ಭಾಗ 361
ಭರತೇಶ್ ಶೆಟ್ಟಿ ಎಕ್ಕಾರ್

ಸಂಚಿಕೆ ೩೬೧ ಮಹಾಭಾರತ
ನಾರದರು ಸೃಂಜಯನಿಗಾದ ಪುತ್ರನ ಮರಣದ ದುಃಖ ನಿವಾರಣೆಗಾಗಿ ಇನ್ನೊಂದು ಕಥೆಯನ್ನು ಹೇಳತೊಡಗಿದರು. “ಸೃಂಜಯಾ, “ಸುಹೋತ್ರ’ ಎಂಬ ಹೆಸರಿನ ಓರ್ವ ರಾಜ ಹಿಂದೆ ಆಳುತ್ತಿದ್ದನು. ಧರ್ಮ ಪ್ರಕಾರ ಆತನ ಪಿತನಿಂದ ಸಾಮ್ರಾಜ್ಯ ಅಧಿಕಾರ ಪಡೆದಿದ್ದನು. ಅಭಿಷಿಕ್ತ ಮಹಾರಾಜನಾಗಿ ಪ್ರಜಾ ಪರಿಪಾಲನೆಯಲ್ಲಿ ತೊಡಗಿದ್ದನು. ಆತ ಏನೇ ಮಾಡುವುದಿದ್ದರು ಧರ್ಮ ಜಿಜ್ಞಾಸೆಯಲ್ಲಿ ತೊಡಗಿ ನಂತರ ಅದರ ಫಲಾಫಲಗಳ ವಿಮರ್ಷೆ ಮಾಡಿ ಆರಂಭಿಸುತ್ತಿದ್ದನು. ಇಂತಹ ರಾಜ ಸುಹೋತ್ರ ಮಹಾ ಪರಾಕ್ರಮಿಯೂ ಆಗಿದ್ದನು. ಯಾರೇ ಶತ್ರು ರಾಜರು ಆಕ್ರಮಣ ಮಾಡಿದರೂ ತಾನೇ ಸ್ವಯಂ ರಣ ಭೂಮಿಗೆ ತೆರಳಿ ಪರಾಕ್ರಮದಿಂದ ಯುದ್ದ ಗೆಲ್ಲುತ್ತಿದ್ದನು. ದಾನ ಮಾಡುವುದು, ಯಜ್ಞಗಳನ್ನು ಪೂರೈಸುವುದು, ಶತ್ರುಗಳನ್ನು ಜಯಿಸುವುದು ಈತನ ಪ್ರಧಾನ ಕರ್ಮಗಳಾಗಿದ್ದವು. ಧರ್ಮಿಷ್ಟ ವಿಕ್ರಮಿಯಾದ ಸುಹೋತ್ರ ಒಂದು ಸಾವಿರ ಅಶ್ವಮೇಧ ಯಾಗ, ಒಂದು ನೂರು ರಾಜಸೂಯ ಯಾಗ ಮಾತ್ರವಲ್ಲ ಉತ್ತಮವಾದ ಬಹಳಷ್ಟು ಕ್ಷತ್ರಿಯ ಯಜ್ಞಗಳನ್ನು ಮಾಡಿದ ಕೀರ್ತಿ ತನ್ನದಾಗಿಸಿದ್ದನು. ಪರಿಣಾಮವಾಗಿ ಶತ್ರುಗಳು ಮಾತ್ರವಲ್ಲ ದೇವತೆಗಳೂ ಈತನ ವಿರೋಧಿಗಳಾಗಲು ಅಂಜುವ ಸ್ಥಿತಿ ನಿರ್ಮಾಣವಾಗಿತ್ತು. ಶ್ರೀಮಂತ, ಸಮೃದ್ದ ಸಾಮ್ರಾಜ್ಯವನ್ನು ಚಕ್ರವರ್ತಿಯಾಗಿ ಪರಿಪಾಲಿಸುತ್ತಿದ್ದನು. ಇಂತಹ ಜನಾನುರಾಗಿ ಸುಹೋತ್ರನ ಗುಣ ಧರ್ಮಗಳಿಂದ ಸಂತುಷ್ಟನಾದ ವರುಣ ಸುವರ್ಣ ಮಳೆಯನ್ನು ಈತನ ಸಾಮ್ರಾಜ್ಯದಲ್ಲಿ ಸುರಿಸುತ್ತಿದ್ದನು. ನದಿಗಳ ನೀರೂ ಸುವರ್ಣಮಯ ತೀರ್ಥ ಜಲವಾಗಿ ಹರಿಯುತ್ತಿದ್ದವು. ಜಲಚರಗಳಾದ ಕಪ್ಪೆ, ಮೀನುಗಳಿಂದ ಹಿಡಿದು ಮೊಸಳೆ ನೀರಾನೆಯವರೆಗೆ ಬಂಗಾರದ ವರ್ಣದಿಂದ ಕಂಗೊಳಿಸುತ್ತಿದ್ದವು. ಸಸ್ಯ, ಗೋವು, ಋಷಿಗಳು, ನಾರಿ, ಮಕ್ಕಳು, ಪ್ರಜೆಗಳು ಎಲ್ಲರೂ ಸುಖಜೀವಿಗಳಾಗಿ ಬದುಕುತ್ತಿದ್ದರು. ನಕಾರಾತ್ಮಕ ವಿಚಾರಗಳೆಂದರೆ ಏನೆಂದು ತಿಳಿದಿರದ, ಧರ್ಮ ಪಾಲನೆಯಲ್ಲಿ ನಿರತರಾಗಿರುವ ಪ್ರಜಾಪರಿವಾರ ಆತನದ್ದಾಗಿತ್ತು. ಅರ್ಥಾತ್ ಸುಹೋತ್ರನ ಸಾಮ್ರಾಜ್ಯ ಸತ್ಯ, ನ್ಯಾಯ, ಧರ್ಮದ ಆಧಾರದಲ್ಲಿ ಸಾಗುತ್ತಿದ್ದು ಅಪರಾಧ – ಅಪವಾದಗಳಿಂದ ಮುಕ್ತವಾಗಿತ್ತು. ಮಾತ್ರವಲ್ಲ ಭೂ ಸ್ವರ್ಗವೆಂದು ಖ್ಯಾತವಾಗಿತ್ತು.
