ಭಾಗ – 276
ಭರತೇಶ ಶೆಟ್ಟಿ , ಎಕ್ಕಾರ್

ಸಂಚಿಕೆ ೨೭೭ ಮಹಾಭಾರತ
ಶಲ್ಯ ಭೂಪತಿ ಉಪಪ್ಲಾವ್ಯಕ್ಕೆ ಬರುತ್ತಿರುವ ಸುದ್ದಿ ಶ್ರೀಕೃಷ್ಣನಿಗೆ ತಿಳಿಯಿತು. ಧರ್ಮರಾಯನನ್ನು ಕರೆದು ವಿಶೇಷ ಸತ್ಕಾರದ ವ್ಯವಸ್ಥೆ ಮಾಡಲು ಸೂಚಿಸಿದನು. ತುಸು ಸಮಯದಲ್ಲಿ ಮಾದ್ರಾದೀಶ ಉಪಪ್ಲಾವ್ಯಕ್ಕೆ ಬಂದನು. ಧರ್ಮರಾಯ ಮಾವ ಶಲ್ಯನನ್ನು ಸ್ವತಃ ತಾನು ಮುಂದೆ ನಿಂತು ಆದರಾತಿಥ್ಯಗಳಿಂದ ಸತ್ಕರಿಸಿ ಸ್ವಾಗತಿಸಿದನು. ನಂತರ ಅವರಿಬ್ಬರ ಜೊತೆ ಕುಶಲ ಕ್ಷೇಮ ಸಮಾಚಾರ ವಿನಿಮಯ ಆರಂಭವಾಯಿತು. “ಮಾವಾ! ನೀವು ಕ್ಷೇಮ ತಾನೆ? ಸುದೀರ್ಘ ಪ್ರಯಾಣದಿಂದ ನೀವು ದಣಿದಿರಬಹುದು. ವಿಶ್ರಾಂತಿ ಬಯಸುವಿರಾ?” ಎಂದು ಧರ್ಮಜ ಕೇಳಿದನು. ಆಗ ಶಲ್ಯ “ವತ್ಸಾ! ನೀನು ಕಳುಹಿಸಿದ ದೂತ ತಂದ ಓಲೆಯ ವಿಚಾರದಂತೆ ನಾನು ನಿಮ್ಮನ್ನು ಸೇರಿಕೊಳ್ಳಲು ಸೇನೆ ಸಮೇತನಾಗಿ ಬರುತ್ತಿದ್ದೆನು. ದಾರಿ ಮಧ್ಯದಲ್ಲಿ ವಿಶೇಷ ಆದರಾತಿಥ್ಯ, ಊಟೋಪಚಾರ, ಸತ್ಕಾರದ ಬಹುವಿಧ ವ್ಯವಸ್ಥೆಗಳು, ವಿಶ್ರಾಂತಿ ವ್ಯವಸ್ಥೆಗಳೆಲ್ಲ ಆಯೋಜಿತವಾಗಿದ್ದವು. ಹಿಂದೆ ಮುಂದೆ ಆಲೋಚಿಸುವಲ್ಲಿ ವಿಫಲನಾದ ನಾನು ಆ ಸೇವೆಯನ್ನು ಬಳಸಿಕೊಂಡು ನಿಜವಾಗಿಯೂ ಸಂತುಷ್ಟನಾಗಿ ಹೋದೆ. ಆ ಸಮಾಧಾನದಿಂದ ನೀನೇ ಈ ವ್ಯವಸ್ಥೆ ಮಾಡಿರುವುದೆಂದು ಭಾವಿಸಿ ‘ಏನು ಬೇಕೋ ಕೇಳಿಕೊಳ್ಳಿ’ ಎಂಬ ವಚನವಿತ್ತೆ. ಅದರಂತೆ ದುರ್ಯೋಧನ ಬಂದು ನನ್ನನ್ನು ಅವರ ಪಕ್ಷಕ್ಕೆ ಸೇರಿಕೊಳ್ಳಲು ಕೇಳಿಕೊಂಡ. ಕೊಟ್ಟ ಮಾತು, ಉಂಡ ಊಟದ ಇಕ್ಕಟ್ಟಿನಲ್ಲಿ ಸಿಲುಕಿ ಅವರ ಪಾಲಾಗಿ ಹೋಗಿದ್ದೇನೆ. ಏನೋ ಒಂದು ರೀತಿಯ ಮಾಯೆ ಕಾಣದ ಕೈಯಂತೆ ನಮ್ಮನ್ನು ಆಡಿಸುತ್ತಿದೆ. ನಾವು ಸೂತ್ರಧಾರನ ಆಣತಿಯಂತೆ ಕುಣಿಯುವ ಗೊಂಬೆಗಳಾಗಿ ಹೋಗಿದ್ದೇವೆ. ಈ ಜಗತ್ತಿನಲ್ಲಿ ನಾವು ಬಯಸುವುದೊಂದು – ನಮಗೆ ಸಿಗುವುದೊಂದು. ಪ್ರತಿಯೊಂದೂ ದೈವ ಸಂಕಲ್ಪ ಎಂದು ಸ್ವೀಕರಿಸಿ ನಡೆಯಬೇಕಾಗುತ್ತದೆ. ಈಗ ನೋಡು ನಿಮ್ಮ ಬದುಕು ಏನೆಲ್ಲಾ ಸವಾಲುಗಳನ್ನೊಡ್ಡುತ್ತಾ ಕರೆದೊಯ್ಯುತ್ತಿದೆ. ಆದರೂ ಭಗವಂತನ ಅನುಗ್ರಹದಿಂದ ಪೂರ್ವಾರ್ಧದ ಕಷ್ಟಗಳು ನಿಗ್ರಹಿಸಲ್ಪಟ್ಟು ಉತ್ತರಾರ್ಧದಲ್ಲಿ ನಿಮಗೆ ಕ್ಷೇಮ ಪ್ರಾಪ್ತವಾಗಲಿ ಎಂದು ಬಯಸುತ್ತೇನೆ” ಎಂದನು ಶಲ್ಯ ಭೂಪತಿ.
ಧರ್ಮಜನಿಗೆ ಶಲ್ಯನ ಜೊತೆ ನಡೆದು ಹೋದ ಷಡ್ಯಂತ್ರ ವೇದನೆಯನ್ನು ಮೂಡಿಸಿತು. “ಮಾವ ನೀವು ಅತಿ ಬಲಾಢ್ಯರೂ ವರ್ತಮಾನ ಕಾಲದ ಅಪ್ರತಿಮ ಜಗಜಟ್ಟಿಗಳ ಅಗ್ರಪಂಕ್ತಿಯಲ್ಲಿ ಶೋಭಿಸುತ್ತಿರುವ ವಿಕ್ರಮಿಯಾಗಿದ್ದೀರಿ. ಮೇಲಾಗಿ ಕೌರವ ಪಕ್ಷದಲ್ಲಿ ಮೊದಲೆ ಭೀಷ್ಮ, ದ್ರೋಣ, ಕರ್ಣ, ಅಶ್ವತ್ಥಾಮಾದಿಗಳಿದ್ದು, ಈಗ ಇನ್ನಷ್ಟು ಬಲಯುತವಾಯಿತು. ನೀವೇನು ಸಾಮಾನ್ಯರೆ? ರಥಕಲ್ಪ – ಅಶ್ವ ಹೃದಯ ಪರಿಣತ ಮಹಾಸಾರಥಿಯೂ ಹೌದು. ಈಗಾಗಲೆ ಹೆಸರಿಸಿದ ಮಹಾರಥರಿಗೆ ನೀವೇನಾದರು ಸಾರಥಿಯಾಗಿ ಸಿಕ್ಕರೆ ಅದ್ಬುತ ಸಾಧನೆ ರಣರಂಗದಲ್ಲಿ ಉತ್ಪತ್ತಿಯಾದೀತು. ಅದರಲ್ಲೂ ಆಚಾರ್ಯರು ನಮ್ಮ ಬಗ್ಗೆ ಒಲವು ಉಳ್ಳವರು, ಆದರೆ ಆ ಕರ್ಣ ಅರ್ಜುನನ ಅಂತ್ಯವನ್ನು ಸಾಧಿಸಲು ಶತಾಯ ಗತಾಯ ಪ್ರಯತ್ನಿಸುವುದರಲ್ಲಿ ಸಂಶಯವಿಲ್ಲ. ಅಂತಹ ಕರ್ಣನೂ ಮಹಾ ಪರಾಕ್ರಮಿಯಾಗಿದ್ದಾನೆ. ಅದೇ ಪಕ್ಷದಲ್ಲಿ ಈಗ ಸೇರಿರುವ ನೀವು ಆತನಿಗೇನಾದರೂ ಸಾರಥ್ಯ ಮಾಡುವ ಸಂದರ್ಭ ಒದಗಿದರೆ ಕರ್ಣನೂ ಅಜೇಯನಾಗಿ ಮೆರೆಯಬಲ್ಲವನಾಗುತ್ತಾನೆ. ಪರಿಣಾಮ ನಮ್ಮ ಜಯದ ಹಾದಿ ಕಠಿಣವಾಗಿ ಹೋದೀತು” ಎಂದು ಯುಧಿಷ್ಠಿರ ಕಳವಳ ವ್ಯಕ್ತ ಪಡಿಸಿದನು.
“ಧರ್ಮರಾಯ! ನೀನು ವ್ಯಥೆ ಪಡಬೇಡ. ನಾನು ನಿಷ್ಠಾವಂತನು ಹೌದು. ಪಕ್ಷದ್ರೋಹ ಮಾಡುವ ಮನಸ್ಥಿತಿ ಉಳ್ಳವನಲ್ಲ. ಆದರೆ ನನ್ನನ್ನು ಮೋಸದಿಂದ ಸೆಳೆದ ಆ ಕೌರವನಿಗೆ ನಿಷ್ಠೆ ತೋರದಿದ್ದರೆ ನನಗೆ ಯಾವ ತರಹದ ದೋಷವೂ ಬಾಧಿಸದು. ಒಂದೊಮ್ಮೆಗೆ ನೀನು ಭಾವಿಸಿದಂತೆ ಆ ಸೂತ ಪುತ್ರನಿಗೆ ಸಾರಥಿಯಾಗಲು ನನ್ನನ್ನು ಕೌರವ ಕೇಳಿಕೊಂಡರೆ, ಪಕ್ಷದಲ್ಲಿದ್ದು ಆಗದು ಎನ್ನಲಾರೆ. ಬದಲಾಗಿ ಮೋಸ ಮಾಡಿದ ಕೌರವನ ಏಳಿಗೆ ಬಯಸದೆ ಕರ್ಣನ ಮನೋಬಲ ವರ್ಧಿಸುವ ಕೆಲಸ ಮಾಡಬೇಕಾದ ನಾನು ತದ್ವಿರುದ್ದ ವ್ಯವಹಾರದಲ್ಲಿ ತೊಡಗುವೆ. ಕಾರಣ ಅವರು ನನಗೆ ಮಾಡಿದ ಮೋಸಕ್ಕೆ ಪ್ರತಿಕಾರವಾಗಿ ನಾನು ಅಷ್ಟು ಮಾಡುತ್ತೇನೆ. ರಥಿಕನಾದ ಕರ್ಣನನ್ನು ನಿಂದಿಸಿ, ಅಪಮಾನಿಸಿ ಮಾನಸಿಕ ಸ್ಥೈರ್ಯ ಕುಂದಿಸಿ ಬಿಡುವೆ. ಈ ರೀತಿ ನಾನು ನಡೆದುಕೊಂಡರೆ ಸತ್ಪುರುಷನಾಗಿ ಧರ್ಮ ಪಾಲನೆ ಮಾಡಬೇಕಾದ ನನಗೆ ಖಂಡಿತಾ ಅದು ಅಧರ್ಮವಾಗದು. ಕಾರಣ ಅದರ ಪರಿಣಾಮವಾಗಿ ಧರ್ಮಪಾಲಕರಾದ ನಿಮಗೆ ಉಪಕಾರವಾಗುತ್ತದೆ. ಧರ್ಮಿಷ್ಟರಿಗೆ ಸಹಾಯ ಮಾಡುವುದು ಧರ್ಮಕಾರ್ಯವೇ ಹೌದು. ಇನ್ನೂ ವಿವೇಚಿಸುವುದಾದರೆ ನನಗೆ ಕೌರವ ಮಾಡಿದ ಮೋಸಕ್ಕೆ ಶಿಕ್ಷೆ ನೀಡಿದಂತಾದೀತು ಹೊರತು ಅಪರಾಧವಾಗದು. ನೀನೇನೂ ವ್ಯಥೆ ಪಡಬೇಡ. ಈ ಶಲ್ಯ ಎಲ್ಲಿದ್ದರೂ ತನ್ನ ಅಳಿಯಂದಿರ ಪರವಾಗಿ ಯೋಚಿಸುತ್ತಾನೆ ಹೊರತು ವಿರೋಧಿಯಾಗಲಾರನು. ಆ ದುರ್ಯೋಧನ ಸದ್ಯಕ್ಕೆ ಮಾದ್ರದೇಶದ ಸೇನೆ ಸಂಪಾದಿಸಿದ್ದೇನೆ ಎಂದು ಸಂಭ್ರಮಿಸುತ್ತಿರಬಹುದು. ಆದರೆ ಆತನಿಗೆ ತಿಳಿದಿಲ್ಲ, ಸುಡುವ ಕೆಂಡವನ್ನು ಸೆರಗಿನಲ್ಲಿ ಕಟ್ಟಿ ಕೊಂಡಿದ್ದಾನೆಂದು. ಇನ್ನೂ ಒಂದು ಮಾತು ಹೇಳುವೆ ಕೇಳು, ನಾನು ನಿಮ್ಮ ಹಗೆಯಾಗಿ ಬದಲಾಗಿದ್ದರೆ, ಬಹಿರಂಗವಾಗಿ ನಿಮ್ಮ ಮೇಲಿನ ಪ್ರೀತಿಯಿಂದ ನಿಮ್ಮನ್ನು ನೋಡಲು ಬರುತ್ತಿರಲಿಲ್ಲ. ನನ್ನ ಕುರಿತಾಗಿ ವ್ಯಥೆ ಪಡಬೇಡ” ಎಂದು ಮಾವ ಮಾದ್ರೇಶ ತನ್ನ ಮನದ ದುಗುಡ ಹೇಳಿ, ಧೈರ್ಯ ತುಂಬಿದನು.
ಧರ್ಮರಾಯ ರಾಜಕಾರಣ ಶಾಸ್ತ್ರ ನಿಪುಣ. ತನ್ನ ವೈರಿಯಾಗಿ ದುರ್ಯೋಧನ ತೋರಿದ ಚಾಣಾಕ್ಷ ಬುದ್ಧಿಯ ಪ್ರತಿಫಲನವನ್ನು ಆಯ್ದುಕೊಂಡು ತಿರುಗುಬಾಣವಾಗಿಸಿ ಪ್ರಯೋಗಿಸಿದ್ದಾನೆ. ಶಲ್ಯ ಪಾಂಡವರಿಗೆ ಆಶೀರ್ವದಿಸಿ ಹಸ್ತಿನಾವತಿಯತ್ತ ತೆರಳಿದನು.
