ಭಾಗ – 303
ಭರತೇಶ್ ಶೆಟ್ಟಿ, ಎಕ್ಕಾರ್

ಕೃಷ್ಣ ಭೇದೋಪಾಯಕ್ಕೆ ಮನ ಮಾಡಿದ ತಂತ್ರ ಇದಾಗಿರಬಹುದೇ? ಆಗಿದ್ದರೂ ವಿಚಾರ ಮಾತ್ರ ಸತ್ಯವೆ ಆಗಿರಬಹುದು. ಈ ಸತ್ಯ ವಿಚಾರವನ್ನು ಈ ತನಕ ಹೇಳದೆ, ಈಗ ಹೇಳುತ್ತಿದ್ದಾನೆ ಎಂದರೆ ಕಾರಣವೇನಾದರು ಇರಲೇಬೇಕು. ನನ್ನಾಪ್ತ ಕೌರವನನ್ನು ಮಣಿಸುವ ಯೋಜನೆಯ ಮೊದಲ ಹೆಜ್ಜೆ ಇದಾಗಿರಬಹುದೆ? ಹೀಗೆ ತನ್ನ ಜೀವನ ರಹಸ್ಯದ ಅನಾವರಣದ ಸುತ್ತ ತರ್ಕಿಸುತ್ತ ತಲ್ಲೀನನಾಗಿದ್ದನು. ಶ್ರೀ ಕೃಷ್ಣನು ನೋಡಿ “ಏನು ಯೋಚಿಸುತ್ತಿರುವೆ ಕರ್ಣ? ಸಂದೇಹ ಏನಾದರೂ ಇದೆಯೆ? ನನ್ನ ಮಾತಿನ ಮೇಲೆ ನಂಬಿಕೆ ಬರಲಿಲ್ಲವೆ?” ಎಂದು ಕರೆದು ಕೇಳಿ ಎಚ್ಚರಿಸಿದನು.
ಕರ್ಣ ನಿಟ್ಟುಸಿರನ್ನು ಬಿಡುತ್ತಾ, “ಕೃಷ್ಣಾ ನನ್ನ ಜೀವನವೂ – ನಿನ್ನ ನಡೆಯೂ ಎರಡೂ ವಿಚಿತ್ರವಾಗಿದೆ. ಎಷ್ಟು ಯೋಚಿಸಿದರೂ ಅರ್ಥವಾಗದಷ್ಟು ಜಟಿಲವಾಗಿದೆ. ನೀನೀಗ ಹೇಳುತ್ತಿರುವ ಮಾತುಗಳು ಸತ್ಯವೆ ಆದರೂ, ಸಮಯ ಮೀರಿ ತಿಳಿದ ಕಾರಣ ಉಪಯೋಗ್ಯವಾಗಿಲ್ಲ. ಪ್ರಥಮವಾಗಿ ಈ ವಿಚಾರ ಮೊದಲೆ ಗೊತ್ತಾಗುತ್ತಿದ್ದರೆ- ಶಸ್ತ್ರ ವಿದ್ಯಾರ್ಜನೆಯ ಮಹತ್ವಾಕಾಂಕ್ಷಿಯಾಗಿದ್ದ ನನಗೆ ನನ್ನ ಕುಲದ ತಡೆ ಅಡ್ಡಿಯಾಗದೆ ಶಸ್ತ್ರ – ಶಾಸ್ತ್ರ ಪ್ರಾವಿಣ್ಯತೆ ಹೊಂದುವಲ್ಲಿ ಸಹಕಾರಿಯಾಗುತ್ತಿತ್ತು. ನನ್ನ ಆಸೆ ನಿರಾತಂಕವಾಗಿ ಯೋಗ್ಯ ರೀತಿಯಲ್ಲಿ ಕೈಗೂಡುತ್ತಿತ್ತು. ಎರಡನೆಯದಾಗಿ ಮಾನವಂತನಿಗೆ ಪ್ರಾಮುಖ್ಯವಾದುದು ಮರ್ಯಾದೆ. ಅಡಿಗಡಿಗೆ “ಸೂತಪುತ್ರನೇ” ಎಂಬ ಹೆಸರಿನಿಂದ ಕರೆಯುವಲ್ಲಿ ಸತ್ಕುಲ ಪ್ರಸೂತನಾದ ನಾನು ಸೂರ್ಯಪುತ್ರನಾಗಿದ್ದರೂ, ಜನರ ಬಾಯಲ್ಲಿ ತುಂಬಿದ ತಾತ್ಸಾರ ಭಾವದ ಅಂಧಕಾರದಿಂದ ಮುಕ್ತನಾಗಿರುತ್ತಿದ್ದೆ. ಆದರೂ ಈ ವಿಚಾರವಾಗಿ ನನಗೇನೂ ಅಸಮಾಧಾನವಿಲ್ಲ. ಕಾರಣ ನಾನು ಉಂಡು ಬೆಳೆದಿದ್ದು ರಾಧೆಯ ಎದೆ ಹಾಲಿನಿಂದ. ಆ ನಾಮ ನನಗೆ ಉತ್ತಮವಾಗಿ ಸಂತಸ ನೀಡಿದೆಯೇ ಹೊರತು ಬೇಸರ ತಂದಿಲ್ಲ. ಆದರೂ ನಾನು ವಂಚಿತನಾದ ಅವಕಾಶಗಳು ಕೈತಪ್ಪುತ್ತಿರಲಿಲ್ಲ. ಮೂರನೆಯದಾಗಿ ವೈಯಕ್ತಿಕವೂ ವ್ಯಕ್ತಿಗತವೂ ಆದ ನನ್ನ ವಿಚಾರ ತೊರೆದು ಲೋಕೋತ್ತರವಾಗಿ ತರ್ಕಿಸುವುದಾದರೆ, ಇಂದು ನಿರ್ಮಾಣವಾಗಿರುವ ವೈರ ವಿದ್ವೇಷಗಳ ಸ್ಥಿತಿಯಲ್ಲಿ ಬದಲಾವಣೆ ಇರುತ್ತಿತ್ತೋ ಏನೋ!. ಅದೇನೇ ಇರಲಿ ನೀನು ಹೇಳುತ್ತಿರುವುದು ಸತ್ಯವೆ ಆದರೂ, ನಾನು ಕಾಣುತ್ತಾ ಬೆಳೆದ ಸತ್ಯವನ್ನು ಮರೆಯಲಾಗದು – ಮರೆಯಬಾರದು ಕೂಡ ಅಲ್ಲವೆ? ಸಹಜ ವಾತ್ಸಲ್ಯ, ಪ್ರೇಮ, ಮಮಕಾರಗಳಿಂದಲೆ ನನ್ನನ್ನು ಅಧಿರಥ – ರಾಧೆ ಬೆಳೆಸಿದ್ದಾರೆ. ಅವರದ್ದೆ ಆದ ಸಂಸ್ಕಾರ ನೀಡಿದ್ದಾರೆ. ಭಾಗ್ಯವಿದ್ದರೆ ಸಂದರ್ಭ ಸರಿಯುತ್ತಾ, ಕಾಲ ಚಕ್ರ ತಿರುಗುತ್ತಾ ಮಾತಾ ಪಿತರಾಗಿ ಸಾಕಿ ಸಲಹಿದ ಅವರಿಗೆ ಪಿಂಡ ಪ್ರಧಾನ ಮಾಡುವಲ್ಲಿ ನಾನು ಬಾಧ್ಯನೆ ಆಗಿದ್ದೇನೆ. ನನಗದು ಕರ್ತವ್ಯವೂ ಹೌದು. ಯಾಕೆಂದರೆ ನನ್ನ ಹುಟ್ಟಿನ ಬಳಿಕದ ಜಾತ ಕರ್ಮಾದಿಗಳನ್ನು ಮಾಡಿದವರು ಅವರೇ ಆಗಿದ್ದಾರೆ. ಮಾತ್ರವಲ್ಲ ನನ್ನ ಬದುಕಿಗೆ ವಿವಾಹವನ್ನು ಮಾಡಿಸಿ, ಪೌತ್ರರನ್ನು ಪಡೆದು ಸಂಭ್ರಮಿಸಿದವರೂ ಸೂತ ಮಾತಾ ಪಿತರಾದ ಅವರು. ಅಂತಹ ನಿಷ್ಕಪಟವಾದ ಕೌಟುಂಬಿಕ ಪ್ರೇಮದ ಧರ್ಮವನ್ನು ನಾನೆಂತು ತೊರೆಯಲಾದೀತು? ಈಗ ನಿನ್ನಿಂದ ನನ್ನ ಜನ್ಮದಾತೆ ಕುಂತಿ ಎಂದು ತಿಳಿಯಿತು. ಪಾಂಡವರು ನನ್ನ ಸಹೋದರರು ಹೌದೆಂದು ನನ್ನ ಅಂತರಂಗದಿಂದ ಒಪ್ಪಿಕೊಳ್ಳುವೆ. ನಾಳಿನ ಭವಿಷ್ಯವನ್ನು ಯೋಚಿಸಿದರೆ – ನೀನು ಅಥವಾ ಇದನ್ನರಿತ ಮಾತೆ ದೋಷ ಮುಕ್ತರಾಗಿದ್ದೀರಿ. ಕರ್ಣನಿಗೆ ಜನ್ಮ ರಹಸ್ಯ ಮೊದಲೆ ತಿಳಿಯುತ್ತಿದ್ದರೆ ಪಾಂಡವ ಕೌರವ ಸಂಗ್ರಾಮ ನಡೆಯುತ್ತಿರಲಿಲ್ಲವೋ ಏನೋ? ಸೋದರರು ಒಂದಾಗಿ, ಯುದ್ದ ತಡೆಯಲ್ಪಡುವ ಸಾಧ್ಯತೆ ಇರಬಹುದಿತ್ತೋ ಏನೋ…! ಎಂಬ ಸಂಭವನೀಯ ಲೋಕಾಪವಾದದಿಂದ ಕಳಚಿಕೊಂಡಿದ್ದೀರಿ. ಕಾರಣ ಕರ್ಣನಿಗೆ ವಿಚಾರ ತಿಳಿಯಲ್ಪಟ್ಟಿದೆ. ವಾಸುದೇವಾ, ನೀನೀಗ ಹೇಳಿದ ವಿಚಾರ ಸತ್ಯವಾದರೂ, ತಿಳಿದ ನನಗೆ ನಿರುಪಯುಕ್ತವೇ ಆಗಿ ಉಳಿಯುತ್ತದೆ. ಮದುವೆಗೆ ಮನಸಾರೆ ಒಪ್ಪಿ, ನಿಶ್ಚಿತಾರ್ಥವೂ ಆಗಿ, ವರಿಸಲು ಸಿದ್ಧಳಾಗಿರುವ ಕನ್ಯೆಯ ಬಳಿ ಓರ್ವ ನಿಜ ಪ್ರೇಮಿ ಬಂದು ಪ್ರೇಮ ನಿವೇದನೆ ಮಾಡಿಕೊಂಡರೆ ಆಕೆ ಏನು ತಾನೆ ಮಾಡಲಾದೀತು. ನಾನೂ ಈಗ ಅದೇ ಸ್ಥಿತಿಯಲ್ಲಿದ್ದೇನೆ. ದುರ್ಯೋಧನ ಲೋಕಮುಖಕ್ಕೆ ಏನೇ ಆಗಿದ್ದರೂ, ನನಗೆ ಆತ ಪರಮಾಪ್ತ. ಅಪಮಾನಿತನಾಗಿದ್ದ ನನಗೆ ಅಂಗಾಧಿಪತ್ಯ ನೀಡಿ ಗೌರವ ನೀಡಿದ ಮಿತ್ರ. ಸಕಲ ವಿಚಾರಗಳಲ್ಲೂ ನನ್ನ ಮೇಲೆ ಪೂರ್ಣ ವಿಶ್ವಾಸವನ್ನು ಹೊಂದಿದ್ದಾನೆ ನನ್ನ ಕೌರವ. ಎಲ್ಲಿಯವರೆಗೆ ಎಂದರೆ ಏಕಾಂತದಲ್ಲಿ ಆತನ ಅಂತಃಪುರದಲ್ಲಿ ಯುವರಾಣಿ ಭಾನುಮತಿ ದೇವಿಯ ಜೊತೆ ನಾನಿದ್ದು