33 C
Udupi
Saturday, March 28, 2026
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ 337

ಭರತೇಶ್ ಶೆಟ್ಟಿ, ಎಕ್ಕಾರ್

ವಿರಾಟ್ ಸ್ವರೂಪ ವ್ಯೋಮದಾದ್ಯಂತ ವ್ಯಾಪಿಸಿದೆ. ನೋಡುತ್ತಲೆ ಇದ್ದಾನೆ ಪಾರ್ಥ, ಮತ್ತೆ ಮತ್ತೆ ನೋಡಿ ಖಚಿತ ಪಡಿಸಿಕೊಳ್ಳುತ್ತಿದ್ದಾನೆ. ಆಶ್ಚರ್ಯ! ಪರಮಾತ್ಮನನ್ನು ನೋಡುತ್ತಿರುವ ಅರ್ಜುನನೂ ಸ್ತಂಭದಂತೆ ಸ್ಥಿತನಾಗಿದ್ದಾನೆ. ತನ್ನನ್ನು ತಾನು ಚಿವುಟಿ ನೋಡುತ್ತಾ ಇದು ನಿಜವೋ ಎಂದು ಖಚಿತ ಪಡಿಸಿಕೊಳ್ಳುತ್ತಿದ್ದಾನೆ. ಯಾಕೆಂದರೆ ವಿರಾಟ್ ಸ್ವರೂಪದೊಳಗೆ ಸ್ವಯಂ ಅರ್ಜುನ ಯಥಾ ಸ್ವರೂಪದಲ್ಲಿ ಇದ್ದಾನೆ. ಕುರು ಪಾಂಡವ ಸಹಿತ ಸಮಸ್ತ ಸೇನೆಯಿದೆ. ಕದನವಾಗುತ್ತಿದೆ. ಯೋಧ – ಮಹಯೋಧರು ಪರಮಾತ್ಮನ ಮುಖಗಳ ಕೋರೆದಾಡೆಗಳೊಳಗೆ ಸಿಲುಕುತ್ತಾ ಸ್ವಾಹವಾಗುತ್ತಿದ್ದಾರೆ. ದಿಗಿಲುಗೊಂಡನು ವಿಜಯ (ಅರ್ಜುನ). ಪರಮಾತ್ಮನೊಳಗೆ ಸಾಯುತ್ತಿರುವ ಕುರು ಪಾಂಡವ ಸೇನೆ ರಥಿಮಹಾರಥಿಗಳ ಭಯಾನಕ ಸ್ಥಿತಿ ನೋಡುವುದಕ್ಕಾಗದೆ ಭೀತನಾಗಿ ಭಗವಂತನನ್ನು ಶಾಂತನಾಗು ದೇವಾ…. ಮನುಷ್ಯ ಶರೀರಿಯಾಗಿ ಮೊದಲಿನಂತೆ ಕಾಣಿಸಿಕೋ…. ನನ್ನಿಂದ ನಿನ್ನ ಈ ಘೋರ – ಅಘೋರ ರೂಪ ನೋಡಲಾಗದು. ಹೀಗೆ ಪರಿ ಪರಿಯಾಗಿ ಬೇಡುತ್ತಾ, ಸ್ತುತಿಸಿ, ಭಜಿಸಿ ಸಂಪ್ರಾರ್ಥಿಸತೊಡಗಿದನು. ಕಣ್ಮುಚ್ಚಿ ಪಾದಕ್ಕೆರಗಿ ಮಣಿದು ಶರಣಾದನು.

