22.5 C
Udupi
Tuesday, December 16, 2025
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ – 373

ಭರತೇಶ ಶೆಟ್ಟಿ ,ಎಕ್ಕಾರ್

ಕರ್ಣ ದುರ್ಯೋಧನರು ಸೇರಿ ಭೀಮಸೇನನನ್ನು ಎದುರಿಸುತ್ತಿದ್ದಾರೆ. ಅತ್ಯುಗ್ರ ಹೋರಾಟದಲ್ಲಿ ಮಿತ್ರದ್ವಯರು ಭೀಮನನ್ನು ವಧಿಸಬೇಕೆಂಬಂತೆ ರಣವಿಕ್ರಮ ಮೆರೆಯುತ್ತಿದ್ದಾರೆ. ಅದೇ ಸಮಯಕ್ಕೆ ದುರ್ಯೋಧನನ ಸೋದರ ದುರ್ಜಯನೂ ಬಂದು ಸೇರಿ, ಭೀಮನ ಮೇಲೆ ಶಸ್ತ್ರ ಪ್ರಯೋಗ ನಿರತನಾದನು. ಸಾಂಘಿಕವಾದ ಯುದ್ದದ ಮುಖೇನ ಧನುರ್ಧಾರಿಗಳಾಗಿ ಶರಸಂಧಾನಗೈಯುತ್ತಾ ಭೀಮನನ್ನು ಕಾಡುತ್ತಿದ್ದಾರೆ. ಪದಾತಿಯಾಗಿದ್ದ ಭೀಮ ತಕ್ಷಣ ತನ್ನ ಪಕ್ಷದ ರಥವೊಂದನ್ನು ಏರಿ ಧನುರ್ಧಾರಿಯಾಗಿ ಕುರುಗಳ ಶರ ಖಂಡನೆಯಲ್ಲಿ ನಿರತನಾದನು. ಮಲ್ಲ ಯುದ್ದ ಪ್ರವೀಣ ಭೀಮ ಆ ಯುದ್ದ ತಂತ್ರದಂತೆ ತಾನು ಎದುರಾಳಿಯ ಹಿಡಿತದಿಂದ ನುಸುಳಲು ವೈರಿಯ ದುರ್ಬಲ ಅಂಗವನ್ನೋ, ಕಿರು ಬೆರಳನ್ನೋ ಹಿಡಿದು ಮುರಿದು ಎದುರಾಳಿಗೆ ನೋವನ್ನಿತ್ತು ಆ ಕ್ಷಣದ ಅವಕಾಶ ಬಳಸಿ ಸೆಟೆದು ನಿಲ್ಲಬೇಕು. ಅಂತೆಯೆ ಮೊದಲು ಈ ಮೂವರಲ್ಲಿ ದುರ್ಬಲನಾದ ದುರ್ಜಯನನ್ನು ಗುರಿಯಾಗಿಸಿ ಹೋರಾಡ ತೊಡಗಿದನು. ಶೀಘ್ರ ಶರಗಳನ್ನು ಸರಸರನೆ ಪ್ರಯೋಗಿಸಿ ದುರ್ಜಯನ ಹತ್ಯೆಗೈದನು. ಓರ್ವನ ಬಾಧೆ ನಿವಾರಣೆಯಾಯಿತು. ಕರ್ಣ ದುರ್ಯೋಧನರಿಂದ ಪ್ರಯೋಗಿತ ಶರಗಳನ್ನು ಖಂಡಿಸುತ್ತಾ, ತಪ್ಪಿಸುತ್ತಾ ಯುದ್ಧ ಮುಂದುವರಿಸಿದನು. ಮತ್ತೆ ರಣತಂತ್ರ ಯೋಜಿಸಿ ಕರ್ಣ ಮತ್ತು ದುರ್ಯೋಧನರ ಸಾರಥಿಗಳನ್ನು ಕೊಂದನು. ರಥ ನಿಯಂತ್ರಣ ಕಳಕೊಂಡ ಈರ್ವರು ರಥಿಕರ ಮೇಲೆ ನಿಯಂತ್ರಣ ಸಾಧಿಸಿದನು. ಶಕ್ತಿಯಿಂದಾಗದ ಕೆಲಸಕ್ಕೆ ಯುಕ್ತಿಯನ್ನು ಬಳಸಿಕೊಂಡನು. ರಥವನ್ನು ಪ್ರದಕ್ಷಿಣಾಕಾರದಲ್ಲಿ ಓಡಿಸುತ್ತಾ, ಕರ್ಣನ ವಿಕ್ರಮಕ್ಕೆ ವಿಶೇಷ ಅವಕಾಶ ಒದಗದಂತೆ ಮಾಡುತ್ತಾ ಯುದ್ದ ಮಾಡಿದನು. ಸೂತ ಕಾರ್ಯದಲ್ಲಿ ವಿಶೇಷ ನೈಪುಣ್ಯವಿರದ ದುರ್ಯೋಧನನನ್ನು ಗುರಿಯಾಗಿಸಿ ಬಾಣ ಪ್ರಯೋಗಿಸಿ ಗಾಯಗೊಳಿಸಿದನು. ಅವಕಾಶ ಬಳಸಿಕೊಂಡು ಘನವಾದ ಗದೆಯೊಂದನ್ನು ಎತ್ತಿ ಬಲಯುತ ಬಾಹುಗಳ ಆಧಾರದಿಂದ ದುರ್ಯೋಧನನ ವಕ್ಷಃಸ್ಥಳವನ್ನು ಗುರಿಯಾಗಿ ಎಸೆದನು. ಅತಿಯಾದ ಭಾರ ಮತ್ತು ವೇಗದ ಆಘಾತದಿಂದ ಧೃತಿಗೆಟ್ಟ ಕೌರವ ಹಿಂದೆ ಸರಿಯ ಬೇಕಾಯಿತು. ಈಗ ತನಗೆದುರಾಗಿ ಉಳಿದ ಕರ್ಣನ ಜೊತೆ ನೇರ ಯುದ್ದ ನಿರತನಾಗಿ ಕರ್ಣನ ಶರಗಳಿಗೆ ಉತ್ತರ ನೀಡತೊಡಗಿದನು. ಸಮಯ ಸಾಧಿಸಿ ಕರ್ಣನ ಧನುಸ್ಸಿನ ಪ್ರತ್ಯಂಚವನ್ನು ಕತ್ತರಿಸಿ ಬಿಟ್ಟನು. ಆ ಕೂಡಲೆ ಕರ್ಣನ ರಥವನ್ನು ಗುರಿಯಾಗಿಸಿ ಶರವರ್ಷಗೈದು ಧ್ವಂಸಗೈದನು. ಕೆರಳಿದ ಕರ್ಣ ಧನುರ್ಧಾರಿಯಾಗಿ ರಥನಷ್ಟವಾದ ಕಾರಣ ನೆಲದಲ್ಲಿ ನಿಂತು ಹೋರಾಡತೊಡಗಿದನು. ಅತ್ಯುಗ್ರವಾದ ಸಮರ ಸಾಗಿತು. ಕರ್ಣ ಅಸಾಧಾರಣ ವೀರನು ಹೌದು. ಭೀಮನನ್ನು ಕಂಗೆಡಿಸಿ, ಆತ ಸಾವರಿಸಿಕೊಳ್ಳುವುದರ ಒಳಗಾಗಿ ಅನ್ಯರಥವೊಂದನ್ನೇರಿ ಸಮರ್ಥ ಹೋರಾಟಕ್ಕೆ ಅಣಿಯಾದನು. ಬಾಣಗಳನ್ನು ಸಮೂಹವಾಗಿ ಪ್ರಯೋಗಿಸಿ, ಭೀಮಸೇನನನ್ನು ಹೀನಾಯವಾಗಿ ದಂಡಿಸಿ, ಶರವರ್ಷಗೈಯುತ್ತಾ ದಿಗ್ಬಂಧಿಸಿದನು. ನಿಶಿತವಾದ ಬಾಣಗಳನ್ನು ಭೀಮನ ಎದೆಗೆ ಗುರಿಯಾಗಿಸಿ ಪ್ರಹರಿಸಿದನು. ಎಡೆಬಿಡದೆ ಕರ್ಣ ಸೆಳೆಸೆಳೆದು ಎಸೆದ ಬಾಣಗಳಿಂದ ರುಧಿರದೋಕುಳಿಯಲ್ಲಿ ಮಿಂದೆದ್ದಂತಾದ ಭೀಮ, ಅಕ್ರೋಶದಿಂದ ರಕ್ತನೇತ್ರನಾಗಿ ಘರ್ಜಿಸುತ್ತಾ, ಸುರಿವ ಕೆನ್ನೀರಧಾರೆಯನ್ನು ತನ್ನ ಕಟವಾಯಿಗಳಿಂದ ನೆಕ್ಕುತ್ತಾ ಸೆಟೆದು ನಿಂತನು. ಕರ್ಣ ಅತಿ ಹರಿತವಾದ, ಎಂತಹ ಶರೀರವನ್ನಾದರೂ ಸೀಳಿ ಹರಿದು ಹಾಯ್ದು ಹೋಗಬಲ್ಲ ಅತಿವೇಗದ ಶರವನ್ನು ಪ್ರಯೋಗಿಸಿ ಭೀಮನನ್ನು ಮತ್ತಷ್ಟು ಪೀಡಿಸಿದನು. ಪರಮಕ್ರುದ್ಧನಾದ ಭೀಮಸೇನ ಬಹಳಷ್ಟು ಗಾಯಗೊಂಡನು. ಪ್ರತಿಯೊಂದು ಗಾಯವಾದಾಗಲೂ ಬೊಬ್ಬಿರಿದು ಆರ್ಭಟಿಸುವಾಗ ಭೀಮನ ಶರೀರದಿಂದ ಕಾರಂಜಿಯಂತೆ ರಕ್ತ ಚಿಮ್ಮುತ್ತಿತ್ತು. ಸುವರ್ಣಮಯವೂ, ಮಣಿಖಚಿತವೂ, ಹರಿತವೂ ಆದ ಅಂಚುಗಳುಲ್ಲ ಗಜತೂಕದ ಗದೆಯನ್ನು ಎರಡೂ ಕೈಗಳಿಂದ ಎತ್ತಿ ಹಿಡಿದ ಭೀಮ – ವೃತ್ರಾಸುರನ ಮೇಲೆ ಇಂದ್ರ ವಜ್ರಾಯುಧ ಪ್ರಯೋಗಿಸಿದಂತೆ ಬೀಸಿ ಎಸೆದನು. ಕರ್ಣ ತನ್ನತ್ತ ಬರುತ್ತಿದ್ದ ಬಹುಭಾರದ ಗದೆಯನ್ನು ಖಂಡಿಸುವ ಯತ್ನದಲ್ಲಿ ಎಡವಿ, ತಪ್ಪಿಸಲು ಬಾಗಿದಾಗ ಗದೆ ಬಂದು ಬೆನ್ನಿಗೆ ಅಪ್ಪಳಿಸಿ ನಡು ಮುರಿದಂತಾಗಿ ಬಿದ್ದು