ಭಾಗ 275
ಭರತೇಶ್ ಶೆಟ್ಟಿ, ಎಕ್ಕರ್

ಇತ್ತ ದುರ್ಯೋಧನ ತನ್ನ ಗದಾಯುದ್ದ ಗುರು ಬಲರಾಮನ ಬಳಿ ಬಂದನು. ಸತ್ಕಾರ ಸ್ವಾಗತಗಳಿಂದ ಆಧರಿಸಿ ಬರಮಾಡಿಕೊಂಡ ಬಲಭದ್ರದೇವ. ದುರ್ಯೋಧನ ತಾನು ಬಂದ ವಿಚಾರ ತಿಳಿಸಿದ, ಹಾಗೆಯೆ ಕೃಷ್ಣನ ಬಳಿ ಹೋಗಿ ಅಲ್ಲಿ ನಡೆದ ವೃತ್ತಾಂತವನ್ನೂ ವಿವರಿಸಿದ. ಬಲರಾಮನಿಗೆ ಪೂರ್ಣ ವಿಚಾರ ತಿಳಿದು ಮಾನಸಿಕ ವೇದನೆ ಆಯಿತು. “ನೋಡು ಕೌರವಾ, ನೀನು ನನ್ನ ಶಿಷ್ಯನು ಹೌದು. ನನಗೆ ಆ ಪ್ರೀತಿ ನಿನ್ನ ಮೇಲಿದೆ. ಲೋಕದಲ್ಲಿ ನಿನ್ನನ್ನು – ನಿನ್ನ ನಡೆಯನ್ನು ಖಂಡಿಸುವವರು ಬಹಳಷ್ಟು ಮಂದಿ ಇದ್ದಾರೆ. ಆದರೆ ನಾನು ನಿನ್ನನ್ನು ನಿಂದಿಸಿರಲಿಲ್ಲ. ಉಪಪ್ಲಾವ್ಯದಲ್ಲಿ ಅಭಿಮನ್ಯುವಿನ ವಿವಾಹ ಸಂಭ್ರಮದ ಸಡಗರ ಕಳೆದು ಏನೊ ವಿಚಾರ ಮಂಥನ ಮಾಡುತ್ತಿದ್ದ ಸಂದರ್ಭದಲ್ಲೂ ನಾನು ನಿನ್ನನ್ನು ದೂಷಿಸಿರಲಿಲ್ಲ. ಪಾಂಡವರು ಸರ್ವವಿಧದಲ್ಲೂ ಉತ್ತಮರು ಹೌದಾದರೂ ನನ್ನ ಮನದಲ್ಲಿ ನೀನು ಉತ್ತಮ ವ್ಯಕ್ತಿತ್ವದವನೆಂಬ ಭಾವನೆಯೆ ಬಲವಾಗಿತ್ತು. ಈಗ ನೀನು ತೊಡಗಿರುವ ಕಾರ್ಯ ಸರ್ವತಾ ಸರಿಯಲ್ಲ. ಭ್ರಾತೃಗಳಾದ ಕೌರವ ಪಾಂಡವರ ಭಿನ್ನಾಭಿಪ್ರಾಯ ಏನೇ ಇರಲಿ ಅದರ ವ್ಯಾಪ್ತಿಯನ್ನು ಕೌಟುಂಬಿಕ ವಿಚಾರ ಎಂಬಷ್ಟಕ್ಕೆ ಎಂಬ ರೀತಿ ಸೀಮಿತಗೊಳಿಸಿ ಹಿರಿಯರ ಸುಪರ್ದಿಯಲ್ಲಿ ಇತ್ಯರ್ಥಗೊಳಿಸಿದರೆ ಕ್ಷೇಮ. ಇಲ್ಲಿ ನ್ಯಾಯ – ಅನ್ಯಾಯ, ಧರ್ಮ – ಅಧರ್ಮ ಇತ್ಯಾದಿ ವಿಚಾರಗಳಿಗಿಂತಲೂ ಲೋಕದ ಶಕ್ತಿಯನ್ನೆಲ್ಲ ಕ್ರೋಢಿಕರಿಸಿ ಸಾರಲಿರುವ ಯುದ್ಧದಿಂದಾಗಬಹುದಾದ ವಿಧ್ವಂಸಕ ಕೃತ್ಯದ ಪರಿಣಾಮವನ್ನು ವಿವೇಚಿಸಿ ನಿರ್ಧಾರ ಕೈಗೊಳ್ಳಬೇಕು. ಯುದ್ದವಾದರೆ ಸಾಧಿಸಲಿರುವುದು