ಭಾಗ – 344
ಭರತೇಶ ಶೆಟ್ಟಿ , ಎಕ್ಕಾರ್

“ಧರ್ಮರಾಯಾ! ನಾನು ಅಮಂಗಲ ಸೂಚಕ ಚಿಹ್ನೆ ಇರುವ ಧ್ವಜ ನೋಡಿದರೆ, ಮತ್ತು ಅಂತಹ ಧ್ವಜ ಇರುವ ರಥಿಕರೊಡನೆ ಯುದ್ದ ಮಾಡುವುದಿಲ್ಲ. ನಿನ್ನ ಪಕ್ಷದಲ್ಲಿ ಅಂತಹ ವ್ಯವಸ್ಥೆ ಇದೆ. ಎರಡು ಕಾರಣದಿಂದ ನಾನು ನಿನ್ನ ಪಕ್ಷದಲ್ಲಿರುವ ದ್ರುಪದ ಸಂಜಾತ ಶಿಖಂಡಿಯ ಎದುರು ಶಸ್ತ್ರ ಎತ್ತಲಾರೆ. ಒಂದು ಅಮಂಗಲ ಧ್ವಜ ಮತ್ತೊಂದು ಆ ಶಿಖಂಡಿಯ ಜನ್ಮ. ಆತನ ಹುಟ್ಟು ಕೌತುಕಪ್ರದವಾಗಿದೆ. ಹೆಣ್ಣಾಗಿ ಹುಟ್ಟಿ ಶಿವಾನುಗ್ರಹದ ಬಲದಿಂದ ಗಂಡಾಗಿ ಬದಲಾಗಿದ್ದಾನೆ. ಆ ರೀತಿ ಲಿಂಗ ಪರಿವರ್ತಿತರೊಡನೆ ನಾನು ಯುದ್ದ ಮಾಡಲಾರೆ. ನಾಳೆಯ ದಿನ ಅರ್ಜುನ ತನ್ನ ರಥದಲ್ಲಿ ಶಿಖಂಡಿಯನ್ನು ಮುಂದಿರಿಸಿಕೊಂಡು ನನ್ನಲ್ಲಿ ಯುದ್ದಕ್ಕೆ ಬರಲಿ. ನನ್ನನ್ನು ಆಕ್ರಮಿಸಲಿ. ನಾನು ಪ್ರತಿಯಾಗಿ ಆಕ್ರಮಣ ಮಾಡಲಾರೆ. ಪರಮ ಭಾಗವತ ಭಗವಾನ್ ಕೃಷ್ಣ, ಮತ್ತು ಅರ್ಜುನ ಏಕರಥದಲ್ಲಿದ್ದು ನನ್ನ ಶರೀರಾದ್ಯಂತ ಶರ ಪ್ರಯೋಗಿಸಲಿ. ಒಂದೊಮ್ಮೆಗೆ ಈ ಭೀಷ್ಮನ ಸೇನಾಪತ್ಯ ಮುಗಿದರೆ ಮತ್ತೆ ಕುರು ಸೇನೆಯಲ್ಲಿ ಯಾರಿದ್ದರೂ, ನಿನ್ನ ಜಯ ಸುಗಮವಾಗಿ ಪ್ರಾಪ್ತವಾಗಲಿದೆ. ನಿಶ್ಚಿಂತನಾಗಿರು. ಧರ್ಮಕ್ಕೆ ಜಯವಾಗಲಿ” ಎಂದು ಹರಸಿ ಕಳುಹಿಸಿದರು.


ಪಾಂಡವರು ಪಿತಾಮಹನಿಗೆ ವಂದಿಸಿ, ಕಣ್ಣೀರ್ಗರೆಯುತ್ತಾ ತಮ್ಮ ಶಿಬಿರದತ್ತ ಹೊರಟರು.
ಶಿಖಂಡಿಯ ವೃತ್ತಾಂತ ಸ್ವಾರಸ್ಯ ಕರವಾಗಿದೆ. ಓದುಗರಿಗಾಗಿ ಆತ ಹೆಣ್ಣಾಗಿ ಹುಟ್ಟಿ ಗಂಡಾದ ಕಥೆಯನ್ನು ಸೂಚ್ಯವಾಗಿ ವಿವರಿಸುವ ಪ್ರಯತ್ನ ಮಾಡಲಾಗಿದೆ.
