ಭಾಗ 321
ಭರತೇಶ್ ಶೆಟ್ಟಿ, ಎಕ್ಕಾರ್

ಸಂಚಿಕೆ ೩೨೧ ಮಹಾಭಾರತ
ಭೀಷ್ಮಾಚಾರ್ಯರು ದುರ್ಯೋಧನನ ಕುತೂಹಲ ನೋಡಿ ವಿವರಿಸಲಾರಂಭಿಸಿದರು “ನೋಡು ಸುಯೋಧನಾ! ನಮ್ಮ ಬಳಿ ಹನ್ನೊಂದು ಪಾಂಡವರ ಪಕ್ಷದಲ್ಲಿ ಏಳು ಒಟ್ಟಾಗಿ ಹದಿನೆಂಟು ಅಕ್ಷೋಹಿಣಿ ಸೈನ್ಯ ಕುರುಕ್ಷೇತ್ರದಲ್ಲಿ ಸೇರಿಕೊಂಡಿದೆ. ದಿವ್ಯಾಸ್ತ್ರಗಳು ಇತ್ತಂಡಗಳಲ್ಲೂ ಇದೆ. ಪ್ರಸ್ವಾಪನ, ಕಾಳ್ದಂಜನ, ಅಸಿರತ್ನ, ಭಾರ್ಗವ, ಬ್ರಹ್ಮಾಸ್ತ್ರ, ವೈಷ್ಣವ, ನಾರಾಯಣ ಮುಂತಾದ ಮಂತ್ರಾಸ್ತ್ರಗಳು ನಮ್ಮ ಪಕ್ಷದಲ್ಲಿ ಇವೆ. ಹಾಗೆಯೆ ಪ್ರಭಾವಯುಕ್ತವಾದ ಒಂದೆರಡು ಶಕ್ತ್ಯಾಯುಧಗಳೂ ಇದೆ. ಪಾಂಡವರ ಪಕ್ಷದಲ್ಲಿ ಐಂದ್ರ, ಬ್ರಾಹ್ಮ, ಸ್ಥೂಣಾಕರ್ಣ, ಪಾಶುಪತ, ಅಂಜನ, ಕೌಮಾರ, ಆಗ್ನೇಯ, ವಾರುಣ, ಪರ್ಜನ್ಯ, ಮುಂತಾದ ಮಂತ್ರಾಸ್ತ್ರಗಳಿವೆ. ಆದರೆ ಪ್ರತ್ಯಸ್ತ್ರಗಳಿಲ್ಲದ ಮಂತ್ರಾಸ್ತ್ರಗಳನ್ನು ಈ ಯುದ್ದದಲ್ಲಿ ತಿಳಿದವರು ಪ್ರಯೋಗಿಸುವುದಿಲ್ಲ. ಧರ್ಮಯುದ್ಧದ ನಿಯಮವೆ ಹಾಗೆ, ದುರ್ಬಲರ ಮೇಲೆ, ಅಪಾತ್ರರ ಮೇಲೆ ಇಂತಹ ಮಂತ್ರಾಸ್ತ್ರಗಳನ್ನು ಅನುಸಂಧಾನಗೊಳಿಸಿ ಪ್ರಯೋಗಿಸಿದರೆ ವಿನಾಶವಾಗಿ ಹೋದೀತು. ಇದನ್ನರಿತಿರುವ ಉಭಯಕುಲ ಬಿಲ್ಲೋಜ ದ್ರೋಣಾಚಾರ್ಯರು ಅಸ್ತ್ರ ಪ್ರಯೋಗದ ನಿಯಮಗಳ ಕುರಿತಾಗಿ ಎರಡೂ ಪಕ್ಷಗಳಿಗೆ ನಿಯಮವನ್ನು ಸಾರಿ ಹೇಳಿಯಾಗಿದೆ. ಎರಡೂ ಪಕ್ಷದಲ್ಲಿ ಮಹಾಬಲ – ಅತಿಬಲ ವೀರ ಪುರುಷರಿದ್ದಾರೆ. ಯಾರೂ ಯಾರಿಗೂ ಕಡಿಮೆಯಲ್ಲ ಎಂಬ ಹಾಗೆ ಎರಡೂ ಪಕ್ಷಗಳಲ್ಲಿ ಹಂಚಿ ಹೋಗಿದ್ದಾರೆ. ಆದರೆ ನೀನೊಂದು ಮಹಾ ಸತ್ಯವನ್ನು ತಿಳಿದಿರಬೇಕು – ಬಲಾಬಲಗಳಿಗಿಂತಲೂ ದೈವ ಪೌರುಷ ಸದಾ ಕಾಲ ಮಿಗಿಲಾಗಿರುತ್ತದೆ.” ಹೀಗೆ ಹೇಳುತ್ತಾ ಭೀಷ್ಮಾಚಾರ್ಯರು ಪಾಂಡವ ಪಕ್ಷದಲ್ಲಿರುವ ಅರ್ಜುನ, ದ್ರುಪದ, ದೃಷ್ಟದ್ಯುಮ್ನ, ಸಾತ್ಯಕಿ, ಭೀಮಾದಿಗಳ ಸಹಿತ ಅಪ್ರತಿಮ ವೀರರನೇಕರ ವಿವರ ವಿಸ್ತರಿಸಿ ಹೇಳಿದರು. ಹಾಗೆಯೆ ಕೌರವ ಪಕ್ಷದ ಸ್ವತಃ ಭೀಷ್ಮ, ದ್ರೋಣ, ಕೃಪ, ಶಲ್ಯ, ಭೂರಿಶ್ರವಸ್ಸು, ಕೃತವರ್ಮ, ದುರ್ಯೋಧನಾದಿ ವೀರರ ಸಾಮರ್ಥ್ಯಗಳನ್ನೂ ವಿವರಿಸಿದರು. ಕರ್ಣನ ಬಗ್ಗೆ ಕೇಳಿದಾಗ ಆತ ಅರ್ಧರಥಿ ಎಂದು ಹೇಳಿದರು.
