ಭಾಗ – 316
ಭರತೇಶ ಶೆಟ್ಟಿ, ಎಕ್ಕಾರ್

ಒಬ್ಬಾತ ಕ್ರೀಡಾಪಟುವಿಗೆ ಸ್ಪರ್ಧೆ ನೆಚ್ಚಿನ ವಿಷಯ. ಕ್ಷಾತ್ರ ಯೋಧನಿಗೆ ಯುದ್ಧವೂ ಹಾಗೆ ಹುಮ್ಮಸ್ಸು ನೀಡಿ ಗೆಲ್ಲಲು ಹಾತೊರೆಯುವಂತೆ ಪ್ರೇರೇಪಿಸುವ ಕ್ರಿಯೆ. ಆದರೆ ಲೋಕ ಲೋಕಗಳಲ್ಲೂ ಅಸದಳ ವೀರನೆಂದು ಪರಿಗಣಿತ ಅರ್ಜುನ ಇಂದು ಯುದ್ಧ ಒದಗಿದ ಸಮಯ ವಿಮುಖನಾಗಿದ್ದಾನೆ. ಶಸ್ತ್ರ ತೊರೆದು ಶರಣಾಗತಿಗೆ ಸಿದ್ಧನಾಗಿದ್ದಾನೆ. ಇದೆಲ್ಲವನ್ನೂ ಕಂಡು ಶ್ರೀ ಕೃಷ್ಣ “ಹೇ ಪಾರ್ಥಾ! ನಿನ್ನೊಳಗೆ ಅಕಾಲಿಕವಾದ ಭಯ, ವ್ಯಥೆ ಎಲ್ಲಿಂದ ಆವಿರ್ಭವಿಸಿತು? ಜಿತೇಂದ್ರಿಯನೂ, ಸ್ಥಿತ ಪ್ರಜ್ಞನೂ, ಸತ್ಕುಲ ಪ್ರಸೂತನೂ, ಅತುಲ ಶೌರ್ಯವಂತನೂ ಆದ ನಿನ್ನ ಮನವೇಕೆ ಚಂಚಲತೆಗೆ ಒಳಗಾಗಿದೆ? ಮನೋ ದೌರ್ಬಲ್ಯ ನಿನ್ನಂತಹ ಸ್ಥೈರ್ಯವಂತನಿಗೆ ಭೂಷಣವಲ್ಲ. ಇಂತಹ ತಲ್ಲಣ, ವಿಮುಖತೆ ಅಪಯಶಸ್ಸಿಗೂ, ಅಶ್ರೇಯಸ್ಸಿಗೂ ಸೇತುವಾಗಿ ದುರ್ಗತಿ ಪ್ರಾಪ್ತವಾದೀತು. ರಣಾಂಗಣದಲ್ಲಿ ಹೇಡಿಯಾಗಿ ಹೆದರಿ ಓಡುತ್ತಿದ್ದ ಉತ್ತರಕುಮಾರನನ್ನು ಧೀರನನ್ನಾಗಿಸಿ ಇಲ್ಲಿರುವ ನಿನ್ನ ಬಂಧುಗಳನ್ನು ಸ್ವಯಂ ನೀನೆ ಎದುರಿಸಿ ಗೆದ್ದಿದ್ದೆ. ಆದರೆ ಈಗ ನೀನು ಉತ್ತರ ಕುಮಾರನಂತೆ ಅಂಜಿ ಅಳುಕುತ್ತಿರುವೆ – ಏನಿದು ವಿಪರ್ಯಾಸ? ಇಬ್ಬಗೆಯ ಮನೋವೃತ್ತಿಯೇ ಅರ್ಜುನನಲ್ಲಿ? ಒಂದು ವಿಚಾರ ತಿಳಿದು ಕೋ, ಯಾರನ್ನು ನೀನು ನಿನ್ನ ಬಂಧುಗಳು, ವಧಾರ್ಹರಲ್ಲ – ಹಾಗೆ ಮಾಡಿದರೆ ಬಂಧು ಹತ್ಯಾ ಪಾತಕ ಪ್ರಾಪ್ತವಾದೀತು ಎಂದು ಭಯ ಪಡುತ್ತಿರುವೆಯೋ, ಆ ಅವರೇ ನಿನ್ನ ಸಂಹಾರಕ್ಕಾಗಿ ಸರ್ವ ಪ್ರಯತ್ನಕ್ಕೆ ಸಿದ್ಧರಾಗಿದ್ದಾರೆ. ಅವಕಾಶ ಕೊಟ್ಟೆಯಾದರೆ ಸುಲಲಿತವಾಗಿ ನಿನ್ನನ್ನು ನಿಗ್ರಹಿಸುತ್ತಾರೆ ಎಂಬುವುದು ನಿಸ್ಸಂಶಯ. ಹಾಗಾಗಿ ಇದಿರಾಗಿ ನಿಂತಿರುವ ಯಾರೂ ಕ್ಷಮಾರ್ಹರಲ್ಲ. ದಯೆ ತೋರಬೇಡ ಎದ್ದು ಯುದ್ದಕ್ಕೆ ಸಿದ್ಧನಾಗು” ಎಂದನು.
