29.3 C
Udupi
Sunday, December 14, 2025
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ – 377

ಭರತೇಶ್ ಶೆಟ್ಟಿ , ಎಕ್ಕಾರ್

ಸಂಚಿಕೆ ೩೭೭ ಮಹಾಭಾರತ

ಭೀಮಸೇನನ ಆರ್ಭಟದಿಂದ ಗಾಂಧಾರ ರಾಜ ಶಕುನಿ ಜರ್ಜರಿತನಾಗಿದ್ದಾನೆ. ಶಕುನಿಗೆ ತನಗಾದ ನೋವಿಗಿಂತ ಸಾವು ಉತ್ತಮ ಆಗಿರುತ್ತಿತ್ತು ಎಂಬಷ್ಟರ ಮಟ್ಟಿಗೆ ವೇದನೆ ಆಗುತ್ತಿದೆ. ತಾನು ಈವರೆಗೆ ತೋರಿದ ಕುತಂತ್ರಕ್ಕೆ ಪ್ರತಿಯಾಗಿ ಪಾಂಡವ ಸೋದರರು ತನ್ನನ್ನು ವಧಿಸದೆ ಪ್ರತಿದಿನ ಕಾಡಿಸಿ ಪೀಡಿಸಿ ನೀಡುತ್ತಿರುವ ಯಾತನೆ ತಾಳಲಾಗುತ್ತಿಲ್ಲ. ಆದರೆ ಘೋರ ಕನಸಿನಂತಿರುವ ತನ್ನ ತನುವಿನ ನೋವಿಗಿಂತಲೂ, ತನ್ನದ್ದಾದ ಅಕ್ಷೋಹಿಣಿ ಸೇನೆಯ ಸಹಿತ ಏಳು ಮಂದಿ ಮಹಾರಥಿಗಳು ಶತಚಂದ್ರ, ಗವಾಕ್ಷ, ಶರಭ, ವಿಭು, ಸುಬಲ, ಭಾನುದತ್ತ, ವೃಕರಥ ಇವರೆಲ್ಲರು ಭೀಮನ ಗದಾಘಾತಕ್ಕೆ ಮರಣ ಹೊಂದಿದ್ದಾರೆ.

ಯುಧಿಷ್ಟಿರನೂ ಮಹೋಗ್ರನಾಗಿ ಅಂಬಷ್ಠರ, ಮಾಲವ, ಶಿಬಿ ಎಂಬ ಮೂವರು ಮಹಾರಥಿಗಳು, ಬಾಹ್ಲಿಕ, ವಸಾತಿ, ಶೂರಸೇನ, ಯೌಧೇಯ,ಮದ್ರಕರ ಮೊದಲಾದವರನ್ನು ಮತ್ತು ಅಪಾರ ಕುರು ಸೇನೆಯನ್ನೂ ಸವರಿ ಮೆರೆದಾಡುತ್ತಿದ್ದಾನೆ. ಇಂದಿನ ಯುದ್ದದಲ್ಲಿ ಧರ್ಮರಾಯ ಅರ್ಜುನನಂತೆ ತಾನೂ ಪರಾಕ್ರಮಿ ಹೌದು ಎಂಬುವುದನ್ನು ಸಾಬೀತು ಪಡಿಸುತ್ತಿರುವಂತಿದೆ. ಧರ್ಮ ಪಾಲಿಸುವ ಧರ್ಮಜನೋ? ಇಲ್ಲ ಕೌರವರ ಪಾಲಿಗೆ ಯಮಧರ್ಮನೋ? ಎಂಬಂತೆ ತಾನು ಮೃತ್ಯುಪಾಶವೆಸೆದು ವೈರಿ ಸೇನೆಯ ಸರ್ವನಾಶಗೈಯುತ್ತಾ ತನ್ನ ಅತಿ ವಿಕ್ರಮ ತೋರುತ್ತಿದ್ದಾನೆ.

