ಭಾಗ – 376
ಭರತೇಶ ಶೆಟ್ಟಿ, ಎಕ್ಕಾರ್

ದ್ರೋಣಾಚಾರ್ಯರು ಸೂರ್ಯಾಸ್ತಮಾನ ಆದ ಬಳಿಕವೂ ಯುದ್ದ ಮುಂದುವರಿಯಲಿ ಎಂದಾಗ ಪಾಂಡವರಿಗೆ ಒಮ್ಮೆ ಆಶ್ಚರ್ಯವಾಯಿತು. ಅವರು ತಮ್ಮೊಳಗೆ ಕ್ಷಿಪ್ರವಾಗಿ ಸಮಾಲೋಚನೆ ಮಾಡಿಕೊಳ್ಳತೊಡಗಿದರು. ಏನೆಂದರೆ ಅರ್ಜುನನಿಗೆ ಚಾಕ್ಷುಷ ವಿದ್ಯೆ ತಿಳಿದಿದೆ. ಹಾಗಾಗಿ ಹಗಲು ರಾತ್ರಿಯ ವ್ಯತ್ಯಾಸ ನಮಗಾಗದು. ಮೇಲಾಗಿ ಭೀಮಪುತ್ರ ಘಟೋತ್ಕಚನೂ ನಮ್ಮ ಪಕ್ಷದಲ್ಲಿ ಇರುವುದರಿಂದ ರಾತ್ರಿಯ ಹೊತ್ತು ನಮ್ಮ ಬಲ ಹೆಚ್ಚಾಗಲಿದೆ. ಎಂದು ಭರವಸೆ ತುಂಬುತ್ತಾ ಸನ್ನದ್ಧರಾದರು.
ಯುದ್ಧ ನಿಲ್ಲಿಸಲ್ಪಡದೆ ಮುಂದುವರಿಯಿತು. ಈ ತನಕ ತನಗೆ ಬೇಕಾದ ಎಲ್ಲಾ ರಕ್ಷಣೆ, ವ್ಯವಸ್ಥೆ ನೋಡಿಕೊಂಡು ಮುನ್ನುಗ್ಗುತ್ತಿದ್ದ ದುರ್ಯೋಧನ ಇಂದು ತಾನೇ ಮುಂದಾಗಿ ಪಾಂಡವ ಸೇನೆಯ ಮೇಲೆರಗಿದನು. ಆತನೊಳಗೆ ಅತ್ಯುಗ್ರ ಕೋಪ, ತಾಪ ರೋಷಾಗ್ನಿ ಹೊತ್ತಿ ಉರಿಯುತ್ತಿತ್ತು. ಕಂಡ ಕಂಡ ಪಾಂಡವ ವೀರರನ್ನು ಘಾತಿಸುತ್ತಾ ಮದಗಜದಂತೆ ಎಲ್ಲೆಂದರಂತೆ ನುಗ್ಗಿ ಧ್ವಂಸಗೈಯ ತೊಡಗಿದನು. ಎದುರಾದ ದ್ರುಪದ, ದೃಷ್ಟದ್ಯುಮ್ನ, ಶಿಖಂಡಿ, ವಿರಾಟ, ಉಪ ಪಾಂಡವರು, ಚೇದಿರಾಜ, ಕೇಕಯರಾಜರನ್ನು, ನಕುಲ, ಸಹದೇವಾದಿಗಳನ್ನು ದಂಡಿಸುತ್ತಾ ಮುಂದೊತ್ತಿದನು. ಹೀಗಿರಲು ತನ್ನವರ ರಕ್ಷಣೆಯ ಹೊಣೆ ಹೊತ್ತು ಧರ್ಮರಾಯನೇ ದುರ್ಯೋಧನನಿಗೆ ಇದಿರಾಗಿ ಬಂದು ಯುದ್ದಾಹ್ವಾನ ನೀಡಿ ಹೋರಾಡತೊಡಗಿದನು. ಆದರೆ ದುರ್ಯೋಧನ ನಿರ್ಭೀತಿಯಿಂದ, ಕ್ರೋಧಾವೇಶ ಭರಿತನಾಗಿ ಶೀಘ್ರಾತಿಶೀಘ್ರ ಶರ ಸಂಧಾನ, ವೇಗದ ಪ್ರಯೋಗಗಳನ್ನು ಮಾಡುತ್ತಾ, ಧರ್ಮಜನನ್ನು