24.6 C
Udupi
Sunday, November 23, 2025
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ 358

ಭರತೇಶ್ ಶೆಟ್ಟಿ ,ಎಕ್ಕಾರ್

ಸಂಚಿಕೆ ೩೫೮ ಮಹಾಭಾರತ

ಅತ್ತ ಅರ್ಜುನ ಪುತ್ರ ವಿಯೋಗದಿಂದ ದುಃಖತಪ್ತನಾಗಿದ್ದು, ಆತನೊಳಗಿದ್ದ ಅಸದಳ ವೇದನೆ ಕ್ರೋಧವಾಗಿ ಪರಿವರ್ತಿತವಾಗಿ ಜಯದ್ರಥನತ್ತ ತಿರುಗಿದೆ. ಆದರೆ ಇತ್ತ ಧರ್ಮರಾಯನಿಗೆ, ನಾನಿದ್ದೂ ಅಭಿಮನ್ಯುವನ್ನು ಉಳಿಸಿ ಸಂರಕ್ಷಿಸುವ ಕಾರ್ಯವನ್ನು ಮಾಡಲಾಗದೆ, ಬಲಿ ಕೊಟ್ಟಂತೆ ಆಗಿ ಹೋಗಿದೆ. ಪಾರ್ಥಪುತ್ರನ ಬಲಿದಾನಕ್ಕೆ ನಾನೇ ಕಾರಣ, ಪಾರ್ಥನೊಬ್ಬನಿರುತ್ತಿದ್ದರೆ ಈ ಬಾಲಕನ ಮರಣ ಸಾಧ್ಯವಾಗುತ್ತಿರಲಿಲ್ಲ ಎಂಬಂತೆ ಅಪರಾಧಿ ಭಾವ, ಪಾಪ ಪ್ರಜ್ಞೆ, ಪುತ್ರ ವಿಯೋಗದ ವೇದನೆ ಕಾಡುತ್ತಿದೆ. ಹೀಗೆಲ್ಲಾ ಯೋಚಿಸಿ ಕೊರಗಿ ಕೊರಗಿ ಬಸವಳಿದು ಹೋಗಿದ್ದಾನೆ.

ಧರ್ಮಾತ್ಮನಾದ ಯುಧಿಷ್ಟಿರನ ಅಸಹಾಯಕತೆ ಅರಿತೋ ಎಂಬಂತೆ ಭಗವಾನ್ ವ್ಯಾಸರು ಕಾಣಿಸಿಕೊಂಡರು. ಧರ್ಮಜನನ್ನು ಕುರಿತು “ಅಯ್ಯಾ ಮಹಾ ಪ್ರಾಜ್ಞನೇ, ಸರ್ವ ಶಾಸ್ತ್ರ ವಿಶಾರದನಾದ ನೀನು ವ್ಯಸನಿಯಂತೆ ಮೋಹಕ್ಕೊಳಗಾಗಿ ಮರುಗುವ ಭ್ರಮೆಗೆ ಒಳಗಾಗಿರುವುದು ವಿಶೇಷ ಎನಿಸುತ್ತಿದೆ. ಹುಟ್ಟು, ಜೀವನ, ಧರ್ಮಪಾಲನೆ, ಮೃತ್ಯು ಈ ಚಕ್ರದ ಒಳ ಹೊರಗುಗಳನ್ನು ಬಲ್ಲವನು ನೀನು. ಹಾಗಿದ್ದೂ ಈ ರೀತಿ ಕೊರಗುವುದು ಸರಿಯೆನಿಸುತ್ತದೆಯೆ? ಅಭಿಮನ್ಯು ಸುಮ್ಮನೆ ನಷ್ಟವಾದನೆ? ಅಮಿತವಾದ ಸಾಹಸ ಧಾರಣೆ ಮಾಡಿಕೊಂಡು, ರಣತಂತ್ರಗಳನ್ನು ವಿನಿಯೋಗಿಸಿ, ಶಸ್ತ್ರ ಶಾಸ್ತ್ರ ಜ್ಞಾನವನ್ನು ಪ್ರದರ್ಶಿಸಿ ಒಬ್ಬನೇ ಒಬ್ಬ ಬಾಲಕ ವ್ಯೂಹದ ಒಳಹೊಕ್ಕು – ತನ್ನನ್ನು ಆವರಿಸಿದ್ದ ಸಾಗರೋಪಾದಿಯ ಸೇನೆಯೊಳಗೆ ಈಜುತ್ತಾ, ಮನಬಂದಂತೆ ಸವರುತ್ತಾ, ಮಹತ್ತರವಾದ ನಾಶವನ್ನು ಮಾಡಿದ್ದಾನೆ. ತನ್ನ ಕೀರ್ತಿ ಅಖಂಡ ಸೂರ್ಯ ಚಂದ್ರಾರ್ಖವಾಗಿ ಉಳಿಯುವಂತೆ ಸ್ಥಾಪಿಸಿ ಬಳಿಕ ವೀರಸ್ವರ್ಗವನ್ನೇರಿದ್ದಾನೆ. ಏನು ಅಭಿಮನ್ಯು ಯಾರ ಸಹಾಯವೂ ಇಲ್ಲದೆ ಎದುರಿಸಿದ ಯೋಧರು ಸಾಮಾನ್ಯರಾಗಿದ್ದರೆ? ಎಲ್ಲರ ಬೆವರಿಳಿಸಿ, ರುಧಿರಸ್ನಾನಕ್ಕೊಳಪಡಿಸಿ ಆ ನಂತರದಲ್ಲಿ ಮೃತ್ಯುವಶನಾಗಿದ್ದಾನೆ. ನ್ಯಾಯಯುತವಾಗಿ ತಾನು ಮಾಡಬೇಕಾದುದೆಲ್ಲವನ್ನೂ ಪೂರೈಸಿದ ಬಳಿಕ ತನ್ನ ಶರೀರದಿಂದ ಪ್ರಾಣ ಹೋಗಿದೆ. ದುಃಖದ ಬದಲಾಗಿ ಹೆಮ್ಮೆಪಡಬೇಕಾದ ಮಹತ್ಕಾರ್ಯ ಸಾಧಿಸಿದ್ದಾನೆ. ಅರ್ಜುನನಿಲ್ಲದಿದ್ದರೂ ಸೂರ್ಯೋದಯದಿಂದ ಅಸ್ತಮಾನದವರೆಗೆ ಸಮಸ್ತ ಪಾಂಡವ ಪಕ್ಷದ ಪರವಾಗಿ ತಾನೊಬ್ಬ ಏಕಾಂಗಿಯಾಗಿ ಯುದ್ದ ನಿಲ್ಲಗೊಡದೆ, ಅಭಿಮಾನ ಮೂಡಿಸುವಂತಹ ಮಾನ್ಯತೆ ಪಡೆದ ಅಭಿಮನ್ಯು ಅದ್ವಿತೀಯನಾಗಿ ಮೆರೆದು ತೋರಿದ್ದಾನೆ. ಹೀಗಿದ್ದೂ ದುಃಖ ಪಡುವುದು ಸಾಧುವೇ?” ಎಂದು ಪ್ರಶ್ನಿಸಿದರು.