ಹೀಗೆ ಧರ್ಮರಾಯ ಪ್ರಳಯಾಂತಕನಾಗಿ ಕಾಣಿಸಿಕೊಂಡಾಗ ಇನ್ನು ಹೀಗೆ ಮುಂದುವರಿಯಬಿಟ್ಟರೆ ಈತನೊಬ್ಬನೆ ಸಂಪೂರ್ಣ ಯುದ್ದ ಮುಗಿಸಿ ಬಿಡುತ್ತಾನೆ. ಹೀಗೆ ಬಗೆದು ದ್ರೋಣಾಚಾರ್ಯರು ಆತನಿಗೆದುರಾಗಿ ಬಂದರು. ದೀವಟಿಗೆಗಳನ್ನು ರಥಕ್ಕೆ ಬಿಗಿದಿದ್ದ ಕುಂಭೋದ್ಭವ ಭಾರದ್ವಾಜ ಪುತ್ರ ಗುರು ದ್ರೋಣ ತಾನೂ ಕ್ರೋಧಾಗ್ನಿಯಿಂದ ಪ್ರಜ್ವಲಿಸುತ್ತಾ ಧರ್ಮರಾಯನನ್ನು ದಂಡಿಸಲು ಮುಂದಾದರು. ಬಾಣಗಳ ಸುರಿಮಳೆಗೈಯುತ್ತಾ ಧರ್ಮಜನನ್ನು ಶರಪಂಜರದಲ್ಲಿ ದಿಗ್ಬಂಧಿಸುವಂತೆ ಎರಗಿದರು. ಅದೆಲ್ಲವನ್ನೂ ಸುಲಲಿತವಾಗಿ ಪಾಂಡವಾಗ್ರಜ ನಿವಾರಿಸಿದಾಗ, ಇನ್ನು ಇಲ್ಲಿ ಈತ ಇರಕೂಡದು! ಎಂದು ವಾಯವ್ಯಾಸ್ತ್ರ ಪ್ರಯೋಗಿಸಿ ಕುರುಕ್ಷೇತ್ರದಿಂದ ಹಾರಿಸಿಬಿಡಲು ಮುಂದಾಗಿ ದಿವ್ಯಶರವನ್ನು ವಾಯು ಮಂತ್ರಪೂರಿತವಾಗಿ ಪ್ರಯೋಗಿಸಿದರು. ಇಂದಿನ ದಿನ ಧರ್ಮರಾಯನ ಪರವಾಗಿತ್ತೋ ಏನೋ? ಸಂಧಾನ ಮಾಡಿದ ವಾಯವ್ಯಾಸ್ತ್ರಕ್ಕೆ ಪ್ರತಿ ದಿವ್ಯಾಸ್ತ್ರದಿಂದ ಉಪಶಮನಗೊಳಿಸಿ ಪರ್ವತದಂತೆ ಅಚಲವಾಗಿ ನಿಂತನು. ಪರಮಕ್ರುದ್ಧರಾದ ಶರಾದಪಿ ದ್ರೋಣರು ನಿನ್ನನ್ನಿನ್ನು ಸಂಹರಿಸಿ ಬಿಡುವೆ ಎಂದು ವಾರುಣ, ಯಾಮ್ಯ, ಆಗ್ನೇಯ, ತ್ವಾಷ್ಟ್ರ, ಸಾವಿತ್ರ ಗಳೆಂಬ ದಿವ್ಯಾಸ್ತ್ರಗಳನ್ನು ಸಮಯದ ಅಂತರ ನೀಡದೆ ಪ್ರಯೋಗಿಸಿದರು. ಕೆರೆಯ ನೀರು ಕೆರೆಗೆ ಚೆಲ್ಲಿ ಎಂಬಂತೆ ಗುರು ದ್ರೋಣರು ಅನುಗ್ರಹಿಸಿ ಬೋಧಿಸಿದ ಪ್ರತ್ಯಸ್ತ್ರಗಳಿಂದ ಅಷ್ಟೂ ಮಹಾಸ್ತ್ರಗಳನ್ನು ಖಂಡಿಸಿದನು. ಅರೇ! ಇಷ್ಟೊಂದು ಪ್ರಾವಿಣ್ಯತೆ ಅದೂ ಧರ್ಮರಾಯನಿಂದ? ಆಶ್ಚರ್ಯಚಕಿತರಾದ ಗುರುವರ್ಯ ಬಿಡದೆ ಪ್ರಾಜಾಪತ್ಯ ಮತ್ತು ಐಂದ್ರಾಸ್ತ್ರ ಗಳನ್ನು ಮಂತ್ರ ಆರೋಹಣಗೊಳಿಸಿ ಸಂಧಾನ- ಪ್ರಯೋಗ ಮಾಡಿ ಬಿಟ್ಟರು. ಶಿಷ್ಯನ ಸತ್ವ ಪರೀಕ್ಷೆ ಮಾಡುತ್ತಿದ್ದಾರೆ ಎಂಬಂತೆ ಧರ್ಮಜ ಅಳುಕದೆ ಮಹೇಂದ್ರಾಸ್ತ್ರವನ್ನು ಅಭಿಮಂತ್ರಿಸಿ ಬಿಸುಟು ನಭದಲ್ಲಿ ಜ್ವಾಲಾಮುಖಿ ಸ್ಫೋಟಗೊಂಡು ಒಮ್ಮೆಗೆ ರಾತ್ರಿಯ ಕತ್ತಲೆಯಲ್ಲಿ ಅವ್ಯಾಹತವಾಗಿ ಬೆಳಕು ಕಾಣಿಸುವಂತೆ ಮಾಡಿ, ಮಂತ್ರಾಸ್ತ್ರಗಳನ್ನು ನಾಶಗೊಳಿಸಿದನು. ಪರಮಕ್ರುದ್ಧರಾದ ಕುರು ಸೇನಾಪತಿ ಬ್ರಹ್ಮಾಸ್ತ್ರ ಸಂಧಾನಗೊಳಿಸಿ ಧರ್ಮಜನನ್ನು ಗುರಿಯಾಗಿಸಿ ಪ್ರಯೋಗಿಸಲು ಮುಂದಾದರು. ಎಲ್ಲೆಡೆ ಹಾಹಾಕಾರ, ದಿಗ್ಭ್ರಾಂತರಾದ ಸೇನೆಯ ಬೊಬ್ಬೆ ದಿಗ್ದೆಸೆಗಳಲ್ಲೂ ಪ್ರತಿಧ್ವನಿಸಿತು. ಸ್ಥಿತಪ್ರಜ್ಞ ಕೌಂತೇಯ ಪ್ರತಿಯಾಗಿ ಬ್ರಹ್ಮಾಸ್ತ್ರವನ್ನು ಪ್ರಯೋಗಿಸಿ ನಭೋಮಂಡಲದಲ್ಲಿ ಮತ್ತೆ ಗುರು ಶಿಷ್ಯರ ಮಂತ್ರಾಸ್ತ್ರಗಳ ವಿಸ್ಪೋಟವನ್ನು ಮಾಡಿ ಕದಲದೆ ನಿಂತನು. ಹೀಗಿರಲು ದ್ರೋಣರು ಬಸವಳಿದು ಇನ್ನೇನು ಮಾಡುವುದು ? ಈತನ ಪರಾಜಯಕ್ಕೆ ದಾರಿ ಉಳಿದಿಲ್ಲ ಎಂದು ತರ್ಕಿಸಿ ಪರ್ಯಾಯ ರೀತಿಯಲ್ಲಿ ಪರಾಜಿತರಾದಂತೆ ವಿಮುಖರಾದರು. ಪಾಂಚಾಲದ ದ್ರುಪದನ ಸೇನೆಯತ್ತ ತಿರುಗಿ, ಅದರ ಮೇಲೆರಗಿ ಅವ್ಯಾಹತವಾಗಿ ಸಂಹಾರ ಮಾಡತೊಡಗಿದರು. ಪ್ರಾಣಭಯಕ್ಕೆ ತುತ್ತಾದ ಪಾಂಚಾಲದ ಸೇನೆ ಪಲಾಯನವಾದಕ್ಕೆ ಮುಂದಾಗ ಬೇಕಾಯಿತು. ಓಡುತ್ತಿದ್ದ ಸೇನೆಗೆ ಧೈರ್ಯ ತುಂಬಿದ ಭೀಮಾರ್ಜುನರು, ಅತ್ತ ಧಾವಿಸಿ ಸೇನೆಯನ್ನು ಹುರಿದುಂಬಿಸಿ, ಯುದ್ದದಲ್ಲಿ ಮರು ಜೋಡನೆಗೊಳಿಸಿದರು. ದಕ್ಷಿಣ ಭಾಗದಿಂದ ಅರ್ಜುನನೂ, ಉತ್ತರ ಭಾಗದಿಂದ ಭೀಮನೂ ದ್ರೋಣಾಚಾರ್ಯರ ಮೇಲೆ ಆಕ್ರಮಣ ಮಾಡತೊಡಗಿದರು. ಮೊದಲಾಗಿ ಧರ್ಮಜನ ದಿಟ್ಟತನದ ಹೋರಾಟದಿಂದ ಗಾಯಗೊಂಡ ಸಿಂಹದಂತಾಗಿ ಕೆರಳಿದ್ದ ಗುರು ದ್ರೋಣರಿಗೆ ದಾರಿ ಕಾಣದಾಗಿದೆ. ಭೀಮಾರ್ಜುನರಿಂದಾದ ಮುತ್ತಿಗೆ ಅಭೇದ್ಯವಾಗಿ ಹೋಯಿತು
ಆದರೂ ಶ್ರೇಷ್ಟ ಧನುಷ್ಮಂತರಾದ ಆಚಾರ್ಯರು ಇವರೀರ್ವರ ದಾಳಿಯನ್ನು ತಡೆದು ರಕ್ಷಿಸಿಕೊಳ್ಳುವಷ್ಟರಲ್ಲಿ ಸುಸ್ತಾದರು. ಕುರು ಸೇನೆಗೆ ಒಂದೆಡೆ ದಣಿವು, ಹಸಿವು, ನಿದ್ದೆ, ಕತ್ತಲೆಯ ಗೊಂದಲ ಎಲ್ಲವೂ ಏಕಕಾಲದಲ್ಲಿ ಅಸಹನೀಯವಾಗಿ ಬಾಧಿಸ ತೊಡಗಿದ ಕಾರಣ, ಬದುಕಿ ಉಳಿದರೆ ನಾಳೆಯಾದರೂ ಹೋರಾಡಿ ಗೆಲುವನ್ನು ನೋಡಬಹುದೆಂದು ಕಾಲ್ಕಿತ್ತು ಹಾದಿ ಸಿಕ್ಕೆಡೆ ನುಸುಳ ತೊಡಗಿದರು. ದ್ರೋಣಾಚಾರ್ಯರಿಗೆ ಭಯಗ್ರಸ್ಥ ಸೇನೆಗೆ ಅಭಯ ನೀಡಿ ಅವರನ್ನು ರಕ್ಷಿಸುವಷ್ಟು ಕಾಲಾವಕಾಶ ಅರ್ಜುನ ಮತ್ತು ಭೀಮ ನೀಡಲಿಲ್ಲ. ಅವರೂ ಹಿಂಜರಿದು ಮರೆಯಾಗಬೇಕಾಯ್ತು. ಇಲ್ಲಿ ಉದಾರತೆ ತೋರಿದ ಅರ್ಜುನ ಅವರನ್ನು ಜಾರಿಕೊಂಡು ಹೋಗಲು ಬಿಟ್ಟನೆಂದು ಹೇಳಬಹುದು.