ವಿಪರೀತ ಎಂಬ ಮಟ್ಟಕ್ಕೆ ಗಾಯಗೊಂಡನು. ಆತನ ಜೊತೆ ರಥ ಚಕ್ರಗಳೂ ಮುರಿದು, ಇಬ್ಭಾಗವಾಗಿ ಕೆಳಕ್ಕೆ ಬಿದ್ದಿತು. ಸಾವರಿಸುವುದರೊಳಗಾಗಿ ಭೀಮ ಒಂದರ ಹಿಂದೊಂದರಂತೆ ನಿರಂತರವಾಗಿ ಶರ ಪ್ರಯೋಗಿಸತೊಡಗಿದನು. ನೋಡುತ್ತಿದ್ದ ಸೈನಿಕರಿಗೆ ಭೀಮನ ಬಿಲ್ಲಿನಿಂದ ಪಾಶವೆ (ಹಗ್ಗ) ಪ್ರಯೋಗಿಸಲ್ಪಟ್ಟಿದೆಯೋ ಎಂಬಂತೆ ಒಂದಕ್ಕೊಂದು ಅಂಟಿಕೊಂಡು ಶರಗಳು ಬರುತ್ತಿವೆ. ಕರ್ಣನನ್ನು ಭೀಮ ಕೊಂದು ಅರ್ಜುನನ ಪ್ರತಿಜ್ಞೆ ಪೂರಣಕ್ಕೆ ಅವಕಾಶವೀಯಲಾರನೋ!? ಎಂಬಂತಹ ಸ್ಥಿತಿ ನಿರ್ಮಾಣವಾಯಿತು. ಆಗ ಕೌರವನ ಸೋದರ ದುರ್ಮುಖ, ಕರ್ಣನ ರಕ್ಷಣೆಗೊದಗಿದನು. ಭೀಮಸೇನನ ಮೇಲೆ ಆಕ್ರಮಣಗೈದು ಕರ್ಣನಿಂದ ವಿಮುಖಗೊಳಿಸಿದನು. ಕರ್ಣ ಚೇತರಿಸಿಕೊಳ್ಳಬೇಕಾದರೆ ಒಮ್ಮೆಗೆ ರಣಾಂಗಣದಿಂದ ನಿರ್ಗಮಿಸಬೇಕಾಯಿತು. ದುರ್ಮುಖ ಅರೆಕ್ಷಣ ವಿಕ್ರಮ ಮೆರೆದನಾದರೂ, ಭೀಮನ ರೌದ್ರ ಪ್ರತಾಪದೆದುರು ನಿರುತ್ತರನಾಗಿ ಕೆಲ ಕ್ಷಣದಲ್ಲೇ ಸತ್ತು ಬೀಳ ಬೇಕಾಯಿತು.

ಇತ್ತ ಸಾತ್ಯಕಿಗೂ ಭೂರಿಶ್ರವಸನಿಗೂ ಮಹಾ ಸಂಗ್ರಾಮ ಸಾಗುತ್ತಿದೆ. ಮಹಾಭಾರತ ಯುದ್ದದಲ್ಲಿ ಸಾತ್ಯಕಿ ಮತ್ತು ಭೂರಿಶ್ರವಸನ ಮಧ್ಯೆ ಸಾಗಿದ ಈ ಯುದ್ದ ಅತ್ಯುಗ್ರ ಸಮರಗಳಲ್ಲಿ ಒಂದು ಎನ್ನಬಹುದು. ಈರ್ವರೂ ಅತುಲ್ಯ ವೀರರು. ಇವರೀರ್ವರ ನಡುವೆ ಸಾಗಿದ ಹೋರಾಟ ಪರಿಕ್ರಮವನ್ನು ವಿಶ್ಲೇಷಣೆ ಮಾಡಿದಷ್ಟೂ ಮುಗಿಯದು. ಕೌರವ ಪಾಂಡವರ ಈ ಧರ್ಮಯುದ್ದಕ್ಕೆ ಹೊರತಾಗಿಯೂ, ಇವರೀರ್ವರು ಪರಮ ಶತ್ರುಗಳು. ಪರಸ್ಪರ ಒಬ್ಬರನ್ನೊಬ್ಬರು ಕೊಂದು ಪರ್ಯಾವಸಾನ ಕಾಣಬೇಕೆಂಬುದನ್ನು ನಿರ್ಣಯಿಸಿ ಹೋರಾಡುತ್ತಿದ್ದಾರೆ. ರಣಾಂಗಣದಲ್ಲಿ ಮೇರು ಪರ್ವತ ಸದೃಶರ ಕಾದಾಟ ವರ್ಣನೆಗೂ ಮೀರಿ ಸಾಗಿದೆ. ಕ್ಷಿಪ್ರವೂ, ಉಗ್ರವೂ, ಆಗಿದ್ದು ಒಬ್ಬರನ್ನೊಬ್ಬರು ಹತ್ಯೆಗೈಯುವ ಸಂಕಲ್ಪಬದ್ದರಾಗಿ ಸೆಣಸುತ್ತಿರುವಾಗ ಒಮ್ಮೆ ಸಾತ್ಯಕಿ ವಿಜ್ರಂಭಿಸಿದರೆ, ತತ್ಕ್ಷಣದಲ್ಲಿ ಭೂರಿಶ್ರವಸ ಚೇತರಿಸಿ ಹಿಡಿತ ಸಾಧಿಸುತ್ತಿದ್ದ. ಆ ಕೂಡಲೆ ಅಸಮ ಸಾಹಸ ಮೆರೆದು ಸಾತ್ಯಕಿಯ ಕೈ ಮೇಲಾಗುತ್ತಿತ್ತು. ಇವರೀರ್ವರ ಮಧ್ಯೆ ಶಸ್ತ್ರ ಯುದ್ಧ, ಮಂತ್ರಾಸ್ತ್ರ ಯುದ್ಧ, ಕತ್ತಿ ಕಾಳಗ, ಗದಾಯುದ್ಧ, ಮಲ್ಲಯುದ್ಧ ಹೀಗೆ ಎಲ್ಲವೂ ಸನ್ನಿವೇಶಾನುಸಾರ ಸಾಗಿ ಅರೆಕ್ಷಣದ ವಿರಾಮವೂ ಇರದೆ ಅತಿ ಭಯಂಕರವಾಗಿ ಸಾಗುತ್ತಿದೆ. ಪ್ರಾಣವನ್ನು ಪಣವಾಗಿಟ್ಟು ಯುದ್ಧವೆಂಬ ಜೂಜಾಟ ಆಡುವಂತೆ ಸಾಗುತ್ತಿದೆ. ಸ್ಪರ್ಧಾತ್ಮಕ ಯುದ್ದ ಸಾಗುತ್ತಾ ಈಗ ಮಲ್ಲಯುದ್ದ – ಭುಜಾಘಾತ, ಶಿರಾಘಾತ, ಪ್ರಹರ, ನಿಗ್ರಹ, ಪ್ರಗ್ರಹ ಗಳಿಂದ ಘಾತಿಸಿಕೊಂಡರು. ಹಿಡಿತದ ಕ್ರಮಗಳಾದ ಬಂಧನ, ಭುಜಪಾಶ, ಕಟಿ ಬಂಧಿ, ಪಾದಬಂಧ, ಉದರಬಂಧ, ಉದ್ಬ್ರಮಣ, ಗತ, ಪ್ರತ್ಯಾಗತ, ಆಕ್ಷೇಪ, ಪಾತನ, ಉತ್ಥಾನ, ಸಂಫ್ಲುತ ಹೀಗೆ ಪರಿಪೂರ್ಣವಾಗಿ ಮಲ್ಲಯುದ್ಧದ ಎಲ್ಲಾ ಮೂವತ್ತೆರಡು ಕರಣ (ವಿಧಾನ)ಗಳೂ ಪ್ರದರ್ಶನವಾದವು.

ಹೀಗೆ ಭೂರಿಶ್ರವಸ – ಸಾತ್ಯಕಿ ದ್ವಂದ್ವ ನಿರತರಾಗಿರುವಾಗ ಶ್ರೀಕೃಷ್ಣ ಅರ್ಜುನನ್ನು ಎಚ್ಚರಿಸಿದ. “ಪಾರ್ಥಾ! ಕೌರವನ ಮುಖ್ಯ ಸಖನಾದ ಭೂರಿಶ್ರವಸ ಮತ್ತು ನಿನ್ನ ಪ್ರಿಯ ಶಿಷ್ಯನೂ ಮಿತ್ರನೂ ಆದ ಸಾತ್ಯಕಿಯ ಜೊತೆ ನೇರ ವೈರದ ಸಮರ ಸಾಗುತ್ತಿದೆ. ಭೂರಿಶ್ರವಸನ ಹಿಡಿತದಿಂದ ನಿನ್ನ ಶಿಷ್ಯ ಕುಶಲವಾಗಿ ಬರುವಂತೆ ಕಾಣಿಸುತ್ತಿಲ್ಲ. ಅರೆಕ್ಷಣ ಅತ್ತ ನೋಡು. ಸಾತ್ಯಕಿಗೆ ಈಗ ರಕ್ಷಣೆಯ ಅಗತ್ಯವಿದೆ. ಮೊದಲು ಆ ಕೆಲಸ ಮಾಡಿ ಕ್ಷಣಾರ್ಧದಲ್ಲಿ ಇತ್ತ ತಿರುಗು” ಎಂದು ನಿರ್ದೇಶನ ನೀಡಿದನು. ಅರ್ಜುನ ಅತ್ತ ನೋಡುವಾಗ, ಏನು ನೋಡುವುದು?!

ಸಾತ್ಯಕಿ ಅದ್ಬುತ ಸಾಧನೆಯ ಯುದ್ಧ ಮಾಡಿದ್ದನಾದರೂ ಈಗ ಸೋತು ಸೊಪ್ಪಾಗಿದ್ದಾನೆ. ಭೂರಿಶ್ರವಸನ ಭುಜಬಲದೆದುರು ಕಳಾಹೀನನಾಗಿದ್ದಾನೆ. ಸೌಮದತ್ತಿಯು ಶೈನೇಯನನ್ನು ಹಿಡಿದೆತ್ತಿ ನೆಲಕ್ಕಪ್ಪಳಿಸಿದನು. ಯಾದವ ವೀರ ಸಾತ್ಯಕಿಗೆ ಪ್ರತಿರೋಧ ತೋರುವ ತ್ರಾಣವೂ ಇಲ್ಲ. ಪಾದದಲ್ಲಿ ಹಿಡಿದು ನೆಲದಮೇಲೆ ಗಿರಗಿರನೆ ತಿರುಗಿಸಿ ಮತ್ತೆ ಎತ್ತಿ ಬೀಸಿ ಹೊಡೆದನು.

ಆಗ ಕೃಷ್ಣ “ಅರ್ಜುನಾ! ನಿನ್ನ ಪ್ರಿಯ ಶಿಷ್ಯನ ಸ್ಥಿತಿ ನೋಡು ಎಂದು ಎಚ್ಚರಿಸಿದನು” ಅರ್ಜುನ ನೋಡಿದರೂ, ಜಯದ್ರಥನ ವಧಾ ಸಂಕಲ್ಪ ಬದ್ಧನಂತೆ ತನ್ನ ಗುರಿ ಸಾಧನೆಯಲ್ಲಿ ನಿರತನಾಗಿದ್ದನು. ಕೃಷ್ಣ ಎಚ್ಚರಿಸಿದರೂ, ಸುಕರ ಕರ್ಮ( ಯುದ್ಧ ನೀತಿಗೆ ವಿರುದ್ಧವಾದ) ಕೃತ್ಯ ಮಾಡಲಿಲ್ಲ.