ಆದರೂ, ಧರ್ಮರಾಯ ಅಭಿಮನ್ಯುವಿನ ಸ್ಮರಣ – ಮರಣ ಎರಡರಿಂದಲೂ ಹೊರಬರಲಾಗದೆ ವಿಲಾಪಿಸುತ್ತಾ ಇದ್ದುದನ್ನು ಕಂಡು, ವೇದವ್ಯಾಸರು “ವತ್ಸಾ ನಿನಗೊಂದು ಪುಣ್ಯಪ್ರದವಾದ ಉಪಖ್ಯಾನವನ್ನು ಹೇಳುತ್ತೇನೆ, ಕೇಳಿ ನಿನ್ನ ದುಃಖ ಪರಿಹರಿಸಿಕೋ” ಎಂದರು.

“ಹಿಂದೆ ಕೃತಯುಗದಲ್ಲಿ ಅಕಂಪನ ಎಂಬ ರಾಜನಿದ್ದನು. ಅವನಿಗೆ ‘ಹರಿ’ ಎಂಬ ಹೆಸರಿನ ಮಗನಿದ್ದನು. ಕಾಲಾಂತರದಲ್ಲಿ ಮಹಾಪ್ರಬಲರಾದ ಶತ್ರುಗಳು ಒಗ್ಗಟ್ಟಾಗಿ ಅಜೇಯನಾಗಿದ್ದ ಅಕಂಪನನಲ್ಲಿ ಯುದ್ದಕ್ಕೆ ಬಂದರು. ಘನಘೋರ ಸಂಗ್ರಾಮದಲ್ಲಿ ಅಕಂಪನ ಸೋತು ಬಂಧಿಯಾದನು. ಆತನ ಪುತ್ರ ಹರಿ ಅಸಾಮಾನ್ಯ ಶೂರ, ಸಕಲ ಶಸ್ತ್ರ ಶಾಸ್ತ್ರ ಪಾರಂಗತನಾಗಿ ಭೂಲೋಕದಲ್ಲಿ ಇಂದ್ರನಂತೆ ಯುದ್ದ ಮಾಡಬಲ್ಲ ಸಾಮರ್ಥ್ಯ ಹೊಂದಿದ್ದನು. ಶತ್ರು ಸೇನೆಯ ಬಹ್ವಂಶ ನಾಶಗೊಳಿಸಿ, ಹೋರಾಡಿ ಕೊನೆಗೆ ಆತನೂ ಮರಣವನ್ನಪ್ಪುವಂತಾಯಿತು. ಸಾಮ್ರಾಜ್ಯ ಶತ್ರುಗಳ ವಶವಾಯಿತು. ಅಕಂಪನ ತನಗೊದಗಿದ ಸೋಲಿಗಿಂತಲೂ, ಪುತ್ರ ವ್ಯಾಮೋಹಕ್ಕೆ ತುತ್ತಾಗಿ ಕೊರಗತೊಡಗಿದನು. ಸಜ್ಜನನಾದ ಅಕಂಪನನ ಸ್ಥಿತಿ ನೋಡಿ ತ್ರಿಲೋಕ ಸಂಚಾರಿಯಾದ ಮಹರ್ಷಿ ನಾರದರು ಬಂದು ಸಂತೈಸತೊಡಗಿದರು. ಎಷ್ಟು ಸಮಾಧಾನ ಹೇಳಿದರೂ ಕೇಳದಾದ ಅಕಂಪನ, ಆಗ ಸೃಷ್ಟಿ ಮತ್ತು ಮೃತ್ಯುವಿನ ರಹಸ್ಯದ ಕಥನವನ್ನು ಹೇಳುತ್ತೇನೆ” ಎಂದು ನಾರದರು ಉಪದೇಶ ಮಾಡ ತೊಡಗಿದರು.

