ಭಾಗ – 328
ಭರತೇಶ್ ಶೆಟ್ಟಿ , ಎಕ್ಕಾರ್

ಸಂಚಿಕೆ ೩೨೮ ಮಹಾಭಾರತ
ಕೃಷ್ಣನ ಮಾತುಗಳು ಸ್ಪಷ್ಟವಾಗಿದ್ದರೂ ಅರ್ಜುನನಿಗೆ ಮಾತ್ರ ಗೊಂದಲ ನಿವಾರಣೆ ಆಗಲಿಲ್ಲ. “ಕೇಶವಾ! ನಿನ್ನ ವಚನ ಸತ್ಯ ಹೌದು. ಕೌರವರು ಬಂಧುಗಳಾದರೂ, ನಮಗೆ ಶ್ರೇಯಸ್ಸನ್ನು ಬಯಸಿದವರಲ್ಲ. ಬದಲಾಗಿ ನಮ್ಮ ನಾಶಕ್ಕಾಗಿ ಹಾತೊರೆದವರು. ನೀನಂದಂತೆ ಅಂತಹ ದುರ್ಮಾರ್ಗಿಗಳನ್ನು ತೊರೆದು ಬದುಕಬಹುದು. ಆದರೆ ವಧಿಸುವುದಕ್ಕೆ ನನ್ನ ಮನಸ್ಸು ಒಪ್ಪುತ್ತಿಲ್ಲ. ಹಾಗಾಗಿ ಎಲ್ಲವನ್ನೂ ತೊರೆದು ವಿರಕ್ತನಾಗಿ ನಾನು ದೇವತಾ ಪ್ರಾರ್ಥನೆಗೈಯುತ್ತಾ ಧ್ಯಾನಸ್ಥನಾಗಿ ತಪೋವನದಲ್ಲಿರುವುದು ಉತ್ತಮ. ಜೀವನದ ಪರಮೋಚ್ಚ ಗುರಿಯ ಸಾಧನೆಗಾಗಿ ನನ್ನ ಉಳಿದ ಆಯಸ್ಸನ್ನು ಮುಡಿಪಾಗಿಡುತ್ತೇನೆ. ಇಲ್ಲಿ ಅನರ್ಥ, ಪಾಪ, ಪಾತಕ ಕಾರ್ಯಗಳನ್ನು ಮಾಡಿ ನರಕ ಸೇರುವ ಬದಲು ಮೋಕ್ಷ ಪ್ರದವಾದ ತಪಸ್ಸು ಶ್ರೇಷ್ಟವಾದುದು. ಕೃಷ್ಣಾ! ನಿನ್ನ ಪೂರ್ಣಾನುಗ್ರಹ ನನ್ನ ಮೇಲಿರಲಿ. ನನ್ನ ಇಚ್ಚೆ ಪೂರೈಸುವಂತೆ ಆಶೀರ್ವದಿಸು ದೇವಾ…” ಎಂದು ಕರಜೋಡಿಸಿ ಪ್ರಾರ್ಥಿಸಿದನು.
“ಅರ್ಜುನಾ! ತಪಸ್ಸು ಉತ್ತಮವಾದ ಕೃತಿ ಹೌದು. ತಪಸ್ಸಿಗೆ ಹೋಗಬೇಕಾದರೆ ವಿರಕ್ತಿ ಮೂಡ ಬೇಕು. ಆದರೆ ನಿನ್ನ ಮನ ಮಾಡಿರುವ ವಿರಕ್ತಿ ದೋಷಪ್ರದವಾಗಿದೆ. ನೀನು ಅಧರ್ಮಿಗಳ ಕುರಿತಾಗಿ ದಯೆ ತೋರುತ್ತಿರುವೆ. ತಮ್ಮ ಆದ್ಯ ಕರ್ತವ್ಯಗಳನ್ನು ಪೂರೈಸಲಾಗದೆ, ಮನಮಾಡುವ ಚಿಂತೆಗೆ ಸೋತು, ಯಾವಾತ ತನ್ನ ನಂಬಿದವರನ್ನು ಬಿಟ್ಟು ಓಡುತ್ತಾನೊ ಆತ ನಿಜ ಹೇಡಿ ಅರ್ಜುನಾ! ನಿನ್ನನ್ನು ನಂಬಿರುವ, ಕೇವಲ ಧರ್ಮ ಪಾಲನೆಯೆ ಜೀವನ ಎಂದು ನಂಬಿ ಬದುಕಿದ ಧರ್ಮಾತ್ಮನಾದ ಯುಧಿಷ್ಟಿರ, ಮತ್ತು ಅನುಸರಿಸಿ ಬಂದ ಸೋದರರು, ಮಾತ್ರವಲ್ಲ ರಾಜ ಕುವರಿಯಾದರೂ.. ನಿಮ್ಮೈವರನ್ನು ವರಿಸಿ, ಜೊತೆಗಿದ್ದು ನಿಕೃಷ್ಟಾತಿ ನೀಚ ಕಷ್ಟಗಳು ಬಂದಾಗಲೂ, ಹಸ್ತಿನೆಯಲ್ಲಿ ಮಾನಭಂಗ, ದುರ್ವಚನ, ವನವಾಸ, ಅಜ್ಞಾತವಾಸ, ಜಯದ್ರಥನಿಂದ ಅಪಹರಣ, ಸೈರಂಧ್ರಿ ವೃತ್ತಿ, ಕೀಚಕ ನಿಂದ ಕಾಮುಕ ದೃಷ್ಟಿ… ಏನೇನಲ್ಲ ಸಹಿಸಿದಳಲ್ಲ ದ್ರೌಪದಿ? ಯಾಕಾಗಿ? ಧರ್ಮಕ್ಕೋಸ್ಕರವಲ್ಲವೆ? ಆಕೆಯ ಸಹಿಷ್ಣುತೆಗೆ ನ್ಯಾಯ ನೀಡಿರುವೆಯಾ? ಆಕೆಯ ಕುರಿತಾಗಿ ನಿನ್ನ ಮನದಲ್ಲಿ ದಯೆ ಮೂಡುತ್ತಿಲ್ಲವೆ? ರಾಜಕುಮಾರ ನಕುಲ ಸಹದೇವರು ವಿರಾಟನ ಹಟ್ಟಿಯಲ್ಲಿ ಸೆಗಣಿ ಗಂಜಳ ಎತ್ತಿ ಅಲ್ಲಿಯೆ ಮಲಗಿ ವರ್ಷಕಾಲ ಕಳೆದರಲ್ಲ! ಯಾಕಾಗಿ? ಭೀಮ ಬಾಣಸಿಗನಾಗಿ ದುಡಿದು ಪಾಕಶಾಲೆಯ ಕಟ್ಟಿಗೆ ರಾಶಿಯಲ್ಲಿ ಮಲಗಿ ದಿನಗಳೆದನಲ್ಲ ಯಾರಿಂದಾಗಿ? ಇವರುಗಳ ತ್ಯಾಗ ನಿನ್ನ ಮನದಲ್ಲಿ ದಯೆ ಮೂಡಿಸುತ್ತಿಲ್ಲವೆ? ಇದೆಲ್ಲವನ್ನೂ ಮರೆತು ಅಡಿಗಡಿಗೆ ಅನ್ಯಾಯ, ಅಧರ್ಮ, ಹಿಂಸೆಯ ಪಥದಲ್ಲಿ ನಿಮ್ಮನ್ನು ಬಾಧಿಸಿದ ಕೌರವರು ನಿನ್ನ ದಯಾದೃಷ್ಟಿಗೆ ಮಾನ್ಯರಾದರೆ? ಅರ್ಜುನಾ ಸರಿಯಾಗಿ ಕೇಳು, ನಿನ್ನಂತೆ ವಿರಕ್ತರಾಗುವವರು ಬಹು ಮಂದಿ ಇದ್ದಾರೆ ಲೋಕದಲ್ಲಿ. ಸಂಸಾರವನ್ನು ಕಷ್ಟಕಾಲದಲ್ಲಿ ಹೊರೆಯಲಾರದೆ, ಆ ಕುರಿತು ಕಷ್ಟವನ್ನು ಸಹಿಸಲಾಗದೆ ಎಲ್ಲವನ್ನು ಬಿಟ್ಟು ಬಿಟ್ಟೆವು. ನಾವು ವಿರಕ್ತರು, ದೇವರ ಧ್ಯಾನವೆ ಪರಮೋಚ್ಚ ಪದವಿ ನೀಡಬಲ್ಲುದು. ಹಾಗಾಗಿ ವಿರಕ್ತರಾಗುತ್ತೇವೆ ಎನ್ನುವವರು ನಿನ್ನಂತೆ ಅನೇಕರು ಪ್ರಪಂಚದಲ್ಲಿ ಸಿಗಬಹುದು. ಆದರೆ ಅದು ವಿರಕ್ತಿಯಲ್ಲ, ಹೇಡಿಯಾಗಿ ಮಾಡುವ ಪಲಾಯನ. ಅಂತಹ ಹುಂಬರಿಗೆ ತಪಸ್ಸು ಸಿದ್ಧಿಸದು, ದೇವನೂ ಒಲಿಯುವುದಿಲ್ಲ. ಜಗತ್ತಿನ ಸುಖದುಃಖಗಳೊಂದಿಗೆ ಹೋರಾಡಿ ಬದುಕುವುದು ನಿಜ ಜೀವನ – ಅದೇ ಪುರುಷಾರ್ಥ. ಜೀವನ ಎಂಬುವುದೊಂದು – ಜಟಿಲವೂ ಗಹನವೂ ಆದ ಮಹಾಯುದ್ದ. ಯೋಧನಂತೆ ಜೀವನ ಸಂಗ್ರಾಮಕ್ಕೆ ಬೆನ್ನು ಹಾಕದೆ, ಎದೆಗಾರಿಕೆಯಿಂದ ಹೋರಾಡುವುದು ಬದುಕಿನ ಯಶಸ್ಸಿನ ರಹಸ್ಯ. ಎಂದು ಕೃಷ್ಣ ಕರ್ತವ್ಯ ಪ್ರಜ್ಞೆಯನ್ನು ಜಾಗೃತಗೊಳಿಸಿದನು.
“ಕೃಷ್ಣ ಪರಮಾತ್ಮಾ! ನನ್ನವರನ್ನು ನಾನು ಪೋಷಿಸಬೇಕು, ಹಾಗೆಂದು ಬಿಟ್ಟು ಹೋಗುವವನಲ್ಲ. ಈ ಹಿಂದೆಯೂ ನಾವು ಅಧಿಕಾರ, ಸಾಮ್ರಾಜ್ಯ ಬಯಸಿದವರೂ ಅಲ್ಲ. ಹುಟ್ಟಿದ್ದು ಕಾಡಲ್ಲಿ, ಬದುಕಿದ್ದು ಬಹು ಭಾಗ ಕಾನನವಾಸಿಗಳಾಗಿಯೆ!. ಜೊತೆಗಿದ್ದ ನಮಗದು ಹಿತವೂ ಸುಖವೂ ಆಗಿತ್ತು. ಈಗಲೂ ನಾವು ಅಂತಹ ಜೀವನ ಸಾಗಿಸಬಲ್ಲೆವು. ಕೇವಲ ಕೌರವರಷ್ಟೆ ಅಲ್ಲ ಮಹಾಮಹಿಮ- ಪಿತಾಮಹ ಭೀಷ್ಮಾಚಾರ್ಯರು ವಚನಪಾಲನೆ, ರಾಜನಿಷ್ಟೆಗೆ ಒಳಗಾಗಿ ನಮ್ಮೆದುರು ನಿಂತಿದ್ದಾರೆ. ಅಂತರಂಗದಲ್ಲಿ ನಮ್ಮ ಹಿತವನ್ನು ಬಯಸುವ, ಕಾಲದ ಕೈಗೊಂಬೆಯಾಗಿ ವೇದನೆ ಪಡುತ್ತಿರುವ ಅವರನ್ನು