ಎಷ್ಟು? ನಂತರ ಅನುಭವಿಸಲು ಉಳಿಯುವುದು ಏನು? ಎಂಬ ದೂರದೃಷ್ಟಿಯ ಕಲ್ಪನೆ ಅತ್ಯಗತ್ಯ. ಮೇಲಾಗಿ ನೀವು ತೊಡಗಲಿರುವ ಸಂಗ್ರಾಮದಲ್ಲಿ ಒಂದು ಸಂಸಾರ ಇಬ್ಭಾಗವಾಗಿ ಸೆಣಸಲಿರುವಾಗ ಯಾರು ಯಾರಲ್ಲಿ ಹೊಡೆದಾಡುವುದು? ತತ್ಪರಿಣಾಮದಲ್ಲಿ ಸಾಯುವವರು – ಉಳಿಯುವವರು ಬಂಧುಗಳೇ ಅಲ್ಲವೆ? ಇಂತಹ ಬಂಧುಹತ್ಯಾ ಹೇತುವಾದ ಸಮರದಿಂದ ಸ್ಥಾಪಿಸುವುದಾದರೂ ಏನನ್ನು? ನಿಮ್ಮಲ್ಲಿ ಈ ರೀತಿಯ ಬಂಧುತ್ವದ ಭಾವನೆ ಇದೆಯೋ – ಇಲ್ಲವೋ ನನಗರಿವಾಗುತ್ತಿಲ್ಲ. ಹುಟ್ಟಿನಿಂದ ಇಂದಿನವರೆಗೂ ನಾನೂ ಕೃಷ್ಣನೂ ಜೊತೆಜೊತೆಯಾಗಿಯೆ ಬೆಳೆದವರು. ಹೋಗುವುದು, ಬರುವುದು, ಏನೇ ಮಾಡುವುದಿದ್ದರೂ ನಮ್ಮ ಒಡನಾಟ ಅಭೇಧ್ಯವಾದದ್ದು. ಹಾಗಿರಲು ಕೃಷ್ಣ ಪಾಂಡವ ಪಕ್ಷದಲ್ಲಿ ಇರುವಾಗ ನಾನು ನಿಮ್ಮ ಪಕ್ಷಕ್ಕೆ ಬರಲಾಗದು. ಹಾಗೆಂದು ನನ್ನ ಬಳಿ ನೀನು ಮೊದಲಾಗಿ ಬಂದಿದ್ದೀಯಾ, ಹಾಗಾಗಿ ನಾನು ಪಾಂಡವ ಪಕ್ಷದಿಂದ ಯಾರಾದರೂ ಇನ್ನು ಬಂದು ಕೇಳಿದರೂ ಆ ಪಕ್ಷಕ್ಕೂ ನಾನು ಸೇರಲಾರೆ. ಈಗಲೂ ನಿನ್ನ ಗುರುವಾಗಿ ಹಿತದೃಷ್ಟಿಯಿಂದ ಹೇಳುತ್ತಿದ್ದೇನೆ, ಈ ಯುದ್ದ ಬೇಡ, ಹಿಂದೆ ಏನೇನೂ ನಡೆದು ಹೋಗಿದೆಯೋ ಮರೆತು ಬಿಡು. ನಾಳೆಯ ಸುಂದರ ಭವಿಷ್ಯದ ಬಗ್ಗೆ ಯೋಚಿಸಿ, ನಿನ್ನ ಛಲ ತೊರೆದು ಒಮ್ಮತದ ನಿರ್ಧಾರಕ್ಕೆ ಬಂದರೆ ಕಲ್ಯಾಣವೆ ಆಗಲಿದೆ. ನನಗೆ ಗೊತ್ತಿದೆ ನಿನಗೆ ತಿಳಿ ಹೇಳುವುದು ವ್ಯರ್ಥ ಪ್ರಯತ್ನವೆಂದು, ನಿನ್ನ ನಿರ್ಧಾರದಿಂದ ಕದಲುವವನಲ್ಲ ನೀನು. ಹಾಗಾಗಿ ನಿನ್ನ ಬುದ್ಧಿ ನಿನಗೇನು ಮಾಡಬೇಕೆಂಬ ಪ್ರೇರಣೆ ನೀಡುವುದೋ ಅದನ್ನು ಮುಂದುವರಿಸು. ನಿನಗೆ ಶುಭವಾಗಲಿ. ಎಂದು ದುರ್ಯೋಧನನನ್ನು ಬೀಳ್ಕೊಟ್ಟನು.
