22.3 C
Udupi
Tuesday, February 3, 2026
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ – 368

ಭರತೇಶ್ ಶೆಟ್ಟಿ ,ಎಕ್ಕಾರ್

ಸಂಚಿಕೆ ೩೬೮ ಮಹಾಭಾರತ

ದುರ್ಯೋಧನನು ಅತ್ಯುತ್ಸಾಹದಿಂದ
ವ್ಯೂಹ ಪ್ರವೇಶಿಸಿ ಪಾರ್ಥನನ್ನು ತಡೆಯುವುದಕ್ಕಾಗಿ ಮುನ್ನುಗ್ಗಿದ್ದಾನೆ. ಇತ್ತ ದ್ರೋಣಾಚಾರ್ಯರು ತನ್ನ ಶಕಟವ್ಯೂಹವನ್ನು ಮರು ಸಜ್ಜುಗೊಳಿಸಿ ಪಾಂಡವರನ್ನು ಎದುರಿಸಲು ಅತಿ ಉಗ್ರ ಹೋರಾಟದ ಸಂಕಲ್ಪದೊಂದಿಗೆ ತೊಡಗಿದ್ದಾರೆ. ಪಾಂಡವ ಸೇನೆ ಸೇನಾಪತಿ ದೃಷ್ಟದ್ಯುಮ್ನ ಮತ್ತು ಭೀಮಸೇನನ ಮುಂದಾಳತ್ವದಲ್ಲಿ ದ್ರೋಣಾಚಾರ್ಯರ ಆವೇಗದ ಅದ್ಬುತ ವೇಗಕ್ಕೆ ತಡೆಯಾಗಿ ನಿಂತಿದೆ. ಗುರು ದ್ರೋಣ ಏನಾದರೂ ಆಗಲಿ, ರಣ ತಂತ್ರ ನಿಯೋಜಿಸಿ ಧರ್ಮರಾಯನನ್ನು ಬಂಧಿಸಲೇ ಬೇಕೆಂದು ಪಣತೊಟ್ಟು ಮುಂದುವರಿಯುವ ಪ್ರಯತ್ನ ನಿರತರಾಗಿದ್ದಾರೆ. ಆದರೆ ದೃಷ್ಟದ್ಯುಮ್ನ ಮತ್ತು ಸಾತ್ಯಕಿ ಅಂತಹ ಅವಕಾಶ ನೀಡದೆ ಅವರಿಗೆ ತಡೆಯಾಗಿ ನಿಂತರು. ಭೀಮಸೇನ ಮಹಾರಥರಾದ ವಿವಿಂಶತಿ, ಚಿತ್ರಸೇನ, ವಿಕರ್ಣರನ್ನು ಎದುರಿಸಿ ಹೋರಾಡುತ್ತಿದ್ದಾನೆ. ನಕುಲ ಸಹದೇವರು ಶಕುನಿಯನ್ನು ಪ್ರತಿಬಂಧಿಸಿ ಕಾಳಗವೆಸಗುತ್ತಿದ್ದಾರೆ. ಘನಘೋರ ಸಂಗ್ರಾಮದಲ್ಲಿ ತಮಗೆ ನೀಡಿದ ಹಿಂಸೆ, ಮಾಡಿದ ಅನ್ಯಾಯದ ಬಗೆಯಿಂದ ಈವರೆಗೆ ಸಹಿಸಿಕೊಂಡಿದ್ದ ಪ್ರತಿಕಾರವನ್ನು ಶಕುನಿಯ ಮೇಲೆ ತೀರಿಸುವಂತೆ ದಂಡಿಸಿ, ಗಾಂಧಾರ ನರೇಶನನ್ನು ಮತ್ತು ಅವನ ಸೇನೆಯನ್ನು ಈ ಈರ್ವರು ಸೋದರರು ಸವರತೊಡಗಿದ್ದಾರೆ. ಪರಿಣಾಮ ಹೀನಾಯ ಸ್ಥಿತಿಯಲ್ಲಿ ಜರ್ಜರಿತನಾದ ಶಕುನಿ ರಣಾಂಗಣ ತೊರೆದು ಪಲಾಯನ ಮಾಡ ಬೇಕಾಯಿತು. ವಿಕ್ರಮಿಯಾದ ಬಾಹ್ಲಿಕನನ್ನು ಉಪಪಾಂಡವರೆಂದು ಖ್ಯಾತರಾದ ದ್ರೌಪದಿಯ ಐವರು ಪುತ್ರರು ವ್ಯಸ್ಥಗೊಳಿಸಿದ್ದರು. ಬಾಹ್ಲಿಕ ಪ್ರಬಲನಾಗುತ್ತಾ ಮೆರೆದಾಗ ಅಸಮ ವಿಕ್ರಮಿ ಶಿಖಂಡಿ ಉಪಪಾಂಡವರ ನೆರವಿಗೆ ಧಾವಿಸಿ ಬಾಹ್ಲಿಕನನ್ನು ಹಿಮ್ಮೆಟ್ಟಿಸಿದರು. ಧರ್ಮರಾಯ ಮಾದ್ರಾಧೀಶ ಶಲ್ಯನನ್ನು ಎದುರಿಸಿ ಹೋರಾಡುತ್ತಾ ಭೀಷಣವಾದ ಯುದ್ದ ಸಾಗುತ್ತಿದೆ. ಮತ್ಸ್ಯದೇಶಾಧಿಪ ವಿರಾಟ ವಿಂದಾನು ವಿಂದರನ್ನು ತಡೆ ಹಿಡಿದಿದ್ದಾನೆ. ಭೀಮಪುತ್ರ ಘಟೋತ್ಕಚ ಆಲಂಬುಷನನ್ನು ಎದುರಿಸಿ ಯುದ್ದ ಮಾಡುತ್ತಾ ಅಜೇಯನಾಗಿ ವಿಜೃಂಭಿಸಿ, ಆ ಬಳಿಕ ರಾಕ್ಷಸ ವೀರ ಅಲಾಯುಧನನ್ನು ಎದುರಿಸಿ ರಣಕಣದಲ್ಲಿ ಅತಿ ಸಾಹಸದಿಂದ ಹೋರಾಡುತ್ತಾ ತಾನು ಪ್ರಬಲನಾಗಿ ಕಾಣಿಸಿಕೊಳ್ಳುತ್ತಿದ್ದಾನೆ.

ಕೌರವ ಪಾಳಯದ ಪ್ರಧಾನ ಪರಾಕ್ರಮಿ ಕೃತವರ್ಮನ ಜೊತೆ ಪಾಂಚಾಲ ದೊರೆ ದ್ರುಪದ ಯುದ್ದ ಮಾಡುತ್ತಿದ್ದಾನೆ. ಹೀಗೆ ದ್ರೋಣರ ಶಕಟ ವ್ಯೂಹ ಸಂಪೂರ್ಣ ಛಿದ್ರವಾಗಿ ಅಲ್ಲಲ್ಲಿ ದ್ವಂದ್ವ ಯುದ್ದಗಳು ಆಗುತ್ತಿವೆ. ದ್ರೋಣಾಚಾರ್ಯರಿಗೆ ಈಗ ಸತ್ವ ಪರೀಕ್ಷೆ ಎದುರಾಗಿದೆ. ಅವರ ಪಕ್ಷದ ಮಹಾನ್ ಆರು ವೀರರಾದ ಅಶ್ವತ್ಥಾಮ, ಕರ್ಣ, ಕೃಪಾಚಾರ್ಯ, ಭೂರಿಶ್ರವಸ, ವೃಷಸೇನ ಮಾತ್ರವಲ್ಲ ಈಗ ದುರ್ಯೋಧನಾದಿಗಳ ಸಹಿತ ಸೇನೆಯ ಸಮ ಅರ್ಧ ಭಾಗ ಕೇವಲ ಕೃಷ್ಣಾರ್ಜುನರಿಬ್ಬರನ್ನು ತಡೆಯುವಲ್ಲಿ ಪದ್ಮವ್ಯೂಹವಾಗಿದೆ. ಉಳಿದ ಸೇನೆಯನ್ನು ತಾನು ಶಕಟವ್ಯೂಹವಾಗಿಸಿ ಹೋರಾಡುವ ಈ ಹೊತ್ತು ಪಾಂಡವ ಸೇನೆ ಸಮರ್ಥವಾಗಿ ಎದುರಿಸುವಷ್ಟು ಬಲಹೊಂದಿದೆ. ಕೃಷ್ಣಾರ್ಜುನರಿಬ್ಬರನ್ನು ಹೊರತುಪಡಿಸಿ ಉಳಿದ ಪಾಂಡವಸೇನೆ ಏಕತ್ರವಾಗಿ ಶಕಟವ್ಯೂಹವನ್ನು ತಡೆದು ಹೋರಾಡುತ್ತಿದೆ. ಆದರೂ ದ್ರೋಣರ ಪೌರುಷ ಕಡಿಮೆಯಾಯಿತೋ? ತನಗೆ ಎಡೆ ನೀಡದೆ ತಡೆದು ಹೋರಾಡುತ್ತಿರುವ ದೃಷ್ಟದ್ಯುಮ್ನನ ಮೇಲೆ ಮಹಾಸ್ತ್ರ ದಿವ್ಯಾಸ್ತ್ರಗಳನ್ನು ಪ್ರಯೋಗಿಸಿದರೂ, ಆತ ಪ್ರತ್ಯಸ್ತ್ರಗಳಿಂದ ಖಂಡಿಸಿ ಹೋರಾಡುತ್ತಿದ್ದಾನೆ. ಇಬ್ಬರೂ ಸೇನಾಪತಿಗಳ ಹೋರಾಟದಲ್ಲಿ ಎರಡೂ ಕಡೆಯ ಸೈನ್ಯ ಬಹಳಷ್ಟು ನಾಶವಾಗತೊಡಗಿತು. ಏನು ಮಾಡಿದರೂ ದೃಷ್ಟದ್ಯುಮ್ನನನ್ನು ಸರಿಸಿ ಮುಂದುವರಿಯಲಾಗದೆ ಹೋದಾಗ ಅತಿ ಕ್ರೋಧಾವೇಶಕ್ಕೊಳಗಾದ ದ್ರೋಣಾಚಾರ್ಯರು ಅತಿ ವೇಗದ ಯುದ್ದಕ್ಕೆ ತೊಡಗಿ ದೃಷ್ಟದ್ಯುಮ್ನನ ಕಂಗೆಡಿಸಿದರು. ರಥ, ಶ್ವೇತಚತ್ರ, ಧ್ವಜ, ರಥರಕ್ಷಕರನ್ನೆಲ್ಲಾ ನಾಶಗೊಳಿಸಿ ಆ ಕೂಡಲೆ ದೃಷ್ಟದ್ಯುಮ್ನನನ್ನೂ ಗಾಯಗೊಳಿಸಿ, ವಧೆ ಮಾಡಿ ಬಿಡುವೆನೆಂದು ತೀಕ್ಷ್ಣ ಶರಗಳನ್ನು ಸರಸರನೆ ಪ್ರಯೋಗಿಸಿದಾಗ ಜೊತೆಯಿದ್ದ ಸಾತ್ಯಕಿ ದ್ರೋಣಶರಗಳನ್ನು ಖಂಡಿಸಿ ದೃಷ್ಟದ್ಯುಮ್ನನ ಪ್ರಾಣ ರಕ್ಷಿಸಿದ. ತಾನು ದ್ರೋಣಾಚಾರ್ಯರಿಗೆ ಎದುರಾಗಿ ತನ್ನ ಜೀವಮಾನದ ಶ್ರೇಷ್ಟ ಯುದ್ದ ವಿಕ್ರಮ ಮೆರೆಯತೊಡಗಿದನು.