ಇಂತಹ ಸುಹೋತ್ರನೂ ಕಾಲ ಕೂಡಿ ಬಂದಾಗ ಮೃತನಾಗಿ ಪುಣ್ಯ ವಿಶೇಷ ಬಲದಿಂದ ದಿವ್ಯಲೋಕ ಪಡೆದನು. ಸೃಂಜಯಾ, ನಿನ್ನ ಮಗ ವರ ಬಲದಿಂದ ಹುಟ್ಟು ಪಡೆದಿದ್ದನಷ್ಟೇ, ಹೊರತು ಸತ್ಕರ್ಮಗಳನ್ನೇನೂ ಸಾಧಿಸಿದವನಲ್ಲ. ಮರ್ತ್ಯ ಲೋಕದಲ್ಲಿ ಹುಟ್ಟಿ ನಿಯಮದಂತೆ ಮೃತನಾಗಿದ್ದಾನೆ. ಈ ವಿಚಾರವಾಗಿ ಸಜ್ಜನನಾದ ನೀನು ವ್ಯಥೆ ಪಡುವುದು ಸಹಜವಾದರೂ, ಅದರಲ್ಲೇ ಮುಳುಗಿಹೋಗುವುದು ಸರಿಯಲ್ಲ. ಎಂದು ನಾರದರು ವಿವರಿಸಿದರು.
ಸಮಾಧಾನ ಹೊಂದದ ಸೃಂಜಯನ ಮನಸ್ಥಿತಿಯನ್ನು ಅರಿತು ನಾರದರು ಸೃಂಜಯನಿಗೆ ಮಹಾದಾನಿ, ಪರಾಕ್ರಮಿ, ಸತ್ಕರ್ಮಿಯಾದ ಅಂಗರಾಜ ಪೌರವನ ಕಥೆಯನ್ನೂ ಹೇಳಿ, ಆಯಸ್ಸು ತೀರಿದಾಗ ಪೌರವರಾಜನೂ ಮರಣವಪ್ಪಲೇ ಬೇಕಾಯ್ತು ಎಂಬ ಕಥೆಯನ್ನು ವಿಶ್ಲೇಷಿಸಿ ಹೇಳಿದರು.
ಮೃತ್ಯು ಎಂಬುವುದು ಎಲ್ಲರಿಗೂ ಇರುವಂತಹುದು ಎಂದು ಸಾರಿ ಹೇಳಿದರೂ, ಪುತ್ರನ ಮರಣ ದುಃಖದಿಂದ ವಿಮುಖನಾಗದ ಸೃಂಜಯನಿಗೆ ನಾರದರು, ಮತ್ತೆ ಹಲವು ಕಥೆಗಳನ್ನು ಹೇಳಿದ್ದರು. ಮಹಾರಾಜ ಉಶೀನರನ ಮಗ ಶಿಬಿ ಎಂಬವನು ವಿಶೇಷವಾದ ಸತ್ಕರ್ಮಗಳನ್ನು ಗೈದು, ಅದ್ವಿತೀಯ ದಾನಿ ಎಂದು ಖ್ಯಾತನಾಮ ರಾಜನಾಗಿದ್ದನು. ಸಹಸ್ರಾಧಿಕ ಮಹಾಯಜ್ಞಗಳನ್ನು ಮಾಡಿಸುತ್ತಾ, ಅಮಿತ ದಾನ ಧರ್ಮಗಳನ್ನು ನೀಡುತ್ತಾ ಮೆರೆದ ಅದ್ಬುತ ಪರಾಕ್ರಮಿ ರಾಜ. ಪ್ರಜಾಪತಿಯೇ ಶಿಬಿ ಚಕ್ರವರ್ತಿಗೆ ನಿನ್ನಂತಹ ಉತ್ತಮ ದಾನಿಯನ್ನು ನಾನು ಈವರೆಗೆ ಕಂಡದ್ದಿಲ್ಲ ಎಂದು ಶ್ಲಾಘಿಸಿದ್ದರು. ಭೂದಾನ, ಗೋದಾನ, ಸುವರ್ಣ ದಾನ ಹೀಗೆ ಫಲಾನುಭವಿಗಳು ಏನು ಕೇಳಿದ್ದಾರೋ ಅದೆಲ್ಲವನ್ನೂ ದಾನರೂಪದಲ್ಲಿ ನೀಡುತ್ತಿದ್ದ ಮಹಾತ್ಮ. ಹೀಗಿದ್ದೂ ಸಮಯ ಬಂದಾಗ ಶರೀರ ತೊರೆದು ಮೃತನಾಗಿ ಶಿಬಿಯೂ ಸ್ವರ್ಗವೇರಿದ ಕಥೆಯನ್ನೂ ಸವಿವರವಾಗಿ ಹೇಳಿದರು. ಆ ಬಳಿಕ ಸೂರ್ಯವಂಶದ ದಶರಥ ಪುತ್ರ ಶ್ರೀರಾಮನ ದಿವ್ಯ ಚರಿತ್ರೆಯ ಕಥೆಯನ್ನೂ ವಿಸ್ತೃತವಾಗಿ ಹೇಳಿ, ಅಂತಹ ಮಹಾನ್ ಸಾಧಕ, ಮಹಾ ಯಜ್ಞ, ದಾನ ಧರ್ಮಗಳನ್ನು ಮಾಡಿ, ತನ್ನ ಚಾರಿತ್ರ್ಯದಿಂದ ಮರ್ಯಾದಾ ಪುರುಷೋತ್ತಮ ಎಂದು ಕರೆಸಿಕೊಂಡಿದ್ದ ಶ್ರೀರಾಮನೂ ಸಹ ಕಾರಣ ಜನ್ಮದ ಪೂರೈಕೆಯಾದಾಗ ನಿಜಧಾಮ ಸೇರಿ ಅವತಾರ ಅಂತ್ಯಗೊಳಿಸಿದ್ದ ಕಥೆಯನ್ನೂ ಹೇಳಿದರು.
ಈ ಎಲ್ಲಾ ಕಥೆಗಳನ್ನು ಭಗವಾನ್ ವೇದವ್ಯಾಸರು ಧರ್ಮರಾಯನಿಗೆ ಅಭಿಮನ್ಯುವಿನ ಅಗಲಿಕೆಯ ದುಃಖದ ಶಮನಕ್ಕಾಗಿ ಮತ್ತೊಮ್ಮೆ ಹೇಳಿದರು. ಆದರೂ ಭಾವನಾತ್ಮಕ ಬಂಧನದಿಂದ ಹೊರಬರಲಾಗದ ಯುಧಿಷ್ಟಿರನ ದುಃಖ ಹೋಗಲಾಡಿಸಲು ರಾಜಾ ಭಗೀರಥನ, ದಿಲೀಪನ, ಮಾಂಧಾತ ರಾಜ,ಯಯಾತಿ, ಅಂಬರೀಷ, ರಾಜಾ ಶತಬಿಂದು, ಗಯ ಚಕ್ರವರ್ತಿ, ರಂತಿದೇವ, ಭರತರಾಜ, ಪೃಥುರಾಜ, ಭಗವಾನ್ ಪರಶುರಾಮ ಹೀಗೆ ಒಟ್ಟು ಹದಿನಾರು ದಿವ್ಯಾತ್ಮರ ಕಥೆಗಳನ್ನು ವಿಸ್ತೃತವಾಗಿ ಧರ್ಮರಾಯನಿಗೆ ಹೇಳಿದರು.
ನಂತರ ಮುಂದುವರಿಸುತ್ತಾ ಆರಂಭದ ಕಥನವನ್ನು ಮರು ಸ್ಮರಿಸಿ, ಸೃಂಜಯನ ಮಗನನ್ನು ದರೋಡೆಕೋರರು ಅಪಹರಿಸಿ, ಅಮಾನವೀಯವಾಗಿ ಕತ್ತರಿಸಿ ಕೊಂದಿದ್ದರು. ಹಾಗೆ ಮೃತನಾಗಿದ್ದ ಮಗುವನ್ನು ಮಹರ್ಷಿ ನಾರದರು ಮುಂದೆ ಏನು ಮಾಡಿದರು ಗೊತ್ತೇ? ಎಂದು ಭಗವಾನ್ ವೇದವ್ಯಾಸರು ಧರ್ಮರಾಯನಿಗೆ ಕಥೆ ಹೇಳತೊಡಗಿದರು.
ಮುಂದುವರಿಯುವುದು…



