ಹೀಗೆ ಒಂದೆಡೆ ಸರ್ವತ್ರ ವಿನಾಶ ಆಗುತ್ತಿದೆ. ಮತ್ತೊಂದೆಡೆ ಸಾತ್ಯಕಿ ಕರ್ಣನನ್ನೂ, ದೃಷ್ಟದ್ಯುಮ್ನ ಅಶ್ವತ್ಥಾಮನನ್ನೂ, ದ್ರುಪದ ಕೃಪಾಚಾರ್ಯರನ್ನೂ, ನಕುಲ ಕೃತವರ್ಮನನ್ನೂ ತಡೆದು ಹೋರಾಡುತ್ತಿದ್ದಾರೆ. ದುಶ್ಯಾಸನ ದುರ್ಯೋಧನಾದಿಗಳು ಘಟೋತ್ಕಚನಿಗೆ ಆಟಿಕೆಗಳಂತಾಗಿ ಅತ್ಯುಗ್ರವಾಗಿ ದಂಡಿಸಲ್ಪಟ್ಟಿದ್ದರು.

ಹೀಗೆ ದಶದಿಕ್ಕುಗಳಿಂದಲೂ ದ್ರೋಣರ ರಾತ್ರಿಯುದ್ದ ಕುರು ಸೇನೆಯ ಮಹಾನಾಶವನ್ನು ಮಾಡಲೋಸುಗ ಸಾಗಿದಂತಾಗಿತ್ತು. ಇಂತಹ ಸ್ಥಿತಿಯಲ್ಲಿ ದುರ್ಯೋಧನ ಮಿತ್ರ ಕರ್ಣನನ್ನು ಕರೆದು ಸಮಾಲೋಚನೆಯಲ್ಲಿ ತೊಡಗಿದನು.

