ಭಾಗ 353
ಭರತೇಶ ಶೆಟ್ಟಿ , ಎಕ್ಕಾರ್

ಸಂಚಿಕೆ ೩೫೩ ಮಹಾಭಾರತ
ಹಸ್ತಿನೆಯಲ್ಲಿ ಧೃತರಾಷ್ಟ್ರನಿಗೆ ಭಗದತ್ತನ ವಿಕ್ರಮ ಮಹದಾನಂದ ನೀಡುತ್ತಿದೆ. ಸಂಜಯನಲ್ಲಿ “ಪ್ರಾಗ್ಜೋತಿಷ ಪುರಾಧಿಪ ಭಗದತ್ತ ಅರ್ಜುನನ ಸಂಹಾರ ಮಾಡಿದನೊ? ಸಂಜಯಾ! ಯುದ್ದ ವಾರ್ತೆ ವಿವರಿಸು ಕಾತರ ಹೆಚ್ಚಾಗುತ್ತಿದೆ” ಎಂದು ಅವಸರಪಡತೊಡಗಿದನು.
ಕುರುಕ್ಷೇತ್ರದಲ್ಲಿ ಭಗದತ್ತ ವೈಷ್ಣವ ಮಂತ್ರ ಅಭಿಮಂತ್ರಿಸಿ ದಿವ್ಯಾಸ್ತ್ರವನ್ನು ಅರ್ಜುನನ ಎದೆಗೆ ಗುರಿಯಾಗಿಸಿ ಪ್ರಯೋಗಿಸಿದ್ದಾನೆ. ಪಾರ್ಥನೂ ಮಹಾಸ್ತ್ರಗಳ ಭಂಡಾರ ನಿಧಿಯಲ್ಲವೆ? ಉಪಶಮನ ಗೊಳಿಸಬಲ್ಲ ಪ್ರತ್ಯಸ್ತ್ರ ಹೂಡಿದ್ದಾನೆ. ಆದರೆ ಇದರ ಮಧ್ಯೆ ಪಾರ್ಥನ ಸಾರಥಿಯಾಗಿ ಕುಳಿತಿದ್ದ ಶ್ರೀಕೃಷ್ಣ ಕುದುರೆಗಳ ವಾಘೆಯನ್ನು ಬಿಸುಟು ತಕ್ಷಣ ಎದ್ದು ಅರ್ಜುನನಿಗೆ ಆವರಣದಂತೆ ನಿಂತುಬಿಟ್ಟನು. ಅರ್ಜುನನನ್ನು ಧನುರ್ಬಾಣ ಕೆಳಗಿರಿಸಿ ಕೈ ಮುಗಿದು ಬರುವ ವೈಷ್ಣವಾಸ್ತ್ರಕ್ಕೆ ಅಭಿನಮಿಸಿ ನಿಲ್ಲುವಂತೆ ನಿರ್ದೇಶನ ನೀಡಿದನು. ಪಾಂಡವ ಸೇನೆಗೂ ಆಯುಧ ಕೆಳಗಿರಿಸಿ ಶರಣಾಗತಿಯಿಂದ ವೈಷ್ಣಾವಾಸ್ತ್ರವನ್ನು ಸ್ವಾಗತಿಸುವಂತೆ ಘೋಷಿಸಿದನು. ಆ ಕೂಡಲೆ ಮಹಾವೇಗದಿಂದ ಬರುತ್ತಿದ್ದ ವೈಷ್ಣವಾಸ್ತ್ರವನ್ನು ನಾರಾಯಣ ತನ್ನ ವಕ್ಷಃಸ್ಥಳದಲ್ಲಿ ಧರಿಸಿದನು. ಕೆರೆಯ ನೀರನ್ನು ಕೆರೆಗೆ ಚೆಲ್ಲಿದಂತೆ ದಿವ್ಯಾಸ್ತ್ರ ತನ್ನ ಮೂಲ ಗಮ್ಯ ಸೇರಿತು. ರಮ್ಯ ರಮಣೀಯ ವೈಜಯಂತಿ ಮಾಲೆಯಾಗಿ ಪರಿವರ್ತನೆಗೊಂಡು ವಾಸುದೇವನ ಕೊರಳನ್ನಾವರಿಸಿ ಎದೆಯಲ್ಲಿ ವಿರಾಜಮಾನವಾಯಿತು.
ಪಾರ್ಥನಿಗೆ ತನ್ನ ದೇವನ ಕೃತಿಯಿಂದ ಸಿಟ್ಟೂ, ಅಸಮಾಧಾನವೂ ಸಮ್ಮಿಳಿತವಾಗಿ ಕೃಷ್ಣನನ್ನು ಪ್ರಶ್ನಿಸಿದನು. “ಏನಿದು ದೇವಾ? ನಾನೇದರೂ ಎಚ್ಚರ ತಪ್ಪಿದೆನೆ? ಯಾವ ದಿವ್ಯಾಸ್ತ್ರವಾದರೂ ಖಂಡಿಸುವ ಮಹಾಸ್ತ್ರ ನಿನ್ನ ಸಖನಾದ ನನ್ನಲ್ಲಿ ಇಲ್ಲವೆ? ನೀನು ಯುದ್ದ ಮಾಡುವುದಿಲ್ಲ, ಸಾರಥ್ಯ ಮಾತ್ರ ಮಾಡುತ್ತೇನೆ ಎಂದು ನನ್ನಲ್ಲಿ ಹೇಳಿರುವೆ. ಹಾಗಿದ್ದೂ ನಿನ್ನ ವಚನ ಮುರಿದು ಯಾಕಾಗಿ ಈ ರೀತಿ ವ್ಯವಹರಿಸಿದೆ? ಬರುತ್ತಿದ್ದ ವೈಷ್ಣವಾಸ್ತ್ರವನ್ನು ತಡೆಯುವ ಪ್ರಯತ್ನ ಮಾಡುವ ಸಾಮರ್ಥ್ಯ ನನಗಿದ್ದರೂ ನೀನೇಕೆ ಅತಿಕ್ರಮಣ ಮಾಡಿದೆ ಮಾಧವಾ? ಇದು ಧರ್ಮಯುದ್ಧಕ್ಕೆ ಅಪಚಾರವಾಗದೆ?” ಎಂದು ಪ್ರಶ್ನಿಸಿದನು.
“ಅರ್ಜುನಾ ನೀನು ಅಜೇಯನು ಹೌದು. ನಿನ್ನ ಬಳಿ ಪ್ರತಿಯೊಂದು ಅಸ್ತ್ರಕ್ಕೆ ಪ್ರತ್ಯಸ್ತ್ರ ಇರುವುದೂ ನಿಜ. ಆದರೆ ಈಗ ಪ್ರಯೋಗಿಸಲ್ಪಟ್ಟ ವೈಷ್ಣವಾಸ್ತ್ರ ವಿಶೇಷವಾದದ್ದು. ನಷ್ಟಗೊಳಿಸಲ್ಪಡಲಾಗದು. ನಾನು ಮಾಡಿದ ಕಾರ್ಯಕ್ಕೆ ಕಾರಣವೂ ಇದೆ. ರಹಸ್ಯವಾದ ಸತ್ಯವೊಂದನ್ನು ನಿನಗೆ ವಿವರಿಸುವೆ ಕೇಳು ಪಾರ್ಥ” ಎಂದು ಹೇಳಲಾರಂಭಿಸಿದನು.
