20.2 C
Udupi
Monday, December 15, 2025
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ 375

ಭರತೇಶ್ ಶೆಟ್ಟಿ ,ಎಕ್ಕಾರ್

ಸಂಚಿಕೆ ೩೭೫ ಮಹಾಭಾರತ

ಪಾಂಡವ ಸೇನೆ ಜಯದ್ರಥನ ವಧೆಯನ್ನು ಗೆಲುವಿನಂತೆ ಸಂಭ್ರಮಿಸುತ್ತಿದೆ. ಅಧಿಕೃತವಾಗಿ ಇನ್ನೇನು ಯುದ್ದ ವಿರಾಮ ಘೋಷಣೆ ಆಗಲಿದೆ ಎಂಬ ಸ್ಥಿತಿಯಲ್ಲಿರುವಾಗ, ಕರ್ಣ, ಅಶ್ವತ್ಥಾಮ, ಕೃಪಾಚಾರ್ಯರು ಸೇರಿ ಅರ್ಜುನನ ಮೇಲೆರಗಿದರು. ಸಾತ್ಯಕಿ ಪಾರ್ಥನ ಸಹಾಯಕ್ಕೆ ಬಂದು ಯುದ್ದ ಸಾಗತೊಡಗಿತು. ಕರ್ಣ ಅಶ್ವತ್ಥಾಮರನ್ನು ಹೀನಾಯವಾಗಿ ದಂಡಿಸಿ ಬೆನ್ನಟ್ಟಿ ಹೊಡೆದಾಗ ಪಲಾಯನ ಮಾಡದೆ ಬದುಕಿರಲು ಅನ್ಯ ಮಾರ್ಗವಿರಲಿಲ್ಲ. ಆದರೂ ಚೇತರಿಸಿಕೊಂಡು ಮರು ದಾಳಿ ಸಂಘಟಿಸಿದ ಕರ್ಣನನ್ನು ಸಾತ್ಯಕಿ ತಡೆದು ಹೋರಾಡತೊಡಗಿದನು. ಅತಿ ಭಯಂಕರ ಕಾಳಗ ನಡೆಯಿತಾದರೂ ಆಗಲೂ ಕರ್ಣ ಪರಾಜಿತನಾಗಿ ತೀವ್ರ ಅಪಮಾನಕ್ಕೆ ಗುರಿಯಾದನು. ಕೃಪಾಚಾರ್ಯ – ಅಶ್ವತ್ಥಾಮರು ಮತ್ತೆ ಧನಂಜಯನ ಮೇಲೆ ಶರವರ್ಷಗೈಯುತ್ತಾ ಹೋರಾಡಿದರಾದರೂ ಮತ್ತೆ ಅವರಿಗೆ ಸೋಲಾಯಿತು.

ಒಂದೆಡೆ ಹೀಗಾಗುತ್ತಿರುವಾಗ ಭೀಮನೂ ಉಗ್ರರಾಗಿ ಎರಗಿದ ದುರ್ಯೋಧನ ಸಹಿತ ಕೌರವ ಸೋದರರನ್ನು ಹುಡುಕಿ ಹುಡುಕಿ ಧ್ವಂಸಗೈಯತೊಡಗಿದನು. ದುರ್ಯೋಧನ ದುಶ್ಯಾಸನಾದಿಗಳು ಭೀಮನ ಹೊಡೆತ ತಾಳಲಾರದೆ, ಥಳಿಸಲ್ಪಟ್ಟು, ಹೀನಾಯವಾಗಿ ಪೆಟ್ಟು ತಿಂದು ಓಡಿ ಹೋಗಬೇಕಾಯಿತು. ಮತ್ತೆ ಹಲವು ಧೃತರಾಷ್ಟ್ರ ಪುತ್ರರು ಭೀಮನ ಗದಾಘಾತಕ್ಕೆ ಬಲಿಯಾದರು.

ಯುಧಿಷ್ಟಿರ ದೃಷ್ಟದ್ಯುಮ್ನ, ದ್ರುಪದ, ಶಿಖಂಡಿಗಳು ಸೇರಿ ಕೃತವರ್ಮ, ದ್ರೋಣರನ್ನು ತಡೆದು ಸಮರ ನಿರತರಾಗಿ ಇನ್ನಿಲ್ಲದಂತೆ ಕಾಡಿದರು. ಅತ್ಯುಗ್ರ ಸಂಗ್ರಾಮ ದಿನಾಂತ್ಯಕ್ಕೆ ಸಾಗತೊಡಗಿತು. ಇನ್ನೊಂದೆಡೆ ನಕುಲ ಸಹದೇವರು ಶಕುನಿಯನ್ನು ಹಿಗ್ಗಾ ಮುಗ್ಗಾ ತಳಿಸುತ್ತಾ ಆತನ ಕುತಂತ್ರಕ್ಕೆ ತಕ್ಕ ಶಾಸ್ತಿ ಮಾಡತೊಡಗಿದ್ದರು.

