ಭಾಗ 346
ಭರತೇಶ್ ಶೆಟ್ಟಿ ಎಕ್ಕಾರ್

ಹಸ್ತಿನೆಯಲ್ಲಿ ಭೀಷ್ಮಾಚಾರ್ಯರ ವಿಕ್ರಮದ ಅವರ್ಣನೀಯ ವರ್ಣನೆಗೈಯುತ್ತಾ ಸಂಜಯ “ಮದವೇರಿದ ಒಂಟಿ ಸಲಗ ಕಾಡ ಮಧ್ಯೆ ಉಳಿದ ಆನೆಗಳು ಹೆದರಿ ಓಡುವಾಗ ಬೆಂಬತ್ತುವಂತೆ, ಗಿಡುಗನ ಹಾರಾಟಕ್ಕೆ ಹೆದರೋಡುವ ಕಿರು ಖಗಗಳಂತೆ ಎದುರಾಳಿ ಸೇನಾನಾಶಗೈಯುತ್ತಾ ಮೆರೆಯುತ್ತಿದ್ದಾರೆ” ಎಂದನು. ಹರ್ಷೋತ್ಕರ್ಷೆಯಲ್ಲಿದ್ದ ಧೃತರಾಷ್ಟ್ರ ಸಂಜಯನ “ಆದರೆ” ಎಂಬ ಉದ್ವೇಗಕ್ಕೊಳಗಾದ ಭಾವ ವ್ಯತ್ಯಾಸ ಕೇಳಿ “ಏನಾಯಿತು? ಏನಾಯಿತು? ” ಎಂದು ಆತಂಕದಲ್ಲಿ ಅವಸರವಾಗಿ ಪ್ರಶ್ನಿಸಿದನು. “ಮಹಾರಾಜ ಪಾರ್ಥಸಾರಥ್ಯದಲ್ಲಿರುವ ಕೃಷ್ಣ ರಥಿಕ ಅರ್ಜುನನ ಜೊತೆ ಶಿಖಂಡಿಯನ್ನೂ ರಥದಲ್ಲಿ ನೋಡುತ್ತಿದ್ದೇನೆ. ಕುರು ಸೇನೆಯ ದ್ರೋಣ, ಕೃತವರ್ಮ, ಕೃಪಾಚಾರ್ಯ, ಅಶ್ವತ್ಥಾಮಾದಿಗಳು ಶಿಖಂಡಿಯನ್ನು ತಡೆದು ತರಿದು ಸಂಹರಿಸುವ ಯತ್ನ ಮಾಡಿದರೂ, ಬಿರುಗಾಳಿಯಂತೆ ಬರುತ್ತಿರುವ ಅರ್ಜುನನ ಶರಗಳೆದುರು ಸುಂಟರಗಾಳಿಗೆ ಸಿಕ್ಕ ತರಗೆಲೆಯಂತೆ ದಿಕ್ಕೆಟ್ಟು ಹೋಗುತ್ತಿದ್ದಾರೆ. ಆಚಾರ್ಯ ಭೀಷ್ಮರು ಶಿಖಂಡಿಯನ್ನು ಕಂಡಾಕ್ಷಣ ಶಸ್ತ್ರ ಸನ್ಯಾಸಗೈದು ನಿಂತಿದ್ದಾರೆ. ಶಿಖಂಡಿ ಯುದ್ದಾಹ್ವಾನ ನೀಡಿದರೂ ಉತ್ತರ ನೀಡುತ್ತಿಲ್ಲ” ಎಂದನು.