ಪಾಂಚಾಲದ ರಕ್ಷಾ ಪಡೆ ದ್ರೋಣರ ಹತಿಗೆ ಘಾಸಿಗೊಂಡಿದ್ದ ದೃಷ್ಟದ್ಯುಮ್ನನ ಆರೈಕೆಗಾಗಿ ಕರೆದೊಯ್ಯುವ ಅವಕಾಶ ಸಾತ್ಯಕಿಯಿಂದಾಯಿತು.

ಮಹಾರಥಿಯಾದ ಸಾತ್ಯಕಿ ಏನು? ಎಷ್ಟು? ಎಂಬ ಆಳ, ಅಗಲ, ವಿಸ್ತಾರದ ಪರಿಚಯವನ್ನು ಭಾರದ್ವಾಜ ಪುತ್ರ ದ್ರೋಣಾಚಾರ್ಯರಿಗೆ ಯುದ್ದ ಕೌಶಲದ ಮುಖೇನ ತೋರಿಸತೊಡಗಿದನು. ಪ್ರಾಣಾಂತಕ – ಪ್ರಳಯಾಂತಕ ರುದ್ರ ರೋಷಾವೇಶ್ಟಿತರಾದ ದ್ರೋಣರ ಪರಾಕ್ರಮವೂ ಈ ಹೊತ್ತು ಉಚ್ಛ್ರಾಯ ಮಟ್ಟದಲ್ಲಿ ಇದೆ. ಬುಸುಗುಟ್ಟುತ್ತಾ ವಿಷ ಕಕ್ಕುವ ಘಟಸರ್ಪದಂತೆ ದ್ರೋಣರ ಧನುಸ್ಸು ಮಾರಣಾಂತಿಕ ದಿವ್ಯಾಸ್ತ್ರಗಳನ್ನು ಸೆಳೆದೆಸೆಯುತ್ತಿದೆ. ಸಾತ್ಯಕಿಯೂ ಸರಿ ಮಿಗಿಲಾಗಿ ದ್ರೋಣಾಚಾರ್ಯರ ವಿಕ್ರಮಕ್ಕೆ ಸಮದಂಡಿಯಾಗಿ ನಿಂತು, ಹೋರಾಡುತ್ತಿರಬೇಕಾದರೆ ಕೆಲ ಹೊತ್ತು ಕುರುಕ್ಷೇತ್ರದಲ್ಲಿ ಇವರೀರ್ವರ ಮಧ್ಯದ ಆಕಾಶ ಇಬ್ಬರೂ ಪ್ರಯೋಗಿಸಿದ ಶರಗಳು ಛಾವಣಿಯಂತಾಗಿ ಸೂರ್ಯ ರಶ್ಮಿಯೂ ಭೂಮಿ ಸೋಕಲಾಗದ ಸ್ಥಿತಿ ಸೃಷ್ಟಿಯಾಯಿತು. ದ್ರೋಣಾಚಾರ್ಯರು ಶಾಪದಪಿ ಶರಾದಪಿ, ಸಕಲಶಸ್ತ್ರ ಶಾಸ್ತ್ರವೇಷ್ಟಿತರು. ಅಂತಹ ಅಸದಳ ಮಹಾವೀರನೆದುರು ಸಾತ್ಯಕಿ ತೋರುತ್ತಿರುವ ಪ್ರತಿಹೋರಾಟ ಸಾತ್ಯಕಿಯ ಶೌರ್ಯ ಸ್ಥೈರ್ಯ ಸಾಹಸವನ್ನು ಅನಾವರಣಗೊಳಿಸಲು ಒದಗಿದ ವೇದಿಕೆಯಾಗಿದೆ. ಇವರೀರ್ವರ ಮಧ್ಯೆ ಸಾಗುತ್ತಿರುವ ಯುದ್ಧ ಇಂದ್ರಾದಿ ದೇವತೆಗಳ ಸಹಿತ, ಸಿದ್ಧರು, ಚಾರಣರು, ಗಂಧರ್ವರು, ಸತ್ಯಲೋಕ, ಶಿವಲೋಕದ ಗಮನವನ್ನೂ ಸೆಳೆಯಿತು. ವಿಸ್ಮಯದಿಂದ ಅವರೆಲ್ಲರೂ ನೋಡುವಂತಾಗಿದೆ. ಪುರುಷ ಸಿಂಹರಾಗಿ ಕಾದಾಡುತ್ತಿರುವ ದ್ರೋಣ – ಸಾತ್ಯಕಿಯರ ಗಮನ – ಪ್ರತ್ಯಾಗಮನ, ಅಸ್ತ್ರ ಪ್ರಹಾರ – ಪ್ರತ್ಯಸ್ತ್ರ ನಿವಾರಣ, ಅನುಸಂಧಾನ – ಪ್ರತಿಸಂಧಾನ, ವಿಧ ವಿಧ – ಚಿತ್ರ ವಿಚಿತ್ರ ಯುದ್ಧ ಪ್ರಕ್ರಿಯೆ, ಹಸ್ತ ಲಾಘವ ( ಬಾಣ ಬಿಡುವ ಕೈಚಳಕ) ಪ್ರತ್ಯುತ್ಪನ್ನ ಮತಿ ( ಏನು ಪ್ರಯೋಗವಾಗಿದೆ ಎಂದು ತತ್ಕ್ಷಣದಲ್ಲೇ ಮತಿಯಿಂದ ಅರಿತು ಪ್ರತಿಕ್ರಿಯೆ ನೀಡುವ ವೇಗ) ಹೀಗೆ ಧನುರ್ವೇದ ವಿದ್ಯೆಯ ಅಮೂಲಾಗ್ರ ಪ್ರದರ್ಶನ ಸಾಗತೊಡಗಿದೆ ಎಂದರೆ ತಪ್ಪಾಗದು. ಹೀಗೆ ನಿಮೇಷಾಂತರದಲ್ಲಿ ( ಕಣ್ಣವೆ ಮುಚ್ಚಿ ತೆರೆಯುವ ಅರೆಕ್ಷಣದ ಅವಧಿ) ಏನೇನೋ ಸಾಗಿ ಆಗಿ ಹೋಗಿಯಾಗುತ್ತಿದೆ. ಒಂದು ಹಂತದಲ್ಲಿ ಸಾತ್ಯಕಿ ಪ್ರಬಲನಾಗಿ ಮೆರೆದು ಸಂಕಲ್ಪ ಶಸ್ತ್ರ ಪ್ರವೀಣರಾದ ದ್ರೋಣಾಚಾರ್ಯರ ಧನುಸ್ಸನ್ನು ಕತ್ತರಿಸಿ ಬಿಟ್ಟನು. ಆ ಕೂಡಲೆ ಅವರು ಮರು ಧನುಸ್ಸನ್ನು ಸಂಕಲ್ಪಮಾತ್ರದಿಂದ ಆಹ್ವಾನಿಸಿ ಕೈಗೆತ್ತಿಕೊಳ್ಳುವಷ್ಟರಲ್ಲಿ ಅದನ್ನೂ ಛೇದಿಸಿದ.. ಹೀಗೆ ನಿರಂತರವಾಗಿ ನೂರಕ್ಕೂ ಅಧಿಕ ಧನುರ್ಭಂಗಗೈದು ವಿಜ್ರಂಭಿಸಿದನು. ಈ ಪ್ರಕ್ರಿಯೆ ಎಷ್ಟು ವೇಗವಾಗಿತ್ತು ಎಂದರೆ ಸಾತ್ಯಕಿ ದ್ರೋಣಾಚಾರ್ಯರ ಧನುಸ್ಸನ್ನು ಕತ್ತರಿಸುವ – ದ್ರೋಣರು ಹೊಸ ಧನುಸ್ಸನ್ನು ಧರಿಸುವ ಈ ಎರಡರ ಮಧ್ಯದ ಸಮಯಾಂತರ ಪ್ರೇಕ್ಷಕರಾಗಿ ಹೋಗಿದ್ದ ಯೋಧರ ಕಣ್ಣಿನ ನೋಟದ ವೇಗಕ್ಕಿಂತ ಎಷ್ಟೋ ಪಟ್ಟು ಕ್ಷಿಪ್ರವಾಗಿತ್ತು. ಕತ್ತರಿಸಲ್ಪಟ್ಟು ಬಿದ್ದ ಧನುಸ್ಸಿನ ರಾಶಿ ನೋಡಿ ಹೋ! ಹೀಗಾಗುತ್ತಿದೆ ಎಂದು ಅರ್ಥೈಸಿಕೊಳ್ಳಬೇಕಾಯಿತು.

