ಭಾಗ – 329
ಭರತೇಶ್ ಶೆಟ್ಟಿ, ಎಕ್ಕಾರ್

“ಕೃಷ್ಣಾ! ನಿನಗೆ ನಾನು ಸಖನೂ ಹೌದು, ಭಕ್ತನೂ ಹೌದು. ನನ್ನ ಮನದ ಗೊಂದಲ ಪರಿಹರಿಸಬೇಕು. ನಿನ್ನ ಮಾತನ್ನು ಸದಾ ಪ್ರಶ್ನಾತೀತವಾಗಿ ಪಾಲಿಸುತ್ತಾ ಬಂದವನು ಈ ಅರ್ಜುನ. ಆದರೆ ಇಂದಿನ ವಿಚಾರದಲ್ಲಿ ನೀನು ಸಾಕಷ್ಟು ಸಮರ್ಥನೆ ನೀಡಿರುವೆಯಾದರೂ, ನನ್ನ ಮನದ ಗೊಂದಲ ಹಾಗೆಯೆ ಉಳಿದಿದೆ. ಅಂದು ವನವಾಸದ ಸಮಯ ಗಂಧರ್ವ ಚಿತ್ರಸೇನ ದುರ್ಯೋಧನನ್ನು ಸೆರೆ ಹಿಡಿದು ಎಳೆದೊಯ್ಯುವಾಗ, ಒಳಿತಾಯಿತು ಎಂದು ಭೀಮಸೇನ ಹೇಳಿದ್ದನು. ನಮ್ಮೊಳಗೆ ಆಂತರಿಕ ವಿವಾದವಿದ್ದರೆ ಆಗ ನಾವೈವರು. ಹೊರಗಿನ ವಿಚಾರ ಬಂದಾಗ ಚಂದ್ರವಂಶೀಯರು ನಾವು ನೂರೈದು ಮಂದಿ ಎಂದು ಹೇಳಿ, ಬಿಡುಗಡೆಗೊಳಿಸದಿದ್ದರೆ ಉಪವಾಸ ಸತ್ಯಾಗ್ರಹ ಮಾಡುವುದಾಗಿ ಅಣ್ಣ ಧರ್ಮರಾಯನು ಹೇಳಿದಾಗ ಅನ್ಯ ಮಾರ್ಗವಿಲ್ಲದೆ ನಾನು ಚಿತ್ರಸೇನನೊಡನೆ ಕಾದಾಡಿ ಕೌರವನನ್ನು ಬಿಡುಗಡೆಗೊಳಿಸುವ ಹಾಗಾಗಿತ್ತು. ಧರ್ಮಸಮ್ಮತವಾಗಿ ಅಣ್ಣನ ನಿರ್ಧಾರ ಸರಿಯಾಗಿ ಇತ್ತು. ಇನ್ನು ನಮ್ಮವರ ರಕ್ಷಣೆ, ಧರ್ಮ ಪಾಲನೆಯ ಬಗ್ಗೆ ಹೇಳುವುದಾದರೆ, ನನಗದು ಕರ್ತವ್ಯವೂ ಹೌದು. ನಾನು ನಮ್ಮ ರಾಣಿ ದ್ರೌಪದಿ ಹಾಗು ಸೋದರರ ಹಿತರಕ್ಷಣೆಗಾಗಿ ದುಡಿಯಬೇಕಾದನು ನಿಜ. ಅವರ ರಕ್ಷಣೆ ಮಾಡಬೇಕಾದರೆ ಈ ಯುದ್ದದಿಂದ ಆಗಬೇಕೆಂದೇನೂ ಇಲ್ಲ. ಸ್ವಜನ ಬಂಧುಗಳ ಕೊಲೆ ನನ್ನವರ ರಕ್ಷಣೆಗೆ ಅನಿವಾರ್ಯವೂ ಅಲ್ಲ. ಸ್ವತಂತ್ರವಾಗಿ ಹೇಗೊ ನೆಮ್ಮದಿಯಿಂದ ನಾವು ಬದುಕಬಲ್ಲೆವು. ಹಾಗೆಂದು ಹೇಡಿಯಾಗಿ ಈ ಯುದ್ದದಿಂದ ನಾನು ಹಿಂದುಳಿಯುತ್ತಿರುವುದಲ್ಲ. ನಮ್ಮವರಾದ, ಬಹು ಪ್ರೀತರೂ ಆಗಿರುವ ಪಿತಾಮಹ ಭೀಷ್ಮಾಚಾರ್ಯರು, ಗುರು ದ್ರೋಣಾಚಾರ್ಯರು ನನಗೆ ಪೂಜನೀಯರು ಆಗಿದ್ದಾರೆ. ಅಂತಹವರನ್ನು ಸಂಹರಿಸುವುದಕ್ಕೆ ನನಗೆ ಮನಸ್ಸಾದರೂ ಬಂದೀತೆ ಕೃಷ್ಣಾ. ನೀನೇನೋ ಅದೇ ಧರ್ಮ ಎನ್ನುತ್ತಿರುವೆ. ಸಂಪತ್ತು, ಸಾಮ್ರಾಜ್ಯ, ಅಧಿಕಾರ ಸ್ಥಾಪನೆ ಗುರಿಯಾಗಿರುವ ಈ ಯುದ್ದ ಒಂದರ್ಥದಲ್ಲಿ ಪ್ರತಿಷ್ಟೆ, ಸ್ವಾರ್ಥ ಸಾಧನೆಯ ಪಥದಲ್ಲಿ ಸಾಗುತ್ತಿರುವಂತೆ ಕಾಣುವುದಿಲ್ಲವೆ? ಹಾಗಾದರೆ ಸ್ವಾರ್ಥಿಯಾಗಿ ರಾಜ್ಯಲೋಭದ ಉದ್ದೇಶದಿಂದ ಮಾಡುವ ಈ ಕಾರ್ಯ ಹೇಗೆ ನನಗೆ ಕರ್ತವ್ಯ – ಧರ್ಮ ಆಗಲು ಸಾಧ್ಯ? ಪರಿಣಾಮವಾಗಿ ನನ್ನ ಗತಿ ದುರ್ಗತಿಯಾಗದೆ? ಹತ್ಯೆಯ ಪಾಪದ ಲೇಪ ನನಗೆ ಮೆತ್ತಿಕೊಳ್ಳುವುದಿಲ್ಲವೆ ಕೇಶವಾ? ನನ್ನ ಜೀವನಾಂತ್ಯದ ಬಳಿಕ ನರಕಲೋಕ ಪ್ರಾಪ್ತವಾಗದೆ?” ಎಂದು ಅರ್ಜುನ ತನ್ನ ಮನದ ಮಾತನ್ನು ಬಿಚ್ಚಿಟ್ಟನು.
“ಅರ್ಜುನಾ! ಇನ್ನೂ ನೀನು ಮೋಹಪಾಶದಲ್ಲಿ ಬಂಧಿತನಾಗಿರುವೆ. ಮುಕ್ತನಾಗದೆ ಉಳಿದೆ ಎಂದಾದರೆ ಧರ್ಮ ಸಂರಕ್ಷಣೆಯಾಗದು. ನೀನು ಈಗಾಗಲೆ ಮಾಡಿಯಾಗಿರುವ ಕೃತಿಯ ಬಗ್ಗೆ ನನ್ನಲ್ಲೊಂದು ಪ್ರಶ್ನೆ ಉತ್ಪನ್ನವಾಗಿದೆ. ಅಂದು ನೀವು ಗುಪ್ತವಾಸದಲ್ಲಿರುವ ಸಮಯ ನಿನ್ನ ಇದೇ ಬಂಧು ಜನರು ಗೋ ಅಪಹರಣಕಾರರಾಗಿ ವಿರಾಟ ನಗರಿಯಲ್ಲಿ ಕಾಣಿಸಿಕೊಂಡರು. ಆ ಸಮಯ, ನೀನು ಯಾವುದೆ ಅಳುಕಿಲ್ಲದೆ ಏಕಾಂಗಿಯಾಗಿ ಹೋರಾಡಿ ಅಪಹೃತ ಗೋವುಗಳನ್ನು ಬಂಧ ಮುಕ್ತಗೊಳಿಸಿದ್ದೆ. ಅಂದಿನ ನಿನ್ನ ಮನಸ್ಥಿತಿಗೆ ಬಂಧುತ್ವ, ಹಿರಿಯ ಪಿತಾಮಹ, ಗುರು ದ್ರೋಣರ ಆಚಾರ್ಯ ಭಕ್ತಿ ಅಡ್ಡಿಪಡಿಸಲಿಲ್ಲವೇಕೆ? ಆ ದಿನ ನಿನ್ನ ಹೋರಾಟ ಕರ್ತವ್ಯವೂ, ಧರ್ಮವೂ ಆಗಿ ನಿನಗೇಕೆ ಭಾಸವಾಗಿತ್ತು?”