“ಆದಿಯಲ್ಲಿ ಸೃಷ್ಟಿ ಕಾರ್ಯ ನಿರತನಾಗಿದ್ದ ಬ್ರಹ್ಮದೇವರು ನಿರಂತರವಾಗಿ ಬಹುವಿಧ ಜೀವರಾಶಿಗಳನ್ನು ಸೃಜಿಸುತ್ತಾ ಹೋದರು. ಭೂದೇವಿ ಸೃಷ್ಟಿಕರ್ತನ ಈ ಕಾರ್ಯದ ಫಲವಾಗಿ ತುಂಬಿ ತುಳುಕಿ ಅಸಹನೀಯ ಭೂ ಭಾರ ಹೊರುವ ಸ್ಥಿತಿ ತಲುಪಿದಳು. ಅಸಹಾಯಕಳಾಗಿ ಬ್ರಹ್ಮದೇವನಲ್ಲಿ ದೂರಿತ್ತಳು. ಆಗ ಬ್ರಹ್ಮದೇವ ತನ್ನ ಕಾರ್ಯ ಸ್ಥಗಿತಗೊಳಿಸಲಾಗದು, ಈ ಸಮಸ್ಯೆಗೆ ಪರಿಹಾರ ಉಪಾಯ ಹುಡುಕಬೇಕು. ಲಯಾಧಿಕಾರಿ ಮಹಾದೇವನಿದ್ದರೂ, ಆತನಿಗೆ ಸಹಾಯಿಯಾಗಿ ಯಮನೇ ಇರುವನಾದರೂ ಅಕಾಲಿಕವಾಗಿ ಒಮ್ಮೆಲೇ ಸೃಷ್ಟಿಯ ನಾಶ ಮಾಡಲಾರರು. ಏನು ಮಾಡೋಣ ಎಂಬ ಚಿಂತೆಗೊಳಗಾದರು. ಚಿಂತೆ ವ್ಯಾಪಿಸಿ ಬ್ರಹ್ಮದೇವನೊಳಗೆ ಕ್ರೋಧವಾಗಿ ಮೂಡಿತು. ಕ್ರೋಧ ಅಗ್ನಿ ರೂಪ ಪಡೆಯಿತು. ಆ ಅಗ್ನಿ ಸಮಸ್ತ ಸೃಷ್ಟಿಯನ್ನು ಯಾವ ನಿಯಮವೂ ಇಲ್ಲದೆ ಆಹುತಿ ಪಡೆಯುತ್ತಾ ಸರ್ವನಾಶಗೊಳಿಸತೊಡಗಿತು. ಈ ವಿನಾಶವನ್ನು ಕಂಡು ಮಹಾದೇವ ಮೂಲವನ್ನರಿತು ಇದು ಬ್ರಹ್ಮದೇವನ ಕೃತ್ಯವೆಂದು ತಿಳಿದು ಆತನ ಬಳಿ ಬಂದನು. ಆಗಲೂ ಬ್ರಹ್ಮದೇವ ಶಾಂತನಾಗಿರದೆ ಅತ್ಯುಗ್ರನಾಗಿಯೇ ಇದ್ದನು. ಬ್ರಹ್ಮದೇವನನ್ನು ಸಂಪ್ರಾರ್ಥಿಸಿದಾಗ ಒಲಿದು ಪರಶಿವನಲ್ಲಿ “ನಿನಗೇನು ಬೇಕು ಕೇಳಿಕೋ” ಎಂದನು. ಮಹಾದೇವ ಬ್ರಹ್ಮನಲ್ಲಿ “ಮೊದಲು ನಿನ್ನಿಂದ ಹೊರಸೂಸಲ್ಪಟ್ಟ ಕ್ರೋಧಾಗ್ನಿಯನ್ನು ಉಪಶಮನಗೊಳಿಸಿ ಶಾಂತನಾಗು. ಅದೇ ನನ್ನ ಬೇಡಿಕೆ” ಎಂದನು.

ಆ ಕೂಡಲೇ ತನ್ನ ಕ್ರೋಧಾಗ್ನಿಯನ್ನು ತೊರೆದಾಗ ಅದು ಓರ್ವಳು ಕಪ್ಪು ಮತ್ತು ಕೆಂಪು ಬಣ್ಣದ ಸ್ತ್ರೀ ರೂಪ ತಳೆದು ಪ್ರಕಟವಾಯಿತು. ಆ ಸ್ತ್ರೀಯನ್ನು ಕಂಡು ಬ್ರಹ್ಮ ದೇವರು “ಮೃತ್ಯೋ” ಎಂದು ಹೆಸರೆತ್ತಿ ಕರೆದರು. ಆ ಹೆಣ್ಣು ಸ್ವರೂಪ “ದೇವಾ ನಿನಗೆ ಪ್ರಣಾಮಗಳು. ನನ್ನನ್ನು ಸೃಜಿಸಿರುವ ಕಾರಣ ಏನೆಂದು ತಿಳಿಯದಾಗಿದ್ದೇನೆ” ಎಂದು ಕೇಳಿದಳು. ಬ್ರಹ್ಮದೇವರು “ಲೋಕದಲ್ಲಿ ಸೃ಼ಷ್ಟಿ ಅಧಿಕವಾಗಿ ಭೂದೇವಿ ಭಾರ ಸಹಿಸದವಳಾಗಿದ್ದಾಳೆ. ಆ ಸಮಯ ನನ್ನಲ್ಲಿ ಉತ್ಪನ್ನವಾದ ಅಗ್ನಿ ನಾಶ ಕಾರ್ಯದಲ್ಲಿ ತೊಡಗಿತ್ತು. ಮಹಾದೇವ ಆ ಪ್ರಳಯಾಗ್ನಿಯನ್ನು ಉಪಶಮನಗೊಳಿಸುವಂತೆ ಕೇಳಿಕೊಂಡನು. ಹಾಗೆಯೇ ನನ್ನ ಕ್ರೋಧವನ್ನು ಹೊರಗೆಸೆದಾಗ ಹುಟ್ಟಿದವಳು ನೀನು. ನಾಶದ ಉದ್ದೇಶದಿಂದ ಉದ್ಭವಿಸಿದ್ದ ಅಗ್ನಿಯ ಪರ್ಯಾಯ ರೂಪದಿಂದ ಜಾತಳಾದ ನೀನು ಇನ್ನು ಮುಂದೆ ನಾಶ ಕಾರ್ಯದಲ್ಲಿ ತೊಡಗಿಕೊಳ್ಳಬೇಕು” ಎಂದು ಆದೇಶ ನೀಡಿದನು.

ಬ್ರಹ್ಮ ದೇವರ ಆದೇಶ ಕೇಳಿದ ಮೃತ್ಯುವಿಗೆ ಸೃಷ್ಟಿಯ ಜೀವರುಗಳ ಬಗ್ಗೆ ಕರುಣೆ ಮೂಡಿ ಪ್ರಾಣ ಹೀರುವ ಮನಸ್ಸಾಗಲಿಲ್ಲ. ಅಂತಹ ಜೀವರುಗಳು ಸಂಸಾರ, ಮಿತ್ರ, ಬಾಂಧವ್ಯಾದಿ ಸಂಬಂಧಗಳಿಂದ ಪರಸ್ಪರ ಪ್ರೀತರಾಗಿ ಬದುಕುತ್ತಿದ್ದಾರೆ. ಅಂತಹ ಅವರನ್ನು ನಾನು ಕೊಂದು ನಾಶಗೈದರೆ ಆ ಕಾರಣದಿಂದ ಬದುಕುಳಿದವರಿಗೆ ದುಃಖವಾಗುತ್ತದೆ. ಅವರ ಕಣ್ಣೀರಿಗೆ ಕಾರಣಳಾಗುವ ನನಗದು ಶ್ರೇಯಸ್ಕರವಲ್ಲ. ಯಾರಿಗೇ ಆಗಲಿ ದುಃಖ ನೀಡುವುದು ಸತ್ಕರ್ಮವಲ್ಲ. ಹಾಗಾಗಿ ನಾನು ಅಂತಹ ಕಾರ್ಯ ಮಾಡಲಾರೆ, ನನ್ನನ್ನು ಮನ್ನಿಸಬೇಕು. ಮಾತ್ರವಲ್ಲ ನನಗೆ ಲೋಕ ಹಿತಕರವಾದ ಧರ್ಮ ಕಾರ್ಯ ಮಾಡುವ ಆಕಾಂಕ್ಷೆಯಿದೆ. ಹಾಗಾಗಿ ನನಗೀಗ ತಪಸ್ಸು ಮಾಡುವ ಮನಸ್ಸಾಗಿದೆ. ತಪೋನಿರತಳಾಗಲು ನೀವು ಅನುಮತಿ ನೀಡಬೇಕು” ಎಂದು ಬೇಡಿದಳು.

