30.7 C
Udupi
Wednesday, February 4, 2026
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ 360

ಭರತೇಶ ಶೆಟ್ಟಿ, ಎಕ್ಕಾರ್

ನಾರದರು ಸೃಂಜಯನ ಪುತ್ರ ವಿಯೋಗವನ್ನು ಮರೆಸಲು ಮರಣ ಸಂಬಂಧದ ಕಥೆ ಹೇಳತೊಡಗಿದರು. “ಮಹಾಮಹಿಮನಾದ ಮರುತ್ತ ರಾಜಾ ಅವೀಕ್ಷಿತನ ಮಗ. ರಾಜ ಮರುತ್ತನು ಋಷಿಯಾಗಿಯೆ ಬದುಕಿ ಬಾಳಿದ್ದನು. ‘ಸಂವರ್ತ’ ಎಂಬ ಮಹರ್ಷಿಯ ಸಹಯೋಗದಿಂದ ಮಹಾಯಾಗಗಳನ್ನು ಮಾಡಿಸಿ ಕೃತಾರ್ಥನಾಗಿದ್ದನು. ಇನ್ನೂ ಬಹುವಿಧ ಮಹಾ ಯಜ್ಞಗಳನ್ನು ಮಾಡ ಬಯಸಿದ ಮರುತ್ತನಿಗೆ ಮಹಾದೇವ ಪರಶಿವನು ಒಲಿದು ಯಾಗಧನವಾಗಿ ಹಿಮಾಲಯದ ಒಂದು ಪರ್ವತ ಭಾಗವನ್ನು ಬಂಗಾರದ ಪರ್ವತವಾಗಿಸಿ ನೀಡಿದ್ದನು. ಹೀಗೆ ಮಹಾಯಜ್ಞಗಳು ಸಮೃದ್ಧಿಯಿಂದ ಸಾಗಿದವು. ಅಂತಹ ವಿಶಿಷ್ಟ ಯಜ್ಞಕಾರ್ಯಗಳಲ್ಲಿ ಇಂದ್ರಾದಿ ದಿಕ್ಪಾಲಕರು, ಬ್ರಹಸ್ಪತಿ, ಪ್ರಜಾಪತಿಗಳು, ದೇವಾನು ದೇವತೆಗಳು, ಮರುದ್ಗಣಗಳು ಸಭಾಸದರಾಗಿ ಉಪಸ್ಥಿತರಾಗಿರುತ್ತಿದ್ದರು. ಮರುತ್ತನ ಯಜ್ಞ ಮಂಟಪದ ಸಕಲ ವಸ್ತು ವಿಶೇಷಗಳೂ ಸುವರ್ಣಮಯವಾಗಿಯೆ ಇದ್ದವು. ದೇವತೆಗಳ ಪ್ರೀತ್ಯರ್ಥವಾಗಿ ನಿರಂತರ ಹವಿರ್ಭೋಜನ ನೀಡಲಾಗುತ್ತಿತ್ತು. ಹವ್ಯವಾಹನ ಇವೆಲ್ಲವನ್ನೂ ಸ್ವಾಹವಾಗಿಸಿ ದೇವತೆಗಳಿಗೆ ಸಲ್ಲಿಸುತ್ತಿದ್ದನು.