ಇತ್ತ ಹಸ್ತಿನಾವತಿಯಲ್ಲಿ ಕರ್ಣ ದುರ್ಯೋಧನರು ಶಲ್ಯನಿಗೆ ರಾಜ ಮರ್ಯಾದೆ ತೋರುತ್ತಾ ಮನ್ನಿಸುತ್ತಿದ್ದಾರೆ. ಶಲ್ಯನೂ ಕೌರವನಿಗೆ ಆತ್ಮೀಯನಂತೆ ತೋರಿಸಿಕೊಳ್ಳುತ್ತಿದ್ದಾನೆ. ಸ್ವತಃ ಸೂತನ ಮಗನೂ, ನಿಸ್ಸೀಮ ಸಾರಥಿಯೂ ಆಗಿರುವ ಕರ್ಣ ಶಲ್ಯನ ಜೊತೆ ನಿಕಟ ಸಂಬಂಧ ಬೆಳೆಸುತ್ತಾ ಹತ್ತಿರದವನಾಗುವ ಪ್ರಯತ್ನದಲ್ಲಿ ತೊಡಗಿದ್ದಾನೆ.
ಆದರೂ ಕೌರವನಿಗೊಂದು ಸಂದೇಹ ಮನದಲ್ಲಿ ಸ್ಥಿರವಾಗಿತ್ತು. ಏನೆಂದರೆ ಶಲ್ಯ ಪಾಂಡವರ ಹತ್ತಿರದ ಸಂಬಂಧಿ. ಆತನ ಮನ ಮತ್ತು ಮಮಕಾರ ಇನ್ನೂ ಪಾಂಡವರ ಮೇಲೆ ಇದೆ. ಹಾಗಿದ್ದುಕೊಂಡು ಸರ್ವ ಬಲದಿಂದ ಪಾಂಡವರ ವಿರುದ್ಧ ಯುದ್ದ ಮಾಡಿಯಾನೋ? ಇಲ್ಲ ನಿರಾಸಕ್ತಿಯಿಂದ ಹಿಂದುಳಿದಾನೋ? ಅಲ್ಲ ಪಕ್ಷ ದ್ರೋಹಿಯಾದಾನೋ? ಹೀಗೆಲ್ಲಾ ಗೊಂದಲಗಳು ಸುಳಿದಾಡತೊಡಗಿದವು. ಹೀಗಿದ್ದೂ ದುರ್ಯೋಧನನಿಗೊಂದು ಸಮಾಧಾನ ಇಂತಹ ದ್ವಂದ್ವ ಭಾವ ಶಲ್ಯನ ಬಗ್ಗೆ ಹೊಂದಿದ್ದರೂ, ಒಂದು ವೇಳೆ ಶಲ್ಯ ಪಾಂಡವರ ಪಕ್ಷಕ್ಕೆ ಹೋಗಲಿ ಎಂದು ಬಿಟ್ಟಿದ್ದರೆ ಪಾಂಡವರ ಶಕ್ತಿ ವೃದ್ಧಿಯಾಗುತ್ತಿತ್ತು. ರಣರಂಗದಲ್ಲಿ ಶಲ್ಯನನ್ನು ಎದುರಿಸಿ ಹೋರಾಡಬೇಕಾದ ಹೊರೆಯೂ ನಮ್ಮ ಪಕ್ಷದ ಮೇಲೆ ಬೀಳುತ್ತಿತ್ತು. ನಮಗೆ ಲಾಭ ಮಾಡದಿದ್ದರೂ ಈ ಶಲ್ಯ ಪಾಂಡವ ಪಕ್ಷದ ಕೈ ತಪ್ಪಿದ ಕಾರಣ ಅವರ ಶಕ್ತಿ ಕ್ಷೀಣವಾದದ್ದಂತೂ ಸತ್ಯ. ಸದ್ಯಕ್ಕೆ ನಮಗದು ಸಾಧನೆ ಎಂದು ತನ್ನನ್ನು ತಾನೇ ಸಂತೈಸಿಕೊಳ್ಳುತ್ತಿದ್ದನು.
ಇತ್ತ ಯಾದವ ವೀರ ಸಾತ್ಯಕಿ ಅತಿ ಬಲಯುತ ಸೈನ್ಯ ಸಹಿತನಾಗಿ ಪಾಂಡವರಲ್ಲಿಗೆ ಬರುತ್ತಿದ್ದಾನೆ.
ಮುಂದುವರಿಯುವುದು…