ಈ ಮಾತು ಕೇಳಿ ಕರ್ಣನಿಗೆ ತಡೆದುಕೊಳ್ಳಲಾರದ ಸಿಟ್ಟು ಬಂತು. “ಮಿತ್ರ ದುರ್ಯೋಧನಾ! ನಿನ್ನ ಪಿತಾಮಹ ಪಾಂಡವ ಪಕ್ಷಪಾತಿಯಾಗಿ ವ್ಯವಹರಿಸುತ್ತಿದ್ದಾರೆ. ಅರ್ಜುನನ್ನು ಕೊಲ್ಲುವ ಪ್ರತಿಜ್ಞೆಗೈದ ನನ್ನನ್ನು ಅರ್ಧರಥಿ ಎಂದು ನಿಂದಿಸುತ್ತಿದ್ದಾರೆ. ಹಾಗೆ ಹೇಳುವಂತಹ ಅಗತ್ಯವಾದರೂ ಏನಿತ್ತು? ಸೇನಾಧಿಪತಿಯಾದ ಇವರು ತನ್ನ ಪಕ್ಷದ ವೀರರಿಗೆ ಉತ್ತೇಜನ ನೀಡಬೇಕು ಹೊರತು ಸ್ಥೈರ್ಯ ಕುಗ್ಗಿಸುವ – ಕಾರ್ಯ ಮಾಡುವುದು ಎಷ್ಟು ಸರಿ? ನನ್ನ ಬಗ್ಗೆ ಇಂತಹ ಕೀಳು ಅಭಿಪ್ರಾಯ ಹೊಂದಿರುವ ನಿನ್ನ ಅಜ್ಜನ ಸೇನಾಪತಿತ್ವದಲ್ಲಿ ಕರ್ಣನ ಅಗತ್ಯವಿಲ್ಲ. ಮಹಾ ಮಹಿಮ ಭೀಷ್ಮರು ಸಾಮರ್ಥ್ಯವಂತರು ಹೌದಲ್ಲವೇ? ಯುದ್ದವನ್ನು ಅವರು ಗೆದ್ದು ಕೊಡುವಂತಾಗಲಿ. ಇಲ್ಲ ಅವರ ಅವಧಿ ಮುಗಿದ ಮೇಲೆ ನಾನು ರಣ ಪ್ರವೇಶ ಕಾಣುವೆ. ‘ನನ್ನನ್ನು ನಿಂದಿಸಿದ ಭೀಷ್ಮರು ಎಲ್ಲಿಯವರೆಗೆ ರಣಾಂಗಣದಲ್ಲಿರುವರೊ – ಅಲ್ಲಿಯವರೆಗೆ ಆಯುಧಧಾರಣೆ ಮಾಡಲಾರೆ, ಯುದ್ದ ಮಾಡಲಾರೆ’ ನನ್ನನ್ನು ಕ್ಷಮಿಸು ಮಿತ್ರಾ” ಎಂದನು.