ಪಾಂಚಾಲದೇಶದಲ್ಲಿ ಸೋಮಕ ವಂಶ ಆಳ್ವಿಕೆಯಲ್ಲಿತ್ತು. ಗುರು ಅಗ್ನಿವೇಶ್ಯರ ಆಶ್ರಮದಲ್ಲಿ ದ್ರೋಣ ದ್ರುಪದರು ಸಹಪಾಠಿ, ಒಡನಾಡಿ, ಮಿತ್ರರಾಗಿ ಬೆಳೆದವರು. ದ್ರುಪದ ಪ್ರಸ್ತುತ ಪಾಂಚಾಲದ ಅಧಿಪತಿಯಾಗಿ ಮಾಕಂದಿನಗರವನ್ನು ರಾಜಧಾನಿಯನ್ನಾಗಿಸಿದ್ದಾನೆ. ‘ಸುತರಾಮ’ನೆಂಬಾತನ ಮಗಳು ‘ಕೌಸವಿ’ಯನ್ನು ಮದುವೆಯಾದರೂ ಮಕ್ಕಳಾಗಿರಲಿಲ್ಲ. ಶಿವನ ತಪಸ್ಸು ಮಾಡಿ, ಒಲಿಸಿಕೊಂಡು ಮಹಾದೇವನಲ್ಲಿ ಸಂತಾನ ಬೇಡಿಕೊಂಡಾಗ ಒಬ್ಬಳು ಮಗಳು ಹುಟ್ಟುವಂತೆ ಅನುಗ್ರಹಿಸಿದನು. ದ್ರುಪದ ಪುತ್ರಾಪೇಕ್ಷೆ ವ್ಯಕ್ತಪಡಿಸಿ ಬೇಡಿದಾಗ, “ವರ ಸುಳ್ಳಾಗದು – ಹುಟ್ಟುವುದು ಹೆಣ್ಣಾಗಿ, ಆದರೆ ಹುಟ್ಟಿ ಬೆಳೆದು ನಂತರ ಭಕ್ತನಾದ ನಿನ್ನ ಆಸೆಯಂತೆ ಗಂಡಾಗಿ ಪರಿವರ್ತನೆಯಾಗಲಿ” ಎಂದು ಪುನರ್ ಅನುಗ್ರಹಿಸಿದ ಪರಶಿವ. ಇಂತಹ ವಿಭಿನ್ನತೆ ವಿಚಿತ್ರವಾದರೂ ಕಾರ್ಯ ಕಾರಣವಿಲ್ಲದೆ ಕಾಯ ಬದಲಾಗಲ್ಪಟ್ಟೀತೆ?
ಹೀಗೆ ಕಾಲಾಂತರದಲ್ಲಿ ವರಬಲದಲ್ಲಿ ಹುಟ್ಟಿದ ಮಗು ಹೆಣ್ಣಾದರೂ ಗಂಡೆಂದು ಬೆಳೆಸಿದರು. ಅಂಡಾಕೃತಿಯ ಶಿಖೆ ಅಂದರೆ ತಲೆಯ ಹಿಂಭಾಗದಲ್ಲಿ ಮೊಟ್ಟೆಯ ರೂಪದ ಉಬ್ಬು ಇದ್ದ ಕಾರಣ ಶಿಖಂಡಿ ಎಂಬ ಹೆಸರಿಟ್ಟರು. ವಸ್ತ್ರ – ಶಿಕ್ಷಣ ಹೀಗೆ ಎಲ್ಲಾ ವಿಚಾರದಲ್ಲೂ ಗಂಡಾಗಿ ಬೆಳೆಸಿ ಎಲ್ಲೂ ಯಾರಿಗೂ ಹೆಣ್ಣೆಂಬ ಸತ್ಯ ಅರಿಯದಂತೆ ಅತಿ ಜಾಗರೂಕತೆ ವಹಿಸಿದರು. ಯೌವನ ಕಾಲದಲ್ಲಿ ದಶಾರ್ಣ ದೇಶದ ರಾಜ ಹಿರಣ್ಯವರ್ಮನ ಮಗಳನ್ನು ತಂದು ಮದುವೆಯನ್ನೂ ಮಾಡಿಸಿದರು. ಶಿಖಂಡಿಯ ಪತ್ನಿಗೆ ಗಂಡನ ವಿಚಾರ ತಿಳಿಯಿತು ನಾನು ವರಿಸಿದ್ದು ಹೆಣ್ಣನ್ನು, ಗಂಡನ್ನಲ್ಲ ಎಂಬ ಸತ್ಯ ಅನಾವರಣವಾಯಿತು. ಈ ಚಿಂತೆ ಖಿನ್ನತೆಯಾಗಿ ಬಳಲಿ ವ್ಯಾಧಿಗ್ರಸ್ಥಳಾದಳು. ದಶಾರ್ಣ ದೇಶದಿಂದ ಶುಶ್ರೂಷೆಗೆ ಬಂದ ದಾದಿ ಸಲುಗೆ ಬೆಳೆಸಿ ವಿಷಯವರಿತು ತನ್ನ ಅರಸ ಹಿರಣ್ಯವರ್ಮನಿಗೆ ಸುದ್ದಿ ಮುಟ್ಟಿಸಿದಳು. ತನ್ನ ಮಗಳಿಗೆ ಮೋಸದ ಮದುವೆ ಮಾಡಿಸಿದ ದ್ರುಪದನ ಮೇಲೆ ಕೋಪಗೊಂಡು ಸೈನ್ಯ ಸಮೇತ ದಂಡೆತ್ತಿ ಬಂದನು. ದ್ರುಪದ ಕೋಟೆಯ ಬಾಗಿಲು ಮುಚ್ಚಿ ಕೋಟೆಯ ಒಳಗೆ ಮಾನ ರಕ್ಷಣೆಗಾಗಿ ಶಿವನ ವರ ವಾಕ್ಯ ಸ್ಮರಿಸಿ ಧ್ಯಾನ ಮಾಡುತ್ತಾ ಕುಳಿತು, ದೇವರೇ ಕಾಪಾಡಿ ಎಂದು ಬೇಡುತ್ತಿದ್ದನು. ಇತ್ತ ಶಿಖಂಡಿ ತನ್ನ ದುಸ್ಥಿತಿಗೆ ಬೇಸತ್ತು ಕೋಟೆಯ ಹಿಂಬಾಗಿಲ ಮೂಲಕ ಕುದುರೆಯೇರಿ ಓಡಿ ಗೊಂಡಾರಣ್ಯ ಪ್ರವೇಶಿಸಿ ಮನಶಾಂತಿಗಾಗಿ ಅಲೆದಾಡುತ್ತಿದ್ದನು. ಅದೇ ಸಮಯ ಮೃಗ ಬೇಟೆಗಾಗಿ ಕುಬೇರ ತನ್ನ ಸಹಚರರ ಸಹಿತ ಬೇಟೆಗೆ ಬಂದಿದ್ದನು. ಜೊತೆಗಾರನಾಗಿ ಬಂದಿದ್ದ ಸ್ಥೂಲಕರ್ಣ ಎಂಬ ಯಕ್ಷನಿಗೆ ಆಲಸ್ಯ ಆವರಿಸಿ ಉತ್ಸಾಹ ಕಳಕೊಂಡು ಬೇಟೆಯಾಡದೆ ವಿಶ್ರಾಂತನಾಗಿ ವಿರಮಿಸುತ್ತಾ ಒಂದೆಡೆ ಕುಳಿತಿದ್ದನು. ಕಾಡಾಡಿಯಾಗಿ ಬಂದ ಶಿಖಂಡಿಯನ್ನು ಕಂಡು ಕುಶಲೋಪರಿ ವಿಚಾರಿಸಿದನು. ಬಳಿಕ ಕರುಣಾಜನಕ ಕಥೆ ಆಲಿಸಿ ಸಂತೈಸಿದನು. “ದುಃಖಿಸಬೇಡ ನಾನು ನಿನಗೆ ಸಹಾಯ ಮಾಡುವೆ. ನನಗೂ ಶಿವನ ಅನುಗ್ರಹವಿದೆ. ಆ ಬಲದಿಂದ ನಾನು ನನ್ನ ಪುರುಷತ್ವಕ್ಕೆ ನಿನ್ನ ಸ್ತ್ರೀತ್ವವನ್ನು ಬದಲಿಸಿಕೊಳ್ಳುವ ಸಾಮರ್ಥ್ಯ ಹೊಂದಿರುವೆ. ಈ ವಿನಿಮಯ ಒಂದು ತಿಂಗಳ ಅವಧಿಗೆ ನೀಡುವೆ. ದಂಡೆತ್ತಿ ಬಂದ ನಿನ್ನ ಮಾವ ತಲೆ ತಗ್ಗಿಸಿ ಮರಳಿ ಹೋಗುವಂತೆ ಮಾಡು. ಆದರೆ ಕ್ಲಪ್ತ ಸಮಯದಲ್ಲಿ ನೀನು ಬಂದು ನನ್ನ ಪುರುಷತ್ವವನ್ನು ಮರಳಿ ನೀಡಬೇಕು, ಮಾತಿಗೆ ತಪ್ಪಬಾರದೆಂದು ಎಚ್ಚರಿಕೆಯ ಮಾತು ಹೇಳಿದನು. ಹಾಗೆ ಮುಂದುವರಿದು ಶಿಖಂಡಿಯನ್ನು ಗಂಡಾಗಿಸಿದ ಯಕ್ಷ ಸ್ಥೂಲಕರ್ಣ. ಆಶೀರ್ವಾದ ಪಡೆದು ಶಿಖಂಡಿ ಶರವೇಗದಲ್ಲಿ ಮಾಕಂದಿನಗರ ಸೇರಿ ಕೋಟೆಯ ಹೊರಭಾಗದಿಂದ ಪ್ರವೇಶಿಸಿ ಮಾವ ಹಿರಣ್ಯವರ್ಮನನ್ನು ಕಂಡು ಮಾತನಾಡಿಸಿದನು. ಮಾವನ ಸಂದೇಹಕ್ಕೆ ನಕ್ಕು ಗಾಂಭೀರ್ಯ ಮೆರೆದು ಕೋಟೆಯ ಹಿಂಬಾಗಿಲ ಮೂಲಕ ಪ್ರವೇಶಿಸಿದನು. ತಾಯ್ತಂದೆ, ಪತ್ನಿಯರನ್ನು ಕಂಡು ನಡೆದ ವೃತ್ತಾಂತ ವಿವರಿಸಿದನು. ಪತ್ನಿಯ ಖಿನ್ನತೆಯೂ ದೂರವಾಯಿತು. ಸಂತೋಷಗೊಂಡ ಅವರು ಧೈರ್ಯವಾಗಿ ಕೋಟೆಯ ಬಾಗಿಲು ತೆರೆದು ಹಿರಣ್ಯವರ್ಮನನ್ನು ಸ್ವಾಗತಿಸಿದರು. ಹಿರಣ್ಯವರ್ಮನ ಮಗಳು ಸಂತೋಷದಿಂದ ಬಂದು ಪಿತ ಹಿರಣ್ಯವರ್ಮನಲ್ಲಿ ತನ್ನ ಪತಿ ಗಂಡಸು, ಆ ಬಗ್ಗೆ ಗೊಂದಲ ಬೇಡ ಎಂದು ಹೇಳಿದಾಗ ಅವಳ ಅಪ್ಪನಿಗೂ ನಂಬಲೆ ಬೇಕಾಯ್ತು. ದ್ರುಪದನೂ – ಹಿರಣ್ಯವರ್ಮನನ್ನು ಮಾತನಾಡಿಸಿ ಸ್ವಾಗತಿಸಿದನು. ಮಗ ಮನೆಯಲ್ಲಿಲ್ಲದ ಕಾರಣ ವ್ಯರ್ಥ ಕದನದಿಂದ ಫಲವಿಲ್ಲ. ನಿಮ್ಮ ಸಂದೇಹ ಪರಿಹಾರಕ್ಕಾಗಿ ಆತನ ಆಗಮನದ ನಿರೀಕ್ಷೆಯಲ್ಲಿದ್ದೆ. ಹಾಗಾಗಿ ಕೋಟೆಯ ಬಾಗಿಲು ಮುಚ್ಚಲ್ಪಟ್ಟಿತ್ತು. ನಾವು ಸೋಮಕ ವಂಶದವರು ರಣಹೇಡಿಗಳಲ್ಲ . ಯುದ್ದಾಕಾಂಕ್ಷೆ ಇದ್ದರೆ ಈಗಲೂ ಸಿದ್ದರಿದ್ದೇವೆ. ನಿಮ್ಮ ನಿರ್ಣಯವೇನು?” ಎಂದು ಕೇಳಿದನು. ಹಿರಣ್ಯವರ್ಮ ದ್ರುಪದನನ್ನು ಸಂತೈಸಿ, “ಅನ್ಯಥಾ ಭಾವಿಸಬೇಡಿ. ನಾನೂ ಆಕ್ರಮಣ ಮಾಡಲು ಬಂದವನಲ್ಲ. ಅನ್ಯಾಯವಾಗಿದೆ ಎಂಬ ಗೊಂದಲಕ್ಕೊಳಗಾಗಿ ಈ ರೀತಿ ಆಯಿತು. ಆದರೂ ಸಾವಧಾನದಿಂದ ಬೀಗರೊಳಗೆ ಯುದ್ದ ಬೇಡ ಎಂದು ಸೈನ್ಯವನ್ನು ನಿಲ್ಲಿಸಿ ತಾಳ್ಮೆಯಿಂದ ಕಾಯುತ್ತಿದ್ದೆ. ಈಗ ಸಂದೇಹ ಪರಿಹಾರವಾಯಿತು” ಎಂದು ದ್ರುಪದನನ್ನು ಅಪ್ಪಿ ಬಾಂಧವ್ಯ ಸೂಚಕ ಆಲಿಂಗನ ನೀಡಿ ಮರಳಿ ತನ್ನ ದೇಶ ದಶಾರ್ಣ ಸೇರಿದನು.