ಅಲ್ಲಿಂದ ನೇರವಾಗಿ ದುರ್ಯೋಧನ ಯಾದವ ವೀರನಾದ ಕೃತವರ್ಮನ ಬಳಿ ಸಾಗಿದ. ತಾನು ಬಂದ ಕಾರ್ಯ ಕಾರಣ ನಿವೇದಿಸಿ, ಸಹಾಯ ಕೇಳಿದ. ಕೃತವರ್ಮ ಒಪ್ಪಿ ಸಹಾಯಿಯಾಗಲು ಸಹಮತ ನೀಡಿದ. ಜೊತೆಗೆ ತನ್ನ ಒಂದು ಅಕ್ಷೋಹಿಣಿ ಸೈನ್ಯವನ್ನು ನೀಡಲು ಸಮ್ಮತಿಸಿದನು.
ದುರ್ಯೋಧನನಿಗೀಗ ಮನದಲ್ಲಿ ಸಂತೋಷ ಆಯಿತು. ಕಾರಣ ದ್ವಾರಕೆ ಪಾಂಡವರ ಮೈತ್ರಿಯ ದೇಶವೆಂದು ತೊರೆದಿದ್ದರೆ ಇದೆಲ್ಲವೂ ಪಾಂಡವರದ್ದಾಗುತ್ತಿತ್ತು. ಈಗ ನಾರಾಯಣಿ ಸೇನೆ, ಕೃತವರ್ಮ ಸಹಿತ ಒಂದಕ್ಷೋಹಿಣಿ ಸೇನೆ ತನ್ನ ಬಲವರ್ಧನೆಗೆ ಪೂರಕವಾಗಿ ಒದಗಿದ್ದು ಲಾಭವೇ ಹೌದು ಎಂಬ ಸಂತೃಪ್ತಿಯಿಂದ ಹಸ್ತಿನಾವತಿಗೆ ತೆರಳಿದನು.
ಹೀಗೆಯೇ ವಿವಿಧ ದೇಶಗಳಿಗೆ ಪಾಂಡವ – ಕೌರವರ ದೂತರು ಮೈತ್ರಿ ಸಂದೇಶ, ಸಹಾಯ ಯಾಚನೆಯ ಓಲೆ ಹೊತ್ತು ಹೋಗಿದ್ದರು. ಮಾದ್ರಾದೇಶಕ್ಕೆ ಪಾಂಡವರ ಬಿನ್ನಹ ತಲುಪಿತ್ತು. ಮಾದ್ರಾಧಿಪ ಶಲ್ಯನಿಗೆ ಪಾಂಡವರೆಂದರೆ ಅಕ್ಕರೆ. ಕಾರಣ ನಕುಲ – ಸಹದೇವ ಮಾದ್ರಿಯ ಮಕ್ಕಳು ಶಲ್ಯನಿಗೆ ಸೋದರ ಅಳಿಯಂದಿರು. ಶಲ್ಯನ ಮಗಳನ್ನು ಸಹದೇವನಿಗಿತ್ತು ವಿವಾಹವನ್ನೂ ಮಾಡಿಸಿದ್ದ. ಈ ಸಂಬಂಧದಿಂದಲೂ ಮತ್ತಷ್ಟು ಬಾಂಧವ್ಯ ಗಟ್ಟಿಯಾಗಿತ್ತು. ಶಲ್ಯ ಸಾಮಾನ್ಯನೇ? ಜಟ್ಟಿ ಕಾಳಗದ ಅಗ್ರ ಪಂಕ್ತಿಯ ಬಲು ಭಟ. ಮಾತ್ರವಲ್ಲ ಅಶ್ವ ಹೃದಯ – ರಥಕಲ್ಪ ಬಲ್ಲ ಮಹಾಸಾರಥಿ. ಆತನಿಗೊಂದು ಮಹಾದಾಸೆಯಿತ್ತು – ಮಧ್ಯಮ ಪಾಂಡವ ಅರ್ಜುನನ ರಥದ ಸಾರಥಿಯಾಗಿ ಆ ಅನುಭವವನ್ನು ಅಸ್ವಾದಿಸಬೇಕು ಎಂದು. ರಥಗಳು – ರಥಿಕರೆಷ್ಟೇ ಮಂದಿ ಲೋಕದಲ್ಲಿದ್ದರೂ ಅರ್ಜುನನಂತಹ ಅದ್ವಿತೀಯ ಧನುರ್ಧರನ ರಥ ಸಾರಥ್ಯ ವಿಶಿಷ್ಟವಾದದ್ದು. ಅಂತೆಯೆ ಸಾರಥಿಗಳು ಬಹು