31.8 C
Udupi
Sunday, March 15, 2026
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ 345

ಭರತೇಶ ಶೆಟ್ಟಿ ,ಎಕ್ಕಾರ್

ಸಂಚಿಕೆ ೩೪೫ ಮಹಾಭಾರತ

ಇತ್ತ ಪಾಂಡವ ಶಿಬಿರದಲ್ಲಿ ಎಲ್ಲರೂ ಚಿಂತಾಕ್ರಾಂತರಾಗಿದ್ದಾರೆ. ರಣಭಯಂಕರ ಭೀಷ್ಮಾಚಾರ್ಯರ ನಿಗ್ರಹಕ್ಕೆ ಮಾರ್ಗೋಪಾಯ ದೊರೆತಿದ್ದರೂ, ನಾಳೆಯ ದಿನ ಮಹತ್ವದ ವಿಜಯ ಪ್ರಾಪ್ತವಾಗಲಿದೆ ಎಂಬ ಸ್ಪಷ್ಟತೆ ಇದ್ದರೂ ಕೂಡ ಅಂತಹ ಜಯ ಒದಗುವಾಗ ಪ್ರೀತರೂ, ಪೂಜನೀಯರೂ, ಹಿರಿಯರೂ, ಹಿತೈಷಿಯೂ ಆಗಿರುವ ಪಿತಾಮಹತ ತನು ಮನ ನೋಯಿಸಿ ಕೆಡ ಹಾಕುವಲ್ಲಿ ಮನಸ್ಸು ಒಪ್ಪುತ್ತಿಲ್ಲ.

ಹೀಗಿರಲು ಅರ್ಜುನ ಕೃಷ್ಣನನ್ನುದ್ದೇಶಿಸಿ “ದೇವಾ, ಎಳವೆಯಲ್ಲಿ ನಮ್ಮ ಪಿತಾಶ್ರೀ ಪಾಂಡು ಚಕ್ರವರ್ತಿಯ ಮರಣಾನಂತರ ಹಸ್ತಿನೆ ಸೇರುವಲ್ಲಿ ಪ್ರೀತಿ ಆದರಗಳಿಂದ ಬರಮಾಡಿಕೊಂಡವರು ಪಿತಾಮಹ ಭೀಷ್ಮಾಚಾರ್ಯರು. ಅರಮನೆಯಲ್ಲಿ ಸೇವೆಗೆ ಪರಿಚಾರಕರಿದ್ದರೂ ಮಣ್ಣಲ್ಲಿ ಆಡಿ ಬರುತ್ತಿದ್ದ ನಮ್ಮನ್ನು ಶುಚಿರ್ಭೂತಗೊಳಿಸಿ ತುತ್ತನ್ನಿತ್ತ ತಾತನೀತ. ನಮಗೆ ತೊಡೆಯೇರಿ ಕುಳಿತು ಆಡಲು ಅಪ್ಪ ನಮ್ಮ ಜೊತೆ ಇಲ್ಲದಿದ್ದರೂ ಆ ಸುಖವಿತ್ತವರು. ಅಣ್ಣ ಭೀಮಸೇನ ಹಾಗೆಯೆ ಏರಿ ಕುಳಿತು “ತಾತಾ… ತಾತಾ…”:ಎಂದು ಬಾಯ್ತುಂಬ ಆ ದಿನದ ದೂರು, ಸುದ್ದಿ ಏನಿದೆಯೋ ಅದನ್ನು ಹೇಳುವಾಗ ‘ಮಗೂ ನಾನು ನಿನಗೆ ಮುತ್ತಾತ, ನಿನ್ನಪ್ಪ ಪಾಂಡುವಿಗೂ ಅಜ್ಜ ನಾನೆಂದು ಹೇಳಿ, ಲಲ್ಲೆಗರೆಯುತ್ತಿದ್ದ ಮಹಾಮಹಿಮ. ಅಂತಹ ಬಂಧುವನ್ನು ಕೊಂದು ಗೆಲ್ಲುವುದಕ್ಕಿಂದ ಅವರ ಕೈಯಾರೆ ಪ್ರಯೋಗಿಸಲ್ಪಡುವ ಸರಳಿಗೆ ನನ್ನ ಕೊರಳೊಡ್ಡಿ ಕೊಲ್ಲಿಸಲ್ಪಟ್ಟು ಮುಕ್ತನಾಗುವುದು ಸಮಾಧಾನ ಅಲ್ಲವೇ ಮಾಧವಾ?” ಎಂದು ಅರ್ಜುನ ಕೇಳಿದಾಗ…

