28.1 C
Udupi
Monday, March 30, 2026
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ 319

ಭರತೇಶ ಶೆಟ್ಟಿ, ಎಕ್ಕಾರ್

“ಧರ್ಮರಾಜಾ! ನಾನು ದುರ್ಯೋಧನನಿಂದ ನಿಯುಕ್ತನಾದ ದೂತನು. ಆತನು ನಿನ್ನ ಬಳಿ ಹೇಳಬೇಕೆಂದು ಹೇಳಿ ಕಳುಹಿಸಿರುವುದನ್ನು ನಿವೇದಿಸಲು ಅನುಮತಿ ನೀಡಬೇಕು. ಮಾತ್ರವಲ್ಲ ನಾನು ಹೇಳುವುದನ್ನು ಪೂರ್ತಿಯಾಗಿ ನೀವು ಕೇಳಿಸಿಕೊಳ್ಳಬೇಕು” ಎಂದು ಬೇಡಿದನು. ಆಗ ಧರ್ಮರಾಯ ಉಲೂಕನಿಗೆ ಹೇಳುವುದಕ್ಕೆ ಅನುಮತಿಯಿತ್ತನು. ಉಲೂಕ ಆರಂಭಿಸಿದ “ಅಯ್ಯಾ ಯುಧಿಷ್ಟಿರಾ! ಧರ್ಮಾತ್ಮನು ನೀನು ಎಂಬುವುದಾಗಿ ಎಲ್ಲರೂ ನಂಬಿದ್ದಾರೆ. ನಿನಗೊಂದು ಕಥೆಯನ್ನು ಹೇಳುತ್ತೇನೆ. ಹರಿ ಭಕ್ತನಾದ ಪ್ರಹ್ಲಾದನ ಬಗ್ಗೆ ನಿಮಗೂ ತಿಳಿದಿರಬಹುದು. ಸಾತ್ವಿಕನಾದ ಆತನ ಸಮಸ್ತ ರಾಜ್ಯವನ್ನೂ, ಐಶ್ವರ್ಯವನ್ನೂ ದೇವತೆಗಳು ತಂತ್ರದಿಂದ ವಶಪಡಿಸಿಕೊಂಡರಂತೆ. ಆಗ ಪ್ರಹ್ಲಾದನು ಸೂಚ್ಯವಾಗಿ ಒಂದು ವಿಚಾರ ಹೇಳಿದನಂತೆ “ಯಾವನು ಬಹಿರಂಗವಾಗಿ ಆರೋಹಣಗೊಳಿಸಿದ ಧ್ವಜದಂತೆ ಧರ್ಮ ಚಿಹ್ನೆಗಳನ್ನು ಪ್ರದರ್ಶಿಸುತ್ತಾ ಇದ್ದು, ಅಂತರ್ಯದಲ್ಲಿ ಪಾಪ ಕಾರ್ಯಗಳನ್ನು ಬಚ್ಚಿಟ್ಟಿರುತ್ತಾನೋ, ಆತನದು ಸದ್ಧರ್ಮವಲ್ಲ ಬದಲಾಗಿ ಬಿಡಾಲ ಧರ್ಮವಾಗುತ್ತದೆ”. ಪ್ರಹ್ಲಾದನ ಸೂಚ್ಯವೂ, ಆಕ್ರೋಶಭರಿತವೂ ಆದ ಈ ವಾಕ್ಯದ ಹಿಂದಿರುವ ವಿವರವಾದ ಕಥೆಯನ್ನು ನಾರದ ಮಹರ್ಷಿಗಳು ಮಹಾರಾಜ ಧೃತರಾಷ್ಟ್ರನಿಗೆ ಹೇಳಿದ್ದಾರಂತೆ. ಆ ಕಥೆ ಏನೆಂದರೆ… ಬಹಳ ಹಿಂದೆ ತಂತ್ರ ಬುದ್ದಿಯುಳ್ಳ ಒಂದು ಬೆಕ್ಕು ಗಂಗಾ ತೀರದಲ್ಲಿ ವಾಸಿಸುತ್ತಿತ್ತಂತೆ. ಪ್ರಾಯವಾಗಿ ವೃದ್ಧಾಪ್ಯ ಆವರಿಸಿ ಮುದಿಯಾಗಿ ದುರ್ಬಲಗೊಂಡ ಕಾಲದಲ್ಲಿ ತನ್ನ ಆಹಾರ ಹುಡುಕಿ ತಿನ್ನುವಲ್ಲಿ ಅಸಮರ್ಥವಾಯಿತು. ಆಗ ಅದರ ಶರೀರಕ್ಕೆ ದೌರ್ಬಲ್ಯ ಬಂದಿದ್ದರೂ ಬುದ್ದಿ ತೀಕ್ಷ್ಣವಾಗಿತ್ತು. ತಂತ್ರಗಾರನಾದ ಬೆಕ್ಕು ಎಲ್ಲ ಪ್ರಾಣಿ ಪಕ್ಷಿಗಳಿಗೆ ಕೇಳಿಸುವಂತೆ ಘೋಷಣೆ ಮಾಡಿತಂತೆ. ‘ನಾನು ಸರ್ವಸಂಗ ಪರಿತ್ಯಾಗಿಯಾಗಿದ್ದೇನೆ. ಅಹಿಂಸೆಯ ವೃತವನ್ನು ಆಚರಿಸುತ್ತಿದ್ದೇನೆ. ಪ್ರಾಣಿ ಹತ್ಯೆಯನ್ನು ಸಂಪೂರ್ಣವಾಗಿ ತೊರೆದುಬಿಟ್ಟಿದ್ದೇನೆ.’ ಹೀಗೆ ಹೇಳುತ್ತಾ ತನ್ನ ಕೈ ಕಾಲುಗಳನ್ನು ಆಕಾಶದತ್ತ ಮೇಲೆತ್ತಿ ಚಾಚಿ ಸನ್ಯಾಸಿ ಯಾಗಿ ತಪೋನಿರತನಾಗಿದ್ದೇನೆ ಎಂದು ತೋರಿಸಿಕೊಂಡಿತಂತೆ. ಇದನ್ನೆಲ್ಲಾ ನೋಡುತ್ತಿದ್ದರೂ ಪಕ್ಷಿ – ಇಲಿಗಳು ಹತ್ತಿರ ಸುಳಿಯಲಿಲ್ಲ. ಸ್ವಲ್ಪ ಸಮಯ ಕಳೆದಾಗ ಅವುಗಳೊಳಗೆ ಕುತೂಹಲ ಹೆಚ್ಚಾಗಿ ಪರೀಕ್ಷಿಸುವ ಮನಸ್ಸಾಯಿತಂತೆ. ಹಾಗೆಯೆ ಜಾಗರೂಕತೆಯಿಂದ ಪರೀಕ್ಷೆಗೆ ಮುಂದಾದವು. ಬೆಕ್ಕು ಮಾತ್ರ ಧ್ಯಾನಾವಸ್ಥೆಯಿಂದ ಕದಲಲಿಲ್ಲ. ಇಲಿಗಳು ಬೆಕ್ಕಿನ ಹತ್ತಿರ ಬಂದು ನಿಂತರೂ ಏನೂ ಪ್ರತಿಸ್ಪಂದನೆ ನೀಡದೆ ಹಾಗೆಯೆ ತಪಸ್ಸನ್ನಾಚರಿಸುತ್ತಿತ್ತಂತೆ. ಈಗ ಇಲಿ, ಪಕ್ಷಿಗಳಿಗೆ ಆವರಿಸಿದ್ದ ಬೆಕ್ಕಿನ ಬಗೆಗಿನ ಭಯ ದೂರವಾಯಿತು. ಬೆಕ್ಕು ತಪೋ ಮಗ್ನನಾಗಿರುವಾಗ ಅದರ ಬಳಿಯಲ್ಲಿ ನಿರ್ಭಯವಾಗಿ ಓಡಾಡಿಕೊಂಡು ತಮ್ಮ ಇಚ್ಚಾನುಸಾರ ಬದುಕತೊಡಗಿದವಂತೆ. ಕೆಲ ದಿನ ಆಹಾರ ಇಲ್ಲದೆ ಪೂರ್ತಿ ಸೊರಗಿ ನಿತ್ರಾಣವಾದ ಬೆಕ್ಕು ಒಂದು ದಿನ ಆರ್ತನಾಗಿ ಎಲ್ಲರನ್ನೂ ಬಳಿ ಕರೆಯಿತಂತೆ. ಕರೆದು ಮುಂದೆ ಎಲ್ಲರೂ ಕುಳಿತುಕೊಳ್ಳುವಂತೆ ವಿನಂತಿ ಮಾಡಿತಂತೆ. ಎಲ್ಲರೂ ಆಸೀನರಾದ ಬಳಿಕ “ಬಾಂಧವರೇ, ಈಗಾಗಲೇ ನಾನು ಹಿಂಸೆಯನ್ನು ತೊರೆದಿದ್ದೇನೆ. ಯಾವ ಪ್ರಾಣಿಯನ್ನೂ ಕೊಲ್ಲದೆ ನಿರಾಹಾರನಾಗಿದ್ದು ಮನಸ್ಸನ್ನು ಶುದ್ದಮಾಡಿಕೊಂಡು ಧರ್ಮಮಾರ್ಗವನ್ನು ಅನುಸರಿಸುತ್ತಿದ್ದೇನೆ. ಇದೇ ರೀತಿ ಮುಂದುವರಿದು ಶುದ್ಧನಾಗುವ ಧ್ಯೇಯ ಹೊಂದಿದ್ದೇನೆ” ಎಂದು ಹೇಳಿತಂತೆ. ಇಲಿಗಳೆಲ್ಲಾ ಬೆಕ್ಕಿನ ಮಾತನ್ನು ಸತ್ಯವೆಂದು ನಂಬಿದವು. ಪಕ್ಷಿಗಳಿಗೂ ಹೌದು ಬೆಕ್ಕು ಹೇಳುತ್ತಿರುವುದು ನಿಜ. ಈಗಾಗಲೆ ಆಹಾರ ತೊರೆದು ಉಪವಾಸದಿಂದ ಬೆಕ್ಕು ತಪ್ಪಸ್ಸನ್ನು ಆಚರಿಸುತ್ತಿದೆ. ನಂತರ ಅವುಗಳೊಳಗೆ ಮಾತನಾಡತೊಡಗಿದವಂತೆ- “ನಮಗೆ ಈ ಬೆಕ್ಕಿನ ಅಗತ್ಯವಿದೆ. ನಮ್ಮನ್ನು ಹಿಡಿದು ತಿನ್ನುತ್ತಿದ್ದ ಈ ಬೆಕ್ಕು ನಮ್ಮ ಜೊತೆ ಇರುವಾಗ ನಮಗೆ ಕೇವಲ ಈ ಬೆಕ್ಕಿನ ಭಯವಿತ್ತು. ಈಗ ಈ ಬೆಕ್ಕು ಸತ್ತರೆ ಬೇರೆ ಹಾವುಗಳು, ದೊಡ್ಡ ಮಾಂಸಾಹಾರಿ ಹಕ್ಕಿಗಳು ಇಲ್ಲಿಗೆ ಬಂದರೆ ನಮಗೆ ಆಪತ್ತು ತಪ್ಪಿದ್ದಲ್ಲ. ಹಾಗಾಗಿ ಈ ಬೆಕ್ಕಿನ ರಕ್ಷಣೆಯ ಅಗತ್ಯ ನಮಗಿದೆ” ಎಂದು ಚರ್ಚಿಸಿದವಂತೆ. ಅದರಂತೆ ಇಲಿಗಳು ತಮ್ಮವರೊಳಗೆ ಅಶಕ್ತರೂ, ದುರ್ಬಲರೂ, ಎಳೆಯರೂ ಆದವರನ್ನು ಬೆಕ್ಕಿನ ಸೇವೆಗಾಗಿ ನಿಯೋಜಿಸಿದರು. ‘ಈ ಬೆಕ್ಕು ನಮ್ಮ ಹಿತೈಷಿ. ನಮಗೆಲ್ಲರಿಗೂ ಸೋದರ ಮಾವ ಇದ್ದ ಹಾಗೆ’ ಎಂದು ಹೇಳಿಕೊಂಡವು. ಉಳಿದ ಇಲಿಗಳು ಆಹಾರ ಹುಡುಕಿ ಸಂಗ್ರಹಿಸಲು ಹೊರ ಹೋದವು. ಹೀಗಿರಲು ಬೆಕ್ಕು, ಸೇವಕ ಇಲಿಗಳ ಬಳಿ ‘ನನಗೆ ಗಂಗಾನದಿಯ ತೀರಕ್ಕೆ ಹೋಗಿ ಅಲ್ಲಿ ಧ್ಯಾನ ಮಾಡಬೇಕೆಂಬ ಮನಸ್ಸಾಗಿದೆ’ ಎಂದು ಹೇಳಿತಂತೆ. ಅಂತೆಯೆ ಸೇವಕರಾಗಿದ್ದ ಇಲಿಗಳಲ್ಲಿ ಕೆಲವು ಇಲಿಗಳು ಸೇರಿ ಬೆಕ್ಕನ್ನು ಕಾಡಿನಿಂದ ಗಂಗಾ ನದಿ ತೀರಕ್ಕೆ ಕರೆ ತಂದವು. ಅಲ್ಲಿ ಬೆಕ್ಕು ಧ್ಯಾನ ಮಾಡುವಾಗ ಇಲಿಗಳನ್ನು ತುಸು ದೂರ ನಿಂತು ಧ್ಯಾನಕ್ಕೆ ಭಗ್ನವಾಗದಂತೆ ಸಹಕರಿಸುವಂತೆ ಕೇಳಿಕೊಂಡಿತು. ಧ್ಯಾನ ಮುಗಿದ ಬಳಿಕ ಬೆಕ್ಕನ್ನು ಇಲಿಗಳು ಮತ್ತೆ ಕಾಡಿಗೆ ಮರಳಿ ಕರೆ ತರುತ್ತಿದ್ದವು. ಹೀಗೆ ದಿನಚರಿ ಸಾಗುತ್ತಿರಲು ಆರಂಭದಲ್ಲಿ ಇಲಿಗಳಿಗೆ ಗೊತ್ತಾಗಲಿಲ್ಲ‌. ನಂತರ ಸಂಶಯ ಮೂಡತೊಡಗಿತು, ದಿನಕಳೆದಂತೆ ಜೊತೆಗಿದ್ದ ಇಲಿಗಳು ಮಾಯವಾಗತೊಡಗಿದ್ದವು. ಏನಾಗುತ್ತಿದೆ ಎಂದು ಯಾರಿಗೂ ತಿಳಿಯುತ್ತಿರಲಿಲ್ಲ. ಇಲಿಗಳ ಸೇವಾ ಬಳಗ ಕ್ಷೀಣವಾಯಿತಂತೆ. ಈ ಬಗ್ಗೆ ಸಂದೇಹಕ್ಕೊಳಗಾದ ‘ಡಿಂಡಿಗ’ಎಂಬ ಇಲಿ ಸನ್ಯಾಸಿ ಬೆಕ್ಕಿನ ಸೇವಕ ಇಲಿಗಳನ್ನು “ನೀವು ಮುಂದೆ ಹೋಗಿ ಗಂಗಾತೀರದಲ್ಲಿ ಒಟ್ಟಾಗಿ ನಿಲ್ಲಿ, ನಾನು ಬೆಕ್ಕಿನ ಜೊತೆ ಬರುತ್ತೇನೆ. ರಹಸ್ಯ ಏನೆಂದು ಪತ್ತೆ ಹಚ್ಚೋಣ” ಎಂದಿತು. ಆದರೆ ಆ ದಿನ ಡಿಂಡಿಗ ಇಲಿ ಮಾಯವಾಯಿತು. ಈಗ ಉಳಿದ ಇಲಿಗಳಿಗೆ ಭಯವಾಗ ತೊಡಗಿತು. ಇಲಿಗಳ ಮಧ್ಯೆ “ಕೀಲಕ” ಎಂಬ ಜಾಣ ಇಲಿಯೊಂದಿತ್ತು. ಆ ಇಲಿಗೆ ‘ಈ ಬಿಡಾಲ ಬೆಕ್ಕು ಸಾಮಾನ್ಯದವನಲ್ಲ, ಯಾಕೊ ಬೆಕ್ಕಿನ ಮೇಲೆ ಸಂಶಯವಿದೆ. ನಯವಂಚಕನಾಗಿರಬೇಕು ಈ ಬಿಡಾಲ’. ಹೀಗೆ ಕೀಲಕ ಎಂಬ ಇಲಿಗೆ ಸಂದೇಹ ಮೂಡಿತಂತೆ. ರಹಸ್ಯ ಭೇದಿಸಲು ತಾನೊಬ್ಬ ಮೊದಲಾಗಿ ಗಂಗಾ ತೀರದವರೆಗೆ ಹೋಗಿ ಹುಡುಕತೊಡಗಿತು. ಅಲ್ಲಿ ಅದಕ್ಕೆ ಬೆಕ್ಕಿನ ಮಲ ಕಾಣ ಸಿಕ್ಕಿತು. ನಿರಾಹಾರಿಯಾದ ಬೆಕ್ಕು ಮಲ ವಿಸರ್ಜಿಸಲು ಸಾಧ್ಯವಿಲ್ಲವಲ್ಲ? ಎಂದು ಸೂಕ್ಷ್ಮವಾಗಿ ಗಮನಿಸಿದಾಗ ಅದರಲ್ಲಿ ಜೀರ್ಣವಾಗದೆ ಉಳಿದ ಇಲಿಗಳ ಮೈಯ ರೋಮಗಳು ಕಾಣ ಸಿಕ್ಕವು. ಕೀಲಕನ ಸಂದೇಹ ಯಥಾರ್ಥವಾಗಿಯೂ ನಿಜವೇ ಆಗಿತ್ತು. ಧ್ಯಾನಕ್ಕೆ ಭಂಗವಾಗಬಾರದೆಂದು ದೂರ ಕಳುಹಿಸುತ್ತಿದ್ದ ಇಲಿಗಳಲ್ಲಿ ಹಿಂದೆ ಉಳಿದ ಇಲಿಯನ್ನು ಕೊಂದು ಬೆಕ್ಕು ತಿನ್ನುತ್ತಿತ್ತು. ಸತ್ಯ ತಿಳಿದು ಮರಳಿ ಬಂದ ಕೀಲಕ, ಬಿಡಾಲ ಬೆಕ್ಕನ್ನು ಗಮನವಿಟ್ಟು ನೋಡಿದಾಗ ಹಿಂದೆ ಸೊರಗಿ ಹೋಗಿದ್ದ ಬೆಕ್ಕು ಈಗ ದಷ್ಟಪುಷ್ಟವಾಗಿ ಮೈಬೆಳೆಸಿಕೊಂಡಿದೆ. ನಮ್ಮ ಎದುರಲ್ಲಿ ತಪಸ್ಸು ಎಂಬ ನೆಪದಿಂದ ಕೈಕಾಲು ಮೇಲೆ ಮಾಡಿ ಮಲಗಿರುತ್ತದೆ. ನಂಬಿ ಮೋಸ ಹೋದ ನಮ್ಮ ಕಥೆ ಕೆಟ್ಟಿತು ಎಂದು ಕೀಲಕ ಅಲ್ಲಿಂದ ಓಡಿ ಹೊರಬಂದು, ತನ್ನವರನ್ನೆಲ್ಲಾ ಸೇರಿಸಿ, ಬೆಕ್ಕಿನ ತಂತ್ರ ಮತ್ತು ಕಾಣೆಯಾದ ಇಲಿಗಳ ಸಾವಿನ ಗುಟ್ಟನ್ನು