ಭಾಗ 277
ಭರತೇಶ ಶೆಟ್ಟಿ ,ಎಕ್ಕಾರ್

ಯುದ್ಧ ನಿರ್ಣಯವಾಗದಿದ್ದರೂ ಚಂದ್ರವಂಶ ಇಬ್ಭಾಗವಾಗಿದೆ. ಅತ್ತ ದ್ರುಪದ ಪುರೋಹಿತರಾದ ಶತಾನಂದರು ಸಂಧಾನಕಾರರಾಗಿ ತನ್ನ ಶತ ಪ್ರಯತ್ನ ಮಾಡಲು ಹಸ್ತಿನೆ ಸೇರಿಯಾಗಿದೆ. ಹೀಗಿದ್ದೂ ಪಾಂಡವ ಕೌರವರು ಸೈನ್ಯ ಸಂಚಯದಲ್ಲಿ ನಿರತರಾಗಿದ್ದಾರೆ. ಉಪಪ್ಲಾವ್ಯವನ್ನು ತಮ್ಮ ಅನಧಿಕೃತ ಕೇಂದ್ರವನ್ನಾಗಿಸಿ ಪಾಂಡವರ ಪಕ್ಷ ಸೇರಲು ಮಿತ್ರ ರಾಜರ ಸೇನೆ ಬರುತ್ತಿದೆ.
ದ್ವಾರಕೆಯಿಂದ ಸಾತ್ಯಕಿಯ ನಾಯಕತ್ವದಲ್ಲಿ ಮಹಾ ಪ್ರತಾಪಿಗಳೂ, ಶಕ್ತಿವಂತರೂ, ಶಸ್ತ್ರಾಸ್ತ್ರ ನಿಪುಣರೂ, ಮಹಾವೀರರೂ ಕೂಡಿರುವ ಒಂದು ಅಕ್ಷೋಹಿಣಿ ಸೇನೆ ಬಂದು ಉಪಪ್ಲಾವ್ಯ ಸೇರಿತು. ಅದರ ಬೆನ್ನು ಬೆನ್ನಿಗೆ ಚೇದಿ ರಾಜ್ಯದ ಅರಸ ದೃಷ್ಟಕೇತು, ಮಗಧ ದೇಶದ ಜರಾಸಂಧನ ಪುತ್ರ ಸಹದೇವ,ಮಹಾರಾಜ ಪಾಂಡ್ಯ, ಕೇಕಯ ದೇಶದ ಐವರು ರಾಜ ಮತ್ತವನ ಸಹೋದರರು, ಪಾಂಚಾಲದ ದ್ರುಪದ ರಾಜ, ಮತ್ಸ್ಯ ದೇಶದ ವಿರಾಟ ರಾಜರೆಲ್ಲ ತಮ್ಮ ತಮ್ಮ ದೇಶದ ಒಂದೊಂದು ಅಕ್ಷೋಹಿಣಿ ಅತಿಬಲ – ಮಹಾಬಲ ವೀರಾಗ್ರಣಿಗಳ ಸೇನಾಸಮೇತರಾಗಿ ಉಪಪ್ಲಾವ್ಯದಲ್ಲಿ ಬಂದು ಸೇರಿದರು. ಒಟ್ಟಾಗಿ ಏಳು ಅಕ್ಷೋಹಿಣಿ ಸೇನೆ ತುಂಬಿ ಉಪಪ್ಲಾವ್ಯ ಸಾಗರದಂತೆ ಗೋಚರಿಸತೊಡಗಿತು. ಅಗತ್ಯ ಬಿದ್ದರೆ ಬೇಕಾಗಬಹುದು ಎಂದು ದ್ರುಪದ ಕುಮಾರ ದೃಷ್ಟದ್ಯುಮ್ನ ಮತ್ತೆರಡು ಅಕ್ಷೋಹಿಣಿ ಸೇನೆಯನ್ನು ಪಾಂಚಾಲದಲ್ಲಿ ಸಜ್ಜುಗೊಳಿಸಿರಿಸಿದನು.
