23.8 C
Udupi
Sunday, March 22, 2026
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ – 307

ಭರತೇಶ ಶೆಟ್ಟಿ, ಎಕ್ಕಾರ್

ಸಂಚಿಕೆ ೩೦೭ ಮಹಾಭಾರತ

ಕರ್ಣನು ಕುಂತಿಯ ಮಾತುಗಳನ್ನು ಕೇಳಿ ದೀರ್ಘವಾದ ನಿಟ್ಠುಸಿರನ್ನು ಬಿಟ್ಟು “ಅಮ್ಮಾ ನೀನು ರಾಜಮಾತೆ ಕ್ಷತ್ರಿಯಾಣಿ, ಮೇಲಾಗಿ ನನಗೆ ಜನ್ಮದಾತೆ. ನಿನ್ನ ಶ್ರೇಷ್ಟತೆ ನಿನ್ನ ಜೊತೆಗಿದ್ದು ಬೆಳೆದ ಐವರು ಮಕ್ಕಳ ಧರ್ಮಪಾಲನೆಯ ಜೀವನದಲ್ಲಿ ಕಾಣುತ್ತಿದೆ. ನಿನ್ನ ಒಂದು ಬಾಯಿ ಮಾತಿನ ಆದೇಶ ಪಾಲನೆಗಾಗಿ ದ್ರೌಪದಿಯೋರ್ವಳನ್ನು ಐವರು ಮದುವೆಯಾಗಿ ಸಂಸ್ಕಾರಯುತ ಬಾಳ್ವೆ ಅವರದಾಗಿಸಿದ್ದಾರೆ. ಜೀವನದಲ್ಲಿ ಎದುರಾದ ಅತಿ ಕಠಿಣಾತಿ ಕಠಿಣ ಸತ್ವ ಪರೀಕ್ಷೆಗಳಂತೆ ಸಂಕಷ್ಟ ಎದುರಾದಾಗಲೂ ಸರ್ವಸ್ವ ತೊರೆದರೂ ಧರ್ಮ ತೊರೆಯದ ಮಹಾತ್ಮರಾಗಿ ಲೋಕದಲ್ಲಿ ಕೀರ್ತಿವಂತರಾಗಿದ್ದಾರೆ. ಅಂತಹ ತಾಯಿಯ ಗರ್ಭ ಸಂಜಾತನಾದ ನಾನೂ ಅದೇ ರೀತಿಯ ಧರ್ಮ ಭಾವನೆ ಉಳ್ಳವನು ಆಗಿರುವೆ. ಆದರೆ ದುರಾದೃಷ್ಟವೊ, ದೈವ ಸಂಕಲ್ಪವೊ ಇಲ್ಲಾ ವಿಧಿ ಬರಹವೊ ಯಾವುದೋ ನನ್ನ ಬದುಕಿಗೆ ಮುನಿಯಿತು. ಅಪವಾದ ಮತ್ತು ತಾನು ಹೆತ್ತ ಮಗು ಇವೆರಡರಲ್ಲಿ ನನ್ನ ಹೆತ್ತಬ್ಬೆಯಾದ ನಿನಗೆ ಅಪವಾದವೆ ಮಹತ್ವದ್ದಾಯಿತು. ನನ್ನನ್ನು ತೊರೆದೆ. ಹುಟ್ಟಿದ ಎಳೆ ಮಗುವಾದ ನಾನು ಆಗಲೆ ನಿನಗೆ ಬೇಡವಾಗಿ ಹೋದೆ. ಯಾರೋ ಏನೋ! ಅಧಿರಥ – ರಾಧೇಯರಿಗೆ ನಾನು ಹೆತ್ತ ಮಗುವಿಗಿಂತ ಮುದ್ದಿನ ಕೂಸಾದೆ. ಯಾವ ಸಮಯದಲ್ಲಿ ನನ್ನ ಜನ್ಮ ರಹಸ್ಯದ ಅಗತ್ಯವಿತ್ತೋ, ವಿದ್ಯಾರ್ಜನೆ, ಸಾಧನೆಗೆ ಆ ಸತ್ಯ ಪೂರಕವಾಗಬೇಕಿತ್ತೋ ಅಂತಹ ಹೊತ್ತಿನಲ್ಲಿ ಗುಪ್ತವಾಗುಳಿದು ನೀನು ಹೆದರಿದ ಅಪವಾದ – ಅಪಮಾನ ನನ್ನ ಬದುಕಿನ ಹೆಜ್ಜೆಯಲ್ಲೂ ಇದಿರಾಗಿ ಈಗ ನನಗೆ ಸಡ್ಡಾಗಿ ನಗಣ್ಯವಾಗುವ ಮಟ್ಟಕ್ಕೆ ಬಂದಿದೆ. ಮಾತೆಯಾದ ನಿನಗೂ ಈ ವರೆಗೆ ಹೇಳುವ ಮನಸ್ಸಾಗದೆ ಯುದ್ದ ನಿಶ್ಚಯವಾದ ಕಾಲದಲ್ಲಿ ನನ್ನ ಮಗ ಎಂದು ಒಪ್ಪಿಕೊಳ್ಳುವ ಮನಸ್ಸಾಗಿದೆ. ಕನಿಷ್ಠ ಪಕ್ಷ ಪಾಂಡವ ಕೌರವರ ಪರೀಕ್ಷಾ ರಂಗದಲ್ಲಿ ನಾನು ಕಾಣಿಸಿಕೊಂಡು ಇತ್ತಂಡಗಳಿಗೂ ಅಪರಿಚಿತನಾಗಿದ್ದಾಗ, “ನೀನು ಯಾರು? ನಿನ್ನ ಕುಲಗೋತ್ರ ಯಾವುದು?” ಎಂದು ಕೇಳಿ ಅಪಮಾನಿಸಿದಾಗಲಾದರೂ ನಿನಗೆ ಸತ್ಯ ಹೇಳಿ ಇತ್ಯರ್ಥಗೊಳಿಸಬಹುದಾಗಿತ್ತು. ವರಪುತ್ರನಾಗಿ ಸೂರ್ಯದೇವನ ಅನುಗ್ರಹದಿಂದ ಜನಿಸಿದ್ದರೂ ಕರ್ಣನ ಬದುಕು ಇಷ್ಟು ಕತ್ತಲೆಯಾಗುತ್ತಿರಲಿಲ್ಲ. ಅಂದು ನಿನಗೆ ಆರು ಮಂದಿ ಪುತ್ರರು ಆಗಿ ಒಮ್ಮತದ ಬದುಕಾಗಿರುತ್ತಿತ್ತು. ಅಲ್ಲೂ ನಿನ್ನ ಗೌರವ ಪ್ರತಿಷ್ಠೆ ಹೆತ್ತ ಮಗನಿಗಿಂತ ಮಿಗಿಲಾಯಿತು. ಆದರೆ ಕೌರವ ಅಂಗ ರಾಜಾಧಿಪತ್ಯ ನೀಡಿ ನನ್ನನ್ನು ರಾಜಕುಮಾರನೆಂದು ಕರೆದು ಮಾನ ಕಾಪಾಡಿದ. ಆ ಬಳಿಕವೂ ನನ್ನನ್ನು ಆತನ ಆತ್ಮೀಯನಾಗಿ ಸರ್ವ ವಿಚಾರದಲ್ಲೂ ಆಪ್ತನಾಗಿಯೆ ಕಾಣುತ್ತಾ ಪ್ರೀತಿಯಿಂದ ನಡೆಸಿಕೊಂಡಿದ್ದಾನೆ. ರಾಜ ವೈಭೋಗ, ಗೌರವ, ಸ್ಥಾನಮಾನವಿತ್ತು ನನ್ನ ಬದುಕನ್ನು ಮೆರೆಸಿದ ಸ್ವಾಮಿಯಾಗಿದ್ದಾನೆ. ಹೀಗಿರಲು ಈ ತನಕ ಬೇಡವಾಗಿದ್ದ ನಾನು ಈ ಕಾಲದಲ್ಲಿ ನಿನ್ನ ಮಗನೆಂದು ಪಕ್ಷ ಬದಲಿಸಿದರೆ ಲೋಕಮುಖದಲ್ಲಿ ನನ್ನ ಸ್ಥಿತಿ ಏನಾದೀತು. ಸುಯೋಧನನ ಎದುರು ಕಾಣಿಸಿ ಕೊಂಡ ಕ್ಷಣದಿಂದ ಇಲ್ಲಿಯವರೆಗೆ ಆತ ನನ್ನ ಮೇಲೆ ಪ್ರಾಣದಂತೆ ವಿಶ್ವಾಸ ಇರಿಸಿದ್ದಾನೆ. ನಿನ್ನ ಮಕ್ಕಳಾದ ಪಾಂಡವರೈವರಿಗೆ ಒಂದು ರೀತಿಯ ಧರ್ಮಪಾಲನೆಯಾದರೆ ನಿನ್ನ ಹಿರಿ‌ಮಗನಾದ ನನಗೆ ಕೌರವನ ಹಿತ ಕಾಯುವುದು ಪರಮ ಧರ್ಮವಾಗುತ್ತದೆ. ಮಾತ್ರವಲ್ಲ ಎಳೆ ಶಿಶುವಿನಿಂದ ರಾಧೇಯನಾಗಿ ಬೆಳೆದ ಕರ್ಣ ಕೊನೆಕಾಲಕ್ಕೆ ಕೌಂತೇಯನಾದರೆ ದ್ರೋಹಿಯಾಗಲಾರನೆ? ದುರ್ಯೋಧನನ ಹಂಗಿನಲ್ಲಿ ಬೆಳೆದು ಇಂದು ನನಗೆ ಅಧಿಕಾರಕ್ಕೆ ಅವಕಾಶ ಒದಗಿ ಬಂದಿದೆ ಎಂಬ ಕಾರಣದಿಂದ ನಾನು ಸ್ವಾಮಿ ಧನವನ್ನಾಗಲೀ, ಆತನ ಬಯಕೆಯ ರಾಜ್ಯವನ್ನಾಗಲಿ ಅಪೇಕ್ಷೆ ಪಡಲಾದೀತೆ ಹೇಳು? ಹಾಗಾಗಿ ನಾನು ಈ ಮೊದಲಿನಂತೆ ಯಾರಾಗಿ ಬದುಕಿ ಬೆಳೆದೆನೊ ಅದೇ ಆಗಿ ಉಳಿಯುತ್ತೇನೆ. ತಾಯಿಯ ಮಾತನ್ನು ಯಾವ ಮಕ್ಕಳೂ ಧಿಕ್ಕರಿಸಕೂಡದು. ಆದರೆ ನನ್ನ ಬದುಕು ಆ ರೀತಿ ಪರಿವರ್ತಿತವಾದ ಕಾರಣ ಈಗ ಅನಿವಾರ್ಯವಾಗಿದೆ ತಾಯಿ. ಅಮ್ಮಾ ಧರ್ಮರಾಯನಂತಹ ಮಹಾತ್ಮನನ್ನು ಹೆತ್ತು ಬೆಳೆಸಿದ ಮಹಾ ತಾಯಿ ನನಗೂ ಜನ್ಮವಿತ್ತಿರುವೆ. ಆದರೂ ನಾನೀಗ ಮಾಡುತ್ತಿರುವ ನಿರ್ಣಯ ನೀಚಕೃತ್ಯವಾಗಿ ಕಂಡರೂ, ಮನ್ನಿಸಿ ನನ್ನನ್ನು ಕ್ಷಮಿಸಬೇಕು ತಾಯಿ”ಎಂದು ವಿನಮ್ರನಾಗಿ ಬೇಡಿದನು.