ವಿವರಿಸಿತಂತೆ. ನಾವೆಲ್ಲ ಇನ್ನೂ ದಡ್ಡರಾಗಿ ಇಲ್ಲಿಯೆ ಇದ್ದರೆ ಈ ಬೆಕ್ಕು ನಮ್ಮನ್ನು ಒಬ್ಬೊಬ್ಬರಾಗಿ ತಿಂದು ಮುಗಿಸುತ್ತದೆ. ಇಲ್ಲಿಂದ ತಪ್ಪಿಸಿಕೊಂಡು ಬೇರೆಡೆಗೆ ಹೋಗಿ ಬದುಕೋಣ ಎಂದು ಓಡಿ ಹೋದವಂತೆ. ಸಾಕಷ್ಟು ವಿಶ್ರಾಂತಿಯೂ ಆಹಾರವೂ ಸಿಕ್ಕಿದ ಕಾರಣ ಮರಳಿ ತ್ರಾಣ ಪಡೆದ ಬೆಕ್ಕು ತನ್ನ ಬದುಕಿಗೆ ಬೇರೆ ದಾರಿ ಹುಡುಕಿಕೊಂಡು ಹೊರಟಿತಂತೆ. ಈ ಬಿಡಾಲ ಬೆಕ್ಕಿನಂತೆ ಬಾಯಿಯಲ್ಲಿ ಶಾಂತಿ ಶಾಂತಿ ಶಾಂತಿ ಎಂದು ಉಚ್ಚರಿಸುತ್ತಾ, ಧರ್ಮ, ಸತ್ಯ, ನ್ಯಾಯ, ಆತ್ಮ ಶುದ್ಧ ಎಂಬೆಲ್ಲಾ ಕಪಟದ ಮುಸುಕು ಹಾಕಿಕೊಂಡು ವಂಚನೆಯಿಂದ ತನ್ನ ಕಾರ್ಯ ಸಾಧಿಸುವ ಕ್ರೌರ್ಯ ತೋರುವ ಬುದ್ದಿಗೆ “ಬಿಡಾಲ ನೀತಿ” ಎಂದು ಹೆಸರು. ಆದರೆ ಅಂತಹ ಕಪಟ ಹೆಚ್ಚು ದಿನ ಗುಟ್ಟಾಗಿ ಉಳಿಯದು. ಯುಧಿಷ್ಟಿರಾ! ನೀನೂ ಅದನ್ನು ತಿಳಿದು ಧರ್ಮ ಎಂಬ ಮರೆಯಲ್ಲಿ ನಿಲ್ಲುವ ಪ್ರಯತ್ನ ಮಾಡುವುದನ್ನು ಬಿಡಬೇಕೆಂದು ದುರ್ಯೋಧನ ಹೇಳಿದ್ದಾನೆ” ಎಂದನು.

ಒಪ್ಪಿದಂತೆ ಪೂರ್ತಿ ಕಥೆ ಕೇಳಿದ ಧರ್ಮರಾಯ “ಅಯ್ಯಾ ಉಲೂಕ! ಯಾವುದು ಧರ್ಮವೆಂದು ನನಗೆ ಪೂರ್ಣ ವಿಶ್ವಾಸ ಇದೆಯೋ ಅದನ್ನೇ ನಂಬಿ ಅನುಸರಿಸ ತಕ್ಕವನು ನಾನು. ಆ ಬಗ್ಗೆ ಯಾರಿಗೂ ಸಂದೇಹ ಬೇಡ” ಎಂದು ಶಾಂತ ಚಿತ್ತನಾಗಿ ನುಡಿದನು.

ಆದರೆ ಕೃಷ್ಣನಿಗೆ ಏಕೋ ಇದು ಸರಿ ಕಾಣಲಿಲ್ಲ…”

ಮುಂದುವರಿಯುವುದು…

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page