23.5 C
Udupi
Tuesday, March 17, 2026
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ 343

ಭರತೇಶ್ ಶೆಟ್ಟಿ ,ಎಕ್ಕಾರ್

ಸಂಚಿಕೆ ೩೪೩ ಮಹಾಭಾರತ

ಯುಧಿಷ್ಠಿರನು ಕೃಷ್ಣನನ್ನು ಉದ್ದೇಶಿಸಿ “ಕೃಷ್ಣಾ, ಪಿತಾಮಹ ಭೀಷ್ಮಾಚಾರ್ಯರನ್ನು ನಿಯಂತ್ರಿಸುವ ಬಗೆ ಹೇಗೆ? ಆ ಪಕ್ಷದಲ್ಲಿದ್ದಾರೆ ಎಂಬ ಏಕೈಕ ಕಾರಣ ಬಿಟ್ಟರೆ ಅಜ್ಜ ನಮಗೆ ಪೂಜನೀಯರು. ಅವರು ರಣಕಣದಲ್ಲಿ ಧನುರ್ಧರನಾಗಿ ತೀಕ್ಷ್ಣಾಸ್ತ್ರ ಪ್ರಯೋಗಿಯಾಗಿ, ಪ್ರತಾಪ ಮೆರೆಯುವಾಗ ನಮ್ಮ ಸೇನೆ ಘೋರ ಕಾನನಕ್ಕೆ ಅಗ್ನಿ ಸ್ಪರ್ಶವಾಗಿ ಉರಿ ಏರಿ ಹತ್ತಿಯಂತೆ ನಾಶವಾಗುತ್ತಿದೆ. ಈಗಾಗಲೆ ಅರ್ಧಕ್ಕಿಂತ ಅಧಿಕ ಸೇನೆ ನಷ್ಟವಾಗಿದೆ. ಇವರೋರ್ವರ ಎದುರು ಈ ರೀತಿಯ ಪರಾಭವ – ಪರಿಭವ ನಮಗಾದರೆ ಮುಂದೆ ದ್ರೋಣ, ಕೃಪ, ಕರ್ಣ, ಅಶ್ವತ್ಥಾಮಾದಿಗಳೂ ಇದ್ದಾರೆ? ಅವರನ್ನು ನಂದಿಸುವ ಬಗೆ ಹೇಗೆ? ಭೀಷ್ಮಾಚಾರ್ಯರು ನಿಂತು ಹೋರಾಡಿದರೆ ಅಜೇಯರೇ ಹೌದು. ಒಂದೊಮ್ಮೆಗೆ ಯಮಧರ್ಮನನ್ನಾದರು ಜಯಿಸಲು ಸಾಧ್ಯವಿದೆ, ವಜ್ರಾಯುಧಧರ ದೇವರಾಜನನ್ನೂ ಪರಾಜಯಗೊಳಿಸಬಹುದು. ಪಾಶಾಯುಧಪಾಣಿ ವರುಣನನ್ನೂ ಮಣಿಸಬಹುದು, ಗದಾಧರ ಕುಬೇರನನ್ನೂ ಸೋಲಿಸಬಹುದು ಆದರೆ ಸಂಕ್ರುದ್ಧರಾದ ಭೀಷ್ಮರನ್ನು ನಿಗ್ರಹಿಸುವುದು ಅಸಂಭವ. ಅಖಂಡ ಆರ್ಯಾವರ್ತದ ಸರ್ವ ಕ್ಷಾತ್ರ ವೀರರ ಶಿರ ಚೆಂಡಾಡಿ ರುಧಿರಾಭಿಷೇಕಗೈದ ಪರಶುವನ್ನು ಇದೇ ಕುರುಕ್ಷೇತ್ರದಲ್ಲಿ ಶುಚಿಗೊಳಿಸಿದ ಭಾರ್ಗವರಾಮರನ್ನು ಇದಿರಿಸಿ ಕಂಗೆಡೆಸಿದ ಭೀಷ್ಮಾಚಾರ್ಯರ ನಿಯಂತ್ರಣ ಹೇಗೆ ಸಾಧ್ಯವಾದೀತು ಮಾಧವ? ಇದು ಧರ್ಮ ಸಂಗ್ರಾಮವಲ್ಲವೆ? ಧರ್ಮಕ್ಕಾಗಿ ಹೋರಾಡುತ್ತಿರುವ ನಮಗೆ ಜಯ ಲಲನೆ ಚಂಚಲೆಯಾಗಿ ಕಾಣಿಸುತ್ತಿದ್ದಾಳೆ. ಮತ್ತೆ ಕಾಡು ಸೇರಿ ಹೇಗೋ ಬದುಕೋಣವೆ? ಪಾಂಚಾಲೆಗೆ ನ್ಯಾಯ ಒದಗಿಸುವ ಪರಿ ಹೇಗೆ? ಅನ್ಯಾಯಕ್ಕೆ ದಂಡನೆ ನೀಡದೆ ಉಳಿದರೆ ನಮ್ಮ ಕ್ಷಾತ್ರ ಧರ್ಮ ಪಾಲನೆ ಆದೀತೆ?” ಎಂದು ಜಿಜ್ಞಾಸೆಪೂರಿತನಾಗಿ ಕೇಳಿದನು.