ಅರ್ಜುನನಿಗೆ ಕೃಷ್ಣನ ಮಾತುಗಳಿಂದ ಮತ್ತಷ್ಟು ವೇದನೆಯಾಯಿತು. “ವಾಸುದೇವಾ! ನಾನು ರಣಾಂಗಣದಲ್ಲಿ ಶಸ್ತ್ರತ್ಯಾಗ ಮಾಡಿರುವುದು ನಿಜ. ಅದಕ್ಕೆ ಕಾರಣ ನನ್ನನ್ನು ಎಚ್ಚರಿಸಿರುವ ಧರ್ಮಬುದ್ಧಿ. ಇಂದಿನವರೆಗೆ ನಾನು ಯುದ್ದಕ್ಕೆ ಹೆದರಿದವನಲ್ಲ. ಇಂದ್ರಕೀಲಕದಲ್ಲಿ ಸಾಕ್ಷಾತ್ ಮಹಾದೇವ ಪರಶಿವನು ಪರಿವಾರ ಸಹಿತನಾಗಿ ಎದುರಾಗಿ ಹೋರಾಟವಾದಾಗಲೂ ಸರ್ವಶಕ್ತಿಯಿಂದ ಕಾದಾಡಿದ್ದೇನೆ. ಅಂಜಿ ಅಳುಕಿದವನು ನಾನಲ್ಲ. ಆದರೆ ಇಂದಿನ ಯುದ್ದ ಹಾಗಲ್ಲ. ಎರಡು ಕಾರಣದಿಂದ ಈ ಯುದ್ದ ಪಾತಕ ಪ್ರಾಯವಾಗಿದೆ. ಮೊದಲಾಗಿ ಸ್ವಜನ ಬಂಧುಗಳ ಹತ್ಯೆಯಾಗುತ್ತದೆ. ಇನ್ನೊಂದು ಮುಖ್ಯ ಕಾರಣವಿದೆ. ಅಮಿತ ಸಂಖ್ಯೆಯಲ್ಲಿ ಯುವಕ ಯೋಧರು ಸಮಾಹಿತರಾಗಿದ್ದಾರೆ. ನಾನೇದರು ಗಾಂಡೀವಧಾರಿಯಾಗಿ ಎದ್ದು ಕಾದಾಡಿದರೆ ಆ ವೀರರೆಲ್ಲಾ ಹತಪ್ರಾಣರಾಗುತ್ತಾರೆ. ಅಂತಹ ವೀರರ ಯುವತಿ ಪತ್ನಿಯರು ವಿಧವೆಯರಾಗುತ್ತಾರೆ. ಕಾಲದ ಕೈಗೊಂಬೆಯಾಗಿ ಮನಸ್ಸಿನ ಅಥವಾ ಪರಿಸ್ಥಿತಿಯ ಮೇಲೆ ನಿಯಂತ್ರಣ ಸಾಧಿಸಲಾಗದೆ ಅವರು ದಾರಿ ತಪ್ಪಿ, ನೀತಿ ಕೆಟ್ಟರೂ ಕೆಡಬಹುದಾದ ಸಾಧ್ಯತೆಗಳು ಬಹು ಹೆಚ್ಚು. ಒಂದೊಮ್ಮೆಗೆ ಭವಿಷ್ಯದಲ್ಲಿ ಹಾಗಾಗುತ್ತಾ ಹೋದರೆ ನೀತಿ ಪತನದಿಂದ ವರ್ಣಗಳೆಲ್ಲಾ ಬೆರಕೆಗೊಳ್ಳಬಹುದು. ಪರಿಣಾಮವಾಗಿ ವರ್ಣ ಸಾಂಕರ್ಯವಾಗಿ, ಸದಾಚಾರಗಳು ಭ್ರಷ್ಟವಾಗಿ ಲೋಕದ ಅಧಃಪತನಕ್ಕೆ ಕಾರಣವಾದೀತು. ಒಂದು ವೇಳೆ ಭವಿಷ್ಯದಲ್ಲಿ ನಾನಂದುಕೊಂಡಂತೆಯೆ ಆಗಿ ಹೋದರೆ, ಆಗ ಈ ಎಲ್ಲಾ ಪ್ರಕ್ರಿಯೆಗೆ ಮೂಲಕಾರಣನಾದವನು ನಾನಾಗಿ ಹೊಣೆಗಾರನಾಗುತ್ತಾನೆ. ಇಂತಹ ಪಾತಕದ ಫಲವಾಗಿ ಕಲ್ಪಾಂತ್ಯದವರೆಗೂ ನರಕದಲ್ಲಿ ತೊಳಲಾಡಬೇಕಾದ ದುಸ್ಥಿತಿ ನನ್ನದಾದೀತು. ಹಾಗಾಗಿ ನಾನು ಯುದ್ದ ಮಾಡಲಾರೆ -ಶಸ್ತ್ರ ತೊರೆದಿದ್ದೇನೆ. ಶಸ್ತ್ರ ಎತ್ತಿದೆ ಎಂದಾದರೆ ಮಹಾಸ್ತ್ರಗಳ ಭಂಡಾರವಿರುವ ನನ್ನಿಂದ, ನಿನ್ನ ಸಾರಥಿತನದಲ್ಲಿ ಗುರುತರವಾಗಿ ನಾಶವಾಗುವುದು ಸುಸ್ಪಷ್ಟ.