ಅಣುವೂ ಆಗಬಲ್ಲ ಮಹೋತ್ತರನಾಗಿಯೂ ಬೆಳೆಯಬಲ್ಲ ಪರಮಾತ್ಮ ವಾಸುದೇವ, ಕೃಷ್ಣನಾಗಿ ಮನೋಹರ ರೂಪದಲ್ಲಿ ಕೋಮಲಶರೀರಿಯಾಗಿ, ಮುಗುಳ್ನಗೆಯ ಮುರಾರಿಯೇ, ಕೋಮಲ ಮುರಳೀಧರನೇ, ಮುದದಾಯಿ ಮುಕುಂದಾ ಎಂದು ಭಯ ಭಕ್ತಿಯಿಂದ ಪಾದಪದ್ಮಗಳಿಗೆ ಎರಗಿ ದೀನನಾಗಿ ಬೇಡತೊಡಗಿದನು. ಆಗ ಅರ್ಜುನನ ಭುಜಗಳನ್ನಾವರಿಸಿ ಹಿಡಿದೆತ್ತಿ ಪೂಸಿ ಮೈದಡವಿ ಶ್ರೀಕೃಷ್ಣ ಜಾಗೃತಗೊಳಿಸಿದನು. ಈಗ ಅರ್ಜುನನಿಗೆ ಪರಮಾತ್ಮ ಅನುಗ್ರಹಿಸಿದ್ದ ದಿವ್ಯದೃಷ್ಟಿ ಅಂತರ್ಹಿತವಾಗಿ ತನ್ನ ಕಣ್ಣೆದುರು ಮೇಘಶ್ಯಾಮ, ಶ್ರೀಧರ, ಪುಂಡರಿಕಾಕ್ಷ, ಗೋವಿಂದ, ಹೃಷಿಕೇಶ, ಅಚ್ಯುತ, ಮಾಧವ, ಮಧುಸೂದನ, ಪ್ರಸನ್ನವದನ, ಸುಪ್ರಸನ್ನ ವಾಸುದೇವ ಕೃಷ್ಣನಾಗಿ ಕಾಣಿಸುತ್ತಿದ್ದಾನೆ. ಅಪಾದಮಸ್ತಕ ಅಂಗಾಂಗ – ರೋಮ ರೋಮಗಳನ್ನೂ ಸೂಕ್ಷ್ಮವಾಗಿ ಅವಲೋಕಿಸುತ್ತಾ ಭಕ್ತಿಯ ಭ್ರಾಂತಿಯಲ್ಲಿ ಅರ್ಜುನ ನೋಡತೊಡಗಿದ್ದಾನೆ. ಇಂತಹ ಸುಕೋಮಲ ಶರೀರದಲ್ಲಿ ಸರ್ವಾಂತರ್ಯಾಮಿಯಾಗಿರುವ ಪರಮಾತ್ಮನು ಆವಾಸವಾಗಿದ್ದಾನೆ ಎಂಬ ಸತ್ಯ ದರ್ಶನವಾಗಿ ಕೃಷ್ಣನ ಚರಣಾರವಿಂದಗಳಿಗೆ ಸಾಷ್ಟಾಂಗ ನಮನ ಸಲ್ಲಿಸಿ ಮಂಡಿಯೂರಿ ಕುಳಿತು “ದೇವಾ! ನಿನ್ನ ಜೊತೆಯಲ್ಲಿ ಸಖನಾಗಿ ಇದ್ದರೂ ನಿನ್ನನ್ನು ತಿಳಿಯಲಾಗದ ಮೂಢನಾಗಿದ್ದೆನು ನಾನು. ನಿನ್ನ ಸ್ನೇಹಿತನೆಂದೊ, ಆಪ್ತನೆಂದೊ ತಿಳಿದು ಹಾಗೆಯೆ ವ್ಯವಹರಿಸುತ್ತಿದ್ದೆ. ತಿಳಿಯದೆ ನನ್ನಿಂದ ನಿನಗೇನಾದರು ಅಪಚಾರವಾಗಿದ್ದರೆ ಈ ಪಾಮರನನ್ನು ಮನ್ನಿಸಬೇಕು. ನಿನಗೆ ಶರಣಾಗಿದ್ದೇನೆ ವಾಸುದೇವಾ” ಎಂದು ಮರುಗಿ ಕೊರಗಿ ನುತಿಸಿದನು.