“ಧರ್ಮಜಾ! ನೀನು ಯುದ್ದಾಕಾಂಕ್ಷಿಯಲ್ಲ ಎಂದು ಮೊದಲೆ ತಿಳಿದಿದ್ದೇವೆ. ಈಗ ನಡುನೀರಿಗೆ ಬಂದು ಹಿಂದಿರುಗಿ ಹೋಗುವ ಮನ ಮಾಡದಿರು. ಸೇನೆಯ ಚಿಂತೆ ಬಿಡು ಹಾಗೂ ಧರ್ಮಾತ್ಮನಾದ ನಿನಗೆ ಸೋಲಾಗುವುದೆಂದು ಭಯಪಡುವೆಯಾದರೆ ನಾನೊಬ್ಬನೆ ಏಕರಥಿಯಾಗಿ ಹೋಗಿ ವೃದ್ದ ಭೀಷ್ಮನನ್ನೂ ಸಮಸ್ತ ಕುರು ಸೇನೆಯನ್ನೂ ಸರ್ವನಾಶ ಮಾಡಿ ಬರುವೆ. ಅಂತಹ ಸ್ಥಿತಿ ನಿನಗೆ ಒದಗದು. ನರವ್ಯಾಘ್ರ ಸದೃಶ ಪಾರ್ಥ, ಕೋಲ್ಮಿಂಚಿನಂತೆ ಅಪ್ಪಳಿಸಬಲ್ಲ ಗದಾಧರ ಭೀಮ, ಏಕರಥಿಕರಾದರೆ ಮಹೇಂದ್ರನ ಸಮಬಲವುಳ್ಳ ನಕುಲ ಸಹದೇವ ಇನ್ನೂ ಇದ್ದಾರೆ. ನೀನೂ ಅಸಾಧಾರಣ ರಣ ವಿಕ್ರಮಿಯೆ ಹೌದು. ಹಾಗಾಗಿ ಸೇನೆಯ ವ್ಯಥೆ ನಿನಗಿರಬಾರದು. ಅರ್ಜುನ ಉಪಪ್ಲಾವ್ಯದಲ್ಲಿ ಅಧರ್ಮದ ಪರ ನಿಂತರೆ ಅಜ್ಜ ಭೀಷ್ಮನನ್ನೂ ದಂಡಿಸದೆ ಬಿಡಲಾರೆ ಎಂದು ನುಡಿದಿದ್ದಾನೆ. ನಾನು ಚಕ್ರಧರನಾಗಿ ಭೀಷ್ಮನತ್ತ ಸಾಗಿದಾಗ ಪಾರ್ಥ ಆತನ ಸರ್ವ ಆಯುಧ ಹಾಗು ಸುಕೃತ ಪುಣ್ಯಬಲವನ್ನು ಪ್ರಮಾಣೀಕರಿಸಿ ಭೀಷ್ಮ ವಧೆಗಾಗಿ ದೀಕ್ಷಾ ಬದ್ದನಾಗಿದ್ದಾನೆ. ಹೀಗಿರಲು ನಿನಗೆ ಭಯ ಆವರಿಸಬಾರದು. ಭೀಷ್ಮಾಚಾರ್ಯ ಸದ್ಗುಣವಂತನಾದರೂ ಅಧರ್ಮಕ್ಕಾಗಿ ಕಾದಾಟಗೈಯಲು ತೊಡಗಿದಲ್ಲಿಗೆ ಆತನ ಬಲ ಕುಂದತೊಡಗಿದೆ. ಮಹಾಬಲನು ಹೌದಾದರೂ ಆತನೀಗ ಅಲ್ಪಬಲನಾಗಿ ಆಯುಷ್ಯ ಕೊನೆಗೊಳ್ಳತೊಡಗಿದೆ. ನಿಜ ಕರ್ತವ್ಯ ಮರೆತು ವ್ಯವಹರಿಸುವ ಆತನನ್ನು ಕರ್ಮವೆ ಕೊನೆಗಾಣಿಸುತ್ತದೆ. ಈ ಸೃಷ್ಟಿಯಲ್ಲಿ ಉತ್ತರವಿಲ್ಲದ ಸಮಸ್ಯೆಗಳು ಇಲ್ಲ. ಸಮಸ್ಯೆಯ ಹುಟ್ಟಿನ ಜೊತೆಯಾಗಿ ಪರಿಹಾರವೂ ಹುಟ್ಟಿಕೊಂಡಿರುತ್ತದೆ. ನಾವೀಗ ಅದನ್ನು ಹುಡುಕಿ ಉಪಯೋಗಿಸಿಕೊಳ್ಳ ಬೇಕಷ್ಟೆ” ಎಂದು ಕೃಷ್ಣ ಧರ್ಮರಾಯನನ್ನು ಸಂತೈಸಿದನು.