“ಮಗನೇ, ನೀನಾಡುವ ಮಾತುಗಳು ಸರಿಯಾಗಿಯೇ ಇದೆ. ನಿಷ್ಠುರವಾಗಿ ನಿನ್ನನ್ನು ತೊರೆದ ಪಾಪಿಯಾದ ನನಗೆ ನಿನ್ನ ಮಾತುಗಳು ಕಟುವಾಗಲಾರದು. ಆದರೆ ಬಾಲಿಶ ಬುದ್ದಿಯಲ್ಲಾದ ತಪ್ಪಿಗೆ ಜೀವನಪೂರ್ತಿ ಶಿಕ್ಷೆ ಅನುಭವಿಸಿದ್ದೇನೆ. ಮಾತ್ರವಲ್ಲ ಪಾಂಡು ಚಕ್ರವರ್ತಿಯ ಮಡದಿಯಾಗಿ, ಪಾಂಡವರ ಮಾತೆಯಾದರೂ ಆ ಬಳಿಕದ ಬದುಕೂ ನೆಮ್ಮದಿಯ ಬದುಕಾಗಿರಲಿಲ್ಲ ಎಂಬ ಸತ್ಯ ನಿನಗೆ ತಿಳಿದಿದೆ ತಾನೆ? ಪಡಬಾರದ ಕಷ್ಟ ಅನುಭವಿಸಿ, ವೇದನೆ – ನೋವು ಸಹಿಸುತ್ತಾ ಕಣ್ಣೀರಲ್ಲಿ ಕೈ ತೊಳೆಯುತ್ತಾ ದಿನ ಕಳೆದ ಸ್ಥಿತಿ ನಿನಗೆ ತಿಳಿಯದೆ ಉಳಿದಿಲ್ಲ. ಆದರೂ ಈಗ ಉತ್ಪನ್ನವಾಗಿರುವ ವಿಪತ್ತು ಸೋದರರಾದ ಪಾಂಡವ ಕೌರವರ ಯುದ್ದ. ಕುಲದ ಸರ್ವನಾಶಕ್ಕೆ ಹೇತುವಾಗುವ ಈ ಸಂಗ್ರಾಮ ತಡೆಯುವಲ್ಲಿ ಉಳಿದಿರುವ ಕಟ್ಟಕಡೆಯ ಪ್ರಯತ್ನ ನೀನೊಬ್ಬನೆ. ನಿನಗೆ ಆಶ್ರಯ – ಮಾನ ಇತ್ತು ಕಾಪಾಡಿ ಬೆಳೆಸಿದ ಅಧಿರಥ ರಾಧೆಗೂ, ಕೌರವನಿಗೂ ಕ್ಷೇಮವಾಗಬೇಕಾದರೂ ಈ ಯುದ್ದ ನಡೆಯಕೂಡದು. ನನ್ನ ಮಕ್ಕಳಾದ ಪಾಂಡವರು ಮಗನಾದ ನೀನು ವೈರಿ ಪಕ್ಷಗಳಾಗಿ ಕಾದಾಡುವ ದಯನೀಯ ಸ್ಥಿತಿ ನಾನು ಹೇಗೆ ಸಹಿಸಿಕೊಳ್ಳಲಿ. ಯಾರು ಯಾರನ್ನು ನೋಯಿಸಿ ಸಾಯಿಸಿದರೂ ನೋವಾಗುವುದು ಮಾತೆಯಾದ ನನಗಲ್ಲವೆ ಮಗನೇ? ಕೊನೆ ಕ್ಷಣದಲ್ಲಿ ಹೀಗಾದರೂ ಅನರ್ಥ ಕಾರ್ಯ ತಡೆಯೋಣ ಎಂಬ ನಿರ್ಧಾರದಿಂದ ನಿನ್ನ ಬಳಿ ಬಂದಿರುವೆ. ಎಲ್ಲರನ್ನೂ ರಕ್ಷಿಸಬಲ್ಲ ಅವಕಾಶ ನಿನ್ನ ಕೈಯಲ್ಲಿದೆ ಕರ್ಣಾ! ಹತಭಾಗ್ಯೆಯಾದ ನನಗೆ ಮಕ್ಕಳ ಸಾವು ಕಾಣುವ ದೌರ್ಭಾಗ್ಯ ಕರುಣಿಸಬೇಡ ಕಂದಾ” ಎಂದು ಕುಂತಿ ಅತ್ತು ಗೋಗರೆದಳು.

ಕರ್ಣ ಅಮ್ಮನ ಕಣ್ಣೀರನ್ನು ಕಂಡು ಕರಗಿದನು. ತನ್ನ ಉತ್ತರೀಯದಿಂದ ಆಕೆಯ ಅಶ್ರುಧಾರೆಯನ್ನೊರೆಸುತ್ತಾ…

ಮುಂದುವರಿಯುವುದು…

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page