ಇತ್ತ ಕುಬೇರ ಮೃಗ ಬೇಟೆಯಾಡಿ ಮರಳಿ ಅಲಕಾವತಿ ಸೇರಲು ಹೊರಟರೆ ಯಕ್ಷ ಸ್ಥೂಲಕರ್ಣ ಬರುತ್ತಿಲ್ಲ. ಯಾಕೆಂದು ಕೇಳಿದರೆ, ಭೂಲೋಕದ ಮನುಷ್ಯರೊಡನೆ ಲಿಂಗ ವಿನಿಮಯ ಮಾಡಿದ ವಿಚಾರ ತಿಳಿಯಿತು. ನಿಯಮ ಮೀರಿದ ಕಾರಣ ಕೋಪ ತಳೆದ ಕುಬೇರ ಯಕ್ಷ ಸ್ಥೂಲಕರ್ಣನಿಗೆ “ನೀನು ಲೋಕಧರ್ಮ ಮೀರಿ ವ್ಯವಹರಿಸಿದ ಕಾರಣ ಸ್ತ್ರೀಲಿಂಗಿಯಾಗಿಯೂ , ಶಿಖಂಡಿ ಪುರುಷನಾಗಿಯೂ ಬದುಕುವಂತಾಗಲಿ. ಇನ್ನು ಲಿಂಗ ವಿನಿಮಯ ನಿನ್ನಿಂದ ಮಾಡಲು ಆಗದೆ ಹೋಗಲಿ”. ಎಂದು ಶಪಿಸಿದನು.
ಇತ್ತ ಶಿಖಂಡಿ ವಚನವಿತ್ತಂತೆ ಮಾಸಾಂತ್ಯದೊಳಗೆ ಕಾಡಿಗೆ ಬಂದು ಯಕ್ಷ ಸ್ಥೂಲಕರ್ಣನಿಗೆ ತನ್ನಲಿರುವ ಆತನ ಪುರುಷತ್ವ ಮರಳಿಸಲು ಸಿದ್ಧನಾದನು. ಆದರೆ ಯಕ್ಷನಿಗೆ ಒದಗಿದ ಶಾಪ ವೃತ್ತಾಂತ ತಿಳಿದು, ತನಗೆ ಉಪಕೃತಿ ಮಾಡಲು ಹೋಗಿ ಈತನಿಗಾದ ದುಸ್ಥಿತಿಗೆ ಶಿಖಂಡಿ ಮರುಗಿದನು.
ಆದರೆ ಯಕ್ಷ ಸ್ಥೂಲಕರ್ಣ ಮಾತ್ರ ಕುಪಿತನಾಗದೆ, ಶಿಖಂಡಿಯನ್ನು ಸಂತೈಸಿ “ಈ ಪ್ರಕರಣದಲ್ಲಿ ನಿನಗೆ ಒಳಿತಾಗಿದೆ. ಇಲ್ಲಿ ಆರೋಪಿಸಲು ತಪ್ಪುಗಳಿಗೆ ಹೊಣೆಗಾರ ನೀನಲ್ಲ. ಪರಿತಪಿಸದೆ ನಿನಗೆ ಪ್ರಾಪ್ತವಾದ ಪುರುಷತ್ವದಿಂದ ಸಕಲ ಸುಖಭೋಗಗಳನ್ನು ಅನುಭವಿಸಿ, ಸತ್ಕರ್ಮಗಳನ್ನು ಆಚರಿಸಿ, ರಾಜಕುಮಾರನಾಗಿ ಬಾಳು ಎಂದು ಅನುಗ್ರಹಿಸಿ ಕಳುಹಿಸಿದನು. ಶಿಖಂಡಿಯೂ ಇದು ಶಿವಾನುಗ್ರಹದ ಮಹಾತ್ಮೆಯ ಫಲ ಎಂದು ಅರಿತು ಮರಳಿ ಅರಮನೆ ಸೇರಿದನು. ಹೀಗೆ ಹೆಣ್ಣಾಗಿ ಜನ್ಮ ಹೊಂದಿದ್ದ ಶಿಖಂಡಿ ಗಂಡಾಗಿ ಪರಿವರ್ತನೆ ಹೊಂದಿದ್ದನು.
ನಾಳೆ ಹತ್ತನೆಯ ದಿನದ ಯುದ್ದ….
ಮುಂದುವರಿಯುವುದು…







