31.2 C
Udupi
Monday, April 6, 2026
spot_img
spot_img
HomeBlogಮಹಾಭಾರತ

ಮಹಾಭಾರತ

spot_imgspot_img

ಭಾಗ – 322

ಭರತೇಶ್ ಶೆಟ್ಟಿ, ಎಕ್ಕಾರ್

ಇತ್ತ ಪಾಂಡವ ಪಕ್ಷದಲ್ಲೂ ಯುದ್ದ ಸಿದ್ಧತೆಗಳಾಗತೊಡಗಿದವು. ಚತುರಂಗ ಬಲ ಸಹಿತವಾಗಿ ಸೇನೆ ಹೊರಡಲು ತಯಾರಾಯಿತು. ಸೇನಾಪತಿಯಾದ ದೃಷ್ಟದ್ಯುಮ್ನನು ಸೇನೆಯನ್ನು ಸಜ್ಜುಗೊಳಿಸಿದನು. ಯೋಜನೆಯಂತೆ ಭೀಮ ಸಮಸ್ತ ಸೇನೆಯ ಸಂರಕ್ಷಕನಾಗಿ ನಿಯುಕ್ತನಾದನು. ಚತುರ್ದಿಕ್ಕುಗಳಿಂದ ಬೇರೆ ಬೇರೆ ಸಂರಕ್ಷಕರೂ ನಿಯೋಜಿತರಾದರು. ಅರ್ಜುನನಿಗೆ ಸಂರಕ್ಷಕರ ಸಹಿತ ಸಮಸ್ತ ಸೇನೆಯ ಸಂಪೂರ್ಣ ರಕ್ಷಣೆಯ ಹೊಣೆಗಾರಿಕೆ ವಹಿಸಲಾಯಿತು. ಸೇನಾಧಿಪತಿಯೂ ಶ್ರೇಷ್ಠ ಧನುರ್ಧರನೂ ಆಗಿರುವ ದೃಷ್ಟದ್ಯುಮ್ನ ಸೈನ್ಯದ ಮುಂಭಾಗದ ಸ್ಥಾನಿಯಾದನು. ಭೀಮನು ದುರ್ಯೋಧನನಿಗೂ, ದೃಷ್ಟಕೇತು ಶಲ್ಯನಿಗೂ, ಉತ್ತಮೌಜಸನು ಕೃಪಾಚಾರ್ಯರಿಗೂ, ದ್ರುಪದ ದ್ರೋಣರಿಗೂ, ನಕುಲ ಅಶ್ವತ್ಥಾಮನಿಗೂ, ಶೈಬ್ಯನು ಕೃತವರ್ಮನಿಗೂ, ಯುಯುಧಾನು ಜಯದ್ರಥನಿಗೂ, ಶಿಖಂಡಿ ದೃಷ್ಟದ್ಯುಮ್ನನ ರಕ್ಷಕನಾಗಿದ್ದು ಜೊತೆಯಾಗಿ ಭೀಷ್ಮಾಚಾರ್ಯರಿಗೂ, ಸಾತ್ಯಕಿ ಭೂರಿಶ್ರವಸ್ಸಿಗೂ, ಸಹದೇವ ಶಕುನಿಗೂ, ಯುಧಿಷ್ಠಿರ ಚೇಕಿತಾನನಿಗೂ, ಅಭಿಮನ್ಯು ಕರ್ಣಪುತ್ರನಾದ ವೃಷಸೇನನಿಗೂ, ಕರ್ಣ ಯುದ್ಧದಿಂದ ವಿಮುಖನಾದ ವಿಚಾರ ತಿಳಿಯದೆ ಅರ್ಜುನ ಕರ್ಣನಿಗೂ… ಹೀಗೆ ಎದುರಾಗಲಿರುವ ಕುರುಸೇನೆಯ ವಿಕ್ರಮಿಗಳಿಗೆ ಪ್ರತಿಯಾಗಿ ಪಾಂಡವ ಪಕ್ಷದ ವೀರರನ್ನೂ ಸಜ್ಜುಗೊಳಿಸಲಾಯಿತು. ಸಮಗ್ರವಾದ ಪಾಂಡವ ಮಹಾ ಸೇನೆಯನ್ನು ವಜ್ರ ವ್ಯೂಹವಾಗಿ ನಿಯತಗೊಳಿಸಿದರು. ಸಮರಾರಂಭದ ಸಂಕೇತಕ್ಕಾಗಿ ಕಾಯುತ್ತಾ ಸಜ್ಜುಗೊಂಡು ನಿಂತಿತು.