ಯಜ್ಞಗಳು ಸಂಪನ್ನವಾದ ಬಳಿಕ ಬಹುವಿಧ ಭಕ್ಷ, ಭೋಜ್ಯ, ಲೇಹ್ಯ, ಪೇಯ ಹೀಗೆ ಏನೇನು ಭುಂಜಿಸುವ ಸುವಸ್ತುಗಳಿವೆಯೊ ಅವೆಲ್ಲವೂ ಭೋಜನದಲ್ಲಿ ಇರುತ್ತಿದ್ದವು. ದೇವತೆಗಳು, ಋಷಿಗಳು, ಬ್ರಾಹ್ಮಣರು, ಪ್ರಜೆಗಳು, ಅತಿಥಿಗಳು ಹೀಗೆ ಭಾಗಿಗಳಾದವರೆಲ್ಲರೂ ಅಮಿತಾನಂದ ಪಡೆದು ಸಂತೃಪ್ತರಾಗುತ್ತಿದ್ದರು. ಹೊತ್ತೊಯ್ಯಲಾಗದಷ್ಟು ದಾನವನ್ನು ಬಂಗಾರ ರೂಪದಲ್ಲಿ ನೀಡಲಾಗುತ್ತಿತ್ತು. ವೇದ ಪಾರಂಗತರಾದ ಋತ್ವಿಜರನ್ನು ಅವರು ಇಚ್ಚಿಸಿದ ದಿವ್ಯ ವಸ್ತ್ರ, ಆಭರಣಗಳಿಂದ ಮನಸೋ ಇಚ್ಚೆ ಅಲಂಕರಿಸಿ ಸತ್ಕರಿಸುತ್ತಿದ್ದನು.

ಹೀಗೆ ಸದಾ ಸತ್ಕರ್ಮ ನಿರತನಾಗಿದ್ದ ರಾಜರ್ಷಿ ಮರುತ್ತ, ಅತುಲ ಪರಾಕ್ರಮಿಯೂ ಆಗಿದ್ದು ಶತ್ರುಭಯ ಮುಕ್ತವಾದ ಸಮೃದ್ಧ ರಾಜ್ಯವನ್ನು ಪರಿಪಾಲಿಸುತ್ತಿದ್ದನು. ರಾಜ್ಯದಲ್ಲಿ ಸುವೃಷ್ಟಿಯಾಗಿ ಹೇರಳವಾದ ಸಸ್ಯಸಂಪತ್ತು, ಗೋ ಸಂಪತ್ತು ತುಂಬಿತ್ತು. ಮರುತ್ತನು ಮರೆಯದೆ ಕಾಲ ಕಾಲದಲ್ಲಿ ಉತ್ತಮ ವಿಧಿಗಳಿಂದ ಅರ್ಚಿಸಿ ಹವಿಸ್ಸುಗಳಿಂದ ದೇವತೆಗಳನ್ನು ತುಷ್ಟಿಗೊಳಿಸುತ್ತಾ ಇದ್ದನು. ದೇವತೆಗಳು ಸದಾ ಮರುತ್ತನ ಕಾರ್ಯಗಳಿಂದ ತೃಪ್ತರಾಗಿದ್ದು ಅನುಗ್ರಹಕಾರಕರಾಗಿದ್ದರು.

ಮರುತ್ತ ನೈಷ್ಟಿಕ ನಿಷ್ಟನಾಗಿದ್ದು, ಬ್ರಹ್ಮಚರ್ಯಪಾಲನೆ, ವೇದಾಧ್ಯಯನ ಇವೇ ಮುಂತಾದ ಸತ್ಕರ್ಮಗಳಿಂದಲೂ, ಸಕಲವಿಧವಾದ ದಾನ ಧರ್ಮಗಳಿಂದ ಋಷಿಗಳನ್ನು, ಪಿತೃಗಳನ್ನು, ಸುಖ ಜೀವರಾದ ದೇವತೆಗಳನ್ನು ತೃಪ್ತಿ ಸದಾ ಪಡಿಸುತ್ತಿದ್ದನು. ಪರಿಣಾಮವಾಗಿ ದೇವರಾಜ ಇಂದ್ರನೂ ಮರುತ್ತನ ವಿಚಾರದಲ್ಲಿ ಸದಾ ಕಾಲ ಶುಭ ಚಿಂತಕನಾಗಿ ವ್ಯವಹರಿಸುತ್ತಿದ್ದನು. ಸುದೀರ್ಘ ಕಾಲ ಸಮೃದ್ಧ ರಾಜ್ಯವನ್ನು ಪಾಲಿಸಿ, ಪ್ರಜೆಗಳಿಗೆ ರೋಗ ಮುಕ್ತ, ಪ್ರಶಾಂತ, ಸಚ್ಚಾರಿತ್ರ್ಯದ ಬದುಕನ್ನು ಒದಗಿಸಿ ನೆಮ್ಮದಿ, ಮನಶಾಂತಿಯ ಜೀವನ ಮಾಡಲು ಬೇಕಾದ ಸಕಲ ವ್ಯವಸ್ಥೆಯೊಂದಿಗೆ ನಿರ್ಭಯವಾಗಿ ಬಾಳಲು ಅವಕಾಶ ಮಾಡಿಕೊಟ್ಟಿದ್ದನು. ಕಳ್ಳತನ, ಸುಳ್ಳು, ದರೋಡೆ, ಮೋಸ, ವಂಚನೆ, ಬಡತನ, ರೋಗ ರುಜಿನ ಇತ್ಯಾದಿ ಯಾವುದೂ ಮರುತ್ತನ ಸಾಮ್ರಾಜ್ಯದಲ್ಲಿ ಇರಲಿಲ್ಲ.