ಕಂಗೆಡಿಸುತ್ತಾ ವಿಕ್ರಮ ಮೆರೆಯುತ್ತಿದ್ದಾನೆ. ತುಸು ಹೊತ್ತು ಧರ್ಮರಾಯ ಕೌರವನನ್ನು ತಡೆದು ಸಮರ ನಿರತನಾಗಿದ್ದನು. ಹೋರಾಟ ಸಾಗುತ್ತಿದ್ದಂತೆ ಧರ್ಮಜನ ಧನುಸ್ಸನ್ನು ಕೌರವ ಮುರಿದು ಬಿಟ್ಟನು. ಆ ಕೂಡಲೆ ಕೌರವ, ಯುಧಿಷ್ಟಿರನ ಪ್ರಿಯ ಸಾರಥಿ ಇಂದ್ರಸೇನನ ಮೇಲೆ ಸರಸರನೆ ಮೂರು ಬಾಣ ಪ್ರಯೋಗಿಸಿ ಅತಿಯಾಗಿ ಗಾಯಗೊಳಿಸಿದ. ರಥ ಕುದುರೆಗಳ ಮೇಲೂ ಆಕ್ರಮಣ ಮಾಡಿ ಘಾಸಿಗೊಳಿಸಿದ. ತಕ್ಷಣ ಮಿಂಚಿನ ಚಲನೆಯಂತೆ ಹೊಸ ಧನುಸ್ಸನ್ನು ಕೈಗೆತ್ತಿಕೊಂಡ ಧರ್ಮರಾಯ ಕೌರವನ ಮೇಲೆ ನಿರಂತರ ಶರವರ್ಷಗೈಯುತ್ತಾ ಹೋರಾಡತೊಡಗಿದನು. ಮೊನಚಾದ ಎರಡು ಭಲ್ಲೆಗಳನ್ನು(ಬರ್ಚಿ, ಈಟಿ) ದುರ್ಯೋಧನನ ಎದೆಗೆ ಗುರಿಯಾಗಿ ಎಸೆದನು. ಧನುಸ್ಸು ಹಿಡಿದ ಕೈಗಳನ್ನು ಎತ್ತಿ ಧರ್ಮಜ ಶರಗಳನ್ನು ಖಂಡಿಸಲು ಪ್ರಯತ್ನಗೈದಾಗ ಕೌರವನ ಬಿಲ್ಲು ಮೂರು ತುಂಡಾಗಿ ಕತ್ತರಿಸಲ್ಪಟ್ಟಿತು. ಆ ಕೂಡಲೆ ಧರ್ಮರಾಯ ಮಹಾಶರವೊಂದನ್ನು ಅಭಿಮಂತ್ರಿಸಿ ಪ್ರಯೋಗಿಸಿದನು. ಅದು ದುರ್ಯೋಧನನ ಕವಚ ಭೇದಿಸಿ ಎದೆಯಾಳಕ್ಕೆ ಹೊಕ್ಕು ಸೀಳುತ್ತಾ ಒಳಗಿಳಿಯಿತು. ಕೌರವ ಮೂರ್ಛಿತನಾಗಿ ಬಿದ್ದನು. ಆಗ ದುರ್ಯೋಧನ ಸತ್ತನು ಎಂಬ ಹರ್ಷೋದ್ಘಾರ ಎಲ್ಲೆಡೆ ಹಬ್ಬಿತು. ಈ ಬೊಬ್ಬೆ ಕೇಳಿ ದ್ರೋಣಾಚಾರ್ಯರು ಇತ್ತ ರಥ ಹಾರಿಸಿ ಬಂದು, ದುರ್ಯೋಧನನನ್ನು ರಕ್ಷಿಸಿದರು. ಆ ಕೂಡಲೆ ಯುಧಿಷ್ಟಿರನನ್ನು ತಡೆದು ದ್ರೋಣಾಚಾರ್ಯರು ಯುದ್ದ ಮುಂದುವರಿಸತೊಡಗಿದರು. ದ್ರೋಣ ಧರ್ಮರಾಯನ ಮೇಲೆ ಉಗ್ರ ಸಮರ ಸಾರುತ್ತಿರುವಾಗ ದ್ರುಪದ, ಪಾಂಚಾಲ ಸೇನಾ ಸಹಿತನಾಗಿ ಸಹಾಯಕ್ಕೆ ಬಂದನು.