“ಕರ್ಣಾ! ಇಂದು ಸಮಸ್ತ ಪಾಂಡವ ಸೇನೆ ಏನು ವಿಶೇಷ ಸ್ಪೂರ್ತಿ ಪಡೆದಿದೆಯೋ? ಅವರ ಮೈತ್ರೇಯ ವೀರರು, ಸೇನೆಗಳು ತಾವೇ ಜಯಶಾಲಿಗಳು ಎಂಬಂತೆ ಯಾರಿಗೂ ಅಳುಕದೆ, ಅತಿ ವೇಗದ ಯುದ್ಧ ಮಾಡುತ್ತಿದ್ದಾರೆ. ಹೀಗೆ ಸಾಗಿದರೆ ರಾತ್ರಿ ಬೆಳಗಾಗುವುದರ ಒಳಗೆ ನಮ್ಮ ಸೈನ್ಯ ಪೂರ್ಣ ನಾಶವಾದೀತು. ಅರ್ಜುನ ಘಟೋತ್ಕಚರು ನಿರಂಕುಶರಾಗಿ ಇಡೀ ಕುರುಕ್ಷೇತ್ರ ರಣಾಂಗಣವನ್ನು ಕ್ರೀಡಾಂಗಣವಾಗಿಸಿಕೊಂಡು ಆಡುತ್ತಿರುವಂತಿದೆ. ನಕುಲ ಸಹದೇವರನ್ನೂ ನಮ್ಮ ಮಹಾವೀರರಿಗೆ ಹಿಮ್ಮೆಟ್ಟಿಸಲಾಗದೆ ಪರದಾಡುವಂತಾಗಿದೆ. ಶಾಂತಚಿತ್ತದ ಧರ್ಮರಾಯ ಈವರೆಗೆ ತೋರದ ಪರಾಕ್ರಮ ಇಂದು ತೋರುತ್ತಿದ್ದಾನೆ. ಕರ್ಣಾ, ಈಗ ನೀನು ಮಹತ್ತರವಾದ ಸಾಧನೆಯನ್ನು ಮಾಡಿ ತೋರಿಸಬೇಕು. ನನಗ್ಯಾಕೋ ನಿನ್ನ ಮೇಲೆ ಹೆಚ್ಚಿನದ್ದಾದ ವಿಶ್ವಾಸವಿದೆ” ಎಂದನು.

ಆಗ ಕರ್ಣ, “ಮಿತ್ರಾ ದುರ್ಯೋಧನಾ! ವ್ಯಥೆಗೊಳಗಾಗಬೇಡ. ಆ ಅರ್ಜುನ ನನಗೆ ಪರಮಶತ್ರು. ಸತ್ಯದ ಮೇಲೆ ಪ್ರಮಾಣ ಮಾಡಿ ಹೇಳುತ್ತಿದ್ದೇನೆ, ಕೇಳು… “ಇಂದಿನ ರಾತ್ರಿ ಪಾಂಡವ ಪಕ್ಷಕ್ಕೆ ಕರಾಳ ರಾತ್ರಿಯಾಗಲಿದೆ.” ಎಂದನು. ನಾನು ಈವರೆಗೆ ಪ್ರಯೋಗಿಸದೆ, ಸ್ವಯಂ ಸೇನಾ ನಾಯಕನಾಗಿ ಅರ್ಜುನನಿಗೆ ಇದಿರಾಗುವ ದಿನ ಜಯ ಸಂಪಾದನೆಗಾಗಿ ಶಕ್ತ್ಯಾಯುಧವನ್ನು ಜೋಪಾನವಾಗಿರಿಸಿದ್ದೆ. ಆದರೆ ನೀನು ನನಗೆ ಸರ್ವಸ್ವ. ನನ್ನ ಸಾಧನೆಗಿಂತ ನಿನ್ನ ಇಚ್ಚಾ ಪೂರ್ತಿ ನನಗೆ ಪ್ರಾಮುಖ್ಯವಾಗಿದೆ. ಇಲ್ಲಿಯವರೆಗೆ ರಣಭಯಂಕರವಾಗಿ ಮೆರೆದ ಪಾಂಡವ ಪಕ್ಷ ಇನ್ನು ಶೋಕ ಸಾಗರದಲ್ಲಿ ಮುಳುಗುವಂತೆ ಮಾಡಿ ಬಿಡುವೆ. ಆ ಅರ್ಜುನನಿಗೆ ಎದುರಾಗಿ ರಣ ವಿಕ್ರಮನಾಗಿ ಕಾಣಿಸಿಕೊಳ್ಳುವೆ. ನನ್ನಲ್ಲಿ ಇರುವ ವೈಜಯಂತೀ ಶಕ್ತ್ಯಾಯುಧ ನಿನ್ನ ಮಹಾದಾಸೆಯಾದ ವಿಜಯವನ್ನು ವೈಭವದಿಂದ ಸಂಭ್ರಮಿಸುವಂತೆ ಮಾಡಲಿದೆ. ನನ್ನ ಶರಾಘಾತದಿಂದ ಮೃತನಾಗುವ ಪಾರ್ಥನ ಪಾರ್ಥೀವ ಶರೀರ ಕಂಡು ಧರ್ಮರಾಯ ವನವಾಸಕ್ಕೆ ಮತ್ತೆ ತಾನಾಗಿ ತೆರಳುವಂತೆ ಮಾಡುವೆ. ಅರ್ಜುನನೊಬ್ಬ ಅಳಿದರೆ ಮತ್ತೆ ಪಾಂಡವರು ಅರ್ಧ ಸೋತಂತಾಗುತ್ತಾರೆ. ಇಂದಿನ ರಾತ್ರಿ ನನಗೆದುರಾಗಿ ದೇವ ಸೇನಾಪತಿ ಕಾರ್ತಿಕೇಯ ಬಂದರೂ ಅಳುಕಲಾರೆ. ಸಾಕ್ಷಾತ್ ದೇವರಾಜ ಇಂದ್ರ ಬಂದರೂ ಪರಾಜಯದ ರುಚಿ ಆತನಿಗೆ ತೋರಿಸುವೆ. ನಿಶ್ಚಿಂತನಾಗು” ಎಂದು ಸಂತೈಸಿದನು.

ಕರ್ಣನ ವೀರಾವೇಶದ ನುಡಿಗಳನ್ನು ಅಲ್ಲಿ ಸನಿಹದಲ್ಲಿದ್ದು ಕೇಳಿಸಿಕೊಂಡ ಕೃಪಾಚಾರ್ಯರು ಜೋರಾಗಿ ವಿಕಟ – ಅಪಹಾಸ್ಯ ಭಾವಭರಿತ ನಗೆಯಿಂದ ಅಣಕಿಸಿದರು. “ಹೇ ಕರ್ಣಾ! ನಿನ್ನ ಮಾತುಗಳು ಕೇಳಲು ಬಹಳ ಸೊಗಸಾಗಿದೆ. ಬರಿದೆ ಬೊಗಳೆ ಮಾತುಗಳ ಮಂಟಪ ಕಟ್ಟಿ, ಭ್ರಮಾಲೋಕಕ್ಕೊಯ್ದು ನಿನ್ನ ಮಿತ್ರನನ್ನು ಪೂಜಿಸುವುದು ನಿ‌ನ್ನ ಜೀವಮಾನದ ಸಾಧನೆಯಾಗಿ ಹೋಗಿದೆ. ಇದೇನು ನಿ‌ನ್ನ ಮೊದಲ ಆಶ್ವಾಸನೆಯೋ? ನೈಜತೆಗೂ, ಕನಸಿಗೂ ಅಂತರ ತಿಳಿಯಲಾಗದ ಮೂಢ ನೀನು. ಸ್ವತಃ ಮೂರ್ಖನಾಗಿದ್ದು, ಉಳಿದವರನ್ನೂ ಮೂರ್ಖರನ್ನಾಗಿಸುವುದರಲ್ಲಷ್ಟೇ ನಿನ್ನ ಮಹಾಕಲಿತನವೋ? ನಿನ್ನ ಈ ರೀತಿಯ ವೀರ ನುಡಿಗಳು ನಮಗೆ ಹೊಸತೇನಲ್ಲ. ಹಿಂದೆ ಗಂಧರ್ವರು ಕೌರವನನ್ನು ಬಂಧಿಸಿ ಎಳೆದೊಯ್ದಾಗ ಅನ್ನದ ಋಣಕ್ಕಾಗಿ ಓರ್ವ ಪದಾತಿ ಸೈನಿಕನಾದರೂ ಓಡಿ ಹೋಗದೆ, ಸತ್ತರೆ ಇಲ್ಲಿಯೆ ಸಾಯುತ್ತೇನೆ ಎಂದು ಸಮರ್ಪಣಾ ಭಾವದಿಂದ ಹೋರಾಡುತ್ತಿದ್ದರು. ಆದರೆ, ಗಂಧರ್ವರ ಹತಿಯಿಂದ ಗಾಯಾಳಾಗಿ, ಪ್ರತಿ ಹೋರಾಟ ನೀಡಲಾಗದೆ ಎಲ್ಲರಿಗಿಂತಲೂ ಮೊದಲು ಪಲಾಯನ ಶೂರನಾಗಿ ದಟ್ಟಡವಿಯೊಳಗೆ ಎದ್ದು ಬಿದ್ದು ಓಡಿ ಹೋದವ ನೀನು. ಅಂತಹ ರಣಹೇಡಿಯಿಂದ ಈಗ ಮಹಾಪ್ರತಿಜ್ಞೆಯಾ? ಅಯ್ಯಾ ನಿನ್ನ ಯೋಗ್ಯತೆ ಉತ್ತರ ಗೋಗ್ರಹಣ ಕಾಲದಲ್ಲೂ ನಿನ್ನ ಬದುಕುವ ಬುದ್ದಿ, ಅರ್ಧ ಧೈರ್ಯದ ಸಾಹಸ, ಯಾರ್ಯಾರ ರಥ ಏರಿ ಓಡಿ ಬದುಕುವ ಗುಣ ಕಣ್ಣಾರೆ ನೋಡಿ ತಿಳಿದವರಿದ್ದೇವೆ. ಹಿಂದಿನದ್ದು ಬಿಡೋಣ, ಇಂದಿನದ್ದು ನೋಡೋಣ.. ನಿನಗೆದುರಾಗಿ ಬಂದ ಪಾಂಡವವೀರರಿಗೆ ಒಬ್ಬರಿಗಾದರೂ ನಿನ್ನ ಕದನ ಕಲಿತನ ಕಾಣಸಿಕ್ಕಿದೆಯೆ? ತುಸುಹೊತ್ತು ಹೋರಾಡಿ ಬಳಿಕ ಓಡಿ ಹೋಗುವ ವೀರಗುಣ ಬರಿದಾದ ಬಾಯಿಚಪಲದ ಮಾತುಗಳೆಂದು ಸಾಬೀತಾಗಿದೆ. ಒಬ್ಬ ಪಾರ್ಥನೆದುರು ನಿಲ್ಲಲಾಗದ ನೀನು ಈಗ ಕೃಷ್ಣ ಸಹಿತ ಅರ್ಜುನನ ಎದುರು ಹೋರಾಡುವುದು ಸಾಧ್ಯವೇ? ಒಂದು ಆವರ್ತದ ಉಚ್ವಾಸ – ನಿಶ್ವಾಸದ ಕಾಲದಷ್ಟೂ ಅವಕಾಶ ಸಿಗುತ್ತಿಲ್ಲ. ನಿನ್ನ ಬಾಯಿ ಮಾರಧೃಡತೆಯನ್ನು ನಂಬಿಕೆಯಾಗಿ ಒಪ್ಪಲಾಗದೆ ಹೋಗಿರುವುದು ನಿನ್ನ ಬದುಕಿಗೆ ಕಳಂಕವೂ ಹೌದು ನಮಗೆ ಆತಂಕವೂ ಹೌದು. ಸುಮ್ಮನೆ ಹೊಗಳು ಭಟನಾಗದೆ ಧೈರ್ಯತಳೆದು, ಓಡದೆ ಹೋರಾಡಲು ನಿರ್ಧಾರ ಮಾಡು. ಮಾತಿಗಿಂತ ಕೃತಿ ಮೇಲು. ಬಡಾಯಿ ಕೊಚ್ಚಿಕೊಳ್ಳುವ ಬದಲು ಮಾಡಿ ತೋರಿಸು” ಎಂದು ಟೀಕೆ ಮಾಡುತ್ತಾ ನಿಂದಿಸಿದರು.

ಕೃಪಾಚಾರ್ಯರ ಈ ಮಾತುಗಳನ್ನು ಕೇಳಿ ಕೆಂಡಾಮಂಡಲ ಮನಸ್ಕನಾದ ಕರ್ಣ “……

ಮುಂದುವರಿಯುವುದು…

spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page