“ಅರ್ಜುನಾ! ಜಗದ ಪಾಲನೆ ನನಗೆ ಕರ್ತವ್ಯ. ಅದಕ್ಕಾಗಿ ದುಡಿಯಬೇಕಾದವನು ನಾನು. ಯಾರು ನಿಷ್ಕಲ್ಮಶ ಮನದಿಂದ ನನ್ನನ್ನು ಅರಿತು ಧ್ಯಾನಿಸುತ್ತಾರೋ ಅಂತಹ ಅವರಿಗೆ ನಾನು ಸಖನಾಗಿರುತ್ತೇನೆ. ಯಾರು ಎಲ್ಲ ಕರ್ಮಗಳನ್ನು ನನಗೆ ಅರ್ಪಿಸಿ, ನನ್ನನ್ನೇ ಗತಿಯೆಂದು, ನಾನೇ ಅವರ ಆತ್ಮವೆಂದು ಒಂದೇ ಮನಸ್ಸಿನಿಂದ ಆರಾಧಿಸುತ್ತಾರೋ ಅವರು ಕಾಲಾಂತರದಲ್ಲಿ ಅವರ ಬಯಕೆಯಂತೆ ನನ್ನನ್ನು ಹೊಂದುತ್ತಾರೆ. ಪಾರ್ಥಾ! ನೀನೂ ನಿನ್ನ ಸಂದೇಹಗಳನ್ನೆಲ್ಲ ತೊರೆದು ನನ್ನಲ್ಲಿಯೆ ಮನಸ್ಸನ್ನಿಡು. ನಾನೇ ನಿನಗೆ ಬುದ್ಧಿಯನ್ನು ನೀಡುತ್ತಿದ್ದೇನೆಂದು ಸಮರ್ಪಣಾ ಭಾವದಿಂದ ಕೃತಕೃತ್ಯತೆಯನ್ನು ಆನಂದಿಸು. ನನ್ನನ್ನು ಕುರಿತು ಚಿಂತನೆ ಮಾಡುತ್ತಾ ಅಡಿಯಿಡುತ್ತಾ ಸಾಗುವ ಮನ ಮಾಡು. ಅಚಲವಾದ ಸ್ಥಿರತೆ ಆರಂಭದಲ್ಲಿ ಸಾಧ್ಯವಾಗದೆ ಇದ್ದರೂ ಮತ್ತೆ ಮತ್ತೆ ಪ್ರಯತ್ನಿಸಿ ಸಾಧಿಸಿಕೊಳ್ಳಬೇಕು. ವಿಚಲತೆ ತೊಲಗಿ ಏಕಾಗ್ರತೆ ಪ್ರಾಪ್ತವಾದ ಬಳಿಕ ಬಾಹ್ಯ ಬಾಧೆಗಳು ನಿನಗೆ ಬಾಧಿಸಲಾರವು. ಚಿತ್ತಶುದ್ಧಿಯಾಗಿ ಅನುಗ್ರಹರೂಪದಲ್ಲಿ ಜ್ಞಾನೋದಯವಾದಾಗ ಸಾರ್ಥಕತೆ ನಿನ್ನದಾಗುತ್ತದೆ. ಈ ರೀತಿ ಕರ್ಮ ಮಾಡುವಾಗ ಆ ಕರ್ಮ ಫಲವನ್ನು ನನಗರ್ಪಿಸಿ ಮುಕ್ತಿ ನಿನ್ನದಾಗಿಸು. ಆಗ ಅನುಸರಿಸಿಕೊಂಡು ಶಾಂತಿ ನಿನ್ನ ಮನಸ್ಸನ್ನಾಶ್ರಯಿಸುತ್ತದೆ. ದುಗುಡ ಗೊಂದಲಗಳು ನಿವಾರಿಸಲ್ಪಟ್ಟು ಮನಸ್ಸು ಪರಿಶುದ್ದವಾಗುತ್ತದೆ. ಅರ್ಹತೆ ನಿನಗೊದಗಿ ನೀನು ನನ್ನನ್ನೇ ಹೊಂದುವೆ. ಅವಿವೇಕಿಗಳು ಸರ್ವಥಾ ಈ ಪಥವನ್ನು ಅನುಸರಿಸಲಾಗದು. ಅವರು ಇನ್ನಷ್ಟು ನನ್ನಿಂದ ದೂರವಾಗುತ್ತಾ ಹೋಗುತ್ತಾರೆ. ಈ ರಹಸ್ಯವಾದ ತತ್ವಸಾರ ನಿನಗೆ ತಿಳಿಸಿದ್ದೇನೆ. ಮುಂದೆ ಇಂತಹ ಮಹಾ ಸತ್ಯ ತಿಳಿದು ಬುದ್ಧಿವಂತರಾದವರು ಅನುಸರಿಸುತ್ತಾರೆ. ನೀನು ಈಗ ನಿಷ್ಕಾಮ ಕರ್ಮಿಯಾಗಿ ಧರ್ಮದ ಕರ್ಮದಲ್ಲಿ ತೊಡಗಿಸಿಕೊಳ್ಳಬೇಕು. ಈ ತತ್ವ ರಹಸ್ಯವನ್ನು ತಪಸ್ವಿಯಲ್ಲದ, ಭಕ್ತನಲ್ಲದ, ಕೇಳಲು ಇಚ್ಚೆ ಇಲ್ಲದ, ಅಸೂಯೆ ಪಡುವ, ಭೇದ ಕಲ್ಪಿಸುವ, ಸಹಿಸಲಾಗದವರಿಗೆ ಹೇಳಬಾರದು. ಧರ್ಮಯಜ್ಞ ಸದೃಶವಾದ ಈ ಯುದ್ದದಲ್ಲಿ ನೀನು ನಿಮಿತ್ತ ಮಾತ್ರನೆಂದು ತಿಳಿದು ನನಗೆ ಶರಣಾಗಿ ಸಮರ್ಪಣಾ ಭಾವದಿಂದ ತೊಡಗಿಕೊಂಡು, ಫಲಾಫಲಗಳಿಗೆ ಚ್ಯುತನಾಗದೆ ಕಟಿಬದ್ದನಾಗು. ನಿನ್ನ ರಕ್ಷಣೆಗೆ ನಾನಿರುತ್ತೇನೆ” ಎಂದು ಅಭಯಪ್ರದನಾದನು.