ಇತ್ತ ಕೌರವ ಸೇನೆಯೂ ಸೇನಾನಾಯಕನಾದ ಭೀಷ್ಮಾಚಾರ್ಯರ ನೇತೃತ್ವದಲ್ಲಿ ಸನ್ನದ್ಧವಾಯಿತು. ದುಶ್ಯಾಸನನಿಗೆ ಭೀಷ್ಮಾಚಾರ್ಯರ ರಕ್ಷಕನ ಜವಾಬ್ದಾರಿ ವಹಿಸಲಾಯಿತು. ಭೀಷ್ಮಾಚಾರ್ಯರು ಸೇನಾಪತಿಯಾಗಿ ಸೇನೆಯ ಮುಂಭಾಗದಲ್ಲಿ ಮುನ್ನಡೆಸುವುದು. ದುಶ್ಯಾಸನ ಮತ್ತು ಬಹು ಮಂದಿ ರಥಿಕರ ಬಲಾಢ್ಯ ಸೇನೆ ಕೇವಲ ಸೇನಾಪತಿಯ ರಕ್ಷಣೆಯನ್ನು ಮಾಡುವುದು ಎಂದು ಯೋಜನೆ ಸಿದ್ಧಗೊಳಿಸಿದರು. ದುರ್ಯೋಧನ ಮತ್ತು ಶಕುನಿಯ ಯೋಜನೆಯಂತೆ ಪಾಂಡವರು ಐವರನ್ನು ಹೊರತು ಪಾಂಡವ ಸೇನೆಯ ಸರ್ವ ವೀರಾಧಿವೀರರನ್ನೂ ಭೀಷ್ಮಾಚಾರ್ಯರೊಬ್ಬರೆ ಸವರುತ್ತಾರೆ. ಶಿಖಂಡಿ ಯಾವ ಕಾರಣಕ್ಕೂ ಭೀಷ್ಮಾಚಾರ್ಯರಿಗೆ ನೇರ ಮುಖಾಮುಖಿಯಾಗದಂತೆ – ಯುದ್ಧಾಹ್ವಾನ ನೀಡದಂತೆ ಉಳಿದವರು ನೋಡಿಕೊಳ್ಳಬೇಕು. ಮಾತ್ರವಲ್ಲ ಶಿಖಂಡಿ ರಣಾಂಗಣದಲ್ಲಿ ಎಲ್ಲಿದ್ದರೂ ಹುಡುಕಿ ತಮಗೆದುರಾಗಿಸಿ ಅಲ್ಲಿಯೆ ಆತನನ್ನು ಸರ್ವ ಪ್ರಯತ್ನಗಳಿಂದ ಸಂಹರಿಸಿ ಬಿಡಬೇಕು. ಶಿಖಂಡಿ ಒಬ್ಬ ಸತ್ತರೆ ಭೀಷ್ಮಾಚಾರ್ಯರು ಕಾಳಭೈರವನಂತೆ ಕುರುಕ್ಷೇತ್ರದಲ್ಲಿ ಮರಣ ಮೃದಂಗ ನಾದಗೈಯುತ್ತಾ ವಿಜೃಂಭಿಸುತ್ತಾರೆ. ದುಶ್ಯಾಸನನ ಜೊತೆ ದುರ್ವಿಷ, ದುರ್ಮುಖ, ದುಃಸಹ, ವಿವಿಂಶತಿ, ವಿಕರ್ಣ, ಚಿತ್ರಸೇನ, ಮತ್ತು ಸ್ವತಃ ದುರ್ಯೋಧನನೂ ರಥರಕ್ಷಕನಾಗಿ ನಿಯೋಜಿತರಾದರು. ಇಷ್ಟು ಸಾಲದೆಂದು ರಥ ರಕ್ಷಕರ ರಕ್ಷಣೆಗೆ ವ್ಯೂಹವಾಗಿ ಅತಿ ಶೂರರಾದ ಅಭಿಷಹ, ಶೂರಸೇನ ಮೊದಲಾದ ಹನ್ನೆರಡು ದೇಶದ ರಾಜ ಮಹಾರಾಜರನ್ನು ನಿಯತಗೊಳಿಸಿದರು. ಹೀಗೆ ಬಹಳ ದೊಡ್ಡದಾದ ಗಜಸೈನ್ಯ, ಲಕ್ಷೋಪಲಕ್ಷ ಪದಾತಿ ಸೇನೆ, ಮಹಾರಥಿಗಳು ಭೀಷ್ಮಾಚಾರ್ಯರ ಸಮರ ಚಾಣಾಕ್ಷತೆಯಲ್ಲಿ ಸರ್ವತೋಭದ್ರ ವ್ಯೂಹವಾಗಿ ರಚನೆಗೊಂಡಿತು. ಕುರುಸೇನೆಯಲ್ಲಿ ಇನ್ನುಳಿದ ವೀರಾಧಿವೀರರೆಲ್ಲರೂ ಸೇರಿ ಪಾಂಡವರೈವರ ಮೇಲೆ ನಿರಂತರ ಆಕ್ರಮಣ ಮಾಡಿ ಸೋಲಿಸುವ ಯೋಜನೆ ಸಿದ್ಧಗೊಂಡಿತು.

