಜಯಕ್ಕಾಗಿ ಹೋರಾಡಬೇಕು. ನಾವೆಲ್ಲರೂ ವೀರನಾದ ಕರ್ಣನಿಗೆ ಬೆಂಬಲವಿತ್ತು, ಧೈರ್ಯ ತುಂಬಿ, ಆತನ ರಕ್ಷಣೆಯ ಹೊಣೆಹೊತ್ತು ಸಮರಾಂಗಣದಲ್ಲಿ ದುಡಿಯಬೇಕು” ಎಂದನು.

ಶಾಂತರಾದ ಕೃಪ – ಅಶ್ವತ್ಥಾಮರು “ಹಾಗೆಯೇ ಆಗಲಿ. ದುರ್ಮತಿಯಾದ ಕರ್ಣನ ಅಪರಾಧವನ್ನು ಮನ್ನಿಸಿದ್ದೇವೆ. ಅರ್ಜುನನ ಎದುರಾಗಿ ಹೋರಾಡಿ ಜಯಶೀಲನಾಗಲಿ. ಆಗ ನಾವೂ ಆತನನ್ನು ಹೊಗಳಿ ಅಭಿನಂದಿಸಲಿದ್ದೇವೆ” ಎಂದರು.

ಪಾಂಡವ ಸೇನೆಯಿಂದ ಕರ್ಣನಿಗೆ ಯುದ್ದಾಹ್ವಾನ ಸಮುದ್ರದ ಅಲೆಗಳಂತೆ ಪುನರಾವರ್ತನೆಗೊಳ್ಳುತ್ತಾ ಬಂದು ಪ್ರತಿಧ್ವನಿಸತೊಡಗಿದೆ. “ದುರ್ಯೋಧನನ ಅಧರ್ಮಗಳಿಗೆ ಪೂರಕನಾಗಿದ್ದ ಆ ಅಧಮ ಈಗ ಬಂದು ಪಂಥಾಹ್ವಾನ ಸ್ವೀಕರಿಸಲಿ. ಸರ್ವ ಅನರ್ಥಗಳಿಗೆ ಕಾರಣನಾಗಿರುವ ಆ ಅಲ್ಪಮತಿ ಕರ್ಣ ಹೇಡಿಯಾದನೇ? ಧೈರ್ಯವಿದ್ದರೆ ಹೋರಾಡಿ ಗೆದ್ದು, ತನ್ನ ವಿಕ್ರಮ ತೋರಿಸಲಿ. ಆತನ ವಧೆಗಾಗಿ ಪಾಂಡವ ಸೇನೆ ಹಾತೊರೆಯುತ್ತಿದೆ” ಎಂಬ ಹಾಗೆ ನಿಂದನೆ, ಘೋಷಣೆ, ಸವಾಲು ಹಾಕುತ್ತಾ ಕರ್ಣನನ್ನು ಮತ್ತಷ್ಟು ಕೆರಳುವಂತೆ ಮಾಡತೊಡಗಿದರು.

ಅಶ್ವತ್ಥಾಮ, ಕೃಪ ಸಹಿತ ದುರ್ಯೋಧನ ಕರ್ಣಾದಿಗಳೂ ಅತ್ಯುಗ್ರರಾಗಿ ಪಾಂಡವ ಸೇನೆಯ ಮೇಲೆರಗಿದರು. ಅಶ್ವತ್ಥಾಮನನ್ನು ದೃಷ್ಟದ್ಯುಮ್ನ, ಕೃಪರನ್ನು ದ್ರುಪದ, ದುರ್ಯೋಧನನನ್ನು ಘಟೋತ್ಕಚ, ಕರ್ಣನನ್ನು ಸಾತ್ಯಕಿ ತಡೆದರು. ಕರ್ಣ ಮಾತ್ರ ಈ ಕ್ಷಣ ಅಂಜದೆ ಗಂಡೆದೆಯ ವಿಕ್ರಮಿಯಾಗಿ ಸಾತ್ಯಕಿಯೆದುರು ಉಗ್ರ ಪ್ರತಾಪದಿಂದ ಹೋರಾಡತೊಡಗಿ, ಪಾಂಡವ ಸೇನೆಯ ನಾಶಗೈಯತೊಡಗಿದ್ದಾನೆ. ಚಂದ್ರನ ಬೆಳದಿಂಗಳಿನಲ್ಲಿ ಚಂದ್ರವಂಶೀಯರ ಯುದ್ದ ಸಾಗುತ್ತಿದೆ.

ಇತ್ತ ಘಟೋತ್ಕಚ ಅತ್ಯುಗ್ರನಾಗಿದ್ದಾನೆ. ಬಸವಳಿದಿದ್ದ ಕೌರವ ಸೇನೆಯ ಮಹಾನಾಶ ಗೈಯುತ್ತಾ, ಎದುರಾದ ಮಹಾರಥಿ, ವಿಕ್ರಮಿ, ಪರಾಕ್ರಮಿಗಳೆಲ್ಲರನ್ನು ತನ್ನ ರಾಕ್ಷಸ ವಿಶೇಷ ಬಲದಿಂದ ಸಂಹರಿಸುತ್ತಾ ಮಹಾ ವಿನಾಶವನ್ನು ಮಾಡ ತೊಡಗಿದ್ದಾನೆ. ಭೀಮಪುತ್ರನ ವಿಧ್ವಂಸವನ್ನು ದುರ್ಯೋಧನ ವಿಧ ವಿಧ ಯುದ್ದ ಪರಿಕ್ರಮದಿಂದ ತಡೆಯಲು ಯತ್ನಿಸಿದರೂ, ಆಗದೆ ಸ್ವಯಂ ತಾನು ಮಾರಣಾಂತಿಕವಾಗಿ ಗಾಯಗೊಳ್ಳುತ್ತಿದ್ದಾನೆ. ಘಟೋತ್ಕಚ ಕೌರವನನ್ನು ಬೀಸಿ ಬಿಸುಟು, ಮತ್ತೆ ಎತ್ತಿ ನೆಲಕ್ಕಪ್ಪಳಿಸಿ ಹೊಡೆಯುವಾಗ ಆರ್ತನಾದ ಗೈಯುತ್ತಿದ್ದಾನೆ. ಕಾಲಲ್ಲಿ ಹಿಡಿದು ಕೌರವನನ್ನು ಗಿರ ಗಿರನೆ ತಿರುಗಿಸಿ ಬಿಸಾಡುತ್ತಾ, ಬಿದ್ದಲ್ಲಿಂದ ಎತ್ತಿ ಮತ್ತೆ ಎಸೆಯುತ್ತಾ ಇರುವುದನ್ನು ಕಂಡ ಕರ್ಣನಿಗೆ ಭಯವಾಯಿತು. ಈ ರಕ್ಕಸ ದುರ್ಯೋಧನನ್ನು ಕೊಂದು ಕಳೆಯುತ್ತಾನೋ ಎಂಬಷ್ಟು ಆತಂಕ ಮನ ಮಾಡಿತು. ತಕ್ಷಣ ತನಗೆದುರಾಗಿ ಪ್ರತಿಭಟಿಸಿ ಹೋರಾಡುತ್ತಿದ್ದ ಸಾತ್ಯಕಿಯ ಮೇಲೆ ಶರವರ್ಷಗೈದು ಅರೆಕ್ಷಣಕ್ಕೆ ಕಂಗೆಡಿಸಿ, ಘಟೋತ್ಕಚನತ್ತ ತಿರುಗಿದನು. ತನ್ನ ಏನೇನು ವಿಕ್ರಮಗಳಿವೆಯೋ ಅದೆಲ್ಲವನ್ನೂ ಪರಮಕ್ರುದ್ಧನಾಗಿ ಹೈಡಿಂಬಿಯ ಮೇಲೆ ತೋರಿದರೂ ಪರಿಣಾಮ ನಿಷ್ಫಲವಾಗುತ್ತಿದೆ. ಘಟೋತ್ಕಚ ಮತ್ತೆ ಕೌರವನನ್ನು ಅಟ್ಟಾಡಿಸಿ ಅಪ್ಪಳಿಸಲು ಮುಂದಾದಾಗ ದುರ್ಯೋಧನ ಕರ್ಣನಲ್ಲಿ ಆರ್ತನಾಗಿ ರಕ್ಷಣೆ ಯಾಚಿಸಿದನು. ಕರ್ಣ ತನಗೆ ಸಾಧ್ಯವಾದುದೆಲ್ಲವನ್ನೂ ಮಾಡಿದರೂ ಘಟೋತ್ಕಚನನ್ನು ನಿಯಂತ್ರಿಸಲಾಗಲಿಲ್ಲ. ಹೀಗೆ ಮುಂದುವರಿಯಗೊಟ್ಟರೆ ಮಿತ್ರ ದುರ್ಯೋಧನನ ವಧೆ ಮಾಡಿ ಬಿಡುತ್ತಾನೆ ಈ ರಾಕ್ಷಸ ಎಂಬಂತಹ ಸ್ಥಿತಿ ನಿರ್ಮಾಣವಾಗಿದೆ. ತನ್ನ ಕಾರ್ಯಕ್ಕೆ ಶರಾಘಾತಗಳಿಂದ ಅಡ್ಡಿಪಡಿಸುತ್ತಿರುವ ಕರ್ಣನನ್ನು ಗುರಿಯಾಗಿಸಿ ಘಟೋತ್ಕಚ ಆಕ್ರಮಿಸಿದಾಗ ಕರ್ಣನೂ ನಿಸ್ತೇಜನಾದ. ಮುರಿದು ಬಿದ್ದ ರಥಗಳನ್ನೆತ್ತಿ ಕರ್ಣನ ಮೇಲೆಸೆದಾಗ ಖಂಡಿಸುವುದರಲ್ಲಿ ಕೈಸೋತು ಹೋದನು. ಪರಾಜಿತನಾಗಿ ಹೋಗುವೆ ಎಂದು ಭಾವಿಸಿದನು.

ಗುರು ದ್ರೋಣರು ಎಲ್ಲಿ ಎಂದು ಸಹಾಯಕ್ಕಾಗಿ ಕೂಗಿದಾಗ, ಅವರನ್ನು ಯುಧಿಷ್ಟಿರ ತಡೆ ಹಿಡಿದಿದ್ದಾನೆ. ಒಂದೆಡೆ ಘಟೋತ್ಕಚ, ಮತ್ತೊಂದೆಡೆ ಅರ್ಜುನ ಕುರುಸೇನೆಯ ನಾಶಗೈಯುತ್ತಿದ್ದಾರೆ. ಅರ್ಜುನ ಕುರು ಪಾಳಯದ ಮಿತ್ರ ಮಹಾರಥಿ ರಾಜರನ್ನೆಲ್ಲಾ ಅನಾಯಾಸವಾಗಿ ಸವರುತ್ತಾ ಸಮಿಧೆಯನ್ನು ಹೋಮಿಸುವ ಅಗ್ನಿಯಂತೆ ಜೀವ ಆಹುತಿ ಪಡೆಯುತ್ತಾ ವ್ಯಾಪಿಸಿ ಹಬ್ಬಿಕೊಳ್ಳುತ್ತಿದ್ದಾನೆ. ಕ್ರೋಧಿತರಾದ ದ್ರೋಣಾಚಾರ್ಯರು ಯುಧಿಷ್ಟಿರನ ವಿರುದ್ದ ಅತ್ಯುಗ್ರ ಸಮರ ಸಾರಿದಾಗ ಕೃಷ್ಣ ಅರ್ಜುನನಿಗೆ ಅತ್ತ ಸಾಗಿ ಧರ್ಮರಾಯನನ್ನು ಮುಕ್ತ ಗೊಳಿಸೆಂದು ನಿರ್ದೇಶನ ನೀಡಿದನು. ಅಂತೆಯೆ ಈ ಹೊತ್ತು ಅರ್ಜುನ ದ್ರೋಣಾಚಾರ್ಯರನ್ನು ಕದಲದಂತೆ ತಡೆ ಹಿಡಿದು ಹೋರಾಡುತ್ತಿದ್ದಾನೆ.