ಹೀಗೆ ಯುದ್ದ ಸಾಗಿದಾಗ ಸಾತ್ಯಕಿಯ ಪರಾಕ್ರಮ ಕಂಡು ದ್ರೋಣಾಚಾರ್ಯರು ಓರ್ವ ಶ್ರೇಷ್ಟಗುರುವಾಗಿ, ಶಸ್ತ್ರ -ಶಾಸ್ತ್ರವೇತ್ತನಾಗಿ ಹೋಲಿಕೆ ಮಾಡುತ್ತಾ ತರ್ಕಿಸಿದರು. ಸಾತ್ಯಕಿಯ ಅಸ್ತ್ರ ಬಲ, ಯುದ್ಧ ಕ್ರಮವನ್ನು ಪರಶುರಾಮ, ಕಾರ್ತವೀರ್ಯ, ಭೀಷ್ಮ ಮತ್ತು ಅರ್ಜುನಲ್ಲಿ ಕಂಡಿದ್ದೇನೆ. ಮನಸಾರೆ ಮೆಚ್ಚಿ ಸಾತ್ಯಕಿಯ ಪೌರುಷ ಸಾಧನೆಯನ್ನು ಶ್ಲಾಘಿಸಿದರು.

ಇನ್ನು ಹೇಗಾದರು ಮಾಡಿ ಈ ಸಾತ್ಯಕಿಯನ್ನು ವಧಿಸಬೇಕು ಎಂದು ಸಿದ್ಧರಾದ ದ್ರೋಣಾಚಾರ್ಯರು ಮಂತ್ರ ಪೂರಿತವಾಗಿ ಆಗ್ನೇಯಾಸ್ತ್ರವನ್ನು ಸಂಧಾನಗೊಳಿಸಿದರು. ಆ ದಿವ್ಯಾಸ್ತ್ರದ ಉರಿಗೆ ಆಕಾಶ ಮಾರ್ಗದಲ್ಲಿ ಹಾರುತ್ತಿದ್ದ ಖಗ ಪಕ್ಷಿಗಳೆಲ್ಲಾ ಉರಿದು ಧರೆಗುದುರತೊಡಗಿದವು. ಧೃತಿಗೆಡದ ಸಾತ್ಯಕಿ ಯುಕ್ತಿಯುಕ್ತನಾಗಿ ವಾರುಣಾಸ್ತ್ರವನ್ನೇ ಅಭಿಮಂತ್ರಿಸಿ ಸಂಧಾನ ಮಾಡಿದನು. ಇಬ್ಬರೂ ಮಹಾ ಮಂತ್ರಾಸ್ತ್ರಗಳನ್ನು ಸಂಧಾನಗೊಳಿಸಿರುವುದನ್ನು ಕಂಡು ಎಲ್ಲೆಡೆ ಹಾಹಾಕಾರ ಎದ್ದಿತು. ಎರಡೂ ದಿವ್ಯಾಸ್ತ್ರಗಳೂ ಸಮಾನ ಬಲಯುತವಾಗಿ ಪರಸ್ಪರ ಪ್ರತ್ಯಸ್ತ್ರಗಳಾದ ಕಾರಣ ಉಪಶಮನಗೊಳಿಸಲ್ಪಟ್ಟವು. ಯಾರೂ ಪರಾಜಿತರಾಗದೆ ಯುದ್ದ ಸಾಗತೊಡಗಿತು.

