24.8 C
Udupi
Tuesday, February 3, 2026
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ 369

ಭರತೇಶ ಶೆಟ್ಟಿ ,ಎಕ್ಕಾರ್

ದುರ್ಯೋಧನ ವ್ಯೂಹದೊಳಗೆ ಹೊಕ್ಕು ಕೃಷ್ಣಾರ್ಜುನರನ್ನು ಅರಸುತ್ತಾ ಬೆಂಬತ್ತಿ ಹೋಗುತ್ತಿದ್ದಾನೆ. ಕೌರವನನ್ನು ಅನುಸರಿಸಿ ಬಂದ ಬೆಂಬಲಿಗರಾದ ವಿಂದ ಅನುವಿಂದರು ವ್ಯೂಹವನ್ನು ವಿರುದ್ಧ ದಿಕ್ಕಿನಿಂದ ಪ್ರವೇಶಿಸಿ ಮುನ್ನುಗ್ಗಿದರು.

ಆದರೆ ಅರ್ಜುನನ ರಥ ಯಾರ ಕೈಗೂ ಸಿಗುತ್ತಿಲ್ಲ ಕಾರಣ ಸಾರಥಿಯಾದ ಕೃಷ್ಣ ಸಂದರ್ಭ ನೋಡಿಕೊಂಡು ಬೇರೆ ಬೇರೆ ಮೂರು ವಿಧದ ವೇಗಗಳಾದ ಉತ್ತಮ – ಮಧ್ಯಮ – ಅಧಮ ಹೀಗೆ ವ್ಯತ್ಯಾಸಗೊಳಿಸುತ್ತಾ ರಥಕಲ್ಪ ವಿದ್ಯೆಯ ಸಮರ್ಥ ಬಳಕೆ ಮಾಡುತ್ತಿದ್ದಾನೆ. ಅರ್ಜುನ ಕ್ರೋಶ ದೂರದಷ್ಟು ( ಎರಡು ಮೈಲಿ) ಶರಗಳಿಂದ ವ್ಯಾಪಿಸುತ್ತಾ ಹೋರಾಡುತ್ತಿದ್ದಾನೆ. ಆದರೆ ಅರ್ಜುನನ ರಥ ಕೃಷ್ಣ ಸಾರಥ್ಯದಲ್ಲಿ ಶರವೇಗವನ್ನೂ ಹಿಂದಿಕ್ಕಿ ಸಾಗುತ್ತಿದೆ. ಸತ್ತು ಬಿದ್ದ ಯೋಧರ ಹೆಣ, ಮುರಿದು ಬಿದ್ದ ರಥ – ಶಸ್ತ್ರಾಸ್ತ್ರಗಳ ರಾಶಿಯನ್ನು ನೆಗೆದು ಹಾರಿ ದಾಟುತ್ತಾ ಸಾಗುತ್ತಿದೆ. ಬಾಣಗಳು ಒಂದು ಕ್ರೋಶದಷ್ಟು ಸಾಗುವಷ್ಟರಲ್ಲಿ ರಥ ಇನ್ನೂ ಮುಂದಕ್ಕೆ ಸಾಗಿಯಾಗುತ್ತಿತ್ತು. ಹೀಗಾಗಿ ಬೆಂಬತ್ತಿ ಬಂದವರಿಗೆ ವ್ಯೂಹ ಪರಿಭ್ರಮಣೆಗೈಯುತ್ತಿರುವ ಪಾರ್ಥನ ರಥ ಕೈಗೆ ಸಿಗುತ್ತಿಲ್ಲ.

ಆದರೆ ವಿರುದ್ಧ ದಿಕ್ಕಿನಿಂದ ನುಸುಳುತ್ತಾ ಬಂದ ಆವಂತಿದೇಶದ ವೀರರಾದ ವಿಂದ ಮತ್ತು ಅನುವಿಂದರು ಅರ್ಜುನನನ್ನು ತಡೆದರು. ಜೊತೆಯಾಗಿ ನಿಂತು‌ ಪಾರ್ಥನೊಡನೆ ಹೋರಾಡಲು ಎದುರಾಗಿ ಬಂದರು. ಹೋರಾಡುತ್ತಾ ಪಾರ್ಥ, ಕೃಷ್ಣ ಹಾಗೂ ರಥದ ಕುದುರೆಗಳ ಶರೀರದ ಮೇಲೂ ಪುಂಖಾನುಪುಂಖವಾಗಿ ಶರವರ್ಷಗೈದರು.