ಮಂದಿ ಇರಬಹುದು, ನನ್ನಂತೆ ಅತಿ ಪ್ರಾವಿಣ್ಯತೆ ಪಡೆದ ಸಾರಥಿ ಅರ್ಜುನನ ರಥದ ಮುಖದಲ್ಲಿದ್ದರೆ ಆ ಸಂಯೋಜನೆಯೇ ಅದ್ಬುತವಾದೀತು ಎಂಬ ಕನಸು ಕಾಣುತ್ತಿದ್ದನು. ತನ್ನ ಮಾದ್ರಾದೇಶದ ಸೇನೆ ಸಜ್ಜುಗೊಳಿಸಿ ಹಸ್ತಿನೆಯತ್ತ ಶಲ್ಯ ಹೊರಟನು. ಬರುತ್ತಾ ಶ್ರೀ ಕೃಷ್ಣ ಅರ್ಜುನನಿಗೆ ಸಾರಥಿಯಾದ ವಿಚಾರ ತಿಳಿದು ಶಲ್ಯನಿಗೆ ಬಹು ನಿರಾಸೆ ಆಯಿತು. ಆದರೂ ಪಾಂಡವ ಪಕ್ಷದಲ್ಲಿ ಹೋರಾಡುತ್ತೇನೆಂದು ಬರುತ್ತಿದ್ದಾನೆ.
ಇತ್ತ ಶಕುನಿ, ದುರ್ಯೋಧನರಿಗೆ ಶಲ್ಯ ಸೇನಾ ಸಮೇತನಾಗಿ ಆಗಮಿಸುತ್ತಿರುವ ವಿಚಾರ ತಿಳಿಯಿತು. ಹೇಗಾದರೂ ತಂತ್ರಗಾರಿಕೆ ಸಾಧಿಸಿ, ಮಾದ್ರದ ಸೇನಾ ಸಹಿತ ಶಲ್ಯ ಭೂಪತಿಯನ್ನು ತಮ್ಮ ಪಕ್ಷಕ್ಕೆ ಸೆಳೆಯಬೇಕೆಂಬ ಯೋಜನೆ ರೂಪಿಸಿದರು. ಶಲ್ಯ ಸೈನ್ಯ ಸಹಿತನಾಗಿ ಬರುವ ದಾರಿಯಲ್ಲಿ ವಿಶ್ರಾಂತಿ ಬಿಡಾರ, ಬಹುವಿಧ ಭೋಜನ, ಪಾನೀಯ, ಪರಿಚಾರಕ ವ್ಯವಸ್ಥೆಗಳನ್ನು ನಿಯೋಜಿಸಿ ವ್ಯವಸ್ಥೆ ಮಾಡಿದರು. ಬಹುದೂರದ ಪ್ರಯಾಣಗೈಯುತ್ತಾ ಬಂದ ಮಾದ್ರೇಶನಿಗೆ ಭವ್ಯ ಸ್ವಾಗತ, ಆರೈಕೆ, ಊಟೋಪಚಾರ ದೊರೆಯಿತು. ಅದು ಇನ್ನೂ ಮುಂದುವರಿದಾಗ ಉತ್ತಮ ಪಾನೀಯದ ವ್ಯವಸ್ಥೆಗಳು, ವಿಶ್ರಾಂತಿ ಗೃಹಗಳು, ಸಿದ್ಧವಾಗಿದ್ದ ಗಜ ತುರಗಾಲಯ – ಆಹಾರ ವ್ಯವಸ್ಥೆಗಳು ಶಲ್ಯನಿಗಂತೂ ಪೂರ್ಣ ತೃಪ್ತಿ ನೀಡಿದವು. ಧರ್ಮರಾಯ ವ್ಯವಸ್ಥಿತವಾಗಿ ನಮಗೆ ಸತ್ಕರಿಸಿರುವ ರೀತಿ ಅತ್ಯದ್ಭುತವಾಗಿದೆ ಎಂದು ಭಾವಿಸಿದನು. ಹಾಗೆಯೆ ಸಂತುಷ್ಟತೆಯ ಪರಮೋಚ್ಚ ಸುಖಿಯಾಗಿ ಈ ವ್ಯವಸ್ಥೆಯ ಆಯೋಜನೆಗಾಗಿ “ಅವರು ಕೇಳುವ ಬಹುಮಾನ ನೀಡುವೆ” ಎಂದು ಘೋಷಣೆ ಮಾಡಿ ಬಿಟ್ಟನು. ಈ ಸುದ್ಧಿ ಕಾಯುತ್ತಿದ್ದ ದುರ್ಯೋಧನನಿಗೆ ರವಾನೆಯಾಯಿತು.
