ಭಾಗ – 330
ಭರತೇಶ್ ಶೆಟ್ಟಿ, ಎಕ್ಕಾರ್

ಸಂಚಿಕೆ ೩೩೦ ಮಹಾಭಾರತ
ಮುಗ್ಧ ಮಗುವಿನಂತೆ ಅಳುತ್ತಿದ್ದ ಅರ್ಜುನನನ್ನು ಹಿಡಿದೆಬ್ಬಿಸಿ ಕಣ್ಣೊರಸಿದ ಶ್ರೀಕೃಷ್ಣ ಪರಮಾತ್ಮ. “ಅರ್ಜುನಾ! ನಿನಗೆ ವಿಶೇಷವೂ ದಿವ್ಯವೂ ಆದುದನ್ನು ತಿಳಿಸುತ್ತೇನೆ. ಕೇಳಿ ಶ್ರೇಯೋವಂತನಾಗು” ಎಂದು ಹರಸಿ ಪರಮೋಚ್ಚವಾದ ಉಪದೇಶವನ್ನು ಪರಮಾತ್ಮ ಆರಂಭಿಸಿದನು.
ದಿವ್ಯ ಉಪದೇಶ ಆರಂಭವಾಗುತ್ತಿರುವುದು ರಣಕ್ಷೇತ್ರದಲ್ಲಿ. ಅರ್ಜುನನ ಮನಸ್ಸು ಕೂಡ ಭಾವನೆಗಳ ಪರ ವಿರೋಧದ ಹೋರಾಟದಿಂದಾಗಿ ರಣರಂಗವೆ ಆಗಿತ್ತು. ಆದರೆ ವಾಸುದೇವನೊಂದಿಗಿನ ಜಿಜ್ಞಾಸೆಯ ಪರಿಣಾಮ ಹದಗೊಂಡು ಧರ್ಮ ಕ್ಷೇತ್ರವಾಗಿ ಬದಲಾಗಿದೆ. ಶ್ರೀಕೃಷ್ಣನು ಗುರುವಾಗಿ ಶಿಷ್ಯ ಅರ್ಜುನನಿಗೆ ದಿವ್ಯೋಪದೇಶಾಮೃತ ಕರುಣಿಸಿದನು. ದಿವ್ಯಧೇನುವಿನಂತೆ ಕೃಷ್ಣನೂ ಅಮೃತಸದೃಶ ಕ್ಷೀರಪಾನಗೈಯ್ಯುವ ಕರುವಿನಂತೆ ಅರ್ಜುನನಿದ್ದಾನೆ. ಮಹತ್ತರವಾದ ಸತ್ಯವೂ, ಅನಂತವೂ, ಅಮೋಘವೂ, ಅನನ್ಯವೂ, ಅವ್ಯಕ್ತವೂ ಆದ ಉಪದೇಶವನ್ನು ಪ್ರಾರಂಭಿಸಿದನು.
(ಶ್ರೀಕೃಷ್ಣ ನಿರೂಪಿಸಿದ ಉಪದೇಶ- ಅರ್ಜುನ ಪರಿಗ್ರಹಿಸಿಕೊಂಡ ಜ್ಞಾನ ಅಮಿತವಾದುದು. ಇವರೀರ್ವರ ಮಧ್ಯೆ ಸಾಗಿದ ಧರ್ಮೋಪದೇಶವನ್ನು ಯಥವತ್ತಾಗಿ ಅರಿತು ವಿವರಿಸಲು ಈ ವರೆಗೆ ಯಾರೂ ಶಕ್ಯರಾಗಿಲ್ಲ. ಸಾಗರದ ನೀರಿನಂತೆ ಅನಂತವಾಗಿರುವ ಈ ತತ್ವಸಾರವನ್ನು ಬಿಂದು ಜಲ ಅಪೋಷಣೆ ಮಾಡಿ ರುಚಿ ನೋಡುವಂತಹ ಸಾರಾಂಶಗ್ರಾಹಿಗಳಾಗುವ ಪ್ರಯತ್ನವಷ್ಟನ್ನು ಮಾಡಬಹುದು. ಎಲ್ಲರಿಗೂ ಪರಮಾತ್ಮನ ಶ್ರೀರಕ್ಷೆ ಇರಲಿ.)
“ಅರ್ಜುನಾ! ನೀನು ಅಜ್ಞಾನಿಯಲ್ಲ. ಮಹತ್ತರವಾದ ಶಾಸ್ತ್ರಗಳನ್ನೆಲ್ಲ ಅಧ್ಯಯನ ಮಾಡಿದವನು ಆಗಿರುವೆ. ಆದರೂ ನಿನ್ನ ಮನದಲ್ಲಿ ಬಂಧುಗಳ ಬಗೆಯಲ್ಲಿ ವ್ಯಾಮೋಹ ಉತ್ಪನ್ನವಾಯಿತು. ನೀನು ಈವರೆಗೆ ತಿಳಿಯಲಾಗದೆ ಉಳಿದ ನಿತ್ಯ ಸತ್ಯವೊಂದಿದೆ. ನಾವು ಹೇಗೆ ವಸನ ಧರಿಸಿ, ಕಾರ್ಯ ಪೂರೈಸಿ ಆ ಬಳಿಕ ಕೊಳೆಯಾದ ವಸ್ತ್ರವನ್ನು ಹೇಗೆ ಕಳಚಿ ಬೇರೊಂದನ್ನು ಬಳಸುವುದು ಸತ್ಯವಲ್ಲವೆ? ಹಾಗೆಯೆ ಈ ಶರೀರ ಎನ್ನುವುದು ವಸ್ತ್ರದಂತೆ, ಉದ್ದೇಶ ಪೂರೈಕೆ ಆಗುವವರೆಗೆ ಆತ್ಮ ಬಳಸಿಕೊಳ್ಳುತ್ತದೆ, ಆನಂತರದಲ್ಲಿ ತೊರೆಯುತ್ತದೆ. ಹಾಗಿದ್ದರೆ ಅಂತ್ಯ ಎನ್ನುವುದು ಭೌತಿಕವಾದ ಶರೀರಕ್ಕೆ ಮಾತ್ರ ಹೊರತು ಆತ್ಮಕ್ಕಿಲ್ಲ. ಕತ್ತರಿಸಲ್ಪಡುವುದು, ಕೊಲ್ಲಲ್ಪಡುವುದು, ಸುಡಲ್ಪಡುವುದು ಶರೀರವೆ ಹೊರತು ಆತ್ಮವಲ್ಲ. ಆತ್ಮ ಸದಾ ದೇಹಾಂತರಗೊಳ್ಳುತ್ತಿರುತ್ತದೆ. ಹೀಗಿರಲು ಇಲ್ಲಿ ಕಾಣುತ್ತಿರುವ ಎಲ್ಲರೂ ನೀನು ನಾನು ಸಹಿತ ತಾತ್ಕಾಲಿಕವಾದ ಶರೀರ ಎಂಬ ನಿವಾಸದಲ್ಲಿ ವಾಸ್ತವ್ಯವಿದ್ದು ಆತ್ಮಕ್ಕೆ ಮುಂದಿನ ಗತಿ ಪ್ರಾಪ್ತವಾಗುವವರೆಗೆ ಈ ಗುರುತಿನಿಂದ ಕಾಣಿಸಿಕೊಂಡಿರುತ್ತೇವೆ. ಹಾಗಾಗಿ ಇಂದು ನಾವು ಜೀವಂತವಾಗಿರುವುದು ಶರೀರ ಮಾಧ್ಯಮದಲ್ಲಿ ಆತ್ಮ ಇರುವವರೆಗೆ ಜೀವನ. ಆತ್ಮನು ಆಯುಧಗಳಿಂದ ಛೇದಿಸಲ್ಪಡುವುದಿಲ್ಲ, ಬೆಂಕಿಯಿಂದ ಸುಡಲ್ಪಡುವುದಿಲ್ಲ, ಗಾಳಿಯಿಂದ ಶುಷ್ಕವಾಗುವುದಿಲ್ಲ, ನೀರಿನಿಂದ ತೋಯಿಸಲ್ಪಡುವುದಿಲ್ಲ. ಅಂದರೆ ಆತ್ಮ ಅವಿನಾಶಿಯಾಗಿದ್ದು, ಒಂದು ಶರೀರ ಜೀರ್ಣವಾದಾಗ ಹೊಸ ಜೀವವನ್ನು ಸೇರಿ ಮತ್ತೆ ಜೀವನಚಕ್ರ ಮುಂದುವರಿಯುತ್ತದೆ. ದೇಹವು ಪಂಚಭೌತಿಕವಾದುದು – ನಾಶಗೊಳ್ಳುವಂತಹುದು. ಆತ್ಮವು ಅವಿನಾಶಿಯಾದುದು. ಹಾಗಾಗಿ ಯಾರೆ ಆಗಲಿ ಮೃತರಾದರೆ ಅರಿತವರು ಅಳುವುದಾಗಲಿ, ಶೋಕತಪ್ತರಾಗುವುದಾಗಲಿ ಆಗಲಾರರು. ಬಲ್ಲವರು ಅರಿತು ಶಾಂತ ಚಿತ್ತದಿಲ್ಲಿರುತ್ತಾರೆ” ಎಂದು ಶ್ರೀಕೃಷ್ಣ ಪರಮಾತ್ಮ ವಿವರಿಸಿದನು.
ಅರ್ಜುನ ” ಕೇಶವಾ! ಈ ಹುಟ್ಟು ಸಾವುಗಳ ಗುಟ್ಟೇನು? ಹುಟ್ಟಿದವ ಒಂದಲ್ಲ ಒಂದು ದಿನ ಸಾಯಲೆ ಬೇಕು ಎಂಬ ನಿಯಮದ ಅರ್ಥವೇನು? ಆತ್ಮವು ಒಂದು ದೇಹವನ್ನು ಬಿಟ್ಟು ಇನ್ನೊಂದನ್ನು ಹೊಂದುವ ಆ ಕಾರ್ಯವು ಹೇಗೆ ನಡೆಯುತ್ತದೆ. ಹೇ! ದಯಾನಿಧಿ ಪರಮಾತ್ಮಾ! ಈ ಧರ್ಮಸೂಕ್ಷ್ಮವನ್ನು ವಿವರಿಸು ದೇವಾ…” ಎಂದು ಬೇಡಿಕೊಂಡನು.
ಮುಂದುವರಿಯುವುದು…



















