ಇತ್ತ ದುರ್ಯೋಧನನೂ ಹಿಂದುಳಿದಿಲ್ಲ. ಭಗದತ್ತ, ಮದ್ರರಾಜ, ಮಹಾ ರುದ್ರ ಪ್ರತಾಪಿ ಭೂರಿಶ್ರವಸ, ಯಾದವ ವಿಕ್ರಮಿ ಕೃತವರ್ಮ, ಕಾಂಭೋಜದ ಸುದಕ್ಷಿಣ, ರಾಜಾ ಶುಕಯವನ, ಮಾಹಿಷ್ಮತಿಯಾಧಿಪ, ಆವಂತೀದೇಶದ ವಿಂದಾನುವಿಂದರು, ಸಿಂಧೂ ದೇಶದ ಜಯದ್ರಥ, ಮಾದ್ರ ದೇಶದ ಶಲ್ಯ ಭೂಪ, ಯಾದವರ ನಾರಾಯಣಿ ಸೇನೆ ಹಾಗು ಇತರ ಸೈನ್ಯ ಸೇರಿಸಿ ಒಟ್ಟು ಹನ್ನೊಂದು ಅಕ್ಷೋಹಿಣಿ ಸೇನೆ ಕೌರವ ಪಕ್ಷದಲ್ಲಿ ಸಂಚಯಗೊಳಿಸಿದನು. ಪಾಂಡವರಿಗಿಂತಲೂ ಅಧಿಕ ಸೈನ್ಯ ತನ್ನ ಬಳಿ ಸೇರಿದಾಗ ದುರ್ಯೋಧನ – ಶಕುನಿಯಾದಿಗಳಿಗೆ ಮಹದಾನಂದವೆ ಆಯಿತು.
ಅತ್ತ ಹಸ್ತಿನೆಯಲ್ಲಿ ಇತ್ತ ಉಪಪ್ಲಾವ್ಯದಲ್ಲಿ ಜಾತ್ರೆಯಂತೆ ಸೇನೆ ಸೇರಿ ಜನಸಾಗರವಾಗಿದೆ. ಆಯುಧಾಗಾರ, ಗಜ ಅಶ್ವ ಲಾಯ, ಪಾಕ ಶಾಲೆಗಳು, ವಿಶ್ರಾಂತಿ ಗ್ರಹಗಳು, ಶೌಚಗ್ರಹಗಳು, ಪ್ರತ್ಯೇಕ ಸೇನಾನಿವೇಶನಗಳು ಸಿದ್ಧಗೊಂಡವು. ಎರಡೂ ಕಡೆ ಎಡೆಬಿಡದೆ ಕಾರ್ಯಗಳು ಸಾಗುತ್ತಾ ಸೌಕರ್ಯದ ವ್ಯವಸ್ಥೆಗಳು ನಡೆಯುತ್ತಿವೆ. ಉಪಪ್ಲಾವ್ಯದ ವ್ಯವಸ್ಥೆ ಮತ್ಸ್ಯ ದೇಶದ ರಾಜಾ ವಿರಾಟನೂ, ಪಾಂಚಾಲದ ದೊರೆ ದ್ರುಪದನೂ ಸೇರಿ ತಾವು ನಿಂತು ಮಾಡಿಸುತ್ತಿದ್ದಾರೆ. ಇತ್ತಂಡಗಳೂ ಪರಸ್ಪರ ಇದಿರಾಳಿಗಳ ನಡೆ, ವ್ಯವಸ್ಥೆಯ ಸುದ್ಧಿ ಸಂಗ್ರಹಿಸುತ್ತಾ, ಅದಕ್ಕೆ ಪ್ರತಿಯಾಗಿ ಯುದ್ಧ ಸಿದ್ಧತೆ ಮಾಡಿಕೊಳ್ಳುತ್ತಿದ್ದರು. ಯಾರು ಯಾರನ್ನು ಎದುರಿಸಬೇಕು, ಅವರವರ ಪ್ರಬಲತೆಗಳ ವಿಚಾರ, ಎದುರಿಸುವ ರೀತಿ, ಚಾಣಾಕ್ಷ ತಯಾರಿಯ ಕುರಿತೂ ತಯಾರಾಗುತ್ತಿದ್ದರು. ಯುದ್ದ ನಿರ್ಣಯವಾಗದಿದ್ದರೂ ಎರಡೂ ಪಾಳಯದಲ್ಲಿ ಘೋರ ಸಂಗ್ರಾಮದ ಕಾರ್ಮೋಡ ಕವಿದಾಗಿತ್ತು. ಗೂಢಚಾರರು ಸಕ್ರಿಯವಾಗಿ ಕಾರ್ಯ ನಿರತರಾಗಿದ್ದ ಕಾರಣ ಎಲ್ಲ ಮುಖ್ಯ ವಿಷಯಗಳು ಗೋಪ್ಯವಾಗಿಯೆ ನಡೆಯತೊಡಗಿದ್ದವು.
ಅತ್ತ ಹಸ್ತಿನಾವತಿಯಲ್ಲಿ ದ್ರುಪದ ರಾಜಪುರೋಹಿತ, ರಾಜಕೀಯ ಪಂಡಿತ, ಮಹಾ ಚಾಣಾಕ್ಷ ಶತಾನಂದರು ಬಂದು ವಿಷಯ ಚರ್ಚೆಗೆ ತೊಡಗಿ ಕೆಲ ದಿನಗಳಾಗಿದ್ದರೂ, ಸರಿಯಾದ ಅವಕಾಶ ಒದಗುತ್ತಿರಲಿಲ್ಲ. ಏನಾದರೊಂದು ಕಾರಣ ಮೈದೋರಿ ನಿರಂತರವಾಗಿ ಮುಂದೂಡುತ್ತಲೆ ಬಂದಿತ್ತು. ನಿಜವಾಗಿ ಹೇಳಬೇಕಾದರೆ ಮಹಾರಾಜ ಧೃತರಾಷ್ಟ್ರನಿಗೆ ದುರ್ಯೋಧನ ಮತ್ತು ಶಕುನಿ ಕೈಗೆ ಸಿಗದೆ ಯಾವ ನಿರ್ಧಾರ ಒಪ್ಪುವುದಕ್ಕೂ, ತಿರಸ್ಕರಿಸುವುದಕ್ಕೂ ಆಗದೆ ನಿಧಾನವಾಗಿತ್ತು.
ಇಲ್ಲಿ ಒಂದು ಸೂಕ್ಷ್ಮವಿದೆ, ಅರಸ ದಕ್ಷನಾಗಿದ್ದರೆ, ಸಿಂಹ ಸದೃಶನಾಗಿದ್ದರೆ – ಕಾಡಿನಲ್ಲಿರುವ ಸಿಂಹ ಅನಭಿಷಿಕ್ತವಾಗಿದ್ದರೂ ಮೃಗರಾಜನ ಮಾನ್ಯತೆ ಪಡೆಯುತ್ತದೆ. ಸಾಮಾನ್ಯ ಆಸನದಲ್ಲಿ, ರಾಜ ಆಸ್ಥಾನವಲ್ಲದ ಸ್ಥಳದಲ್ಲಿ ಕುಳಿತರೂ ಸ್ವಯಂ ಪ್ರಭೆಯಿಂದ ಮಹಾರಾಜನಾಗಿ ಕಂಗೊಳಿಸಿ ಮರ್ಯಾದೆ ಪಡೆಯುತ್ತಾನೆ. ಅದೇ ರೀತಿ ಮತ್ತೊಂದು ವಿಧಾನದಲ್ಲಿ ಅಸಮರ್ಥನಾಗಿದ್ದು, ಹೇಗೊ ಅವಕಾಶ ಪಡೆದವ ಸಿಂಹಾಸನ ಏರಿ ಕುಳಿತಾಗ ಆ ಸ್ಥಾನ ಕಾರಣದಿಂದ ರಾಜ ಎನಿಸಿಕೊಳ್ಳುತ್ತಾನೆ ಹೊರತು ರಾಜನ ಅಧಿಕಾರ ಚಲಾವಣೆ ಆಗುವುದಿಲ್ಲ. ಶತಾನಂದರಿಗೆ ಈ ವ್ಯತ್ಯಾಸ ರಾಜಾ ಧೃತರಾಷ್ಟ್ರನನ್ನು ಕಂಡಾಗ ಗೋಚರಿಸುತ್ತಿತ್ತು.
