ಭಾಗ 334
ಭರತೇಶ್ ಶೆಟ್ಟಿ, ಎಕ್ಕಾರ್

ಸಂಚಿಕೆ ೩೩೪ ಮಹಾಭಾರತ
“ಹೇ ಗೂಢಾಕೇಶನೇ! ಯೋಗ ಮತ್ತು ಯೋಗಸಾಧನೆಯ ಬಗ್ಗೆ ತಿಳಿಯುವ ಮೊದಲು ಕರ್ಮ ಹೇಗಿರುತ್ತದೆ ಎಂದು ತಿಳಿಯಬೇಕು. ಕರ್ಮಗಳಲ್ಲಿ ಎರಡು ವಿಧಗಳಿವೆ. ಮೊದಲನೆಯದು ಕಾಮ್ಯ ಕರ್ಮ ಮತ್ತೊಂದು ನಿಷ್ಕಾಮ ಕರ್ಮ. ಏನನ್ನಾದರು ಬಯಸಿ, ಅದನ್ನು ಪಡೆಯುವುದಕ್ಕೊಸ್ಕರ ಹಂಬಲಿಸಿ ಕರ್ಮಸಾಧನೆಗೆ ತೊಡಗುವುದು ಕಾಮ್ಯ ಕರ್ಮ. ಇಲ್ಲಿ ಸಾಧಿಸಲು ತೊಡಗುವ ಉದ್ದೇಶ, ಮತ್ತು ಉಪಕ್ರಮ ನಿರ್ಣಾಯಕವಾಗುತ್ತದೆ. ಕೆಲವರು ವಾಮಮಾರ್ಗ ಅನುಸರಿಸಿ, ಕುತಂತ್ರದಿಂದ, ಏನನ್ನಾದರೂ ಮಾಡುವುದಕ್ಕೆ ಹಿಂಜರಿಯದೆ, ಅನ್ಯಾಯ, ಅಧರ್ಮವನ್ನಾದರೂ ಮಾಡಿ ಶಕುನಿ ದುರ್ಯೋಧನರಂತೆ ತಮಗೆ ಬೇಕಾದುದನ್ನು ಪಡೆದುಕೊಳ್ಳುತ್ತಾರೆ. ಆದರೆ ಹಾಗೆ ಅನ್ಯಾಯದಿಂದ, ನೀಚ ಬುದ್ದಿ ಉಪಯೋಗಿಸಿ, ದುಷ್ಟರಾಗಿ ಪಡೆದ ಅದು ಏನೇ ಆಗಿದ್ದರೂ ಒಮ್ಮೆಗೆ ಮಾತ್ರ ಅವರದ್ದಾಗುತ್ತದೆ. ಅಂತಹ ದುರುಳರು ಅನುಭವಿಸಲು ಯೋಗ್ಯರಲ್ಲದ ಕಾರಣ ಸರ್ವಸ್ವವನ್ನೂ ಕಳಕೊಂಡು ನಿಕೃಷ್ಟ ಸ್ಥಿತಿಗೆ ಜಾರಿ ಅಧಃಪತನ ಹೊಂದುತ್ತಾರೆ. ಜೀವನದಲ್ಲಿ ತಾವು ಮಾಡಿದ ಅಧರ್ಮಕ್ಕೆ ತಕ್ಕ ಫಲವನ್ನೂ ಅನುಭವಿಸುತ್ತಾರೆ. ಇನ್ನು ಕೆಲವರು ತಾವು ಬಯಸಿದುದನ್ನು ಜೀವನದ ಗುರಿಯಾಗಿಸಿ, ಪರಿಶ್ರಮ ಮಾರ್ಗದಿಂದ ಸಾಹಸಪಟ್ಟು ಸಂಪಾದಿಸುತ್ತಾರೆ. ಇಂತಹ ಶ್ರಮಜೀವಿಗಳು ಅನುಭವಿಸುವುದಕ್ಕೆ ಯೋಗ್ಯರಾಗಿರುತ್ತಾರೆ. ಸುಖವನ್ನು ತಡವಾಗಿಯಾದರೂ ಹೊಂದುತ್ತಾರೆ.
ಇನ್ನೊಂದು ಬಗೆಯ ಕರ್ಮ ತೀರಾ ಭಿನ್ನವಾದುದು. ಇಲ್ಲಿ ಯಾವುದೇ ಬಯಕೆ ಇರುವುದಿಲ್ಲ. ಸಂಪಾದನೆಯ ಉದ್ದೇಶವೂ ಇರುವುದಿಲ್ಲ. ಆದರೂ ಕರ್ಮಗೈಯುತ್ತಾ ಲೋಕಕಲ್ಯಾಣಕ್ಕೆ ಕಾರಣೀಭೂತರಾಗುತ್ತಾರೆ. ಈ ರೀತಿಯ ಕಾಮರಹಿತ ಕರ್ಮವನ್ನು ನಿಷ್ಕಾಮ ಕರ್ಮ ಎನ್ನಲಾಗುತ್ತದೆ. ಇಲ್ಲಿ ಮನಸ್ಥಿತಿಯೂ ಭಿನ್ನವಾಗಿರುತ್ತದೆ. ತಾನು ಕರ್ಮ ಮಾಡಿದರೂ, ಉಪಕಾರಿಯಾಗಿದ್ದರೂ ಏನೂ ಮಾಡದವರಂತೆ ನಿರ್ಮಲ ಚಿತ್ತದಿಂದ ಮತ್ಯಾವುದೊ ಸತ್ಕರ್ಮ ನಿರತರಾಗಿರುತ್ತಾರೆ. ಅರ್ಜುನಾ! ಇಂತಹ ನಿಷ್ಕಾಮ ಕರ್ಮದ ಚಿತ್ತ ಬರಬೇಕಾದರೆ ಆತನಿಗೆ ಸದಾ ಆತ್ಮ ಚಿಂತನೆ ಜಾಗೃತವಾಗಿರಬೇಕು. ತನ್ನ ಬುದ್ದಿಯನ್ನು ಸ್ಥಿರವಾಗಿ ನೆಲೆನಿಲ್ಲಿಸಬೇಕು. ಮನಸ್ಸಿನ ಎಲ್ಲಾ ಬಯಕೆಗಳನ್ನೂ ವಿವರ್ಜಿಸಬೇಕು. ಮನೋ ವಿಕಾರಗಳು, ಸುಖ ದುಃಖಗಳು, ರಾಗದ್ವೇಷಗಳೆಲ್ಲವನ್ನು ಕೊಡಹಿ ಕಳಚಿಕೊಂಡಿರಬೇಕು. ತಾನು ಮಾಡುವ ಕರ್ಮಗಳನ್ನು ಯಜ್ಞ ಎಂದು ಭಾವಿಸಿ ಮಾಡಬೇಕು. ಹೀಗೆ ಕರ್ಮವನ್ನು ಕುಶಲಗಾರಿಕೆಯಿಂದ, ಮನಸ್ಪೂರ್ವಕವಾಗಿ ಗೈಯುವುದನ್ನು ಯೋಗ ಎಂದು ತಿಳಿಯಬೇಕು. ಹೀಗೆ ಯೋಗಸದೃಶ ಯಜ್ಞಕರ್ಮವನ್ನು ಮಾಡುವಾಗ ತಾನು ಹಾಗೆ ಮಾಡುವುದಕ್ಕಷ್ಟೆ ಬಾಧ್ಯನು, ಅದರ ಫಲವನ್ನು ಅನುಭವಿಸುದಕ್ಕಲ್ಲ ಎಂದು ತಿಳಿದಿರಬೇಕು. ಹೀಗೆ ಜ್ಞಾನಿಯಾಗಿ ಕರ್ಮಾರಂಭಕ್ಕೆ ಮೊದಲು ಅದರ ಫಲವನ್ನು ಬುದ್ಧಿಪೂರ್ವಕವಾಗಿ ಲೋಕಹಿತಕ್ಕಾಗಿ ತ್ಯಾಗ ಮಾಡಬೇಕು. ಹೀಗೆ ಮಾಡುವುದರಿಂದ ಕರ್ಮಫಲದ ಯಾವ ಸೋಂಕು ಕರ್ಮಿಗೆ ಫಲಿಸುವುದಿಲ್ಲ – ಕರ್ಮದ ಬಂಧನವೂ ಇರುವುದಿಲ್ಲ. ಹೀಗೆ ಮಾಡುವ ಯೋಗಿ ಸತ್ಕರ್ಮವನ್ನು ಮಾಡಿಯೂ ಏನೂ ಮಾಡದವನಂತೆ ಇರುತ್ತಾನೆ. ಈ ರೀತಿ ವ್ಯವಹರಿಸುವುದರಿಂದ ಭಗವಂತನಿಗೆ ಸಂಪ್ರೀತಿಯಾಗಿ ಸುಜ್ಞಾನ ಪ್ರಾಪ್ತವಾಗುತ್ತದೆ. ಅಂತಹ ಜ್ಞಾನ ಸಾಧನವಾಗಿ ಮೋಕ್ಷ ಮಾರ್ಗವನ್ನು ಮುಕ್ತಗೊಳಿಸುತ್ತದೆ. ಅಂದರೆ ಕರ್ಮ ಮಾಡುವುದಕ್ಕಾಗಿಯೆ ಹುಟ್ಟಿರುವ ಮನುಷ್ಯನು, ನಿಷ್ಕಾಮ ಕರ್ಮಿಯಾದಾಗ, ಅದರ ಫಲವನ್ನು ಅಪೇಕ್ಷಿಸದೆ ಬೆಳೆದಾಗ ಕರ್ಮಬಂಧನದ ಕಟ್ಟು ಕಳಚಲ್ಪಡತೊಡಗುತ್ತದೆ. ಮುಳ್ಳಿನಿಂದ ಮುಳ್ಳನ್ನು ತೆಗೆದ ಹಾಗೆ ಕರ್ಮ ಬಂಧನವನ್ನು ಕರ್ಮದಿಂದಲೆ ಕಳಚಿಕೊಳ್ಳುವ ಸಾಧನೆಯೆ ಯೋಗಸಾಧನೆ. ಅರ್ಜುನಾ, ನೀನು ಮನುಷ್ಯನಾಗಿ ಹುಟ್ಟಿರುವೆ. ಕರ್ಮವನ್ನು ಮಾಡದೆ ನಿನಗೆ ನಿರ್ವಾಹವಿಲ್ಲ. ಬಂಧ ಮುಕ್ತನಾಗಬೇಕಾದರೆ ನೀನು ಕರ್ಮಮಾರ್ಗವನ್ನು ಅನುಸರಿಸಬೇಕು. ಕ್ಷತ್ರಿಯನಾದ ನಿನಗೆ ಯುದ್ದ ಸ್ವಧರ್ಮವೂ ಸ್ವಕರ್ಮವೂ ಆಗಿದೆ. ನೀನು ನಿನ್ನ ಧರ್ಮ ಮತ್ತು ಕರ್ಮದಿಂದ ವಿಮುಖನಾಗಬಾರದು. ಕರ್ಮಧರ್ಮವಾದ ಯುದ್ದದಲ್ಲಿ ತೊಡಗುವಾಗ ತಾನು ಯುದ್ದ ಮಾಡುತ್ತೇನೆ, ಗೆಲ್ಲುತ್ತೇನೆ ಎಂದು ಭಾವಿಸಬೇಡ. ಹಾಗೆ ಮಾಡಿದರೆ ಅದು ಅಹಂಕಾರದ ಸೃಷ್ಟಿಗೆ ಕಾರಣವಾಗುತ್ತದೆ. ಮಾಡುವುದಷ್ಟು ಮಾತ್ರ ನನ್ನ ಕೆಲಸ – ಮತ್ತು ಅದೇ ನನಗೆ ಕರ್ತವ್ಯ ಎಂದಷ್ಟನ್ನು ಮಾತ್ರ ತಿಳಿದು ಮಾಡು. ಹೀಗೆ ಮಾಡುವುದರಿಂದ ಸ್ವಧರ್ಮ ಮತ್ತು ಸ್ವಕರ್ಮದ ಪಾಲನೆಯಾಗುತ್ತದೆ. ನಿಷ್ಕಾಮ ಕರ್ಮಿಯಾಗಿ ಅದರ ಫಲವನ್ನು ಲೋಕಹಿತಕ್ಕಾಗಿ ಸಮರ್ಪಿಸಿಬಿಡು. ಆಗ ನಿನಗೆ ಪಾಪ ಪುಣ್ಯಗಳ ಲೇಪ ತಗುಲದು. ಇನ್ನೂ ಒಂದು ಜಗದ ನಿಯಮ – ನಿಯತಿಯ ನೀತಿಯನ್ನು ಹೇಳಿ ಎಚ್ಚರಿಸುತ್ತಿದ್ದೇನೆ. ಇಂದು ನೀನು ಕರ್ಮ ನಿರತನಾಗದೆ, ಯುದ್ದ ಮಾಡದೆ ಉಳಿದೆ ಎಂದಾದರೂ ಇವರ್ಯಾರೂ ಬದುಕಿ ಉಳಿಯಲಾರರು. ಅವರ ಅವಧಿ ಮುಗಿದಾಗ ಸತ್ತು ತೀರಬೇಕಾದವರು. ಹಾಗಿದ್ದರೆ ನೀನು ಮಾಡುವಂತಹದು ಏನು? ನೀನು ಯಾರನ್ನೂ ಕೊಲ್ಲುತ್ತಿಲ್ಲ. ಕಾಲ ಚಕ್ರದ ಚಲನೆಯ ಜೊತೆ ಚಲಿಸುತ್ತಿರುವೆ! ನಿಮಿತ್ತ ಮಾತ್ರವಾಗಿ ನೀನು ಕರ್ಮ ಮಾಡುತ್ತಿರುವೆ. ಆದುದರಿಂದ ಸ್ವಧರ್ಮ ಮತ್ತು ಸ್ವಕರ್ಮವನ್ನು ತೊರೆಯದೆ ತೊಡಗಿಕೋ. ಒಂದು ವೇಳೆ ನಿನ್ನದ್ದಾದ ಧರ್ಮ ಕರ್ಮಗಳನ್ನು ಬಿಟ್ಟು ಬಿಟ್ಟೆ ಎಂದಾದರೆ ನೀನು ಮೋಕ್ಷ ಪಥದಿಂದ ವಿಮುಖನಾಗಿ ಜನ್ಮಾಂತರಗಳ ಜೀವರುಗಳ ಚಕ್ರದಲ್ಲಿ ಸುತ್ತುವುದಕ್ಕೆ ಸಿದ್ಧನಾಗಬೇಕಾಗುತ್ತದೆ. ನೀನು ಈ ಜೀವನ ಧರ್ಮವನ್ನು ಅರಿತುಕೊಂಡು, ವಿಚಾರ ಮಾಡಿ, ಪರಿಶುದ್ಧವಾದ ಬುದ್ದಿಯಿಂದ ವಿವೇಚಿಸಿ ನಿನಗೆ ಯಾವುದು ಸರಿ ಎಂದು ತೋರುತ್ತದೊ ಹಾಗೆ ಮಾಡು” ಎಂದು ಶ್ರೀ ಕೃಷ್ಣ ನಿರ್ದೇಶನ ಮಾಡಿದನು.
ಅರ್ಜುನನ ಕಾತರ ಇನ್ನಷ್ಟು ವಿಶಾಲವಾಯಿತು. “ಕೇಶವಾ! ಈ ಜೀವನಧರ್ಮ ಬಹಳ ನಿಗೂಢವಾಗಿದೆ. ಜೀವನದ ಪ್ರತಿ ಹೆಜ್ಜೆಗಳಲ್ಲೂ ಧರ್ಮ ಮತ್ತು ಕರ್ಮದ ಜಾಗೃತಿ ಅತ್ಯವಶ್ಯವಾಗಿದೆ ಎಂಬ ಸತ್ಯ ತಿಳಿಯಿತು. ಪರಮಾತ್ಮಾ! ಮಹತ್ತರವಾದ ಸುಜ್ಞಾನದ ಈ ಜೀವನ ಧರ್ಮ ರಹಸ್ಯ ಯಾರಿಂದ ಉಪದೇಶಿಸಲ್ಪಟ್ಟಿರುವುದು? ಈ ಹಿಂದೆ ಯಾರಾದರು ಈ ಸತ್ಯ ತಿಳಿದಿರುವರೆ? ತಿಳಿದು ಅನುಸರಿಸಿ ಬವ ಬಂಧನದಿಂದ ಮುಕ್ತರಾದವರು ಇದ್ದಾರೆಯೆ? ದಯವಿಟ್ಟು ನನ್ನ ಸಮಾಧಾನಕ್ಕಾಗಿ ಅಂತಹ ಸತ್ಯವನ್ನು ತಿಳಿಸಬೇಕು” ಎಂದು ಬೇಡಿದನು.
ಮುಂದುವರಿಯುವುದು…



















