“ಕೃಷ್ಣಾ! ಅಂದು ನಾವು ವಿರಾಟನ ಆಶ್ರಿತರಾಗಿದ್ದೆವು. ಆಶ್ರಯವಿತ್ತ ವಿರಾಟನಿಗೆ ನಾವ್ಯಾರೆಂದು ತಿಳಿಯದಿದ್ದರೂ, ಅನ್ನ – ಆಶ್ರಯದಾತನಾದ ಅವನಿಗೆ ಬಂದ ವಿಪತ್ತನ್ನು ಪರಿಹರಿಸುವುದು ನನಗೆ ಕರ್ತವ್ಯವಾಗಿತ್ತು. ಬಂಧು ಜನರು ಆ ಅನ್ಯಾಯ ಮಾಡಿದ್ದರೂ ಕರುಣೆ ತೋರುವ ಸ್ಥಿತಿ ನನ್ನದಾಗಿರಲಿಲ್ಲ. ಹಾಗಾಗಿ ಯುದ್ದ ಮಾಡಿದರೂ, ಯಾರ ಕೊಲೆಯನ್ನೂ ಮಾಡದೆ ಗೋವುಗಳನ್ನು ಬಿಡಿಸಿಕೊಳ್ಳಲೇಬೇಕಾದ ಅನಿವಾರ್ಯತೆ ಬಂದೊದಗಿತು.”
“ಅರ್ಜುನಾ! ನೀನು ಸತ್ಯವೂ ಧರ್ಮವೂ ಆದುದನ್ನೇ ಹೇಳಿದೆ. ಯಾರು ಅನ್ಯಾಯ ಅಧರ್ಮ ಮಾಡುತ್ತಾರೋ ಅವರನ್ನು ದಂಡಿಸುವುದು ಧರ್ಮ. ಅವರು ಬಂಧುಗಳೋ, ಪ್ರೀತರೋ, ಪೂಜ್ಯರೋ ಎಂದು ವಿಭಾಗಿಸಿ ಅಳೆದು ತೂಗಿ ಕೂರಲಾಗದು. ಬಾಂಧವರು ಹೌದಾದರೂ, ಆ ವ್ಯಾಮೋಹವನ್ನು ತೊರೆದು ಧರ್ಮ ಸಂರಕ್ಷಣೆಗಾಗಿ ಹೋರಾಡುವುದು ಯೋಧ ನ್ಯಾಯ – ಕ್ಷಾತ್ರ ಧರ್ಮ. ಅಂದು ಧರ್ಮದ ಪ್ರತಿರೂಪವಾದ ಗೋವನ್ನು ಅಪಹರಿಸಿದರು – ನೀನು ಬಂಧ ಮುಕ್ತಗೊಳಿಸಿದೆ. ಇಂದು ಧರ್ಮವನ್ನು ತುಳಿದು ನಿಂತಿದ್ದಾರೆ. ಧರ್ಮದ ರಕ್ಷಣೆ ನಿನಗೆ ಕರ್ತವ್ಯವಾಗಿದೆ. ಅಂದು ಹೇಗೆ ಬಂಧು, ಗುರು, ಹಿರಿಯರು ಎಂದು ವಿವೇಚಿಸದೆ ಧರ್ಮಾಧರ್ಮದ ನೆಲೆಯಲ್ಲಿ ನಿನ್ನ ಪ್ರಾಮಾಣಿಕ ಕರ್ಮವನ್ನು ಗೈದೆಯೋ, ತತ್ಪರಿಣಾಮವಾಗಿ ಸತ್ಕೀರ್ತಿ ನಿನ್ನದ್ದಾಯಿತೊ ಅದೇ ರೀತಿ ಇಂದು ಕೂಡ ನಿನ್ನ ಮನವನ್ನಾವರಿಸಿದ ವ್ಯಾಮೋಹದ ಪೊರೆಯನ್ನು ಕಳಚಿ ಹೊರಗೆ ಬಾ. ಅದು ನಿನಗೆ ಶ್ರೇಯಸ್ಸು ತರಲಿದೆ. ಧರ್ಮದ ಪಕ್ಷಪಾತಿಯಾಗಿ ಅಧರ್ಮದ ವಿರುದ್ದ ಹೋರಾಡು. ಇದು ಧರ್ಮ ಮತ್ತು ಅಧರ್ಮದ ನಡುವಿನ ಸಂಘರ್ಷವೆ ಹೊರತು ವೈಯಕ್ತಿಕ ವೈಷಮ್ಯ ಇಲ್ಲಿ ಗೌಣವಾಗುತ್ತದೆ. ಯುದ್ದ ಮಾಡಿದರೆ ಪಾಪಿಯಾಗುವೆ ಎಂದು ಹೆದರಿರುವ ನೀನು ಯುದ್ದ ಮಾಡದಿದ್ದರೆ ಕ್ಷತ್ರಿಯನಾಗಿರುವ ನಿನಗೊದಗುವ ಘೋರ ಪಾತಕದ ಫಲದ ಬಗ್ಗೆ ನೀನು ಯೋಚಿಸಲಿಲ್ಲ. ದುರ್ಜನರ ದೌರ್ಜನ್ಯಕ್ಕಿಂತಲೂ ಕೆಲವೊಮ್ಮೆ ಸುಜನರ ಸೌಜನ್ಯ ವಿಕೋಪಕ್ಕೆ ನಾಂದಿಯಾಗುತ್ತದೆ. ಮಾತ್ರವಲ್ಲ ದುಷ್ಟರನ್ನು ಲೋಕಕಂಟಕರಾಗಿ ಬೆಳೆಸುತ್ತದೆ. ಚಂದ್ರವಂಶದ ಕುಲವಧುವೂ, ಸೋದರರ ಪತ್ನಿಯೂ ಆದ ಯಾಜ್ಞಸೇನಿ ದ್ರೌಪದಿಯ ಮಾನಭಂಗ ಯತ್ನ ಹಸ್ತಿನೆಯ ರಾಜಭವನದಲ್ಲಿ ನಡೆದ ಮೇಲೆ, ಇಂತಹ ಪಾತಕಿಗಳಿಂದ ಸಾಮಾನ್ಯ ಸ್ತ್ರೀಗೆ ರಕ್ಷಣೆ ನಿರೀಕ್ಷಿಸಬಹುದೆ? ಅರ್ಜುನ ಇದು ಪಾಂಡವ ಕೌರವರ ಸಂಗ್ರಾಮವಲ್ಲ ಬದಲಾಗಿ ಧರ್ಮ – ಅಧರ್ಮದ ನಡುವಿನ ಯುದ್ದ. ಅಧರ್ಮಿಗಳು ಆಳ್ವಿಕೆ ಯೋಗ್ಯರಲ್ಲ. ಹಾಗೆ ಇರಗೊಟ್ಟರೆ ತೊಂದರೆ ಅನುಭವಿಸುವವರು ಪ್ರಜಾಜನರು. ಹಾಗಾಗಿ ನೀನು ಮಾಡುವ ಯುದ್ದ ರಾಜ್ಯ ಲೋಭಕ್ಕಾಗಿ ಸ್ವಾರ್ಥ ಸಾಧನೆಗಾಗಿ ಅಲ್ಲ. ಪ್ರಜಾ ಪರಿಪಾಲನೆ, ನ್ಯಾಯ ಧರ್ಮ ಸ್ಥಾಪನೆಗಾಗಿ. ಈಗ ನೀನು ಧರ್ಮದ ಪಕ್ಷ ತೊರೆದು ವಿರಕ್ತನಾಗಿ ಹೋಗ ಬಯಸುವೆಯಾ? ಇಲ್ಲ ಧರ್ಮಕ್ಕಾಗಿ ಹೋರಾಡುವೆಯಾ?” ಎಂದು ತೀಕ್ಷ್ಣವಾಗಿ ಪ್ರಶ್ನಿಸಿದನು.