ಹೀಗಿರಲು ಒಂದು ಸುದಿನ ಹಸ್ತಿನಾವತಿಯ ರಾಜಸಭೆಯಲ್ಲಿ ಧೃತರಾಷ್ಟ್ರ ಮಹಾರಾಜನಾಗಿ ಸಿಂಹಾಸನಾರೂಢನಾಗಿದ್ದಾನೆ. ರಾಜಸಭೆಯಲ್ಲಿ ಭೀಷ್ಮಾಚಾರ್ಯ, ಆಚಾರ್ಯರಾದ ದ್ರೋಣ, ಕೃಪ, ಅಶ್ವತ್ಥಾಮರೂ ಮಂಡಿತರಿದ್ದಾರೆ. ಮಹಾಮಂತ್ರಿ ಧರ್ಮಮೂರ್ತಿ ವಿದುರ, ಕೌರವಾದಿಗಳೂ, ಅವರ ಆಪ್ತರನೇಕರು ಉಪಸ್ಥಿತರಿದ್ದಾರೆ. ಸಹಾಯಕರಾಗಿ ಸೇನಾಸಮೇತ ಬಂದ ರಾಜ ಮಹಾರಾಜರೂ ಆಸೀನರಾಗಿದ್ದಾರೆ. ಇಂತಹ ತುಂಬಿದ ಸಭೆಯಲ್ಲಿ ಪಾಂಚಾಲ ದೊರೆ ದ್ರುಪದನ ರಾಜ ಪುರೋಹಿತ ಶತಾನಂದರನ್ನು ಕರೆದು ಸತ್ಕರಿಸಿ ಕುಳ್ಳಿರಿಸಿದ್ದಾರೆ. ಅಂದಿನ ಸಾಮಾನ್ಯ ಕಲಾಪಗಳು ನಡೆದು ಶತಾನಂದರಿಗೆ ಬಂದ ಕಾರ್ಯ ಕಾರಣ ಹೇಳುವ ಅವಕಾಶ ನೀಡಲಾಯಿತು.
ಶತಾನಂದರು ಯೋಚಿಸಿ ಸಿದ್ಧರಾಗಿಯೆ ಬಂದಿದ್ದರು. “ಮಹಾರಾಜ ಧೃತರಾಷ್ಟ್ರ ನಿನಗೆ ಪ್ರಣಾಮಗಳು. ಹಾಗೆಯೆ ಇಲ್ಲಿ ನೆರೆದಿರುವ ಸಮಸ್ತರಿಗೂ ವಂದನೆಗಳು. ಹಸ್ತಿನಾವತಿಯಲ್ಲಿ ವರ್ತಮಾನ ಕಾಲದಲ್ಲಿ ಆಳುತ್ತಿರುವ ಚಂದ್ರವಂಶಕ್ಕೆ ಕೀರ್ತಿಪ್ರದವಾದ ಮಹಾ ಚರಿತ್ರೆ ಇದೆ. ಬಹಳಷ್ಟು ಉತ್ತಮ ಅತ್ಯುತ್ತಮ ರಾಜ – ಮಹಾರಾಜರು, ಸಾಮ್ರಾಟರು, ಚಕ್ರವರ್ತಿಗಳು ಆಳಿ ಅಳಿದರೂ – ಕೀರ್ತಿ ಅಜರಾಮರವಾಗಿ ಉಳಿದು ಬೆಳೆಯುತ್ತಿದೆ. ಇಂತಹ ಸತ್ಕುಲ ಪ್ರಸೂತರಾದ ಪುತ್ರರು ಕೌರವ – ಪಾಂಡವ ಎಂದು ವಿಭಾಗಿಸಲ್ಪಟ್ಟು ವೈರಿಗಳಾಗಿ ಬೆಳೆದುದು ವಿಷಾದಕರ. ನಮಗೆಲ್ಲರಿಗೂ ಇದು ಅತಿ ದುಃಖಕರ ವಿಚಾರ. ಇದು ಹೀಗೆಯೆ ಮುಂದುವರಿಯಗೊಟ್ಟರೆ ಅಖಂಡ ಆರ್ಯಾವರ್ತದ ವೀರ ಮನುಕುಲದ ಮಾರಣಹೋಮಕ್ಕೆ ಹೇತುವಾದೀತು. ಹಿಂದೆ ಏನಾಗಿದೆ? ಯಾಕೆ ಹೀಗಾಯಿತು? ಎಂಬ ವಿಚಾರ ಅಗತ್ಯವಾದರೂ ಅದನ್ನು ಕೆದಕಿದರೆ ವಿವಾದವಾಗಿ ಹೋದೀತು, ಹೊರತು ಏನೇನೂ ಪ್ರಯೋಜನವಾಗದು. ಹಸ್ತಿನೆಯ ದ್ಯೂತ ಭವನದಲ್ಲಾದ ನಿರ್ಣಯದಂತೆ ದ್ಯೂತದಲ್ಲಿ ಸೋತವರು ಸರ್ವ ಸಂಪದವನ್ನು ಗೆದ್ದವರಿಗೆ ಹದಿಮೂರು ವರ್ಷ ಕಾಲ ಒಪ್ಪಿಸಿ ವನವಾಸ – ಅಜ್ಞಾತವಾಸ ಪೂರೈಸಿ ಬರಬೇಕು. ಅದರಂತೆ ಪ್ರಾಮಾಣಿಕತೆಯಿಂದ ನಡೆದು, ಕಡು ಕಷ್ಟ ಅನುಭವಿಸಿ,ಯಶಸ್ವಿಯಾಗಿ ಪಣ ಪೂರೈಸಿ ಬಂದಿರುವ ಪಾಂಡು ಪುತ್ರರಿಗೆ ಅವರದ್ದಾದುದನ್ನು ನೀಡಿದರೆ ಪ್ರಕರಣ ಇತ್ಯರ್ಥಗೊಳ್ಳುತ್ತದೆ. ಹಿರಿಯರಾದ ಮಹಾರಾಜ ಧೃತರಾಷ್ಟ್ರ, ಭೀಷ್ಮಾಚಾರ್ಯ, ಗುರು ದ್ರೋಣ, ಕೃಪಾಚಾರ್ಯರು, ಮಂತ್ರಿ ವಿದುರರು ಚಂದ್ರವಂಶದ ಉತ್ತರಾಧಿಕಾರಿಗಳಾದ ಪಾಂಡವ – ಕೌರವರನ್ನು ಕರೆದು ಸಮಾಲೋಚನೆ ನಡೆಸಿ, ಈ ಉತ್ತಮ ನಿರ್ಣಯ ಕೈಗೊಂಡರೆ ಚಂದ್ರವಂಶಕ್ಕೂ ಕೀರ್ತಿ. ಆರ್ಯಾವರ್ತದ ಸಮಗ್ರ ರಾಜರಿಗೂ ಕ್ಷೇಮ. ಹಾಗಾಗದಿದ್ದರೆ ಮಹಾ ಸಂಗ್ರಾಮ ನಡೆಸುವ ಸಿದ್ಧತೆಗಳು ಎರಡೂ ಪಕ್ಷಗಳಿಂದ ನಡೆಯುತ್ತಿವೆ. ಹಾಗೆ ಮುಂದುವರಿಯಗೊಟ್ಟರೆ ಪ್ರಬಲವಾದ ಇತ್ತಂಡಗಳೂ ಕಾದಾಡಿ ಹಸ್ತಿನೆಯ ಚಂದ್ರವಂಶದ ಕಾರಣದಿಂದ ರಕ್ತದ ಹೊಳೆ ಹರಿಯುವಂತಾದೀತು. ಸೋದರ ಬಂಧುಗಳು ಪರಸ್ಪರ ಕಾದಾಡಿ ಸಾಯುವುದನ್ನು ಕಾಣ ಬೇಕಾದೀತು. ಈ ದುರಂತಮಯ ಸ್ಥಿತಿಯನ್ನು ಕಲ್ಪಿಸಲೂ ವೇದನೆಯಾಗುತ್ತದೆ. ಹಾಗಾಗಿ ಯಾವುದೆ ಅನಾಹುತ ಸಂಭವಿಸದಂತೆ ನಿಯಂತ್ರಿಸುವ ಹೊಣೆ ಹಿರಿಯರಾದ ನಿಮ್ಮ ನಿರ್ಣಯದ ಮೇಲಿದೆ. ಉಚಿತಾನುಚಿತಗಳನ್ನು ವಿವೇಚಿಸಿ ಸಾಧುವಾದ ನಿರ್ಧಾರ ಮಹಾರಾಜರ ಮುಖದಿಂದ ಪ್ರಕಟವಾದರೆ ಸುಕ್ಷೇಮವಾದೀತು. ವಿಚಾರ ನಿಮ್ಮ ವಿವೇಚನೆಗೆ ಬಿಟ್ಟದ್ದು” ಎಂದು ಶತಾನಂದರು ತನ್ನ ಅಭಿಪ್ರಾಯ ವಿವರಿಸಿದರು.
ಮುಂದುವರಿಯುವುದು…