ಕೇಳಿಸಿಕೊಂಡಂತಹ ಭೀಷ್ಮಾಚಾರ್ಯರಿಗೂ ಕರ್ಣನ ಮಾತುಗಳು ಅಸಮಾಧಾನವನ್ನು ಉಂಟು ಮಾಡಿತು. “ರಾಧೇಯಾ! ನಾನಾಗಿ ಏನನ್ನೂ ಬೇಕು ಬೇಕೆಂದು ಹೇಳಿದವನಲ್ಲ. ವೀರರ ಯೋಗ್ಯತೆ ವಿವರ ದುರ್ಯೋಧನ ಕೇಳಿದ ಕಾರಣದಿಂದ ವಿವರಿಸಿದ್ದೇನೆ. ಸೇನಾಪತಿಯೂ ಕೌರವನಿಗೆ ಅಜ್ಜನೂ ಆಗಿ ನನಗೆ ತಿಳಿದ ಸತ್ಯವನ್ನಷ್ಟೆ ಆಡಿದ್ದೇನೆ. ಯಾರನ್ನೂ ಮೆಚ್ಚಿಸಿ, ಸೆಟೆಯನ್ನಾಡಿ ಉತ್ಸಾಹ ತುಂಬುವ ದುರ್ಬುದ್ದಿ ನನಗಿಲ್ಲ. ಕರ್ಣಾ! ನಾನು ಪಾಂಡವ ಪಕ್ಷಪಾತಿಯಾಗಿ ನಿನ್ನನ್ನು ಅರ್ಧರಥಿ ಎಂದು ಕರೆದುದಲ್ಲ. ನಿನ್ನ ಯೋಗ್ಯತೆಯೆ ಅಷ್ಟು. ಸಾಹಸವೇನೊ ನಿನ್ನಲ್ಲಿ ಇದೆ, ಆದರೆ ಯಾವಾತ ತಾನು ಬದುಕಿ ಉಳಿಯಲು ರಣರಂಗ ಬಿಟ್ಟು ಹಲವು ಬಾರಿ ಓಡಿದ್ದಾನೋ, ಆತ ಅಸಮರ್ಥನು ಆಗಿರುತ್ತಾನೆ. ಪಾಂಚಾಲದ ಸ್ವಯಂ ವರ ಮಂಟಪದಿಂದ ಹಿಡಿದು, ಘೋಷ ಯಾತ್ರೆಯ ಗಂಧರ್ವ ಚಿತ್ರಸೇನನ ಜೊತೆಯ ಯುದ್ದ, ಗೋಗ್ರಹಣ ಸಮಯ ಪಾರ್ಥನ ಎದುರಿನ ಸಮರ ಹೀಗೆ ಹಲವು ಬಾರಿ ಯುದ್ದ ಸೋಲು ಗೆಲುವು ನಿಶ್ಚಯವಾಗುವ ಮೊದಲೆ ಓಡಿ ಹೋಗಿ ಬದುಕಿ ಕೊಂಡವ ನೀನು. ಹಾಗಾಗಿ ನಿನಗೆ ಮಹಾರಥಿಯ ಸ್ಥಾನ ನೀಡಲಾಗದು ಎಂದರು. ಈಗಲೂ ಒಂದು ಮಾತು, ಏನು ಯುದ್ದದಲ್ಲಿ ನಾನಿರುವವರೆಗೆ ನೀನು ಶಸ್ತ್ರ ಸನ್ಯಾಸ ಸ್ವೀಕರಿಸುವೆಯಾ?ದುರ್ಯೋಧನನ ಆಪ್ತ ಮಿತ್ರ ಎಂಬ ಏಕೈಕ ಕಾರಣಕ್ಕೆ ನೀನು ಉಸಿರಾಡುತ್ತಿರುವೆ. ಇಲ್ಲದಿದ್ದರೆ ನನ್ನ ನಂತರಕ್ಕೂ ನೀನು ಇಲ್ಲದಂತೆ ಈಗಲೆ ಮಾಡಿ ಬಿಡುತ್ತಿದ್ದೆ. ಆದರೆ ಈಗ ಅಷ್ಟು ಮುಂದುವರಿಯುವುದಿಲ್ಲ. ಹೇ ದುರ್ಯೋಧನಾ! ಈ ನೀಚನನ್ನು ನನ್ನ ಸೇನಾಧಿಕಾರದಿಂದ ಪ್ರತ್ಯೇಕಿಸಿ ಹೊರಗಿಡು – ನನಗೀತ ಅನಗತ್ಯ” ಎಂದು ಘರ್ಜಿಸಿ ಅಬ್ಬರಿಸಿದರು.
ದುರ್ಯೋಧನ ಶತಾಯ ಗತಾಯ ಪ್ರಯತ್ನದಿಂದ ಕರ್ಣನನ್ನು ಓಲೈಸುವ ಪ್ರಯತ್ನ ಮಾಡಿದರೂ ಕರ್ಣನ ಮನಸ್ಸಿಗಾದ ಅಪನಿಂದೆಯ ನೋವಿನಿಂದ ಆತ ಒಪ್ಪಲಿಲ್ಲ. ದುರ್ಯೋಧನನಿಗೆ ಯುದ್ದಾರಂಭಕ್ಕೆ ಮುಂಚಿತವಾಗಿ ಹೊಸ ಚಿಂತೆ ಆವರಿಸಿತು.
ಮುಂದುವರಿಯುವುದು…






















