ವಧಿಸಿ ನನಗ್ಯಾವ ಸುಖ ಒದಗೀತು ದೇವಾ? ಪ್ರಿಯ ಶಿಷ್ಯನೆಂದು ಮಗ ಅಶ್ವತ್ಥಾಮನಿಗಿಂತಲೂ ಹೆಚ್ಚು ಒಲವಿನಿಂದ ತನ್ನ ಸರ್ವಸ್ವವನ್ನೂ ನನಗೆ ಧಾರೆ ಎರೆದ ಗುರು ದ್ರೋಣಾಚಾರ್ಯರು ರಾಜಾಶ್ರಿತರಾಗಿದ್ದ ಕಾರಣ ಉಂಡ ಅನ್ನದ ಋಣ ತೀರಿಸುವ ನ್ಯಾಯ ಮಾರ್ಗ ಅನುಸರಿಸಿ ಆ ಪಕ್ಷದಲ್ಲಿ ಹೋರಾಡುವ ದುಸ್ಥಿತಿಗೆ ಸಿಲುಕಿದ್ದಾರೆ. ಅನ್ಯಥಾ ಅವರ ಮನದಲ್ಲಿ ಪಾಂಡವರಾದ ನಮ್ಮ ಬಗೆಯಲ್ಲಿ ಯಾವ ದುರುದ್ದೇಶವೂ ಇಲ್ಲ. ಪೂರ್ಣ ವಿಶ್ವಾಸದಿಂದ ಇವರಿಬ್ಬರ ಅಂತರ್ಯವನ್ನು ಅರಿತು ಹೇಳಬಲ್ಲೆ. ಇವರನ್ನು ಕೊಂದು ಸಿಗುವ ಸಾಮ್ರಾಜ್ಯವಾಗಲಿ, ಸುಖವಾಗಲಿ ನನಗೆ ಬೇಡ ಕೃಷ್ಣ. ಇಂತಹ ಧರ್ಮಾತ್ಮರು ಬಹಿರಂಗವಾಗಿ ಆ ಪಕ್ಷದಲ್ಲಿದ್ದರೂ ತ್ರಿಕರಣ ಪೂರ್ವಕವಾಗಿ ಧರ್ಮ ಏನು, ಏನಾಗಬೇಕು ಎಂಬುವುದನ್ನು ಅರಿತು ತ್ಯಾಗಿಗಳಾಗಿ ಸಮರ್ಪಣೆಗೆ ನಿಂತಿದ್ದಾರೆ. ಅವರನ್ನು ನೋಯಿಸಿದರೆ ಪ್ರತಿಹಿಂಸೆ ಆಗುತ್ತದೆ ಹೊರತು ಕರ್ತವ್ಯಪಾಲನೆ ಆದೀತೆ ದೇವಾ? ಎಂದು ಅರ್ಜುನ ಸತ್ಯ ಸಹಿತ – ಧರ್ಮಸಮ್ಮತವಾದುದನ್ನು ಪ್ರಶ್ನಿಸಿದನು.
“ಅರ್ಜುನಾ, ನೀನು ಹಿಂದುಳಿದೆಯಾದರೆ ಕರ್ತವ್ಯ ಲೋಪ ಆಗುತ್ತದೆ. ನೀನೂ ಭೀಷ್ಮ, ದ್ರೋಣರಂತೆ ದೋಷಿಯಾಗುವೆ. ಮಾತ್ರವಲ್ಲ ಇಂತಹ ಅಧರ್ಮಿಗಳ ಬೆಳವಣಿಗೆಗೆ ಸಹಕಾರ ನೀಡಿದಂತಾಗುತ್ತದೆ. ಪರಿಣಾಮ ಲೋಕಕಂಟಕರ ದುಷ್ಕೃತ್ಯಗಳಿಗೆ ಪೋಷಕನಾಗುವೆ. ಸನ್ಮಾರ್ಗ ತೋರುವ ಕಾಲದಲ್ಲಿ ಕರ್ತವ್ಯ ನಿಭಾಯಿಸದೆ, ದುರ್ಬುದ್ಧಿ ಬೆಳೆಯಲು ಕಾಲ ಮಿಂಚಿ ಹೋದ ಬಳಿಕ ಶತ ಪ್ರಯತ್ನ ಮಾಡಿಯೂ ಫಲವಿಲ್ಲ. ಎಳವೆಯಲ್ಲಿ ತಡೆದು ಬುದ್ದಿ ಹೇಳದೆ, ಶಕುನಿಯ ಜೊತೆ ಕೌರವನನ್ನು ಬೆಳೆಯಬಿಟ್ಟು ಕುಲನಾಶಕನಾಗಲು