“ಮಾಧವಾ! ನಿನ್ನ ಬಲದ ಬಗ್ಗೆ ಸಂದೇಹವಿಲ್ಲ. ಅಸತ್ಯವಾದಿಗಳಾಗಿ ಅಧರ್ಮ ಪಥದಲ್ಲಿರುವವರ ನಿಗ್ರಹ ಕ್ಷಾತ್ರ ಧರ್ಮವಾಗಿ ನಾವು ಪಾಲಿಸಬೇಕಾದ ಕರ್ತವ್ಯವಾಗಿದೆ. ಮೇಲಾಗಿ ನಿನ್ನನ್ನು ವಚನ ಮೀರಿ ಆಯುಧಪಾಣಿಯಾಗಿ ವ್ಯವಹರಿಸಲು ಬಿಟ್ಟರೆ ನೀನೂ ಮಿಥ್ಯವಾದಿ ಎಂಬ ಘೋರ ಅಪವಾದಕ್ಕೆ ಕಾರಣವಾಗುತ್ತದೆ. ಹಾಗಾಗಬಾರದು. ಆದರೆ ನೀನು ಹೇಳಿದಂತೆಯೆ ಸಮಸ್ಯೆಯ ಪರಿಹಾರಕ್ಕೆ ಒಂದು ದಾರಿಯಿದೆ. ಅಜ್ಜ ಭೀಷ್ಮಾಚಾರ್ಯರಲ್ಲಿ ಸಮರಾರಂಭಕ್ಕೆ ಮೊದಲು ಆಶೀರ್ವಾದ ಬೇಡಿದಾಗ ಅವರು ‘ಧರ್ಮಾತ್ಮನಾಗಿ ಬದುಕುತ್ತಿರುವ ಯುಧಿಷ್ಟಿರಾ, ನಿನ್ನ ಪರವಾಗಿ ನಾನು ಹೋರಾಡಲಾರೆ. ಆದರೆ ನಿನ್ನ ಹಿತಕ್ಕಾಗಿ ಸಲಹೆ ಬೇಕಾದಲ್ಲಿ ಖಂಡಿತಾ ನೀಡಬಲ್ಲೆ’ ಎಂಬ ವಾಗ್ದಾನ ನೀಡಿದ್ದಾರೆ. ಹಾಗಾಗಿ ಸಮಸ್ಯೆಗೆ ಉತ್ತರದ ದಾರಿ ಅಜ್ಜನೆ ತೋರಬಲ್ಲರು ಎಂಬ ವಿಶ್ವಾಸ ನನಗಿದೆ” ಎಂದು ಧರ್ಮರಾಯ ಸ್ಮರಿಸಿ ಪರ್ಯಾಪ್ತ ದಾರಿಯನ್ನು ಸೂಚಿಸಿದನು.

