ಭಾಗ 274
ಭರತೇಶ ಶೆಟ್ಟಿ, ಎಕ್ಕಾರ್

“ದುರ್ಯೋಧನಾ! ನಿರ್ಧರಿಸಿಯಾದ ಬಳಿಕ ಬಂದವನಲ್ಲಿ ನಿರ್ಣಯದ ಕುರಿತು ಸಮಾಲೋಚಿಸುವುದು ವ್ಯರ್ಥ ಪ್ರಯತ್ನವಾದ ಕಾರಣ ಮೂರ್ಖತನವಾಗುತ್ತದೆ. ಆದ ಕಾರಣ ಲೋಕದ ಹಿತದೃಷ್ಟಿಯಿಂದ ನಾನು ಹೇಳಿದ ವಿಚಾರಗಳು ನಿನಗೆ ಪಥ್ಯವಾಗಲಿಲ್ಲ. ಆದರೂ ನಿನಗೊಂದು ವಿಚಾರ ತಿಳಿಯಪಡಿಸುವೆ. ರಾಜ ಎಂಬ ಸ್ಥಾನ ಪ್ರಾಪ್ತವಾಗುವುದು ರಾಜ್ಯದಿಂದ. ರಾಜ್ಯ ಎಂಬುವುದು ನಿರ್ದಿಷ್ಟ ಭೂ ಪ್ರದೇಶದಲ್ಲಿ ವಾಸಿಸುವ ಪ್ರಜಾ ಜನರ ಸಮೂಹ. ಹೀಗಿರಲು ರಾಜನಾದವನ ಪ್ರಥಮ ಆದ್ಯ ಕರ್ತವ್ಯ ತನ್ನ ಪ್ರಜಾಜನರ ರಕ್ಷಣೆ. ರಾಜ್ಯದ ಸಮೃದ್ಧಿಗೆ ಕಾರಣವಾಗುವ ಇಂತಹ ಪ್ರಜೆಗಳ ಬದುಕನ್ನು ಪಣಕ್ಕೊಡ್ಡಿ ತಾಯಿಗೆ ಮಗ, ಸತಿಗೆ ಪತಿ, ಸುತಗೆ ಪಿತನಾಗಿರುವ ಪುರುಷನೇ ಸೈನಿಕ. ದೇಶದ ರಕ್ಷಣೆಗಾಗಿ ಆ ಸೈನಿಕ ಪ್ರಾಣ ಒತ್ತೆ ಇಟ್ಟು ಹೋರಾಡುವುದು ಧರ್ಮ. ಆದರೆ ಅಂತಹ ಸೈನಿಕನ ಜೀವನವನ್ನು ನಿನ್ನ ಓರ್ವನ ಸ್ವಾರ್ಥ ಸಾಧನೆಗಾಗಿ ಬಳಸಿದರೆ ಪರಿಣಾಮ ಎಷ್ಟೋ ಹತಭಾಗಿನಿ ತಾಯಿ, ವಿಧವೆ ಪತ್ನಿ, ಅನಾಥ ಮಕ್ಕಳು ಕಣ್ಣೀರಿನಲ್ಲಿ ಕೈತೊಳೆಯುವಂತಾಗುತ್ತದೆ. ಸಂಭವನೀಯ ಯುದ್ದದ ಇಂತಹ ಘೋರ ಪರಿಣಾಮ ಈಗ ನಿನ್ನ ನಿರ್ಧಾರದ ಮೇಲೆ ನಿಂತಿದ್ದು, ಇಷ್ಟೂ ಜನರ ಬದುಕಿನ ನೆಮ್ಮದಿಯನ್ನು ದಾಳವಾಗಿ ಪಣಕ್ಕಿಟ್ಟಂತಿದೆ. ದಂಡಧರ ರಾಜನಾಗಿ ಪ್ರಜೆಗಳ ಯೋಗಕ್ಷೇಮ ಮರೆತು ವ್ಯವಹರಿಸಬಾರದು. ಶಾಸನ – ಅಧಿಕಾರ ಚಲಾವಣೆ ಮಾಡುವ ಅಧಿಕಾರಿ ರಾಜ. ಪ್ರತ್ಯಕ್ಷ ದೇವತೆ ಎಂದು ಆರಾಧಿಸುವ ಪ್ರಜೆಗಳಿಗೆ ರಾಜ ರಕ್ಷಕನಾಗಬೇಕು ಹೊರತು, ತನ್ನ ಅಧೀನರಾದ ಜನರನ್ನು ಹೋಮಿಸುವ ಹೋತೃ ನೀನಾಗಬಾರದು. ನಾವು ಅಂತಹ ನಿಲುಮೆಯುಳ್ಳ ಯಾದವ ಸಾಮ್ರಾಜ್ಯವನ್ನು ಪಾಲಿಸುವ ಪಾಲಕರು. ನಮ್ಮ ಜನರ ಕ್ಷೇಮವೆ ನಮಗೆ ಪ್ರಥಮ ಆದ್ಯತೆಯ ವಿಚಾರ. ಹಾಗಾಗಿ ಜನಾನುರಾಗಿಯಾಗಿ ನಾನು ಮಂಡಿಸಿದ ವಿಚಾರದಿಂದ ನಿನ್ನ ದೃಷ್ಟಿಯಲ್ಲಿ ಸ್ವಾರ್ಥಿಯಾಗಿ ಕಾಣಿಸಿಕೊಂಡೆನೆ? ಇರಲಿ ಈಗ ನಿನ್ನ ಅಪೇಕ್ಷೆಯಂತೆ ಸಹಾಯದ ವಿಚಾರಕ್ಕೆ ಬರುತ್ತೇನೆ. ದ್ವಾರಕೆಯಲ್ಲಿ ಅತುಲ ವಿಕ್ರಮಿಗಳಿದ್ದಾರೆ. ಹಾಗೆಂದು ಅವರ್ಯಾರೂ ಯಾರ ಅಧೀನದಲ್ಲೂ ಇಲ್ಲ. ಸರ್ವ ಸ್ವತಂತ್ರರು ಆಗಿದ್ದಾರೆ. ನಿಮಗೆ ಯಾರು ಬೇಕೋ ಅವರ ಬಳಿ ಹೋಗಿ ನೀವು ನೀವೇ ಸಂಧಿ ಮಾಡಿಕೊಳ್ಳಿ. ನನ್ನದೇನಿದೆಯೊ ಅದರ ಬಗ್ಗೆ ನಿಮಗೆ ತಿಳಿಸುವೆ. ನಾನು ಸ್ವಯಂ ಯಾರ ಪಕ್ಷಕ್ಕೆ ಬರುವುದಕ್ಕೂ ಸಿದ್ಧ. ಆದರೆ ಯುದ್ಧವಾಗುವುದಾದರೆ ಯಾರ ಪಕ್ಷದಲ್ಲಿ ಇದ್ದರೂ ನಾನು ಯುದ್ಧ ಮಾಡುವುದಿಲ್ಲ, ಆಯುಧ ಧರಿಸುವುದಿಲ್ಲ. ಆದರೆ ನನ್ನ ಬಳಿ ‘ನಾರಾಯಣಿ’ ಎಂಬ ವೀರ ಪುರುಷರ ಸೈನ್ಯವಿದೆ. ಸಕಲ ಯುದ್ಧ ಕೌಶಲ್ಯ ಪಾರಂಗತರಾದ, ಪರಿಣತ ಸೇನಾನಿಗಳ ಒಂದು ಅಕ್ಷೋಹಿಣಿ ಸೈನ್ಯವದು. ಈಗ ನಿಮಗಿಬ್ಬರಿಗೂ ಸ್ವತಂತ್ರ ಆಯ್ಕೆ ನೀಡುವೆ. ಒಂದು ಪಕ್ಷಕ್ಕೆ ನಾನೊಬ್ಬನು – ನಿರಾಯುಧ, ಯುದ್ಧ ಮಾಡದ ಕೃಷ್ಣ. ಮತ್ತೊಂದು ಪಕ್ಷಕ್ಕೆ ಯಾದವರ ಬಲಿಷ್ಟ ನಾರಾಯಣಿ ಸೇನೆ. ಯಾವುದು ಬೇಕೋ ಆರಿಸಿಕೊಳ್ಳಿ” ಎಂದನು.