ಅವಕಾಶ ನೀಡಿದ್ದು, ಸಾಮರ್ಥ್ಯ ಇದ್ದರೂ ಅಪರಾಧಗಳ ಮೇಲೆ ಅಪರಾಧ ಎಸಗಿದಾಗಲೂ ಸಹಿಸಿಕೊಂಡದ್ದು ಅಜ್ಜ ಭೀಷ್ಮರ ಮಹಾಪರಾಧ. ಅದರ ಪರಿಣಾಮದಿಂದಲೆ ಇಂದಿನ ಯುದ್ದದ ಸ್ಥಿತಿ ನಿರ್ಮಾಣವಾಗಲು ಕಾರಣವಾಗಿರುವುದು. ಗುರುವಾಗಿ ಸನ್ಮಾರ್ಗ ತೋರದ ಆಚಾರ್ಯ ದ್ರೋಣರೂ ಅಪರಾಧಿ. ಗಿಡವಾಗಿರುವಾಗ ಅಡ್ಡ ಬೆಳೆಯುತ್ತಿದ್ದ ಚಿಗುರುಗಳನ್ನು ಚಿವುಟದೆ ವ್ಯಾಪಿಸಲು ಬಿಟ್ಟು ಮತ್ತೆ ಮರವಾದ ಬಳಿಕ ಬಲಿಷ್ಟವಾದ ಗೆಲ್ಲುಗಳನ್ನು ಕಡಿಯಲು ಪ್ರಯತ್ನಿಸಿದ್ದು ಅವರ ಮೂರ್ಖತನ. ಈಗ ನೀನೂ ಅವರಂತೆ ಬಾಂಧವ್ಯದ ದಯೆತೋರಿ ಅವಕಾಶ ನೀಡಿದರೆ ನಿನ್ನದೂ ಅಧರ್ಮ ಆಗುತ್ತದೆ. ಈಗಾಗಲೆ ನೀನು ಪಾಪ ಮಾಡಿರುವೆ. ಅಂದು ಗಂಧರ್ವ ಚಿತ್ರಸೇನ ಅಹಂಕಾರ ತೋರಿದ ದುರ್ಯೋಧನನನ್ನು ಘೋಷಯಾತ್ರೆಯ ಸಮಯ ಬಂಧಿಸಿ ಸೆಳೆದೊಯ್ಯಲು ಬಿಡುತ್ತಿದ್ದರೆ, ತಡೆದು ಬಿಡಿಸಿ ಕೊಳ್ಳದಿರುತ್ತಿದ್ದರೆ ಈ ಸ್ಥಿತಿ ನಿನಗೊದಗುತ್ತಿರುತ್ತಿರಲಿಲ್ಲ. ನಿನ್ನ ತಪ್ಪನ್ನು ತಿದ್ದಿಕೊಳ್ಳುವ ಸಮಯ ಬಂದಿದೆ. ಎದ್ದು ಯುದ್ದಕ್ಕೆ ಸಿದ್ಧನಾಗು. ಧರ್ಮವಾದುದನ್ನು ಮಾಡು ಅದೇ ಕರ್ತವ್ಯ. ಫಲಾಫಲಗಳ ಯೋಚನೆ ನಿನಗೆ ತೊಡಕಾಗಬಾರದು. ಕರ್ತವ್ಯ ಪಾಲನೆ ಎಂದಿಗೂ ದೋಷವಾಗದು. ನಿನ್ನ ಪಿತಾಮಹ ಭೀಷ್ಮ, ಗುರು ದ್ರೋಣರೂ ಅವರಿಗೆ ಯಾವುದು ಕರ್ತವ್ಯವೊ ಅದನ್ನು ಮಾಡುತ್ತಿರುವಾಗ ನಿನಗೆ ಅವರು ಆದರ್ಶಪ್ರಾಯರು ಆಗುತ್ತಾರೆ ಹೊರತು ಕಂಟಕಪ್ರಾಯರಾಗಲಾರರು. ಏದ್ದೇಳು ಪಾರ್ಥ. ಗಾಂಡೀವಧಾರಿಯಾಗಿ ಕರ್ತವ್ಯ ಪೂರೈಸು” ಎಂದು ಕೃಷ್ಣ ವಿಸ್ತರಿಸಿ ಹೇಳಿದನು.
ಮುಂದುವರಿಯುವುದು…



















