“ಕೇಶವಾ, ಮಾಧವಾ, ಅಚ್ಯುತಾ, ಅನಂತ, ವಾಸುದೇವಾ… ಹೀಗೆಲ್ಲಾ ನಿನ್ನ ಲೀಲಾಮಾನುಷ ಕೃತಿಗಳಿಗೆ ಸಾಕ್ಷಿಯಾಗಿ ಭಕ್ತ ಜನಕೋಟಿ ನಿನ್ನನ್ನು ಸ್ತುತಿಸುತ್ತಾರೆ, ಋಷಿ ಮುನಿ ಮನೀಷಿಗಳು ಜಪಿಸುತ್ತಾರೆ. ಕೃಷ್ಣಾ ನಿನ್ನ ಸಖನಾಗಿದ್ದು ಸಾಕಷ್ಟು ಸಮಯವಿದ್ದರೂ ಧರ್ಮ ಸೂಕ್ಷ್ಮಗಳನ್ನು ನಿನ್ನಿಂದ ತಿಳಿದು ಆರ್ಜನೆ ಮಾಡುವ ಮನಸ್ಸು ಈ ಅರ್ಜುನನಿಗೇಕೆ ಈ ಹಿಂದೆ ಬಾರದೆ ಹೋಯಿತು. ನಿನಗೆ ಎಲ್ಲವೂ ತಿಳಿದಿದೆ ಎಂದು ನಾನು ನಂಬಿದ್ದೇನೆ. ಪುರುಷೋತ್ತಮಾ! ನಾನು ಅಜ್ಞಾನಿಯಾಗಿ ಬವ ಬಂಧನಕ್ಕೊಳಗಾಗಿ ಒದ್ದಾಡುತ್ತಿದ್ದೇನೆ. ನೀನು ಎಚ್ಚರಿಸುತ್ತಾ ಹೋಗುತ್ತಿದ್ದಂತೆ ನನ್ನ ಸುಪ್ತ ಮನಸ್ಸು ಜಾಗೃತವಾಗುತ್ತಿದೆ. ನಿಗೂಢವಾದ ಧರ್ಮಸೂಕ್ಷ್ಮವನ್ನು ನಿನ್ನಿಂದ ತಿಳಿದುಕೊಳ್ಳಬೇಕೆಂಬ ಮನಸ್ಸು ನನ್ನದಾಗುತ್ತಿದೆ ದೇವಾ… ನಿನಗೆ ಶರಣನಾಗಿ ನಮಿಸುತ್ತಿದ್ದೇನೆ. ಮುಗ್ಧ ಮಗುವಿನಂತಾಗಿದೆ ನನ್ನ ಸ್ಥಿತಿ. ಅರಿಯದೆ ನನ್ನಿಂದ ಅಪರಾಧವಾಗಿದ್ದರೆ ಮನ್ನಿಸಬೇಕು. ಪ್ರಭೋ ಮಾತೆ ಶಿಶುವಿನ ಕರಕಮಲಗಳನ್ನು ಹಿಡಿದು ಆಧರಿಸಿ ಹೆಜ್ಜೆ ಹಾಕಿಸಿ ನಡೆಯಲು ಕಲಿಸುವಂತೆ, ನನಗೆ ಧರ್ಮದ ಪಥದಲ್ಲಿ ಗಮಿಸಲು ಸುಜ್ಞಾನ ನೀಡಬೇಕು ದೇವಾ. ಮಮಕಾರದ ಅಂಧಕಾರದಿಂದ ನನ್ನನ್ನು ಉದ್ಧರಿಸಿ, ಸದ್ಗುರುವಿನಂತೆ ಸುಜ್ಯೋತಿಯನ್ನು ಬೆಳಗಿಸು. ಪರಮಾತ್ಮಾ. ನಿನ್ನ ಶಿಷ್ಯನಾಗಿದ್ದೇನೆ, ಶರಣನಾಗಿದ್ದೇನೆ. ಸ್ವಾಮೀ ನೀನೇ ನನ್ನನ್ನು ರಕ್ಷಿಸಬೇಕು. ” ಎಂದು ಕಣ್ಣೀರ ಧಾರೆ ಹರಿಸುತ್ತಾ ಕೃಷ್ಣನ ಪಾದ ಪದ್ಮಗಳಿಗೆ ತನ್ನ ಶಿರಸ್ಸನ್ನೊತ್ತಿ, ಕೈಗಳಿಂದ ಪಾದಗಳನ್ನು ಹಿಡಿದು ಕಂಬಣಿಗಳಿಂದ ಪಾದ ತೋಯಿಸುತ್ತಾ ಅಂಗಾಲಾಚಿ ಬೇಡಿಕೊಳ್ಳತೊಡಗಿದನು.
ಮುಂದುವರಿಯುವುದು…



















