ಜಯದ್ರಥನ ವಧೆಯ ವಾರ್ತೆ ತಿಳಿದಿದ್ದ ದುರ್ಯೋಧನನಿಗೆ ಎಲ್ಲಿಲ್ಲದ ಆಕ್ರೋಶ ಮನ ಮಾಡಿತು. ವೀರ ಕುಮಾರ ಅಭಿಮನ್ಯುವಿನ ವಿಕ್ರಮ ಆತನ ವಧಾ ಪ್ರಸಂಗ. ಅರ್ಜುನನ ಪ್ರತಿಜ್ಞೆ – ಮತ್ತು ಪೂರಣ. ಇವೆಲ್ಲಾ ನೆನಪಾಗಿ ಆಕ್ರೋಶ ಆವರಿಸಿತು. ಜೊತೆಗೆ ಭ್ರಮ ನಿರಸನಗೊಂಡವನಂತಾಗಿ ವಿಚಿತ್ರವಾಗಿ ವರ್ತಿಸತೊಡಗಿದನು. ಕಾರಣ ಆತನಿಗೆ ವಿಜಯದ ಆಸೆ ಇದ್ದುದು ಭೀಷ್ಮಾಚಾರ್ಯರ ಪರಾಕ್ರಮವನ್ನು ನಂಬಿಕೊಂಡು, ಆದರೆ ಅವರು ಶರಶಯ್ಯೆಯಲ್ಲಿ ಯಾತನಾಮಯ ದಿನರಾತ್ರಿಗಳನ್ನು ಕಳೆಯುತ್ತಿದ್ದಾರೆ. ನಂತರ ನಂಬಿದ್ದು ಕರ್ಣ ಮತ್ತು ದ್ರೋಣಾಚಾರ್ಯರ ಬಾಹುಬಲವನ್ನು. ಇಂದಿನ ಹದಿನಾಲ್ಕನೆಯ ದಿನದ ಭಾರತ ಯುದ್ದದಲ್ಲಿ ಎಲ್ಲಾ ಆಶಯಗಳಿಗೆ ನೀರೆರೆದಿದೆ. ದ್ರೋಣಾಚಾರ್ಯರು ಸಾತ್ಯಕಿಯ ವಿರುದ್ದ ಜಯಕ್ಕಾಗಿ ಪರದಾಡಿದ್ದಾರೆ. ಇನ್ನು ಕರ್ಣನ ಕಥೆ ಸೋಲಿನ ಸರಮಾಲೆಯನ್ನು ತೊಡಿಸಿದೆ. ಕರ್ಣ ಅರ್ಜುನನೆದುರು ಬಹು ಭಾರಿ ಸೋತದ್ದೂ ಆಯಿತು, ಭೀಮನೆದುರೂ ಪರಾಜಯ ಆತನಿಗಾಯಿತು. ಕಡೆಗೆ ಸಾತ್ಯಕಿಯನ್ನೂ ಗೆಲ್ಲಲಾಗದೆ ಪಲಾಯನಗೈದ ಕರ್ಣನ ಬಗ್ಗೆ ಇದ್ದ ವಿಶ್ವಾಸವೂ ತಣ್ಣಗಾಗಿದೆ. ಇನ್ನು ಶಲ್ಯ, ಕೃಪ, ಅಶ್ವತ್ಥಾಮಾದಿಗಳು ಅರ್ಜುನನ ಮುಂದೆ ಎಷ್ಟು ಭಾರಿ ಸೋತು ಓಡಿದರೊ ಅವರಿಗಷ್ಟೆ ಗೊತ್ತು ಎಂಬಂತಾಗಿದೆ. ಅಸಾಮಾನ್ಯ ವೀರ ಭೂರಿಶ್ರವಸನೂ ಸತ್ತು ಬಿದ್ದಿದ್ದಾನೆ. ಮಹತ್ತರವಾದ ಪಣವಾಗಿದ್ದ ಜಯದ್ರಥನ ಪ್ರಾಣವೂ ದಿನಾಂತ್ಯಕ್ಕೆ ಹರಣವಾಗಿ ಹೋಯಿತು. ದರ್ಯೋಧನನಿಗೆ ತಡೆಯಲಾಗಲಿಲ್ಲ. ಓರ್ವಳೇ ತಂಗಿ ದುಶ್ಯಲೆ ವಿಧವೆಯಾಗಿದ್ದಾಳೆ. ಈಗ ದುರ್ಯೋಧನನಿಗೆ ಮತಿಭ್ರಮಣೆಯಾಗತೊಡಗಿದೆ. ಇಂದಿನವರೆಗಿನ ಕಳೆದ ಹದಿಮೂರು ದಿನಗಳಲ್ಲಿ ಆಗದ ಬೃಹತ್ ಸೇನಾನಾಶ ಇಂದು ಆಗಿ ಹೋಗಿದೆ. ಹೀಗಿರಲು ಸೇನಾಪತಿ ದ್ರೋಣಾಚಾರ್ಯರ ಎರಡೆರಡು ವ್ಯೂಹ ರಚನೆ, ಜಯದ್ರಥನ ರಕ್ಷಣೆಯ ಪ್ರಯತ್ನ, ಯೋಜನೆ ಕೈಗೂಡದೆ ವ್ಯರ್ಥವಾದುದನ್ನು ಅವಲೋಕನ ಮಾಡಿದ ದುರ್ಯೋಧನನ ಕೋಪ ಸೇನಾನಾಯಕ ಗುರು ದ್ರೋಣರತ್ತ ತಿರುಗಿತು. ಯುದ್ದ ವಿಶಾರದರು, ಸಕಲ ಶಸ್ತ್ರ – ಶಾಸ್ತ್ರ ಕೋವಿದರು, ಶಾಪಾದಪಿ – ಶರಾದಪಿ ಎಂದೆಲ್ಲಾ ಕರೆಸಿಕೊಳ್ಳುವ ದ್ರೋಣಾಚಾರ್ಯರನ್ನು ಮನಸಾ ಇಚ್ಚೆ ನಿಂದಿಸಿ, ತೆಗಳಿ ದೂಷಣೆ ಮಾಡುತ್ತಾ ಅವರನ್ನು ಇಂದಿನ ಎಲ್ಲಾ ಸೋಲಿಗೂ ಹೊಣೆಗಾರರನ್ನಾಗಿಸಿದನು. ಅರ್ಜುನ ನಿಮ್ಮ ಪ್ರಿಯ ಶಿಷ್ಯ, ಆತನ ಬಗೆಗಿನ ಮಮಕಾರ ನಿಮ್ಮ ಮನದಲ್ಲಿ ಇನ್ನೂ ಹಾಗೆಯೆ ಇದೆ. ನೈಜ ಯುದ್ಧ ಮಾಡದೆ ವಿದ್ರೋಹಿಯಾಗಿ ರಣಾಂಗಣದಲ್ಲಿ ನೀವು ಅವಕಾಶ ನೀಡುತ್ತಾ ನಮ್ಮ ಪಕ್ಷಕ್ಕೆ ವಂಚಕನಾಗಿದ್ದೀರಿ” ಎಂದು ಕೌರವ ಹೀನಾಯವಾಗಿ ಜರಿದು ಮಾತನಾಡಿದನು.