ಅಶ್ವತ್ಥಾಮ, ಕೃಪಾಚಾರ್ಯರೂ, ಕೃತವರ್ಮ, ದುಶ್ಯಾಸನ, ಶಕುನಿ ಶಲ್ಯಾದಿ ಮಹಾವೀರರನ್ನೆಲ್ಲಾ ಪಾಂಡವ ಪಕ್ಷದ ವೀರರು ವ್ಯಸ್ಥಗೊಳಿಸಿ ಹೋರಾಡುತ್ತಿದ್ದಾರೆ.

ಇತ್ತ ಕರ್ಣನಿಗೆ ಅನಿವಾರ್ಯ ಸ್ಥಿತಿ ಎದುರಾಗಿದೆ. ಮಿತ್ರನ ಮತ್ತು ತನ್ನ ರಕ್ಷಣೆಗಾಗಿ ಘಟೋತ್ಕಚನನ್ನು ಸದೆಬಡಿಯಲೇ ಬೇಕು. ಕೌರವನನ್ನು ಘಟೋತ್ಕಚ ಮತ್ತೆ ಆಕ್ರಮಿಸಲು ಮುಂದಾದಾಗ ಕೌರವನ ಆರ್ತನಾದದ ರಕ್ಷಣೆಯ ಕೂಗು ಕರ್ಣನನ್ನು ಸಂಕಟಕ್ಕೆ ಸಿಲುಕುವಂತೆ ಮಾಡಿತು. ಅಸಹಾಯಕನಾಗಿ ಮಿತ್ರನ ಪ್ರಾಣ ರಕ್ಷಣೆಗಾಗಿ ತನ್ನ ಮಹಾಸ್ತ್ರ ಶಕ್ತ್ಯಾಯುಧವನ್ನು ಸಂಧಾನ ಮಾಡಿ ಪ್ರಯೋಗಿಸಿದನು. ಇಂದ್ರದತ್ತ ಮಹಾಶರ ಅಭೇದ್ಯನೂ ಅಜೇಯನೂ ಆಗಿದ್ದ ಘಟೋತ್ಕಚನ ವಕ್ಷಸ್ಥಳನ್ನು ಸೀಳಿ ಹೊಕ್ಕಿತು. ಭೀಮ ಪುತ್ರ ಆರ್ಭಟಿಸುತ್ತಾ ಮಹಾಶರಾಘಾತದಿಂದ ಸೈರಿಸಲಾಗದೆ ಇಡೀ ಕುರುಕ್ಷೇತ್ರ ಕಿವುಡಾಗುವಂತೆ ರೌರವ ರೋಧನೆಯನ್ನು ಮಾಡಿದನು. ಆ ಬೊಬ್ಬೆ ಭೂಮಿಯೇ ಕಂಪಿಸುವಂತೆ ಶಬ್ದ ತರಂಗಗಳನ್ನು ಉತ್ಪತ್ತಿ ಮಾಡಿತು. ಆತನ ಎದೆಯಿಂದ ರಕ್ತದೋಕುಳಿ ಚಿಮ್ಮಿ ಹರಿದು ಇಳಿಯತೊಡಗಿತು. ಪರ್ವತವೇ ಕುಸಿದು ಬೀಳುವಂತೆ ಭೀಮಪುತ್ರ ಬಿದ್ದನು. ನೋಡುತ್ತಿದ್ದಂತೆಯೆ ಹತ ಪ್ರಾಣನಾದನು. ಕೌರವನಿಗೆ ಜೀವದಾನ ಸಿಕ್ಕಂತಾದರೆ, ಪಾಂಡವ ಪಕ್ಷ ಶೋಕ ಸಾಗರದಲ್ಲಿ ಮುಳುಗಿದೆ.

ಮುಂದುವರಿಯುವುದು…

spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page