ಯಶಸ್ಸಿನ ಹರುಷದಿಂದ ಭೂರಿಶ್ರವಸನ ಮುಖ ಆಯಾಸ ಮರೆತು ತೇಜಸ್ಸಿನಿಂದ ಕೂಡಿ ಹೊಳೆಯುತ್ತಿದೆ. ಸಾತ್ಯಕಿ ನಿಸ್ತೇಜನಾಗಿ ಉಸಿರಾಡುತ್ತಿರುವ ಶವದಂತಾಗಿದ್ದಾನೆ. ನಿರಾಯುಧನಾಗಿ ಮತಿಹೀನನಾಗಿ ಬಿದ್ದಿದ್ದ ಸಾತ್ಯಕಿಯ ಶುಶ್ರೂಷೆಗಾಗಿ ಪಾಂಡವ ಸೇನಾ ಪರಿಚಾರಕರು ಬಂದರೂ ಬಿಡದೆ ಓಡಿಸಿ ತನ್ನ ಹಗೆ ತೀರಿಸುತ್ತಾ ಸಾತ್ಯಕಿಯ ಎದೆಯ ಮೇಲೆ ಹಾರಿ, ಎಡಗಾಲಿಂದ ಒದ್ದು ಜಿಗಿದನು. ಆನಂತರ ಒರೆಯಿಂದ ಕಿರುಗತ್ತಿ ಸೆಳೆದು, ಸಾತ್ಯಕಿಯ ಮುಡಿಯನ್ನು ಮುಷ್ಟಿಯಲ್ಲಿ ಹಿಡಿದು ಕತ್ತು ಕತ್ತರಿಸಲು ಬೀಸಿದಾಗ ಅರ್ಜುನ ಹೂಡಿದ್ದ ತನ್ನ ಶರವನ್ನು ತಿರುಗಿಸಿ ಕತ್ತಿ ಹಿಡಿದಿದ್ದ ಭೂರಿಶ್ರವಸನ ಭುಜವನ್ನೇ ಗುರಿಯಾಗಿಸಿ ಸೆಳೆದು ಶೀಘ್ರವಾಗಿ ಪ್ರಯೋಗಿಸಿದನು. ಭೂರಿಶ್ರವಸನ ಬಲಭುಜದ ಆಳಕ್ಕಿಳಿದು ಹೊಕ್ಕಿತು. ಬೀಸಿದ್ದ ಕತ್ತಿ ಸಾತ್ಯಕಿಯ ಕತ್ತು ಸೀಳುವ ಮೊದಲು ಗುರಿ ತಪ್ಪಿ ಬಿದ್ದಿತು.

ತನ್ನ ಮೇಲೆ ಆಕ್ರಮಣ ಮಾಡಿದ ಪಾರ್ಥನನ್ನು ಕಂಡು, “ಹೀನ ಕೃತ್ಯ ಮಾಡಿದ ನೀನೂ ಓರ್ವ ಕ್ಷತ್ರಿಯನೇ? ಸಾತ್ಯಕಿಯೊಂದಿಗೆ ಹೋರಾಡುತ್ತಿದ್ದ ನನ್ನ ಮೇಲೆ ಯುದ್ದ ಆಹ್ವಾನ ನೀಡದೆ ಬೆಂಗಡೆಯಿಂದ ಹೇಗೆ ಪ್ರಹಾರಗೈದೆ? ಧರ್ಮಿಷ್ಟನಾದ ನಿನಗಿದು ಶೋಭೆಯೆ? ಇದು ನಿನ್ನ ಬುದ್ದಿಯೋ ಇಲ್ಲ ಆ ನೀಚ ಕೃಷ್ಣನ ಕುಹಕ ತಂತ್ರ ಪ್ರೇರಣೆಯೋ? “ಎಂದು ಅಪಮಾನಿಸಿ ನಿಂದೆಯ ಮಾತುಗಳನ್ನಾಡಿದ.

ಆಗ ಅರ್ಜುನ “……

ಮುಂದುವರಿಯುವುದು…

spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page