25.3 C
Udupi
Saturday, September 6, 2025
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ – 284

ಭರತೇಶ್ ಶೆಟ್ಟಿ, ಎಕ್ಕಾರ್

ಮುಂದುವರಿಸಿದ ಶ್ರೀ ಕೃಷ್ಣ “ಧರ್ಮರಾಯ ನಿನ್ನ ಧರ್ಮಬುದ್ಧಿ ಮೆಚ್ಚುವಂತಹದ್ದಾಗಿದೆ. ನಿನಗೂ ದುರ್ಯೋಧನನಿಗೂ ಒಂದು ಸ್ಪಷ್ಟ ವ್ಯತ್ಯಾಸವಿದೆ. ನಮಗೆ ಸಿಕ್ಕಿದಷ್ಟು ಸಾಕು, ವಿನಾಶಕಾರಿ ಯುದ್ಧ ಸಂಭವಿಸದಿದ್ದರೆ ಸಾಕು ಎನ್ನುವುದು ನಿನ್ನ ಪ್ರಯತ್ನ. ಆದರೆ ಎಷ್ಟಿದ್ದರೂ, ಮತ್ತೇನು ಸಿಗಲಿದೆಯೊ ಅದೂ ನನಗೆ ಬೇಕು, ಅದಕ್ಕಾಗಿ ಏನು ಬೇಕಾದರೂ ಆಗಲಿ ಎನ್ನುವ ಬುದ್ಧಿಯವನು ದುರ್ಯೋಧನ. ಏನೇ ಇರಲಿ, ನಿನ್ನ ಆಶಯದಂತೆ ಶಾಂತಿಯನ್ನು ಬಯಸಿ ಸಂಧಾನಕ್ಕಾಗಿ ಪ್ರಯತ್ನಿಸುತ್ತೇನೆ. ಆದರೆ ಒಂದು ಸತ್ಯವನ್ನು ನೀನು ತಿಳಿದಿರಬೇಕು, ಸರ್ವ ತ್ಯಾಗಕ್ಕೆ ನೀನು ಸಿದ್ಧನಾಗಿ ಶಾಂತಿ ಬಯಸುವವರೆಗೆ ಮಾತ್ರ ಭೀಷ್ಮ ದ್ರೋಣಾದಿಗಳು ನಿನ್ನ ಪರವಾಗಿರುತ್ತಾರೆ. ಒಂದೊಮ್ಮೆಗೆ ಎಲ್ಲ ಮಿತಿಗಳನ್ನು ಮೀರಿ ಯುದ್ಧ ನಿಶ್ಚಯವಾದರೆ ಆಗ ಅವರೆಲ್ಲರೂ ಹಸ್ತಿನಾವತಿಯ ಪರವಾಗಿ ರಣರಂಗ ಪ್ರವೇಶ ಮಾಡಲಿದ್ದಾರೆ. ಈ ಸಮಯ ನಿನಗೊಂದು ಸಲಹೆ ನೀಡಲು ಬಯಸುತ್ತೇನೆ. ಉಪದ್ರವಕಾರಿ ವಿಷ ಸರ್ಪವನ್ನು ಕೊಂದು ಎಸೆದರೆ ಹೇಗೆ ಊರಿಗೆ ಕ್ಷೇಮವೊ ಹಾಗೆ ಆಗಿದೆ ಕೌರವನ ಇಂದಿನ ಸ್ಥಿತಿ. ಸಾಮ, ದಾನ, ಭೇದ ಇವುಗಳು ಕ್ಷತ್ರಿಯನಿಗೆ ಹೇಗೆ ಸಮಸ್ಯೆಯ ಉಪಶಮನಕ್ಕೆ ಆಯುಧಗಳೊ ಹಾಗೆಯೆ ದಂಡ ಪ್ರಯೋಗವೂ ಚತುರೋಪಾಯಗಳಲ್ಲಿ ಒಂದು ಎಂಬುವುದನ್ನು ಮರೆಯಬಾರದು. ಕ್ಷತ್ರಿಯನಾದವನಿಗೆ ವಿನಯ ಭೂಷಣ, ಆದರೆ ಅತಿ ವಿನಯ ದೂರ್ತ ಲಕ್ಷಣವಾಗಿ ಗೋಚರಿಸುತ್ತದೆ. ಕ್ಷತ್ರಿಯನಾದವನು ಸಾಧಿಸಿ ಪಡೆಯುವುದು