ಕ್ರೋಧಿತನಾದ ಅರ್ಜುನ ಭೀಷಣ ಯುದ್ದಗೈದು ವಿಂದನನ್ನು ಸಂಹರಿಸಿದನು. ಅಣ್ಣನ ಮರಣ ವಾರ್ತೆ ತಿಳಿದ ಅನುವಿಂದ ಅತ್ಯುಗ್ರ ಕ್ರೋಧಕ್ಕೊಳಗಾಗಿ ಪಾರ್ಥನನ್ನು ಕೊಲ್ಲಲು ಬಂದನು. ಬಲುಭಟನಾಗಿ ಪಾರ್ಥನೆದುರು ಕಾದಾಡಿದರೂ, ಅರ್ಜುನ ನಿರಾಯಾಸವಾಗಿ ಅನುವಿಂದನನ್ನೂ ಸಂಹರಿಸಿ ಬಿಟ್ಟನು.

ಆ ಬಳಿಕ ಅತಿ ವೇಗದಿಂದ ವ್ಯೂಹದೊಳಗೆ ಮುನ್ನುಗ್ಗಿದರು ಕೃಷ್ಣಾರ್ಜುನರು. ಆದರೆ ಈ ಹೊತ್ತಿಗಾಗುವಾಗ ಪಾರ್ಥನ ರಥದ ಕುದುರೆಗಳು ಗಾಯಗೊಂಡು, ನೋವು ಬಾಯಾರಿಕೆಯಿಂದ ಬಳಲಿದ್ದವು. ಅರ್ಜುನ ಕೃಷ್ಣನಲ್ಲಿ ತನ್ನ ರಥದ ಕುದುರೆಗಳ ಸ್ಥಿತಿಯನ್ನು ಚರ್ಚಿಸ ತೊಡಗಿದನು. ಅವರೊಳಗಿನ ಸಮಾಲೋಚನೆಯಾಯಿತು. ಅದರಂತೆ ರಥದಿಂದಿಳಿದು ಪಾರ್ಥನೋರ್ವನೆ ನೆಲದಲ್ಲಿ ನಿಂತು ಎದುರಾಳಿಗಳನ್ನು ರಣ ಭಯಂಕರನಾಗಿ ಎದುರಿಸತೊಡಗಿದನು. ಕೃಷ್ಣ ಕುದುರೆ ರಥ ಸಮೇತನಾಗಿ ಕುರುಕ್ಷೇತ್ರ ಯುದ್ಧ ಭೂಮಿಯಿಂದ ಹೊರನಡೆದನು. ಗಾಯಗೊಂಡಿರುವ ಕುದುರೆಗಳ ಆರೈಕೆಯ ಕೆಲಸವೂ ಆಗಬೇಕಿತ್ತು.. ಕುದುರೆಗಳಿಗೆ ರಣಾಂಗಣದಲ್ಲಿ ತೃಷೆ ನೀಗಿಸಲು ಸಾಧ್ಯವಿಲ್ಲ ಕಾರಣ ಅಲ್ಲಿ ರಕ್ತ ಸರೋವರಗಳು ಮಾತ್ರ ಕಾಣಸಿಗುತ್ತಿವೆ. ಆದರೆ ಪಾನಯೋಗ್ಯ ಶುದ್ಧ ಜಲವಿಲ್ಲ. ಇದನ್ನರಿತ ಅರ್ಜುನ ದಿವ್ಯ ಪರ್ಜನ್ಯ ಶರ ಪ್ರಯೋಗಿಸಿ ಕುರುಕ್ಷೇತ್ರದ ಹೊರ ಅಂಚಿನಲ್ಲಿ ಶುದ್ಧ ತಿಳಿನೀರ ಸರೋವರವನ್ನು ನಿರ್ಮಿಸಿದನು. ಕೃಷ್ಣ ರಥದಿಂದ ಕುದುರೆಗಳನ್ನು ಬಿಚ್ಚಿ ನೀರು ಕುಡಿದು ಈಜಲು ಬಿಟ್ಟನು. ಅವುಗಳ ಶರೀರಕ್ಕೆ ಚುಚ್ಚಿರುವ ಶರಗಳನ್ನು ಕೌಶಲ್ಯದಿಂದ ಹೊರತೆಗೆದು ಆರೈಕೆ ಮಾಡತೊಡಗಿದನು. ಇತ್ತ ನೆಲದ ಮೇಲೆ ನಿಂತು ಪದಾತಿಯಾಗಿ ಹೋರಾಡುತ್ತಿದ್ದ ಪಾರ್ಥನನ್ನು ಕಂಡು ಕುರುಸೇನೆಯ ಉತ್ಸಾಹ ಇಮ್ಮಡಿಯಾಯಿತು. ಸಂಘಟಿತರಾಗಿ ಮುಗಿಬಿದ್ದು ಪಾರ್ಥನನ್ನು ಗುರಿಯಾಗಿಸಿ ಹೋರಾಡ ತೊಡಗಿದ್ದಾರೆ. ಆದರೆ ಅರ್ಜುನ ಮಹತ್ತರವಾದ ತನ್ನ ಶಸ್ತ್ರ ಜ್ಞಾನದ ಬಲದಿಂದ ಸಮಗ್ರವಾಗಿ ಎರಗುತ್ತಿದ್ದ ಎದುರಾಳಿಗಳನ್ನು ಒಂದು ಹೆಜ್ಜೆಯೂ ಮುಂದೊತ್ತಿ ಬರಲಾಗದಂತೆ ತಡೆದು ನಾಶಗೈಯುತ್ತಿದ್ದಾನೆ. ಮಹಾ ಸಮುದ್ರದತ್ತ ಎಲ್ಲಾ ನದಿಗಳು ಹರಿದು ಬಂದು ಸೇರಿಕೊಳ್ಳುವಂತೆ ಕುರುಸೇನೆ ಅರ್ಜುನತ್ತ ಮುನ್ನುಗ್ಗಿ ಬಂದು ನಿರ್ನಾಮವಾಗುತ್ತಿದೆ.