“ನಾನು ವಾಸುದೇವ ಆದಿಯಿಂದ ಅಂತ್ಯದವರೆಗಿನ ಸಕಲ ಚರಾಚರಗಳನ್ನು ಹೊಂದಿರುವ ವಸು (ಭೂಮಿ) ವಿನ ಆಚೆಗೂ ವ್ಯಾಪ್ತಿ ಹೊಂದಿರುವ ಸರ್ವ್ಯಾಪ್ತ ದೇವ. ನನ್ನ ಮೂಲ ಈಗ ನಾಲ್ಕು ರೂಪಗಳನ್ನು ಧಾರಣೆ ಮಾಡಿದೆ. ಸರ್ವಲೋಕದ ಪಾಲನೆ ನನ್ನ ಕರ್ತವ್ಯ. ನನ್ನ ಒಂದು ಮೂರ್ತ ಸ್ವರೂಪ ಭೂಮಂಡಲದಲ್ಲಿ (ಬದರಿಕಾಶ್ರಮದಲ್ಲಿ) ತಪಸ್ಸನ್ನಾಚರಿಸುತ್ತಿದೆ. ಎರಡನೆಯ ರೂಪ ಪರಮಾತ್ಮ ಸ್ವರೂಪದಲ್ಲಿದ್ದು ಲೋಕದ ನಿಯಂತ್ರಣವನ್ನು ಗಮನಿಸುತ್ತಿದೆ. ಪರಿವರ್ತನೆ ಹೊಂದಬಲ್ಲ ಮೂರನೆಯ ರೂಪ ವರ್ತಮಾನ ಕಾಲದಲ್ಲಿ ಮನುಷ್ಯರೂಪದಲ್ಲಿದ್ದು ಕೃಷ್ಣ ನಾಮದಲ್ಲಿ ಕರ್ಮಭೂಮಿಯಲ್ಲಿ ವ್ಯವಹರಿಸುತ್ತಿದ್ದೇನೆ. ನಾಲ್ಕನೆಯ ರೂಪ ಸಹಸ್ರ ವರ್ಷ ಪರ್ಯಂತರಕಾಲ ಸಮುದ್ರದ ಮೇಲೆ ಪವಡಿಸಿ ನಿದ್ರೆ ಮಾಡುತ್ತಿದೆ. ಸಾವಿರ ವರ್ಷ ಪೂರ್ಣಗೊಂಡಾಗ ಯೋಗನಿದ್ರೆಯಿಂದ ಎಚ್ಚೆತ್ತುಕೊಳ್ಳುವ ನನ್ನ ಮೂರ್ತ ಸ್ವರೂಪ ಶ್ರೇಷ್ಠರೂ, ವರ ಪಡೆಯಲು ಯೋಗ್ಯರೂ ಆದವರ ಅಭೀಷ್ಟವನ್ನು ಅನುಗ್ರಹಿಸುತ್ತಿದೆ. ಭೂಮಿ ದೇವಿ ನನ್ನ ಯೋಗ ನಿದ್ರೆ ಪೂರ್ಣಗೊಂಡು ಎಚ್ಚೆತ್ತ ಸಮಯವನ್ನು ಪ್ರತೀಕ್ಷೆ ಮಾಡುತ್ತಾ, ನನ್ನನ್ನು ಸಂಪ್ರಾರ್ಥಿಸಿ ಈ ವೈಷ್ಣವಾಸ್ತ್ರ ಪಡೆದಿದ್ದಳು. ಆಕೆಯ ಪುತ್ರ ಭೌಮಾಸುರ ಅಥವಾ ನರಕಾಸುರನಿಗೆ ಇತ್ತು ಆತನನ್ನು ಅಪರಾಜಿತನನ್ನಾಗಿಸಿದ್ದಳು. ನನ್ನ ಪುತ್ರನೂ ಆಗಿದ್ದ ನರಕಾಸುರನನ್ನು ಕಾಲಾಂತರದಲ್ಲಿ ನಿಗ್ರಹಿಸಿದ ಬಳಿಕ ಈ ದಿವ್ಯಾಸ್ತ್ರ ಆತನ ಪುತ್ರ ಭಗದತ್ತನ ಪಾಲಾಗಿತ್ತು. ಈ ಕ್ಷಣ ಆ ಮಹಾಸ್ತ್ರ ಎಲ್ಲಿ ಸೇರಬೇಕೋ ಅಲ್ಲಿಗೆ ಸೇರಿದೆ. ನೀನು ಆ ಬಗ್ಗೆ ಯೋಚಿಸಬೇಡ, ನಿಶ್ಚಿಂತನಾಗಿ ಯುದ್ದ ಮುಂದುವರಿಸು.” ಎಂದು ಕೃಷ್ಣ ವೃತ್ತಾಂತವನ್ನು ವಿವರಿಸಿ ಹೇಳಿದನು.