ಹೀಗೆ ಬೇಡಿ, ಪರಮೇಶ್ವರ ಮತ್ತು ಬ್ರಹ್ಮದೇವನ ಸಮ್ಮುಖ ಅಪ್ಪಣೆ ಪಡೆದು ಧೇನುಕಾಶ್ರಮ ಸೇರಿ ತಪೋ ನಿರತಳಾದಳು. ಒಂಟಿ ಕಾಲಿನಲ್ಲಿ ನಲ್ವತ್ತೆರಡು ಪದ್ಮವರ್ಷ ಪರ್ಯಂತರ ಬ್ರಹ್ಮದೇವನನ್ನು ಕುರಿತಾಗಿ ಘೋರ ತಪಸ್ಸು ಮಾಡಿದಳು. ಕೌಶಿಕಿ, ನಂದಾ ಹಾಗೂ ಸುರನದಿ ಗಂಗೆಯ ಪವಿತ್ರ ಜಲದಲ್ಲಿ ಮುಳುಗಿದ್ದು ಹಲವು ನಿಖರ್ವ ವರ್ಷಗಳ ಕಾಲ ತಪಸ್ಸನಾಚರಿಸಿದಳು. ಅಲ್ಲಿಂದ ವೇತಸವನ, ಮೇರು ಪರ್ವತ, ನೈಮಿಷಾರಣ್ಯ, ಪುಷ್ಕರ, ಮಲಯ ಪರ್ವತಗಳಲ್ಲಿ ಉಗ್ರ ತಪಸ್ಸನ್ನಾಚರಿಸಿದಳು. ಹೀಗೆ ಅನನ್ಯ ಭಕ್ತಿಯಿಂದ ವಾಯು ಆಹಾರ ಸೇವಿತೆಯಾಗಿ ಶರೀರವನ್ನು ಕೃಶಗೊಳಿಸುತ್ತಾ ಬ್ರಹ್ಮದೇವನನ್ನು ತಪಃಶಕ್ತಿಯಿಂದ ಧ್ಯಾನಿಸುತ್ತಾ ಇದ್ದಾಗ, ಸಂಪ್ರೀತನಾಗಿ ಒಲಿದು ಮೈದೋರಿದನು. “ಮಗಳೇ ಮೃತ್ಯು! ಯಾಕಾಗಿ ಈ ತೆರನಾಗಿ ಮಹೋಗ್ರ ತಪಸ್ಸನ್ನಾಚರಿಸಿದೆ? ನಿನ್ನ ಸೃಷ್ಟಿಯಾಗಿರುವುದೇ ಲೋಕದ ನಾಶಕ್ಕಾಗಿ. ಅದನ್ನು ತಪ್ಪಿಸಲಾಗದು. ಈಗ ನಿನ್ನ ಉದ್ದೇಶವೇನು? ಹೇಳು” ಎಂದು ಕೇಳಿದನು.

ಲೋಕದ ಹಿತಬಯುಸುತ್ತಿದ್ದ ಮೃತ್ಯು “ಪ್ರಭುವೇ, ನಾನು ಸ್ವಸ್ಥರಾದ ಪ್ರಜಾಜನರನ್ನು ಸಂಹರಿಸಲಾರೆ. ಅವರ ಅಳು, ದುಃಖ, ಚೀರಾಟಕ್ಕೆ ಕಾರಣಳಾಗ ಬಯಸುತ್ತಿಲ್ಲ. ಅಂತಹ ಕಾರ್ಯ ಅಧರ್ಮವೆಂದು ತಿಳಿದು ಭೀತಳಾಗಿದ್ದೇನೆ. ಯಾವ ವಿಧದ ಪಾಪವನ್ನೂ ಮಾಡ ಬಯಸುವುದಿಲ್ಲ. ಅದಕ್ಕಾಗಿ ನಿಮ್ಮನ್ನು ಧ್ಯಾನಿಸುತ್ತಾ ತಪಸ್ಸನ್ನಾಚರಿಸಿದೆ. ನೀವು ಕರುಣೆ ತೋರಿ ನನ್ನ ಮನದಿಚ್ಚೆಯಂತೆ ಅನುಗ್ರಹಿಸಬೇಕು” ಎಂದು ವರ ಬೇಡಿದಳು.

“ಮಗಳೇ, ನನ್ನದೇ ಸೃಷ್ಟಿಯನ್ನು, ಮರು ಸೃಷ್ಟಿಗೆ ಪೂರಕವಾಗಿಸುವ ಉದ್ದೇಶದಿಂದ ಸಂಹರಿಸಲೇಬೇಕು. ಹಾಗಾಗಿ ಅದು ಅಧರ್ಮವಾಗದು. ನಾನು ಈಗಾಗಲೆ ಹೇಳಿರುವುದು ಸುಳ್ಳಾಗದು. ನೀನು ಉದ್ಭಿಜ -ಭೂಮಿ ಸೀಳಿಕೊಂಡು ಹುಟ್ಟುವ ಮರಗಿಡಗಳು, ಸ್ವೇದಜ – ಶಾಖದಿಂದ ಹುಟ್ಟುವ ಸೂಕ್ಷ್ಮ ಜೀವಿಗಳು, ಅಂಡಜ – ಮೊಟ್ಟೆಯಿಂದ ಹುಟ್ಟಿ ಬರುವ ಹಾವು ಮತ್ತು ಹಕ್ಕಿಗಳು, ಜರಾಯುಜ – ಗರ್ಭದಿಂದ ಹುಟ್ಟಿ ಬರುವ ಜೀವರಾಶಿಗಳನ್ನು ಸಂಹರಿಸಬೇಕು. ನಿನ್ನ ಕಾರ್ಯಕ್ಕೆ ನಾನು, ಮಹಾದೇವ, ಯಮ ಧರ್ಮರಾಯ ಮತ್ತು ದೇವತೆಗಳು ಸಹಾಯಕರಾಗಿ ಇರುತ್ತೇವೆ. ನೀನು ಸದಾ ಪಾಪಮುಕ್ತಳಾಗಿ, ನಿರ್ಮಲೆಯಾಗಿ, ಧರ್ಮಕ್ಕೆ ಸ್ವಾಮಿನಿಯಾಗಿರುವಂತೆ ವರದಾನ ನೀಡುತ್ತೇನೆ. ಇಷ್ಟು ಕಠೋರ ತಪಸ್ಸನ್ನಾಚರಿಸಿದ ನೀನು ಸಂಹಾರ ಕಾರ್ಯಕ್ಕೆ ಬೇಕಾದ ಸಾಮರ್ಥ್ಯ ಸಾಧಿಸಿರುವೆ. ಶೀಘ್ರ ಕಾರ್ಯೋನ್ಮುಖಳಾಗು” ಎಂದು ಬ್ರಹ್ಮದೇವ ಹರಸಿದನು.

