ಭಾಗ 364
ಭರತೇಶ ಶೆಟ್ಟಿ, ಎಕ್ಕರ್

ದ್ರೋಣಾಚಾರ್ಯರು ಸೇನಾಧ್ಯಕ್ಷನಾಗಿ ದುರ್ಯೋಧನನ ಅಪೇಕ್ಷೆಯಂತೆ ರಣತಂತ್ರವನ್ನು ಸಂಯೋಜನೆ ಮಾಡತೊಡಗಿದರು. ಅವರ ನಿರ್ದೇಶನದಂತೆ ಸಮರ – ಜಯದ್ರಥನ ರಕ್ಷಣೆ ಈ ಎರಡೂ ಕಾರ್ಯಸಾಧನೆಗೆ ಸಹಾಯಕವಾಗುವ ವ್ಯೂಹ ರಚನೆಗೆ ಸಿದ್ದತೆ ಆರಂಭಿಸಿದರು. ಮಹಾರಥಿಗಳೂ ಕದನಕಲಿಗಳೂ ಆದ ಕರ್ಣ, ಭೂರಿಶ್ರವಸ್ಸು, ಅಶ್ವತ್ಥಾಮ, ಕೃಪಾಚಾರ್ಯ, ಮದ್ರಾಧೀಶ ಶಲ್ಯ ಮತ್ತು ದುರ್ಜಯನಾದ ವೃಷಸೇನ ಈ ಆರು ಮಹಾರಥರು ಜಯದ್ರಥನ ಸುತ್ತ ಕಾವಲಿನಂತೆ ಮುಂಭಾಗದಲ್ಲಿರುವುದು. ಸಮಸ್ತ ಸೇನೆ ಎರಡು ಭಾಗವಾಗಿ ವಿಭಾಜಿಸಲ್ಪಟ್ಟು ಸಮ ಅರ್ಧಭಾಗ ಶಕಟ ವ್ಯೂಹವಾಗಿ ಮುಂಚೂಣಿಯಲ್ಲೂ, ಉಳಿದರ್ಧ ಭಾಗ ಪದ್ಮ ವ್ಯೂಹವಾಗಿ ಕಮಲದ ದಳಗಳಂತೆ ವೃತ್ತಾಕಾರದಲ್ಲಿ ಶಕಟವ್ಯೂಹದ ಬೆಂಗಡೆಯಲ್ಲಿ ರಚಿಸುವುದು. ಕಮಲವ್ಯೂಹದ ಬೀಜಕೋಶದ ಮಧ್ಯ ಕೇಂದ್ರದಲ್ಲಿ ಆರು ಮಂದಿ ಮಹಾರಥಿಕರು ದಳಗಳಾಗಿ ಅವರ ಒಳ ಪದರ ಭಾಗದಲ್ಲಿ ಮತ್ತೆ ಸೂಚಿವ್ಯೂಹ ರಚಿಸಿ ಅದರ ಪರಾಗದಂತೆ ಜಯದ್ರಥ ಸ್ಥಿತನಾಗಿರುವುದು ಯೋಜನೆ. ಜಯದ್ರಥನ ರಕ್ಷಕರಾಗಿ ನಿಯೋಜಿಸಲ್ಪಟ್ಟ ಅಶ್ವತ್ಥಾಮ ಕರ್ಣಾದಿಗಳು ಧನುರ್ವೇದದಲ್ಲಿ, ಅಸ್ತ್ರ ವಿದ್ಯೆಯಲ್ಲಿ, ವೀರತ್ವ, ಪರಾಕ್ರಮದಲ್ಲಿ, ಮಹಾಪ್ರಾಣಶಕ್ತಿ, ಮನೋದಾರ್ಢ್ಯದಲ್ಲಿ ಪ್ರಬಲರು ಹೌದು. ಮಂತ್ರಜ್ಞರೂ ಸೇರಿ ಇರುವ ಇವರಿಷ್ಟು ಮಂದಿ ಒಗ್ಗಟ್ಟಾಗಿ ಏಕಕಾರ್ಯವಾದ ಜಯದ್ರಥನ ರಕ್ಷಣೆಯನ್ನಷ್ಟೇ ಮಾಡಲು ನಿಂತರೆ ಯಾವ ಅತಿಬಲನಿಗೂ ಭೇದಿಸಿ ಒಳಹೊಕ್ಕು ಜಯದ್ರಥನನ್ನು ಹೊರಗೆಳೆಯುವುದು ಸುಲಭ ಸಾಧ್ಯವಾಗುವ ಕೆಲಸವಲ್ಲ ಎಂದು ದ್ರೋಣರು ವಿವರಿಸಿ ಹೇಳಿದರು. ಕೇಳಿದ ದುರ್ಯೋಧನನ ಮನಸ್ಸು ನಿರಾಳವಾಯಿತು. ಜಯದ್ರಥನಿಗೂ ತುಸು ನೆಮ್ಮದಿಯಾಯಿತು.