ಅರ್ಜುನ ತನ್ನ ಮೇಲೆರಗಲು ಸಿದ್ಧನಾಗಿ ಪ್ರಹರಿಸಿದ ಭಗದತ್ತನ ಅಸ್ತ್ರಗಳನ್ನು ಖಂಡಿಸಿ, ಮರು ಪ್ರಹಾರ ಮಾಡತೊಡಗಿದನು. ಸುಪ್ರತೀಕ ಮಹಾಗಜದ ಕುಂಭಸ್ಥಳವನ್ನು ಗುರಿಯಾಗಿಸಿ ಉರಿ ಶರವನ್ನು ಪ್ರಯೋಗಿಸಿದನು. ಸಲಗದ ಲಯ ತಪ್ಪಿತು. ಭಗದತ್ತ ನಿಯಂತ್ರಿಸಿ ಯುದ್ದ ಸನ್ನದ್ಧನಾದಾಗ ಅರ್ಜುನ ತೀಕ್ಷ್ಣ ಶರದಿಂದ ಹಣೆಪಟ್ಟಿ ಸಹಿತ ಭಗದತ್ತನ ಕಿರೀಟ ಹಾರಿಸಿದನು. ಪಟ್ಟಿಯಿಂದ ಹಣೆಯ ಚರ್ಮ ಸೆಳೆದು ಬಿಗಿದು ಕಟ್ಟಲಾಗಿತ್ತು. ಅಜೇಯನಾಗಿ ದೀರ್ಘಾಯುಷ್ಯ ಕಾಲ ಬದುಕುಳಿದಿದ್ದ ಭಗದತ್ತನ ಸುಕ್ಕುಗಟ್ಟಿ ಜೋತು ಇಳಿ ಬಿದ್ದಿದ್ದ ಚರ್ಮ ಕೆಳ ಜಾರಿತು. ಒಮ್ಮೆಗೆ ಕಣ್ಣುಗಳು ಮುಚ್ಚಲ್ಪಟ್ಟು ಕತ್ತಲೆ ಆವರಿಸಿತು. ಸಾವರಿಸಿಕೊಳ್ಳುವ ಮೊದಲು ಅರ್ಧ ಚಂದ್ರ ಶರ ಭಗದತ್ತನ ಶರೀರವನ್ನು ಹೊಕ್ಕು ಸೀಳಿ ಹಾದು ಹೋಯಿತು. ಸತ್ತ ಮರದಲ್ಲಿ ಗೂಡು ಕಟ್ಟಿದ್ದ ಪಕ್ಷಿ ತಾನಿದ್ದ ಮರವನ್ನು ತೊರೆದು ಹೋಗುವಂತೆ ಆತನ ಪ್ರಾಣ ಪಕ್ಷಿಯೂ ಹಾರಿ ಹೋಯಿತು. ಸುಪ್ರತೀಕ ಸಹಿತ ಭಗದತ್ತನೂ ಕುರುಕ್ಷೇತ್ರದ ಪುಣ್ಯಭೂಮಿಗೊರಗಿದನು. ಕೌರವಾದಿಗಳ ನಿರೀಕ್ಷೆ ಹುಸಿಯಾಗಿ ಅವರಿಗೆಲ್ಲರಿಗೂ ನಿರಾಸೆಯಾಯಿತು.