ಕೂಡಲೆ ಕೌರವ ಓಡೋಡಿ ಬಂದು ಮಾದ್ರಾಧೀಶನ ಕುಶಲ ಸಮಾಚಾರ ವಿಚಾರಿಸಿ, “ತನ್ನ ಸ್ವಾಗತ ಸಿದ್ಧತೆಗಳು ಹಿತವಾಯಿತೆ?” ಎಂದು ಕೇಳಿದ. “ಅರೇ! ಇದೆಲ್ಲಾ ನಿನ್ನಿಂದ ನೀಡಲ್ಪಟ್ಟದ್ದೆ? ನಾವು ಉಂಡು ತಿಂದಿದ್ದು ನೀನು ಕೊಡಲ್ಪಟ್ಟದ್ದನ್ನೊ? ಎಂದು ಆಶ್ಚರ್ಯಕ್ಕೊಳಗಾದನು. ಆಗ ದುರ್ಯೋಧನ ಸಮಯ ಸಾಧಿಸಿ “ಹೌದು ಮಾವಾ! ತಾವು ಸ್ವೀಕರಿಸಿದ ಊಟೋಪಚಾರದ ವ್ಯವಸ್ಥೆ ನಾವು ಮಾಡಿಸಿದ್ದು. ಹಿತವಾಗಿತ್ತೆ? ನಮ್ಮ ಪಕ್ಷಕ್ಕೆ ನೀವು ಬೆಂಬಲಿಗರಾಗಿ ಬಂದು ನಮಗೆ ಸಹಾಯ ನೀಡಬೇಕೆಂಬುದು ನಮ್ಮ ಆಸೆ” ಎಂದು ವಿನಂತಿಸಿದನು. ಶಲ್ಯನಿಗೀಗ ಅನಿವಾರ್ಯತೆ, ಉಂಡ ಮನೆಗೆ ದ್ರೋಹ ಬಗೆಯಲಾಗುವುದೆ? ಆಡಿದ ವಚನ ಮೀರುವುದೆ? ನನ್ನ ಘೋಷಣೆ ತಿಳಿದು ಹೀಗೆ ಕೇಳುತ್ತಿದ್ದಾನೆ! ಹೀಗೆ ಆತ ಕೇಳಬಾರದಾದರೂ, ನನಗೀಗ ಧರ್ಮ ಸಂಕಟ ಎದುರಾಯಿತು. ಇರಲಿ ದೈವ ಸಂಕಲ್ಪ ಯಾರಿಗೂ ಮೀರಲಾಗದು ಎಂದು ತರ್ಕಿಸಿ ತುಸು ಹೊತ್ತು ಯೋಚಿಸತೊಡಗಿದನು. ಮೌನ ಮುರಿದು “ಸರಿ ಹಾಗೆಯೇ ಆಗಲಿ” ಎಂದು ಒಪ್ಪಿಗೆ ನೀಡಿದ. ಛೇ! ಎಂತಹ ಸ್ಥಿತಿ ಬಂದೊದಗಿತು ಎಂದು ಆಲೋಚಿಸುತ್ತಾ ತನ್ನ ಅಳಿಯಂದಿರನ್ನೊಮ್ಮೆ ನೋಡಿ ಬರುವೆ ಎಂದು ಪಾಂಡವರು ತಂಗಿದ್ದ ಉಪಪ್ಲಾವ್ಯದತ್ತ ಶಲ್ಯ ಹೊರಟನು.
ಮುಂದುವರಿಯುವುದು…