ದುರ್ಯೋಧನ ಯೋಚಿಸಿ, ಮನದೊಳಗೆ ಸಂತಸಪಟ್ಟನು. ಈ ಅರ್ಜುನನಿಗೆ ಕೃಷ್ಣನ ಬಗ್ಗೆ ಅದೇನು ಭ್ರಮೆಯೋ! ಇರಲಿ ಆತನ ಹುಚ್ಚು ಆತನಿಗೆ. ಖಂಡಿತಾ ಆತ ಕೃಷ್ಣನನ್ನು ಬಯಸಿದರೆ ಬಯಸಲಿ. ನನಗೆ ಸಮರ್ಥ ಸೇನೆಯೆ ಬೇಕಾದುದು. ನಿರಾಯುಧ – ನಿರರ್ಥಕ ಕೃಷ್ಣ ಕುಳಿತು ಎಷ್ಟು ಬೇಕಾದರೂ ಕಥೆ ಹೇಳಲಿ – ಈ ಪಾಂಡವರು ಕೇಳುತ್ತಿರಲಿ ಎಂದು ತರ್ಕಿಸಿ “ಕೃಷ್ಣಾ! ನಾನು ಅಧರ್ಮಿಯೂ ಅಲ್ಲ, ಲೋಭಿಯೂ ಅಲ್ಲ. ನಿನ್ನ ಬಳಿ ನಾನು ಮೊದಲಾಗಿ ಬಂದಿದ್ದರೂ, ನೀನು ಅರ್ಜುನನ್ನು ಪ್ರಥಮವಾಗಿ ನೋಡಿರುವೆ. ಹಾಗಾಗಿ ಆಯ್ಕೆಯ ಅಧಿಕಾರ ನಾನು ಆತನಿಗೆ ನೀಡುವೆ. ಆತನಿಗೇನು ಬೇಕೊ ಆರಿಸಿಕೊಳ್ಳಲಿ” ಎಂದು ನುಡಿದನು.
ಅರ್ಜುನ “ಕೃಷ್ಣಾ! ನಮ್ಮ ಪಾಲಿಗೆ – ನಮ್ಮ ಬಾಳಿಗೆ ನೀನೇ ಸೌಭಾಗ್ಯ. ನಿನಗಿಂತ ಮಿಗಿಲಾದುದು ಈ ಜಗದಲ್ಲಿ ಬೇರೊಂದು ಇಲ್ಲ. ನನಗೆ ನೀನೇ ಬೇಕು – ನೀನಷ್ಟೇ ಸಾಕು” ಎಂದು ಹೇಳಿ ಕೈ ಮುಗಿದು ಶಿರಬಾಗಿ ನಿಂತನು.
ದುರ್ಯೋಧನನ ಎಣಿಕೆ ಸರಿಯಾಗಿಯೇ ಇತ್ತು. ಈಗ ಒಂದು ಅಕ್ಷೋಹಿಣಿ ಉಪಯುಕ್ತ ಸೇನೆ ನಮ್ಮ ಭಾಗಕ್ಕೆ ಪ್ರಾಪ್ತವಾಯಿತು. ಬಂದದ್ದು ಲಾಭವೆ ಆಯಿತು. ಕೃಷ್ಣ ಪಾಂಡವ ಪಕ್ಷಪಾತಿ ಎಂದು ಸುಮ್ಮನುಳಿಯುತ್ತಿದ್ದರೆ, ದೊಡ್ಡ ನಷ್ಟವೇ ಆಗುತ್ತಿತ್ತು. ನಾರಾಯಣಿ ಸೇನೆಯೂ ಪಾಂಡವರದ್ದಾಗುತ್ತಿತ್ತು. ಆದರೆ ಆತ ಯುದ್ಧ ಮಾಡುವುದಿಲ್ಲ – ಆಯುಧ ಹಿಡಿಯುವುದಿಲ್ಲ ಎಂದಾದ ಮೇಲೆ ಯಾವ ಪಕ್ಷಕ್ಕಾದರೂ ಏನು ಉಪಯೋಗ? ಹೋಗಲಿ ಅತ್ತ ಕಡೆ ಎಂದು ಸಂತಸಗೊಂಡನು. ಆದರೂ ಕೃಷ್ಣನ ಬಳಿ ಬಂದು ಬರಿಗೈಯಲ್ಲಿ ನಾನು ಹೋಗಲಿಲ್ಲ. ನಾನು ಬಯಸಿದ್ದನ್ನು ಒದಗಿಸಿ ಮನಸ್ಸಿಗೆ ಸಮಾಧಾನವನ್ನು ನೀಡಿದ್ದಾನೆ. ಕೃಷ್ಣನ ಬಗ್ಗೆ ಬಲ್ಲ ಕೆಲವರು ಹೇಳುವ ಮಾತು ನಿಜ ಎಂಬುವುದಕ್ಕೆ ಇದೊಂದು ನಿದರ್ಶನವಾಯಿತು.
ಅಲ್ಲಿಂದ ಹೊರಟು ವಿಳಂಭಿಸದೆ ನೇರವಾಗಿ ಗುರುಗಳೂ ಆದ ಬಲರಾಮನ ಬಳಿ ಸಾಗಿದನು.