ಇತ್ತ ಭೀಮನೂ ರೌದ್ರಾವತಾರಿಯಾಗಿ ಕುರುಸೇನೆಯನ್ನು ಅಪ್ಪಳಿಸುತ್ತಾ ಎರಗುತ್ತಿದ್ದಾನೆ. ತಡೆದು ನಿಲ್ಲಿಸುವ ಸಾಹಸಕ್ಕೆ ಕುರುವೀರರು ಹಿಂಜರಿದಾಗ, ಮಹಾಮಲ್ಲ ಮಾದ್ರಾದೀಶ ಶಲ್ಯಭೂಪತಿ ಭೀಮನಿಗೆ ಎದುರಾದನು. ಇಬ್ಬರೂ ಗದಾಯುದ್ದ ಪ್ರವೀಣರು, ಮಲ್ಲಪಟುಗಳೂ ಹೌದು. ಪರ್ವತಕ್ಕೆ ಪರ್ವತವೇ ಅಪ್ಪಳಿಸುವಂತೆ ಶಲ್ಯ ಭೀಮರ ಗದೆಗಳು ಘಾತಿಸಿ ಸ್ಪೋಟಗೊಂಡಂತೆ ಕಿಡಿ ಹಾರಿಸುತ್ತಾ ಯುದ್ದ ಸಾಗಿತು. ಭೀಮಸೇನನ ಸಾಮರ್ಥ್ಯದೆದುರು ನಿಸ್ತೇಜನಾದ ಶಲ್ಯ ಭೂಪತಿ ಪರಾಜಿತನಾಗಿ ಹಿಂಜರಿದನು. ಸೂರ್ಯಾಸ್ತಮಾನದೊಂದಿಗೆ ದಿನದ ಯುದ್ದ ನಿಲ್ಲಿಸಲ್ಪಟ್ಟಿತು.
ಇಂದಿನ ದಿನ ಆರಂಭದಲ್ಲಿ ದ್ರೋಣಾಚಾರ್ಯರು ಭೀಕರ ಯುದ್ದ ಗೈದರೂ, ಸಮಗ್ರವಾಗಿ ಪಾಂಡವಸೇನೆಗಿಂತ ಕುರು ಸೇನೆ ಹೆಚ್ಚು ನಾಶಗೊಂಡಿತ್ತು. ಧರ್ಮರಾಯನನ್ನು ಸೆರೆ ಹಿಡಿಯುವುದಕ್ಕೂ ಆಚಾರ್ಯ ದ್ರೋಣರು ವಿಫಲರಾಗಿ ದುರ್ಯೋಧನನಿಂದ ಟೀಕೆಗೆ ಒಳಗಾಗಬೇಕಾದ ಪ್ರಸಂಗ ನಿರ್ಮಾಣವಾಯಿತು. ಉಗ್ರರಾದ ದ್ರೋಣಾಚಾರ್ಯರು ಹದಿಮೂರನೆಯ ದಿನದ ಯುದ್ದಕ್ಕೆ ಮಹಾ ಸಿದ್ಧತೆಯನ್ನು ಮಾಡಿಕೊಂಡು ಚಕ್ರವ್ಯೂಹವನ್ನು ಹೆಣೆಯುವ ಸಿದ್ಧತೆ ಮಾಡಿದರು. ಮತ್ತೆ ಸಂಶಪ್ತಕರಿಗೆ ನಷ್ಟವಾದ ಸೇನೆಗೆ ಮರುಪೂರಣಗೊಳಿಸಿ ಪಾರ್ಥನನ್ನು ರಣಾಂಗಣದಿಂದ ವಿಮುಖಗೊಳಿಸುವ ಹೂರಣ ಹೂಡಿದರು.