ಶೋಭೆ ಹೊರತು, ಯಾವ ಕಾರಣಕ್ಕೂ ಇದಿರಾಳಿಯಲ್ಲಿ ಬೇಡಿ ತನ್ನ ಇಚ್ಚೆ ಪೂರೈಸುವುದಲ್ಲ. ಕ್ಷತ್ರಿಯನಾದವನು ಒಂದೋ ಗೆದ್ದು ಪಡೆಯಬೇಕು – ಇಲ್ಲಾ ಗೆಲುವಿಗಾಗಿ ಪ್ರಾಣವನ್ನಾದರೂ ಪಣಕ್ಕಿಟ್ಟು ಹೋರಾಡಿ ವೀರಸ್ವರ್ಗ ಪಡೆಯಬೇಕು. ಯಾವುದೆ ಕೃತಿಗೂ ಮಿತಿ ಎನ್ನುವುದು ಇದೆ. ಅತಿಯಾದರೆ ಅಮೃತವೂ ವಿಷವಾಗುತ್ತದೆ. ಎಲ್ಲಿಯವರೆಗೆ ನೀನು ದೀನನಾಗಿ ವಿನಂತಿಯ ಮೂಲಕ ಅವಕಾಶ ನೀಡುತ್ತಿಯೋ, ಅಲ್ಲಿಯವರೆಗೆ ಅದು ನಿನ್ನ ದೌರ್ಬಲ್ಯ ಎಂದು ಪರಿಗಣಿತವಾಗಿ ಕೌರವರ ಮುಂದೆ ತಾತ್ಸಾರಕ್ಕೊಳಗಾಗುವೆ. ಆದರೆ ನಿಜಾರ್ಥದಲ್ಲಿ ವಿವೇಚಿಸಿದರೆ ಬೇಡುವಂತಹ ದುರ್ಭಾಗ್ಯ ನಿನಗಿಲ್ಲ ಎಂಬ ಸತ್ಯವನ್ನು ಮೊದಲು ನೀನು ಮನಗಾಣಬೇಕು. ಸಂಧಾನಕ್ಕಾಗಿ ನಾನು ಹೋಗಿದ್ದೇನೆ ಎಂಬ ಕಾರಣದಿಂದ ನೀವು ಕವಚ, ಆಯುಧ, ಸಮರಾಭ್ಯಾಸ, ಸಿದ್ಧತೆ ಮರೆತು ಕೂರುವಂತಿಲ್ಲ. ನಾನು ಪ್ರಾಮಾಣಿಕವಾಗಿ ನಿನ್ನ ಮನಸ್ಸಿನ ಇಚ್ಚೆಯಂತೆ ಶಾಂತಿ ಸಂಧಾನ ಯತ್ನಕ್ಕೆ ತೊಡಗುವೆ. ಆದರೆ ಅಲ್ಲಿ ಕರ್ಣ, ಶಕುನಿಯಾದಿ ದುರ್ಯೋಧನನ ಬೆಂಬಲಿಗರಿಗೆ ಯುದ್ಧ ಆಗಬೇಕೆಂದು ಇದೆ. ದುರ್ಯೋಧನನೂ ಯುದ್ಧಕ್ಕೆ ಸಿದ್ಧನೂ ಬದ್ಧನೂ ಆಗಿರುತ್ತಾನೆ ಹೊರತು ಶಾಂತಿ ಸ್ಥಾಪನೆಯ ಬಯಕೆಯಂತೂ ಖಂಡಿತಾ ಇರುವುದಿಲ್ಲ. ನಮ್ಮ ಪ್ರಯತ್ನ ಯುದ್ದ ತಡೆದು ಒಪ್ಪಂದದಿಂದ ಪರಿಹರಿಸುವ ನಿಟ್ಟಿನಲ್ಲೇ ಇರಲಿದ್ದು, ಒಪ್ಪದೆ ಹೋದರೆ ನಾಳಿನ ಭವಿಷ್ಯತ್ತಿನಲ್ಲಿ ಕೌರವನೇ ಅಪವಾದಕ್ಕೆ ಗುರಿಯಾಗಲಿದ್ದಾನೆ. ದುರ್ಯೋಧನನ ಛಲದ ಕಾರಣದಿಂದ ಚಂದ್ರವಂಶ ನಾಶದ ಪಥ ಹಿಡಿಯಿತು ಎಂಬ ಲೋಕಾಪವಾದಕ್ಕೆ ತುತ್ತಾಗಲಿದ್ದಾನೆ. ನೀವು ಯುದ್ದ ಸನ್ನದ್ಧರಾಗುತ್ತಿರಿ, ನಾನು ನನ್ನ ಕೆಲಸ ಮಾಡುತ್ತೇನೆ” ಎಂದನು.