ಇಷ್ಟು ಮಾತ್ರವಲ್ಲ ಮಾಧವಾ! ಇಂದಿನ ಈ ಯುದ್ದ ಕಾರಣವಾದ ದಾಯಾದ್ಯ ಕಲಹದಲ್ಲಿ ನಾವಷ್ಟೆ ಹೊಡೆದಾಡಿಕೊಳ್ಳುವುದಲ್ಲ. ನಮ್ಮ ವಂಶದ ಹಿರಿಯರು, ಮಕ್ಕಳು ಮರಿಮಕ್ಕಳೂ ಇದ್ದಾರೆ. ಯುದ್ದ ಸಾಗುತ್ತಾ ಮೃತರಾದರೆ, ಮುಂದೆ ನಮ್ಮ ವಂಶ ನಿರ್ವಂಶವಾಗಿ ಅಳಿದು ಹೋಗುತ್ತದೆ. ಪಿತೃಗಳಿಗೆ ಸದ್ಗತಿ ಕರುಣಿಸಲು ಪಿಂಡೋದಕವನ್ನಾದರು ನೀಡಲೂ ಯಾರೂ ಉಳಿಯದ ಸ್ಥಿತಿಯಾದರೆ ಪಿತೃಗಳ ಗತಿಯೂ ನಾಶ ಹೊಂದಿ ಅಧಃಪತನ ಆಗಿ ಹೋಗುತ್ತದೆ. ಕೃಷ್ಣಾ! ನಾನು ಹೆದರಿರುವುದು ಯುದ್ದಕ್ಕಲ್ಲ. ಈ ಮೊದಲು ದೇವಲೋಕ ಸೇರಿ ದೇವರಾಜನಿಗೆ ಅಸಾಧ್ಯವಾಗಿದ್ದ ನಿವಾತ ಕವಚ, ಕಾಲಕೇಯರ ಜೊತೆಯೂ ಹೋರಾಡಿ ಗೆದ್ದಿದ್ದೇನೆ. ಈಗಲೂ ನನಗೆ ಸಮರದ ಭಯವಿಲ್ಲ. ಅನ್ಯ ಶತ್ರುಗಳನ್ನು ನನ್ನೆದುರು ತಂದು ನಿಲ್ಲಿಸು, ಅರೆ ಕ್ಷಣದಲ್ಲಿ ನನ್ನ ಶೌರ್ಯದ ಪ್ರದರ್ಶನ ಮಾಡಿ ತೋರಬಲ್ಲೆ. ಈಗ ನಾನು ಹೇಡಿಯಾಗಿ ರಣದಿಂದ ವಿಮುಖನಾಗಿರುವುದಲ್ಲ. ಬದಲಾಗಿ ಅಂಜುತ್ತಿರುವುದು – ಅಳುಕುತ್ತಿರುವುದು ಪಾಪ ಕೃತ್ಯ ಮಾಡ ಬಯಸದೆ. ಲೋಕಕ್ಕೆ ಅನರ್ಥಕಾರಿಯಾದ, ಕುಲಕ್ಷಯಕಾರಕವಾದ ಈ ಸಂಗ್ರಾಮದಿಂದ ನಾನು ಮುಕ್ತನಾಗಲು ಬಯಸಿದ್ದೇನೆ, ನನ್ನನ್ನು ಕ್ಷಮಿಸಬೇಕು ಕೃಷ್ಣಾ…ಖಂಡಿತವಾಗಿಯೂ ನಾನು ಯುದ್ಧ ಮಾಡಲಾರೆ, ನನ್ನಿಂದಾಗದು… ಒಂದು ವೇಳೆ ನೀನು ಹೇಳಿದಂತೆ ಅವರೇ ನನ್ನನ್ನು ಕೊಲ್ಲುತ್ತಾರಾದರೆ, ಕೊಂದು ಬಿಡಲಿ, ನನಗದೇ ಕ್ಷೇಮಕರ” ಎಂದು ಅರ್ಜುನ ತನ್ನ ಮನದ ಜಿಜ್ಞಾಸೆ, ಧರ್ಮಬುದ್ಧಿ, ನಿರ್ಣಯವನ್ನು ವಿಸ್ತರಿಸಿ ವಿವರಿಸಿದನು.