ಹೀಗೆ ಕುರುಪಾಳಯದಲ್ಲಿ ಸಿದ್ಧತೆಯಾಗುತ್ತಿರುವಾಗ ಅತ್ತ ಪಾಂಡವ ಪಾಳಯದಲ್ಲಿ ಉಗ್ರ ಉರಗದಂತೆ ಬುಸುಗುಡುತ್ತಿದ್ದ ಪಾರ್ಥನನ್ನು ವಾಸುದೇವ ಸಂತೈಸಿದನು. ಆ ಬಳಿಕ, ವಿಶ್ರಾಂತಿ ಬಯಸದಿದ್ದರೂ ಸೂರ್ಯೋದಯಕ್ಕಾಗಿ ಕಾಯುತ್ತಾ ಪವಡಿಸಿದ್ದಾರೆ. ವನವಾಸದಲ್ಲಿ ಇರುವಾಗ ಸಾಕ್ಷಾತ್ ಪರಮೇಶ್ವರನ ತಪಸ್ಸನ್ನಾಚರಿಸಲು ಇಂದ್ರಕೀಲಕಕ್ಕೆ ಹೋಗಿದ್ದು ವೇದ್ಯ ವಿಚಾರ. ಆ ಸಮಯದಲ್ಲಿ ಅರ್ಜುನನಿಗೆ ಭಗವಾನ್ ವ್ಯಾಸ ಮಹರ್ಷಿಗಳು ಮಹಾದೇವ ಪರಮೇಶ್ವರನ ದಿವ್ಯಮಂತ್ರೋಪದೇಶ ಮಾಡಿದ್ದರು. ಇಂದಿನ ರಾತ್ರಿ ಅರ್ಜುನ ನಿದ್ದೆ ಬಾರದ ರಾತ್ರಿ ಪರಶಿವನ ಆ ದಿವ್ಯ ಮಂತ್ರವನ್ನು ಸ್ಮರಿಸಿ ಪಠಿಸುತ್ತಾ ಮಲಗಿದ್ದಾನೆ. ಕೆಲ ಮುಹೂರ್ತ ಕಾಲ ಜಾರವಾಗ ಪಾರ್ಥನಿಗೆ ಅಲ್ಲಿಯೆ ನಿದ್ದೆ ಆವರಿಸಿತು. ಅಭಿಮನ್ಯುವಿನ ಹತ್ಯೆಯ ದುಃಖದ ಪ್ರತಿಕಾರ ಭಾವ ಸುಪ್ತಾವಸ್ಥೆಯಲ್ಲಿಯೂ ಜಾಗೃತವಾಗಿತ್ತು. ಆದರೂ ನಿದ್ದೆ ಆವರಿಸಿದ ನಿಶೆಯಲ್ಲೊಂದು ಕನಸು ಬೀಳತೊಡಗಿತು. ಸ್ವಪ್ನ ದರ್ಶನದಲ್ಲಿ ಗರುಡಧ್ವಜನಾದ ಶ್ರೀಕೃಷ್ಣ ಪಾರ್ಥನ ಬಳಿಗೆ ಬಂದನು. ಎದ್ದು ನಿಂತು ಪ್ರಣಾಮಗಳನ್ನು ಸಲ್ಲಿಸಿದ ಪಾರ್ಥ, ಉಚಿತಾಸನವನ್ನಿತ್ತು ಸತ್ಕರಿಸಿದನು. ಆಗ ಕೃಷ್ಣ ಅರ್ಜುನನಿಗೆ ಹೇಳುತ್ತಾನೆ “ಪಾರ್ಥಾ! ರಣದಲ್ಲಿ ಮರಣ ಸಾಮಾನ್ಯ ಸತ್ಯ. ನೀನೂ ಎಷ್ಟೋ ಅಗ್ರಮಾನ್ಯ ವೀರರಿಗೆ ಮರಣ ನೀಡಿರುವೆ. ಹೀಗಿರುತ್ತಾ ನಿನ್ನ ಮಗ ಸರಳವಾಗಿ ಸೋತು ಮರಣ ಸ್ವೀಕರಿಸಲಿಲ್ಲ. ಸಹಸ್ರಾಧಿಕ ಮಹಾರಥರನ್ನು ಸಂಹರಿಸಿ, ಅಜೇಯರೂ ದುರ್ಜಯರೂ ಆದ ಅತಿರಥ ಮಹಾರಥರನ್ನು ಸೋಲಿಸಿ ಅಪಮಾನಕ್ಕೊಳಪಡಿಸಿ, ಲಕ್ಷೋಪಲಕ್ಷ ಸೇನೆಯನ್ನು ಸವರಿ ಆ ಬಳಿಕ ವೀರಮರಣವನ್ನು ಗೌರವದಿಂದ ಸ್ವೀಕರಿಸಿದ್ದಾನೆ. ನೀನು ವೀರಪುತ್ರನ ಪಿತ ಎಂಬ ಹೆಮ್ಮೆ ನಿನಗಿರಲಿ. ಒಂದೊಮ್ಮೆಗೆ ನಿನಗೆ ರಣದಲ್ಲಿ ಮರಣ ಬರುವ ಸ್ಥಿತಿ ಉತ್ಪನ್ನವಾದರೆ… ಭಯಪಡದೆ ಕೊನೆ ಕ್ಷಣದವರೆಗೆ ಹೋರಾಡಬಲ್ಲ ಮನೋಬಲ ನಿನಗಿರುವಂತೆಯೆ ಆತನಲ್ಲೂ ಇತ್ತು ಎನ್ನುವುದನ್ನು ಸಾಧಿಸಿ ಸಾಬೀತು ಪಡಿಸಿದ್ದಾನೆ. ಹಾಗಾಗಿ ಆ ಕುರಿತಾದ ವ್ಯಥೆ ಬೇಡ” ಎಂದನು.
ಆಗ ಅರ್ಜುನ “ಪರಮಾತ್ಮಾ, ನಾನು ಈಗಾಗಲೆ ಜಯದ್ರಥನನ್ನು ವಧಿಸುವ ಪ್ರತಿಜ್ಞೆ ಮಾಡಿರುವೆ. ಆದರೆ, ಗುರು ದ್ರೋಣಾಚಾರ್ಯರು ಜಯದ್ರಥನನ್ನು ಅಭೇದ್ಯ ವ್ಯೂಹದೊಳಗಿರಿಸಿ ಸೇನೆಯ ಹಿಂಭಾಗದಲ್ಲಿರಿಸುತ್ತಾರೆ. ಅಲ್ಲಿಯವರೆಗೆ ಹೋಗಿ ವಧಿಸುವ ವಿಧಾನ ಹೇಗೆ ಸಾಧ್ಯವಾದೀತು? ನಾಳೆಯ ಸೂರ್ಯಸ್ತಮಾನದೊಳಗೆ ಈ ಕಾರ್ಯ ಪೂರೈಸಬೇಕಾದ ವಚನಪಾಲನೆಯ ಬದ್ಧತೆ ನನಗಿದೆ. ಅವಕಾಶ ಬೇಕಾದಷ್ಟಿದ್ದರೆ ಪೂರ್ತಿ ವ್ಯೂಹವನ್ನು ನಾಶಗೊಳಿಸುತ್ತಾ ನಾನು ಅಲ್ಲಿಯವರೆಗೆ ದಾರಿ ಮಾಡಿಕೊಳ್ಳುತ್ತಾ ಸಾಗಿ ಜಯದ್ರಥನನ್ನು ಸಂಹರಿಸುತ್ತಿದ್ದೆ. ದಕ್ಷಿಣಾಯನದಲ್ಲಿ ಈಗ ಸೂರ್ಯಸ್ತಮಾನವೂ ತುಸು ಬೇಗ ಆಗುತ್ತದೆ. ಹಾಗಾಗಿ ನನಗೆ ಮನದ ಮೂಲೆಯಲ್ಲಿ ಕಿರು ವ್ಯಥೆ ಆವರಿಸತೊಡಗಿದೆ. ಇದಕ್ಕೇನು ಪರಿಹಾರ? ಹೇಳಬಹುದೇ ವಾಸುದೇವಾ?” ಎಂದು ಕೇಳಿದನು.
ಆಗ ಶ್ರೀಕೃಷ್ಣ “ಅರ್ಜುನಾ! ನೀನು ವ್ಯಥೆ ಪಡಬೇಕಾಗಿಲ್ಲ. ಸಾಕ್ಷಾತ್ ಪರಮೇಶ್ವರನನ್ನು ಮೆಚ್ಚಿಸಿ ಪಾಶುಪತಾಸ್ತ್ರ ಪಡೆದಿರುವೆ. ಯಾವ ಅಭೇದ್ಯ ವ್ಯೂಹವನ್ನಾದರೂ ಭೇದಿಸಿ ಗುರಿಯನ್ನು ಛೇದಿಸುವ ಶಕ್ತಿ ಮಹಾದೇವನ ಅನುಗ್ರಹ ಮಂತ್ರ ಅಸ್ತ್ರಕ್ಕಿದೆ. ಮಾತ್ರವಲ್ಲ ಪಾಶುಪತನ್ನು ತಡೆಯಬಲ್ಲ ಯಾವ ಪ್ರತ್ಯಸ್ತ್ರವೂ ಇಲ್ಲ. ಹಾಗಾಗಿ ಚಿಂತಿಸುವುದು ಅನಗತ್ಯ. ಪಾಶುಪತಾಸ್ತ್ರದ ಸಂಧಾನ, ಮಂತ್ರ ನಿನಗೀಗಾಲೆ ತಿಳಿದಿದೆ. ಒಂದು ವೇಳೆ ನಿನಗೇನಾದರೂ ಆ ಕುರಿತಾಗಿ ವಿಸ್ಮರಣೆಯಾಗಿದ್ದರೆ, ಏಕಮನಸ್ಕನಾಗಿ ಪಶುಪತಿ ಶಂಕರನನ್ನು ಧ್ಯಾನಿಸು. ಆತನ ಭಕ್ತನಾದ ನಿನಗೆ ಪೂರ್ಣಾಗ್ರಹ ಆಗಲಿದೆ” ಎಂದು ಅಭಯ ಮತ್ತು ಮಾರ್ಗದರ್ಶನ ಮಾಡಿದನು.