ಇಂತಹ ಅಪ್ರತಿಮ ಸಾಧನೆ ಮಾಡಿದ ಮಹಾನ್ ರಾಜರ್ಷಿ ಮರುತ್ತ ಕೊನೆಗೆ ಆಯುಷ್ಯ ತೀರಿದಾಗ ಮರಣ ಪ್ರಾಪ್ತವಾಗಿ ಅಕ್ಷಯ ಪುಣ್ಯಬಲದಿಂದ ದಿವ್ಯಲೋಕ ಏರಿ ಹೋದನು.

ಇಲ್ಲಿ ನಾವು ಅರಿತುಕೊಳ್ಳಬೇಕಾದ ಸಾರಂಶವೇನೆಂದರೆ, ಸದಾ ನಿಯಮ, ನಿಷ್ಟೆ, ಸತ್ಕರ್ಮ, ಧರ್ಮ, ಸದ್ವಿಚಾರ, ಸತ್ಕಾರ, ಸದಾಶಯ, ಸುಬುದ್ಧಿ, ಪರಾಕ್ರಮ, ಶೌರ್ಯ, ನ್ಯಾಯ, ಸತ್ಯ, ಸಚ್ಚಾರಿತ್ರ್ಯವಂತನಾಗಿ ಬಾಳಿ ನಿಜಾರ್ಥದಿಂದ ಸಂತೃಪ್ತ ಜೀವನ ಸಾಗಿಸಿ ಬದುಕಿದ್ದ ಮರುತ್ತರಾಜ ಪ್ರಜೆಗಳಿಗೆ ಪ್ರತ್ಯಕ್ಷ ದೇವರಾಗಿದ್ದನು. ದೇವತೆಗಳಿಗೂ ಪ್ರಿಯನಾಗಿದ್ದನು. ಪಿತೃಗಳಿಗೆ, ಋಷಿಗಳಿಗೆ, ಬ್ರಾಹ್ಮಣರಿಗೆ ಹೀಗೆ ಸಮಷ್ಟಿಯಾಗಿ ರಂಧ್ರಾನ್ವೇಷಿಗೂ ಯಾವ ಕೊರತೆಯನ್ನೂ ಹುಡುಕಿ ತೋರಲಾಗದ ರೀತಿ ಪರಿಪೂರ್ಣತೆಯ ಸಾರ್ಥಕ ಜೀವನ ಜೀವಿಸಿದ್ದನು. ಆದರೂ ಕಾಲ ಕರೆದಾಗ ಆತನಿಗೂ ಮೃತ್ಯು ಆವರಿಸಿತ್ತು. ಹಾಗಾಗಿ ಮಗನನ್ನು ಕಳಕೊಂಡೆ ಎಂದು ಪರಿತಪಿಸುವುದರಲ್ಲಿ ಅರ್ಥವಿದೆಯೊ ಹೇಳು? ಮಹಾತ್ಮನಾಗಿರಲಿ, ದುರಾತ್ಮನೇ ಆಗಿರಲಿ, ಬಾಲ – ವೃದ್ಧ ಯಾರು ಬೇಕಾದರೂ ಆಗಿರಲಿ ಕಾಲ ಕೂಡಿ ಬಂದಾಗ ಮರಣ ಸೆಳೆದೊಯ್ಯದೆ ಯಾರನ್ನೂ ಬಿಡುವುದಿಲ್ಲ. ಆದರೆ ಕೃತ ಕರ್ಮಗಳಿಗನುಸಾರ ಫಲ ಪ್ರಾಪ್ತಿಯಾಗುತ್ತದೆ. ಸದಾ ನಮ್ಮಿಂದೇನಾಗುವುದೋ ಅಷ್ಟಾದರೂ ಒಳಿತು ಮಾಡುತ್ತಾ ಬದುಕಿ ಸಾಯಬೇಕು. ಅಧರ್ಮ, ಅಸತ್ಯ, ಅನ್ಯಾಯ, ಅನರ್ಥ ಕಾರ್ಯವೆಸಗುತ್ತಾ ಬಾಧಕರಾಗಿ ಸತ್ತು ಬದುಕಿರಬಾರದು‌. ಉಪಯೋಗಿಯಾಗಿ ಬದುಕಲಾಗದಿದ್ದರೆ ಅಪಕಾರವನ್ನೆಂದಿಗೂ ಎಸಗದೆ ಬದುಕುವ ಪ್ರಯತ್ನ ಶೀಲರಾಗಿರಬೇಕು. ಹಾಗಾದಾಗ ಮಾತ್ರ ಮರಣೋತ್ತರ ಕಾಲದಲ್ಲಿ ದಿವ್ಯ ಲೋಕದ ಸುಖ ಪ್ರಾಪ್ತವಾಗುತ್ತದೆ.