ದಣಿದು ಬಸವಳಿದು ಬದಿಗೆ ಸರಿದಿದ್ದ ದ್ರೋಣಾಚಾರ್ಯರಿಗೆ ದುರ್ಯೋಧನನ ನಿಂದಾ ವಾಕ್ಯಗಳು ಪಾಂಡವರ ಶಸ್ತ್ರಾಘಾತಗಳಿಗಿಂತಲೂ ಹೆಚ್ಚಿನದ್ದಾದ ವೇದನೆ ನೀಡಿತು. “ಎಲೈ ಕೌರವಾ! ಈಗ ಯಾಕೆ ಅನ್ಯರ ದೂಷಣೆಯಲ್ಲಿ ನಿರತನಾಗಿರುವೆ? ವಂಚನೆಯಿಂದ ಪಾಂಡವರನ್ನು ಪಡಬಾರದ ಕಷ್ಟ ಅನುಭವಿಸುವಂತೆ ಮಾಡಿದ್ದು ನೀನು. ನಿನಗೆ ತಂತ್ರಗಾರನಾಗಿದ್ದ ಶಕುನಿ ಎಲ್ಲಿದ್ದಾನೆ? ಈಗ ದ್ಯೂತವಾಡಿಸಿದಂತೆ ಆತನಿಂದಲೆ ಯುದ್ದ ಮುಖೇನ ಪಾಂಡವರನ್ನು ಗೆದ್ದು ಬರಲು ಹೇಳು. ಮಾಡುವ ಪಾಪಕೃತ್ಯಗಳನ್ನೆಲ್ಲ ಗೈದು, ಅಧರ್ಮಿಯಾಗಿ ಬದುಕಿದ ನಿನ್ನ ಪಕ್ಷದಲ್ಲಿ ಜೀವ ಪಣಕ್ಕಿಟ್ಟು ಹೋರಾಡಿದರೂ ನಮಗೆ ಕೈಸೋಲು ಆಗುತ್ತಿದೆ. ಅಂದರೆ ನಾವೀಗ ಅರಿತುಕೊಳ್ಳ ಬೇಕಾದದ್ದು ಧರ್ಮ ಜಯ ಪಡೆಯುತ್ತಿದೆ ಎಂಬ ಸತ್ಯ. ಭೀಷ್ಮ ವಿದುರರಿಂದ ಹಿಡಿದು ಋಷಿ ಮುನಿಗಳ ಸಹಿತ ನಾವೂ ಕೂಡ ನಿನಗೆ ತಿಳಿ ಹೇಳಿದೆವು. ಕೃಷ್ಣನೂ ನಿನಗೆ ಸಾಕಷ್ಟು ನೀತಿ‌ ಮಾತುಗಳನ್ನು ಹೇಳಿದ್ದರೂ ಆಗ ನಿನಗೆ ಕೇಳುವ ಬುದ್ಧಿ ಇರಲಿಲ್ಲ. ಸತ್ಕುಲ ಪ್ರಸೂತೆಯಾದ ದ್ರೌಪದಿಯ ವಸ್ತ್ರಾಪಹಾರ ಪ್ರಯತ್ನದಂತಹ ಮಹಾ ಪಾತಕ ಗೈದಿರುವ ನಿನ್ನ ಪಕ್ಷಕ್ಕಾಗುತ್ತಿರುವ ಸೋಲು ನಿನಗಷ್ಟೆ ಅಲ್ಲ ಸಮಸ್ತ ಲೋಕಕ್ಕೆ ಪಾಠವಾಗಿದೆ. ನ್ಯಾಯವಾಗಿ ಪಾಂಡವರಿಗೆ ಅವರು ಕೇಳಿದ ಐದು ಗ್ರಾಮವನ್ನು ದಾಯಾದ್ಯ ಭಾಗವಾಗಿ ನೀಡಿರುತ್ತಿದ್ದರೆ ಈ ತೆರನಾದ ಮಾರಣ ಹೋಮ ಆಗುತ್ತಿತ್ತೇ? ನೀನೂ, ನಿನ್ನವರೂ ಕ್ಷೇಮವಾಗಿ ಉಳಿಯುತ್ತಿರಲಿಲ್ಲವೆ? ಕೇವಲ ಐದು ಗ್ರಾಮ ಉಳಿಸಲು ಇಂತಹ ಬಲಿದಾನ? ಇದಕ್ಕೆಲ್ಲಾ ಯಾರು ಹೊಣೆ? ಈಗ ಜಯದ್ರಥನ ರಕ್ಷಣೆ ಮಾಡಲಾಗದ್ದು ನನ್ನ ದೌರ್ಬಲ್ಯ ಎಂದು ತೆಗಳುತ್ತಿರುವೆ. ನಿನ್ನ ಸಹಿತ ನಮ್ಮ ಪಕ್ಷದ ಅಗ್ರಮಾನ್ಯ ಆರು ಮಹಾರಥಿಗಳು ಇದ್ದರೂ ಓರ್ವ ಪಾರ್ಥನನ್ನು ನಿಮಗೆ ತಡೆ ಹಿಡಿಯಲಾಗಲಿಲ್ಲ. ಉಳಿದ ಸಮಸ್ತ ಪಾಂಡವ ಸೇನೆಯ ಜೊತೆ ಮಿತ ಸೈನ್ಯವನ್ನು ಆಧಾರವಾಗಿಸಿ ಕೃತವರ್ಮನ ಜೊತೆಗಿದ್ದು ನಾನು ಹೋರಾಡಿದ್ದು ನಿನ್ನ ಗಮನಕ್ಕೆ ಬಾರದೆ ಹೋಯಿತೆ?” ಎಂದು ಆತನ ದುಷ್ಕರ್ಮಗಳನ್ನು ಎತ್ತಿ ಹಿಡಿದು ಆರೋಪಿಸಿ ಪ್ರಶ್ನಿಸಿದರು.