ವಾಸುದೇವ ಕೃಷ್ಣ ಶುದ್ಧ ಜಲದಿಂದ ಕುದುರೆಗಳ ಶರೀರ ಶುಚಿಗೊಳಿಸಿ, ಯಥೇಚ್ಚವಾಗಿ ಪಾನ ಮಾಡಲು ಅವಕಾಶವಿತ್ತನು. ಬಾಣಗಳಿಂದಾದ ಗಾಯಗಳಿಗೆ ಆರೈಕೆ ಮಾಡಿದನು. ಆ ಕೂಡಲೆ ರಥವನ್ನು ಸಜ್ಜುಗೊಳಿಸಿ ಪಾರ್ಥನತ್ತ ಹಾರಿಸಿದನು‌. ಈ ರೀತಿ ಯುದ್ಧ ಮಧ್ಯೆ ವಿರಾಮ ರಹಿತ ಹೋರಾಟ ಸಾಗುತ್ತಿದೆ. ರಥರಹಿತನಾಗಿ ಅತಿಮಹಾರಥ ಆದವನೊಬ್ಬ ಪದಾತಿಯಾಗಿ ಹೋರಾಡುವುದು ಪುರಾಣೇತಿಹಾಸದಲ್ಲಿ ಇದು ಮೊದಲು.

ರಥಿಕನಾದ ಪಾರ್ಥ ಕಮಲದ ದಳಗಳಂತೆ ಒಳಭಾಗದಲ್ಲಿ ದಟ್ಟನೆಯ ಸಾಂದ್ರತೆಯಲ್ಲಿ ನಿಯೋಜಿತರಾಗಿದ್ದ ಸೈನಿಕರನ್ನು ಮರ ಕಡಿದು ದಾರಿ ಮಾಡುವಂತೆ ಅರ್ಜುನ ಸವರತೊಡಗಿದನು. ರಥ ಜಯದ್ರಥನನ್ನು ಅರಸುತ್ತಾ ಒಳಪದರದ ಸುತ್ತಿನ ಸನಿಹ ಬರುತ್ತಿದೆ.

ಇತ್ತ ರಭಸದಿಂದ ನುಗ್ಗಿ ಬಂದ ದುರ್ಯೋಧನ ಗದಾಧಾರಿಯಾದರೂ, ಧನುರ್ವೇದದಲ್ಲೂ ಪಾರಂಗತನಾಗಿದ್ದಾನೆ. ಧನುಷ್ಟೇಂಕಾರಗೈದು ಪಾರ್ಥನಿಗೆ ಯುದ್ದಾಹ್ವಾನ ನೀಡಿದನು.

ದುರ್ಯೋಧನ ಮತ್ತು ಅರ್ಜುನ ಪರಸ್ಪರ ಎದುರಾದರು. ಅರ್ಜುನನೋ ದುರ್ಯೋಧನನ ಪ್ರತಿದಾಳಿಯನ್ನು ಖಂಡಿಸಿ, ಅತ್ಯುಗ್ರವಾಗಿ ದಂಡಿಸತೊಡಗಿದನು. ಏನೇ ಮಾಡಿದರೂ, ತೀಕ್ಷ್ಣ ಶರಗಳನ್ನು ಪ್ರಯೋಗಿಸಿದರೂ ದುರ್ಯೋಧನನ ಮಂತ್ರಪೂತ ರಕ್ಷಣಾ ಕವಚಕ್ಕೆ ತಾಗಿ ಜಾರಿ ಬೀಳುತ್ತಿದೆ. ಹೀಗೆ ಅರ್ಜುನ ನಿರಂತರವಾಗಿ ಘಾತಿಸುದಿದ್ದರೂ ಪರಿಣಾಮ ಶೂನ್ಯವೇ ಆಗುತ್ತಿದೆ.