“ಪಾರ್ಥಾ? ನೀನು ಕ್ಷಣಕ್ಕೊಮ್ಮೆ ಬದಲಾಗುವ ಭಾವನೆಗಳಿಗೆ ದಾಸನಾಗುತ್ತಿರುವೆ. ಕ್ಷಾತ್ರ ಧರ್ಮ ಪರಿಪಾಲಕನಾದ ನಿನಗೆ ನುಡಿದ ವಚನ ಮರೆತು ಹೋಗಬಾರದು. ಶಸ್ತ್ರಾಸ್ತ್ರಗಳನ್ನು ಹಾಗು ನಿನ್ನ ಸಮಸ್ತ ಸುಕೃತವನ್ನು ಪ್ರಮಾಣವಾಗಿರಿಸಿ ಭೀಷ್ಮನ ವಧೆಯ ಭೀಷಣ ಪ್ರತಿಜ್ಞೆಗೈದಿರುವೆ. ನೀನೊಬ್ಬನನ್ನು ಬಿಟ್ಟರೆ ಅನ್ಯರಾರು ಆತನ ಎದುರು ನಿಂತು ಸಮದಂಡಿಯಾಗಿ ಹೋರಾಡಲಾರರು. ಈಗಾಗಲೆ ರಣ ರುದ್ರ ಭೀಮನೂ ಕಾದಾಡಿ ಇನ್ನಿಲ್ಲದಂತೆ ಮುತ್ತಾತನೆದುರು ಸೋತು ಬಸವಳಿದಿರುವುದನ್ನು ನೋಡಿರುವೆ. ಒಂದು ಸತ್ಯವನ್ನು ನಿನಗೆ ತಿಳಿಸುವೆ ಕೇಳು, ಇದು ಮರ್ತ್ಯಲೋಕ, ಇಲ್ಲಿ ಜನಿಸಿದವರೆಲ್ಲರೂ ಮೃತರಾಗಲೆ ಬೇಕು. ಮೃತ್ಯುವಿನಂದಲೆ ಮುಕ್ತಿಯನ್ನು ಪಡೆಯುವುದು. ಮಾತ್ರವಲ್ಲ ಮಹಾತ್ಮನಾದ ಭೀಷ್ಮನ ಮೃತ್ಯು ಮೊದಲೆ ನಿರ್ಧಾರಿತವಾಗಿದೆ. ನೀನು ಕೇವಲ ನಿಮಿತ್ತ ಮಾತ್ರ. ಪ್ರಪೌತ್ರನಾಗಿ ಪಿತೃ ಸದ್ಗತಿ ಮಾಡುವುದು ಕರ್ತವ್ಯವೂ, ಹಾಗೆಯೆ ಮುತ್ತಾತನ ಭವ ಬಂಧನದಿಂದ ಬಿಡುಗಡೆಗೊಳಿಸುವ ಬಾಧ್ಯತೆಯೂ ನಿ‌ನಗಿದೆ. ಈವರೆಗೂ ನಿನಗೆ ತಿಳಿದಿರದ ಆತನ ಮೂಲ ಸ್ವರೂಪವೇನಿದೆಯೊ ಅದನ್ನು ಹೊಂದುವುದಕ್ಕೆ ಆತ ಮುಕ್ತಿ ಪಡೆಯುವ ಹಾದಿಗೆ ನೀನು ಸಹಾಯಕನಾಗಬೇಕು. ತಾಯಿ ಪ್ರಸವ ವೇದನೆ ಸಹಿಸಿ ಮಗುವಿಗೆ ಜನ್ಮ ನೀಡುವಂತೆ, ಈ ಪಥ ಹಿಂಸಾರೂಪದಲ್ಲಿದ್ದರೂ ಪರಿಣಾಮದಲ್ಲಿ ನಿನ್ನ ಪ್ರೀತಿಯ ಪಿತಾಮಹನಿಗೆ ನಿನ್ನಿಂದ ಮಹದುಪಕಾರ ಆಗಲಿದೆ. ಚಿಂತೆ ತೊರೆದು ಕರ್ಮವನ್ನು ಮಾಡು, ಫಲಾಫಲಗಳ ಬಗ್ಗೆ ವ್ಯಥೆ ಪಡಬೇಡ. ಆಗುತ್ತಿರುವುದೂ ಒಳ್ಳೆಯದಕ್ಕೆ ಆಗುತ್ತಿದೆ. ಮುಂದೆ ಆಗಲಿರುವುದೂ ಒಳ್ಳೆಯದೇ ಆಗಲಿದೆ.” ಎಂದು ವಾಸುದೇವ ಕೃಷ್ಣ ಅರ್ಜುನನ ಮನದ ದ್ವಂದ್ವ ನಿವಾರಿಸಿದನು.