ಭೀಮಸೇನ ಕೃಷ್ಣನ ಮಾತು ಕೇಳಿ “ಕೃಷ್ಣಾ! ಏನಾಗಲಿದೆಯೋ ಅದು ಆಗಲಿ. ಆದರೆ ನಿನ್ನ ಪ್ರಯತ್ನ ಶಾಂತಿ ಸಂಧಾನಕ್ಕಾಗಿಯೆ ಇರಲಿ. ಅಣ್ಣನ ಆಸೆಯಂತೆ ಯುದ್ದವಾಗದೆ ಇತ್ಯರ್ಥಗೊಳಿಸುವ ಶ್ರಮ ನಿನ್ನಿಂದಾಗಲಿ. ಒಂದೊಮ್ಮೆಗೆ ಸಂಗ್ರಾಮವೇ ನಿಶ್ಚಯವಾದರೆ ನಮ್ಮ ವಂಶವೇ ಇಬ್ಬಾಗವಾಗಿ ಕಾದಾಡಿ ನಾಶಗೊಳ್ಳಲಿದೆ. ಹಾಗಾಗದಂತೆ ನೋಡಿಕೊಳ್ಳಲು ನಿನ್ನಿಂದಾಗುವಷ್ಟು ತಿಳಿಹೇಳು. ನಮ್ಮಣ್ಣನ ಇಚ್ಚೆ ಈಡೇರಲಿ” ಎಂದನು.

ಭೀಮನ ನುಡಿ ಕೃಷ್ಣನಿಗೆ ವಿಚಿತ್ರವಾಗಿ ಕಂಡಿತು “ಇದೇನು ಭೀಮಸೇನ? ಇಷ್ಟೊಂದು ಮೃದು ವಚನ ವೃಕೋದರನ ಬಾಯಿಯಲ್ಲಿ? ಬೆಟ್ಟವೆ ಹಗುರಾಗಿ ಹತ್ತಿಯಾಯಿತೇ! ಇಲ್ಲ ಅಗ್ನಿ ಶಾಂತವಾಗಿ ತಣ್ಣಗಾಯಿತೇ!… ಕೌರವಾದಿಗಳನ್ನು ಕೊಂದು ಮುರಿದು, ಹರಿದು, ಸಿಗಿದು ಮುಕ್ಕುವೆ ಎಂಬಿತ್ಯಾದಿ ರೌದ್ರ ಪ್ರತಿಜ್ಞೆ ಮಾಡಿದವ ನೀನು! ಈಗ ಶಾಂತಿಯ ಪ್ರತೀಕ್ಷೆಯಲ್ಲಿರುವೆ. ಕೌರವರ ಬಗ್ಗೆ ಭಯ – ಭೀತಿ ನಿನ್ನ ಮನವನ್ನಾವರಿಸಿಲ್ಲ ತಾನೇ?” ಎಂದು ಪ್ರಶ್ನಿಸಿದನು.