ಪಾರ್ಥನ ಕೋಪ ಮುಗಿಲು ಮುಟ್ಟುತ್ತಿದೆ. ಏನೇನೋ ಹರಸಾಹಸ ಪಡುತ್ತಾ ಅತ್ಯದ್ಬುತ ರಣವಿಕ್ರಮ ಮೆರೆದರೂ ದುರ್ಯೋಧನನ ಕವಚ ಅಭೇದ್ಯವಾಗಿ ಉಳಿದಿದೆ. ಆಗ ಅರ್ಜುನ ಕೃಷ್ಣನಲ್ಲಿ ಕೇಳಿದ “ಮಾಧವಾ! ಇದೆನಾಗುತ್ತಿದೆ. ಈಗಾಗಲೆ ಸೋಲಬೇಕಾಗಿದ್ದ ಕೌರವ ಇನ್ನೂ ಅನಾಯಾಸವಾಗಿ ಹೋರಾಡುತ್ತಿದ್ದಾನೆ. ನನಗೇಕೊ ವಿಚಿತ್ರ ಎನಿಸುತ್ತಿದೆ” ಎಂದನು.
ಆಗ ವಾಸುದೇವ ಕೃಷ್ಣ “ಪಾರ್ಥಾ! ಇದು ದ್ರೋಣಾಚಾರ್ಯರ ವಿದ್ಯೆಯ ಪ್ರಯೋಗ. ದುರ್ಯೋಧನನಿಗೆ ಅಭೇದ್ಯವಾದ ಕವಚವನ್ನು ತೊಡಿಸಿದ್ದಾರೆ. ಯಾವ ಮಂತ್ರಾಸ್ತ್ರವು ಈ ಕವಚವನ್ನು ಸೀಳಲಾಗದು. ಹಾಗಾಗಿ ಕವಚ ಆವರಿಸದ ಜಾಗವನ್ನು ಗುರಿಯಾಗಿಸಿ ಹೋರಾಟ ಮುಂದುವರಿಸು” ಎಂದು ಮಾರ್ಗದರ್ಶನ ಮಾಡಿದನು.

ಅರ್ಜುನ ಎಷ್ಟು ಸೂಕ್ಷ್ಮವಾಗಿ ನೋಡಿದರೂ, ಕವಚ ಆವರಿಸದ ಶರೀರ ಭಾಗ ಗೋಚರಿಸಲಿಲ್ಲ. ಕಡೆಗೆ ದುರ್ಯೋಧನ ಧನುಸ್ಸನ್ನು ಹಿಡಿದ ಬಿಗಿ ಮುಷ್ಟಿ ಗೋಚರಿಸಿತು. ಸಮಯ ಸಾಧಿಸಿ ಕವಚ ವ್ಯಾಪಿಸಿರದ ಆತನ ಕೈ ತಟ್ಟು ಮತ್ತು ಬೆರಳುಗಳನ್ನು ಗುರಿಯಾಗಿಸಿ ಶರಗಳನ್ನು ಸೆಳೆದು ಚುಚ್ಚತೊಡಗಿದನು. ದುರ್ಯೋಧನನ ಧನುಸ್ಸು ಬತ್ತಳಿಕೆಗಳನ್ನೂ ಕತ್ತರಿಸಿದನು. ಗಾಯಗೊಂಡ ಕೈಗಳಿಂದ ಏನೂ ಮಾಡಲಾಗದೆ ದುರ್ಯೋಧನ ವ್ಯೂಹದಿಂದ ಹೊರ ನಿರ್ಗಮಿಸಲೇ ಬೇಕಾಯಿತು.

ಇತ್ತ ಕೆಲವು ಗಳಿಗೆಗಳು ಸೂರ್ಯಾಸ್ತಮಾನಕ್ಕೆ ಉಳಿದಿವೆ. ವ್ಯೂಹದ ಅಂತಿಮ ಸುತ್ತಿನಲ್ಲಿ ಆರು ಮಹಾರಥಿಕರಿದ್ದಾರೆ. ಅವರನ್ನು ಭೇದಿಸಿ ಜಯದ್ರಥನ ವಧೆಗೈಯಲು ಕೃಷ್ಣ ಸಾರಥ್ಯದಲ್ಲಿ ಪಾರ್ಥ ಮುನ್ನುಗುತ್ತಿದ್ದಾನೆ…

ಮುಂದುವರಿಯುವ

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page