ಹೀಗೆ ಸಾಗುತ್ತಿದ್ದ ಕನಸಿನಲ್ಲಿ ಅರ್ಜುನ ಶ್ರೀಕೃಷ್ಣನ ಆಣತಿಯಂತೆ ಆಚಮನ ಮಾಡಿ ನೆಲದ ಮೇಲೆ ಕುಳಿತು ಏಕಾಗ್ರಚಿತ್ತನಾಗಿ ಧ್ಯಾನಿಸತೊಡಗಿದನು. ಆಗ ಸ್ವಪ್ನದಲ್ಲಿ ಆತನಿಗೆ ವಿಶೇಷ ಅನುಭವ ಆಗತೊಡಗಿತು. ಶ್ರೀಕೃಷ್ಣ ಸಹಿತನಾಗಿ ಅರ್ಜುನ ಗಗನ ಮಾರ್ಗಿಯಾಗಿ ಮಣಿಮಂತ ಪರ್ವತವನ್ನೂ ದಾಟಿ ರಜತಾದ್ರಿಯತ್ತ ಸಾಗಿದರು. ಅಲ್ಲಿ ಗ್ರಹಗಳು, ನಕ್ಷತ್ರಗಳು, ಚಂದ್ರ ಸೂರ್ಯ, ಅಗ್ನಿ ಇವೆಲ್ಲಕ್ಕೂ ಸಮಾನ ಪ್ರಭೆಯನ್ನು ಕಂಡನು. ಪರ್ವತದ ಅಗ್ರ ಭಾಗದಲ್ಲಿ ತಪೋ ನಿರತನಾಗಿರುವ ವೃಷಭಧ್ವಜ ಮಹೇಶ್ವರ – ಜಟಾಧರ, ಶೂಲಪಾಣಿಯಾಗಿ ನಾರುಮಡಿ ಮೃಗಚರ್ಮ ವಸನಧಾರಿಯಾಗಿ ಗೋಚರಿಸಿದನು. ಮಹಾತೇಜಸ್ವಿ ತೇಜೋಮಯನಾಗಿ ಪಾರ್ವತಿ ಸಮೇತನಾಗಿ ಗಣ ಪ್ರಮಥರ ಸೇವನೆಯಲ್ಲಿರುವುದನ್ನು ನೋಡಿದನು. ಜಗತ್ತಿಗೆ ಆದಿ ಸ್ವರೂಪನೂ, ಕಾರಣನೂ ಆದ, ನಾಶರಹಿತ, ಮನಸ್ಸಿನ ಉತ್ಪತ್ತಿಯ ಮೂಲ, ದೇವ – ದಾನವ- ಯಕ್ಷ – ಮನುಷ್ಯ ಹೀಗೆ ಸಕಲ ಉತ್ಪತ್ತಿಗೂ ಬೀಜ ಸ್ವರೂಪನಾದ, ಯೋಗಗಳಿಗೆ ಪರಮಾಶ್ರಯನಾದ, ಜಗದ ಸೃಷ್ಟಿ ಲಯಗಳಿಗೂ ಕಾರಣನಾದ, ಕಾಲಾಂತಕ ರುದ್ರದೇವನನ್ನು ಶ್ರೀ ಕೃಷ್ಣನ ಜೊತೆ ಅರ್ಜುನ ಕಾಯಾ, ವಾಚಾ, ಮನಸಾ, ಬುದ್ಧ್ಯಾ, ಕರ್ಮಣಾ ನಮಸ್ಕರಿಸುತ್ತಾ ಸಾಷ್ಟಾಂಗ ಪ್ರಣಾಮ ಮಾಡಿದನು. ಪರಿ ಪರಿಯಾಗಿ ಮಹಾಸ್ತೋತ್ರ, ಸ್ತುತಿಗಳನ್ನು ಮಾಡುತ್ತಾ ಬಹುವಿಧದಿಂದ ಪರಮೇಶ್ವರನನ್ನು ಪ್ರಸನ್ನೀಕರಿಸಿದನು.
ಬಹಿರ್ಮುಖನಾದ ದೇವಾದಿದೇವ ಮಹಾದೇವ ಕೃಷ್ಣಾರ್ಜುನರನ್ನು ಪ್ರೀತಿಯಿಂದ ಸ್ವಾಗತಿಸಿದರು. ಮಹಾತ್ಮರಾದ ನರಶ್ರೇಷ್ಟನೂ ನಾರಾಯಣನೂ ಇಲ್ಲಿವರೆಗೆ ಬಂದಿರುವಿರಿ. ಕಾರಣ ತಿಳಿಸಿದರೆ ನೆರವೇರಿಸುವೆ. ನನ್ನಿಂದ ಯಾವ ಕಾರ್ಯ ಪೂರೈಕೆಯಾಗಬೇಕು? ಅಂತಹ ಅಪೇಕ್ಷೆಯ ವರವನ್ನು ಕೇಳಿಕೊಳ್ಳಿರಿ, ಅನುಗ್ರಹಿಸುವೆ” ಎಂದು ಅಭಯ ವರಹಸ್ತ ವರದರಾಜ ತ್ರಿನೇತ್ರನು ಕೃಪಾದೃಷ್ಟಿ ಬೀರಿದನು.