ಪಾಂಡವರ ಸೇನೆಯೂ ದ್ರೋಣರ ಮೇಲೆ ಮುಗಿಬಿತ್ತು. ಆದರೆ ದ್ರೋಣಾಚಾರ್ಯರರನ್ನು ತಡೆಯಲು ಸಾಮರ್ಥ್ಯ ಸಾಕಾಗದೆ ಹೋದಾಗ ಮನಸಾ ಇಚ್ಚೆ ಪಾಂಡವ ಸೇನಾನಾಶದಲ್ಲಿ ವ್ಯಸ್ಥರಾದರು. ಹೀಗೆ ವಿಧ್ವಂಸ ಮುಂದುವರಿಯಿತು.
ಇತ್ತ ಸಾತ್ಯಕಿಗೆ ಎದುರಾದವನು ಸೋಮದತ್ತ. ಭೂರಿಶ್ರವಸನ ವಧೆಗೆ ಪ್ರತಿಕಾರ ತೀರಿಸಲು ಬಂದವನು ಆತನ ತಂದೆ ಸೋಮದತ್ತ. ಸಾತ್ಯಕಿಯನ್ನು ಕೊಂದ ಬಳಿಕ ವಿರಮಿಸುವೆ ಎಂಬಂತೆ ಪ್ರತಿಜ್ಞಾ ಬದ್ಧನಾಗಿ ಎರಗಿದನು. ಈರ್ವರೂ ಪ್ರಬಲರು – ಮಹೋಗ್ರ ಕಾಳಗ ಸಾಗಿತು. ಕೊನೆಗೆ ಸಾತ್ಯಕಿ ಸೋಮದತ್ತನ ವಧೆಗೈದನು.
ಮತ್ತೊಂದೆಡೆ ಅಶ್ವತ್ಥಾಮ ಘಟೋತ್ಕಚನ ಜೊತೆ ಯುದ್ದ ನಿರತನಾಗಿದ್ದಾನೆ. ಗುರುಪುತ್ರನೂ ಇಂದು ಕ್ರೋಧಾವಿಷ್ಟನಾಗಿ ರಾಕ್ಷಸ ಘಟೋತ್ಕಚನ ಆಕ್ರಮಣವನ್ನು ಸಮರ್ಥವಾಗಿ ಎದುರಿಸುತ್ತಿದ್ದಾನೆ. ಘಟೋತ್ಕಚನ ಒಂದು ಅಕ್ಷೋಹಿನಿ ರಕ್ಕಸ ಸೇನೆಯನ್ನು ಅಶ್ವತ್ಥಾಮ ನಾಶಗೊಳಿಸಿದನು. ಮತ್ತೂ ಯುದ್ದ ಮುಂದುವರಿಯುತ್ತಿದೆ.
ಈ ಕಡೆ ಭೀಮಸೇನ ರೌದ್ರಾವತಾರ ತಳೆದವಂತೆ ಭೀಕರ ಯುದ್ಧ ಮಾಡುತ್ತಿದ್ದಾನೆ. ಕೌರವ ಪಕ್ಷದ ಮಹಾರಥಿ ಬಾಹ್ಲಿಕನನ್ನು ಅದ್ಬುತ ಹೋರಾಟದ ಅಂತ್ಯಕ್ಕೆ ವಧಿಸಿದ್ದಾನೆ. ಮತ್ತೂ ಮುಂದುವರಿದ ಭೀಮ ಎದುರಾದ ಶಕುನಿಯನ್ನು ಹೀನಾಯವಾಗಿ ದಂಡಿಸಿ ಮೂರ್ಛಿತನನ್ನಾಗಿಸಿದನು. ತಿರುಗಿ ನೋಡಿದರೆ ಗಾಂಧಾರದ ಸೇನೆ, ಏಳು ಮಂದಿ ಮಹಾರಥಿಕರು. ಅವರೆಲ್ಲರನ್ನೂ ಬಿಡದೆ ವಧಿಸಿದನು. ಇಷ್ಟಕ್ಕೆ ನಿಲ್ಲದ ಭೀಮಸೇನನ ರೌದ್ರನರ್ತನ ಮತ್ತೂ ಮುಂದುವರಿಯಿತು. ಎದುರಾದ ಹತ್ತು ಮಂದಿ ಕೌರವ ಸೋದರರನ್ನು ಹಿಡಿದಪ್ಪಳಿಸುತ್ತಾ ಧರೆಗುರುಳಿಸಿದನು. ಮತ್ತೆಂದೂ ಎದ್ದೇಳಲಾಗದ ಸ್ಥಿತಿ ಅವರದ್ದಾಗಿದೆ.
ಮುಂದುವರಿಯುವುದು…