ಇತ್ತ ಶಿಖಂಡಿ ತನ್ನ ಬದ್ದ ವೈರಿಯ ಕೊಲೆಗೆ ಹಾತೊರೆಯುವವನಂತೆ ವರ್ತಿಸುತ್ತಿದ್ದಾನೆ. ಪಾರ್ಥನ ರಥದಲ್ಲಿರುವ ಶಿಖಂಡಿಯನ್ನು ಅರ್ಜುನ, ಭೀಮಸೇನ ಮತ್ತು ದೃಷ್ಟದ್ಯುಮ್ನ ರಕ್ಷಿಸುತ್ತಿದ್ದಾರೆ. ಭೀಷ್ಮ ಪ್ರತಿರೋಧ ತೋರದಿದ್ದರೂ ಶಿಖಂಡಿ ಸರಸರನೆ ಐದು ಬಾಣಗಳನ್ನು ಸಮಿತಿಂಜಯ ಭೀಷ್ಮನ ಕಾಯದ ಮೇಲೆ ಪ್ರಯೋಗಿಸಿದನು. ಅವುಗಳು ಗಾಯ ಮಾಡಿದವೋ ಇಲ್ಲವೋ! ಆದರೆ ಆ ಬಳಿಕ ಅರ್ಜುನನೂ ಶರಗಳನ್ನು ಪ್ರಯೋಗಿಸಿದನು. ಪಾರ್ಥನ ಮಹಾಶರಗಳು ಗಾಂಗೇಯನಿಗೆ ಅಸದಳ ನೋವನ್ನೀಯುತ್ತಾ ಚುಚ್ಚಿ ಸೀಳಿ ಹೊಕ್ಕವು. ಕಣ್ಣವೆ ಮುಚ್ಚಿ ತೆರೆಯುವುದರೊಳಗೆ ಭೀಷ್ಮಾಚಾರ್ಯರ ಶರೀರ ಪೂರ್ತಿ ಬಾಣಗಳು ತುಂಬಿ ಕಾಸರಕನ ಮರದಂತಾಗಿ ಹೋದರು ಭೀಷ್ಮಾಚಾರ್ಯರು. ಅಂಗಾಂಗಗಳೂ ಪಾರ್ಥನ ಶರಗಳಿಂದ ಚುಚ್ಚಲ್ಪಟ್ಟಿವೆ. ತಡೆದುಕೊಂಡು ನಿಲ್ಲಲಾಗುತ್ತಿಲ್ಲ, ಅತೀವ ವೇದನೆಯನ್ನು ಸಹಿಸಲಾಗುತ್ತಿಲ್ಲ. ಹೆಜ್ಜೆಯೆತ್ತಿಡಲು ಯತ್ನಿಸಿದಾಗ ಆಕಾಶದಿಂದ ಪತನಗೊಂಡು ಉದುರುವ ತಾರೆಯಂತೆ ಧೊಪ್ಪನೆ ಕೆಳಗೆ ಬಿದ್ದೇ ಬಿಟ್ಟರು ಅಜ್ಜಯ್ಯ ಭೀಷ್ಮಾಚಾರ್ಯರು.
ಅವರ ಜನ್ಮಾಂತರ ರಹಸ್ಯ ಅವಲೋಕಿಸಿದರೆ ಬಹಳ ಹಿರಿದಾದ ಕಥೆಯೇ ಇದೆ. ಹಿಂದೆ ವಸಿಷ್ಟರ ಆಶ್ರಮದಲ್ಲಿದ್ದ ದಿವ್ಯಯಾಗಧೇನುವನ್ನು ಅಪಹರಿಸಿ ಮುಳ್ಳಿನ ಗೆಲ್ಲುಗಳಿಂದ ವಸಿಷ್ಟರ ಹಸುವಿಗೆ ಹೊಡೆದು ಒಯ್ಯುವ ಪ್ರಯತ್ನ ಮಾಡಿದ್ದರು. ಹಾಗೆ ಮಾಡಿದ್ದು ಅಷ್ಟವಸುಗಳ ಕಿರಿಯ ಸೋದರ. ಹೀಗೆ ಮುಳ್ಳಿನ ಕೊಂಬೆಯಿಂದ ಬಡಿಯುತ್ತಾ ಸಾಗುವ ವಸುವನ್ನು ನೋಡಿ ಮಹರ್ಷಿ ವಸಿಷ್ಟರು ಕೋಪಗೊಂಡರು. ದಿವ ಶರೀರಿಗಳಾದ ವಸುಗಳು ಈ ರೀತಿ ಗೋ ಅಪಹರಣ, ಹಿಂಸಾಕೃತ್ಯ ಎಸಗಬಹುದೆ? ಕೋಪ ಶಾಪವಾಕ್ಯವಾಗಿ ಹೊರ ಬಂತು… “ಹೀನಕೃತ್ಯಗೈದ ನೀವು ಭೂಲೋಕದಲ್ಲಿ ಮಾನವರಾಗಿ ಹುಟ್ಟಿ” ಎಂದು ಶಪಿಸಿದರು. ಅಷ್ಟವಸುಗಳಲ್ಲಿ ಏಳು ಮಂದಿ “ಗುರವರ್ಯಾ, ನಾವು ನಿರ್ದೋಷಿಗಳು, ನಮ್ಮ ತಮ್ಮನ ಒತ್ತಾಯಕ್ಕೆ ಮಣಿದು ಜೊತೆಯಲ್ಲಿ ಬಂದಿದ್ದೇವೆಯಷ್ಟೆ. ಆತನ ಪ್ರಿಯತಮೆ ನಿಮ್ಮದ್ದಾದ ಈ ಧೇನುವನ್ನು ಬಯಸಿದ್ದಾಳಂತೆ. ಅದಕ್ಕಾಗಿ ಕಿರಿಯ ಸೋದರ ಒತ್ತಾಯ ಪಡಿಸಿದಾಗ ನಾವು ಜೊತೆಯಾಗಿ ಬಂದಿದ್ದೇವೆ. ಈ ಅಪರಾಧಕ್ಕೆ ಕಾರಣ ನಮ್ಮ ಕಿರಿಯ ಸೋದರ ಮತ್ತು ಅವನ ಪ್ರಿಯೆಯ ಆಸೆ” ಎಂದು ವಿವರಿಸಿ ಪ್ರಾಯಶ್ಚಿತ್ತ ಬೇಡಿದರು. ಆಗ ವಸಿಷ್ಟರು “ನೀವೂ ಶಾಪ ವಾಕ್ಯಕ್ಕೆ ಬಾಧ್ಯರಾಗುತ್ತೀರಿ. ಆದರೆ ನಿಮಗೆ ಭುವಿಯಲ್ಲಿ ಹುಟ್ಟಿದ ಕೆಲ ಕ್ಷಣಗಳಲ್ಲಿ ವಿಮೋಚನೆಯಾಗಲಿ” ಎಂದು ವಿಶಾಪದ ಕರುಣೆ ತೋರಿದರು. “ಆದರೆ ಧೇನುವನ್ನು ಈ ರೀತಿ ಮುಳ್ಳಿನಿಂದ ಚುಚ್ಚಿ ರಕ್ತ ಧಾರೆಯಾಗಿ ಇಳಿಯುವಂತೆ ಹೊಡೆದ ಈತ ಸುದೀರ್ಘ ಮಾನವ ಜನ್ಮ ಬಾಳುವಂತಾಗಿ ಅಂತ್ಯದಲ್ಲಿ ಶರೀರಾದ್ಯಂತ ಚುಚ್ಚಿಸಿಕೊಂಡು ರಕ್ತ ಇಳಿಸುತ್ತಾ ಅಂತ್ಯ ಕಾಣುವಂತಾಗಲಿ” ಎಂದು ಶಪಿಸಿದರು. ವಸಿಷ್ಟರ ಶಾಪ ರೂಪವಾಗಿ ಅಷ್ಟವಸುಗಳು ಶಂತನು ಚಕ್ರವರ್ತಿ ಮತ್ತು ಗಂಗೆಯ ಮಕ್ಕಳಾಗಿ ಹುಟ್ಟಿದರು. ವಸುಗಳಲ್ಲಿ ಮೊದಲ ಏಳು ಮಂದಿ ಹುಟ್ಟಿದಾಕ್ಷಣ ಗಂಗಾನದಿಗೆ ಎಸೆಯಲ್ಪಟ್ಟು ವಿಮೋಚಿತರಾದರು. ಬಳಿಕ ಎಂಟನೆಯವನಾಗಿ ಜನಿಸಿದ ಭೀಷ್ಮ ಉಳಿಯುವಂತಾಗಿ, ಸುದೀರ್ಘ ಬಾಳ್ವೆಯ ಯಾನ ಮುಗಿಸಿ ಈಗ ಅಂತ್ಯಕಾಲದಲ್ಲಿ ಶರಗಳಿಂದ ಚುಚ್ಚಿಸಿಕೊಂಡು ಧಾರುಣಿಗೊರಗಿ ಮಲಗಿದ್ದಾರೆ. ಇನ್ನೊಂದು ವಿಭಾಗದಲ್ಲಿವನೋಡುವುದಾದರೆ ಹತಾಶಳಾಗಿ ಶಪಥಗೈದು ಕಾರಣಜನ್ಮ ಬಯಸಿದ್ದ ಅಂಬೆ ಶಿಖಂಡಿಯಾಗಿ ಜನಿಸಿ ಬಂದವಳಿಗೆ ತನ್ನ ಇಚ್ಚಾಪೂರ್ತಿಗೂ ಅವಕಾಶ ಪ್ರಾಪ್ತವಾಗಿದೆ.
ಪಾರ್ಥನ ಶರಗಳು ಚುಚ್ಚಿ ಬೆಂಗಡೆಯಲ್ಲಿ ಹೊರಬಂದು, ಶರೀರ ನೆಲಸೋಕದಂತೆ ಎತ್ತಿ ಹಿಡಿದಿವೆ. ರಕ್ತ ಧಾರಾಕಾರವಾಗಿ ಇಳಿಯುತ್ತಿದೆ. ಶರ ಶಯ್ಯೆಯಲ್ಲಿ ಹಸ್ತಿನೆಯ ಸಿಂಹಾಸನ ಸಂರಕ್ಷಕ ಪವಡಿಸುವಂತಾಗಿದೆ.
ವೈರಿ ಪಾಳಯದಲ್ಲಿದ್ದರೂ ಮಹಾಮಹಿಮ ಭೀಷ್ಮಾಚಾರ್ಯರು ಪಾಂಡವರಿಗೂ ಬಹುಪ್ರೀತರು. ಕುರು ಸೇನೆಯೂ ಸಮರಸಿಂಹ ಸ್ವರೂಪಿ, ಸೇನಾಧಿಪತಿ ಭೀಷ್ಮಾಚಾರ್ಯರ ಸ್ಥಿತಿಯನ್ನು ಕಂಡು ಸ್ಥಬ್ಧವಾಗಿದೆ. ಎರಡೂ ಪಕ್ಷಗಳೂ ಯುದ್ದ ಮರೆತು, ಸೂರ್ಯಾಸ್ತಮಾನಕ್ಕೂ ಮೊದಲು ವಿರಾಮ ಘೋಷಿಸಿದರು. ಕುರುಕುಲ ಶ್ರೇಷ್ಟನನ್ನು ನೋಡುತ್ತಾ ಆವರಣದಂತೆ ನಿಂತಿದ್ದಾರೆ. ಪಿತಾಮಹ ಒಮ್ಮೆ ಸುತ್ತಲೂ ಕಣ್ಣು ತಿರುಗಿಸಿ ಕೃಷ್ಣನನ್ನು ನೋಡ ತೊಡಗಿದರು…
ಮುಂದುವರಿಯುವುದು…