ಹದಿಮೂರನೆಯ ದಿನದ ಯುದ್ದಾರಂಭವಾಗುತ್ತಿದ್ದಂತೆ ಮತ್ತೆ ತ್ರಿಗರ್ತರು ಪಾರ್ಥನಿಗೆ ಯುದ್ದಾಹ್ವಾನ ನೀಡಿ ಕುರುಕ್ಷೇತ್ರದ ದಕ್ಷಿಣ ದಿಕ್ಕಿನತ್ತ ಸೆಳೆದರು. ಇಂದು ಸಂಶಪ್ತಕರ ಸೇನೆಯ ಯಾರೊಬ್ಬರ ಜೀವವನ್ನೂ ಉಳಿಸಲಾರೆನೆಂದು ಅತ್ಯುಗ್ರನಾಗಿ ಕೃಷ್ಣನ ಸಾರಥ್ಯದಲ್ಲಿ ಸಂಕಲ್ಪಧರನಾಗಿ ಪಾರ್ಥ ಅತ್ತ ಸಾಗಿದನು.
ಇತ್ತ ಧರ್ಮರಾಯನಿಗೆ ಚಿಂತೆ ಆವರಿಸಿದೆ. ಗುರುದ್ರೋಣರಿಂದ ರಣಾಂಗಣದಲ್ಲಿ ಬೆಸೆಯಲ್ಪಟ್ಟ ಚಕ್ರವ್ಯೂಹವನ್ನು ಭೇದಿಸಬಲ್ಲ ಕೃಷ್ಣಾರ್ಜುನರೀರ್ವರೂ ಸಂಶಪ್ತಕರ ಜೊತೆ ಯುದ್ಧ ನಿರತರಾಗಿದ್ದಾರೆ. ಪಾಂಡವ ಸೋದರರ ಜೊತೆ ಸೇನಾಪತಿ ದೃಷ್ಟದ್ಯುಮ್ನ ವೀರಾಗ್ರಣಿಗಳಾದ ದ್ರುಪದ ಸಾತ್ಯಕಿಯಾದಿಗಳೂ ಅಸಮರ್ಥರಾಗಿ ನಿಂತಿದ್ದಾರೆ. ಚಕ್ರವ್ಯೂಹದ ದ್ವಾರ ರಕ್ಷಕನಾಗಿ ಸಿಂಧೂ ದೇಶಾಧಿಪ ಜಯದ್ರಥ ಸ್ಥಿತನಾಗಿದ್ದಾನೆ. ರುದ್ರ ಭೀಮಸೇನ ಈ ಮೊದಲು ಸೈಂಧವನ ಹೆಡೆಮುರಿ ಕಟ್ಟಿ ಬಿಗಿದು ಕೇಶ ಮುಂಡನಗೈದು ಒದ್ದು ಓಡಿಸಿದ ವಿಕ್ರಮ ಮೆರೆದಿದ್ದವನಾದರೂ, ಇಂದಿನ ದಿನ ಜಯದ್ರಥ ಅಜೇಯನಾಗಿದ್ದಾನೆ. ಮಹಾದೇವ ಪರಮೇಶ್ವರನಿಂದ ವರಬಲಾನ್ವಿತನಾದವನು. ಸೈಂಧವನೆದುರು ಭೀಮಸೇನನ ಕೈ ಸಾಗುತ್ತಿಲ್ಲ. ಏನು ಮಾಡೋಣ ಎಂದು ವ್ಯಥೆಯಲ್ಲಿ ಪಾಂಡವ ಸೇನೆ ತರ್ಕಿಸುವಾಗ ಪಾರ್ಥನಂದನ ಅಭಿಮನ್ಯು ಸಿಂಹದ ಮರಿ ತಾನೂ ಸಿಂಹ ಸದೃಶನೆ ಹೌದು ಎಂಬಂತೆ ಮುಂದೊತ್ತಿ ಬಂದನು.
ಮುಂದುವರಿಯುವುದು…