ಕೃಷ್ಣ ಧರ್ಮರಾಯನ ಅಭಿಮತ ಕೇಳಿ “ಎಲ್ಲರಿಗೂ ಹಿರಿಯನೂ ಪಿತಾಮಹನೂ ಆಗಿರುವ ಭೀಷ್ಮ ವಂದನೀಯನು ಹೌದು. ಆದರೂ ಧರ್ಮದ ಜಯಕ್ಕೆ ತೊಡಕಾಗಿರುವ ಅವರನ್ನು ನಿಗ್ರಹಿಸಬೇಕಾದ ಅನಿವಾರ್ಯತೆ ಒದಗಿದೆ. ಪುಣ್ಯವಂತನೂ, ಜ್ಞಾನಿಯೂ, ಅತುಲ ವಿಕ್ರಮಿಯೂ ಆಗಿರುವ ಸಮರ್ಥ ಗಾಂಗೇಯನ ವಧೆಯ ಉಪಾಯವನ್ನು ಆತನಲ್ಲಿಯೆ ಕೇಳಬೇಕು. ಆತನ ಇಚ್ಚೆಯಿಂದಲೆ ಮರಣ ನಿರ್ಣಯಗೊಳಿಸಬೇಕು ಹೊರತು ಅನ್ಯಥಾ ಮಾರ್ಗವಿಲ್ಲ. ಹಾಗಾಗಿ ಅವನ ಬಳಿ ಸಾಗಿ ನೇರವಾಗಿ ಧರ್ಮರಕ್ಷಣೆ ಸಹಾಯ ಹಾಗು ಮಾರ್ಗೋಪಾಯವನ್ನು ಕೇಳಬೇಕು. ಸತ್ಯಸಂಧನಾದ ಭೀಷ್ಮ ಉಚಿತವಾದುದನ್ನು ಹೇಳಿ ಸಹಕರಿಸುತ್ತಾನೆ ಎಂಬುವುದು ವಿಶ್ವಾಸನೀಯ” ಎಂದನು.

ಅಂತೆಯೆ ಪಾಂಡವರ ಜೊತೆಯಾಗಿ ಭೀಷ್ಮಾಚಾರ್ಯರ ಬಳಿಗೆ ವಾಸುದೇವನೂ ನಡೆದನು. ಹೋಗುವಾಗ ಆಯುಧ, ಕವಚ, ರಕ್ಷಣೆ ಎಲ್ಲವನ್ನೂ ತೊರೆದು ಅಜ್ಜನ ಬಳಿಗೆ ಮೊಮ್ಮಗರಾಗಿಯೇ ಹೊರಟರು.

ಅಜ್ಜ ಭೀಷ್ಮನ ಶಿಬಿರ ಪ್ರವೇಶಿಸಿ, ತಲೆಬಾಗಿ ನಮಸ್ಕರಿಸಿ ಯಥಾಯೋಗ್ಯವಾಗಿ ಪೂಜಿಸಿ ನಿಂತರು. ಅಜ್ಜನೂ ಮೊಮ್ಮಕ್ಕಳನ್ನು ಪ್ರೀತ್ಯಾದರಗಳಿಂದ ಸ್ವಾಗತಿಸಿ ಬರಮಾಡಿಕೊಂಡನು. ಈ ಹೊತ್ತು ಬಂದಿರುವ ಕಾರಣ ಏನೆಂದು ಕೇಳಿದಾಗ, “ಪಿತಾಮಹಾ! ನಮ್ಮ ಅಜ್ಜನಾಗಿ ನಿಮ್ಮಲ್ಲಿ ಹುಡುಕಿದರೂ ದೋಷವಿಲ್ಲ. ಆದರೆ ಅಧರ್ಮದ ಪಕ್ಷಪಾತಿಯಾಗಿ ಹೋರಾಡುತ್ತಿರುವ ನಿಮ್ಮನ್ನು ನಿಗ್ರಹಿಸದೆ ಧರ್ಮಪಾಲನೆ ಅಸಾಧ್ಯ. ನಿಮ್ಮಿಂದಾಗಿ ಧರ್ಮದ ಪರ ನಿಂತು ಸೆಣಸುತ್ತಿರುವ ಸೇನೆ ನಾಶಗೊಳ್ಳುತ್ತಿದೆಯೆ ಹೊರತು ನಿಯಂತ್ರಣವೂ ಅಸಾಧ್ಯವಾಗಿದೆ. ಹೀಗಿರಲು ಧರ್ಮ ಸಂರಕ್ಷಣೆಗೆ ದಾರಿ ಯಾವುದು? ನೀವು ನಮಗೆ ಪರಿಹಾರ ಸೂಚಿಸಬೇಕು” ಎಂದು ಧರ್ಮರಾಯ ಕೇಳಿದನು.