ಮೃತ್ಯು ಬ್ರಹ್ಮ ದೇವರ ಆಶೀರ್ವಾದಕ್ಕೆ ತಲೆಬಾಗಿ ವಂದಿಸಿದಳು. ” ದೇವಾ ನನ್ನದೊಂದು ಕೋರಿಕೆಯಿದೆ ನಡೆಸಿಕೊಡಬೇಕು. ಜೀವರುಗಳು ‘ಲೋಭ, ಕ್ರೋಧ, ಅಸೂಯೆ, ಈರ್ಷೆ, ದ್ರೋಹ, ಮೋಹ, ನಿರ್ಲಜ್ಜೆ, ಮತ್ತು ಒಬ್ಬರು ಇನ್ನೊಬ್ಬರ ಬಗ್ಗೆ ಆಡುವ/ಮಾಡುವ ಕಠಿಣೋಕ್ತಿ/ ಕೃತಿ’ ಇವೆಲ್ಲಾ ಮಹಾದೋಷಗಳಾಗಿ ದೇಹಿಗಳ ದೇಹವನ್ನು ನಾನಾರೂಪದಲ್ಲಿ ಭೇದಿಸಲಿ. ಮಾತ್ರವಲ್ಲ, ಸಂಹಾರದ ಬಗ್ಗೆ ಮನಸ್ಸು ಒಪ್ಪದೆ ಇದ್ದಾಗ ನನ್ನ ಅಂಜಲಿಗಳಿಂದ ಧಾರೆಯಾಗಿ ಇಳಿದ ಅಶ್ರುಬಿಂದುಗಳು ಬಹುವಿಧ ವ್ಯಾಧಿಗಳಾಗಲಿ. ದೇವನಾದ ನೀನು ಸೃಷ್ಟಿಗೆ ಆಯುಷ್ಯವನ್ನು ನಿಗದಿಪಡಿಸಬೇಕು. ಆಯುಷ್ಯ ತೀರುವ ಸಮಯ ಈ ವ್ಯಾಧಿಗಳು ಜೀವರುಗಳ ಕರ್ಮಾನುಸಾರ ಆವರಿಸಿ ಆ ಮುಖೇನ ಸಂಹಾರ ಕಾರ್ಯವಾಗುವಂತಾಗಲಿ. ಹೀಗಾದರೆ ನನಗೆ ಕಾರ್ಯವೆಸಗದೆ ಕೆಲಸ ಪೂರೈಸಿ ದೋಷ ಮುಕ್ತಳಾಗಿರಬಹುದು. ಇನ್ನು ನಿರ್ದೋಷಿಗಳೂ ಆಯುಷ್ಯ ಪೂರ್ತಿಗೊಂಡಾಗ ಮರಣವಪ್ಪಲೇ ಬೇಕಲ್ಲವೆ? ಅದಕ್ಕೆ ಸರಿಯಾದ ರೀತಿಯ ಸುಖ ಮರಣವನ್ನು ಕರುಣಿಸುವೆ. ಅಥವಾ ಪೂರಕವಾಗುವ ಕಾರಣ ಮತ್ತು ಘಟನೆ ಯೋಜನೆಗೊಳಿಸಿ ಆ ಮೂಲಕ ಪೂರೈಸಿಕೊಳ್ಳಲು ಅನುಮತಿ ನೀಡಬೇಕು. ಪಾಪ ಹೆಚ್ಚಾಗಿದ್ದರೆ, ಆಯುಷ್ಯವಿದ್ದರೂ ಅಧರ್ಮ ಹೆಚ್ಚಾದಾಗ ಅನ್ಯ ವಿಧಾನಗಳಿಂದ ಸಂಹಾರವಾಗುವಂತೆ ತೊಡಗಿಕೊಳ್ಳುವೆ” ಎಂದು ಕೇಳಿಕೊಂಡಳು.

ಬ್ರಹ್ಮದೇವರು “ಹಾಗೆಯೇ ಆಗಲಿ” ಎಂದು ಅಸ್ತು ಮುದ್ರೆ ತೋರಿದರು. ಇಷ್ಟಾದರೂ ಮೃತ್ಯುವಿಗೆ ಮತ್ತೆ ಸಂದೇಹ ಉಂಟಾಯಿತು. “ಈ ರೀತಿ ನನ್ನಿಂದ ಸಂಹಾರಗೊಂಡು ನಾಶವಾಗುವ ಚತುರ್ವಿಧ – ಉದ್ಭಿಜ, ಸ್ವೇದಜ, ಅಂಡಜ, ಜರಾಯುಜರ ಮುಂದಿನ ಸ್ಥಿತಿಯೇನು?” ತಿಳಿಯುವ ಕುತೂಹಲವಿದೆ ಎಂದು ಕೇಳಿದಳು.

“ಮಗಳೇ! ಆಯುಷ್ಯ ಮುಗಿದು ನಿನ್ನಿಂದ ಸಂಹರಿಸಲ್ಪಟ್ಟು ಮುಕ್ತರಾಗುವ ಜೀವರುಗಳು ಸುಪ್ತರೂಪದ ಆತ್ಮರುಗಳಾಗಿ ಕರ್ಮ ಫಲ ಅನುಸಾರ ಪಾಪ ಪುಣ್ಯಲೋಕ ಸೇರುತ್ತಾರೆ. ಅದಕ್ಕೆ ತಕ್ಕುದಾದ ಫಲ ಅನುಭವಿಸಿ, ಫಲ ತೀರಿದ ಬಳಿಕ ಮತ್ತೆ ಸೃಷ್ಟಿ ಚಕ್ರದಲ್ಲಿ ಸೇರಿ ಮರು ಹುಟ್ಟು ಪಡೆಯಲು ಅರ್ಹರಾಗಿ ಮರುಸೃಷ್ಟಿ ಪಡೆಯಲು ನನ್ನ ಬಳಿ ಬರುತ್ತಾರೆ . ದೇವತೆಗಳೂ ಮರ್ತ್ಯರೇ ಆಗಿದ್ದಾರೆ. ಅವರೂ ಮರಣಧರ್ಮ ಅನುಸರಿಸಲೇ ಬೇಕು. ಪ್ರತಿಯೊಂದಕ್ಕೂ ಅಂತ್ಯ ಮತ್ತೆ ಪುನರಾರಂಭ ಇದೆ. ಅಂತಹ ದಿವ್ಯ ಸಾಧಕರು ಮಾತ್ರ ಈ ಚಕ್ರದಿಂದ ಮುಕ್ತರಾಗಿ ಮೋಕ್ಷ ಸಾಧನೆ ಮಾಡಬಹುದು. ಹಾಗಾಗಿ ನಿನ್ನಿಂದಾಗುವ ಸಂಹಾರ ಕಾರ್ಯ ಈ ಚಕ್ರ ಚಲನೆಗೆ ಪೂರಕವಾಗಲಿದೆ.” ಎಂದು ಅಭಯವಿತ್ತು ಅನುಗ್ರಹಿಸಿದನು. ಮೃತ್ಯುದೇವತೆ ಬ್ರಹ್ಮನಿಂದ ನಿಯುಕ್ತಳಾಗಿ ತನ್ನ ನಿಯೋಜಿತ ಸಂಹಾರ ಕಾರ್ಯದಲ್ಲಿ ತೊಡಗಿದಳು.