ಆಗ ಕೃಷ್ಣ ಪರಮಾತ್ಮ “ಅರ್ಜುನಾ! ನೀನು ಕೇವಲ ಶಸ್ತ್ರ ಪ್ರವೀಣಷ್ಟೆ ಅಲ್ಲ, ಶಾಸ್ತ್ರ ಕೋವಿದನೂ ಹೌದು. ಅಧರ್ಮಿ ಆತ ಯಾರಾಗಿದ್ದರೂ ಧರ್ಮಪಾಲಕನಾದವ ಆತನ ನಿಗ್ರಹ ಮಾಡಿದಲ್ಲಿ ಲೋಕಕಲ್ಯಾಣ ಆಗುತ್ತದೆ ಹೊರತು ಅಪರಾಧ – ಅಪವಾದ ಬಾಧಿಸದು. ನಿನ್ನೆದುರಾಗಿ ನಿಂತಿರುವ ಕೌರವರ ಬಗ್ಗೆ ನಾನು ಹೇಳಿ ನೀನು ತಿಳಿದುಕೊಳ್ಳಬೇಕಾದದ್ದು ಏನೂ ಇಲ್ಲ. ಸ್ವಜನ ಬಂಧುಗಳಾದ ನಿಮಗೆ ವಿಷ ಕೊಟ್ಟು, ನೀವಿದ್ದ ಮನೆ ಸುಟ್ಟು, ಕಪಟದಿಂದ ಸರ್ವ ಸಂಪದ ಅಪಹರಿಸಿ, ಪತಿವ್ರತೆಯಾದ ಪಾಂಚಾಲೆಯ ಮಾನಭಂಗ ಯತ್ನ ಮಾಡಿರುವ ಈ ನೀಚರಿಗಿಂತ ಹೆಚ್ಚಿನ ಅಧರ್ಮಿಗಳು ಲೋಕದಲ್ಲಿ ಯಾರಿರಲು ಸಾಧ್ಯ? ಇಂದು ಅಂತಹ ದುಷ್ಟರನ್ನು ಬೆಂಬಲಿಸಿ ನಿಂತವರೂ ಸಮಾನ ದೋಷಿಗಳು ಆಗುತ್ತಾರೆ. ಹಾಗಿದ್ದರೆ ದುಷ್ಟ ನಿಗ್ರಹ ಕಾರ್ಯಕ್ಕೆ ಸಿದ್ಧನಾದರೆ ಯಾವ ವಿಧದಿಂದ ನಿನ್ನ ಕೃತ್ಯ ಪಾಪದ ಪಾತಕ ಹೊಂದುತ್ತದೆ? ಮಮಕಾರ ವ್ಯಾಮೋಹ ಬೇಕು, ಆದರೆ ಅದು ಬುದ್ಧಿಯನ್ನು ಮಂಕಾಗಿಸುವಷ್ಟು ಬೆಳೆಯಬಾರದು. ನಿನ್ನನ್ನು ಅಂತಹ ದುರುಳರು ಕೊಂದರೂ ಆದೀತು, ಯುದ್ದ ಮಾತ್ರ ಮಾಡಲಾರೆ ಎನ್ನುತ್ತಿರುವೆಯಾ? ಆಗ ನೀನು ಹೇಳಿದ ವರ್ಣ ಸಾಂಕರ್ಯ, ಕುಲಕ್ಷಯ ನಿಲ್ಲಲ್ಪಡುತ್ತದೆಯೇ? ನಿನ್ನ ಪಕ್ಷ ಸರ್ವನಾಶ ಹೊಂದಿದಾಗ ನೀನು ಅಂಜುತ್ತಿರುವ ಸರ್ವ ಅಧರ್ಮಗಳಿಗೂ ಹಾದಿಯಾಗುವುದಿಲ್ಲವೆ? ಅರ್ಜುನಾ, ನಿನಗೆ ಇನ್ನೂ ಸರಳವೂ ಸ್ಪಷ್ಟವೂ ಆಗಿ ಹೇಳುತ್ತೇನೆ. ಕೇಳು………”
ಮುಂದುವರಿಯುವುದು…



