ಆಗ ಅಜ್ಜ ಭೀಷ್ಮಾಚಾರ್ಯರು “ಕಂದಾ! ಈ ಜಗತ್ತು ಪರಿವರ್ತನಾಶೀಲ ತತ್ವದಲ್ಲಿ ನಿಂತಿದೆ. ಇಲ್ಲಿ ನಶ್ವರ ಶರೀರ ನಾಶ ಹೊಂದಲೆ ಬೇಕು. ಅದು ನಿಯತಿಯ ನಿಯಮವೂ ಆಗಿದೆ. ನಿಮ್ಮೆದುರು ನಾನು ಅಜೇಯನಾಗಿ ಇರುವುದು ಸತ್ಯ. ಎಲ್ಲಿಯವರೆಗೆ ನನ್ನ ಕೈಯಲ್ಲಿ ದಿವ್ಯ ಧನುಸ್ಸು, ಶಸ್ತ್ರಾಸ್ತ್ರ ಧಾರಣೆಯಿಂದ ಇರುವುದೋ, ಅಲ್ಲಿಯವರೆಗೆ ನೀವು ಮಾತ್ರ ಅಲ್ಲ ದೇವಾನು ದೇವತೆಗಳಾಗಲಿ, ಅಸುರರಾಗಲಿ ಏನೂ ಮಾಡಲಾರರು. ನನ್ನ ಶಸ್ತ್ರ ಸನ್ಯಾಸ ನಿಮಗೆ ಪರಿಹಾರದ ಉಪಾಯ. ನನ್ನೆದುರು ಯಾರು ನಿರಾಯುಧನಾಗಿ ನಿಲ್ಲುತ್ತಾನೊ ಅವನೊಡನೆ, ಸೋತು ಕೆಳಗೆ ಬಿದ್ದವನೊಡನೆ, ರಕ್ಷಾ ಕವಚವಿಲ್ಲದವನೊಡನೆ, ಹೆದರಿ ಓಡುವವನೊಡನೆ, ಶರಣಾಗತಿ ಬಯಸಿದವನೊಡನೆ, ಸ್ತ್ರೀ ಹಾಗು ಸ್ತ್ರೀ ನಾಮಕರೊಡನೆ, ವಿಕಲಾಂಗನೊಡನೆ, ಏಕಮಾತ್ರ ಪುತ್ರನಾಗಿರುವವನೊಡನೆ, ರಥಧ್ವಜ ವಿಹೀನನೊಡನೆ, ನಪುಂಸಕನೊಡನೆ ನಾನು ಯುದ್ದ ಮಾಡುವುದಿಲ್ಲ. ನಿಮಗಿನ್ನೂ ಅರ್ಥ ಆಗಿರದಿದ್ದರೆ ನಾನೇ ಸೂಚ್ಯವಾಗಿ ವಿವರಿಸಿ ಹೇಳುತ್ತೇನೆ” ಎಂದು ಪಿತಾಮಹ ಭೀಷ್ಮಾಚಾರ್ಯರು ಪರಿಹಾರ ದಾರಿಯನ್ನು ಸ್ವಯಂ ತಾನೇ ವಿವರಿಸಲು ತೊಡಗಿದರು.

ಮುಂದುವರಿಯುವುದು…

spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page