ಆಗ ಅರ್ಜುನನು, “ದೇವಾ, ಕಿರಾತನಾಗಿ ಬಂದು ಇಂದ್ರಕೀಲಕದಲ್ಲಿ ಅನುಗ್ರಹ ವಿಶೇಷವಾಗಿ ಪಾಶುಪತಾಸ್ತ್ರವನ್ನು ಕರುಣಿಸಿದ್ದೀರಿ. ಆದರೆ ಈಗ ಅದನ್ನು ಪ್ರಯೋಗಿಸುವ ಸಂದರ್ಭ ಒದಗಿ ಬಂದಿದ್ದು, ಆಶೀರ್ವಾದ ಪಡೆಯಲು ಬಂದಿರುವೆ” ಎಂದು ವಿವರವಾಗಿ ವೃತ್ತಾಂತ ನಿವೇದಿಸಿಕೊಂಡನು. ಕೃಷ್ಣಸಖನ ಮನೋವಾಂಛಿತ ಕಾಮನೆಯನ್ನು ತಿಳಿದು ಸುಪ್ರೀತನಾದ ಮಹಾದೇವ ಮತ್ತೆ ಪುನರಪಿ ಪಾಶುಪತವನ್ನು ಮರು ಅನುಗ್ರಹಿಸಿದನು. ಸಂತೃಪ್ತನಾದ ಅರ್ಜುನ ಪರಮೇಶ್ವರನಿಗೆ ಸಾಷ್ಟಾಂಗ ನಮಿಸಿ, ಕೃಷ್ಣನ ಜೊತೆ ಕುರುಕ್ಷೇತ್ರದತ್ತ ಮರಳಿದನು.
ಇದೆಲ್ಲವೂ ಪಾರ್ಥನ ಕನಸಿನಲ್ಲಿ ನಡೆದು ಹೋಯಿತು. ಬಿಡಾರದೊಳಗಿಂದ ಬ್ರಾಹ್ಮೀ ಮುಹೂರ್ತದಲ್ಲಿ ಎದ್ದು, ನೈಮಿತ್ತಿಕ ಕರ್ಮ ಪೂರೈಸಿ ಸಿದ್ಧನಾದನು ಅರ್ಜುನ. ರುದ್ರ ಭಯಂಕರ ಕ್ರೋಧಾವೇಶ ಭರಿತನಾಗಿ ಶ್ರೀ ಕೃಷ್ಣನಲ್ಲಿ ಹೇಳತೊಡಗಿದ “ಇಂದಿನ ದಿನ ದ್ರೋಣಾಚಾರ್ಯರನ್ನು ಬಿಡು..ಸಾಧ್ಯರು, ಸಿದ್ಧರು, ರುದ್ರರು, ವಸುಗಳು, ಅಶ್ವಿನಿ ದೇವತೆಗಳು, ಇಂದ್ರ ಸಹಿತ ದಿಕ್ಪಾಲಕರು, ಮರುದ್ಗಣಗಳು, ವಿಶ್ವ ದೇವತೆಗಳು, ಪಿತೃದೇವತೆಗಳು, ಗಂಧರ್ವರು, ಗರುಡರು, ಸಮುದ್ರ, ಪರ್ವತ, ಸ್ವರ್ಗ, ಆಕಾಶ, ಭೂಮಿ, ದಿಕ್ಕುಗಳು, ಗ್ರಾಮ – ಅರಣ್ಯಗಳಲ್ಲಿರುವ ಬಲಯುತ ಪ್ರಾಣಿಗಳು(ಪ್ರಾಣ ಇರುವವರು), ಸೇರಿ ಎಲ್ಲರೂ – ಎಲ್ಲವೂ ಒಟ್ಟಾಗಿ ಬಂದರೂ ಜಯದ್ರಥನನ್ನು ನನ್ನ ಕೈಯಿಂದ ರಕ್ಷಣೆ ಮಾಡಲು ಸಾಧ್ಯವಿಲ್ಲ. ಮಾಧವಾ! ನನ್ನ ಇಂದಿನ ವೀರಾವೇಶದ ರಣ ವಿಕ್ರಮಕ್ಕೆ ಮತ್ತು ಜಯದ್ರಥ ಪಾರ್ಥನಂಬುಗಳಿಗೆ ಆಹುತಿಯಾಗುವ ಭೀಭತ್ಸ್ಯ ಕ್ಷಣಗಳಿಗೆ ನೀನೂ ಸಾಕ್ಷಿಯಾಗುವೆ. ಆ ಜಯದ್ರಥ ನಮಗೆ ಕೆಟ್ಟ ಸಂಬಂಧಿ, ಅಧರ್ಮ ಪಥದಲ್ಲಿ ಸಾಗಿ ಬಂದವನು. ಅವನು ಪಾತಾಳಕ್ಕೇ ಹೋಗಲಿ; ಅಲ್ಲಿಂದ ಆಳಕ್ಕೂ ಇಳಿಯಲಿ, ಆಕಾಶಕ್ಕೆ ಹಾರಲಿ; ದೇವಲೋಕವನ್ನೇ ಸೇರಲಿ, ದುರಳ ದಾನವ ದೈತ್ಯರ ಪುರದಲ್ಲೇ ಅಡಗಲಿ.. ನಾನು ಅಲ್ಲಿಗೆ ಬೆನ್ನಟ್ಟಿ ಹೋಗಿ ಆತನ ಶಿರಚ್ಚೇಧನ ಮಾಡದೆ ವಿರಮಿಸಲಾರೆ. ಒಂದೊಮ್ಮೆಗೆ ನಾನು ಆರೀತಿ ಮಾಡಲಾಗದೆ ಉಳಿದೆನಾದರೆ ಲೋಕದಲ್ಲಿ ಏನೆಲ್ಲ ಮಹಾಪಾತಕ ದೋಷಗಳಿವೆಯೋ ಅದೆಲ್ಲಾ ನನಗೆ ಆವರಿಸಲಿ” ಎಂದು ಆರ್ಭಟಿಸಿದನು.
ಹೀಗೆ ವೀರಧ್ವನಿಯಲ್ಲಿ ಘೋಷಣೆ
ಮಾಡಿದ ಪಾರ್ಥ ಮಹಾಶಯನನ್ನು ಗೋವಿಂದ ಅವಲೋಕಿಸುತ್ತಿದ್ದಾನೆ.. ಸುಂದರವಾದ ಶಿರಸ್ಸು, ಅದಕ್ಕೊಪ್ಪುವ ಮುಕುಟ, ಕಂಬು ಕಂಠ, ನೀಳವಾದ ಬಾಹು, ಔನ್ನತ್ಯದ ಉಬ್ಬು ಭುಜಗಳು, ವಿಸ್ತಾರವಾದ ಎದೆ, ಆಳವಾಗಿರುವ ಗಟ್ಟಿ ಸ್ನಾಯುಗಳ ಹೊಟ್ಟೆ, ದಷ್ಟ ಪುಷ್ಟವಾಗಿರುವ ಅಂಗಾಂಗಗಳು, ಕಿಡಿ ಕಾರುವ ಕೋಮಲ ಕಂಗಳು, ಕಮಲ ದಳಗಳಂತಹ ಅದುರುವ ಅಧರಗಳು, ಕಂಬದಂತೆ ಸ್ಥಿತವಾದ ಕಾಲುಗಳು, ಶಸ್ತ್ರಗಳಿಂದ ಕ್ಷತ – ವಿಕ್ಷತವಾಗಿರುವ ಅಕ್ಷತ ಶರೀರ – ಇಂತಹ ಈ ಸುಂದರ ರೂಪಕ್ಕೆ ಅನುರೂಪವಾದ ಗುಣ, ವಿದ್ಯೆ, ವಿವೇಕ, ವೀರತ್ವ, ಜ್ಞಾನ, ಸಂಗ್ರಹ ಎಲ್ಲ ಸೇರಿ ವೀರ ಸಂಕುಲಕ್ಕೆ ತಿಲಕ ಸದೃಶನಾಗಿ ಕಾಣುತ್ತಿದ್ದಾನೆ ಧನಂಜಯ.