ಅಲ್ಲಿಗೆ ಕರ್ಣನೂ ಬಂದು ಜೊತೆಯಾದನು. “ಮಿತ್ರಾ! ಆಚಾರ್ಯ ದ್ರೋಣರು ಸಾಧ್ಯವಾದುದೆಲ್ಲವನ್ನೂ ಮಾಡಿದರೂ, ಪರಿಣಾಮ ನಮಗೆ ವ್ಯತಿರಿಕ್ತವಾಗಿ ಹೋಯಿತು. ಹಾಗಾಗಿ ಅವರ ದೂಷಣೆ ಸಲ್ಲದು. ಮಾತ್ರವಲ್ಲ ಈ ಕ್ಷಣ ನಾವು ಸ್ಥೈರ್ಯ ತಾಳಬೇಕು. ಮುಂದೇನು ಎಂಬ ಮಹತ್ವದ ತೀರ್ಮಾನ, ಸಮರ್ಥ ಯೋಜನೆ ರೂಪಿಸಿ ಮುನ್ನಡೆಯಬೇಕು. ಸೇನಾನಾಯಕರಾದ ಗುರುಗಳು ನಮಗೆ ಮಾರ್ಗದರ್ಶನ ಮಾಡಬೇಕು” ಎಂದನು.

ಆಗ ದ್ರೋಣಾಚಾರ್ಯರು “ಇಂದಿನ ದಿನದ ಯುದ್ದ ನಿಯಮದಂತೆ ನಿಲ್ಲಿಸಲ್ಪಡುವುದು ಬೇಡ, ರಾತ್ರಿಯೂ ಯುದ್ದ ಸಾಗಲಿ” ಎಂದು ಅಬ್ಬರಿಸುತ್ತಾ ನುಡಿದರು. ಈಗ ಮಾತ್ರ ದುರ್ಯೋಧನನ ಮನಸ್ಥಿತಿ ಕುಸಿದು ಹೋಗಿದೆ. ಸಮಗ್ರ ಪರಾಜಯ ಮತ್ತು ಭೀಮಸೇನನ ಪ್ರತಿಜ್ಞೆ ಕಣ್ಣೆದುರು ಪ್ರಕಟಗೊಳ್ಳತೊಡಗಿದೆ. ನೋಡ ನೋಡುತ್ತಿರುವಂತೆಯೆ ಅವ್ಯಾಹತವಾಗಿ ತನ್ನ ತಮ್ಮಂದಿರನ್ನು ಹತ್ಯೆಗೈಯುತ್ತಿರುವ ಭೀಮನ ಬಗ್ಗೆ ಅತ್ಯುಗ್ರ ಕೋಪ ಆವರಿಸಿತು. ಎರಡರಲ್ಲಿ ಒಂದು ತೀರ್ಮಾನ ಇಂದಿನ ರಾತ್ರಿ ಆಗಲಿ. ಒಂದೋ ನಾನೇ ಭೀಮನನ್ನು ವಧಿಸುವೆ. ಇಲ್ಲಾ ಆ ಪ್ರಯತ್ನದಲ್ಲಿ ನನ್ನ ವಧೆಯಾಗಿ ಯುದ್ದ ನಿಲ್ಲಿಸಲ್ಪಡಲಿ. ಎಲ್ಲರೂ ನನ್ನನ್ನು ದೋಷಿಯಾಗಿಸಿ ಆಡಿಕೊಳ್ಳುವುದಾದರೂ ಕೊನೆಯಾಗಲಿ. ಉಳಿಯುವವರಾದರು ಬದುಕಲಿ ಎಂಬಂತಹ ಭೀಷಣ ಯೋಚನೆ ದುರ್ಯೋಧನನದ್ದಾಯಿತು.

ಅಂತೆಯೆ ಯುದ್ದ ವಿರಾಮವಿಲ್ಲ, ರಾತ್ರಿಯೂ ಯುದ್ದ ಮುಂದುವರಿಯುತ್ತದೆ ಎಂಬ ಘೋಷಣೆಯಾಯಿತು. ಹಾಗಿದ್ದರೆ ವಿಶೇಷವೂ, ಧರ್ಮ ಬಾಹಿರವೂ ಆದ ರಾತ್ರಿ ಯುದ್ದಕ್ಕೆ ನಿಯಮಗಳಿವೆಯೆ? ಎಂಬ ತರ್ಕ ಎದ್ದಿತು.

ಮುಂದುವರಿಯುವುದು…

spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page