ಹೀಗೆ ದ್ರೋಣ ಸಾತ್ಯಕಿಯರ ಮಧ್ಯೆ ಮಹಾಭಾರತ ಯುದ್ಧಗಳಲ್ಲಿ ಒಂದು ಅತ್ಯದ್ಬುತ ಸಂಗ್ರಾಮ ಸಾಗುತ್ತಿರಲು, ಉಳಿದ ವೀರರೊಡನೆ ಹೋರಾಡುತ್ತಿದ್ದ ಪಾಂಡವ ಪಕ್ಷೀಯರು ಜಯಶಾಲಿಗಳಾದ ಕೂಡಲೆ ಮುನ್ನುಗ್ಗಿ ಬಂದು ದ್ರೋಣರನ್ನು ಮುತ್ತಿದರು. ಧರ್ಮರಾಯ ಸಹಿತ ವಿರಮಿಸಿ ಚೇತರಿಸಿದ ದೃಷ್ಟದ್ಯುಮ್ನ, ವಿರಾಟ, ಕೇಕಯ ರಾಜ, ಶಾಲ್ವ ಹೀಗೆ ಬಹು ಮಂದಿ ಏಕಕಾಲದಲ್ಲಿ ಎದುರಾದರು. ಇದನ್ನು ಕಂಡು ಕೌರವ ಸೇನೆಯಲ್ಲಿ ಹಾಹಾಕಾರ ಎದ್ದಿತು. ಆಗ ದುಶ್ಯಾಸನ ಸಾವಿರಾಧಿಕ ವೀರರನ್ನು ಒಡಗೂಡಿಕೊಂಡು ಗುರುದ್ರೋಣರ ರಕ್ಷಣೆಗೆ ಧಾವಿಸಿದನು. ಆಚಾರ್ಯ ದ್ರೋಣರು ಅಳುಕದೆ ಭೀಷಣವಾದ ಯುದ್ದ ಮುಂದುವರಿಸುತ್ತಿದ್ದಾರೆ.

ಸೂರ್ಯ ಪಡುವಣಾಂಬುಧಿಯತ್ತ ವಾಲಿದ್ದಾನೆ. ಮುಸ್ಸಂಜೆಯಾಗುತ್ತಿದೆ. ಪಾರ್ಥ ಜಯದ್ರಥನ ವಧೆಯ ಶಪಥಗೈದಿದ್ದರೂ ಈ ವರೆಗೆ ಅಸಾಧ್ಯವಾಗಿ ಉಳಿದಿದೆ. ಪದ್ಮವ್ಯೂಹದ ಅಂತಿಮ ದಳಸುತ್ತು ಆರು ಮಹಾರಥಿಗಳಿಂದ ಆವೃತವಾಗಿದೆ. ಮೇಲಾಗಿ ಮಂತ್ರಪೂತ ಕವಚಧಾರಣೆಯಿಂದ ಅತಿಬಲಾನ್ವಿತ ದುರ್ಯೋಧನನೂ ವ್ಯೂಹ ಕೇಂದ್ರದತ್ತ ಶೀಘ್ರವಾಗಿ ಗಮಿಸಿ ಕೃಷ್ಣಾರ್ಜುನರಿಗೆ ತಡೆಯಾಗಲು ಮುಂದಾಗಿದ್ದಾನೆ.

ಮುಂದುವರಿಯುವುದು…

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page