ಸೂರ್ಯೋದಯವಾಗುತ್ತಿದ್ದಂತೆ ಕ್ರೂರ ಹಾಗು ಭಯಸೂಚಕವಾದ ಬಿರುಗಾಳಿ ಬೀಸತೊಡಗಿತು. ಸೂರ್ಯನಿಗೆ ರಾಹುಗ್ರಸ್ಥನಾಗಿ ಗ್ರಹಣವಾಗುತ್ತಿದೆ. ಸೂರ್ಯನ ಸುತ್ತಲೂ ದುಂಡಾದ ಪರಿಧಿ ಕಂಕಣ ಕಬಂಧವಾಗಿ ಆವರಿಸಿದಂತೆ ಕಾಣುತ್ತಿದೆ. ಮೋಡ- ಮಳೆಯಾಗದಿದ್ದರೂ ಶುಷ್ಕವಾದ ಆಕಾಶದಲ್ಲಿ ಸಿಡಿಲುಗಳು ಗರ್ಜಿಸಿದವು. ಮಿಂಚುಗಳು ಭೂಮಿಗಪ್ಪಳಿಸತೊಡಗಿದವು. ಸಮುದ್ರವೂ ಅಲ್ಲೋಲ ಕಲ್ಲೋಲವಾಗ ತೊಡಗಿತು. ನದಿಗಳು ಹರಿವಿನ ದಿಕ್ಕನ್ನು ತಿರುಗಿಸಿ ಹಿಂದಕ್ಕೆ ಹರಿಯತೊಡಗಿದವು. ಸೈನ್ಯದ ಭಾಗವಾಗಿರುವ ಗಜ ತುರಗಗಳು ಮಲ ಮೂತ್ರ ವಿಸರ್ಜಿಸುತ್ತಾ ವಿಕಾರವಾಗಿ ಕೆನೆದು ಘೀಳಿಟ್ಟು ಅರಚುತ್ತಾ ಕಿರುಚತೊಡಗಿದವು. ಇಂತಹ ಅಶುಭಸೂಚಕ ಶಕುನಗಳನ್ನು ಕಾಣುತ್ತಿದ್ದ ಕುರುಸೇನೆಯ ವೀರಾದಿ ವೀರರೆಲ್ಲರಿಗೂ ಒಳಗಿಂದೊಳಗೆ ನಡುಕ ಆರಂಭವಾಗತೊಡಗಿತು.
ಕುರುಕ್ಷೇತ್ರದಲ್ಲಿ ಪಾಂಡವ ಕೌರವ ಸೇನೆ ಸಮಾಹಿತವಾಗಿ, ವ್ಯೂಹ ರಚನೆಯಾಗಿದೆ. ಶಕಟ ವ್ಯೂಹದ ಮೊನಚಿನಲ್ಲಿ ಭಾರದ್ವಜ ಪುತ್ರ ದ್ರೋಣಾಚಾರ್ಯರು ರಥಿಕರಾಗಿ ನಿಂತಿದ್ದಾರೆ. ರಣಭೇರಿ, ವಾದ್ಯಘೋಷಗಳು ಮೊಳಗತೊಡಗಿದವು…
ಮುಂದುವರಿಯುವುದು…
✍🏻ಭರತೇಶ್ ಶೆಟ್ಟಿ ಎಕ್ಕಾರ್



