ರಾಜಾ ಸೃಂಜಯಾ ನಿನ್ನ ಮಗ ಮೃತ್ಯುವಶನಾಗಿದ್ದಾನೆ ಎಂದು ಮರುಗುವುದು ಉಚಿತವಲ್ಲ. ಏನು ಆಗಲಿಕ್ಕಿತ್ತೋ ಅದೇ ಸಂಭವಿಸಿದೆ. ನೋಡು ಅಂತಹ ಮಹಾತ್ಮ ಮರುತ್ತನಿಗೂ ಮರಣ ಒದಗಿದೆ. ಹೀಗೆಂದು ನಾರದರು ವಿವರಿಸಿ ಹೇಳಿ ಪುತ್ರವಿಯೋಗದಿಂದ ದುಃಖತಪ್ತನಾಗಿದ್ದ ಸೃಂಜಯನನ್ನು ಸಂತೈಸಿದರು.

ಭಗವಾನ್ ವೇದವ್ಯಾಸರು ನಾರದ ಪ್ರಣೀತ, ಮಹಾತ್ಮನಾದ ರಾಜರ್ಷಿ ಮರುತ್ತನ ಈ ಕಥೆಯನ್ನು ಧರ್ಮರಾಯನಿಗೆ ಹೇಳಿ ಅಭಿಮನ್ಯುವಿನ ಮರಣದ ದುಃಖದಿಂದ ವಿಚಲಿತನಾಗಿದ್ದ ಯುಧಿಷ್ಟಿರನ ಮನಸ್ಸನ್ನು ಶಾಂತಗೊಳಿಸಲು ಪ್ರಯತ್ನಿಸಿದರು. ಇಷ್ಟಾದರೂ ಯಾವುದೊ ಯೋಚನೆಯಲ್ಲಿ ಮಗ್ನನಾಗಿದ್ದ ಧರ್ಮಜನನ್ನು ಕಂಡು, ನಾರದರು ಸೃಂಜಯನಿಗೆ ಹೇಳಿದ್ದ ಇನ್ನೊಂದು ಕಥೆ ಹೇಳಲಾರಂಭಿಸಿದರು…

ಮುಂದುವರಿಯುವುದು..

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page