ಅರ್ಜುನ ಪರಮಾತ್ಮನ ಸನ್ನಿಧಾನಕ್ಕೆ ನಮಿಸಿ, “ಭಗವಂತಾ! ನಿನ್ನ ಕೃಪೆಯಿಂದ ಪಾವನನಾಗಿದ್ದೇನೆ. ದಿವ್ಯೋಪದೇಶದಿಂದ ಮನಸ್ಸು ನಿರ್ಮಲವೂ ಪ್ರಶಾಂತವೂ ಆಗಿದೆ. ಮನಮಾಡಿದ್ದ ಗೊಂದಲದ ಭ್ರಾಂತಿ ದೂರವಾಗಿದೆ. ಜಾಗೃತನಾಗಿ ನಿಸ್ಸಂದೇಹನಾಗಿ ಕರ್ಮ ಮಾಡುತ್ತೇನೆ. ಸರ್ವ ಕರ್ಮಗಳನ್ನು ಕೃಷ್ಣಾರ್ಪಣವೆಂದು ಸಮರ್ಪಿಸುತ್ತೇನೆ. ಅನುಗ್ರಹಿಸಿ ಉದ್ಧರಿಸು ದೇವಾ” ಎಂದು ಸಿದ್ಧನಾದನು.

(ಅಮಿತ ತತ್ವಸಾರ, ಸತ್ಯ ಧರ್ಮದ ಸಾಗರ ಸ್ವರೂಪವಾದ ಈ ಉಪದೇಶವೇ ಭಗವದ್ಗೀತೆ. ದೇವರ ಪ್ರಸಾದವನ್ನು ಕಿಂಚಿತ್ ಸೇವಿಸಿ ಧನ್ಯರಾಗುವಂತೆ ಮತಿಯ ಮಿತಿಗೆ ಪ್ರಾಪ್ತವಾದಷ್ಟನ್ನು ಸಂಕ್ಷಿಪ್ತವಾಗಿ ನಿರೂಪಿಸುವ ಪ್ರಯತ್ನ ಮಾಡಲಾಗಿದೆ.)

ಕೃಷ್ಣ ಸಾರಥ್ಯದಲ್ಲಿ ಗಾಂಡೀವಧಾರಿ ಅರ್ಜುನ ಸಮರ ಸನ್ನದ್ಧನಾಗಿ ನಿಷ್ಕಾಮ ಕರ್ಮಾಚರಣೆಗೆ ಎದ್ದು ನಿಂತಿದ್ದಾನೆ.

ಮುಂದುವರಿಯುವುದು…

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page