ಇಷ್ಟೆಲ್ಲಾ ಸಿದ್ಧತೆಗಳಾಗುವಾಗ ದುರ್ಯೋಧನ ನೇರವಾಗಿ ದ್ರೋಣಾಚಾರ್ಯರ ಬಳಿ ಬಂದನು. “ಆಚಾರ್ಯರೇ, ನನಗೆ ಸೇನಾಪತಿಯ ರಕ್ಷಣೆಯ ಹೊಣೆಗಾರಿಕೆ ನೀಡಲ್ಪಟ್ಟಿದೆ. ಆದರೆ ನನ್ನ ಮನಸ್ಸು ಆ ಕಾರ್ಯಕ್ಕೆ ತಾವು ಸಮರ್ಥರೆಂದು ತರ್ಕಿಸುತ್ತಿದೆ. ತಾವೇನಾದರು ಅಜ್ಜ ಭೀಷ್ಮಾಚಾರ್ಯರ ಜೊತೆ ರಕ್ಷಕರಾಗಿ ನಿಂತರೆ ನೀವೊಬ್ಬರಿಂದಲೆ ಪಿತಾಮಹರಿಗೆ ಅಭೇಧ್ಯ ಕೋಟೆಯಂತಹ ರಕ್ಷಾಕವಚ ಪ್ರಾಪ್ತವಾಗಲಿದೆ. ನನಗೂ ನಿಶ್ಚಿಂತೆಯಾಗಿ ಪಾಂಡವರನ್ನು ಎದುರಿಸುವ ಅವಕಾಶ ಸಿಗುತ್ತದೆ” ಎಂದನು. ಆಗ ದ್ರೋಣಾಚಾರ್ಯರು ಗಂಭೀರವಾಗಿ, “ದುರ್ಯೋಧನಾ! ಮಹಾಮಹಿಮ ಭೀಷ್ಮಾಚಾರ್ಯರು ಅಜೇಯರು. ಅವರಿಗೆ ಯಾರ ರಕ್ಷಣೆಯ ಅಗತ್ಯವೂ ಇಲ್ಲ. ಅವರು ಆಯುಧಧಾರಿಯಾಗಿ ಇರುವವರೆಗೆ ಯಾರಿಗೂ ಅವರನ್ನೇನೂ ಮಾಡಲಾಗದು. ಆದರೂ ನಿನ್ನ ಅಪೇಕ್ಷೆಯಂತೆ ನನ್ನಿಂದ ಬಯಸಿರುವ ರಕ್ಷಾ ಕಾರ್ಯವನ್ನು ಮಾಡುತ್ತೇನೆ” ಎಂದರು. ದುರ್ಯೋಧನನಿಗೆ ಮಹದಾನಂದ ಆಯಿತು. ಅಜ್ಜ ಒಬ್ಬ ಉಳಿದರೆ ಪಾಂಡವರೈವರನ್ನು ಮುಗಿಸುವುದು ನಮಗೆ ಉಳಿಯುವ ಕೆಲಸ.

ಸೂರ್ಯೋದಯಕ್ಕೆ ಮೊದಲು ಕುರುಕ್ಷೇತ್ರದಲ್ಲಿ ಇತ್ತಂಡಗಳ ಸೇನೆ ಪರಸ್ಪರ ಅಭಿಮುಖವಾಗಿ ವ್ಯೂಹವಾಗಿ ಸಮಾಹಿತವಾಗಿದೆ. ಎದ್ದಿರುವ ಕೆಂಧೂಳು ವ್ಯೋಮದಲ್ಲೆಲ್ಲಾ ಹಬ್ಬಿ ಸೂರಜನ ಹೊಂಗಿರಣಗಳೆದುರು ಕೆಮ್ಮೋಡದಂತೆ ಕಾಣುತ್ತಿದೆ. ಸೂರ್ಯೋದಯ ಕಾಲದಲ್ಲಿ ಸೂರ್ಯೋಪಾಸನೆಯಲ್ಲಿ ಪಾಂಡವ – ಕೌರವ ಸೇನೆ ನಿರತವಾಗಿದೆ…

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page