ಅರ್ಜುನ ಶ್ರೀ ಕೃಷ್ಣನ ಬಳಿಯಲ್ಲಿ ನಿಂತನು. ಸಮಾಲೋಚನೆ ನಿರತನಾದ ಕೃಷ್ಣ ಕೌತುಕದಿಂದ ಪಾರ್ಥನಲ್ಲಿ ಒಂದು ಪ್ರಶ್ನೆ ಕೇಳಿದ, “ಹೇ ಧನಂಜಯನೇ! ಕೇವಲ ತಲೆ ಲೆಕ್ಕಕ್ಕಷ್ಟೇ ಮೀಸಲು ಎಂಬಂತೆ ‘ಯಾವುದೇ ಆಯುಧ ಧರಿಸುವುದಿಲ್ಲ – ಯುದ್ಧ ಮಾಡುವುದಿಲ್ಲ’ ಎಂದು ಸ್ಪಷ್ಟವಾಗಿ ಹೇಳಿದರೂ, ಯುದ್ಧ ಸಿದ್ಧತೆಗಾಗಿ ಬಂದ ನೀನು ನನ್ನನ್ನೇಕೆ ಆರಿಸಿದೆ? ನಮ್ಮ ಸೇನೆಯ ಬಲಾಢ್ಯತೆ, ಕ್ಷಮತೆ ನಿನಗೆ ನಿಖರವಾಗಿ ಗೊತ್ತಿದ್ದೂ ಯಾಕಾಗಿ ಕೈಬಿಟ್ಟೆ ಎಂಬ ಕುತೂಹಲ ನನ್ನ ಮನ ಮಾಡಿದೆ. ನನಗೆ ಏನು ಕೆಲಸವಿದೆ ಯುದ್ದದಲ್ಲಿ ಹೇಳುವೆಯಾ?”
ಪಾರ್ಥನು ” ಸ್ವಾಮೀ ನಿನಗೆ ಪ್ರಧಾನವಾದ ಕೆಲಸವಿದೆ. ನನಗೆ ನನ್ನ ಸಾಮರ್ಥ್ಯದ ಮೇಲೆ ವಿಶ್ವಾಸವಿದೆ. ಅದಕ್ಕಿಂತಲೂ ಮಿಗಿಲಾದ ನಂಬಿಕೆ ನಿನ್ನ ಮೇಲಿದೆ. ನಿನ್ನ ಸಖನೂ – ಭಕ್ತನೂ ಆದ ನನ್ನ ಪ್ರೀತಿಯ ಪ್ರಾರ್ಥನೆ ಮನ್ನಿಸಿ ನನ್ನ ರಥ ಸಾರಥ್ಯ ಮಾಡಬೇಕು. ಆಗ ನೀನು ನನ್ನ ಭಾವನೂ, ಮನದ ದೇವನೂ, ಬಂಡಿಯ ಭೋವನೂ ಆಗಿ ಜೊತೆಗಿದ್ದರೆ ಈ ಪಾರ್ಥ ವಿಜಯ ಸಾಧಿಸುವುದು ನಿಶ್ಚಿತ.” ಎಂದು ಬೇಡಿಕೊಂಡನು. ಭಲೇ ವೀರನಾದ ನೀನು ಚಾಣಾಕ್ಷನೆ ಆಗಿರುವೆ. ನಿನ್ನಿಚ್ಚೆಯಂತೆಯೆ ಆಗಲಿ. ನಿರಾಯುಧನಾದ ನಾನು ಹೇಳಿದಂತೆ ಯುದ್ಧ ಮಾಡದಿದ್ದರೂ ರಥ ಸಾರಥ್ಯ ಮಾಡಬಹುದು. ನನಗೂ ರಥಮುಖದಲ್ಲಿ ಕುಳಿತು ವೀರಾಗ್ರಣಿಗಳ ಮಹಾಯುದ್ಧವನ್ನು ನೋಡುವ ಅವಕಾಶ ಒದಗಿದಂತಾಯಿತು” ಎಂದು ಹೇಳುತ್ತಾ ಒಪ್ಪಿಕೊಂಡನು.
ಆನಂತರ ಏನೋ ಗಹನ ಚರ್ಚೆಯಲ್ಲಿ ನಿರತರಾಗಿದ್ದು, ಬಳಿಕ ಜೊತೆಯಾಗಿ ಕೃಷ್ಣಾರ್ಜುನರು ಉಪಪ್ಲಾವ್ಯದತ್ತ ಹೊರಟರು.
ಮುಂದುವರಿಯುವುದ