ಸೂರ್ಯೋದಯ ನಿತ್ಯ ನಿರಂತರ. ಆದರೆ ಇಂದಿನ ಉದಯದಿಂದ ಅಸ್ತಮಾನದ ಮಧ್ಯಂತರ ಕಾಲದಲ್ಲಿ ಚಂದ್ರವಂಶದ ಹೆಮ್ಮರವೊಂದು ಧರೆಗೊರಗಲಿದೆ. ಹತ್ತನೆಯ ದಿನ ಕುರುಕ್ಷೇತ್ರದಲ್ಲಿ ರಣಕಹಳೆಯ ನಾದದೊಂದಿಗೆ ಯುದ್ದ ಪ್ರಾರಂಭವಾಯಿತು. ಕೈಲಾಸವಾಸಿ ಮಹಾದೇವನ ರುದ್ರ ತಾಂಡವದಂತೆ ಅರೆಗಳಿಗೆಯೂ ವಿರಮಿಸದೆ, ಕಣ್ಣವೆ ಮುಚ್ಚದ ರೀತಿ ವ್ಯಸ್ಥರಾಗಿದ್ದು, ಮನದಲ್ಲಿ ಯಾವ ಭಾವೋದ್ವೇಗವನ್ನೂ ಹೊಂದದೆ ತನ್ನ ಕರ್ಮ ನಿರತರಾಗಿದ್ದಾರೆ ಭೀಷ್ಮಾಚಾರ್ಯರು. ದಿವ್ಯ ಧನುಸ್ಸಿನಿಂದ ಚಿಮ್ಮಲ್ಪಟ್ಟು ಹಾರುತ್ತಿರುವ ಶರವರ್ಷ ಪಾಂಡವ ಪಾಳಯದ ಸೇನೆಯನ್ನು ಇನ್ನಿಲ್ಲದಂತೆ ಸವರುತ್ತಿದೆ. ದಶ ಸಹಸ್ರಕ್ಕೂ ಅಧಿಕ ಮಕುಟಮರ್ದನರು ಮರ್ದಿಸಲ್ಪಟ್ಟರು. ಭೀಷ್ಮರ ಪ್ರಳಯಾಂತಕ ಸ್ವರೂಪದ ಯುದ್ಧವೈಖರಿ ಯಾಂತ್ರಿಕವೂ ಅನಿಯಂತ್ರಿತವೂ ಆಗಿ ಸಾಗುತ್ತಿದೆ. ಬೆಳಗಿ ಪ್ರಜ್ವಲಿಸುತ್ತಿದ್ದ ದೀಪ ನಂದಿ ಆರುವ ಮೊದಲು ಜ್ವಾಜಾಲ್ಯಮಾನವಾಗಿ ಉರಿದೇರುವಂತೆ ಕುರುಕ್ಷೇತ್ರದಲ್ಲಿ ಅಗಾಧ ಸಾಮರ್ಥ್ಯ, ಅತುಲ ವಿಕ್ರಮ, ಅಮಿತ ಬಲ, ಅಕ್ಷಯ ಶರಸಂಧಾನ, ಅಜೇಯ ನಿಲುಮೆಯಲ್ಲಿ ಮೆರೆದಾಡುತ್ತಿದ್ದಾರೆ.

ಹಸ್ತಿನೆಯಲ್ಲಿ ಸಂಜಯ ಪಿತಾಮಹನ ರೌದ್ರ ರಣಪರಾಕ್ರಮವನ್ನು ಧೃತರಾಷ್ಟ್ರನಿಗೆ ವರ್ಣಿಸುತ್ತಿದ್ದಾನೆ. ಭೀಷ್ಮಾಚಾರ್ಯರ ರಣವಿಕ್ರಮದ ವಾರ್ತೆ ಕೇಳಿ ತುಸು ನೆಮ್ಮದಿ ಸಂತೋಷ ಕುರು ಮಹಾರಾಜನ ಮನಸ್ಸಿಗಾಯಿತು.

ವಾಸುದೇವ ಕೃಷ್ಣನ ಏನು ಲೆಕ್ಕಾಚಾರವಿತ್ತೊ, ಅದಷ್ಟೂ ಭರ್ತಿಯಾಯಿತೊ ಏನೋ! ಈ ದಿನದ ಇಷ್ಟು ಹೊತ್ತು ಸುಮನಿದ್ದು ಈಗ “ಅರ್ಜುನಾ! ಇನ್ನು ವಿಳಂಬಿಸಿದರೆ ಅನಾಹುತವಾದೀತು. ಶೀಘ್ರವಾಗಿ ಶಿಖಂಡಿಯನ್ನು ಮುಂದಿರಿಸಿಕೊಂಡು ಗಾಂಗೇಯನನ್ನು ಎದುರಿಸಬೇಕು. ಹಾಗೆ ಮುಂದಾಗುವಲ್ಲಿ ದ್ರೋಣ, ಕೃಪ, ಅಶ್ವತ್ಥಾಮಾದಿಗಳು ಶಿಖಂಡಿಯ ಸಂಹಾರಕ್ಕೆ ಕಂಕಣಬದ್ದರಾಗಿ ಭೀಕರವಾಗಿ ಎರಗುತ್ತಾರೆ. ಜಾಗೃತನಾಗಿದ್ದು ದಶದಿಕ್ಕುಗಳಿಂದಲೂ ಆಗಬಹುದಾದ ಆಕ್ರಮಣವನ್ನು ತಡೆದು ಶಿಖಂಡಿಯನ್ನು ರಕ್ಷಿಸುವಲ್ಲಿ ನೀನು ಎಚ್ಚರದಿಂದಿರಬೇಕು” ಎಂಬುವುದಾಗಿ ಸೂಕ್ತ ನಿರ್ದೇಶನವಿತ್ತನು. ಅರ್ಜುನ ಹಾಗೆಯೆ ಮುಂದುವರಿದರು. ಪಾರ್ಥನ ರಥದಲ್ಲಿ ಶಿಖಂಡಿ ಸ್ಥಿತನಾಗಿ ಬರುವುದನ್ನು ಕಂಡಾಕ್ಷಣ ಏಕಕಾಲದಲ್ಲಿ ಸಮಸ್ತ ಕುರುಸೇನೆಯೆ ಪಾರ್ಥನ ಮೇಲೆ ಮುಗಿ ಬಿದ್ದಿತು. ಧನುರ್ಧರ ಧನಂಜಯನಿಗೆ ಸತ್ವ ಪರೀಕ್ಷೆಯ ರೀತಿ ಸಾಗಿದ ಈ ಗಮನದಲ್ಲಿ ರಥಿ, ಸಮರಥಿ, ಅತಿರಥಿ, ಮಹಾರಥಿಯಾದಿ ಕ್ಷಾತ್ರಜರೆಲ್ಲರನ್ನೂ ದೆಸೆಗೆಡಿಸುತ್ತಾ ಕೃಷ್ಣ ಸಾರಥ್ಯದ ರಥ ಭೀಷ್ಮನಿಗೆ ಎದುರಾಗಿ ಹಾರಿ ಬಂದು ನಿಂತಿತು.

ಕುರುಕುಲ ತಿಲಕ, ಮಹಾಮಹಿಮ, ಪಿತಾಮಹ, ಭಾರ್ಗವ ಶಿಷ್ಯ, ಗಾಂಗೇಯ ಭೀಷ್ಮಾಚಾರ್ಯರು ನೋಡುವುದೇನು? ಮಂಗಲಮೂರುತಿ ಮುಕುಂದನ ಬೆಂಗಡೆಯಲ್ಲಿ ಸಮರ ಸಮರ್ಥ ಪಾರ್ಥನ ಇದಿರು ಅಮಂಗಲಕಾರಿ ಪಾಂಚಾಲ್ಯ ಶಿಖಂಡಿ ಧನುರ್ಬಾಣಧಾರಿಯಾಗಿ ಬುಸುಗುಡುತ್ತಾ ಹೂಂಕರಿಸಿ, ಧನುವಿನ ಶಿಂಜಿನಿಯ ಟಂಕಾರಗೈಯತ್ತಾ ಆಹ್ವಾನವೀಯುತ್ತಿದ್ದಾನೆ.

ಸ್ಥಿತಿಯ ಅರಿವಾಯ್ತು ಸ್ವೇಚ್ಛಾಮರಣಿಗೆ. ಮುಗುಳ್ನಗೆಯ ಮುಕುಂದನ ಮುಖವನ್ನು ನೋಡುತ್ತಾ ತನ್ನ ದಿವ್ಯ ಧನುವಿಗೆ ನಮಸ್ಕರಿಸಿ ರಥದ ಕಂಬಕ್ಕೆ ಒರಗಿಸಿ ಕೆಳಗಿಟ್ಟರು. ಭುಜಕ್ಕೆ ಬಿಗಿದ ಬತ್ತದ ಬಾಣಗಳ ಬತ್ತಳಿಕೆಯನ್ನೂ ಬಿಚ್ಚಿ ಬಿಟ್ಟರು. ಕರಗಳನ್ನು ಮುಷ್ಟಿಗಟ್ಟಿ ಸೊಂಟಕ್ಕೆ ಆಧಾರವಾಗಿ ಒತ್ತಿಹಿಡಿದು ಸುಪ್ರಸನ್ನ ಚಿನ್ಮಯ ವಾಸುದೇವ ಕೃಷ್ಣನನ್ನು ನೋಡುತ್ತಾ ತನ್ನ ವರೂಥದಲ್ಲಿ ನಿಂತರು.

ಮುಂದುವರಿಯುವುದು…

spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page