ಕಾಲಕ್ಷೇಪಕ್ಕಾಗಿ ಆಟವಾಡುವಷ್ಟರ ಸಲುಗೆಯನ್ನು ನನ್ನ ಮೇಲಿನ ವಿಶ್ವಾಸದಿಂದ ನನಗಿತ್ತಿದ್ದಾನೆ. ಆ ಪ್ರಾಮಾಣಿಕತೆ, ವಿಧೇಯತೆಯನ್ನು ನಾನೂ ಉಳಿಸಿದ್ದೇನೆ. ಹೀಗೆ ಮನೆಯಲ್ಲೂ ಮನದಲ್ಲೂ ಆಶ್ರಯ ನೀಡಿದ ದಾತನಿಗೆ ಆಘಾತವಾಗುವ ನಡೆ ಈ ಕರ್ಣನಿಂದಾದೀತೇ? ವಿಶ್ವವೇ ನಿಂದಿಸಿದರೂ ವಿಶ್ವಾಸ ತೋರಿದಾತನಿಗೆ ವಂಚಿಸಿ ಸಿಂಹಾಸನ ಏರವಷ್ಟು ಸ್ವಾರ್ಥಿಯಾಗುವನೆ ಕರ್ಣ? ರಾಜ್ಯವಿತ್ತು ರಾಜ ಸುಖ ಅನುಭವಿಸುವಂತೆ ಮಾಡಿದ ಯುವರಾಜನ ಆಕಾಂಕ್ಷೆಯ ಸಾಮ್ರಾಜ್ಯದ ಮೇಲೆ ಕರ್ಣನಿಗೆ ಮನಸ್ಸಾಗುವುದಕ್ಕುಂಟೇ? ಹೋಗುವುದು – ಬರುವುದು, ಊಟ – ವಿಶ್ರಾಂತಿ, ಯೋಜನೆ – ಯೋಚನೆ ಎಲ್ಲದರಲ್ಲೂ ನನ್ನನ್ನು ಜೊತೆಯಾಗಿರಿಸಿ ಸಲಹಿದ ಮೈತ್ರಿಗೆ ಕಳಂಕ ತರುವ ಮೋಹ ನನಗಾಗಲಿಕ್ಕಿದೆಯೆ? ಅದೇಕೋ – ಹೇಗೋ ನನಗೂ ತಮ್ಮನಾದ ಅರ್ಜುನನಿಗೂ ಬದ್ದ ವೈರವೆ ಬೆಳೆದಿದೆ. ವಿಧಿಯಾಟದ ಅತಿರೇಕವೋ ಏನೋ ನಾನೂ ಅರ್ಜುನನೂ ಪರಸ್ಪರ ಒಬ್ಬರು ಇನ್ನೊಬ್ಬರನ್ನು ಕೊಲ್ಲುವ ಪ್ರತಿಜ್ಞಾ ಬದ್ದರಾಗಿದ್ದೇವೆ. ಈಗ ಧರ್ಮಾಧರ್ಮದ ವಿಚಾರವನ್ನು ಯೋಚಿಸುವ ವ್ಯವಧಾನ ನನ್ನ ಭಾಗದಲ್ಲಿ ಉಳಿದಿಲ್ಲ. ನನ್ನ ಬದುಕಿನ ಸರ್ವಸ್ವವನ್ನೂ ಬೆಳಗಿದ ಕೌರವನಿಗೆ ಸಮರ್ಪಿತ ಬದುಕು ನನ್ನದಾಗಿದೆ. ಮಿತ್ರ ದುರ್ಯೋಧನನ ಹಿತ ಕಾಯುವುದು ನನಗೆ ಸತ್ಕರ್ಮ. ಆತನಿಗೆ ಸಂತೋಷವಾಗುವಂತೆ ವ್ಯವಹರಿಸುವುದೇ ಧರ್ಮ. ಪಾಂಡವರ ಬಗ್ಗೆ ನನ್ನ ಆಕ್ಷೇಪವಿಲ್ಲ. ಅವರು ಸಜ್ಜನರಾಗಿದ್ದರೂ ನನ್ನ ಪಾಲಿಗೆ ದುರ್ಯೋಧನ ಪ್ರಾಮುಖ್ಯವಾಗುತ್ತಾನೆ. ಸಂಬಂಧದಲ್ಲಿ ಪಾಂಡವರು ಸೋದರರಾದರೂ, ಬದುಕಿನ ಅಗತ್ಯ ಕಾಲದಲ್ಲಿ ತಗ್ಗಿದ ಶಿರವನ್ನೆತ್ತಿ ಕಿರೀಟವಿಟ್ಟ ಕರಗಳನ್ನು ನಾನು ಬಿಡಲಾಗದು. ನೀನೆಂದಂತೆ ಶಾಸ್ತ್ರ ಸಮ್ಮತವಾಗಿ ನನಗೆ ಹಸ್ತಿನೆಯ ಅಧಿಕಾರ ಸಿಗಬಹುದು, ಆದರೆ ಅಂತಹ ಯಾವುದೇ ಬಯಕೆ ನನಗಿಲ್ಲ. ಒಂದು ವೇಳೆ ಹಾಗೇನಾದರು ಸಿಕ್ಕರೂ ಕೌರವನಿಗೆ ಅರ್ಪಿಸಿ ನಾನು ಆತನ ಸೇವಕನಾಗಿ ಸೇವೆಗೈಯುವೆ. ಆಗಲೂ ಪಾಂಡವರಿಗೆ ರಾಜ್ಯ ದೊರಕದು. ಪಾಂಡವರು ಅಪೇಕ್ಷಿಸಿರುವ ದಾಯಭಾಗ ನ್ಯಾಯಯುತವಾದರೆ ಯುದ್ದ ಮುಖೇನ ನಿರ್ಧರಿಸಲ್ಪಡಲಿ. ಹಾಗಿರುವಾಗ ಯುದ್ದ ಅನಿವಾರ್ಯ ಹೊರತು ಅನ್ಯ ಮಾರ್ಗವಿಲ್ಲ. ನೀನೇ ಹೇಳಿರುವ – ನನಗೂ ತಿಳಿದಿರುವ ಅಪ್ರತಿಮ ವೀರ, ಸಕಲ ಅಸ್ತ್ರ ಶಸ್ತ್ರ ಸಂಚಿತ ವಿಕ್ರಮಿ ಅರ್ಜುನ. ಆತನ ವಿರುದ್ದ ಹೋರಾಡಿ, ಧನಂಜಯನ ಪರಾಕ್ರಮ ಪರೀಕ್ಷಿಸುವ ಅವಕಾಶ ನನಗೂ ಒದಗಲಿ. ನೀನು ಹೇಗೆ ಪಾಂಡವರ ಜಯಕ್ಕಾಗಿ ಸರ್ವ ಯತ್ನ ಮಾಡಲಿರುವೆಯೋ, ಹಾಗೆಯೇ ನಾನು ಬದುಕಿರುವವರೆಗೆ ಮಿತ್ರ ಸುಯೋಧನನ ಜಯಕ್ಕಾಗಿ ಶ್ರಮಿಸುವೆ. ನಿನ್ನನ್ನು ವಿರೋಧಿಸಿ ಈ ಜಯಶಾಲಿಗಳಾದವರು ಯಾರೂ ಇಲ್ಲ ಎಂದು ನನಗೆ ಗೊತ್ತಿದೆ. ಹೀಗೆ ತಿಳಿದಿದ್ದರೂ ಮನಪರಿವರ್ತನೆ ಮಾಡಿ ಮಿತ್ರದ್ರೋಹಿ ಎಂದೆಣಿಸುವ ಕನಿಷ್ಟ ಕಲ್ಪನೆಯನ್ನೂ ನಾನು ಮಾಡಲಾರೆ. ಆದರೂ ಪಾಂಡವರನ್ನು ಗೆದ್ದು ಕೊಂದು ನನ್ನೊಡೆಯ ಕೌರವನಿಗೆ ಜಯ ಒದಗಿಸಬೇಕೆಂದು ನನ್ನೊಳಗೆ ಪ್ರಜ್ವಲಿಸುತ್ತಿದ್ದ ರೋಷಾಗ್ನಿಯನ್ನು ನೀನು ನಂದಿಸಿದೆ. ಪಾಂಡವರೈವರು ನನ್ನ ಸೋದರರೆಂಬ ಸತ್ಯ ತಿಳಿಯುವಂತೆ ಮಾಡಿ ನನ್ನನ್ನು ದ್ವಂದ್ವ ಭಾವದ ಗೊಂದಲದಲ್ಲಿ ಸಿಲುಕಿಸಿದೆ. ನನ್ನ ಚಿತ್ತದ ಸ್ಥೈರ್ಯವನ್ನೂ ಅಲುಗಾಡಿಸಿಬಿಟ್ಟೆ. ಇಂದಿನವರೆಗೆ ನನ್ನ ಜನ್ಮ ವೃತ್ತಾಂತವನ್ನು ಬಚ್ಚಿಟ್ಟ ನೀನು – ಇಂದು ಬಿಚ್ಚಿಟ್ಟೆ. ಸೂತ ಪುತ್ರನಾಗಿಯೆ ಲೋಕದೆಲ್ಲೆಡೆ ಗುರುತಿಸಿಕೊಂಡ ನಾನು ಅದೇ ಆಗಿ ಜೀವನಾಂತ್ಯದವರೆಗೆ ಬದುಕಬಲ್ಲೆ. ಕೌರವ ಪಾಂಡವರ ದ್ವೇಷಾಗ್ನಿಯಿಂದ ಭಯಂಕರವಾದ ರಣಯಜ್ಞ ಅನಿವಾರ್ಯವಾಗಿ ನಡೆಯಲಿದೆ – ನಡೆಯಲಿ. ಇಕ್ಕೆಡೆಗಳಿಂದಲೂ ಬಂದು ಸಹಭಾಗಿಯಾಗಲಿರುವ ಅಸಂಖ್ಯ ವೀರ ಸಂಕುಲ ಸಮಿಧೆಯಂತೆ ಯಜ್ಞಾಹುತಿಯಾಗಲಿದೆ. ಐಂದ್ರ, ವಾರುಣ, ಬ್ರಾಹ್ಮ, ಸ್ಥೂಣಾಕರ್ಣ, ಪಾಶುಪತವೇ ಮುಂತಾದ ಅಸ್ತ್ರ ಮಂತ್ರಗಳೇ ಋತ್ವಿಜರಿಂದ ಪಠಿಸಲ್ಪಡುವ ಋಕ್ಕುಗಳಾಗಲಿ. ವಿಜಯಿಯಾದವನು ಯಜ್ಞ ಸಮಾಪ್ತಿಯಲ್ಲಿ ಪೂರ್ಣಾಹುತಿಯನ್ನು ನೀಡಲಿ. ಯಜ್ಞ ಪುಣ್ಯ ವಿಶೇಷದಿಂದ ಯೋಧರು ವೀರ ಸ್ವರ್ಗವನ್ನೇರಲಿ. ಕೃಷ್ಣಾ ನನಗೀಗ ಎರಡು ಆಶಯಗಳಿವೆ, ಮೊದಲಾಗಿ, ಸಮಯ ಕೂಡಿ ಬಂದಾಗ ಅರ್ಜುನನ್ನು ನನ್ನೆದುರಿಗೆ ತಂದು ನಿಲ್ಲಿಸು. ಶಸ್ತ್ರ ಯಜ್ಞದಲ್ಲಿ ನನ್ನನ್ನೇ ಸಾಧನವಾಗಿಸಿ ಪರಮೋಚ್ಚ ಸಾಧನೆ ಮಾಡುವೆ. ನೀನೇ ಇದ್ದು ನಿನ್ನ ಸಮಕ್ಷಮದಲ್ಲಿ ನನ್ನ ರುದ್ರಾವೇಶದ ನಿಷ್ಠಾವಂತ ಪ್ರಯತ್ನ ಸಾಗಲಿ. ಒಂದೊಮ್ಮೆಗೆ ನನಗೆ ಜಯವಾದರೆ ನನ್ನೊಡೆಯನ ಜೊತೆ ಸಂಭ್ರಮಿಸುವೆ. ಅದಾಗದಿದ್ದರೆ ಮಿತ್ರನಿಗಿಂತ ಮೊದಲು ನನ್ನ ಅಂತ್ಯವಾಗಿಸು. ಯಾಕೆಂದರೆ ಆತನ ಕೊನೆಯನ್ನು ನಾನು ಬಯಸಲಾರೆ. ನೋಡಿ ಸಹಿಸಲೂ ಶಕ್ತನಲ್ಲ. ಎರಡನೆಯದಾಗಿ, ನಾನು ಯಾರು ಎಂಬ ನಿಜ ಗುಪ್ತವಾಗಿಯೇ ಉಳಿಯಲ್ಪಟ್ಟು ಬೆಳೆದವ. ಇನ್ನೂ ಅದು ಗೌಪ್ಯ ಕವಚದೊಳಗೆ ಭದ್ರವಾಗಿಯೆ ಇರಲಿ. ನನಗೆ ಪಾಂಡವರು ಅನುಜರೆಂದು ಹೇಳಿರುವೆ. ಆದರೆ ಅವರಿಗೆ ನಾನವರ ಅಗ್ರಜನೆಂಬ ನಿಜ ತಿಳಿಸಬೇಡ. ಈ ಸಂಬಂಧದ ಸಂಕಟವೇನಿದ್ದರೂ ಹಡೆದು ತೊರೆದ ತಾಯಿಯೂ, ತೊರೆದಲ್ಲಿಂದ ಬದುಕಿನ ಸಂಪುಟ ತೆರೆದು ಬದುಕಿದ ನಾನೂ ಸಹಿಸಿಕೊಳ್ಳುತ್ತೇವೆ. ಈ ಸಂಗ್ರಾಮದಲ್ಲಿ ನಾನು ಹತನಾದರೆ ಸೋದರ ಧರ್ಮಜ ನನಗೆ ತರ್ಪಣ ಕೊಡಲಿ. ಅಲ್ಲಿಯವರೆಗೆ ನಾನವರಿಗೆ ಅಣ್ಣ ಎಂಬ ವಿಚಾರ ಗೋಪ್ಯವಾಗುಳಿಸು ಕೃಷ್ಣಾ. ಅವರು ಧರ್ಮದಂತೆ ಅವರ ಕರ್ಮವನ್ನು ನಿರಾತಂಕವಾಗಿ ಮಾಡುವಂತಾಗಲಿ. ಪಾಂಡವರು ನಿನಗೆ ಪಂಚಪ್ರಾಣ ಸಮಾನರು – ನನಗೆ ಪಂಚ ಸೋದರರು. ಅಣ್ಣನಾಗಿ ಅವರಿಗೆ ಶುಭವಾಗಲಿ ಎಂದು ಹರಸುವುದಕ್ಕಷ್ಟೇ ನನ್ನ ವ್ಯಾಪ್ತಿಯನ್ನು ಬಳಸಿಕೊಳ್ಳುವೆ. ಕೌರವನು ನನ್ನ ಬಳಿಕ ವೀರ ಮರಣವಪ್ಪಿದರೆ ಮತ್ತೆ ಸ್ವರ್ಗದಲ್ಲಿ ನಾವು ಜೊತೆಯಾಗುತ್ತೇವೆ. ಕೌರವನ ಅಕ್ಕರೆಯ ತೋಟದಲ್ಲಿ ಅರಳಿರುವ ಹೂವನ್ನು ಬಾಡುವ ಹೊತ್ತಿಗೆ ಕೊಯ್ದು ದೇವರ ಮುಡಿಯೇರಿಸುವ ವ್ಯರ್ಥ ಪ್ರಯತ್ನ ಬೇಡ. ನಿನ್ನ ಉದ್ದೇಶವೇನೊ ನನಗರಿಯದು. ಅದನ್ನು ನೀನು ಈಡೆರಿಸಿಕೊಂಡಿರಬಹುದು. ಕೃಷ್ಣಾ, ನೀನು ಹೋಗು, ನಿನ್ನ ಸಂಕಲ್ಪದಂತೆ ನಡೆಸಿ ಕೋ.” ಎಂದು ಕೈ ಮುಗಿದು ನಿಂತನು.
ಆಗ ಕೃಷ್ಣ…
ಮುಂದುವರಿಯುವುದು






















