ಭಗವಾನ್ ವ್ಯಾಸರು ಕಥೆ ಹೇಳುತ್ತಾ “ಧರ್ಮರಾಯಾ! ಈ ಉಪಖ್ಯಾನ ನಾರದರಿಂದ ಅಕಂಪನನಿಗೆ ಹೇಳಲ್ಪಟ್ಟಿತ್ತು. ಇಂದು ನನ್ನಿಂದ ನಿನಗೆ ತಿಳಿಸಲ್ಪಟ್ಟಿದೆ. ಈ ಅಖ್ಯಾನವನ್ನು ಹೇಳುವುದು ಮತ್ತು ಕೇಳುವುದು ಎರಡೂ ಮಹಾ ಪುಣ್ಯಪ್ರದ. ಮೃತ್ಯುವಿನ ಕಥೆ ತಿಳಿದು ಅದರಂತೆ ಬದುಕಿದರೆ ಬಾಧೆ ಮುಕ್ತರಾಗಿ ಮಹಾತ್ಮರಾಗಬಹುದು. ಧರ್ಮಜಾ! ಈಗ ನೀನು ಅಭಿಮನ್ಯುವಿನ ಮರಣದಿಂದ ಉಂಟಾದ ಮೋಹವನ್ನು ತೊರೆದಿರುವೆ ಎಂದು ಭಾವಿಸುತ್ತೇನೆ. ವೀರ ಅಭಿಮನ್ಯು ನಿಮ್ಮ ಜೊತೆ ಹುಟ್ಟುವ ಮೊದಲು ಚಂದ್ರಲೋಕದಲ್ಲಿ ಶಶಿಕುಮಾರನಾಗಿದ್ದ. ತನ್ನ ಅವತಾರದ ಕಾರ್ಯ ಪೂರೈಸಿ ಮರಳಿ ಪುಣ್ಯಲೋಕ ಸೇರಿದ್ದಾನೆ. ಈಗ ಮಹದಾನಂದದಿಂದ ಇದ್ದಾನೆ. ನೀನು ಈ ಸತ್ಯ ಅರಿಯದೆ ಅಳುವುದರಲ್ಲಿ ಅರ್ಥವಿಲ್ಲ. ದುಃಖವೂ ಒಂದು ವ್ಯಸನ. ಮೋಹ ಒಂದು ರೀತಿ ನಮ್ಮೊಳಗಿರುವ ಅರಿ (ವೈರಿ). ನೀನು ತೊಡಗಿರುವ ಯುದ್ದದಲ್ಲಿ ಬಹಿರಂಗ ವೈರಿಗಳನ್ನು ಸೋಲಿಸಬೇಕಾದರೆ ನಿನ್ನ ಅಂತರಂಗದಲ್ಲಿರುವ ಭಾವನಾತ್ಮಕ ಶತ್ರುಗಳನ್ನು ಜಯಿಸಿ ಸಿದ್ಧನಾಗು” ಎಂದು ಉಪದೇಶ ನೀಡಿದರು.

ಧರ್ಮರಾಯ ಪ್ರಸನ್ನನಾಗಿ ಭಗವಾನ್ ವ್ಯಾಸರಿಗೆ ನಮಸ್ಕರಿಸಿದನು. ಆದರೂ ಆತನ ಮನದಲ್ಲೇನೋ ಜಿಜ್ಞಾಸೆ ಮೂಡಿ ವ್ಯಾಸರನ್ನು ಕೇಳಿ ತಿಳಿಯಲು ಉತ್ಸುಕನಾದನು.

ಮುಂದುವರಿಯುವುದು…

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page