“ಕೃಷ್ಣಾ! ಭಯವೇ? ಅದೂ ಭೀಮನಿಗೆ? ನನಗೆ ನನ್ನ ಬಾಹುಬಲದ ಮೇಲೆ ಪೂರ್ಣ ನಂಬಿಕೆಯಿದೆ. ಆ ನೂರು ಮಂದಿ ಕೌರವ ಸೋದರರನ್ನೂ ಹತ ಪ್ರಾಣರನ್ನಾಗಿಸುವ ವಿಶ್ವಾಸ ಈಗಲೂ ನನಗಿದೆ. ಪ್ರತಿಜ್ಞೆಯೂ ನೆನಪಿದೆ, ಅವರಿಂದ ದ್ರೌಪದಿಗೆ ಒದಗಿದ ದುಸ್ಥಿತಿ ಮರೆತು ಹೋಗುವಂತಹುದೇ ಅಲ್ಲ. ಹೀಗಿದ್ದೂ ನಾನು ಶಾಂತಿ ಬಯಸುತ್ತಿರುವುದು ಅಣ್ಣನ ಇಚ್ಚೆ ಈಡೇರಲಿ ಎಂದು. ಅಶಾಂತಿ ಬಯಸುವವರಾದರೆ ಅಣ್ಣನನ್ನು ಅನುಸರಿಸಿ ಇಷ್ಟೆಲ್ಲಾ ಕಷ್ಟಗಳನ್ನು ಸಹಿಸುವ ಪ್ರಶ್ನೆ ಇರುತ್ತಿರಲಿಲ್ಲ. ಎಂದೋ ಈ ಕೌರವರು ಇನ್ನಿಲ್ಲವಾಗಿ, ಈಗ ನೆನಪು ಮಾತ್ರ ಆಗಿ ಉಳಿದಿರುತ್ತಿದ್ದರು. ಅಣ್ಣನ ಮಾತು ಮೀರದೆ ಬದುಕಿದ ನಾವು ಈಗಲೂ ಆತನ ಮಾತನ್ನು ಪಾಲಿಸಲು ಸಿದ್ದರಿದ್ದೇವೆ – ಅದನ್ನೇ ಬಯಸುತ್ತೇವೆ. ಕೃಷ್ಣಾ! ಆದರೂ ನನಗೊಂದು ಪೂರ್ಣ ವಿಶ್ವಾಸವಿದೆ, ನಮ್ಮಣ್ಣ ಧರ್ಮ ಬಿಟ್ಟು ಬದುಕಲಾರ, ದುರ್ಯೋಧನ ಆತನ ಹಠ ತೊರೆದು ಇರಲಾರ. ನನಗೀಗ ದುರ್ಯೋಧನನ ಮೇಲೆ ಪೂರ್ಣ ವಿಶ್ವಾಸವಿದೆ. ಛಲದಂಕ ಮಲ್ಲನಾಗಿ ಉಳಿಯುವ ಆತ ನಮ್ಮ ಶಾಂತಿಸಂಧಾನದ ಏನು ಶ್ರಮವಿದೆಯೊ ಅದನ್ನು ಸಂಗ್ರಾಮದ ಪರಿಶ್ರಮವನ್ನಾಗಿ ಬದಲಾಯಿಸದೆ ಬಿಡಲಾರನು. ಆಗಲಿ ನೀನೆಂದಂತೆ ಪ್ರಯತ್ನಿಸು – ದೈವೇಚ್ಚೆ ಮೆರೆಯಲಿ” ಎಂದನು.

ಈವರೆಗೆ ಸುಮ್ಮನಿದ್ದ ಅರ್ಜುನ “ವಾಸುದೇವಾ! ಅಣ್ಣಂದಿರಾದ ಧರ್ಮಜ, ಭೀಮಸೇನರು ಹೇಳಬೇಕಾದುದನ್ನು ಹೇಳಿದ್ದಾರೆ. ಆದರೆ ಈ ಕೌರವರು ಈ ತನಕ ಮಾಡಿದ್ದೇನು? ನಮಗೆ ಕಷ್ಟ ನೀಡಿ, ಅಪಾಯ ಒಡ್ಡಿ, ಅಥವಾ ನಮ್ಮ ಅಂತ್ಯ ಬಯಸಿ ಅದಕ್ಕೆ ಪೂರಕ ಪ್ರಯತ್ನ ಮಾಡುತ್ತಾ ಬದುಕಿದವರು. ನಮ್ಮ ಅವನತಿ ಬಯಸಿ ಅವರಿಂದಾದ ಸರ್ವ ಪ್ರಯತ್ನಗಳು ನಮಗೆ ಶುಭಪ್ರದವಾಗಿ ಪರ್ಯಾವಸಾನ ಕಂಡದ್ದು ನಮ್ಮ ಅದೃಷ್ಟ. ಈಗಲೂ ಅಂತಹ ಇನ್ನೊಂದು ಸನ್ನಿವೇಶ ಎದುರಾಗಿದೆ. ನಿನ್ನ ಪ್ರಯತ್ನ ನೀನು ಮಾಡು. ಕೌರವನ ಆಶಯ ಈವರೆಗೆ ಏನಿತ್ತೋ ಹಾಗೆಯೆ ಪಾಂಡವರ ಅವಸಾನವನ್ನು ಬಯಸುತ್ತಿರಬಹುದು. ಆದರೆ ಈ ಬಾರಿಯೂ ಅದು ಈ ಹಿಂದೆ ಆಗಿರುವ ದೃಷ್ಟಾಂತಗಳಂತೆ ಧರ್ಮ ಮಾರ್ಗ ಅನುಸರಿಸುವ ನಮಗೆ ಭಗವದ್ಕೃಪೆಯಿಂದ ಹಿತವಾಗಿ ಬದಲಾಗಬಹುದು ಎಂಬ ವಿಶ್ವಾಸವಿದೆ. ಶಾಂತಿಯ ಸಂಧಾನವಾದರೆ ಶಾಂತಿ. ಹಾಗಾಗದೆ ಯುದ್ಧ ನಿರ್ಣಯವಾದರೆ ಯುದ್ಧ. ನೀನೇನು ನಿರ್ಣಯ ಮಾಡುವೆಯೋ ನಮಗದು ಸ್ವೀಕಾರ. ಈಗಿನ ಪರಿಸ್ಥಿತಿಯನ್ನು – ಭವಿಷ್ಯದಲ್ಲಿ ಅದರ ಪರಿಣಾಮವನ್ನು ಚೆನ್ನಾಗಿ ಬಲ್ಲವನು ನೀನು. ಏನನ್ನು ಮಾಡುವುದಿದ್ದರೂ ವಿಚಾರ ಮಾಡಿ ಮುಂದುವರಿಯುವ ನಿನ್ನ ಬಗ್ಗೆ ನಮಗೆ ನಂಬಿಕೆ ಧೃಡವಾಗಿದೆ. ಹಾಗಾಗಿ ನೀನು ನಿರ್ದೇಶಿಸಿದಂತೆ ತೊಡಗುವವರು ನಾವು” ಎಂದನು.

ನಕುಲನು “ಕೃಷ್ಣಾ! ಕಾಡಿನ ನಂಟು ನಮ್ಮ ಜೀವನದುದ್ದಕ್ಕೂ ಇತ್ತು. ದೈವ ಸಹಾಯಿಯಾಗಿ ನಮ್ಮನ್ನು ಸಂರಕ್ಷಿಸುತ್ತಾ ಬಂದಿರುವುದು ನಮ್ಮ ಸೌಭಾಗ್ಯ. ಈಗ ನಾಡಿಗೆ ಬಂದಿರುವ ನಮಗೆ ಬಹು ಅಕ್ಷೋಹಿಣಿ ಸೇನೆ – ರಾಜರು ಉಪಕಾರಕ್ಕೆ ಒದಗಿದ್ದಾರೆ. ಮನುಷ್ಯರ ಸಹಾಯದಲ್ಲಿರುವ ನಮಗೆ ರಾಜ್ಯದ ಆಸೆಯಾಗಿದೆ. ಯುದ್ದ ಆದರೆ ಗೆದ್ದ ನಮಗೆ ರಾಜ್ಯ ಸಿಗುತ್ತದೆ. ಜೊತೆಗೆ ಬಂಧು ಹತ್ಯೆಯ ಅಪವಾದವೂ ಬರಬಹುದು. ಶಾಂತಿ ಸಂಧಾನವಾದರೂ ಅದರಿಂದ ಪರಿಸ್ಥಿತಿ ಶಾಂತವಾದೀತು ಎಂಬ ಯಾವ ಧೈರ್ಯವೂ ನನಗಿಲ್ಲ. ಹೀಗಿರಲು ಯುದ್ದ – ಶಾಂತಿ ಎರಡರಲ್ಲೂ ಸುಖವಿಲ್ಲ. ಏನು ಮಾಡಿದರೆ ಒಳಿತೆಂದು ನಿನಗೆ ತೋರುವುದೋ ಅದೇ ಆಗಲಿ” ಎಂದನು.

ಈಗ ಸಹದೇವನ ಸರದಿ, ಕೃಷ್ಣನನ್ನು ಉದ್ದೇಶಿಸಿ ತನ್ನ ಅಭಿಪ್ರಾಯ ಹೇಳತೊಡಗಿದನು…

ಮುಂದುವರಿಯುವುದು…

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page